ಮನಮೀಟುತ್ತಿಲ್ಲವೇನು #MeToo?
Team Udayavani, Nov 3, 2017, 5:39 AM IST
“ಆ ಹುಡುಗಿ ಯಾವ ಬಟ್ಟೆ ತೊಟ್ಟಿದ್ದಳು?’ “ಅಷ್ಟು ಹೊತ್ತಲ್ಲಿ ಅವಳಿಗೆ ಅಲ್ಲೇನು ಕೆಲಸವಿತ್ತು?’ “ಹುಡುಗನ ಜೊತೆ ಯಾಕೆ ಹೋಗ್ಬೇಕಿತ್ತು? ಹಾಗೆ ಹೋಗೋದು ತಪ್ಪಲ್ವಾ?’ “ತಾನಾಗೇ ಮೈಮೇಲೆ ಎಳೆದುಕೊಂಡಳು’, “ಮೊದಲೇ ಯಾಕೆ ದೂರು ಕೊಡಲಿಲ್ಲ? ಇಷ್ಟು ದಿನ ಯಾಕೆ ಸುಮ್ನಿದ್ಲಂತೆ?’ “ಅತ್ಯಾಚಾರ ಮಾಡಬೇಡಿ ಅಂತ ಅತ್ಯಾಚಾರಿಗಳನ್ನ ರಿಕ್ವೆಸ್ಟ್ ಮಾಡಬಾರದಿತ್ತೇ?’ . ನಮ್ಮ ನಾಯಕರು ಕೇಳುವ ಪ್ರಶ್ನೆಗಳಿವು. ಈ ಪ್ರಶ್ನೆಗಳನ್ನೇ ಬಿಟ್ಟು ಬಿಡದೇ ಲೂಪ್‌ನಲ್ಲಿ ನಮ್ಮ ಮಾಧ್ಯಮಗಳು ಬಿತ್ತರಿಸುತ್ತವೆ. ಜನರೂ ನೋಡುತ್ತಾ ಕೂಡುತ್ತಾರೆ.
ಕಳೆದ ಎರಡು ವಾರಗಳಿಂದ ನಾನು ಸಿನೆಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವುದರಿಂದ ಪತ್ರಕರ್ತರೊಡನೆ ಹೆಚ್ಚು ಒಡನಾಡುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ಸಿನೆಮಾ ನಟ/ನಟಿ ಯರು ತಮಗೆ ಗೊತ್ತಿರದ ವಿಷಯದ ಬಗ್ಗೆಯೇ ಪ್ರಶ್ನೆಗಳನ್ನು ಎದುರಿಸುತ್ತಾರೆ(ಉದಾಹರಣೆಗೆ: ದೇಶದ ವಿತ್ತೀಯ ಸ್ಥಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂಬಂಥ ಪ್ರಶ್ನೆಗಳು ಅವರ ಎದುರಾಗುತ್ತಿವೆ). ಆದರೆ ಕೆಲವು ದಿನಗಳಿಂದ ನನ್ನ ಇನ್‌ಬಾಕ್ಸ್ ನಲ್ಲಿ ನನಗೆ ಗೊತ್ತಿರುವ ವಿಷಯದ ಬಗ್ಗೆಯೇ ಪ್ರಶ್ನೆಗಳು ಬರುತ್ತಿವೆ. ಆ ಪ್ರಶ್ನೆಗಳೆಲ್ಲ #MeToo ಕ್ಯಾಂಪೇನ್‌ಗೆ ಸಂಬಂಧಪಟ್ಟದ್ದಾಗಿದೆ. ದುರದೃಷ್ಟವಶಾತ್ ಎಲ್ಲಾ ಹುಡುಗಿಯರಿಗೂ ಈ ವಿಷಯ ಗೊತ್ತೇ ಇದೆ. ಹೀಗಾಗಿ ಲೈಂಗಿಕ ಕಿರುಕುಳ ಅನುಭವಿಸಿರುವ ಹೆಣ್ಣು ಮಕ್ಕಳು ಜಗತ್ತಿನಾದ್ಯಂತ “ಮೀಟೂ’ ಎನ್ನುವ ಹ್ಯಾಶ್‌ಟ್ಯಾಗ್‌ನಲ್ಲಿ ತಮ್ಮ ಕಥೆಗಳನ್ನು ಹೇಳತೊಡಗಿದ್ದಾರೆ.
ಆದರೆ ಇಷ್ಟೊಂದು ಪ್ರಮಾಣದಲ್ಲಿ ಲೈಂಗಿಕ ದೌರ್ಜನ್ಯದ ಕಥೆಗಳು ಹೊರಬರುತ್ತಿರುವುದನ್ನು ನೋಡಿ ಕೆಲವರು ಆಶ್ಚರ್ಯ ಗೊಂಡಿದ್ದಾರೆ. ಹೆಣ್ಣು ಮಗು ಗರ್ಭದಲ್ಲಿದ್ದಾಗಲೇ ಅದರ ಮೇಲೆ ಯುದ್ಧ ಘೋಷಿಸುವ ದೇಶ ನಮ್ಮದಾಗಿರುವಾಗ ಇದರಲ್ಲಿ ಆಶ್ಚರ್ಯ ಪಡುವಂಥದ್ದೇನಿದೆ? ಚಿಕ್ಕಮಕ್ಕಳಿರುವಾಗಲೇ ನಾವು “ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ’ದ ನಡುವಿನ ಅಂತರದ ಬಗ್ಗೆ ಅರಿತುಕೊಳ್ಳುತ್ತೇವೆ. ಶಿಕ್ಷಣವೇ ದೊಡ್ಡ ಸವಲತ್ತು ಎನಿಸಿಕೊಂಡಿರುವ ದೇಶದಲ್ಲಿ ಲೈಂಗಿಕ ಶಿಕ್ಷಣವೆನ್ನುವುದು ಐಷಾರಾಮವೇ ಸರಿ. ಪರಿಸ್ಥಿತಿ ಹೀಗಿರುವುದರಿಂದಲೇ ನಾವು ಕೆಟ್ಟ ಸ್ಪರ್ಶದ ಬಗ್ಗೆ ಕಲಿಯುವುದು ಅನುಭವದಿಂದಲೇ ಹೊರತು ಲೈಂಗಿಕ ಶಿಕ್ಷಣ ತರಗತಿಯಿಂದಲ್ಲ!
ನಮ್ಮ ದೇಶದಲ್ಲಿ ಅತ್ಯಾಚಾರವನ್ನು “ಮಾನಭಂಗ’ ಎನ್ನಲಾ ಗುತ್ತದೆ. ಹಿಂದಿಯಲ್ಲಿ “ಇಜlತ್ ಲೂಟ್‌ನಾ'(ಮಾನ ಹರಣ) ಅಥವಾ ಇನ್ನೊಬ್ಬನ ಗೌರವವನ್ನೇ ಕಸಿಯುವುದು ಎನ್ನುತ್ತಾರೆ. ನಮ್ಮ ಸಮಾಜವು ಅತ್ಯಾಚಾರ ನಡೆದಾಕ್ಷಣ ಆ ಮಹಿಳೆಯ ಮರ್ಯಾದೆಯೇ ಕಳೆದುಹೋಯಿತು, ಆಕೆ ಗೌರವದ ಹನನವಾಯಿತು ಎಂದೇ ಭಾವಿಸುತ್ತದಾದ್ದರಿಂದ, ಹೆಣ್ಣುಮಕ್ಕಳು ತಮ್ಮ ಮೇಲಿನ ಕ್ರೌರ್ಯವನ್ನು ಬಹಿರಂಗಪಡಿಸುವುದಕ್ಕೂ ಹಿಂಜರಿಯುವಂತಾಗುತ್ತದೆ.
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ/ಕಿರುಕುಳಗಳ ಬಗ್ಗೆ ನಾವು ಮಾತನಾಡಿದಾಗಲೆಲ್ಲ, ನಮ್ಮ ರಾಜಕೀಯ ನಾಯಕತ್ವದ ಎಲ್ಲಾ ವಲಯದಿಂದಲೂ ಅತ್ಯಂತ ಬೇಜವಾಬ್ದಾರಿಯುತ, ಸಂವೇ ದನಾಹೀನ, ಮೂರ್ಖತನದ ಹೇಳಿಕೆಗಳು ಹರಿದುಬರ ಲಾರಂಭಿಸುತ್ತವೆ. ಸತ್ಯವೇನೆಂದರೆ, ಸರ್ಕಾರಗಳು ಬದಲಾದರೂ ಹೆಣ್ಣುಮಕ್ಕಳೆಡೆಗಿನ ಧೋರಣೆ ಮಾತ್ರ ಬದಲಾಗುವುದಿಲ್ಲ. ಎಡಪಂಥೀಯರಾಗಿರಲಿ ಅಥವಾ ಬಲಪಂಥೀಯರಾಗಿರಲಿ ನಮ್ಮ ರಾಜಕಾರಣಿಗಳನ್ನು ಒಂದಾಗಿಸುವುದು(ಧರ್ಮ, ಜಾತಿ ಮತ್ತು ವರ್ಗವನ್ನೂ ಮೀರಿ) ಲಿಂಗಭೇದಭಾವ!
“ಆ ಹುಡುಗಿ ಯಾವ ಬಟ್ಟೆ ತೊಟ್ಟಿದ್ದಳು?’ “ಅಷ್ಟು ಹೊತ್ತಲ್ಲಿ ಅವಳಿಗೆ ಅಲ್ಲೇನು ಕೆಲಸವಿತ್ತು?’ “ಹುಡುಗನ ಜೊತೆ ಯಾಕೆ ಹೋಗ್ಬೇಕಿತ್ತು? ಹಾಗೆ ಹೋಗೋದು ತಪ್ಪಲ್ವಾ?’ “ತಾನಾಗೇ ಮೈಮೇಲೆ ಎಳೆದುಕೊಂಡಳು’, “ಮೊದಲೇ ಯಾಕೆ ದೂರು ಕೊಡಲಿಲ್ಲ? ಇಷ್ಟು ದಿನ ಯಾಕೆ ಸುಮ್ನಿದ್ಲಂತೆ?’ “ಅತ್ಯಾಚಾರ ಮಾಡಬೇಡಿ ಅಂತ ಅತ್ಯಾಚಾರಿಗಳನ್ನ ರಿಕ್ವೆಸ್ಟ್ ಮಾಡಬಾರದಿತ್ತೇ?’
ನಮ್ಮ ನಾಯಕರು ಕೇಳುವ ಪ್ರಶ್ನೆಗಳಿವು. ಈ ಪ್ರಶ್ನೆಗಳನ್ನೇ ಬಿಟ್ಟು ಬಿಡದೇ ಲೂಪ್‌ನಲ್ಲಿ ನಮ್ಮ ಮಾಧ್ಯಮಗಳು ಬಿತ್ತರಿಸುತ್ತವೆ. ಜನರೂ ನೋಡುತ್ತಾ ಕೂಡುತ್ತಾರೆ. ಈ ರೀತಿಯ ಪ್ರಶ್ನೆಗಳನ್ನು ಕೇಳುವವರು ಯಾವಾಗಲಾದರೂ ಸುದ್ದಿ ಪತ್ರಿಕೆಗಳನ್ನು ಓದಿದ್ದಾರಾ? ಭಾರತದಲ್ಲಿ ಹಸುಳೆಗಳ ಮೇಲೆ ಅತ್ಯಾಚಾರ ನಡೆಯುತ್ತಿದೆ, ವೃದ್ಧೆಯರೂ ಕಾಮುಕರಿಗೆ ಬಲಿಯಾಗುತ್ತಿದ್ದಾರೆ ಎನ್ನುವುದು ಇವರಿಗೆ ಗೊತ್ತಿದೆಯೇ? ಹದಿಹರೆ ಯಕ್ಕೂ ಕಾಲಿಡದ ಹೆಣ್ಣುಮಕ್ಕಳಿಂದ ಹಿಡಿದು, ಕಾಲೆºರಳಿಂದ ತಲೆಗೂದಲನ್ನೂ ಬುರ್ಖಾದಲ್ಲಿ ಮುಚ್ಚಿದ ಹೆಣ್ಣುಮಕ್ಕಳೂ ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ.
ಪುರುಷವಾದಿ ಮನಸ್ಥಿತಿಗಿಂತಲೂ ಅತಿದೊಡ್ಡ ರೋಗವೊಂದು ಇಂದು ನಮ್ಮನ್ನು ಅಂಟಿಕೊಂಡಿದೆ. ಈ ರೋಗದ ಮೂಲವಿ ರುವುದು ಹೆಣ್ಣು ಮಕ್ಕಳೆಂದರೆ ಬಳಸಿ ಬಿಸಾಡುವ ಭೋಗದ ವಸ್ತು ಎಂಬ ನೋಟದಲ್ಲಿ, ಶಕ್ತಿ ಪ್ರದರ್ಶನದ ಆಟದಲ್ಲಿ. ಪರಿಸ್ಥಿತಿ ಎಷ್ಟು ಹತಾಶಾಪೂರ್ಣವಾಗಿದೆಯೆಂದರೆ ಅತ್ಯಾಚಾರ ನಡೆಯುತ್ತಿರುವಾಗ ಅದನ್ನು ಹೇಗೆ ಸಹಿಸಿಕೊಳ್ಳಬೇಕು ಎಂಬ ಬಗ್ಗೆಯೂ ಕೆಲವರು ಸಲಹೆಗಳನ್ನೂ ಹರಿಬಿಡುತ್ತಿದ್ದಾರೆ! ಉದಾ ಹರಣೆಗೆ, ಅತ್ಯಾಚಾರವನ್ನು ವಿರೋಧಿಸದೇ ಸಹಿಸಿಕೊಂಡರೆ ಆ ಕಾಮಿ ನಿಮ್ಮನ್ನು ಸುಮ್ಮನೇ ಬಿಟ್ಟುಬಿಡುತ್ತಾನೆ ಎನ್ನುವ ಸಲಹೆ! ಬೆಚ್ಚಿಬೀಳಿಸುವ ನಿರ್ಭಯಾ ಪ್ರಕರಣದಲ್ಲಿ ಆದದ್ದೇನು? ನಿರ್ಭಯಾಳ ಮೇಲೆ ಅತ್ಯಾಚಾರವೆಸಗಿ ಆಕೆಯ ಗುಪ್ತಾಂಗದಿಂದ ಕರುಳನ್ನು ಹೊರಕ್ಕೆಳೆಯಲಾಯಿತು. ಆಕೆ ತನ್ನನ್ನು ಬಿಟ್ಟು ಬಿಡಿ ಎಂದು ಅಂಗಲಾಚಿದ್ದಳಾ? ಇಂಥ ಪ್ರಶ್ನೆಗಳಿಗೆಲ್ಲ ಉತ್ತರವನ್ನು ಯಾರಿಂದ ನಿರೀಕ್ಷಿಸಬೇಕು? ನಿರ್ಭಯಾಳಿಂದಲೇ? ಉತ್ತರಪ್ರದೇಶದಲ್ಲಿ ಮರದಲ್ಲಿ ನೇತಾಡುತ್ತಿದ್ದ ಯುವತಿಯ ರಿಂದಲೇ? ಹೆದ್ದಾರಿಯಲ್ಲಿ ಕತ್ತುಸೀಳಿದ ಸ್ಥಿತಿಯಲ್ಲಿ ಹೆಣವಾಗಿ ಬಿದ್ದಿದ್ದ 5 ವರ್ಷದ ಬಾಲಕಿಯಿಂದಲೇ?
ಒಂದು ವೇಳೆ ಅತ್ಯಾಚಾರಕ್ಕೊಳಗಾದವರು ಬದುಕುಳಿದು ತಮ್ಮ ಕಥೆ ಯನ್ನು ಹೇಳಲು ಮುಂದಾದರೆ ಅವರ ಮುಖವನ್ನು ಬ್ಲಿರ್ ಮಾಡಲಾಗುತ್ತದೆ, ಅವರ ಐಡೆಂಟಿಟಿಯನ್ನು ಮರೆಮಾಚ ಲಾಗುತ್ತದೆ. ನಮ್ಮ ಸಮಾಜ ಅತ್ಯಾಚಾರ ಸಂತ್ರಸ್ತೆಯರಿಗೆ ಮಾಡುವ ಅವಮಾನವನ್ನು ಗಮನಿಸಿದಾಗ ಇದೇನೂ ಆಶ್ಚರ್ಯ ಹುಟ್ಟಿಸದು. ನವರಾತ್ರಿ ಹಬ್ಬವೆನ್ನುವುದು ನಮ್ಮ ಸಂಸ್ಕೃತಿಯಲ್ಲಿ ಅತಿ ಮಹತ್ವದ ಸಮಯ. ದೇಶದ ಕೆಲವು ಭಾಗಗಳಲ್ಲಿ ನವರಾತ್ರಿಯಂದು ಹದಿಹರೆಯದ ಬಾಲಕಿಯರನ್ನು “ದೇವಿ ಲಕ್ಷ್ಮೀ’ ಎಂದೇ ಸಾಂಕೇತಿಕವಾಗಿ ಪೂಜಿಸಲಾಗುತ್ತದೆ. ನನಗೂ ನವರಾತ್ರಿಯ ಈ ಆಚರಣೆಯ ಬಗ್ಗೆ ಕೆಲವು ಒಳ್ಳೆಯ ನೆನಪುಗಳಿವೆ.
ಆದರೆ ಇಂಥದ್ದೊಂದು ಹಬ್ಬದ ವೇಳೆಯಲ್ಲೇ ಈ ಬಾರಿ ಬಿಎಚ್‌ಯು ವಿಶ್ವವಿದ್ಯಾಲಯದ ಹೆಣ್ಣುಮಕ್ಕಳು ಲೈಂಗಿಕ ಕಿರು ಕುಳದ ವಿರುದ್ಧ ಹೋರಾಡಬೇಕಾಯಿತು. ಪ್ರತಿಭಟನೆ ಹಿಂಸಾರೂಪ ಪಡೆಯಿತು, ವಿದ್ಯಾರ್ಥಿನಿಯರು ಲಾಠಿ ಏಟು ತಿನ್ನ ಬೇಕಾಯಿತು. ಉಪಕುಲಪತಿಗಳು ಪೆಟ್ಟು ತಿಂದ ಹೆಣ್ಣು ಮಕ್ಕಳನ್ನೇ ದೋಷಿಗಳ ಸ್ಥಾನದಲ್ಲಿ ನಿಲ್ಲಿಸಿಬಿಟ್ಟರು. ಎಷ್ಟೋ ವಿದ್ಯಾರ್ಥಿನಿಯರ ಮೇಲೆ ಎಫ್ಐಆರ್ ಕೂಡ ದಾಖಲಾಯಿತು! ಸತ್ಯವೇನೆಂದರೆ ಈ ದಿನಮಾನದಲ್ಲಿ ಯಾವೊಂದು ವಿಷಯವೂ ರಾಜಕೀಯದಿಂದ ಮುಕ್ತವಾಗಿಲ್ಲ. ಹಾಡು, ವಿದ್ಯಾರ್ಥಿಗಳು, ಸಿನೆಮಾ, ಶಿಕ್ಷಣತಜ್ಞರು, ಸೇನೆ, ಭಾಷೆ, ಪ್ರಶಸ್ತಿಗಳು, ಸ್ಮಾರಕಗಳು, ಹಣ, ಕ್ರಿಕೆಟ್, ತೆರಿಗೆ, ಆಹಾರ, ಕೊನೆಗೆ ಬಣ್ಣಕ್ಕೂ ರಾಜಕೀಯ ಸ್ಪರ್ಶವಿದೆ. ಅಂತೆಯೇ ಬಿಎಚ್‌ಯು ವಿಷಯಕ್ಕೂ ರಾಜಕೀಯದ ಆ್ಯಂಗಲ್ ಸುತ್ತಿಕೊಂಡಿತು.
ಹೆಣ್ಣುಮಕ್ಕಳ ಕಷ್ಟಗಳು ಇಲ್ಲಿಗೇ ನಿಲ್ಲುವುದಿಲ್ಲ. ಬದಲಾಗಿ ಅವರು ಇನ್ನಿತರ ವಿಷಯಗಳಲ್ಲೂ ಪೆಟ್ಟು ತಿನ್ನಬೇಕಾಗುತ್ತದೆ. ಧಾರ್ಮಿಕ ಮತ್ತು ಜಾತಿಯ ಹಿಂಸಾಚಾರಗಳಲ್ಲಿ ಮೊದಲು ಟಾರ್ಗೆಟ್ ಆಗುವವರೇ ಮಹಿಳೆಯರು. ಗಲಭೆಗಳಾದಾಗ ಆ ಕಡೆಯವರು ಈ ಕಡೆಯ ಮಹಿಳೆಯರನ್ನು ಈ ಕಡೆಯವರು ಆ ಕಡೆಯ ಮಹಿಳೆಯರನ್ನು ಅತ್ಯಾಚಾರ ಮಾಡುವ ಘಟನೆಗಳು ಎಷ್ಟು ನಡೆದಿಲ್ಲ? ನಮ್ಮ ದೇಶದಲ್ಲಿ ಹೆಣ್ಣು, ಹುಟ್ಟುವುದಕ್ಕೂ ಶಿಕ್ಷಣ ಪಡೆಯುವುದಕ್ಕೆ ಹೆಣಗಾಡ ಬೇಕಾಗುತ್ತದೆ, ನಂತರ ಆಕೆಯನ್ನು ಯಾವಾಗ ಬೇಕಾದರೂ ಯಾರಿಗೆ ಬೇಕಾದರೂ ಮದುವೆ ಮಾಡಿಕೊಡಲಾಗುತ್ತದೆ, ಮದುವೆಯಾದ ಮೇಲೆ ಪತಿ ಮತ್ತು ಅತ್ತೆ-ಮಾವನ ಅನುಮತಿ ಸಿಕ್ಕರೆ ಮಾತ್ರ ಆಕೆ ಕೆಲಸಕ್ಕೆ ಹೋಗಬಹುದು. ಕೆಲಸಕ್ಕೆ ಹೋಗುವ ಹೆಣ್ಣೂ ತಾನು ಯಾವ ಬಟ್ಟೆ ಧರಿಸಬೇಕು ಎನ್ನುವುದನ್ನು ಬಹಳ ಎಚ್ಚರಿಕೆಯಿಂದ ನಿರ್ಧರಿಸಬೇಕು. ಇಷ್ಟಾದರೂ ಆಕೆ ಸುರಕ್ಷಿತಳಲ್ಲ! ದೇಶದ ಅರ್ಧದಷ್ಟು ಜನಸಂಖ್ಯೆ ಈ ರೀತಿ ಒಂದಲ್ಲ ಒಂದು ರೀತಿಯ ತೊಂದರೆಯಲ್ಲಿದೆ ಎಂದಾದರೆ ಅದ್ಹೇಗೆ ತಾನೆ ಭಾರತ ಸೂಪರ್‌ಪವರ್ ಆದೀತು?
ಆಮೇಲೆ…ದಯವಿಟ್ಟೂ “ಬಾಲಿವುಡ್’ ಸಿನೆಮಾಗಳ ಮೇಲೆ ಗೂಬೆ ಕೂರಿಸಬೇಡಿ. ಅತ್ಯಾಚಾರ, ಚಿತ್ರಹಿಂಸೆ, ಹಿಂಬಾಲಿಸು
ವುದು, ದೌರ್ಜನ್ಯವೆಸಗುವುದನ್ನು ಬಾಲಿವುಡ್ ಕಂಡುಹಿಡಿದಿಲ್ಲ. ಸಿನೆಮಾ ಇಂಡಸ್ಟ್ರಿ ಅಸ್ತಿತ್ವದಲ್ಲಿ ಇರದ ಕಾಲದಿಂದಲೂ ಮಹಿಳೆಯರು ಈ ಸಂಕಷ್ಟಗಳನ್ನು ಎದುರಿಸಿದ್ದಾರೆ. ಸಿನೆಮಾ ಇಂಡಸ್ಟ್ರಿಗಳೇ ಇರದ ದೇಶಗಳಲ್ಲೂ ಇದೆಲ್ಲ ಆಗುತ್ತಿಲ್ಲವೇನು? ಸಮಾಜದಲ್ಲಿ ನಡೆಯುವುದನ್ನೇ ಸಿನೆಮಾಗಳು ಪ್ರತಿಫಲಿಸುತ್ತ ವಷ್ಟೆ. ಆದರೆ ಈಗ ಸಿನೆಮಾಗಳ ವ್ಯಾಖ್ಯಾನ ಬದಲಾಗುತ್ತಿದೆ. (ಅಂದಹಾಗೆ ನನ್ನ ಸಹೋದ್ಯೋಗಿಗಳೇ ವಿಭಿನ್ನ ಶೈಲಿಯ ಸಿನೆಮಾ ಮಾಡಲಾರಂಭಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ನಮ್ಮ ಕಂಟೆಂಟ್ ಬದಲಾಗುತ್ತಿದೆ, ಉತ್ತಮಗೊಳ್ಳುತ್ತಿದೆ ಎಂದಷ್ಟೇ ಹೇಳಬಲ್ಲೆ.)
ಇಂದು ದಿನನಿತ್ಯದ ಲಿಂಗಭೇದಭಾವವನ್ನಷ್ಟೇ ಅಲ್ಲದೇ, ನೇರ ವಾಗಿ ಲೈಂಗಿಕ ದೌರ್ಜನ್ಯವನ್ನೂ ಮಹಿಳೆಯರು ಅನುಭವಿ ಸುತ್ತಿ ದ್ದಾರೆ. ಇದು ಭಾರತದಲ್ಲಿ ಬದುಕಲು ಮಹಿಳೆ ಯರು ಶತಮಾನಗಳಿಂದ ನೀಡುತ್ತಾ ಬರುತ್ತಿರುವ ತೆರಿಗೆ! ಪರಿಸ್ಥಿತಿ ಹೀಗೇ ಮುಂದುವರಿಯಬೇಕೇನು? ನಮಗೆಲ್ಲ ನಾಚಿಗೆಯಾಗಬೇಕಲ್ಲವೇ? ಎಲ್ಲಾ ಪುರುಷರೂ ಕೆಟ್ಟವರಲ್ಲ ಎನ್ನುವುದನ್ನು ನಾನು ಒಪ್ಪು
ತ್ತೇನೆ. ಬಹಳಷ್ಟು ಜನ ಪರಿಹಾರದಲ್ಲಿ ಭಾಗಿಗಳಾಗಿದ್ದಾರೆ. ಹೆಣ್ಣು
ಮಕ್ಕಳನ್ನೇ ಹೀನೈಸುವ ಮಹಿಳೆಯರು ನಮ್ಮಲ್ಲಿದ್ದರೆ, ಹೀಗೆ ಮಾಡುವುದು ತಪ್ಪು ಎನ್ನುವ ಮಹಿಳಾಪರ ಪುರುಷರೂ ಇದ್ದಾರೆ.
ಹೌದು ಎಲ್ಲಾ ಪುರುಷರೂ ಕೆಟ್ಟವರಲ್ಲ, ಆದರೆ ನನಗೆ ಗೊತ್ತಿರುವ ಎಲ್ಲಾ ಮಹಿಳೆಯರೂ ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಕಿರುಕುಳವನ್ನು ಅನುಭವಿಸಿದ್ದಾರೆ. ಮಹಿಳೆಯರು ಇದೇ ರೀತಿ ಬದುಕು ದೂಡಬಾರದಲ್ಲವೇ? ನೀವು ಮನುಷ್ಯರೇ? ಹಾಗಿದ್ದರೆ ಹೆಣ್ಣಿನಿಂದಲೇ ನೀವು ಜನಿಸಿರುತ್ತೀರಿ? ಹಾಗಿದ್ದರೆ ನಿಮಗೆ ಇದನ್ನೆಲ್ಲ ನೋಡಿ ಮುಜುಗರವಾಗುತ್ತಿಲ್ಲವೇ? ನೋವಾಗುವುದಿಲ್ಲವೇ? ಮಹಿಳೆಯರ ಮೇಲಿನ ದೌರ್ಜನ್ಯ ಕೇವಲ ಒಂದು ಸಮಸ್ಯೆ ಯಲ್ಲ, ಇದು ಸುರುಳಿ ಬಿಚ್ಚುತ್ತಾ ಬೃಹತ್ ರೂಪ ಪಡೆಯುತ್ತಿರುವ ದುರಂತ…ಎಂದಿಗೂ ನಿಲ್ಲದು ಎಂದೆನಿಸುತ್ತಿರುವ ದುಃಸ್ವಪ್ನ.
ರೀಚಾ ಚಡ್ಡಾ, ಹಿಂದಿ ನಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.