ತೆರೆದ ಪುಸ್ತಕ ಪರೀಕ್ಷೆ ಚರ್ಚಾರ್ಹ ಚಿಂತನೆ


Team Udayavani, Jun 28, 2018, 12:30 AM IST

e-11.jpg

ಪಾತ್ರೆಯಲ್ಲಿನ ಒಂದು ಅಗಳು ಬೆಂದಿದೆಯೆಂದರೆ ಇಡೀ ಪಾತ್ರೆಯ ಅನ್ನ ಬೆಂದಿದೆಯೆಂಬ ತೀರ್ಮಾನಕ್ಕೆ ಬರುವುದು ಮಕ್ಕಳ ಕಲಿಕೆಗೆ ಸಂಬಂಧಿಸಿದಂತೆ ತೀರಾ ತಪ್ಪಾದ ಮಾರ್ಗ. ಪರೀಕ್ಷೆಯೂ ಕಲಿಕೆಯಾಗುವ, ಪ್ರಶ್ನೆಗಳಿಗೆ ಉತ್ತರಿಸುವಾಗ ವಿದ್ಯಾರ್ಥಿಯ ಅನುಭವ ಮತ್ತು ವಿವೇಚನೆಯ ಪ್ರತಿಫ‌ಲನವಾಗಿಸುವ ಮೌಲ್ಯಮಾಪನ ಈಗಿನ ಅಗತ್ಯ. ದಕ್ಷವಾಗಿ ನಿರ್ವಹಿಸಲ್ಪಟ್ಟರೆ ತೆರೆದ ಪುಸ್ತಕ ಪರೀಕ್ಷೆಯು ಪರಿಹಾರಗಳನ್ನು ಒದಗಿಸಬಲ್ಲದು.

ಶಿಕ್ಷಣವೆಂಬುದು ಪಾತ್ರೆಯನ್ನು ತುಂಬಿಸುವಂತಹ ಕೆಲಸವಲ್ಲ, ಬದಲಾಗಿ ಅದು ನಮ್ಮೊಳಗಿನ ಜ್ವಾಲೆಯನ್ನು ಆರದಂತೆ ಕಾಪಿಡುವುದು ಎಂದು ಸಾಕ್ರೆಟಿಸ್‌ ಎಂಬ ಮಹಾನುಭಾವ ಎರಡುವರೆ ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದರು. ಆದರೆ ಸಾಕ್ರೆಟಿಸ್‌ಗಿಂತ ಹಳೆಯದಾದ ಚಿಂತನಾ ಪಳೆಯುಳಿಕೆಗಳು ಈಗಲೂ ಇವೆ. ಆ ಕಾರಣದಿಂದಾಗಿಯೇ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ತೆರೆದ ಪುಸ್ತಕ ಪರೀಕ್ಷೆಗಳನ್ನು ಅಳವಡಿಸುವುದರ ಮಾತನಾಡಿದಾಗ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. 

ತೆರೆದ ಪುಸ್ತಕ ಪರೀಕ್ಷೆಗಳು ದಿನಬೆಳಗಾಗುವುದರೊಳಗಾಗಿ ಬದ ಲಾವಣೆ ತರಬಹುದಾದ ಸುಲಭದ ವಿಧಾನವೆಂದಾಗಲೀ ಅಥವಾ ಕಲಿಕೆ ಮತ್ತು ಕಲಿಕಾರ್ಥಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ತಕ್ಷಣದ ಮತ್ತು ನಿಶ್ಚಿತ ಪರಿಹಾರವೆಂದಾಗಲಿ ತಿಳಿಯಬೇಕಾಗಿಲ್ಲ. ಆದರೆ ಯಾವುದೇ ಬಗೆಯ ಶೈಕ್ಷಣಿಕ ಸುಧಾರಣೆಯೊಂದರ ಕುರಿತು ನಡೆಯುವ ಚರ್ಚೆಯ ಗುಣಮಟ್ಟವು ಆಯಾ ಕಾಲದ ಸಾಮಾಜಿಕ ಚಲನೆಯ ಗತಿಯನ್ನೂ ನಿರ್ಧರಿಸುತ್ತದೆ ಎಂಬುದನ್ನು ಮರೆಯಬಾರದು. ಜ್ಞಾನದ ಉತ್ಪಾದನೆ ಮತ್ತು ಅದರ ಬಳಕೆಯಲ್ಲಿನ ಪ್ರಗತಿಯೇ ದೇಶದ ಒಟ್ಟೂ ಪ್ರಗತಿಯ ಸೂಚಕವಾಗಿರುವ ಈ ಕಾಲಘಟ್ಟದಲ್ಲಂತೂ ಶೈಕ್ಷಣಿಕ ಕ್ಷೇತ್ರದಲ್ಲಿ ತರಬೇಕಾದ ಸುಧಾರಣೆಗಳ ಯಾವ ಚರ್ಚೆಯನ್ನೂ ಉಪೇಕ್ಷಿಸುವಂತಿಲ್ಲ. ಮೌಲ್ಯಮಾಪನವು ಶಿಕ್ಷಣದ ಅವಿಭಾಜ್ಯ ಅಂಗ. ಭಯದ ವಾತಾವರಣವನ್ನು ಸೃಷ್ಟಿಸಿ ಮಗುವನ್ನು ಕಲಿಯುವಂತೆ ಮಾಡುವುದು ಮೌಲ್ಯಮಾಪನದ ಉದ್ದೇಶವಲ್ಲ. ಮಕ್ಕಳಿಗೆ “ನಿಧಾನ ಕಲಿಯುವವರು’ “ಪ್ರತಿಭಾವಂತರು’ “ಸಮಸ್ಯಾತ್ಮಕ ಮಕ್ಕಳು’ ಮುಂತಾದ ಹಣೆಪಟ್ಟಿ ಕಟ್ಟುವುದೂ ಮೌಲ್ಯಮಾಪನದ ಕೆಲಸವಲ್ಲ. ಹೀಗೆ ಮಾಡುವುದರಿಂದ ಕಲಿಕೆಯ ಸಂಪೂರ್ಣ ಜವಾಬ್ದಾರಿ ಯನ್ನು ಮಕ್ಕಳ ಮೇಲೆ ಹೊರಿಸಿದಂತಾಗುತ್ತದೆ. ಕಲಿಕೆಗಾಗಿ ಮೌಲ್ಯಮಾಪನವಿರುತ್ತದೆಯೇ ಹೊರತು ಮೌಲ್ಯಮಾಪನಕ್ಕಾಗಿ ಕಲಿಕೆಯಲ್ಲ. ಶಿಕ್ಷಣವು ಮಗುವಿಗೆ ಬದುಕಲು ಕಲಿಸಬೇಕು. ನಾಗರಿಕ ಜವಾಬ್ದಾರಿಗಳನ್ನು ಅರ್ಥಪೂರ್ಣವಾಗಿ ನಿಭಾಯಿಸುವ ಮತ್ತು ವ್ಯಕ್ತಿಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಶಿಕ್ಷಣ ಇಂದಿನ ಅವಶ್ಯಕತೆ. ನಮ್ಮ ರಾಷ್ಟ್ರೀಯ ಗುರಿಗಳ ಈಡೇರಿಕೆಗೆ ಶಿಕ್ಷಣವೇ ಸಾಧನ. ಇಂತಹ ಶಿಕ್ಷಣವನ್ನು ನೀಡುವಲ್ಲಿ ನಾವೆಷ್ಟು ಸಫ‌ಲರಾಗಿದ್ದೇವೆ ಎಂಬ ಕುರಿತು ವಿಶ್ವಾಸಾರ್ಹ ಹಿಮ್ಮಾಹಿತಿಯನ್ನು ನೀಡುವಲ್ಲಿ ಮೌಲ್ಯಮಾಪನವು ನೆರವಾಗುತ್ತದೆ. ಮಗುವಿಗೂ ಸಹ ತನ್ನ ಗುರಿ-ಸಾಧನೆಗಳನ್ನು ಮತ್ತು ತನ್ನ ಮಿತಿಗಳನ್ನು ಗುರುತಿಸಲು, ಮುಂದಿನ ಕಲಿಕೆಯನ್ನು ಯೋಜಿಸಲು ಸಹಕರಿಸುತ್ತದೆ. ಬಾಯಿ ಪಾಠ ಆಧಾರಿತ ಲಿಖೀತ ಪರೀಕ್ಷೆಯು ಮೌಲ್ಯಮಾಪನದ ಒಂದು ತಂತ್ರವಷ್ಟೇ. ಮಗುವಿನ ಉರು ಹೊಡೆಯುವ ಸಾಮರ್ಥ್ಯವನ್ನು ಅಳೆಯುವ, ಸ್ಮರಣ ಶಕ್ತಿಯನ್ನು ಮೌಲ್ಯಾಂಕನಗೊಳಿಸುವ, ಆದರೆ ಮಗುವಿನ ಸೃಜನಶೀಲತೆ, ವಿಶ್ಲೇಷಣಾ ಮನೋಭಾವ, ಹೊಸ ಸಂದರ್ಭಕ್ಕೆ ಪ್ರತಿಕ್ರಿಯಿಸುವ ರೀತಿಯನ್ನು ಅಳೆಯುವಲ್ಲಿ ಅಸಡ್ಡೆ ತೋರುವ ಪರೀಕ್ಷೆಗಳಿಗಾಗಿ ನಮ್ಮ ಮಕ್ಕಳು ಸಿದ್ಧಗೊಳ್ಳುತ್ತಾ ಬಾಲ್ಯದ ಧಾರಾಳ ಸಂತಸ ಮತ್ತು ರಚನಾತ್ಮಕ ಚೈತನ್ಯವನ್ನು ಕಳೆದು ಕೊಳ್ಳುತ್ತಿದ್ದಾರೆಂಬ ಆತಂಕ ಸದ್ಯ ನಮ್ಮೆದುರಿಗಿದೆ.

ಮೌಲ್ಯಮಾಪನ ಕ್ರಿಯೆಯಲ್ಲಿ ಲಿಖೀತ ಪರೀಕ್ಷೆಗಳು ಮಹತ್ವದ ಪಾತ್ರವನ್ನೇ ವಹಿಸುತ್ತವೆ. ಆದರೆ ಅವುಗಳನ್ನು ಹೇಗೆ ವಿನ್ಯಾಸ ಗೊಳಿಸಲಾಗಿದೆ, ಶೈಕ್ಷಣಿಕ ಉದ್ದೇಶಗಳನ್ನು ಅಳೆಯುವಲ್ಲಿ ಮತ್ತು ಈಡೇರಿಸುವಲ್ಲಿ ಅವು ಸಕ್ಷಮವಾಗಿವೆಯೇ ಎಂಬ ಪ್ರಶ್ನೆಗಳು ಬಹು ಮುಖ್ಯ. ಪರೀಕ್ಷೆ ಎಷ್ಟು ಉತ್ತಮವಾಗಿದೆ ಎಂಬುದನ್ನು ಮಕ್ಕಳ ಉತ್ತರಗಳಲ್ಲಿ ಹುಡುಕುವ ಬದಲು ವಿದ್ಯಾರ್ಥಿಗಳು ಎದುರಿಸಿದ ಪ್ರಶ್ನೆಗಳ ಮೂಲಕವೇ ತೀರ್ಮಾನಿಸಬಹುದು. ವಿದ್ಯಾರ್ಥಿಗಳು ತಮಗೆ ತಾವೇ ಎಷ್ಟು ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಪರೀಕ್ಷೆಗಾಗಿ ಸಿದ್ಧಪಡಿಸಿದ ಪ್ರಶ್ನೆ ಪತ್ರಿಕೆಯು ಪ್ರೇರೇಪಿಸಿದೆ ಎಂಬುದು ಪರೀಕ್ಷೆಯ ಯಶಸ್ಸನ್ನು ನಿರ್ಧರಿಸುತ್ತದೆ. ಇಷ್ಟಾಗಿಯೂ, ಈಗಿರುವ ಪರೀಕ್ಷೆಯೇ ಮೌಲ್ಯಮಾಪನದ ಏಕಮೇವ ತಂತ್ರವಲ್ಲ. ಈ ಪರೀಕ್ಷೆಯ ಮೂಲಕವೇ ಮಗುವಿನ ಸರ್ವಾಂಗೀಣ ಬೆಳವಣಿಗೆ ಯನ್ನು ಅಳತೆಮಾಡಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಮೌಲ್ಯ ಮಾಪನ ಪ್ರಕ್ರಿಯೆಯಲ್ಲಿ ಶಿಕ್ಷಕರ ಅವಲೋಕನ, ಸ್ನೇಹಿತರ ಹಿಮ್ಮಾಹಿತಿ, ಸ್ವ ಅವಲೋಕನ ಮತ್ತಿತ್ಯಾದಿ ಹತ್ತಾರು ವಿಧದ ತಂತ್ರಗಳನ್ನು ಈಗಾಗಲೆ ಬಳಸಲಾಗುತ್ತಿದೆ. ನೇರ ಪರೀಕ್ಷೆಗಳಲ್ಲೂ ಐಚ್ಛಿಕ ಪರೀಕ್ಷೆಗಳು, ಸ್ವ-ಪರೀಕ್ಷೆಗಳು, ತೆರೆದ ಪುಸ್ತಕ ಪರೀಕ್ಷೆಗಳು, ಬೇಡಿಕೆಯ ಪರೀಕ್ಷೆಗಳು, ಗುಂಪು ಪರೀಕ್ಷೆಗಳು ಹೀಗೆ ಹತ್ತು ಹಲವು ಸಾಧ್ಯತೆಗಳು ಎದುರಿಗಿವೆ. ನೆನಪನ್ನೇ ಆಧರಿಸುವ ಲಿಖೀತ ಪರೀಕ್ಷೆಗಳನ್ನು ಮೀರಿ ನಾವು ಯೋಚಿಸಬೇಕಿದೆ.

ಇಪ್ಪತ್ತೂಂದನೇ ಶತಮಾನದ ಜ್ಞಾನ ಸಮಾಜವನ್ನು ಕಟ್ಟಲು ಪರೀಕ್ಷಾ ಸುಧಾರಣೆಗಳು ಅವಶ್ಯಕ ಎಂದು 2005ರ ರಾಷ್ಟ್ರೀಯ ಪಠ್ಯಕ್ರಮ ಸಮಿತಿ ಅಭಿಪ್ರಾಯ ಪಡುತ್ತದೆ. ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟನ್ನು ರೂಪಿಸುವ ಹಿನ್ನೆಲೆಯಲ್ಲಿ ರಚಿಸಲಾದ ಪರೀಕ್ಷಾ ಸುಧಾರಣೆಗಳ ಕುರಿತಾದ ರಾಷ್ಟ್ರೀಯ ಸಮಿತಿ ತನ್ನ ವರದಿಯಲ್ಲಿ ಪರೀಕ್ಷಾ ಸುಧಾರಣೆಗಳು ಏಕೆ ಅವಶ್ಯಕ ಎಂಬುದನ್ನು ವಿವರಿಸುತ್ತದೆ. ಅದರ ಪ್ರಕಾರ, ಇಪ್ಪತ್ತೂಂದನೇ ಶತಮಾನದ ಜ್ಞಾನ ಸಮಾಜವನ್ನು ಕಟ್ಟಲು ನಮ್ಮ ಮಕ್ಕಳು ಉರು ಹೊಡೆಯುವುದರಲ್ಲಿ ಪ್ರವೀಣರಾದರೆ ಸಾಲದು, ಅವರು ಸೃಜನಶೀಲರೂ ಅಸಾ ಮಾನ್ಯ ಸಮಸ್ಯಾ ಪರಿಹಾರಕರೂ ಆಗಿರಬೇಕಾಗಿದೆ. ಆ ಕಾರಣಕ್ಕಾಗಿ ವಿದ್ಯಾರ್ಥಿಗಳು ಮೇಲ್ದರ್ಜೆಯ ಕೌಶಲಗಳಾದ ತರ್ಕ, ವಿಶ್ಲೇಷಣೆ, ಪರ್ಯಾಯ ಚಿಂತನೆ, ಪ್ರತಿಚಿಂತನೆ, ವಿವೇಚನೆ, ನಿರ್ವಚನೆಯ ಮೂಲಕ ಜ್ಞಾನದ ರಚನೆಗಳನ್ನು ಕಟ್ಟಿಕೊಳ್ಳುವುದು ಅನಿವಾರ್ಯ. ಮೆಖಾಲೆ ಪ್ರಣೀತ ಭಾರತೀಯ ಶಿಕ್ಷಣ ವ್ಯವಸ್ಥೆಯು ಗುಮಾಸ್ತರನ್ನು ಸಿದ್ಧಪಡಿಸುವ ಕಾರ್ಖಾನೆಯೆಂಬ ಜನಪ್ರಿಯ ಗ್ರಹಿಕೆಯಿದೆ. ಇದು ಬಹುಮಟ್ಟಿಗೆ ಸತ್ಯವೂ ಆಗಿದ್ದರೂ ನಮ್ಮ ಶಿಕ್ಷಣ ವ್ಯವಸ್ಥೆಯ ಇನ್ನೊಂದು ಲಕ್ಷಣವು ಈ ಜನಪ್ರಿಯ ಗ್ರಹಿಕೆಯಲ್ಲಿ ಮರೆಯಾಗಿದೆ. ಅದೆಂದರೆ, ನಮ್ಮ ಶಿಕ್ಷಣ ವ್ಯವಸ್ಥೆಯು ಸ್ಮತಿ ಸಂಸ್ಕೃತಿಯವರಿಗಾಗಿ ರೂಪಿಸಲ್ಪಟ್ಟಿದೆಯೇ ವಿನಃ ಶ್ರಮ ಸಂಸ್ಕೃತಿಯವರಿಗಾಗಿ ಅಲ್ಲ. ಕೊಳಲು, ಡೋಲು, ಬೆತ್ತ-ಬಿದಿರಿನ ಕೆಲಸಗಳಲ್ಲಿ ಅತ್ಯಂತ ಕುಶಲರಾದ ಉಡುಪಿ, ದಕ್ಷಿಣ ಕನ್ನಡ ಭಾಗದಲ್ಲಿರುವ ಕೊರಗರು ಬಾಯಿಪಾಠದ ಶಾಲಾ ವ್ಯವಸ್ಥೆಯಿಂದ ದೂರವೇ ಉಳಿಯಲು ಈಗಿರುವ ಕಲಿಕೆಯ ಪರಿಸರ ಬಹು ಮಟ್ಟಿಗೆ ಕಾರಣ. ಇದನ್ನು ರಾಷ್ಟ್ರೀಯ ಸಮಿತಿ ಗುರುತಿಸಿ, ಈಗಿರುವ ಮೌಲ್ಯಮಾಪನ ಪದ್ಧತಿಯು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದಿದೆ. ಒಂದು ಅಳತೆ ಎಲ್ಲರಿಗೂ ಸರಿಹೋಗುತ್ತದೆ ಎಂಬ ಧೋರಣೆಯೂ ಶಿಕ್ಷಣದಲ್ಲಿ ಎಲ್ಲರ ಒಳಗೊಳ್ಳುವಿಕೆಯನ್ನು ಖಚಿತಪಡಿಸುವ ಕಾರ್ಯವನ್ನು ಸಾಕಷ್ಟು ನಿಧಾನಗೊಳಿಸಿದೆ. 

ಪ್ರತಿ ಮಗುವೂ ಅನನ್ಯವಾಗಿರುವುದರಿಂದ ಪ್ರತಿ ಮಗುವನ್ನೂ ಪ್ರತ್ಯೇಕ ಅಳತೆಗೋಲಿನಲ್ಲಿ ಮೌಲ್ಯಮಾಪನ ಮಾಡುವುದು ಅನಿವಾರ್ಯ. ಬದಲಾದ ಉದ್ಯೋಗ ಮಾರುಕಟ್ಟೆಯಲ್ಲಿ ಪ್ರತಿ ಮಗುವಿನ ವಿಶಿಷ್ಟತೆಗೂ ಬೆಲೆಯಿದೆ ಎಂಬುದನ್ನು ನಾವು ಅರಿಯಬೇಕಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಈಗಿರುವ ಪರೀಕ್ಷೆಗಳು ಮಗುವಿನಲ್ಲಿ ಅನಗತ್ಯದ ಒತ್ತಡವನ್ನುಂಟುಮಾಡುತ್ತವಲ್ಲದೆ ಆ ಮಗುವಿನ ಸಂತಸದ ಬಾಲ್ಯವನ್ನು ವಂಚಿಸುತ್ತವೆ. 

ತೆರೆದ ಪುಸ್ತಕ ಪರೀಕ್ಷೆಯೆಂದರೆ ಪುಸ್ತಕದಲ್ಲಿರುವ ಮಾಹಿತಿಯ ನ್ನೆಲ್ಲ ನಕಲಿಸಿ ಉತ್ತರ ಪತ್ರಿಕೆಗೆ ವರ್ಗಾಯಿಸುವುದಲ್ಲ. ಮಾಹಿತಿ ಯನ್ನು ಪಡೆಯುವುದು, ಮಾಹಿತಿಯನ್ನು ಆಯುವುದು, ಮಾಹಿತಿಯನ್ನು ಸಂಸ್ಕರಿಸುವುದು ಮತ್ತು ಲಭ್ಯ ಮಾಹಿತಿಯ ಸಹಾಯದಿಂದ ನಿಜ ಜೀವನದ ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವುದು ಈ ಮೂಲಕ ಸಾಧ್ಯವಾಗಬೇಕಿದೆ. ತೆರೆದ ಪುಸ್ತಕ ಪರೀಕ್ಷೆಗಳಲ್ಲೂ ಅನೇಕ ಸಾಧ್ಯತೆಗಳಿವೆ. ಪುಸ್ತಕದ ಸಹಾಯ ಪಡೆದು ಲಿಖೀತ ಪರೀಕ್ಷೆಯನ್ನು ಎದುರಿಸುವುದು ಒಂದು ಬಗೆಯಾದರೆ ಮೌಖೀಕ ಪರೀಕ್ಷೆಗಳು, ಸಂದರ್ಶನಗಳು, ಸಮೂಹ ಚಟುವಟಿಕೆಗಳು, ಗುರಿ ನಿರ್ಧಾರಿತ ಯೋಜನೆಗಳು ಹೀಗೆ ವಿಭಿನ್ನ ಕಲಿಕೆಯ ಅನುಭವಗಳನ್ನು ಮೌಲ್ಯಮಾಪನದೊಂದಿಗೆ ಜೋಡಿಸುವ ಸಾಧ್ಯತೆ ಈ ಪರೀಕ್ಷೆಗಿದೆ. ಪ್ರಶ್ನೆಪತ್ರಿಕೆಯೂ ಸೇರಿದಂತೆ ವಿಭಿನ್ನ ಮೌಲ್ಯಮಾಪನ ಸಾಧನಗಳನ್ನು ಈ ಬಗೆಯ ಪರೀಕ್ಷೆಗಾಗಿ ಸಿದ್ಧಪಡಿಸಿಕೊಳ್ಳುವುದಕ್ಕೆ ವಿಶೇಷ ಪರಿಣಿತಿಯೂ ಅವಶ್ಯಕ. ಶಿಕ್ಷಕರಿಗೆ ಈ ಬಗೆಯಲ್ಲಿ ಸಿದ್ಧಗೊಳ್ಳುವುದಕ್ಕೆ ಮಾರ್ಗ ದರ್ಶನ ಅವಶ್ಯ. ಎಲ್ಲಕ್ಕಿಂತ ಹೆಚ್ಚಾಗಿ, ಈ ಬಗೆಯ ಸುಧಾರಣೆಗಳನ್ನು ಜಾರಿಗೊಳಿಸುವಾಗ ಎಲ್ಲ ಹಂತದ ಅನುಷ್ಠಾನ ಸಿಬ್ಬಂದಿ ಗಳಿಗೂ ಪೂರಕ ಕೌಶಲ ಮತ್ತು ಸಕಾರಾತ್ಮಕ ಮನೋಭಾವ ಇರಬೇಕಾಗುತ್ತದೆ. ಈಗಾಗಲೇ ಸರಕಾರಿ ಶಾಲೆಗಳಲ್ಲಿ ಒಂದರಿಂದ ಮೂರನೇ ತರಗತಿಯವರೆಗೆ ನಲಿಕಲಿ ಪದ್ಧತಿ ಜಾರಿಯಲ್ಲಿದ್ದು ಅಲ್ಲಿ ತೆರೆದ ಪುಸ್ತಕ ಪರೀಕ್ಷೆಯನ್ನು ಹೋಲುವ ಮೌಲ್ಯಮಾಪನ ವಿಧಾನಗಳನ್ನು ಬಳಕೆಮಾಡಲಾಗುತ್ತಿದೆ. ಇನ್ನುಳಿದ ತರಗತಿಗಳಿಗೆ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ವಿಧಾನಗಳು ಜಾರಿಯಲ್ಲಿದ್ದು ಸಚಿವರು ಸೂಚಿಸಿರುವಂತಹ ತೆರೆದ ಪುಸ್ತಕ ಪರೀಕ್ಷೆಗಳನ್ನು ನಡೆಸಲು ಅಲ್ಲಿ ಅವಕಾಶ ಈಗಾಗಲೇ ಇದೆ. 

ಪರೀಕ್ಷೆಗಳಲ್ಲಿ ಕೇಳಲಾಗುವ ಪ್ರಶ್ನೆಗಳು ಹೆಚ್ಚು ವಸ್ತುನಿಷ್ಟವಾಗಿ ರಬೇಕೆಂದು ಒತ್ತಾಯಿಸುವವರು ತೆರೆದ ಪುಸ್ತಕ ಪರೀಕ್ಷೆಯೂ ಸೇರಿದಂತೆ ಎಲ್ಲ ಬಗೆಯ ಹೊಸ ಸುಧಾರಣಾ ಕ್ರಮಗಳ ಕುರಿತು ಆಕ್ಷೇಪಗಳನ್ನೆತ್ತಬಹುದು. ಆದರೆ ಪ್ರಶ್ನೆಗಳು ವಸ್ತುನಿಷ್ಟವಾಗಿರ ಬೇಕೆಂಬ ಅಭಿಪ್ರಾಯ ಸ್ಪರ್ಧಾತ್ಮಕ ನೆಲೆಯಿಂದ ಬಂದಿರುವಂತ ಹದ್ದು. ಇದು ಮಗುವಿನ ಸಹಜ ಕಲಿಕೆಯನ್ನು ಗಮನದಲ್ಲಿಟ್ಟು ಕೊಂಡು ನಿರ್ಧಾರಿತವಾದದ್ದಲ್ಲ. ವಸ್ತುನಿಷ್ಟತೆಯ ಕುರಿತು ನಮಗಿ ರುವ ಅನವಶ್ಯಕ ಕಾಳಜಿಯಿಂದಾಗಿ ಇಂದು ಪರೀಕ್ಷೆಗಳು ಕಲಿಕೆಯ ಕ್ರಿಯೆಯ ಭಾಗಗಳಾಗಿ ಉಳಿದಿಲ್ಲ. ಪರೀಕ್ಷೆಗಳು ಕೇವಲ ಕಲಿಕೆಯ ಫ‌ಲಿತಗಳನ್ನಷ್ಟೇ ಮೌಲ್ಯಮಾಪನ ಮಾಡಿದರೆ ಸಾಲದು; ಅವು ಕಲಿಕೆಯ ಅನುಭವಗಳನ್ನೂ ಮೌಲ್ಯಮಾಪನ ಮಾಡುವಂತಿ ರಬೇಕು. ತೆರೆೆದ ಪುಸ್ತಕ ಪರೀಕ್ಷೆಗಳು ಮಗುವಿನ ಕಲಿಕೆಯ ಆಸಕ್ತಿ ಯನ್ನು ಕುಂದಿಸುತ್ತದೆ ಎನ್ನುವವರಿದ್ದಾರೆ. ಹೀಗೆ ಟೀಕಿಸುವವರು ಕಲಿಕೆಯೆಂದರೆ ಕಂಠಪಾಠವೆಂದು ಭಾವಿಸಿರುತ್ತಾರೆ. 

ಶಿಕ್ಷಕರು ಬಳಸುವ ಮೌಲ್ಯಮಾಪನ ತಂತ್ರಗಳು ಮಗುವಿನ ಬಲ ಮತ್ತು ದೌರ್ಬಲ್ಯಗಳಿಗೆ ಸಂವೇದನಾಶೀಲವಾಗಿರಬೇಕು. ಈ ಮೂಲಕ ಮೌಲ್ಯಮಾಪನವು ಮಾನವೀಯಗೊಳ್ಳಬೇಕಾಗಿದೆ. ಜೊತೆಗೆ, ಮೌಲ್ಯಮಾಪನವನ್ನು ಒಂದು ಅರ್ಥಪೂರ್ಣ ತರಗತಿ ಸಂವಹನವಾಗಿಯೂ ಗ್ರಹಿಸುವ ಅವಶ್ಯಕತೆಯಿದೆ. ಪಾತ್ರೆಯಲ್ಲಿನ ಒಂದು ಅಗಳು ಬೆಂದಿದೆಯೆಂದರೆ ಇಡೀ ಪಾತ್ರೆಯ ಅನ್ನ ಬೆಂದಿದೆಯೆಂಬ ತೀರ್ಮಾನಕ್ಕೆ ಬರುವುದು ಮಕ್ಕಳ ಕಲಿಕೆಗೆ ಸಂಬಂಧಿಸಿದಂತೆ ತೀರಾ ತಪ್ಪಾದ ಮಾರ್ಗ. ಪರೀಕ್ಷೆಯೂ ಕಲಿಕೆಯಾಗುವ, ಪ್ರಶ್ನೆಗಳಿಗೆ ಉತ್ತರಿಸುವುವಾಗ ವಿದ್ಯಾರ್ಥಿಯ ಅನುಭವ ಮತ್ತು ವಿವೇಚನೆಯ ಪ್ರತಿಫ‌ಲನವಾಗಿಸುವ ಮೌಲ್ಯಮಾಪನ ಈಗಿನ ಅಗತ್ಯ. ದಕ್ಷವಾಗಿ ನಿರ್ವಹಿಸಲ್ಪಟ್ಟರೆ ತೆರೆದ ಪುಸ್ತಕ ಪರೀಕ್ಷೆಯು ಪರಿಹಾರಗಳನ್ನು ಒದಗಿಸಬಲ್ಲದು. ಈ ಕುರಿತು ಬೆಳಕು ಚೆಲ್ಲುವಂತಹ ಇನ್ನಷ್ಟು ಚರ್ಚೆಗಳು ನಡೆಯಬೇಕಿದೆ.

ಉದಯ ಗಾಂವಕಾರ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.