ಪ್ರಶಸ್ತಿ ವಂಚಿತ “ನೊಬೆಲ್ ಪ್ರತಿಭೆ’
Team Udayavani, Dec 10, 2022, 6:10 AM IST
ಬರೋಬ್ಬರಿ 41 ಬಾರಿ ನಾಮನಿರ್ದೇಶನಗೊಂಡಿದ್ದರೂ ಪ್ರತೀ ಸಲ ತನ್ನ ಕೈತಪ್ಪಿದ ನೊಬೆಲ್ ಪ್ರಶಸ್ತಿ! ಅವರು ಇಪ್ಪತ್ತನೇ ಶತಮಾನದಲ್ಲಿ ಅತ್ಯಂತ ಮೆಚ್ಚುಗೆ ಪಡೆದ ಮತ್ತು ಪ್ರಭಾವಶಾಲಿ ವಿಜ್ಞಾನಿ. ತನ್ನ ಅಂತರ್‌ಶಿಸ್ತೀಯ ಸಂಶೋಧನೆಗಳಿಂದ ಮತ್ತು ರಸಾಯನಿಕ ಶಿಕ್ಷಣದ ನವೀನ ವಿಧಾನದಿಂದ, ಭೌತರಸಾಯನಶಾಸ್ತ್ರದಲ್ಲಿ ಒಂದು ಕ್ರಾಂತಿಯನ್ನೇ ತಂದ ಮೇಧಾವಿ. ಅವರೇ, ಗಿಲ್ಬರ್ಟ್ ನ್ಯೂಟನ್ ಲೆವಿಸ್ (1875-1946). ರಸಾಯನಿಕ ಉಷ್ಣಗತಿಶಾಸ್ತ್ರ, ಕೋವೆಲೆನ್ಸಿ ಬಂಧದ ಎಲೆಕ್ಟ್ರಾನ್ ಜೋಡಿ ಮಾದರಿ, ಆಮ್ಲ-ಪ್ರತ್ಯಾಮ್ಲಗಳ ಎಲೆಕ್ಟ್ರಾನ್ ಸಿದ್ಧಾಂತ, ಸಮಸ್ಥಾನಿ ಬೇರ್ಪಡಿಕೆ, ದ್ಯುತಿರಸಾಯನಶಾಸ್ತ್ರ, ಇವುಗಳ ಕುರಿತಾದ ಆವಿಷ್ಕಾರಗಳಿಗೆ ಜಿ.ಎನ್.ಲೆವಿಸ್ ಪ್ರಸಿದ್ಧರು.
ಜಿ.ಎನ್.ಲೆವಿಸ್ ಹುಟ್ಟಿದ್ದು ಅಮೆರಿಕದ ಮ್ಯಾಸಚೂಸೆಟ್ಸ್‌ನ ವೇಮೌತ್‌ನಲ್ಲಿ. ಸ್ನಾತಕ, ಸ್ನಾತಕೋತ್ತರ ಮತ್ತು ಪಿಎಚ್.ಡಿ. ಪದವಿ ಗಳಿಕೆ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ. ಜರ್ಮನಿಯ ವಿಲೆಲ್ಮ್ ಓಸ್ಟಾಲ್ಡ್ (ನೊಬೆಲ್,1909) ಮತ್ತು ವಲ್ದರ್ ನೆನ್ಸ(ನೊಬೆಲ್,1920) ಅವರ ಪ್ರಯೋಗಾಲಯಗಳಲ್ಲಿ ನಡೆಸಿದ ಪೋಸ್ಟ್ ಡೊಕ್ಟೋರಲ್ ಸಂಶೋಧನೆ. ಬೋಧಕರಾಗಿ ಹಾರ್ವರ್ಡ್‌ನಲ್ಲಿ ಕೆಲವು ಕಾಲ ಸೇವೆ ಸಲ್ಲಿಕೆ. ಫಿಲಿಪೈನ್ಸ್ ದ್ವೀಪದಲ್ಲಿ ತೂಕ ಮತ್ತು ಅಳತೆಗಳ ಅಧೀಕ್ಷಕರಾಗಿ ಮತ್ತು ಮನಿಲಾದಲ್ಲಿ ಬ್ಯೂರೋ ಆಫ್ ಸೈನ್ಸ್‌ನಲ್ಲಿ ಕೆಮಿಸ್ಟ್ ಅಗಿ ಕಾರ್ಯಾಚರಣೆ. ಅನಂತರ ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆಸಿದ ತೀವ್ರವಾದ ಪ್ರಾಯೋಗಿಕ ಮತ್ತು ಸೈದ್ಧಾಂತಿಕ ವಿಜ್ಞಾನ ಚಟುವಟಿಕೆಗಳಿಂದ ಲೆವಿಸ್ ಹೆಸರು ಗಳಿಸಿದರು. 1912ರಲ್ಲಿ ಪ್ರಾಧ್ಯಾ ಪಕರಾಗಿ ಬಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾ ನಿಲಯದಲ್ಲಿ ಸೇರ್ಪಡೆಗೊಂಡು, ಜೀವಿತಾವಧಿಯವ ರೆಗೂ ಸೇವೆ ಸಲ್ಲಿಸಿ, ರಸಾಯನ ಶಾಸ್ತ್ರ ವಿಭಾಗವನ್ನು ಸಂಯುಕ್ತ ಸಂಸ್ಥಾನದ ಅತ್ಯುತ್ತಮ ವಿಭಾಗಗಳಲ್ಲಿ ಒಂದು-ಎನ್ನಿಸುವಂತೆ ರೂಪಿಸುವಲ್ಲಿ ಯಶಸ್ವಿಯಾದರು. ಪ್ರಯೋಗ ಮಾಡುವುದಕ್ಕಿಂತ ಮೊದಲೆ, ಅಡಗಿರುವ ಸತ್ಯವನ್ನು ಬರಿಗಣ್ಣಿನಿಂದ ನೋಡಿ ಊಹಿಸಬಲ್ಲ ಪ್ರತಿಭೆಯಾಗಿದ್ದ ಲೆವಿಸರ ಸಂಶೋಧನ ಶೈಲಿಯ ಸರಳತೆ ಮತ್ತು ಸಂಯೋಜನ ಸಾಮರ್ಥ್ಯ ಚಕಿತಗೊಳಿಸುವಂಥದ್ದು. ಇವರು ಅನೇಕ ಗ್ರಂಥಗಳನ್ನು ಮತ್ತು ನೂರಾರು ಸಂಶೋಧನ ಲೇಖನಗಳನ್ನು ಬರೆದು ಪ್ರಕಟಿಸಿದ್ದರು. “ವೇಲೆನ್ಸಿ ಆ್ಯಂಡ್ ದಿ ಸ್ಟ್ರಕ್ಚರ್ ಆಫ್ ಆಟಮ್ಸ್ ಆ್ಯಂಡ್ ಮೊಲಿಕ್ಯೂಲ್ಸ್’ ಎಂಬ ಪ್ರಭಾವಶಾಲಿ ಪುಸ್ತಕವನ್ನು ರಚಿಸಿದರು. ಸಾಪೇಕ್ಷ ಸಿದ್ಧಾಂತ, ಸ್ಟಾಟಿಸ್ಟಿಕಲ್ ಮೆಕ್ಯಾನಿಕ್ಸ್ ವಿಷಯಗಳ ಮೇಲೆ ಲೇಖನಗಳನ್ನು ಬರೆದು ಪ್ರಕಟಿಸಿದರು. ಬೆಳಕಿನ ಕಣಗಳ ಸ್ವರೂಪವನ್ನು ವಿವರಿಸಲು “ಫೋಟಾನ್’ ಎಂಬ ಪದವನ್ನು ಪರಿಚಯಿಸಿದವರು ಲೆವಿಸ್.
ಲೆವಿಸ್‌ರ ಸಂಶೋಧನೆಯ ಪ್ರಮುಖ ಕ್ಷೇತ್ರ, ಉಷ್ಣಗತಿಶಾಸ್ತ್ರದ ಕ್ಲಿಷ್ಟ ಸಮೀಕರಣಗಳನ್ನು ಮತ್ತು ಅಮೂರ್ತ ಚಿಂತನೆಗಳನ್ನು ಸರಳೀಕರಿಸಿ, ರಸಾಯನ ವಿಜ್ಞಾನದ ಪಠ್ಯಕ್ರಮದಲ್ಲಿ ಸೇರಿಸಿದ್ದು ಲೆವಿಸರ ಹೆಮ್ಮೆಯ ಕೊಡುಗೆ. “ಐಡಿಯಲ್ ಸಿಸ್ಟಮ್’ ಮತ್ತು “ರಿಯಲ್ ಸಿಸ್ಟಮ್’ಗಳನ್ನು ಸಮರ್ಪಕವಾಗಿ ಅರ್ಥೈಸಲು, “ಏಕ್ಟಿವಿಟಿ’, “ಏಕ್ಟಿವಿಟಿ ಗುಣಾಂಕ’, “ಅಯಾನಿಕ್ ಬಲ’, “ಫುÂಗಾಸಿಟಿ’ ಮುಂತಾದ ಎಂಪಿರಿಕಲ್ ಪರಿಕಲ್ಪನೆಗಳನ್ನು ಅವರು ಪರಿಚಯಿಸಿದರು. ಎಮ್.ಎಫ್. ರಾಂಡಾಲ್ ಜತೆಗೂಡಿ ಲೆವಿಸ್ ಪ್ರಕಟಿಸಿದ “ಥಮೊಡೈನಾಮಿಕ್ಸ್ ಆ್ಯಂಡ್ ಫ್ರೀ ಎನರ್ಜಿ ಆಫ್ ಕೆಮಿಕಲ್ ಸಬ್ಸ್
ಸ್ಟೆನ್ಸೆಸ್”” ಎಂಬ ಅಭಿಜಾತ ಕೃತಿ ಹೆಚ್ಚಿನ ಜ®ಪ್ರಿಯತೆ ಪಡೆಯಿತು. ರಾಸಾಯನಿಕ ಸಂಬಂಧಗಳ ಮೇಲಿನ ಲೆವಿಸರ ಕೆಲಸವು ನೊಬೆಲ್ ಬಹುಮಾನಕ್ಕೆ ಅರ್ಹವಾಗಿದ್ದರೂ ಇನ್ನೂ ಕೆಲವು ಪ್ರಶ್ನೆಗಳಿಗೆ ಭವಿಷ್ಯದ ಕೆಲಸದಿಂದ ಸ್ಪಷ್ಟತೆ ಸಿಗಬೇಕಾಗಿದೆ ಎಂಬ ವರದಿಯಿಂದಾಗಿ ನೊಬೆಲ್ ಪ್ರಶಸ್ತಿಯಿಂದ ಲೆವಿಸ್ ವಂಚಿತರಾದರು.
ಅತ್ಯಂತ ಹೊರಕವಚದಲ್ಲಿರುವ “ವೇಲೆನ್ಸ್ ಎಲೆಕ್ಟ್ರಾನ್’ಗಳನ್ನು ಪರಮಾಣುಗಳು ತಮ್ಮ ನಡುವೆ ಹಂಚಿಕೊಳ್ಳುವುದರಿಂದ ಸಹವೇಲೆನ್ಸಿàಯ ಬಂಧ ರಚನೆಯಾಗುತ್ತದೆ ಮತ್ತು ಬಂಧದ ರಚನೆಯಲ್ಲಿ ಭಾಗವಹಿಸುವ ಪರಮಾಣುಗಳು ಜಡ ಅನಿಲಗಳ ಸ್ಥಿರ ಎಲೆಕ್ಟ್ರಾನಿಕ್ ವಿನ್ಯಾಸ(ಆಕ್ಟೆಟ್)ವನ್ನು ಪಡೆಯುತ್ತವೆ ಎಂಬ ಪರಿಕಲ್ಪನೆಯನ್ನು ಲೆವಿಸ್ ಮಂಡಿಸಿದರು. ಹಂಚಿಕೆಯಾಗದೆ ಬಿಡಿಯಾಗಿರುವ ಎಲೆಕ್ಟ್ರಾನ್ ಅನ್ನು “ಮುಕ್ತ ರಾಡಿಕಲ್’ ಎಂಬುದಾಗಿ, ಲೆವಿಸ್ ಪರಿಚಯಿಸಿದ್ದು ಮಾತ್ರವಲ್ಲದೆ ಅದರ ಕಾಂತೀಯ ಗುಣಲಕ್ಷಣಗಳ ಬಗ್ಗೆ ಗಮನ ಸೆಳೆದರು. ಇರ್ವಿಂಗ್ ಲ್ಯಾಂಗುಯಿರ್, ಲೆವಿಸರ ಬಾಂಡಿಂಗ್ ಪರಿಕಲ್ಪನೆಯನ್ನು ವಿಸ್ತರಿಸಿ ಜನಪ್ರಿಯಗೊಳಿಸಿದರು. ಆ ಸುಧಾರಿತ ಸಿದ್ಧಾಂತ, “ಲ್ಯಾಂಗುಯಿರ್-ಲೆವಿಸ್ ಬಾಂಡಿಂಗ್ ಸಿದ್ಧಾಂತ’ ಎಂದೇ ಪ್ರಸಿದ್ಧಿಗೆ ಬಂದಿತ್ತು. ಆದರೆ ಈ ರೀತಿಯ ಬೆಳವಣಿಗೆಯು ಲೆವಿಸರ ಕಾರ್ಯಾಚರಣೆಯ ಕ್ಷೇತ್ರದಲ್ಲಿ ನಡೆಸಲಾದ ಹಸ್ತಕ್ಷೇಪ ಮತ್ತು ಲ್ಯಾಂಗೂ¾ಯಿರ್ ಲೆವಿಸರ ಪ್ರತಿಸ್ಪರ್ಧಿ ಎಂಬಂತಹ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಲೆವಿಸ್ ಬಾಂಡಿಂಗ್ ತಣ್ತೀವು ತುಂಬಾ ಗುಣಾತ್ಮಕವಾಗಿದ್ದು, ಪೆಡಗೋಗಿಕಲ್ ಆಗಿ ಕೂಡ ಪ್ರಯೋಜನಕಾರಿಯಾಗಿದ್ದರೂ ಭವಿಷ್ಯತ್ತಿನಲ್ಲಿ, ಸ್ಪೆಕ್ಟ್ರೋಸ್ಕೊಪಿ ಮತ್ತು ಕ್ವಾಂಟಮ್ ಮೆಕಾನಿಕ್ಸ್‌ಗಳ ಪರಿಮಾಣಾತ್ಮಕ ಅಂಶಗಳಾಧಾರಿತ ಸಿದ್ಧಾಂತಗಳೇ ಹೆಚ್ಚಿನ ಪ್ರಾಮುಖ್ಯವನ್ನು ಪಡೆಯಲಿವೆ ಎಂಬ ಕಾರಣಕ್ಕೆ ಲೆವಿಸರಿಗೆ ಮತ್ತೆ ನೊಬೆಲ್ ಪ್ರಶಸ್ತಿ ತಪ್ಪಿ ಹೋಯಿತು. ಆದರೆ ಅದೇ ವರ್ಷ ಲ್ಯಾಂಗು¾ಯಿರ್‌ಗೆ “ಮೇಲ್ಮೆ„ ರಸಾಯನಶಾಸ್ತ್ರ’ದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು.
“ಲ್ಯಾಂಗುಯಿರ್ – ಲೆವಿಸ್ ಬಾಂಡಿಂಗ್’ ಮಾದರಿಯನ್ನು, ಕ್ಟಾಂಟಮ್ ಮೆಕ್ಯಾನಿಕ್ಸ್‌ನೊಂದಿಗೆ ಸಮನ್ವಯಗೊಳಿಸಿ, “ವೇಲೆನ್ಸ್ ಬಾಂಡ್’ ಮಾದರಿಯಾಗಿ ಪರಿವರ್ತಿಸಿದವರು, ಅಮೆರಿಕದ ಖ್ಯಾತ ವಿಜ್ಞಾನಿ, ಲೈನಸ್ ಪೌಲಿಂಗ್(ನೊಬೆಲ್1954, 1962). ಲೈನಸ್ ಪೌಲಿಂಗ್ ಬರೆದ ಸುಪ್ರಸಿದ್ಧ ಪುಸ್ತಕ “ದಿ ನೇಚರ್ ಆಫ್ ದಿ ಕೆಮಿಕಲ್ ಬಾಂಡ್’ ಜಿ.ಎನ್.ಲೆವಿಸ್‌ಗೆ ಅರ್ಪಿಸಲ್ಪಟ್ಟಿದೆ. “ಭಾರಜಲಜನಕ'(ಡ್ಯುಟೇರಿಯಮ್), ಜಲಜನಕದ ಸಮಸ್ಥಾನಿ. ಸಾಮಾನ್ಯ ಜಲಜನಕಗಿಂತ ದ್ವಿಗುಣ ದ್ರೌವ್ಯರಾಶಿಯುಳ್ಳ ಡ್ಯುಟೇರಿಯಮ್, ಶೇ. 0.015 ನೈಸರ್ಗಿಕ ಸಮೃದ್ಧಿಯನ್ನು ಪಡೆದಿದೆ. ಆಸನಿಸಿದ ದ್ರವ ಹೈಡ್ರೊಜನ್ ಮಾದರಿಗಳಲ್ಲಿ ಡ್ಯುಟೇರಿಯಮ್ ಅನ್ನು ರೋಹಿತದರ್ಶಕ ವಿಧಾನದಿಂದ ಪ್ರಪ್ರಥಮವಾಗಿ ಪತ್ತೆ ಮಾಡಿದ್ದು ಲೆವಿಸರ ಹಳೆಯ ವಿದ್ಯಾರ್ಥಿ ಕೊಲಂಬಿಯಾ ಯುನಿವರ್ಸಿಟಿಯ ಪ್ರೊಫೆಸರ್, ಹರಾಲ್ಡ್ ಯೂರಿಯಾಗಿದ್ದರೂ ಶುದ್ಧ ರೂಪದ ಮತ್ತು ಬೃಹತ್ ಪ್ರಮಾಣದ ಡ್ಯುಟೇರಿಯಮ್‌ಅನ್ನು “ಭಾಗಶಃ ವಿದ್ಯುದ್ವಿಭಜನೆ’ಯ ಮೂಲಕ ತಯಾರಿಸಿ ಅದರ ಭೌತಿಕ ಮತ್ತು ಜೈವಿಕ ಗುಣಲಕ್ಷಣಗಳನ್ನು ವಿವರಿಸುವ ಅನೇಕ ಲೇಖನಗಳನ್ನು ಪ್ರಕಟಿಸಿದ ಕೀರ್ತಿಗೆ ಭಾಜನರಾದವರು ಜಿ.ಎನ್.ಲೆವಿಸ್. ತಾನು ತಯಾರಿಸಿದ ಡ್ಯುಟೇರಿಯಮ್ ಮಾದರಿಗಳನ್ನು ಸೈಕ್ಲೋಟ್ರಾನ್ ಖ್ಯಾತಿಯ ಇ.ಒ.ಲಾರೆನ್ಸ ಮತ್ತು ಇತರ ಸಂಶೋಧಕರಿಗೆ ಉದಾರವಾಗಿ ನೀಡುವ ಮೂಲಕ ಪರಮಾಣು ನ್ಯೂಕ್ಲಿಯಸ್‌ಗಳ ಅಧ್ಯಯನಕ್ಕೆ ನೆರವಾಗಿ, ಭಾರಜಲಜನಕ ಒಡೆತನದ ವಿಶ್ವ ನಾಯಕನಾದರು ಲೆವಿಸ್. ಡ್ಯುಟೇರಿಯಮ್‌ನ ಅನ್ವೇಷಣೆಗಾಗಿ ನೊಬೆಲ್ ಪ್ರಶಸ್ತಿಯನ್ನು ಯೂರಿ ಮತ್ತು ಲೆವಿಸ್ ನಡುವೆ ಹಂಚಿಕೊಳ್ಳಬೇಕೆಂದು ಶಿಫಾರಸು ಮಾಡಲಾಗಿದ್ದರೂ ಅದನ್ನು ಯೂರಿಗೆ ಮಾತ್ರ ನೀಡಲಾದಾಗ ಲೆವಿಸ್ ಹತಾಶರಾದರು.
ವಿಜ್ಞಾನ ಚರಿತ್ರೆಯಲ್ಲಿ ಜಿ. ಎನ್. ಲೆವಿಸ್‌ಗೆ ಶಾಶ್ವತ ಕೀರ್ತಿಯನ್ನು ತಂದುಕೊಟ್ಟ ಸಂಶೋಧನೆ, ಜೋಡಿ ಎಲೆಕ್ಟ್ರಾನ್ ಬಂಧದ ಪರಿಕಲ್ಪನೆಯ ಆಧಾರದ ಮೇಲೆ 1923ರಲ್ಲಿ ಪರಿಚಯಿಸಲಾದ ಆದರೆ ಈಗಲೂ ಬಳಕೆಯಲ್ಲಿರವ “ಆಮ್ಲ-ಪ್ರತ್ಯಾಮ್ಲ ತತ್ತ. ಅದು ಹೆಚ್ಚು ಸಮಗ್ರ ಮತ್ತು ಅಡಕಗೊಂಡಿರುವುದರಿಂದ ಹೆಚ್ಚಿನ ಪ್ರಾಮುಖ್ಯವನ್ನು ಪಡೆಯಿತು. ಇಷ್ಟಾಗಿಯೂ “ಲೆವಿಸ್ ಆಸಿಡ್-ಬೇಸ್’ ನೊಬೆಲ್ ವ್ಯಾಪ್ತಿಯಿಂದ ಹೊರಗುಳಿದದ್ದು ಮಾತ್ರ ದುರದೃಷ್ಟವೇ ಸರಿ.
ಜಿ.ಎನ್. ಲೆವಿಸ್ ನಡೆಸಿದ ಕೊನೆಯ ಸಂಶೋಧನೆ, ಸಾವಯವ ಬಣ್ಣಗಳ “ಹೊರಹೀರುವಿಕೆ’, “ಪ್ರತಿದೀಪ್ತಿ’ ಮತ್ತು “ಅನುದೀಪ್ತಿ’ಗೆ ಸಂಬಂಧಿಸಿದ ದ್ಯುತಿರಸಾಯಶಾಸ್ತ್ರದ ಸಂಕೀರ್ಣ ವಿದ್ಯಮಾನಗಳ ವಿಶ್ಲೇಷಣೆ, ಜರ್ನಲ್ ಆಫ್ ಅಮೆರಿಕನ್ ಕೆಮಿಕಲ್ ಸೊಸೈಟಿಯಲ್ಲಿ ಪ್ರಕಟಗೊಂಡ “ಅನುದೀಪ್ತಿಯ ಸ್ವರೂಪ ಮತ್ತು ತ್ರಯಕ ಸ್ಥಿತಿ’ಯ ಕುರಿತಾದ ಲೇಖನಗಳು ಜಗತ್ತಿನಾದ್ಯಂತ ಸಂಶೋಧಕರ ಗಮನ ಸೆಳೆದವು. ಆದರೆ ಆ ಸಂಶೋಧನೆಯ ನಿರ್ಣಾಯಕ ಫಲಿತಾಂಶಗಳು ಇನ್ನೂ ದೃಢೀಕರಣಗೊಳ್ಳಬೇಕಾಗಿದ್ದು ನೊಬೆಲ್ ಪ್ರಶಸ್ತಿಗೆ ಅದು ಇನ್ನೂ ಸಿದ್ಧವಾಗಿಲ್ಲ ಎಂಬ ಕಾರಣಕ್ಕೆ ಕೊನೆಯ ಅವಕಾಶವೂ ಲೆವಿಸ್‌ರ ಕೈತಪ್ಪಿದಂತಾಯಿತು. ತನ್ನ 71ನೇ ವಯಸ್ಸಿನ ಅದೊಂದು ದಿನ, ಪ್ರತಿದೀಪ್ತಿ ಮೇಲಿನ ಸಯನಿಕ್ ಆಮ್ಲ ದ್ರವದ ಡೈ ಎಲೆಕ್ಟ್ರಿಕ್ ಪರಿಣಾಮಗಳ ಬಗ್ಗೆ ಪ್ರಯೋಗ ನಡೆಸಿದ್ದರು. ಇದ್ದಕ್ಕಿದ್ದಂತೆ ಆಘಾತವೊಂದು ನಡೆದಿತ್ತು. ಕೆಲವೇ ಹೊತ್ತಿನ ಮೊದಲು ತನ್ನ ಜತೆಯಲ್ಲಿ ಪ್ರಯೋಗದ ಕುರಿತು ಚರ್ಚಿಸಿದ್ದ ಲೆವಿಸ್ ಅವರ ನೆಲದ ಮೇಲೆ ಬಿದ್ದಿದ್ದ ನಿರ್ಜೀವ ದೇಹವನ್ನು ನೋಡಿದ ಸಂಶೋಧನ ವಿದ್ಯಾರ್ಥಿ, ಮೈಕೆಲ್ ಕಾಶಾ ಶೋಕತಪ್ತರಾದರು. ಲ್ಯಾಬ್‌ಗ ಬರುವ ಮೊದಲು ಲ್ಯಾಂಗ¾ಯಿರ್ ಗೌರವಾಥ ಏರ್ಪಡಿಸಲಾಗಿದ್ದ ಭೋಜನಕೂಟದಲ್ಲಿ ಲೆವಿಸ್ ಭಾಗವಹಿಸಿದ್ದರು ಮತ್ತು ಖನ್ನತೆಗೊಳಗಾಗಿದ್ದರೆಂದು ಹೇಳಲಾಗಿದೆ. ಅವರ ಸಹೋದ್ಯೋಗಿಗಳು ಇದು ಆತ್ಮಹತ್ಯೆ ಎಂದು ಭಾವಿಸಿದ್ದರು. ಆದರೆ ವೈದ್ಯಕೀಯ ವರದಿಯ ಪ್ರಕಾರ ಸಾವು ಹೃದಯಾಘಾತದಿಂದಾಗಿತ್ತು. ಅಂತರಾಳದ ನೋವನ್ನು ನುಂಗುತ್ತಲೇ ಜಿ.ಎನ್. ಲೆವಿಸ್ ಈ ಲೋಕಕ್ಕೆ ವಿದಾಯ ಹೇಳಿದ್ದರು.
ಸತ್ಯಾಸತ್ಯತೆ ಏನೇ ಇರಲಿ, ಜಿ.ಎನ್.ಲೆವಿಸ್ ಸ್ವತಃ ನೊಬೆಲ್ ಪ್ರಶಸ್ತಿಯನ್ನು ಪಡೆಯದಿದ್ದರೂ ಪ್ರತಿಭಾವಂತ ವಿಜ್ಞಾನಿ ಸಮೂಹವನ್ನೇ ತರಬೇತುಗೊಳಿಸಿದ್ದರು. ಅವರಲ್ಲಿ ಅನೇಕರು ಮುಂದೆ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಅವರ ಸಾಧನೆಗೆ ವಿಜ್ಞಾನ ಪ್ರೇಮಿಗಳೆಲ್ಲರೂ ಬೆರಗಾಗಿದ್ದಾರೆ. ವ್ಯಕ್ತಿಗಿಂತ ಕೃತಿಯು ದೀರ್ಘಾವಧಿ ಉಳಿಯವಂತಹದು ಅಲ್ಲವೇ?
-ಪ್ರೊ| ಬಿ.ಎಸ್. ಶೇರಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.