ವೈದ್ಯಕೀಯವೆಂಬ ಬೆಳಕಿನ ದಾರಿಯಲ್ಲಿ…
Team Udayavani, Mar 15, 2019, 12:30 AM IST
ಈ ಹಿಂದಿನ ಹಲವಾರು ಲೇಖನಗಳಲ್ಲಿ, ನನ್ನ ವೈದ್ಯಕೀಯ ಜೀವನದಲ್ಲಿ ಘಟಿಸಿದ, ಎಂದೂ ಮರೆಯಲಾಗದಂತಹ ಘಟನೆಗಳನ್ನು ಹಂಚಿಕೊಂಡಿದ್ದೇನೆ. ಅವೆಲ್ಲವೂ ನನ್ನ ಮತ್ತು ನನ್ನ ಗೆಳೆಯರ ಆಸ್ಪತ್ರೆಗಳಲ್ಲಿ ಜರುಗಿದ ನೈಜ ಘಟನೆಗಳನ್ನೇ ಆಧರಿಸಿದವುಗಳು. ಅವುಗಳಿಗೆ ಒಂದಿಷ್ಟು ಕಥಾರೂಪ ನೀಡಿದ್ದೇನೆ, ಅಷ್ಟೇ. ವೈದ್ಯಕೀಯದ ಬದುಕಿನಲ್ಲಿ ದಿನ ನಿತ್ಯ ಜರುಗುವ ನೈಜ ಘಟನೆಗಳನ್ನು ಆಧರಿಸಿದ ಬರಹಗಳನ್ನು ಬರೆಯಬೇಕೆಂಬುದು ಬಲು ದಿನದ ಆಸೆ. ಆದರೆ ಸಾಧ್ಯವಾಗುವುದು ಕಡಿಮೆ. ಯಾಕೆಂದರೆ ವೈದ್ಯಕೀಯದಲ್ಲಿ ಒಂದೊಂದು ದಿನ ಬೇಸರವಾಗುವಷ್ಟು ಫ್ರೀ ಸಮಯ ಸಿಗುತ್ತದೆ. ಒಮ್ಮೊಮ್ಮೆ “ಸಾಯಲೂ’ ಸಮಯ ಸಿಗುವುದಿಲ್ಲ. ಸಮಯ ಸಿಕ್ಕಾಗ ಸೋಮಾರಿ ಮನಸ್ಸು ಸುಮ್ಮನಿದ್ದುಬಿಡು, ಎನ್ನುತ್ತದೆ. ಅದೇ “ಮನಸ್ಸು’ ಬರೆಯಬೇಕೆಂದು “ಮನಸ್ಸು’ ಮಾಡಿದಾಗ ಆಸ್ಪತ್ರೆಯ ತುಂಬೆಲ್ಲ ರೋಗಿಗಳು ತುಂಬಿರುತ್ತಾರೆ. ಇನ್ನೂ ಹಲವಾರು ಘಟನೆಗಳು ಬರೆಯಿಸಿ ಕೊಳ್ಳಲಾರದೆ ಉಳಿದುಕೊಂಡುಬಿಟ್ಟವು. ಕಾರಣಗಳು ಎರಡು. ಒಂದೋ ಅವು ಒಂದು “ಲೇಖನವಾಗುವಷ್ಟು ದೊಡ್ಡ’ ಘಟನೆಗಳಲ್ಲ, ಇಲ್ಲವೇ ಅವು ಎಲ್ಲರೊಂದಿಗೂ ಹಂಚಿಕೊಳ್ಳು ವಂಥವುಗಳಲ್ಲ. ನನ್ನ ಅನುಭವಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಟ್ಟ “ಉದಯವಾಣಿ’ ಬಳಗಕ್ಕೆ ಕೃತಜ್ಞನಾಗಿದ್ದೇನೆ. ವಾರವಾರವೂ ಓದಿದ ಎಲ್ಲರಿಗೂ ಋಣಿಯಾಗಿದ್ದೇನೆ. ತಮ್ಮೊಡನೆ ಹಂಚಿಕೊಳ್ಳಬಹುದಾದ ಘಟನೆಗಳು ಮುಂದೆ ಯಾವಾಗಲಾದರೂ ಜರುಗಿದರೆ ಮತ್ತೆ ಇಲ್ಲಿ ಬರಲು ಪ್ರಯತ್ನಿಸುವೆ.
38 ವರ್ಷಗಳ ವೈದ್ಯಕೀಯದಲ್ಲಿ, ಮಳೆಗಾಲದಲ್ಲಿ ದ್ವೀಪವಾಗಿ ಬಿಡುವ ಸಣ್ಣ ಗ್ರಾಮದಿಂದ ಮೊದಲ್ಗೊಂಡು ತಾಲೂಕು, ಜಿಲ್ಲಾ ಸ್ಥಾನಗಳಲ್ಲಿ, ಮತ್ತೆ ಸರಕಾರಿ ಕೆಲಸ ಹಾಗೂ ಖಾಸಗಿಯಾಗಿ ಈ ವೃತ್ತಿ ಮಾಡಿದ್ದೇನೆ. ನೂರಾರು ಹೃದಯಸ್ಪರ್ಶಿ ಘಟನೆಗಳು ನನ್ನೆದುರಿಗೆ ಘಟಿಸಿವೆ. ವೈದ್ಯಕೀಯದಲ್ಲಿ ಜರುಗುವಷ್ಟು ವೈವಿಧ್ಯಮಯವಾದ, ಮನಸ್ಸಿಗೆ ತಾಗುವ ಘಟನೆಗಳು ಬೇರೆ ಯಾವ ರಂಗದಲ್ಲಿಯೂ ಜರುಗಲು ಸಾಧ್ಯವಿಲ್ಲ. ಮಾನವ ಸಂಬಂಧಗಳು, ನೋವು, ಸಾವು, ಅಸಹಾಯಕತೆ, ಸಂಭ್ರಮಗಳನ್ನು ಅವುಗಳ ಪರಾಕಾಷ್ಠೆಯಲ್ಲಿ ನೋಡಲು ಸಾಧ್ಯವಾಗುವುದು ಇಲ್ಲಿ ಮಾತ್ರ. ಈ ವೃತ್ತಿಯಲ್ಲಿ ಇರುವಷ್ಟು ಆತ್ಮಸಂತೃಪ್ತಿ ಬಹುಶಃ ಯಾವ ವೃತ್ತಿಯಲ್ಲೂ ಇಲ್ಲ, ಸೇವೆ ಮಾಡುವ ಮನಸ್ಸಿದ್ದರೆ ಇಲ್ಲಿ ಸಿಗುವಂಥ ಅವಕಾಶಗಳು ಬೇರೆಲ್ಲೂ ಸಿಗಲಾರವು. ಕೆಲವೊಮ್ಮೆ ನಾವು ಹೇಳಿದ ಬಿಲ್ಲಿಗಿಂತ ಸ್ವಲ್ಪಕಡಿಮೆ ಸಂದಾಯ ಮಾಡಬಹುದಾದರೂ, ಗುಣಮುಖನಾದ ರೋಗಿಯ ಮುಖದಲ್ಲಿ ಮೂಡುವ ಸಂತೃಪ್ತಿಯ ಭಾವನೆ, ಹೋಗುವಾಗ ಕೆಲವು ಬಾರಿ ಕಾಲು ಮುಟ್ಟಿ ನಮಸ್ಕರಿಸಲು ಬರುವ ಅವರ ಕೃತಜ್ಞತಾ ಭಾವದ ನಡವಳಿಕೆ ನಮ್ಮನ್ನು ಧನ್ಯರಾಗಿಸುತ್ತವೆ, ಹಲವು ಜನರ ದುಃಖ ಕಡಿಮೆ ಮಾಡಿ, ಮುಖದಲ್ಲಿ ನಗೆ ಮೂಡಿಸುವ ಈ ವೃತ್ತಿ ದೊರೆತಿದ್ದೇ ಪುಣ್ಯ ಎನಿಸಿದೆ. ದಾಸೋಹವನ್ನು ಆಚರಣೆಗೆ ತರಲು ವೈದ್ಯಕೀಯದಂಥ ಕ್ಷೇತ್ರ ಇನ್ನೊಂದಿಲ್ಲ.
ಇಷ್ಟು ವರ್ಷಗಳ ವೈದ್ಯಕೀಯದಲ್ಲಿ ಏನೆಲ್ಲವನ್ನೂ ನೋಡಿದ್ದೇನೆ. “ಇದೇನೂ ಅಂತಹ ರೋಗವಲ್ಲ ಖಂಡಿತ ಗುಣವಾಗುತ್ತಾರೆ’ ಎಂದುಕೊಂಡವರ ಮರಣವನ್ನೂ, “ಇನ್ನೇನು ಉಳಿಯಲಿಕ್ಕಿಲ್ಲ, ಅವರನ್ನು ಬೀಳ್ಕೊಡಲು ಸಿದ್ಧರಾಗಿ ಬಿಡಿ’ ಅಂದುಕೊಂಡಾಗ ಪವಾಡದಂತೆ ಗುಣಮುಖರಾಗಿ, ಹಾಸಿಗೆಯಿಂದ ಎದ್ದು ನಡೆಯುತ್ತ ಹೋದವರನ್ನೂ ನೋಡಿದ್ದೇನೆ. ಇಂಥವನ್ನೆಲ್ಲ ನೋಡಿದಾಗ ವೈದ್ಯರಾಗಿ ನಾವು ಕಲಿತದ್ದು ಸಾಕಾಗಲಿಲ್ಲವೇನೋ ಅನಿಸಿದ್ದಿದೆ. ದಿನಂಪ್ರತಿ ದಾಪುಗಾಲಿಕ್ಕಿ ಬೆಳೆಯುತ್ತಿರುವ ವೈದ್ಯಕೀಯ ವಿಜ್ಞಾನ ಕೂಡ ಕೆಲವೊಮ್ಮೆ ನಿರುತ್ತರ, ಹಲವು ಬಾರಿ ಅಸಹಾಯಕನಂತಾಗಿ ಗಲಿಬಿಲಿಗೊಂಡು ನಿಂತಂತೆನಿಸಿಬಿಡುತ್ತದೆ.
ಆದರೂ ವೈದ್ಯಕೀಯ ವಿಜ್ಞಾನ ಅಗಾಧವಾಗಿ ಬೆಳೆಯುತ್ತಿದೆ ಎನ್ನುವುದು ಸಮಾಧಾನಕರ ಅಂಶ. ಮೈಲಿ ಬೇನೆಯಂತಹ ರೋಗವನ್ನು ನಿರ್ಮೂಲನೆ ಮಾಡಲಾಗಿದೆ. ಪೋಲಿಯೊ ರೋಗ ಇಂಡಿಯಾದಿಂದ ಮತ್ತು ಅನೇಕ ದೇಶಗಳಿಂದ ಕಾಣೆಯಾಗಿದೆ, ಧನುರ್ವಾಯು, ಹೆಪಟೈಟಿಸ್-ಬಿ ಮತ್ತು ಇನ್ನೂ ಅನೇಕ ರೋಗಗಳಿಗೆ ಪ್ರಬಲ ಲಸಿಕೆ ಕಂಡುಹಿಡಿಯಲಾಗಿದೆ, ಅನೇಕ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದಾಗಿದೆ, ಬಂಜೆತನವನ್ನು ಬಹುಪಾಲು ನಿವಾರಿಸಲಾಗಿದೆ. ಪ್ರಸವವನ್ನು ಸುರಕ್ಷಿತ ಗೊಳಿಸಲಾಗಿದೆ. ಅಂಗ ಕಸಿ ನಿತ್ಯದ ಸುದ್ದಿಯಾಗಿದೆ. ರೋಗ ನಿದಾನಕ್ಕಾಗಿ ಅದ್ಭುತವೆನಿಸುವ ಪರಿಕರಗಳನ್ನು ಕಂಡು ಹಿಡಿಯಲಾಗಿದೆ. ಒಂದೆರಡು ಮಿಲಿಮೀಟರ್‌ನ ಗಡ್ಡೆಯನ್ನೂ ಕರಾರುವಾಕ್ಕಾಗಿ ಗುರುತಿಸುವ ಯಂತ್ರಗಳಿವೆ. ದೂರದಿಂದಲೇ ಕಿಡ್ನಿಯಲ್ಲಿನ ಹರಳುಗಳನ್ನು ಪುಡಿ ಮಾಡುವ ಯಂತ್ರಗಳಿವೆ. ಯಾವುದೋ ಊರಲ್ಲಿ ಕುಳಿತು ಇನ್ನಾವುದೋ ಊರಲ್ಲಿರುವ ರೋಗಿಯ ಮೇಲೆ ಶಸ್ತ್ರಚಿಕಿತ್ಸೆ ಮಾಡುವುದನ್ನು ಸಾಧ್ಯವಾಗಿಸಿದ ರೋಬೋಟ್ ಕಂಡುಹಿಡಿಯಲಾಗಿದೆ. ಬರೀ ಒಂದು “ಕ್ಯಾಪ್ಸೂಲ್’ನಲ್ಲಿ ಕ್ಯಾಮರಾ ಕುಳ್ಳಿರಿಸಿ ಜೀರ್ಣಾಂಗ ವ್ಯೂಹದ ಒಳಗನ್ನು ನೋಡಬಹುದಾಗಿದೆ. ಲೆಪ್ರೋಸ್ಕೊಪಿ, ಎಂಡೋಸ್ಕೊಪಿಗಳಂತೂ ಸಾಮಾನ್ಯವಾಗಿಬಿಟ್ಟಿವೆ. ಹೀಗೆ ವೈದ್ಯಕೀಯದ ಆವಿಷ್ಕಾರಗಳು ಕಟ್ಟು ಕಥೆಯಷ್ಟೇ ರೋಮಾಂಚಕಾರಿಯಾಗಿವೆ. ಅವು ಆಧುನಿಕ ವೈದ್ಯರ, ತನ್ಮೂಲಕ ರೋಗಿಗಳ ಪಾಲಿಗೆ ವರದಾನವಾಗಿ ಪರಿಣಮಿಸಿವೆ.
ಇತ್ತೀಚಿಗೆ ತಾನೇ, ಸಿನೀಮಯ ರೀತಿಯಲ್ಲಿ ಬೆಂಗಳೂರಿನ ಹೃದಯ, ಚೆನ್ನೈನಲ್ಲಿ ಮಿಡಿದ ನೆನಪು ಇನ್ನೂ ಹಸಿರಾಗಿದೆ. ಇಡೀ ಜಗತ್ತೇ ಅದನ್ನು ಕುತೂಹಲದಿಂದ, ಆಸಕ್ತಿಯಿಂದ, ತಮ್ಮ ಜೀವವನ್ನೇ “ಕೈಯಲ್ಲಿ ಹಿಡಿದು’ ನೋಡುತ್ತಿತ್ತು. ಯಾವಾಗ ಜೀವಂತ ಹೃದಯ ಹೊತ್ತವರು ಚೆನ್ನೈ ತಲುಪಿದರೋ ಆಗ ಉಸಿರೆಳೆದು ಕೊಂಡವರು ಎಷ್ಟೋ ಮಂದಿ.ಆದರೆ ಇನ್ನೂ ಆ ಹೃದಯ ತನ್ನ ಹೊಸ ಸ್ಥಾನದಲ್ಲಿ ನಾಲ್ಕು ಸಾರಿ ಬಡಿದಿತ್ತೋ ಇಲ್ಲವೋ, ಆಗಲೇ ಸಾಮಾಜಿಕ ತಾಣಗಳಲ್ಲಿ ಸಂಶಯಗಳು ಓಡಾಡತೊಡಗಿದ್ದವು. “ಹೃದಯ ಕೊಟ್ಟ ಮಹಿಳೆ ನಿಜವಾಗಿ ಮರಣಿಸಿದ್ದಳೇ?’ (ವೈದ್ಯರು ದುಡ್ಡಿನಾಸೆಗೆ ಸುಳ್ಳು ಪ್ರಮಾಣ ಪತ್ರ ಕೊಟ್ಟಿರಬಹುದು) “ಬಡವರಿಗೆ ಇಂಥ¨ªೆಲ್ಲವನ್ನು ಮಾಡುವರೇ?’ ( ದುಡ್ಡಿದ್ದವರಿಗಷ್ಟೇ ವೈದ್ಯಕೀಯ ಸೌಲಭ್ಯ)ಇತ್ಯಾದಿ ಮಾತುಗಳು ದಿನವಿಡೀ ಚರ್ಚೆಗೊಂಡವು. ನಮ್ಮ ದೃಷ್ಟಿ ಚಿಕಿತ್ಸಕವಾಗಿರಬೇಕು, ಸಂಶಯಾತ್ಮಕವಲ್ಲ. ಅಲ್ಲವೇ?
ವೈದ್ಯವೃತ್ತಿ ಹಿಂದಿನಂತೆ ನೋಬಲ್ ಆಗಿ ಉಳಿದಿಲ್ಲ, ವೈದ್ಯರು ಹಾಗೂ ಆಸ್ಪತ್ರೆಗಳು ಈಗ ಮೊದಲಿನ ಹಾಗೆ ಇಲ್ಲ, ಎಂಬುದು ಈಚಿನ ದಿನಗಳ ಸಾಮಾನ್ಯ ಅಪವಾದ. ಆಸ್ಪತ್ರೆಗಳೆಲ್ಲ ಹಣ ಮಾಡುವ ಸಂಸ್ಥೆಗಳಾಗಿ ಮಾರ್ಪಟ್ಟಿವೆ, ಎಂಬುದೂ ಕೂಡ ಜನ ಸಾಮಾನ್ಯರ ಒಕ್ಕೊರಲ ಮಾತು. ಒಂದು ಕ್ಷಣ ವೈದ್ಯರ ಸ್ಥಾನದಲ್ಲಿ ನಿಂತು ನೋಡಿದಾಗ, ಸಮಸ್ಯೆಯ ಅರಿವಾಗುತ್ತದೆ. ಈಗೀಗ ವೈದ್ಯರು ಅವಶ್ಯಕತೆಗಿಂತ “ಹೆಚ್ಚು ಕಾಳಜಿ’ ವಹಿಸಬೇಕಾಗಿದೆ. ಕೆಲವೊಂದು ಪರೀಕ್ಷೆಗಳು ಅವಶ್ಯವಿಲ್ಲವೆಂದರೂ ಕೂಡ Evidence Based Treatment ಎಂಬ ಹೊಸ ಪದœತಿಯಲ್ಲಿ ಅನಿವಾರ್ಯವಾಗಿ ಸಾಕ್ಷಿಗಳನ್ನು ಕಲೆ ಹಾಕಬೇಕಾಗುತ್ತದೆ. ಉದಾಹರಣೆಗೆ, ವೈದ್ಯಕೀಯ ಪರೀಕ್ಷೆ ಮಾಡಿದಾಗ ಒಬ್ಬ ವ್ಯಕ್ತಿಗೆ ಅಪೆಂಡಿಸೈಟಿಸ್ ಇದೆ, ಎಂದು ಖಂಡಿತವಾಗಿ ಗೊತ್ತಿದ್ದರೂ ಅದಕ್ಕೆ ಸಾಕ್ಷಿಯಾಗಿ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಬೇಕಾಗುತ್ತದೆ. ಮಾಡಿದರೆ, ಅನಾವಶ್ಯಕ ಪರೀಕ್ಷೆ ಮಾಡಿಸುತ್ತಾರೆ ಎಂಬ ಮಾತು ಬರುತ್ತದೆ. ಮಾಡಿಸದಿದ್ದರೆ “ಎವಿಡೆನ್ಸ್’ ಇಲ್ಲದ ಸ್ಥಿತಿ. ಇನ್ನು “ಗೂಗಲ್’ನಲ್ಲಿ ಕಣ್ಣಾಡಿಸಿ ಬಂದವರಂತೂ ಯಾವ್ಯಾವ ಪರೀಕ್ಷೆಗಳನ್ನು ಮಾಡಬೇಕು, ಏನೇನು ಔಷಧಿಗಳನ್ನು ಕೊಡಬೇಕು,ಇತ್ಯಾದಿ ಲಿಸ್ಟ್ ನ್ನೇ ತಂದಿರುತ್ತಾರೆ…!! ಇಂಥದರಲ್ಲಿ ವೈದ್ಯವೃತ್ತಿ ಕತ್ತಿಯ ಮೇಲಿನ ನಡಿಗೆಯಾಗುತ್ತಿದೆ.
ಇವುಗಳ ಜೊತೆಗೇ ಇತ್ತೀಚಿಗೆ ಪ್ರಾರಂಭವಾದ ವೈದ್ಯ/ಆಸ್ಪತ್ರೆ ಮತ್ತು ರೋಗಿ/ಸಂಬಂಧಿಕರ ನಡುವಿನ ಸ್ವಾಗತಾರ್ಹವಲ್ಲದ ಬೆಳವಣಿಗೆಗಳು ಬೇಸರ ಮೂಡಿಸುತ್ತವೆ. ಪ್ರತಿ ವೈದ್ಯ ತನ್ನ ರೋಗಿಗಳು ಗುಣವಾಗಬೇಕೆಂದೇ ಬಯಸಿದರೂ ಅನೇಕ ಬಾರಿ ಅನಿರೀಕ್ಷಿತ ಪರಿಣಾಮಗಳು ಗೋಚರಿಸಿಬಿಡುತ್ತವೆ. ಎಂಥಾ ಕರ್ತವ್ಯನಿಷ್ಠ, ಜಾಣ ವೈದ್ಯನಾದರೂ ಕೆಲವೊಮ್ಮೆ ವ್ಯತಿರಿಕ್ತ ಫಲಿತಾಂಶಗಳು ಅನಿವಾರ್ಯ.
ಯಾಕೆಂದರೆ ರೋಗಿ ಎಂದರೆ ಒಂದು ಯಂತ್ರವಲ್ಲ, ಯಂತ್ರವೆಂದಾದರೆ ನಿಷ್ಪ್ರಯೋಜಕ ಭಾಗವನ್ನು ಕರಾರುವಾಕ್ಕಾಗಿ ಕಂಡು ಹಿಡಿದು ಅದನ್ನು ತೆಗೆದು, ಬಿಸಾಡಿ ಹೊಸದನ್ನು ಜೋಡಿಸಬಹುದು. ಆದರೆ ಪ್ರತಿಯೊಂದು ರೋಗದಲ್ಲಿಯೂ, ರೋಗಿ, ರೋಗಗಕಾರಕ ಜೀವಿ, ರೋಗ ಹೋಗಲಾಡಿಸಲು ಬಳಸಲ್ಪಡುವ ಔಷಧಿಗಳು, ಇಂಥದೇ ಔಷಧಿಯನ್ನು ಬಳಸಬೇಕೆಂಬ ವೈದ್ಯಕೀಯ ಜ್ಞಾನ ಇವು ನಾಲ್ಕೂ ಮುಖ್ಯವಾಗುತ್ತವೆ. ವೈದ್ಯಕೀಯ ಜ್ಞಾನ, ಬಳಸಲ್ಪಡುವ ಔಷಧಿ ಸರಿಯಾಗಿದ್ದರೂ ರೋಗಿಯ ರೋಗನಿರೋಧಕ ಶಕ್ತಿ ಕಡಿಮೆಯಿದ್ದರೆ ಅಥವಾ ರೋಗಕಾರಕ ಜೀವಿ ಬಲಯುತವಾಗಿದ್ದರೆ ನಿರೀಕ್ಷಿತ ಫಲಿತಾಂಶ ದುರ್ಲಭವಾಗುತ್ತದೆ. ಇದನ್ನೆಲ್ಲಾ ವೈದ್ಯರು ಹೇಗೋ ಹಾಗೆ ರೋಗಿಗಳು ಕೂಡ ಅರಿಯುವುದು ಅವಶ್ಯವಾಗುತ್ತದೆ. ಇಲ್ಲಿ ಎರಡು ಮತ್ತು ಎರಡನ್ನು ಕೂಡಿಸಿದರೆ ನಾಲ್ಕೇ ಆಗುತ್ತದೆಂಬ ಭರವಸೆ ಇರುವುದು ಅಸಾಧ್ಯ. ಕೆಲವೊಮ್ಮೆ ವೈದ್ಯರ ಅಚಾತುರ್ಯ ದಿಂದ ಅಥವಾ ಅಲಕ್ಷದಿಂದ ವ್ಯತಿರಿಕ್ತ ಪರಿಣಾಮಗಳೂ ಜರುಗುತ್ತವೆ. ಕಷ್ಟವೆಂದರೆ ಯಾವುದು ಅನಿರೀಕ್ಷಿತ ಮತ್ತು ಯಾವುದು ಅಲಕ್ಷ ಅಥವಾ ಅಚಾತುರ್ಯದಿಂದ ಘಟಿಸಿದ್ದು ಎನ್ನುವುದನ್ನು ನಿರ್ಧರಿಸುವುದು. ಅದನ್ನು ನಿರ್ಧರಿಸಲು ಹಲವು ಮಾರ್ಗಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ವಿಷಯಗಳಿಗೂ ವೈದ್ಯರ ಮೇಲೆ ಹಲ್ಲೆ ಮಾಡುವ, ಅವಮಾನ ಮಾಡುವ ಘಟನೆಗಳು ಸಾಮಾನ್ಯವಾಗಿಬಿಟ್ಟಿವೆ. ಹೀಗಾಗಿ ಹಲವು ವೈದ್ಯರು ತಮ್ಮಲ್ಲಿ ಗುಣವಾಗುವಂತಹ ರೋಗವಿದ್ದರೂ ಮುಂದಿನ ಆಸ್ಪತ್ರೆಗಳಿಗೆ ಕಳಿಸಿ ಕೈತೊಳೆದುಕೊಂಡರಾಯೆ¤ಂದು ವಿಚಾರಿಸತೊಡಗಿದ್ದಾರೆ. ಆಗ ಅನಾನುಕೂಲವಾಗುವುದು ಮತ್ತೆ ರೋಗಿಗೇನೆ.
ಒಂದು ಕಾಲದಲ್ಲಿ ವೈದ್ಯಕೀಯ ವೃತ್ತಿಯೆಂದರೆ ಜನಸೇವೆ ಮಾಡುವುದು ಮಾತ್ರ ಆಗಿತ್ತು. ಆದರೆ ಈ ದಿನಗಳಲ್ಲಿ ಅದು ಕನಸಿನ ಮಾತೆ ಸರಿ.. “ಯಾವ ದಿನ ಮೊದಲ ವೈದ್ಯಕೀಯ ಸೀಟು ಖಾಸಗಿಯಾಗಿ ಮಾರಾಟಗೊಂಡಿತೋ, ಅಂದೇ ವೈದ್ಯಕೀಯ ವೃತ್ತಿ ವಾಣಿಜ್ಯೀಕರಣಗೊಂಡಿತು..’ ಅದು ಭಾಗಶಃ ನಿಜ. ಇನ್ನೂ ನಿಜವಾದದ್ದೆಂದರೆ ಯಾವಾಗ ಆಸ್ಪತ್ರೆಯನ್ನು ಕಟ್ಟಿಸುವುದು, ಅವಶ್ಯಕವಾದ ಉಪಕರಣಗಳನ್ನು, ಪರಿಕರಗಳನ್ನು, ಸಿಬ್ಬಂದಿಯನ್ನು ಹೊಂದುವುದು ಮತ್ತು ನಿಭಾಯಿಸುವುದು ವೆಚ್ಚದಾಯಕ ವಾಯಿತೋ, ಯಾವಾಗ ವೈದ್ಯಕೀಯವೂ ಕೂಡ ಗ್ರಾಹಕ ರಕ್ಷಣಾ ಕಾನೂನಿನ ಅಡಿಯಲ್ಲಿ ಪರಿಗಣಿತವಾಯಿತೋ ಆಗಲೇ ವೈದ್ಯಕೀಯವೂ ವ್ಯಾಪಾರವಾಗಿಬಿಟ್ಟಿತು. “ಆಸ್ಪತ್ರೆ ಅಂಗಡಿ ಆಯಿತು, ರೋಗಿ ಗಿರಾಕಿಯಾಗಿಬಿಟ್ಟ’ ದುರದೃಷ್ಟಕರ, ಅಷ್ಟೇ. ಕೋಟಿಗಳ ಲೆಕ್ಕದಲ್ಲಿ ಖರ್ಚುಮಾಡಿ ಪಡೆದ ವೈದ್ಯಕೀಯ ಪದವಿ, ಇನ್ನಷ್ಟು ಕೋಟಿಗಳನ್ನು ವೆಚ್ಚಮಾಡಿ ಕಟ್ಟಿಸಿದ ಆಸ್ಪತ್ರೆ ಮತ್ತು ದಿನ ದಿನವೂ ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ, ಇವೆಲ್ಲವನ್ನೂ ಇಟ್ಟುಕೊಂಡು ಉಚಿತ ಅಥವಾ “ರಿಯಾಯತಿಯ ಸೇವೆ ನೀಡುವುದು ಅಂತಹ ಜಾಣತನವಲ್ಲ’, ಎಂಬ ಸ್ಥಿತಿ ತಲುಪಿದ್ದಾಯ್ತು. ಆಸ್ಪತ್ರೆಗಳು “ಆರೋಗ್ಯ ಮಾರುವ ಕೇಂದ್ರ’ಗಳಾಗಿಬಿಟ್ಟವು. “ಇಲ್ಲದ ರೋಗಗಳಿಗೆ ಇರುವ ಎಲ್ಲಾ ಪರೀಕ್ಷೆಗಳನ್ನೂ’ ಮಾಡಿ ಅಂತಸ್ತಿನ ಮೇಲೆ ಅಂತಸ್ತು ಪೇರಿಸಿಬಿಟ್ಟವು. ಯಾವ ವೃತ್ತಿಯನ್ನು ವ್ಯಾಪಾರ ಎಂದು ಪರಿಗಣಿಸಬಾರದಿತ್ತೋ ಅದು “ಸೇವೆಯ ಪರಿಪೂರ್ಣತೆ’ ಹೆಸರಲ್ಲಿ ಉದ್ಯಮವಾಗಿಬಿಟ್ಟಿತು.
ಇವತ್ತಿಗೂ ಪ್ರತಿಶತ 90-95 ರೋಗಗಳನ್ನು ಗುಣಪಡಿಸಲು ಸಾಮಾನ್ಯ ಪರೀಕ್ಷೆಗಳು, ಪ್ರಾಮಾಣಿಕ, ಮಾನವೀಯ, ರೋಗಿಯ ಮಾನಸಿಕ ವ್ಯಥೆಯನ್ನು ತಗ್ಗಿಸಬಲ್ಲ, ಸಾಂತ್ವನ ನೀಡಬಲ್ಲ ಒಬ್ಬ ಕುಟುಂಬ ವೈದ್ಯಸಾಕು. ಇನ್ನುಳಿದ 5-10 ಪ್ರತಿಶತ ರೋಗಗಳನ್ನು ಇಂದಿನ ಅತ್ಯಾಧುನಿಕ ಉಪಕರಣಗಳ ಸಹಾಯದಿಂದ ಕಂಡು ಹಿಡಿಯಬಹುದಾದರೂ ಆ ರೋಗಗಳ ಚಿಕಿತ್ಸಾವೆಚ್ಚ ಅತೀ ಹೆಚ್ಚು ಹಾಗೂ ಗುಣವಾಗುವ ಪ್ರಮಾಣವೂ ಕಡಿಮೆ. ವಿಪರ್ಯಾಸವೆಂದರೆ ಆಧುನಿಕ ಜೀವನದಲ್ಲಿ “ಕುಟುಂಬ ವೈದ್ಯ’ ಎಂಬ ಕಲ್ಪನೆಯೇ ಮರೆಯಾಗುತ್ತಿದೆ. ಮೊದಲಿನ ದಿನಗಳಲ್ಲಿ ಕುಟುಂಬ ವೈದ್ಯನೆಂದರೆ ಕುಟುಂಬದ ಸದಸ್ಯನಂತೆಯೇ ಇರುತ್ತಿದ್ದ. ಏನೇ ರೋಗ ಬಂದರೂ ಮೊದಲು ಅವನೆಡೆಗೆ ಹೋಗಿ ಅವನಿಂದ ಗುಣವಾಗುವ ಸಾಧ್ಯತೆ ಇಲ್ಲದಾಗ ಮಾತ್ರ ಅವನೇ ತಿಳಿಸಿದ ದೊಡ್ಡ ಆಸ್ಪತ್ರೆ ಅಥವಾ “ಸ್ಪೆಷಲಿಸ್ಟ್’ ಕಡೆ ಹೋಗಿ ಉಪಚಾರ ಪಡೆಯುವುದಾಗಿತ್ತು. ಈಗ ಕುಟುಂಬ ವೈದ್ಯ ಎಂಬ ಬಿರುದಿಗೆ ಪಾತ್ರರಾಗಲು ಇಷ್ಟ ಪಡುವ ವೈದ್ಯರೂ ಇಲ್ಲ, ಅಂತಹ ವೈದ್ಯರನ್ನು ಬಯಸುವ ರೋಗಿಗಳೂ ಇಲ್ಲ. ಹೀಗಾಗಿ ಈಗ ಆಸ್ಪತ್ರೆಗೆ ಹೋಗುವುದೆಂದರೆ ಹೋಟೆಲ್‌ಗೆ ಅಥವಾ ಮಾಲ್‌ಗಳಿಗೆ ಹೋದ ಹಾಗೆ. ತಮ್ಮಲ್ಲಿ ಇರುವ ದುಡ್ಡು, ಅಂತಸ್ತು, “ಇನ್ಶೂರೆನ್ಸ್ ಪ್ಯಾಕೇಜ್’ ಗಳಿಗೆ ಅನುಗುಣವಾಗಿ ಆಸ್ಪತ್ರೆಗಳನ್ನು ಆಯ್ದುಕೊಳ್ಳುವುದು “ಫ್ಯಾಶನ್’ ಆಗಿದೆ. ಕೆಲವು ಆಸ್ಪತ್ರೆಗಳೂ ಅದೇ ಮಾನದಂಡ ಬಳಸಿ ರೋಗಿಗಳನ್ನು ವಿಂಗಡಣೆ ಮಾಡುವ ಕೆಟ್ಟ ಪರಿಪಾಠ ಪ್ರಾರಂಭ ಮಾಡಿವೆ. ಜನ “ಆಸ್ಪತ್ರೆಗೆ’ ಹೋಗುತ್ತಿದ್ದಾರೆ. “ವೈದ್ಯರೆಡೆಗೆ’ಅಲ್ಲ. ವೈದ್ಯ ಯಾರಿದ್ದರೂ ಆದೀತು, ಆಸ್ಪತ್ರೆ ಮುಖ್ಯಆಗುತ್ತಿದೆ. ಹೀಗಾಗಿ ನಮ್ಮ ವೈದ್ಯಕೀಯದ ಬೆಳವಣಿಗೆ ಬಹುಜನಾಭಿಮುಖವಾಗುತ್ತಿಲ್ಲ. ಸೇವಾಭಿಮುಖವಾಗುತ್ತಿಲ್ಲ. ಅದಕ್ಕಾಗಿಯೇ ಊಧ್ವì ಮುಖವಾಗಿ ರಾಕೆಟ್ ವೇಗದಲ್ಲಿ ಸಾಗಿದ ಈ ವೈದ್ಯಕೀಯದಲ್ಲಿ ಒಂದಿಷ್ಟು ಸಮಯ ನಿಂತು ಚಿಂತಿಸಬೇಕಾಗಿದೆ, ಸಾಮಾನ್ಯ ಪ್ರಜೆಗೆ ಅವಶ್ಯವಿರುವ ಆಸ್ಪತ್ರೆ ಯಾವುದು, ಎಂದು. ಎಲ್ಲ ಊರುಗಳಲ್ಲಿ ತಲೆ ಎತ್ತುತ್ತಿರುವ ಹೈಟೆಕ್‌ಆಸ್ಪತ್ರೆಗಳು ಎಷ್ಟು ಜನರ ಕಷ್ಟಗಳನ್ನು ನಿವಾರಿಸುತ್ತಿವೆ, ಎನ್ನುವುದನ್ನು ನಿಕಶಕ್ಕೆ ಒಡ್ಡಬೇಕಿದೆ.
ಹೆಚ್ಚು ಖರ್ಚು ಮಾಡಿ ಕಡಿಮೆ ಜನರನ್ನು ಗುಣಪಡಿಸುವುದಕ್ಕಿಂತ, ಕಡಿಮೆ ಖರ್ಚು ಮಾಡಿ ಹೆಚ್ಚು ಜನರನ್ನು ಗುಣಪಡಿಸುವತ್ತ ದೃಷ್ಟಿ ನೆಡಬೇಕಿದೆ. ಜನರೂ ಆ ನಿಟ್ಟಿನಲ್ಲಿ ಚಿಂತಿಸಬೇಕಿದೆ. ಅವಶ್ಯವೋ ಅನಾವಶ್ಯವೋ ತಮ್ಮ ಇಡೀ ಶರೀರವನ್ನು ಒಂದು ಬಾರಿ ಸಿ.ಟಿ.ಸ್ಕ್ಯಾನಿನ ಒಳಗೆ ತೂರಿಸಿಬಿಟ್ಟು ನೋಡಬೇಕೆನ್ನುವ ಆಸೆಯನ್ನು ಅದುಮಿಟ್ಟು ಅವರೂ ವೈದ್ಯರ ಉಪದೇಶಗಳನ್ನು ಆಲಿಸಬೇಕಿದೆ.
ಕೊನೆಯದಾಗಿ ಒಂದು ಮಾತು. ನಿಜವಾಗಿಯೂ ಭಾರತದ ಇಂದಿನ ಪರಿಸ್ಥಿತಿಯಲ್ಲಿ ಅತ್ಯವಶ್ಯವಾಗಿ ಬೇಕಾದುದು, ರೋಗಿ ಹಾಗೂ ವೈದ್ಯರ ನಡುವಿನ “ನಂಬಿಕೆ ಹಾಗೂ ಭರವಸೆ’. ಇದ್ದ ಪರಿಕರಗಳನ್ನು ಸರಿಯಾಗಿ, ಕರಾರುವಾಕ್ಕಾಗಿ ಉಪಯೋಗಿಸುವ ವೈದ್ಯರು, ರೋಗಿಗೆ ಸಾಂತ್ವನ ನೀಡುವ ದಾದಿಯರು, ವೈದ್ಯ ರೋಗಿಯ ಮಧ್ಯೆ ಪ್ರವಹಿಸುವ ಮಾನವೀಯ ಅನುಕಂಪದ ಅಲೆ ಮತ್ತು ಅಪ್ಯಾಯಮಾನವೆನಿಸುವ ಆರೈಕೆ ಮಾತ್ರ. ರೋಗಿಗಳು ವೈದ್ಯರನ್ನು ನಂಬದೆ ಅವರ ಮೇಲೆ ವೃಥಾ ಆರೋಪ ಹೊರಿಸುವುದೂ, ಅವರ ಮೇಲೆ ಹಲ್ಲೆ ಮಾಡುವುದೂ ಅಲ್ಲ, ಹಾಗೆಯೇ ವೈದ್ಯರೂ ಹತ್ತು ರೂಪಾಯಿಗೆ ಆರಾಮವಾಗುವ ರೋಗಕ್ಕೆ ಸಾವಿರ ರೂಪಾಯಿಯ ತಪಾಸಣೆ ಮಾಡಿಸಿ, ಹತ್ತು ಸಾವಿರದ ಶುಲ್ಕ ವಿಧಿಸುವುದೂ ಅಲ್ಲ….! ಅವರು ಇವರನ್ನು ನಂಬಬೇಕು, ಇವರಿಗೆ “ದಯವೇ ಧರ್ಮದ ಮೂಲ’ ವಾಗಬೇಕು. ಆಗ ವೈದ್ಯಕೀಯದ ಅನುಭವವೇ ಒಂದು ಅನುಭಾವ ಆದೀತು!
(ಇಂದಿಗೆ “ಅನುಭವ’ ಲೇಖನ ಸರಣಿ ಮುಕ್ತಾಯ. ವೈದ್ಯಲೋಕದ ಒಳತೋಟಿಗಳನ್ನು ಅತ್ಯಂತ ಆಪ್ತವಾಗಿ ವಿವರಿಸಿದ ಡಾ.ಶಿವಾನಂದ ಕುಬಸದ ಅವರಿಗೆ ಕೃತಜ್ಞತೆಗಳು- ಸಂಪಾದಕರು)
ಡಾ. ಶಿವಾನಂದ ಕುಬಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.