ಪದ್ಮಪುರಸ್ಕೃತರ ಸ್ಫೂರ್ತಿದಾಯಕ ಹೆಜ್ಜೆ
Team Udayavani, Jan 27, 2019, 2:24 AM IST
ಗಣರಾಜ್ಯೋತ್ಸವಕ್ಕೂ ಮುನ್ನಾದಿನ ಕೇಂದ್ರ ಸರ್ಕಾರ ಪದ್ಮ ಗೌರವ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಾಲ್ಕು ಮಂದಿಗೆ ಪದ್ಮ ವಿಭೂಷಣ, 14 ಮಂದಿಗೆ ಪದ್ಮ ಭೂಷಣ ಮತ್ತು 94 ಗಣ್ಯರಿಗೆ ಪದ್ಮ ಶ್ರೀ ಗೌರವ ನೀಡಲಾಗಿದೆ. ನಿಸ್ಸಂಶಯವಾಗಿಯೂ ಪ್ರತಿಯೊಬ್ಬರೂ ಈ ಗೌರವಕ್ಕೆ ಅರ್ಹರೇ. ಆದರೂ ಈ ಬಾರಿ ಕೆಲವು ಸಾಧಕರು ವಿಶಿಷ್ಟ ಕಾರಣಗಳಿಂದ ಗಮನ ಸೆಳೆಯುತ್ತಿದ್ದಾರೆ…ಅಂಥ ಆಯ್ದ ಕೆಲವು ಸಾಧಕರ ಬದುಕಿನ ಹಾದಿಯ ಒಂದು ಹಿನ್ನೋಟ…
ಭಾರತೀಯರ ರಕ್ಷಣೆಗೆ ಸಹಾಯ ಮಾಡಿದ್ದ ಅಧ್ಯಕ್ಷ
ಜಿಬೊತಿಯ ಅಧ್ಯಕ್ಷ ಇಸ್ಮಾಯಿಲ್ ಓಮರ್ ಗ್ವೆಲ್ಲೆಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. 2015ರಲ್ಲಿ ಯುದ್ಧಪೀಡಿತ ಯೆಮೆನ್ ರಾಷ್ಟ್ರದಿಂದ 5,000 ಭಾರತೀಯರನ್ನು ರಕ್ಷಿಸಿದ ಆಪರೇಷನ್ ‘ರಾಹತ್’ಗೆ ಇಸ್ಮಾಯಿಲ್ ತಮ್ಮ ದೇಶದ ಪೂರ್ಣ ಬೆಂಬಲ ನೀಡಿದ್ದರು. ಏಪ್ರಿಲ್ 3, 2015ರಂದು ಆರಂಭಗೊಂಡ ಆಪರೇಷನ್ ರಾಹತ್‌ನಲ್ಲಿ ಭಾರತೀಯ ವಾಯುಸೇನೆ ಮತ್ತು ಏರ್ ಇಂಡಿಯಾಗೆ ಇಸ್ಮಾಯಿಲ್ ಸರ್ಕಾರ ಸಹಾಯ ಮಾಡಿತ್ತು. ಒಂದರ್ಥದಲ್ಲಿ ಈ ಕಾರ್ಯಾಚರಣೆಯಲ್ಲಿ ಅವರು ಭಾರತದ ಪಾಲಿಗೆ ಬಹುದೊಡ್ಡ ಶಕ್ತಿಯಾದರು. ಅಕ್ಟೋಬರ್ 2015ರಂದು ಭಾರತ-ಆಫ್ರಿಕಾ ಶೃಂಗದಲ್ಲಿ ಭಾಗವಹಿಸಲು ನವದೆಹಲಿಗೆ ಬಂದ ಇಸ್ಮಾಯಿಲ್‌ರಿಗೆ ನಮ್ಮ ದೇಶದಿಂದ ಭಾರೀ ಸ್ವಾಗತ ದೊರೆತಿತ್ತು. ಸದ್ಯಕ್ಕೆ ಯೆಮೆನ್‌ನಲ್ಲಿನ ಭಾರತದ ದೂತವಾಸ ಕಚೇರಿಯನ್ನು ಜಿಬೊತಿಗೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಭಾರತೀಯ ರಾಯಭಾರ ಕಚೇರಿಯ ರಕ್ಷಣೆಗೆ ಇಸ್ಮಾಯಿಲ್ ಸರ್ಕಾರ ಹೆಚ್ಚು ಗಮನ ನೀಡುವ ಭರವಸೆ ನೀಡಿದ್ದು, ನುಡಿದಂತೆ ನಡೆಯುತ್ತ್ತಿದೆ.
ಕಷ್ಟದಲ್ಲೇ ಅರಳಿದ ಬದುಕು
62 ವರ್ಷದ ಪಾಂಡವಾನಿ ಗಾಯಕಿ ತೀಜನ್ ಬಾಯಿ ಅವರು ಪ್ರತಿಷ್ಠಿತ ಪದ್ಮವಿಭೂಷಣ ಪಡೆಯಲಿದ್ದಾರೆ. ವಿಶೇಷವೆಂದರೆ, ಇದು ಛತ್ತೀಸ್‌ಗಢ ರಾಜ್ಯದವರಿಗೆ ಸಿಗಲಿರುವ ಮೊದಲ ಪದ್ಮ ವಿಭೂಷಣ ಪ್ರಶಸ್ತಿಯೂ ಆಗಿದೆ. ತಮ್ಮ 12ನೇ ವಯಸ್ಸಿಗೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ತೀಜನ್ ಬಾಯಿ 13ನೇ ವಯಸ್ಸಿಗೆ ಮೊದಲ ಪಾಂಡವಾನಿ ಸಂಗೀತ-ನೃತ್ಯ ಪ್ರದರ್ಶನ ನೀಡುತ್ತಾರೆ. ಆ ಕಾಲದಲ್ಲಿ ಹೆಣ್ಣುಮಕ್ಕಳು ಪಾಂಡವಾನಿ (ಪಾಂಡವರ ಕಥೆ) ಹಾಡುವುದು ನಿಷಿದ್ಧವಾಗಿತ್ತು. ಮಹಿಳೆಯರೇನಿದ್ದರೂ ವೇದಮತಿ ಎಂಬ ‘ಕುಳಿತು ಹಾಡುವ’ ಸಂಗೀತವನ್ನು ಮಾತ್ರ ಪ್ರದರ್ಶಿಸಬಹುದಿತ್ತು. ನರ್ತಿಸಿ ಹಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ ತೀಜನ್ ಬಾಯಿ, ಕೆಲವೇ ಸಮಯದಲ್ಲಿ ಛತ್ತೀಸ್‌ಗಢದಲ್ಲಿ ಪ್ರಖ್ಯಾತರಾಗಿಬಿಟ್ಟರು. ದುರಂತವೆಂದರೆ, ಪಾಂಡವಾನಿ ಹಾಡುತ್ತಾರೆಂಬ ಕಾರಣಕ್ಕಾಗಿ ಅವರನ್ನು ಅವರ ಸಮುದಾಯದಿಂದ ಹೊರಹಾಕಲಾಗುತ್ತದೆ. ಗಂಡನ ಮನೆಯವರು ಆಕೆಯಿಂದ ಪೂರ್ಣ ಸಂಬಂಧ ಕಡಿದುಕೊಂಡು ಬಿಡುತ್ತಾರೆ. ಆ ಚಿಕ್ಕ ವಯಸ್ಸಿನಲ್ಲೇ ಗುಡಿಸಲೊಂದು ಕಟ್ಟಿಕೊಂಡು ಬದುಕಲಾರಂಭಿಸುವ ತೀಜನ್ ಬಾಯಿಯವರಿಗೆ ಇದೇ ಪಾಂಡವಾನಿಯೇ ಕೈ ಹಿಡಿಯುತ್ತದೆೆ. ಕೆಲವೇ ಸಮಯದಲ್ಲಿ ಅವರು ಮನೆ ಮಾತಾಗುತ್ತಾರೆ. ಖ್ಯಾತ ನಾಟಕಕಾರ ಹಬೀಬ್ ತನ್ವೀರ್ ಅವರ ತಂಡದ ಭಾಗವಾಗುವ ತೀಜನ್ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಒಲಿದುಬರುತ್ತದೆ. 1987ರಲ್ಲಿ ಪದ್ಮಶ್ರೀ, 2003ರಲ್ಲಿ ಪದ್ಮಭೂಷಣ ಪುರಸ್ಕೃತರಾಗಿದ್ದಾರೆ. ಈಗ ವಿಶ್ವಾದ್ಯಂತ ಪ್ರದರ್ಶನ ನೀಡುತ್ತಿದ್ದಾರೆ.
ಶತಾಯುಷಿ ಅಸಾಮಾನ್ಯ ಯೋಗಿನಿ!
ಈ ಬಾರಿಯ ಪದ್ಮಶ್ರೀ ಪುರಸ್ಕೃತರ ಪಟ್ಟಯಲ್ಲಿ ವಿಶಿಷ್ಟವಾಗಿ ನಿಲ್ಲುವವರೆಂದರೆ 100 ವರ್ಷದ ಅಮೆರಿಕನ್ ಯೋಗ ಗುರು ತಾವೋ ಪೋರ್ಚಾನ್ ಲಿಂಚ್ ಅವರು. ಜಗತ್ತಿನ ಅತಿ ಹಿರಿಯ ಯೋಗ ಗುರು ಎಂಬ ಗರಿಮೆಗೂ ಪಾತ್ರರಾಗಿರುವ ತಾವೋ, ಗಿನ್ನಿಸ್ ವಿಶ್ವ ದಾಖಲೆಯನ್ನೂ ಮಾಡಿದ್ದಾರೆ. ತಾವೋ ಭಾರತೀಯ ಮೂಲದವರು. ಅವರ ತಾಯಿ ಭಾರತೀಯರಾಗಿದ್ದರು, ತಂದೆ ಫ್ರಾನ್ಸ್ ನವರು..ಪಾಂಡಿಚೆರಿಯಲ್ಲಿ ಕೆಲವು ವರ್ಷ ವಾಸಿಸಿ ತಮ್ಮ ಎಂಟನೆಯ ವರ್ಷದಲ್ಲೇ ಯೋಗದತ್ತ ವಾಲಿದರು. ಶ್ರೀ ಅರಬಿಂದೋ ಮತ್ತು ಇಂದ್ರಾದೇವಿಯಂಥ ಮಹಾಮಹಿಮರ ಬಳಿ ಅವರಿಗೆ ಯೋಗ ಶಿಕ್ಷಣ ದೊರೆಯಿತು. ಮಹಾತ್ಮಾ ಗಾಂಧಿಯವರಿಗೂ ತಾವೋರ ಕುಟುಂಬ ಆಪ್ತವಾಗಿತ್ತು ಎನ್ನುವುದು ವಿಶೇಷ. ಎರಡು ಬಾರಿ ಗಾಂಧೀಜಿಯವರ ಯಾತ್ರೆಯಲ್ಲೂ ಪಾಲ್ಗೊಂಡಿದ್ದರು. ನಂತರ ಕುಟುಂಬದೊಂದಿಗೆ ವಿದೇಶಕ್ಕೆ ತೆರಳಿದ ಅವರು ತಮ್ಮ 16ನೇ ವಯಸ್ಸಿನಲ್ಲೇ ಮಾಡೆಲಿಂಗ್ ಆರಂಭಿಸಿ ಪ್ರಖ್ಯಾತಿ ಪಡೆದರು. ತಾವೋ ಹಲವು ಆಂಗ್ಲ ಸಿನೆಮಾಗಳಲ್ಲೂ ನಟಿಸಿದ್ದಾರೆ. ಆದರೆ ಕೊನೆಗೆ ಚಿತ್ರರಂಗವೂ ಸಾಕೆನಿಸಿ, 1967ರಲ್ಲಿ ಯೋಗದತ್ತ ಪೂರ್ಣ ಗಮನ ಹರಿಸಿದರು. ನ್ಯೂಯಾರ್ಕ್‌ನಲ್ಲಿ ಅವರ 5 ಯೋಗ ಶಿಕ್ಷಣ ಸಂಸ್ಥೆಗಳಿವೆ. ತಾವೋ ಅವರ ಅಚ್ಚರಿಯ ಕಥೆ ಇಷ್ಟಕ್ಕೇ ನಿಲ್ಲುವುದಿಲ್ಲ. ತಮ್ಮ 88ನೆಯ ವಯಸ್ಸಿನಲ್ಲಿ ತಾವೋ ಬಾಲ್‌ರೂಮ್ ಎಂಬ ನೃತ್ಯವನ್ನು ಕಲಿಯಲಾರಂಭಿಸುತ್ತಾರೆ. ಅದರಲ್ಲಿ ಪರಿಣತರಾಗಿ ಅನೇಕ ನೃತ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆಲ್ಲುತ್ತಾರೆ, ಕೆಲವು ವರ್ಷಗಳ ಹಿಂದೆ ‘ಅಮೆರಿಕಾಸ್ ಗಾಟ್ ಟ್ಯಾಲೆಂಟ್’ ಕಾರ್ಯಕ್ರಮದಲ್ಲೂ ಸ್ಪರ್ಧಿಸಿ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದಾರೆ. ಒಂದು ವರ್ಷದಿಂದ ನೃತ್ಯಕ್ಕೆ ವಿರಾಮ ನೀಡಿರುವ ಅವರು, ತಮ್ಮ ದೃಷ್ಟಿಯನ್ನು ಈಗ ಯೋಗದತ್ತ ಮತ್ತೆ ಹೊರಳಿಸಿದ್ದು, ನ್ಯೂಯಾರ್ಕ್‌ನಲ್ಲಿ ವಾರಕ್ಕೆ ಆರರಿಂದ ಎಂಟು ತರಗತಿಗಳನ್ನು ನಡೆಸಿಕೊಡುತ್ತಿದ್ದಾರೆ. ಇದಷ್ಟೇ ಅಲ್ಲದೆ, ಯೋಗಾಭ್ಯಾಸದ ಕುರಿತು ಅವರು ಫ್ರೆಂಚ್-ಇಂಗ್ಲಿಷ್ ಭಾಷೆಯಲ್ಲಿ ಬರೆದಿರುವ ಎರಡು ಪುಸ್ತಕಗಳು ಬೆಸ್ಟ್‌ಸೆಲ್ಲರ್‌ಗಳಾಗಿಯೂ ಸದ್ದು ಮಾಡಿದ್ದವು!
ಜನಸಂಖ್ಯೆ ನಿಯಂತ್ರಣದ ಡಾಕ್ಟರ್ ಸಾಹೇಬ್
ಅಸ್ಸಾಂನ ಡಾ. ಇಲಿಯಾಸ್ ಅಲಿ ಅವರು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಲ್ಯಾಪ್ರೋಸ್ಕೋಪಿಕ್ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುವಾಹಟಿ ಮತ್ತು ಉಧಾಬ್ ಭರಾಲಿ ಪ್ರಾಂತ್ಯದಲ್ಲಿ ಇವರು ಹೆಸರುವಾಸಿ. ಸುಮಾರು 40 ಸಾವಿರ ಜನರಿಗೆ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಅಥವಾ ಜನನ ನಿಯಂತ್ರಣ ಮಾರ್ಗೋಪಾಯಗಳನ್ನು ಸೂಚಿಸುವ ಮೂಲಕ ಜನಸಂಖ್ಯೆ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಗೋಸೇವೆಗೆ ಬದುಕು ಮೀಸಲಿಟ್ಟ ಜರ್ಮನ್
ಜರ್ಮನಿ ಮೂಲದ ಫ್ರೆಡ್ರಿಕ್ ಇರಿನಾ ಪದ್ಮಶ್ರೀ ಪಡೆಯಲಿದ್ದಾರೆ. ಸುದೇವಿ ಮಾತಾಜಿ ಎಂದೂ ಪ್ರಖ್ಯಾತರಾಗಿರುವ ಇರಿನಾ ಕಳೆದ ಎರಡು ದಶಕಗಳಿಂದ ಮಥುರಾದಲ್ಲಿ ಬೀಡಾಡಿ ಮತ್ತು ರೋಗಗ್ರಸ್ತ ಹಸುಗಳ ದೇಖರೇಖೀ ಮಾಡುತ್ತಿದ್ದಾರೆ. ಮಥುರಾದಲ್ಲಿ ಅವರೊಂದು ಗೋಶಾಲೆ ಸ್ಥಾಪಿಸಿದ್ದು, ಅಂಧ-ಅನಾಥ ಹಸುಗಳನ್ನು ಸಾಕುತ್ತಿದ್ದಾರೆ. ‘ಸುರ್ಭಾಯಿ ಗೋ ಸೇವಾ ನಿಕೇತನ್’ ಎಂಬ ಅವರ ಗೋಶಾಲೆಯ ನಿರ್ವಹಣೆಗೆ ತಿಂಗಳಿಗೆ ಏನಿಲ್ಲವೆಂದರೂ 22 ಲಕ್ಷ ರೂಪಾಯಿ ಖರ್ಚಾಗುತ್ತದೆ. ಬರ್ಲಿನ್‌ನಲ್ಲಿನ ತಮ್ಮ ಆಸ್ತಿಗಳಿಂದ ಬರುವ ಬಾಡಿಗೆ ಹಾಗೂ ದಾನಿಗಳ ಹಣದ ಮೂಲಕ ಈ ಗೋಶಾಲೆಯನ್ನವರು ನಿರ್ವಹಿಸುತ್ತಿದ್ದಾರೆ.
ಪದ್ಮಶ್ರೀ ಪಡೆದ ಮೊದಲ ತೃತೀಯಲಿಂಗಿ
ತಮಿಳುನಾಡಿನ ಪ್ರಖ್ಯಾತ ಭರತನಾಟ್ಯಂ ಕಲಾವಿದೆ ‘ನರ್ತಕಿ ನಟರಾಜ್’ ಅವರು ಪದ್ಮಶ್ರೀ ಪುರಸ್ಕೃತರಾಗುವ ಮೂಲಕ ಈ ಗೌರವಕ್ಕೆ ಅರ್ಹರಾದ ದೇಶದ ಮೊದಲ ತೃತೀಯಲಿಂಗಿಯಾಗಿದ್ದಾರೆ. 54 ವರ್ಷದ ನರ್ತಕಿ ನಟರಾಜ್ ಅವರು ಮಂದಿರ ನಗರಿ ಮದುರೈನಲ್ಲಿ ಬೆಳೆದವರು. ಪ್ರಖ್ಯಾತ ಭರತನಾಟ್ಯಂ ಕಲಾವಿದ ತಂಜಾವೂರು ಕೆ.ಪಿ. ಕಿಟ್ಟಪ್ಪ ಪಿಳ್ಳೆ„ ಇವರ ಗುರುಗಳು. ಮೊದಲಿನಿಂದಲೂ ನರ್ತಕಿ ನಟರಾಜ್ ಅವರು ಜನರಿಂದ ಹೀಯ್ನಾಳಿಕೆಯನ್ನು ಎದುರಿಸುತ್ತಲೇ ಬಂದರಂತೆ. ಅನೇಕರು ಇವರಿಗೆ ಭರತನಾಟ್ಯಂ ಶಿಕ್ಷಣ ಕೊಡುವುದೇ ತಪ್ಪು ಎಂದು ತಂಜಾವೂರು ಕಿಟ್ಟಪ್ಪ ಅವರಿಗೆ ಹೇಳುತ್ತಿದ್ದರಂತೆ. ಆದರೆ ಗುರುಗಳ ಪ್ರೋತ್ಸಾಹ ಮತ್ತು ಈ ಕಲೆಯ ಬಗೆಗಿನ ಅದಮ್ಯ ಪ್ರೀತಿಯು ಈ ಎಲ್ಲಾ ವಿರೋಧಗಳನ್ನೂ ಮೀರಿ ಬೆಳೆಯಲು ತಮಗೆ ಸಹಾಯ ಮಾಡಿತು ಎನ್ನುತ್ತಾರೆ ಅವರು. ಈಗವರು ತಮ್ಮದೇ ಭರತನಾಟ್ಯಂ ಶಾಲೆಯನ್ನು ನಡೆಸುತ್ತಿದ್ದು, ಅದರಲ್ಲಿ ಅನೇಕ ತೃತೀಯ ಲಿಂಗಿ ವಿದ್ಯಾರ್ಥಿಗಳಿದ್ದಾರೆ ಎನ್ನುವುದು ವಿಶೇಷ.
500 ರೂ. ಗೆ ರೇಬೀಸ್ ಔಷಧ ತಂದರು!
ಹಿಮಾಚಲದ ಡಾ. ಓಮೇಶ್ ಕುಮಾರ್ ಭಾರತಿ ಕಡಿಮೆ ಖರ್ಚಿನಲ್ಲಿ ಸಿಗುವಂಥ ರೇಬೀಸ್ ಔಷಧವನ್ನು ತಯಾರಿಸಿದ ಹೆಗ್ಗಳಿಕೆ ಪಡೆದವರು. 1992ರಲ್ಲಿ ಶಿಮ್ಲಾ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದು ಸರ್ಕಾರಿ ವೈದ್ಯರಾಗಿ ಸೇವೆ ಆರಂಭಿಸಿದ್ದ ಇವರು ಸಾಮಾಜಿಕ ಸೇವೆಗಾಗಿ ತಮ್ಮನ್ನು ಸಮರ್ಪಿಸಿ ಕೊಂಡಿದ್ದಾರೆ. ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ರೇಬೀಸ್ ಔಷಧ ಖರೀದಿಸಲಾಗದ ಸಂಕಷ್ಟಗಳನ್ನು ಕಣ್ಣಾರೆ ನೋಡಿದ ಓಮೇಶ್ ಕುಮಾರ್, ಸ್ವಯಂ ಪ್ರೇರಿತವಾಗಿ ಹೊಸ ಮಾದರಿಯ ಔಷಧ ಸಂಶೋಧನೆಗೆ ಮುಂದಾದರು. ಇದರ ಫಲವಾಗಿ, 35,000 ರೂ.ಗಳಿಗೆ ಸಿಗುತ್ತಿದ್ದ ರೇಬೀಸ್ ಔಷಧ ಕೇವಲ 500 ರೂ.ಗಳಿಗೆ ಸಿಗುವಂತಾಗಿದೆ.
ಮಣಿಪುರದ ಮಿಂಚು
ಮಣಿಪುರದ ಬೊಂಬಾಯ್ಲಾ ದೇವಿ ಬಿಲ್ವಿದ್ಯೆಯಲ್ಲಿ ಖ್ಯಾತಿ ಪಡೆದವರು. ಇವರು ಇಂಫಾಲದಲ್ಲಿ 1985ರ ಫೆ. 22ರಂದು ಜನಿಸಿದರು. 11ನೇ ವಯಸ್ಸಿನಿಂದಲೇ ಬಿಲ್ಲು ವಿದ್ಯೆಯತ್ತ ಆಕರ್ಷಿತರಾಗಿದ್ದ ಇವರು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆದು ವೃತ್ತಿಪರ ಬಿಲ್ಲುಗಾರ್ತಿಯಾಗಿ ಹೊರಹೊಮ್ಮಿದರು. 2007ರಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಪದಾರ್ಪಣೆ ಮಾಡಿದ ಬೊಂಬಾಯ್ಲಾ ದೇವಿ, 2011, 2013ರ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಕಾಮನ್ವೆಲ್ತ್ನಲ್ಲಿ ಚಿನ್ನ, ಏಷ್ಯನ್ ಗೇಮ್ಸ್ನಲ್ಲಿ ಕಂಚು ಪಡೆದಿರುವ ಇವರು, 2012ರಲ್ಲಿ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ರೈತಸ್ನೇಹಿ ಸಂಶೋಧನೆಯೇ ಬದುಕಾಗಿಸಿಕೊಂಡವರು
ಅಸ್ಸಾಂನ ಲಖೀಂಪುರ ಜಿಲ್ಲೆಯವರಾದ ಡಾ. ಉದ್ಧಬ್ ಭರಾಲಿ ರೈತರಿಗೆ ಸುಲಭ ದರದಲ್ಲಿ ಕೈಗೆಟಕುವ ಯಂತ್ರೋಪಕರಣಗಳನ್ನು ತಯಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರ್ ಆದ ಇವರು ಹೆಚ್ಚಾಗಿ ತಯಾರಿಸಿರುವುದು ಸಿಪ್ಪೆ ಸುಲಿಯುವ ಯಂತ್ರಗಳನ್ನು. ಭತ್ತದಿಂದ ಅಕ್ಕಿ ಬೇರ್ಪಡಿಸುವ, ಬಿದಿರು ಕತ್ತರಿಸಿ ನುರಿಯುವ, ಚಹಾ ಎಲೆಗಳನ್ನು ಕೀಳುವ ಮುಂತಾದ 118ಕ್ಕೂ ಹೆಚ್ಚು ಯಂತ್ರಗಳನ್ನು ತಯಾರಿಸಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ. ಈಗ, ಅಂಗವಿಲಕರಿಗೆ ವಿಶೇಷ ವ್ಯವಸ್ಥೆ ಕಲ್ಪಿಸುವ ಯಂತ್ರಗಳ ತಯಾರಿಕೆಯಲ್ಲಿ ಅವರು ನಿರತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.