ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್ ಕರಾವಳಿಯ ರಾಯಭಾರಿ
Team Udayavani, Mar 13, 2024, 10:37 AM IST
ಮಾತು ಮತ್ತು ಮೌನದ ಮಧ್ಯೆ ಒಂದು ಸೂಕ್ಷ್ಮ ಅಂತರವೂ ಇರುತ್ತದೆ. ಹಾಗೆಯೇ ಸಂಬಂಧವೂ ಇರುತ್ತದೆ. ಇದನ್ನು ಸರಿಯಾಗಿ ಅರಿತು ಪ್ರಯೋಗಿಸುವುದು ಕೊಂಚ ಸಾಹಸದ ಮಾತು. ಪತ್ರಕರ್ತ ಮನೋಹರ ಪ್ರಸಾದ್ ನೆನಪಾಗುವುದು ಇದೇ ಕಾರಣದಿಂದ. ಆ ಅಂತರ ಮತ್ತು ಸಂಬಂಧವನ್ನು ಅರಿತು ಸಮರ್ಥವಾಗಿ ಪ್ರಯೋಗಿಸಿದವರು ಅವರು.
ಒಬ್ಬ ಒಳ್ಳೆಯ ಮಾತುಗಾರರಾಗಿಯೂ ತೂಗಿ ನೋಡುವ ಸ್ವಭಾವ ಮನೋಹರ ಅವರ ದ್ದಾಗಿತ್ತು. ಪತ್ರಿಕೋದ್ಯಮ ವೃತ್ತಿ, ಅಧ್ಯಯನ ಪ್ರವೃತ್ತಿಯಾಗಿಸಿಕೊಂಡವರು. ಅದೇ ಕಾರಣದಿಂದ ಇಂದಿಗೂ ಎಷ್ಟೋ ಬಾರಿ ಮನೋಹರ ಪ್ರಸಾದ್ ನಮ್ಮೊಳಗೆ ನೆನಪಿನಲ್ಲಿ ಉಳಿಯುವುದು ಕರಾವಳಿಯ ಇತಿಹಾಸದ ಪುಟಗಳನ್ನು ಉಲ್ಲೇಖೀಸುವಾಗ. ಎಂದೋ ಎಲ್ಲಿಯೋ ಆದ ಘಟನೆ, ವ್ಯಕ್ತಿಗಳು, ಸ್ಥಳ ವಿವರಗಳನ್ನೆಲ್ಲ ಕಣ್ಣೆದುರು ಇರುವ ಪುಸ್ತಕವನ್ನು ಫಕ್ಕನೆ ತೆಗೆದುಕೊಡುವಂತೆ ವಿವರಿಸುತ್ತಿದ್ದ ಪರಿಯೇ ಸೋಜಿಗವೆನಿಸುತ್ತದೆ. ಅಸಾಧಾರಣ ನೆನಪಿನ ಶಕ್ತಿಯ ಪ್ರತಿಭೆ ಎಂದು ಬಿಡಬಹುದು. ಆದರೆ ಬರೀ ಸ್ಮರಣ ಶಕ್ತಿ ಇದ್ದವರಿಗೆಲ್ಲ ಇದು ಸಾಧ್ಯವಲ್ಲ; ಅದರ ಬಗೆಗಿನ ಪ್ರೀತಿ ಇದ್ದರೆ ಮಾತ್ರ. ಅದು ಮನೋಹರ ಪ್ರಸಾದ್‌ರಲ್ಲಿತ್ತು ಎಂಬುದು ನಿರ್ವಿವಾದ ಸಂಗತಿ.
ಕ್ರಿಯಾಶೀಲತೆ, ಅಧ್ಯಯನಶೀಲತೆಯ ಜತೆಗೆ ಮಾನವೀಯತೆಯನ್ನು ತನ್ನ ಬುದ್ಧಿ ಭಾವಗಳ ಜತೆಗೆ ಬೆಸೆದುಕೊಂಡು ಬದುಕಿ ದವರು ಮನೋಹರ ಪ್ರಸಾದ್. ಕರಾವಳಿಯ ಅಪರೂಪದ ಪತ್ರಕರ್ತ ರತ್ನದಂತೆ ಕಂಗೊಳಿಸಿ ಮರೆಯಾದವರು. ಪತ್ರಿಕಾರಂಗದ ಅಗ್ರಶ್ರೇಣಿಯ ಸೃಜನಶೀಲ ಬರಹಗಾರರೂ ಹೌದು.
ಪತ್ರಿಕಾ ವೃತ್ತಿಗೆ ಸಂಬಂಧಿಸಿ ಉಲ್ಲೇಖೀಸುವುದಾದರೆ, ಒಂದು ವಿಶೇಷ ವರದಿ ಅಥವಾ ಲೇಖನಕ್ಕೆ ಹೇಗೆ ಸಿದ್ಧವಾಗಬೇಕೆಂಬುದಕ್ಕೆ ಅವರು ಮಾದರಿ. ಸಾಕಷ್ಟು ಅಧ್ಯಯನ, ಮಾಹಿತಿ ಕಲೆ ಹಾಕುವಿಕೆಗೆ ಪಡುತ್ತಿದ್ದ ಶ್ರಮ, ಅದೆಲ್ಲ ಆದ ಮೇಲೆ ಗಂಭೀರ ಬರವಣಿಗೆ. ಇದರ ನಡುವೆ ವಿಷಯ ತಜ್ಞರಲ್ಲಿ ಒಂದಿಷ್ಟು ಚರ್ಚೆ ಇತ್ಯಾದಿ. ಅದಾದ ಬಳಿಕ ಲೇಖನ ಅಥವಾ ವರದಿಗೆ ಒಂದು ಸ್ಪಷ್ಟ ರೂಪ ಬಂದಂತೆ. ಯಾವುದೇ ವಿಷಯ ಇರಲಿ, ಓದುಗ ರಿಗೆ ಓದಿಸಿಕೊಂಡು ಹೋಗುವ ಹಾಗೆ ಸರಳವಾಗಿ ನಿರೂಪಿಸುತ್ತಿದ್ದ ಬಗೆ ಅನನ್ಯ, ಆಪ್ಯಾಯಮಾನವೂ ಸಹ.
ಅವರ ಬರಹದಲ್ಲಿ ಸಮತೋಲನ, ಸಾಹಿತ್ಯ ಸೊಗಸು, ಸ್ವಾರಸ್ಯಗಳು ಎದ್ದು ಕಾಣುತ್ತಿತ್ತು. ಜನಪರ ಸ್ಪಂದನ, ಪ್ರತಿಭಾ ಪ್ರೋತ್ಸಾಹದ ಗುಣದ ಜತೆಗೆ ವರದಿಗಳ ವಿವಿಧ ಘಟ್ಟಗಳ ಬಗೆಯನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕಲೆ, ಸಮ್ಮೇಳನ, ಸಮಾವೇಶ, ಕ್ರೀಡೆ, ಸಿನೆಮಾ… ಹೀಗೆ ವಿವಿಧ ವರದಿಗಳ ಅತ್ಯುತ್ತಮ ಮಾದರಿಯನ್ನು ಅವರು ಪತ್ರಿಕಾರಂಗಕ್ಕೆ ಪರಿಚಯಿಸಿಕೊಟ್ಟಿದ್ದರು.
ಕಾರ್ಕಳ ತಾಲೂಕಿನ ಎರ್ಲಪಾಡಿ ಅವರ ಹುಟ್ಟೂರು. ಊರಿನಲ್ಲಿ ಆರಂಭಿಕ ಶಿಕ್ಷಣ ಪಡೆದು ಮಂಗಳೂರಿನಲ್ಲಿ ಕಾಲೇಜಿಗೆ ಸೇರಿದಾಗಲೇ ಸಾಹಿತ್ಯ ಲೋಕ ಅವರನ್ನು ಸೆಳೆದಿತ್ತು. ಕೆನರಾ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಸಾಕಷ್ಟು ಬರವಣಿಗೆಯಲ್ಲಿ ತೊಡಗಿದ್ದರು. ಬಳಿಕ ಬೇರೆ ವೃತ್ತಿರಂಗವೊಂದರ ಪರಿಚಯ ಪಡೆದು, ಪತ್ರಕರ್ತರಾಗಬೇಕೆಂದೇ ಆಗಿನ ನವಭಾರತಕ್ಕೆ ಸೇರಿದರು. ಕೆಲವೇ ಸಮಯದಲ್ಲಿ ಅಂದರೆ 1984ರಲ್ಲಿ ಉದಯವಾಣಿ ಬಳಗಕ್ಕೆ ಸೇರ್ಪಡೆ ಯಾದರು. ಮಂಗಳೂರಿನ ವರದಿಗಾರರಾಗಿ ಕಾರ್ಯಾರಂಭ. ಇಡೀ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕರಾವಳಿಯಾದ್ಯಂತ ಸುತ್ತಾಡಿ ಜನರ ಸಮಸ್ಯೆಗಳಿಗೆ ಕನ್ನಡಿ ಹಿಡಿದರು. ಹಲವು ವರ್ಷಗಳ ಕಾಲ ತಪಸ್ಸಿನಂತೆ ಈ ಕಾರ್ಯವನ್ನು ಮಾಡಿದರು. ಅದಕ್ಕೇ ಏನೋ ಕರಾವಳಿ ಅವರ ಮಸ್ತಕದಲ್ಲಿ ಅಚ್ಚೊತ್ತಿತ್ತು. ಮುಖ್ಯ ವರದಿಗಾರರಾಗಿ, ಬ್ಯೂರೋ ಮುಖ್ಯಸ್ಥರಾಗಿ ಹಾಗೂ ಸಹಾಯಕ ಸಂಪಾದಕರಾಗಿ “ಉದಯವಾಣಿ’ಯಲ್ಲಿ ಬರೋಬ್ಬರಿ 36 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದರು. ಕಿರಿಯರಿಗೆ ಮಾರ್ಗದರ್ಶಕರಾಗಿ, ಉಳಿದವರಿಗೆ ನೆಚ್ಚಿನ ಸಹೋದ್ಯೋಗಿಯಾಗಿ ಬಹುತೇಕರ ಬಾಯಲ್ಲಿ “ಮನೋಹರಣ್ಣ’ ಎಂದೇ ಜನಜನಿತರಾಗಿದ್ದರು. ಸಾಮಾನ್ಯವಾಗಿ ಈ ಸಂಬೋಧನೆ ಒಳಗೂ ಹೊರಗೂ (ಕಚೇರಿ ಮತ್ತು ಸಮಾಜ) ಇರುವುದು ಕೆಲವರಿಗಷ್ಟೇ. ಆ ಕೆಲವರಲ್ಲಿ ಒಬ್ಬರಾಗಿದ್ದರು ಮನೋಹರಣ್ಣ.
ರಾಜ್ಯ, ರಾಜಧಾನಿಯತ್ತ ಪತ್ರಿಕೋದ್ಯಮ ಮುಖ ಮಾಡಿದಾಗ ಸ್ಥಳೀಯತೆಯನ್ನು ಅಂಚಿನಿಂದ ಕೇಂದ್ರಕ್ಕೆ ತಂದರು. ಸಣ್ಣ ಸಣ್ಣ ಊರುಗಳ ಸಣ್ಣ ಸಣ್ಣ ಸುದ್ದಿಗಳಿಗೆ ಆದ್ಯತೆ ಮತ್ತು ಪ್ರಾಧಾನ್ಯ ಎರಡನ್ನೂ ಕೊಟ್ಟರು. ರಾಜ್ಯ - ರಾಷ್ಟ್ರದ ಗಮನ ಸೆಳೆಯುವಂತೆ ಮಾಡಿದರು. ಹೀಗಾಗಿ ರಾಜ್ಯ ಪ್ರತಿಕೋದ್ಯಮದಲ್ಲೂ ಮನೋಹರ ಪ್ರಸಾದ್ ಅನನ್ಯ ಹೆಸರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಇತಿಹಾಸವನ್ನು ಸಾಮಾನ್ಯ ಓದುಗರಿಗೆ ಮುಟ್ಟಿಸುವ ಮಾದರಿಯ ಅಂಕಣ ಬರಹಗಳನ್ನು ನೂರಾರು ಸಂಖ್ಯೆಯಲ್ಲಿ “ಉದಯವಾಣಿ’ಯ ಮೂಲಕ ಬರೆದು ಮನೆಮಾತಾದರು. ಮೂರು ಸಾವಿರಕ್ಕೂ ಅಧಿಕ ವಿಶೇಷ ವರದಿ, ಸಂದರ್ಶನ, ತನಿಖಾ ವರದಿ, ನುಡಿಚಿತ್ರಗಳನ್ನು ಬರೆದವರು. ಉದಯವಾಣಿ ಬಳಗದ ತರಂಗ, ರೂಪತಾರಾ, ತುಷಾರ ಪತ್ರಿಕೆಗಳಲ್ಲೂ ಲೇಖನಧಾರೆ ಹರಿಸಿದವರು. ಕರ್ನಾಟಕ ಕರಾವಳಿಯ ಇತಿಹಾಸ ಕುರಿತಾಗಿ 608 ಸಂಶೋಧನ ಲೇಖನಗಳು “ನಮ್ಮೂರು’ ಎಂಬ ಹೆಸರಿನಲ್ಲಿ “ಉದಯವಾಣಿ’ಯಲ್ಲಿ ಪ್ರತೀ ಮಂಗಳವಾರ ಸತತವಾಗಿ ಪ್ರಕಟವಾಗಿದ್ದು ಪತ್ರಿಕೋದ್ಯಮದ ಸಾರ್ವಕಾಲಿಕ ದಾಖಲೆ. “ನೇರ ನೋಟ’ ಎಂಬ ಸಾಪ್ತಾಹಿಕ ಅಂಕಣ ಹಾಗೂ ಇತ್ತೀಚೆಗೆ “ತೀರಯಾನ’ ಎಂಬ ಪಾಕ್ಷಿಕ ಅಂಕಣ ಬರೆಯುತ್ತಿದ್ದರು. “ನಮ್ಮ ಮಂಗಳೂರು’ ಮಾಲಿಕೆಯಲ್ಲಿ ಪ್ರಮುಖ ತಾಣಗಳ ಪರಿಚಯಾತ್ಮಕ ಲೇಖನ ಬರೆದಿದ್ದರು. “ಕ್ರೀಡಾಂಗಣ’ ಎಂಬ ಸಾಪ್ತಾಹಿಕ ಅಂಕಣ ನಿರ್ವಹಿಸಿದ್ದರು.
ಚಿಕ್ಕ ಚಿಕ್ಕ ವಾಕ್ಯವೃಂದ, ಕಿರು ಶೀರ್ಷಿಕೆ, ಪದಗಳಲ್ಲಿ ಹೊಸತನ-ಹೊಸ ಪದ-ಹೊಸ ಬಗೆ… ಹೀಗೆ ಎಲ್ಲವನ್ನೂ ಒಪ್ಪ ಓರಣವಾಗಿ ಕಟ್ಟಿಕೊಟ್ಟ ಮಾದರಿ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸ. ಬಹುತೇಕ ಅವರ ಬರಹದ ಕೊನೆ ಯಲ್ಲಿರುವ “ಅಂದಹಾಗೆ’ ಹೊಸ ನಿರೂಪಣೆಗೆ ದಾರಿ. ಅಂದಹಾಗೆ ಮಾತಿನ ವೈಖರಿಯಂತೂ ಸರ್ವರ ಮನಸೆಳೆಯುವ ಮೋಡಿ.
ಮನೋಹರ ಪ್ರಸಾದ್ ಅವರಿಗೆ ಕ್ರೀಡೆ, ಸಾಹಿತ್ಯ, ಲಲಿತಕಲೆ, ರಂಗಭೂಮಿ, ಚಲನಚಿತ್ರ, ಸಾಮಾಜಿಕ ಜಾಗೃತಿ, ಸಂಘಟನೆ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಪಾಂಡಿತ್ಯದ ಜತೆಗೆ ಅಭಿರುಚಿ ಇತ್ತು. ಯಾವುದೇ ವಿಷಯದ ಕುರಿತು ಬರೆಯುವ ಮತ್ತು ಮಾತನಾಡುವ ಜ್ಞಾನ, ಕೌಶಲ ಎರಡನ್ನೂ ಹೊಂದಿದ್ದರು. ಈಗಾಗಲೇ ವಿವರಿಸಿದಂತೆ ಆ ಅನೂಹ್ಯ ನೆನಪಿನ ಶಕ್ತಿ ವಿಶೇಷ ಗುಣ ಹಾಗೂ ಸಂಪತ್ತಾಗಿ ಅವರಿಗೆ ಸಾಥ್ ನೀಡಿದ್ದವು. ಹಾಗಾಗಿಯೇ ಹಲವು ಪತ್ರಕರ್ತರಿಗೆ ಕರಾವಳಿಯ ಬಗೆಗಿನ ಮಾಹಿತಿಯ ಸಂಕಟ ಎದುರಾದಾಗ ವೆಂಕಟ ರಮಣ ನಂತೆ ನೆನಪಾಗುತ್ತಿದ್ದರು ಮನೋಹರಣ್ಣ.
ಮನೋಹರ ಪ್ರಸಾದ್ ಅವರು ಕೇವಲ ಒಬ್ಬ ಪತ್ರಕರ್ತ ಅಲ್ಲ. ಕಥೆಗಾರ, ಕವಿ, ಕಾರ್ಯಕ್ರಮ ನಿರೂಪಕ, ಉಪನ್ಯಾಸಕ, ಸಂಪನ್ಮೂಲ ವ್ಯಕ್ತಿ, ನಾಟಕಕಾರ, ವೀಕ್ಷಕ ವಿವರಣೆಗಾರ, ನಟ, ತಾಳಮದ್ದಳೆ ಕಲಾವಿದ…ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಮೆ “ಎಂಪಿ’ ಅವರದ್ದು. ಯಕ್ಷಗಾನ, ಕಂಬಳ, ತುಳುನಾಡಿನ ಇತಿಹಾಸ, ಜಾನಪದ ಆಚರಣೆ, ಪರಂಪರೆ, ಸಾಹಿತ್ಯ ಎಲ್ಲದಕ್ಕೂ ಮನೋಹರ ಪ್ರಸಾದ್ ಸೈ. ಕರಾವಳಿ ಬಗೆಗಿನ ಪ್ರೀತಿ, ಕರಾವಳಿಗರ ಬಗೆಗಿನ ಅಕ್ಕರೆಯಲ್ಲೂ ಎತ್ತಿದ ಕೈ. ಎಂಪಿ ಎಂದರೆ ಮೆಂಬರ್ ಆಫ್ ಪಾರ್ಲಿಮೆಂಟ್ ಆಗಬಹುದು. ಆದರೆ ಕರಾವಳಿಯಲ್ಲಿ ಎಂಪಿ ಎಂದರೆ ಮನೋಹರ ಪ್ರಸಾದ್. ಅದಕ್ಕೇ ನಿಜಕ್ಕೂ ಮನೋಹರ ಪ್ರಸಾದ್ ಅವರು ಕರಾವಳಿಯ ಹೆಮ್ಮೆಯ ರಾಯಭಾರಿ.
ತುಳುವಿನ ಜ್ಞಾನ ಭಂಡಾರ
ತುಳುನಾಡಿನಲ್ಲಿ ಹುಟ್ಟಿ ಬೆಳೆದ ಮನೋಹರ ಪ್ರಸಾದ್ ಅವರ ಹೆಚ್ಚಿನ ಕೊಡುಗೆ ಕನ್ನಡ ಲೋಕಕ್ಕಾದರೂ ತುಳುನಾಡಿನ ಕುರಿತು ಅದ್ಭುತ ಜ್ಞಾನವನ್ನು ಹೊಂದಿದ್ದರು. ತುಳುನಾಡಿನ ಕಲೆ, ಸಂಸ್ಕೃತಿ, ಆಚಾರ-ವಿಚಾರಗಳ ಕುರಿತು ಆಳವಾದ ಅಧ್ಯಯನ ನಡೆಸಿ ಅಪಾರವಾದ ಜ್ಞಾನವನ್ನು ಹೊಂದಿದ್ದರು. ತುಳುವಿನಲ್ಲಿ ಕತೆ, ಕವನ ಬರೆಯುವುದರಲ್ಲಿ ನಿಸ್ಸೀಮರಾಗಿದ್ದರು. ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮನೆಮಾತಾಗಿರುವ ತುಳು ಊರಿನಿಂದ ಊರಿಗೆ ಭಿನ್ನತೆಯನ್ನು ಹೊಂದಿದ ಭಾಷೆಯಾಗಿದೆ. ತುಳುನಾಡಿನ ದೈವ-ದೇವರುಗಳ ಅಧ್ಯಯನ ನಡೆಸುವ ವೇಳೆ ತುಳು ಶಬ್ದಗಳ ಬೇರೆ ಬೇರೆ ಅರ್ಥ ವಿವರಣೆಯನ್ನು ತಿಳಿದುಕೊಂಡಿದ್ದ ಮನೋಹರ ಪ್ರಸಾದ್ ಅವರು ಒಂದು ರೀತಿಯಲ್ಲಿ ತುಳುವಿನ ಜ್ಞಾನ ಭಂಡಾರದಂತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.