ನೈತಿಕ ದಿವಾಳಿಯತ್ತ ನಮ್ಮ ರಾಜ ನೀತಿ
Team Udayavani, Jun 13, 2023, 6:24 AM IST
ರಾಜಕಾರಣದ ವರ್ತಮಾನದ ಬೆಳವಣಿಗೆ ವಿಕ್ಷಿಪ್ತ ಮಜಲಿಗೆ ಹೊರಳಿದೆ. ಕಂಡು ಕೇಳರಿಯದ ಉಚಿತ ಕೊಡುಗೆಗಳನ್ನು ಹಂಚುವ ವಿಪರ್ಯಾಸದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಹೀಗೂ ಉಂಟೆ? ಎಂದು ಬೆರಗುಗಣ್ಣಿನಿಂದ ಪರಮ ಅಚ್ಚರಿಯಲ್ಲಿ ಉದ್ಗರಿಸುವ ಸರದಿ ನಮ್ಮ ಜನಮನದ್ದು. ಬೆವರು ಸುರಿಸದೆ ಕೂತು ಉಣ್ಣುವ ಕಾಲವೊಂದು ಬರಬಹುದು ಎನ್ನುವ ಊಹನಾತೀತ ಕಲ್ಪನೆ ಸಾಕಾರಗೊಂಡಿದೆ. ರಾಮರಾಜ್ಯದ ಆದರ್ಶದ ಪರಿಕಲ್ಪನೆ ಯಲ್ಲಿ ರಾಷ್ಟ್ರಕಟ್ಟುವ ಸ್ವಾತಂತ್ರೊತ್ತರ ಆಶಯಗಳು ಹರಿದು ಹಂಚಾಗಿ ಹೋದಂತೆ ಭಾಸವಾಗುತ್ತಿದೆ. ಸ್ವರಾಜ್ಯಕ್ಕಾಗಿ ನಡೆದ ಹೋರಾಟದ ಆತ್ಯಂತಿಕ ಕ್ಷಣಗಳಲ್ಲಿ ಕಣ್ಣ ಮುಂದೆ ತೇಲುತ್ತಿದ್ದದ್ದು ಉದಾತ್ತ ಆಡಳಿತ ಸೂತ್ರದ ಪ್ರಜೆಗಳ ಪ್ರಭುತ್ವ.
ಬರಬರುತ್ತಾ ಅದೇ ಪ್ರಭುತ್ವ ತಮ್ಮ ಆಳ್ವಿಕೆ ಪುನರಾವರ್ತನೆ ಯಾಗಬೇಕೆಂಬ ಉತ್ಕಟತೆಯಿಂದ ಜನಪ್ರಿಯ ಪ್ರಣಾಳಿಕೆಗೆ ಜೋತು ಬಿದ್ದದ್ದು ಕಣ್ಣೆದುರಿನ ಸತ್ಯ. ಹೆಚ್ಚಿನ ರಾಜಕೀಯ ಪಕ್ಷಗಳು ಬೇಕಾಬಿಟ್ಟಿ ಯಾಗಿ ವರ್ತಿಸಿ ಬಿಟ್ಟಿ ಭಾಗ್ಯಗಳ ಮೆರವಣಿಗೆ ನಡೆಸಿದವು. ಸೈದ್ಧಾಂತಿಕ ವಾಗಿ, ನೈತಿಕವಾಗಿ, ಸಾಮಾಜಿಕವಾಗಿ ಹೊಸ ಪೀಳಿಗೆಗೆ ಉತ್ತರ ದಾಯಿತ್ವ ಹೊಂದಿರಬೇಕಾದ ರಾಜಕೀಯ ಪಕ್ಷಗಳ ದೊಂಬರಾಟ ಮುಂದಿನ ಜನಾಂಗಕ್ಕೆ ಕೇವಲ ಪ್ರಶ್ನೆಯನ್ನು ಮಾತ್ರ ಉಳಿಸಿಬಿಟ್ಟವು.
ಚುನಾವಣೆಯ ಹೊತ್ತಿನಲ್ಲಿ ಚುನಾವಣ ಆಯೋಗ ನೀತಿ ಸಂಹಿತೆ ಘೋಷಣೆ ಮಾಡುವ ಮೂಲಕ ಎಲ್ಲ ಸರಕಾರಿ ಕೆಲಸಕಾರ್ಯಗಳು ಸ್ತಬ್ಧವಾಗುತ್ತವೆ. ಜನಸಾಮಾನ್ಯ ಅಸಹಾಯಕನಾಗಿ ಮುಂದಿನ ಸರಕಾರ ರಚನೆಯ ತನಕ ನಿಸ್ಸಹಾಯಕನಾಗಿ ಕಾಯುತ್ತಾನೆ. ಚುನಾವಣೆಗೆ ಮುನ್ನ ಹಣ, ಹೆಂಡ ಹಂಚಿದರೆ ಅದು ಚುನಾವಣ ಅಕ್ರಮ. ಈಗ ಮತ ನೀಡಿ ಅಧಿಕಾರಕ್ಕೆ ತನ್ನಿ, ನಾಳೆ ಅದನ್ನೆಲ್ಲ ಹಂಚುತ್ತೇವೆ ಎಂದು ಭರವಸೆ ನೀಡಿ ಅನಂತರ ಮಾಡಿದರೆ ಅದು ಚುನಾವಣ ಅಕ್ರಮ ಎನಿಸಿಕೊಳ್ಳುವುದಿಲ್ಲ. ಎಂತಹ ಚೋದ್ಯ ನೋಡಿ, ಇದು ನಮ್ಮ ವ್ಯವಸ್ಥೆಯ ಆತ್ಯಂತಿಕ ಸೋಲಲ್ಲವೆ…?
ಕಾರ್ಯಾಂಗ, ಶಾಸಕಾಂಗಗಳ ಮೇಲೆ ಸ್ಥಾಪಿತವಾದ ಅಧಿಕಾರ ನ್ಯಾಯಾಂಗಕ್ಕೆ ಇದೆ. ಅದು ಸಂದರ್ಭೋಚಿತ ಮತ್ತು ಜನಹಿತ ತೀರ್ಮಾನ ಮಾಡುತ್ತದೆ ಎಂದು ಚಿಕ್ಕವರಿದ್ದಾಗ ಶಾಲಾ ಪುಸ್ತಕದಲ್ಲಿ ಓದಿದ ನೆನಪು. ಪ್ರಸ್ತುತ ಬೆಳವಣಿಗೆಗಳನ್ನು ನೋಡಿದರೆ ತೆರಿಗೆ ಕಟ್ಟುವ, ಸಂವಿಧಾನವನ್ನು ಒಪ್ಪುವ, ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುವ, ಸ್ವಸ್ಥ ಸಮಾಜದ ಭಾಗವಾಗಿಯೇ ಬದುಕಬೇಕೆಂದು ಬಯಸುವವರ ಬೆವರ ಹನಿಗೆ ಮೌಲ್ಯವಿಲ್ಲ, ಶ್ರದ್ಧೆಯ ತೆರಿಗೆ ಪಾವತಿಗೆ ಕಿಮ್ಮತ್ತಿಲ್ಲ, ಅಂತರಂಗಿಕ ಭಾವಗಳಿಗೆ ಮನ್ನಣೆಯಿಲ್ಲ, ಅನವರತ ಪಡುವ ಬವಣೆಗಳಿಗೆ ಕೊನೆಯಿಲ್ಲ.
ಯಾಕೆ? ಇದು ಪ್ರಜಾಪ್ರಭುತ್ವ, ಯಾವ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಬದುಕು ಕಟ್ಟಿಕೊಳ್ಳಬೇಕು ಎನ್ನುವುದನ್ನು ನಮ್ಮ ಮಕ್ಕಳಿಗೆ ಪ್ರಕೃತ ರಾಜಧರ್ಮ ಬೋಧಿಸ ಹೊರಟಿದೆ? ಯಾಕಾಗಿ ಓದಬೇಕು, ಯಾವ ಸಾಧನೆಗಾಗಿ ಕೆಲಸ ಮಾಡಬೇಕು, ದುಡಿಮೆ ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸತೊಡಗಿದರೆ ನಿರುತ್ತರರಾಗುವವರು ಯಾರು? ಯಾರದ್ದು ಈ ಎಲ್ಲ ಅಪಸವ್ಯಗಳ ಉತ್ತರದಾಯಿತ್ವ? ಪ್ರಲೋಭನೆ, ಪ್ರಚೋದನೆ ಮತ್ತು ಆಮಿಷಗಳ ಗಾಳದಲ್ಲಿ ಸಿಲುಕದ ಮನವುಂಟೆ? ಮೂಲತಃ ಮಾನವನ ಸಹಜ ಗುಣ ಆಮಿಷಕ್ಕೆ ಬಲಿ ಬೀಳುವುದು. ಇದು ಒಂದು ರೀತಿಯ ರುಷುವತ್ತು ತಾನೇ.
ಪ್ರಜಾಪ್ರಭುತ್ವದಲ್ಲಿ ದೇಶದ ಕಟ್ಟಕಡೆಯ ಪ್ರಜೆಯ ಜೀವನದ ಸರ್ವಾಂಗ ಕ್ಷೇಮವನ್ನು ಕಾಪಿಡುವಲ್ಲಿ ತ್ರಿಕರಣಶುದ್ಧರಾಗಿ, ಕಟಿಬದ್ಧರಾಗಿ ದುಡಿಯಬೇಕಾದ ಕೈಂಕರ್ಯ ಚುನಾಯಿತ ಪ್ರತಿನಿಧಿಗಳದ್ದು ಅಲ್ಲವೇ? ಗ್ರಾಮೀಣ ಜನರ ಬದುಕು ಬವಣೆ, ಕಷ್ಟ ಕಾರ್ಪಣ್ಯಗಳನ್ನು ಅರಿತು ಜನಪರವಾದ ರೀತಿಯಲ್ಲಿ ದೂರಗಾಮಿ ಫಲ ನೀಡುವ ಕಾರ್ಯದಲ್ಲಿ ತೊಡಗಬೇಕಲ್ಲವೇ? ಜನಪ್ರತಿನಿಧಿಗಳು ಮೊದಲು ಜನರ ಮೂಲಭೂತ ಅನಿವಾರ್ಯ ಅಗತ್ಯತೆಗಳಿಗೆ ಕಿವಿಯಾಗಬೇಕು, ಜನತೆಯ ದೂರು ದುಮ್ಮಾನಗಳಿಗೆ ಸಕಾಲಿಕವಾಗಿ ಸ್ಪಂದಿಸಬೇಕು, ಆ ಸ್ಪಂದನೆ ಜನರ ಜೀವನಮಟ್ಟವನ್ನು ಉನ್ನತೀಕರಿಸಬೇಕು.
ತರಹೇವಾರಿ ಸರ್ವೇ ನಡೆಸುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಡಾಕ್ಟರೆಟ್ ಮಾಡಿವೆಯಲ್ಲ, ಒಮ್ಮೆ ಸರ್ವೇ ಮಾಡಿಬಿಡಲಿ ನೋಡೋಣ ನಮ್ಮ ನಗರ, ಗ್ರಾಮೀಣ, ಪಟ್ಟಣವಾಸಿಗಳ ನಾಡಿ ಮಿಡಿತವನ್ನು. ಅದು ಚುನಾವಣಾತೀತ, ಪಕ್ಷಾತೀತ ಮತ್ತು ಪೂರ್ವಗ್ರಹ ಇಲ್ಲದ ಪಾರದರ್ಶಕ, ಜನಪರ ಕಾಳಜಿ ಕಳಕಳಿಯ ಸರ್ವೇಯಾಗಿರಲಿ. ಅಧ್ಯಯನ ಮಾಡಿ ಅವರ ಅಂತರಂಗದ ದುಃಖ-ದುಮ್ಮಾನ, ನೋವು-ನಿಟ್ಟುಸಿರು, ಒದ್ಧಾಟ-ನರಳಾಟ ವನ್ನು. ಗ್ರಾಮ ಪಂಚಾಯತ್‌ನಿಂದ ಹಿಡಿದು ಸರಕಾರದ 42ಕ್ಕೂ ಹೆಚ್ಚು ಇಲಾಖೆಗಳಲ್ಲಿ ಪ್ರತೀ ಹಂತದಲ್ಲೂ ಅಡಿಗಡಿಗೆ ಎದುರಿಸುವ ಕಷ್ಟಕೋಟಲೆಗಳನ್ನು ಸರ್ವೇ ಮಾಡಲಿ.
ಎಲ್ಲೆಲ್ಲಿ ಹೇಗೆ ಕೆಲಸ ಆಗುತ್ತದೆ ಎಂದು ನೋಡಲಿ. ಜನರನ್ನು ಕಾಡಿಸುವ, ಪೀಡಿಸುವ ಸಿಬಂದಿ, ಅಧಿಕಾರಿಗಳ ಪಟ್ಟಿ ಮಾಡಿ. ಅವರವರ ಕಚೇರಿಯಲ್ಲಿ ನಿರ್ದಿಷ್ಟ ಸ್ಥಾನಗಳಿಗೆ ನೇಮಕಾತಿ ಆಗಿದೆಯಾ ಎಂದು ತಿಳಿಯಿರಿ. ಸಕಾಲ ಎಂದು ತೂಗುಹಾಕಿದ ಬೋರ್ಡಿನಂತೆ ಒಂದಾದರೂ ಕೆಲಸವಾಗುತ್ತಾ ಎಂದು ಜನರಿಂದ ಕೇಳಿನೋಡಲಿ. ಸಿಬಂದಿಯಿಲ್ಲ, ಡೆಪ್ಯೂಟೇಶನ್ ಡ್ನೂಟಿ, ಮೀಟಿಂಗ್, ಬಾಸ್ ಬಂದಿದಾರೆ… ಹೀಗೆ ಹತ್ತಾರು ಸಬೂಬುಗಳನ್ನು ಹೇಳುತ್ತಾರಲ್ಲ, ನಿಜವೇ ಪರೀಕ್ಷಿಸಿ. ಬುನಾದಿಯಿಂದ ಭವನವನ್ನು ನಿರ್ಮಿಸ ಬಹುದೇ ವಿನಾ ಮೇಲೆ ಕೂಳಿತು ತಮ್ಮ ಮೂಗಿನ ನೇರಕ್ಕೆ ಅಳತೆ ಮಾಡುವುದಲ್ಲ. ಆಗಲಿ ಒಮ್ಮೆ ಇಂತಹ ಸರ್ವೇ ಸರಕಾರಿ ಖರ್ಚಿ ನಲ್ಲಿ, ಆಡಳಿತ ಪಕ್ಷದ ಮುಂದಾಳತ್ವದಲ್ಲಿ, ವಿಪಕ್ಷದ ಸಂಪೂರ್ಣ ಸಹಕಾರದಲ್ಲಿ, ನಾವು ನಿಮ್ಮೊಂದಿಗೆ ಹೆಗಲು ಕೊಡುತ್ತೇವೆ. ಇದು ಜರೂರಾಗಿ ಜಾರಿಯಾಗಬೇಕಾದ ತಲಸ್ಪರ್ಶಿ ಅಧ್ಯಯನ ಮತ್ತು ಪರಿಹಾರೋಪಾಯ ಕ್ರಮ, ಉಚಿತದ ಖಚಿತತೆಯಲ್ಲ.
ಒಟ್ಟಾರೆ ಆನೆ ಇಟ್ಟಿದ್ದೇ ಹೆಜ್ಜೆ ನಡೆದಿದ್ದೇ ದಾರಿ ಎಂಬಂತಾಗಿದೆ ಸರಕಾರ ನಡೆಸುವವರ ನಡೆ. ತಪ್ಪನ್ನು ತಪ್ಪು ಎಂದು ಗಟ್ಟಿ ಸ್ವರದಲ್ಲಿ ಹೇಳುವವರಿಲ್ಲದ ನಮ್ಮ ನಿಷ್ಕ್ರಿಯತೆ, ಉಡಾಫೆ ಮತ್ತು ಉದಾಸೀನತೆ ಮುಂದಿನ ಪೀಳಿಗೆಗೆ ನಾವೆಸಗುವ ದ್ರೋಹ. ಆಡಳಿತ ಎಂದರೇನು ಎನ್ನುವ ಮೂಲ ಪ್ರಶ್ನೆಯನ್ನು ಎದುರಿಗಿಟ್ಟು ಕೊಂಡು ಯೋಚಿಸಬೇಕು. ಇರುವ ವ್ಯವಸ್ಥೆಯನ್ನು ಸಮಂಜಸ ವಾಗಿ ನಿಭಾಯಿಸುವ ಪ್ರಕ್ರಿಯೆ ಒಂದಾದರೆ ಅದನ್ನು ಇನ್ನೂ ಹತ್ತು ಹಲವು ಮಜಲುಗಳಲ್ಲಿ ಮೇಲ್ದರ್ಜೆಗೇರಿಸುವುದು ಹೇಗೆಂಬ ಯೋಜನೆ-ಯೋಚನೆ ಇನ್ನೊಂದು.
ಜನಬಯಸುವುದು ಇದನ್ನೇ ಹೊರತು ಕ್ಷಣಿಕ ಲಾಲಸೆಗಳನ್ನಲ್ಲ. ಹೀಗಾದಲ್ಲಿ ಪ್ರತಿಯೊಬ್ಬ ಪ್ರಜೆ ಯ ನೆಮ್ಮದಿ ಮರಳುತ್ತದೆ, ನಿಟ್ಟುಸಿರು ಮಾಯವಾಗುತ್ತದೆ, ಜೀವನ ಸರಳವಾಗುತ್ತದೆ ಮತ್ತು ಸಂತೃಪ್ತ ಜನಗಳ ಹರಕೆ- ಹಾರೈಕೆಯಿಂದ ರಾಜ್ಯ ಸುಭಿಕ್ಷವಾಗುತ್ತದೆ. ಅಖಂಡ ರಾಷ್ಟ್ರ ನಿರ್ಮಾಣ, ನಿರ್ವಹಣೆ, ಬೆಳವಣಿಗೆ ಮತ್ತು ನಿಯಂತ್ರಣ ಮಾಡು ವಾಗಿನ ಎಚ್ಚರ ಎಷ್ಟಿರಬೇಡ, ಮಕ್ಕಳಾಟಿಕೆ ಅಲ್ಲವಲ್ಲ. ಬೇರು ಗಟ್ಟಿ ಯಾಗಿದ್ದರೆ ಮಾತ್ರ ವೃಕ್ಷ ವಿಶಾಲವಾಗಿ ಆಕಾಶದಲ್ಲಿ ಕೊಂಬೆಗಳನ್ನು ಚಾಚುತ್ತದೆ. ಹಾಗಾಗಿ ಬೇರಿಗೆ ಬೇಕಾದದ್ದನ್ನೆಲ್ಲವನ್ನು ಕೊಟ್ಟು ಗಟ್ಟಿ ಮಾಡಬೇಕೆ ವಿನಾ ತಲೆಯ ಎಲೆಗಳಿಗೆ ನೀರು ಚಿಮುಕಿಸುವುದಲ್ಲ.
ಜನರ ನಿರೀಕ್ಷೆ ದೊಡ್ಡದಿಲ್ಲ. ದುಡಿದು ತಿನ್ನಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ, ಕೌಶಲ ವೃದ್ಧಿಯಲ್ಲಿ, ನೌಕರಿಗೆ ಅರ್ಹತೆ ಗಿಟ್ಟಿಸುವಲ್ಲಿ, ಜೀವನ ಮಟ್ಟ ಸುಧಾರಣೆಗೆ ದಾರಿ ಕಲ್ಪಿಸಲು ಸರಕಾರ ನೆರವಾಗಬೇಕು. ಸ್ವಾಭಿಮಾನಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಯುವಕರಿಗೆ ಸಹಾಯಧನ ನೀಡಲಿ. ಆದರೆ ಜನರನ್ನು ಉಚಿತಗಳ ಆಸೆ, ಲಾಲಸೆಗಳ ಕೆಸರಿನಲ್ಲಿ ಕೆಡಹಿ ಭ್ರಷ್ಟರನ್ನಾಗಿ ಮಾಡಬೇಡಿ. ದುಷ್ಟ ವ್ಯವಸ್ಥೆಯ ಹರಿಕಾರರಾಗಬೇಡಿ. ಆದರೆ ನಮಗೆ ನೆನಪಿರಬೇಕು…
ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ ನ ಕ್ಷೀಯತೇ ಕರ್ಮಮ್ ಕಲ್ಪಕೋಟಿ ಶತೈರಪಿ…
ಡಾ| ಬುಡ್ನಾರು ವಿನಯಚಂದ್ರ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.