ದೇಶದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾನೂನಿಗೆ ಯಾರೂ ಅತೀತರಲ್ಲ
Team Udayavani, Sep 20, 2022, 6:05 AM IST
ಯಾವುದೇ ವ್ಯಕ್ತಿಯ ವಿರುದ್ಧ ಆರೋಪಗಳು ಕೇಳಿ ಬಂದಾಗ ಆತನ ವಿರುದ್ಧ ಕಾನೂನು ಪ್ರಕ್ರಿಯೆ ಕೈಗೆತ್ತಿಕೊಂಡಾಗ ಅದನ್ನು ವಿರೋಧಿಸಿದರೆ ” ಕಾನೂನಿಗೆ ಯಾರೂ ಅತೀತರಲ್ಲ’ ಎಂಬ ಜನತಂತ್ರೀಯ ವ್ಯಾಖ್ಯೆ ಯನ್ನೇ ಬುಡಮೇಲು ಮಾಡಿದಂತಾಗುವುದಿಲ್ಲವೇ? ತನ್ಮೂಲಕ ಕಾನೂನು ಭಂಜನೆಯ “ಹೊಸ ರಾಜಕೀಯ ತಂತ್ರ ಗಾರಿಕೆ’ಗೆ ನೀರುಣಿ ಸಿದಂತಾಗುವುದಿಲ್ಲವೇ?
ಜನತಂತ್ರ ಎನ್ನುವ ಬೃಹತ್ ಸೌಧ ಹಲವಾರು ದೃಢ ಸ್ತಂಭಗಳನ್ನು ಆಧರಿಸಿಯೇ ನಿಂತಿದೆ. ಜನತೆಯ ಅಭಿಮತದಂತೆಯೇ ಆಳ್ವಿಕೆ; ಇದು ಪ್ರಜಾತಂತ್ರದ ಸರಳತಣ್ತೀ. ಜನರಿಂದಲೇ ಆಯ್ಕೆ, ಜನರಿಂದಲೇ ಆಳ್ವಿಕೆ, ಜನರನ್ನೇ ಆಳುವಿಕೆ- ಇದು ಅಬ್ರಾಹಂ ಲಿಂಕನ್ ಕೂಡ ಕಂಡುಕೊಂಡ ನೈಜ ಪ್ರಜಾಪ್ರಭುತ್ವದ ಗುಣ ಲಕ್ಷಣ. ಇದಕ್ಕೆ ಸಂಗಾತಿಯಾಗಿ ಗಣರಾಜ್ಯ ಪದ್ಧತಿಗೆ ನಮ್ಮ ಭಾರತವೂ ಸೇರಿ ಹಲವಾರು ರಾಷ್ಟ್ರಗಳು ಅಂಗೀಕಾರದ ಮುದ್ರೆಯೊತ್ತಿವೆ. ಸ್ವಾತಂತ್ರ್ಯ ಹಾಗೂ ಸಮಾನತೆ ಜನತಂತ್ರದ ಎರಡು ನೇತ್ರಗಳಂತೆ. ಇದರ ಜತೆಗೆ ಸಹೋದರತೆಯೂ ಬೆರೆತು ಫ್ರಾನ್ಸ್‌ನ ಮಹಾ ಕ್ರಾಂತಿಯ ಘೋಷವಾಕ್ಯ ‘ ‘Liberty, Equality and Fraternity’ ಹೊಮ್ಮಿತ್ತು.
ಹೀಗೆ “ಸಮಾನತೆ’ ಎಂಬುದು ಪ್ರಜಾಪ್ರಭುತ್ವದ ಆಧಾರ ಶಿಲೆ (Bedrock). ಭಾರತದಂತಹ ವಿಶಾಲ ರಾಷ್ಟ್ರದಲ್ಲಿ ಸಮಾನ ತೆಯ ಸೆಲೆ ಬತ್ತಿಹೋದರೆ ಸ್ವಾತಂತ್ರ್ಯವೂ ಜತೆಜತೆಯಾಗಿ ಆವಿಯಾಗ ಬಲ್ಲದು. ಪ್ರಾಚೀನ ಗ್ರೀಕರ ಕಾಲದ ಡೆಮೊಕ್ರೆಸಿಯ ವರ್ಣನೆ, ಅರಿಸ್ಟಾಟಲನ ಗ್ರಂಥ “ಪಾಲಿಟಿಕ್ಸ್’- ಇದರಲ್ಲಿ ಕಾಣ ಬರುತ್ತದೆ. ಈ ಗ್ರಂಥದ 5ನೇ ವಿಭಾಗದಲ್ಲಿ ಕ್ರಾಂತಿ (Revolution) ಬಗೆಗೆ ವಿವರಣೆ ಬಹಳ ವಿಸ್ತಾರವಾಗಿ, ಗಂಭೀರವಾಗಿ ಮೂಡಿ ಬಂದಿದೆ. ಅದರಲ್ಲಿ ಬರುವ ಒಕ್ಕಣೆಯೊಂದು ಹೀಗಿದೆ “ಎಲ್ಲಿ ಸಮಾನರನ್ನು ಸಮಾನವಾಗಿ ಕಾಣುವುದಿಲ್ಲವೋ, ಅಲ್ಲಿ ಕ್ರಾಂತಿಯ ಬೀಜ ಅವರ ಮನದಲ್ಲಿ ಹೃದಯದಲ್ಲಿ ಮೊಳೆ ಯುತ್ತದೆ’ ಇದೊಂದು ಸಾರ್ವಕಾಲಿಕ ಸತ್ಯ.
ಇದನ್ನು ಅರಿತೇ ನಮ್ಮ ಭಾರತ ಸಂವಿಧಾನ ಜನಕರು “ಸಮಾನತೆ’ಗೆ ರಾಜ್ಯಾಂಗ ಘಟನೆಯಲ್ಲಿ ಮೊದಲಮಣೆ ಹಾಕಿದರು. ನಮ್ಮ ಸಂವಿಧಾನದ ಪ್ರಸ್ತಾವನೆ (Preamble) ಯಲ್ಲಿಯೇ ಸಮಾನತೆಯ ಸ್ಪಷ್ಟ ಉಲ್ಲೇಖ ಮಿನುಗುತ್ತದೆ. ಮುಂದೆ, ನಮ್ಮಿಸಂವಿಧಾನದ 3ನೇ ವಿಭಾಗದ ಆರು ಮೂಲಭೂತ ಹಕ್ಕುಗಳ ವಿಭಾಗದ ಪೈಕಿ ಮೊತ್ತ ಮೊದಲ ಸ್ಥಾನ ಸಮಾನತೆಯ ಹಕ್ಕು ಆವರಿಸಿ ಕೊಂಡುದುದೇ ಈ ಕಾರಣಕ್ಕಾಗಿ. ಅದರಲ್ಲಿಯೂ ಸಮಾನತೆಯ ಹಕ್ಕಿನ ಮೊದಲ ವಿಧಿ ಎನಿಸಿದ 14ನೇ ವಿಧಿಯ ಒಕ್ಕಣೆ ಹೀಗಿದೆ “ಭಾರತದ ಗಡಿರೇಖೆಯೊಳಗೆ ಸರಕಾರೀ ವ್ಯವಸ್ಥೆಯು (State) ಯಾವನೇ ವ್ಯಕ್ತಿಗೆ ಕಾನೂನಿನೆದುರಿನ ಸಮಾನತೆ ಹಾಗೂ ಸಮಾನ ರಕ್ಷಣೆಯನ್ನು ನಿರಾಕರಿಸುವಂತಿಲ್ಲ’ ಇದು ಸಂವಿಧಾನದ ನೇರ ಹಾಗೂ ಸ್ಪಷ್ಟ ನಿರೂಪಣೆ. ಇಲ್ಲಿ ಪ್ರಜೆ (Citizen) ಎಂಬ ಶಬ್ದ ನಮೂದಿಸಿಲ್ಲ; ಹಾಗಾಗಿ ಹಕ್ಕು ಕೇವಲ “ಭಾರತೀಯರಿಗೆ ಮಾತ್ರ’ ಎಂದು ಅನ್ವಯಿಸಲಿಲ್ಲ; ಬದಲಾಗಿ ವ್ಯಕ್ತಿ (ಕಛಿrsಟn) ಎಂಬ ಪದವನ್ನೂ ಪ್ರಜ್ಞಾಪೂರ್ವಕವಾಗಿಯೇ ಪ್ರಯೋಗಿಸಿದ್ದಾರೆ. ತನ್ಮೂಲಕ ಭಾರತದ ಸಮಸ್ತ ಪ್ರಜೆಗಳಿಗೆ ಮಾತ್ರವಲ್ಲ, ವಿದೇಶಿ ಯರೂ ಈ ನಮ್ಮ ನೆಲದಲ್ಲಿರುವ ತನಕ ಅವರ ಪಾಲಿಗೂ ಈ ಸಮಾನ ರಕ್ಷಣೆ ಹಾಗೂ ಕಾನೂನಿನ ಎದುರು ಸಮಾನ ನೆಲೆಯನ್ನೇ ಕಾಣಿಸಲಾಗಿದೆ.
ಹೀಗೆ ಈ ನೆಲದ ಕಾನೂನು ಅದು ರಾಜ್ಯಾಂಗ ಘಟನೆಯಿಂದ ಮೊದಲ್ಗೊಂಡು, ಕರಕಾನೂನು (Tax Laws), ದಂಡ ಸಂಹಿತೆಯಿಂದ ಹಿಡಿದು ಕೇಂದ್ರ, ರಾಜ್ಯ, ಸ್ಥಳೀಯ ಕಾನೂನುಗಳವರಗೆ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ಕಾನೂನಿನ ಎದುರು ಎಲ್ಲರೂ ಸಮಾನರು ಎಂಬುದು ಜನತಂತ್ರದ ಜೀವಾಳ. ಯಾವುದೇ ವ್ಯಕ್ತಿಗೆ, ಕುಟುಂಬಕ್ಕೆ, ರಾಜಕೀಯ ನಾಯಕನಿಗೆ, ಸ್ವತಃ ನ್ಯಾಯಾಧೀಶ ಹುದ್ದೆಯನ್ನೂ ಅಲಂಕರಿಸಿದವರಿಗೂ ಇಲ್ಲಿ ತಾರತಮ್ಯವಿಲ್ಲ; ಒಂದೊಮ್ಮೆ ಯಾರಿಗಾದರೂ ಅಲ್ಪ ವಿನಾಯಿತಿಯ ನಿರೂಪಣೆ ಸ್ಪಷ್ಟವಾಗಿ ಉಲ್ಲೇಖೀತವಾದರೆ ಆ ವ್ಯಕ್ತಿಗೆ ಅಥವಾ ಅಂತಹ ವ್ಯಕ್ತಿಗಳ ಸಮುದಾಯಕ್ಕೆ ಉದಾ: ಅಂಗವಿಕಲರಿಗೆ, ವೃದ್ಧರಿಗೆ, ಮಹಿಳೆಯರಿಗೆ, ಮಹನೀಯರಿಗೆ, ಹಿಂದುಳಿದ ವರ್ಗಕ್ಕೆ ಒಂದಿಷ್ಟು ವಿನಾಯಿತಿ ನೀಡಬಹುದು. ಅದೂ ಆ ಕಾನೂನಿನಲ್ಲೇ ಆ ವಿವರಣೆ ಮೂಡಿ ನಿಂತಿರಬೇಕು. ಇನ್ನೂ ಆ ಕಾನೂನೇ ಸ್ವತಃ ನಿರೂಪಿಸಿದಷ್ಟೇ ಆ ಕಾನೂನು ಉಲ್ಲಂಘನೆಗೆ ಶಿಕ್ಷೆ ವಿಧಿಸಲು ನ್ಯಾಯಾಲಯಕ್ಕೆ ಆಸ್ಪದವಿದೆ: “ಕಾನೂನು ಅರಿತಿಲ್ಲ’ ಎಂಬುದೂ ಕಾನೂನಿನ ಉಲ್ಲಂಘನೆ ಹಾಗೂ ಅನುಭವಿಸಬೇಕಾದ ಶಿಕ್ಷೆಗೆ ವಿನಾಯಿತಿಯ ಒಳಮಾರ್ಗವೂ ಎನಿಸುವುದಿಲ್ಲ (Ignorance of law is not the excuse of Law).
ಹೀಗೆ ಕಾನೂನಿಗೆ ಯಾರೂ ಅತೀತರಲ್ಲ. ಆರೋಪಿಗಳ ವಿರುದ್ಧ ಕಾನೂನು ಪ್ರಕ್ರಿಯೆ ಕೈಗೆತ್ತಿಕೊಳುವುದನ್ನು ಪ್ರಶ್ನಿಸಿ ನಡೆಸುವ ಪ್ರತಿಭಟನೆಗಳು ಕೂಡ ಪ್ರಶ್ನಾರ್ಹ. ಏಕೆಂದರೆ ತನ್ಮೂಲಕ “ಹೊಸ ಪ್ರಜಾತಂತ್ರ ಸಂಸ್ಕೃತಿ’ಯನ್ನೇ ನಮ್ಮ ನೆಲದಲ್ಲಿ ಹುಟ್ಟು ಹಾಕಿದಂತಾಗುತ್ತದೆ. ನ್ಯಾಯದ ತಕ್ಕಡಿಯಲ್ಲಿ ತೂಗಿ, ಅನ್ಯಾಯದ, ಅಪರ ಹಾದಿಯ ಕ್ರಮಣ ಆಗಿದೆ ಎಂದು ಸಾಬೀತಾದಲ್ಲಿ ಶಿಕ್ಷಾರ್ಹ ಅಪರಾಧ ಘೋಷಣೆ ಹಾಗೂ ತಕ್ಕ ಶಿಕ್ಷೆ- ಇವೆಲ್ಲ ಕಾನೂನಿನ ಸಾಮಾನ್ಯ ಪಥ. ಕಾನೂನಿನ ಕಬಂಧ ಬಾಹುವಿನ ಇರುವಿಕೆಯ ಹಾಗೆ: ಕಾನೂನು ತನ್ನದೇ ಕ್ರಮ (Due Process of Law)ವೂ ನಮ್ಮಲ್ಲಿರದೆ, ಇನ್ನೂ ಒಂದು ಹೆಜ್ಜೆ ಮುಂದುವರಿದೆ “ಕಾನೂನಿನ್ವಯ ಸ್ಥಾಪಿತ ಗೊಂಡ ಕ್ರಮದಂತೆ (Procedure Established by Law) ವಿಚಾರಣೆ ಹಂತ ಹಂತ ವಾಗಿ, ಕ್ರಮ ಬದ್ಧವಾಗಿ ನಡೆದು, ಈ ಎಲ್ಲ ಪ್ರಕ್ರಿಯೆಗಳ ಅಂತ್ಯದಲ್ಲಿ ದೋಷ ಮುಕ್ತಿ ಅಥವಾ ದೋಷ ಘೋಷಣೆ ಹಾಗೂ ದೋಷಿಗೆ ಶಿಕ್ಷೆ ವಿಧಿಸುವಿಕೆ ನಡೆಯುತ್ತದೆ. ಇಲ್ಲಿ ನ್ಯಾಯಾಧೀಶರ ವಿಚಾರಣೆಯೂ ಪಾರದರ್ಶಿಕವಾಗಿರತಕ್ಕದ್ದು ಹಾಗೂ ಕಾನೂನಿನ ಅನ್ವಯವೇ ಇರತಕ್ಕದ್ದು, 21ನೇ ವಿಧಿ ನಿರೂಪಣೆಯ ಸತ್ವಕ್ಕನುಗುಣವಾಗಿ ವ್ಯಕ್ತಿಯ ಬದುಕು ಹಾಗೂ ಸಾತಂತ್ರ್ಯವನ್ನೂ ಕಾನೂನಿನ್ವಯವಲ್ಲದೇ ಬೇರೆ ಯಾವುದೇ ತೆರನಾಗಿ ಅಪಹರಿಸುವಂತಿಲ್ಲ.
ಹೀಗಿರುವಾಗ ಯಾವುದೇ ವ್ಯಕ್ತಿಯ ವಿರುದ್ಧ ಆರೋಪಗಳು ಕೇಳಿ ಬಂದಾಗ ಆತನ ವಿರುದ್ಧ ಕಾನೂನು ಪ್ರಕ್ರಿಯೆ ಕೈಗೆತ್ತಿಕೊಂಡಾಗ ಅದನ್ನು ವಿರೋಧಿಸಿದರೆ ” ಕಾನೂನಿಗೆ ಯಾರೂ ಅತೀತ ರಲ್ಲ’ ಎಂಬ ಜನತಂತ್ರೀಯ ವ್ಯಾಖ್ಯೆ ಯನ್ನೇ ಬುಡಮೇಲು ಮಾಡಿದಂತಾ ಗುವು ದಿಲ್ಲವೇ? ತನ್ಮೂಲಕ ಕಾನೂನು ಭಂಜನೆಯ “ಹೊಸ ರಾಜಕೀಯ ತಂತ್ರ ಗಾರಿಕೆ’ಗೆ ನೀರುಣಿ ಸಿದಂತಾ ಗು ವುದಿಲ್ಲವೇ? ಕೋರ್ಟ್‌ನ ಸಮನ್ಸ್ ನಿಂದ ನಮ್ಮ ಸಂವಿ ಧಾನಾತ್ಮಕವಾಗಿ ವಿನಾಯಿತಿ ಇರುವುದು ರಾಷ್ಟ್ರಾಧ್ಯಕ್ಷರಿಗೆ ಮಾತ್ರ. ಆದರೆ ಅವರನ್ನೂ 61ನೇ ವಿಧಿ ಯನ್ವಯ ಮಹಾಭಿಯೋಗ (Impeac-hment)ದ ಮೂಲಕ ಪದಚ್ಯುತಿ ಗೊಳಿ ಸಲು ಸಾಧ್ಯತೆ ಇದೆ. ಅದೇ ರೀತಿ ಸರ್ವೋಚ್ಚ ನ್ಯಾಯಲಯದ ನ್ಯಾಯಧೀಶರನ್ನೂ 124(4) ವಿಧಿಯ ಪ್ರಕಾರ ಅಧಿಕಾರದಿಂದ ತೆಗೆಯುವಲ್ಲಿಯೂ ಸಂವಿಧಾನದ ಕದ ತೆರೆದಿದೆ. ಹೀಗೆ ಕಾನೂನಿಗೆ ತಲೆ ಬಾಗುವಿಕೆ, ನಿರ್ದೋಷಿತ್ವದ ಸಾಬೀತು ಗೊಳಿಸುವಿಕೆಯನ್ನು ಕಾನೂನು ಪ್ರಕ್ರಿಯೇ ಮೂಲಕವೇ ಹೊಂದು ವಿಕೆ ತೀರಾ ಅತ್ಯಗತ್ಯ. ಅದರ ಬದಲು, ಕಾನೂನಿನ ಪ್ರಕ್ರಿಯೆಗೆ ಒಳಪಡಿಸುವ ಪ್ರಾಥಮಿಕ ಹಂತದಲ್ಲಿಯೇ ರಾಜಕೀಯದ ಬಲೆಯನ್ನು ಬೀಸಿ ಕಾನೂನಿನ ಕೈಗಳನ್ನು ಕಟ್ಟಿ ಹಾಕುವ ಪ್ರಯತ್ನಗಳು ಪ್ರಶ್ನಾರ್ಹವೇ ಸರಿ.
-ಡಾ| ಪಿ.ಅನಂತಕೃಷ್ಣ ಭಟ್ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.