Operation ವಿಜಯ್: ಹುತಾತ್ಮ ಸಹೋದರರಿಗೆ ನಮನಗಳು
Team Udayavani, Jul 29, 2024, 6:30 AM IST
1999ರ ಬೇಸಗೆಯಲ್ಲಿ ಆಗಷ್ಟೇ ಪಿಯುಸಿ ಪರೀಕ್ಷೆ ಮುಗಿಸಿದ್ದ ನನಗೆ ಭಾರತ ಮಾತೆಯ ಮುಕುಟಮಣಿಯಲ್ಲಿ ನಡೆಯುವ ಘಟನೆಯೊಂದು ನನ್ನ ಜೀವನದ ಹಾದಿಯನ್ನೇ ಬದಲಿಸುತ್ತದೆ ಎಂಬ ಸಣ್ಣ ಸುಳಿವೂ ಇರಲಿಲ್ಲ. ಅದು 1999ರ ಕಾರ್ಗಿಲ್ ಯುದ್ಧ… ಉಗ್ರಸ್ನೇಹೀ ನೆರೆದೇಶ ಪಾಕಿಸ್ಥಾನದೊಂದಿಗೆ 85 ದಿನಗಳ ಕಾಲ ಸೆಣಸಾಡಿ ಅಭೂತಪೂರ್ವ ಗೆಲುವು ಸಾಧಿಸಿದ ಭಾರತೀಯ ಸಶಸ್ತ್ರ ಪಡೆಗಳ ಸಾಹಸ ಕೇವಲ ಭಾರತದ ಬಗೆಗಿನ ಜಾಗತಿಕ ಗ್ರಹಿಕೆಯನ್ನು ಮರು ಚಿತ್ರಿಸಿದ್ದು ಮಾತ್ರವಲ್ಲ ನನ್ನಂತಹ ಯುವ ಮನಸ್ಸುಗಳಿಗೆ ಸೇನಾ ಸಮವಸ್ತ್ರ ಧರಿಸಿ ದೇಶಸೇವೆ ಮಾಡುವ ಸ್ಫೂರ್ತಿ ಮೂಡಿಸಿತ್ತು.
1999ರಲ್ಲಿ ನಾನು 18ನೇ ವಸಂತಕ್ಕೆ ಕಾಲಿಡುತ್ತಿದ್ದಂತೆ “ಕ್ಯಾಪ್ಟನ್’ ಎಂಬ ಪದವು ನನ್ನ ಕಿವಿಯಲ್ಲಿ ಅನುರುಣಿಸಲು ಆರಂಭಿಸಿತು. ಇದಕ್ಕೆ ಕಾರಣ ಕಾರ್ಗಿಲ್ ಸಮರದ ಗೆಲುವಿನ ರೂವಾರಿಗಳಾದ ಕ್ಯಾಪ್ಟನ್ ಸೌರಭ್ ಕಾಲಿಯಾ, ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಮೇಜರ್ ವಿಕ್ರಂ ಬಾತ್ರಾ ಅವರ ವೀರಗಾಥೆಗಳು.
ಕ್ಯಾಪ್ಟನ್ ಸೌರಭ್ ಕಾಲಿಯಾ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಮೊದಲ ಭಾರತೀಯ ಸೇನಾ ಅಧಿಕಾರಿಯಾಗಿದ್ದರು. ಅವರನ್ನು ಯುದ್ಧ ಕೈದಿಯನ್ನಾಗಿಸಿದ ಪಾಕಿಸ್ಥಾನ ಅವರಿಗೆ ನೀಡಿದ ಚಿತ್ರಹಿಂಸೆಯ ಕ್ರೂರತೆಯು ಯೋಧರು ಮಾತ್ರವಲ್ಲದೆ ಪ್ರತಿಯೊಬ್ಬ ಭಾರತೀಯನ ರಕ್ತವನ್ನು ಕುದಿಯುವಂತೆ ಮಾಡುತ್ತದೆ. ಸಿಗರೇಟ್ ತುಂಡುಗಳಿಂದ ಅವರ ದೇಹದ ಮೇಲೆಲ್ಲ ಮಾಡಿದ ಸುಟ್ಟಗಾಯಗಳು, ಕೆಂಪಗೆ ಕಾದ ರಾಡ್‌ಗಳಿಂದ ಚುಚ್ಚಿದ ಕಿವಿಗಳು, ಮುರಿದ ಮೂಳೆಗಳು ಮತ್ತು ಹಲ್ಲುಗಳು, ಕಿತ್ತ ಕಣ್ಣುಗಳು, ಕತ್ತರಿಸಿದ ಕೈಕಾಲುಗಳು ಹಾಗೂ ದೇಹದ ಮೇಲೆ ಹಾರಿಸಲಾದ ಗುಂಡುಗಳು ಪಾಕಿಸ್ಥಾನದ ಕ್ರೂರತ್ವವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದವು.
11 ಗೂರ್ಖಾ ರೈಫಲ್ಸ್‌ನ ಯುವ ಅಧಿಕಾರಿ ಕ್ಯಾಪ್ಟನ್ ಮನೋಜ್ ಪಾಂಡೆ ಅವರು ಬಟಾಲಿಕ್ ಸೆಕ್ಟರ್‌ನಲ್ಲಿ ತನ್ನ ಸೈನಿಕರನ್ನು ಮುನ್ನಡೆಸಿದ್ದರು. ಅಂತಿಮವಾಗಿ ಪ್ರಾಣ ತ್ಯಾಗ ಮಾಡುವ ಮೊದಲು 1999ರ ಜೂನ್ 11ರಂದು ಜುಬಾರ್ ಟಾಪ್ ಅನ್ನು ವಶಕ್ಕೆ ಪಡೆದುಕೊಂಡಿದ್ದರು. “ನನ್ನ ರಕ್ತವನ್ನು ಸಾಬೀತುಪಡಿಸುವ ಮೊದಲು ಸಾವು ಎದುರಾದರೆ, ಆ ಸಾವನ್ನೂ ನಾನು ಸೋಲಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ’ ಎಂಬವರ ಗರ್ಜನೆಯ, ಅಜರಾಮರವಾದ ಮಾತುಗಳು ಇಂದಿಗೂ ನನಗೆ ಸ್ಪೂರ್ತಿ ನೀಡುತ್ತಲೇ ಇದೆ. ಕ್ಯಾಪ್ಟನ್ ಮನೋಜ್ ಪಾಂಡೆ ತನ್ನ ತಂಡಕ್ಕೆ ಹೇಳಿದ್ದ ಕೊನೆಯ ಮಾತು “ಡೋಂಟ್ ಲೆಟ್ ದೆಮ್ ಗೋ’ ಎಂಬುದಾಗಿತ್ತು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಈ ಅಮರವೀರರ ಸಾಹಸವನ್ನು ಕಂಡಾಗ, ಕೇಳಿದಾಗಲೇ ನನ್ನ ಮನಸ್ಸಿನ ಎಲ್ಲೋ ಒಂದು ಮೂಲೆಯಲ್ಲಿ ನಾನೂ ದೇಶದ ಸೇನೆಗೆ ಸೇರ್ಪಡೆಗೊಂಡು ದೇಶಸೇವೆ ಮಾಡಬೇಕೆಂಬ ಆಸೆಯೊಂದು ಚಿಗುರೊಡೆದಿತ್ತು.
ಕಾರ್ಗಿಲ್ ಯುದ್ಧದ ಮರುವರ್ಷ ಎನ್‌ಸಿಸಿ ಕೆಡೆಟ್ ಆಗಿ ಭಾರತದ 50ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಅಂದಿನ ನಮ್ಮ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ರಕ್ಷಣ ಸಚಿವ, ಮಂಗಳೂರಿನವರೇ ಆಗಿದ್ದ ಜಾರ್ಜ್ ಫೆರ್ನಾಂಡಿಸ್ ಅವರ ಮುಂದೆ ಭಾಗವಹಿಸುವ ಅವಕಾಶ ಲಭಿಸಿತು. ಇದು ಸೇನೆಗೆ ಸೇರುವ ನನ್ನ ಆಸೆಯನ್ನು ಮತ್ತಷ್ಟು ಹೆಚ್ಚಿಸಿತು. 2003ರಲ್ಲಿ ಶಾರ್ಟ್ ಸರ್ವಿಸ್ ಕಮಿಷನ್‌ನ ಭಾಗವಾಗಿ ಸೇನೆಗೆ ಸೇರಿ ಗೂರ್ಖಾ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸಿ “ಕ್ಯಾಪ್ಟನ್’ ಆಗಿ ನಿವೃತ್ತಿ ಹೊಂದಿದೆ. ತನ್ಮೂಲಕ ಕಾರ್ಗಿಲ್ ಯುದ್ಧವು ನನ್ನನ್ನು ಕ್ಯಾಪ್ಟನ್ ಬ್ರಿಜೇಶ್ ಚೌಟನನ್ನಾಗಿ ಮಾಡಿತು. ಇಂದು ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನಲ್ಲಿ ಮಾಜಿ ಸೈನಿಕನಾಗಿ ಆಸೀನನಾಗುವ ಗೌರವ ಲಭಿಸಿದೆ. ಈ ಪ್ರಯಾಣವನ್ನು ಸಾಧ್ಯವಾಗಿಸಿದ್ದಕ್ಕಾಗಿ ನಮ್ಮ ಎಲ್ಲ ಹುತಾತ್ಮ ಯೋಧರಿಗೆ ತಲೆಬಾಗಿ ನಮಿಸುತ್ತೇನೆ. ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ಥಾನ ಸೇನೆಯನ್ನು ಹಿಮ್ಮಟ್ಟಿಸಿದ ಭಾರತೀಯ ಸೇನೆಯ ಪರಾಕ್ರಮಕ್ಕೆ ಈಗ 25 ವರ್ಷಗಳು ಪೂರ್ಣಗೊಂಡಿವೆ. ಭಾರತದ ಸೇನಾ ಶಕ್ತಿ ಮತ್ತು ಯೋಧರ ಪರಾಕ್ರಮವನ್ನು ಹಾಗೂ ಪಾಕಿಸ್ಥಾನದ ದುಷ್ಕೃತ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟ ಕಾರ್ಗಿಲ್ ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಧೀರರಿಗೆ ಗೌರವ ನಮನ ಸಲ್ಲಿಸಬೇಕಾದುದು ಪ್ರತಿಯೋರ್ವ ಭಾರತೀಯನ ಆದ್ಯ ಕರ್ತವ್ಯ.
ಪಾಕಿಸ್ಥಾನ ಆಗಿನ ಪ್ರಧಾನಿ ನವಾಜ್ ಶರೀಫ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಲಾಹೋರ್‌ಗೆ ಐತಿಹಾಸಿಕ ಬಸ್ ಪ್ರಯಾಣ ಕೈಗೊಂಡ ಮೂರು ತಿಂಗಳೊಳಗೆ ಮತ್ತು ಲಾಹೋರ್ ಘೋಷಣೆಗೆ ಸಹಿ ಹಾಕಿದ ತರುವಾಯ ನಡೆದ ಈ ಯುದ್ಧ, ನಾವು ಸ್ವಾತಂತ್ರ್ಯದ ಬಳಿಕ ಅದಾಗಲೇ ನಾಲ್ಕು ಯುದ್ಧಗಳಲ್ಲಿ ಹೋರಾಡಿದ್ದ ನೆರೆಯ ಪಾಕಿಸ್ಥಾನ ಎಂದಿಗೂ ನಂಬಿಕೆಗೆ ಅರ್ಹನಲ್ಲ ಎಂಬ ಸತ್ಯದ ಅರಿವು ಮಾಡಿಸಿತ್ತು. ಇದು ನಾವು ಕಲಿತ ಅತ್ಯಂತ ದುಬಾರಿ ಪಾಠವಾಗಿತ್ತು.
1999ರ ಮೇ 3ರಂದು, ಒಳನುಸುಳುವಿಕೆಗಳನ್ನು ಪತ್ತೆಹಚ್ಚಲಾಯಿತು. ಮೇ 26ರಂದು, ಭಾರತೀಯ ವಾಯುಪಡೆ ತನ್ನ ಮೊದಲ ಏರ್-ಟು-ಗ್ರೌಂಡ್ ಸ್ಟ್ರೈಕ್ ಅನ್ನು ಪ್ರಾರಂಭಿಸಿತು, ಅನಂತರ ಭಾರತೀಯ ಭೂಪ್ರದೇಶದಿಂದ ಒಳನುಸುಳುಕೋರರನ್ನು ಹೊರಹಾಕಲು ಭಾರತೀಯ ಸೇನೆಯ “ಆಪರೇಷನ್ ವಿಜಯ್’ ಮತ್ತು ನೌಕಾಪಡೆಯಿಂದ “ಆಪರೇಷನ್ ತಲ್ವಾರ್’ ಕೈಗೊಳ್ಳಲಾಯಿತು. ಎರಡು ತಿಂಗಳ ತೀವ್ರ ಸಂಘರ್ಷದ ಅನಂತರ, 1999ರ ಜುಲೈ 26ರಂದು ಭಾರತ ತನ್ನ ವಿಜಯ ಪತಾಕೆಯನ್ನು ಹಾರಿಸಿತು.
ಇದು ಟಿವಿ ಸಹಿತ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಂಡ ಮೊದಲ ಯುದ್ಧವೂ ಆಗಿತ್ತು.ಸಮುದ್ರ ಮಟ್ಟದಿಂದ 18,000 ಅಡಿಗಳಷ್ಟು ಎತ್ತರದಲ್ಲಿ ನಡೆಯುತ್ತಿದ್ದ ಸಮರವನ್ನು ಮಾಧ್ಯಮಗಳು ಸಾಮಾನ್ಯ ಜನರ ಹೃದಯದವರೆಗೆ ತಂದಿದ್ದವು. ಈ ಕಾರಣದಿಂದಾಗಿಯೇ ಭಾರತೀಯರಲ್ಲಿ ಸ್ವಾತಂತ್ರ್ಯದ ಅನಂತರ ಈ ಯುದ್ಧದಷ್ಟು ತೀವ್ರವಾದ ರಾಷ್ಟ್ರೀಯತೆಯ ಭಾವನೆಗಳನ್ನು ಬೇರೆ ಯಾವುದೇ ಯುದ್ಧವು ಹುಟ್ಟುಹಾಕಿರಲಿಲ್ಲ.
1999ರ ಅಕ್ಟೋಬರ್‌ನಲ್ಲಿ ಚುನಾವಣೆಯನ್ನು ಎದುರಿಸಲಿದ್ದ ಪ್ರಧಾನಿ ವಾಜಪೇಯಿ ನೇತೃತ್ವದ ಹಂಗಾಮಿ ಸರಕಾರವಾಗಿದ್ದರೂ, ಕಾರ್ಗಿಲ್ ಬಿಕ್ಕಟ್ಟನ್ನು ಗಡಿಯಲ್ಲಿ ದೃಢ ಸಂಕಲ್ಪದಿಂದ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚಾಣಾಕ್ಷ ರಾಜತಾಂತ್ರಿಕತೆಯಿಂದ ನಿಭಾಯಿಸಿತು.
ನಮ್ಮ ಕೆಚ್ಚೆದೆಯ ಸಹೋದರರ ಬಲಿದಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಕಠಿನ ಮತ್ತು ನಿರ್ದಾಕ್ಷಿಣ್ಯ ನೀತಿಯನ್ನು ನಾವು ದಶಕಗಳ ಹಿಂದೆಯೇ ಅಳವಡಿಸಿಕೊಳ್ಳಬೇಕಿತ್ತು. ಆದರೆ ಇಂತಹ ಕಠೊರ ನಿಲುವನ್ನು ತಾಳುವಲ್ಲಿ ನಮ್ಮನ್ನಾಳುವವರು ಎಡವಿದರು.
ಈ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ನೀಡಿದವರಿಗೆ ನಿಜವಾದ ಗೌರವವನ್ನು ನೀಡಲು 2014ರಲ್ಲಿ ನರೇಂದ್ರ ಮೋದಿ ಅವರ ನಾಯಕತ್ವದ ಸರಕಾರ ಅಧಿಕಾರಕ್ಕೆ ಬರಬೇಕಾಯಿತು. ಕಳೆದೊಂದು ದಶಕದಿಂದೀಚೆಗೆ ಪಾಕಿಸ್ಥಾನದ ಇಂತಹ ಷಡ್ಯಂತ್ರ, ಕ್ರೂರತೆಯ ವಿರುದ್ಧ ಹಾಲಿ ಸರಕಾರ ಅತ್ಯಂತ ಬಿಗಿ ನಿಲುವನ್ನು ತಳೆದಿರುವುದೇ ಅಲ್ಲದೆ ಪ್ರತೀಕಾರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪಾಕಿಸ್ಥಾನಿ ಸೇನೆಯ ಎಲ್ಲ ಕುಟಿಲ ತಂತ್ರಗಾರಿಕೆಯನ್ನು ವಿಫಲಗೊಳಿಸುತ್ತಲೇ ಬಂದಿದೆ. ಇಂತಹ ಕೆಚ್ಚೆದೆಯ ನಿಲುವನ್ನು ತನ್ನದಾಗಿಸಿಕೊಂಡಿರುವ ಸರಕಾರದ ಭಾಗವಾಗಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ.
ರಕ್ಷಣ ಪಡೆಗಳ ಮುಖ್ಯಸ್ಥ (ಸಿಡಿಎಸ್)ರನ್ನು ನೇಮಿಸುವುದರಿಂದ ಹಿಡಿದು ಮಿಲಿಟರಿಯ ಆಧುನೀಕರಣದ ಕಡೆಗೆ ದಾಪುಗಾಲುಗಳನ್ನು ಇರಿಸಲಾಗಿದೆ. ಮೇಕ್ ಇನ್ ಇಂಡಿಯಾ ಮತ್ತು ಈಸ್ ಆಫ್ ಡೂಯಿಂಗ್ ಬಿಸಿನೆಸ್ ಕಾರಣದಿಂದ ನಮ್ಮ ರಕ್ಷಣ ರಫ್ತು 2023-24ರಲ್ಲಿ ಸಾರ್ವಕಾಲಿಕ ಗರಿಷ್ಠ 21,083 ಕೋಟಿ ರೂ.ಗಳನ್ನು ತಲುಪಿದೆ. ಇದಲ್ಲದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತೀ ವರ್ಷ ದೀಪಾವಳಿಯನ್ನು ಸೈನಿಕರ ಜತೆ ಆಚರಿಸುತ್ತಾ ಬರುತ್ತಿದ್ದು ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಗಿಲ್ ವಿಜಯ್ ದಿನದ 25ನೇ ವರ್ಷ ಪೂರ್ಣಗೊಂಡ ಜುಲೈ 26ರಂದು ಪ್ರಧಾನಿಯವರು ದ್ರಾಸ್‌ನಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ನೀಡಿದವರಿಗೆ ಸೂಕ್ತ ಗೌರವ ಸಲ್ಲಿಸಿದ್ದಾರೆ. ಈ ಭೇಟಿಯು ಯೋಧರಿಗೆ, ಅವರ ಕುಟುಂಬಗಳಿಗೆ ಮತ್ತು ರಾಷ್ಟ್ರಕ್ಕೆ ಅವರು ಮಾಡಿದ ತ್ಯಾಗವನ್ನು ನಾವು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇವೆ ಹಾಗೂ ಅವರ ಕೊಡುಗೆ, ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದನ್ನು ಖಾತರಿ ಪಡಿಸುತ್ತದೆ. ಮತ್ತೊಮ್ಮೆ ನನ್ನೆಲ್ಲ ಹುತಾತ್ಮ ಸಹೋದರರಿಗೂ ನನ್ನ ಪ್ರಣಾಮಗಳು. ಜೈ ಹಿಂದ್.
-ಕ್ಯಾ| ಬ್ರಿಜೇಶ್ ಚೌಟ,
ಸಂಸದ, ದಕ್ಷಿಣ ಕನ್ನಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.