ಪಾಕಿಸ್ಥಾನಕ್ಕೀಗ ಅಳಿವು-ಉಳಿವಿನ ಪ್ರಶ್ನೆ
ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ವಿಲವಿಲನೆ ಒದ್ದಾಡುತ್ತಿರುವ ಪಾಕ್
Team Udayavani, Feb 12, 2023, 7:55 AM IST
ತೀವ್ರ ಆರ್ಥಿಕ ಮುಗ್ಗಟ್ಟು, ನೆರೆ, ಆಹಾರ ಕೊರತೆ, ರಾಷ್ಟ್ರವ್ಯಾಪಿ ವಿದ್ಯುತ್ ಪೂರೈಕೆ ಸ್ಥಗಿತ, ರೂಪಾಯಿ ಕುಸಿತ, ಮಿತಿಮೀರಿದ ಹಣದುಬ್ಬರ,ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ… ಇದು ನಮ್ಮ ನೆರೆಯ ರಾಷ್ಟ್ರ ಪಾಕಿಸ್ಥಾನದ ಸದ್ಯದ ಚಿತ್ರಣ. ರಾಜಕೀಯವಾಗಿ ಹಾಗೂ ಆರ್ಥಿಕವಾಗಿಯೂ ಬಳಲುತ್ತಿರುವ ಪಾಕಿಸ್ಥಾನ ದಿವಾಳಿ ಅಂಚಿಗೆ ಬಂದು ನಿಂತಿದೆ. ಗೋಧಿ ಹಾಗೂ ಇತರ ಆಹಾರಗಳ, ಧಾನ್ಯಗಳ ಕೊರತೆ ಈ ದೇಶವನ್ನು ತೀವ್ರವಾಗಿ ಕಾಡುತ್ತಿದೆ. ಆಮದು ಸರಕುಗಳಿಗೂ ವ್ಯಯಿಸಲು ಹಣವಿಲ್ಲದೇ ಪಾಕ್ ಸರಕಾರ, ಜನರನ್ನು ಆಹಾರ ಪದಾರ್ಥಗಳ ಅಭಾವದ ಸುಳಿಯಲ್ಲಿ ಸಿಲುಕುವಂತೆ ಮಾಡಿ ಒಪ್ಪೊತ್ತಿನ ತುತ್ತಿಗೂ ಗತಿ ಇಲ್ಲದಂತೆ ಮಾಡಿದೆ.
ರಾಷ್ಟ್ರವನ್ನು ಮತ್ತು ಜನಜೀವನವನ್ನು ಸುಧಾರಿಸಬೇಕಾದರೆ ಪಾಕ್‌ಗೆ ಹಣಕಾಸು ನೆರವಿನ ತುರ್ತು ಆವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ಥಾನ ಸರಕಾರ ತನ್ನ ಹಿಂದಿನ ಕಠಿನ ನಿಲುವನ್ನು ಸಡಿಲಿಸಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಎಲ್ಲ ಷರತ್ತುಗಳಿಗೆ ಒಪ್ಪಿಗೆ ನೀಡುವ ಇಂಗಿತ ವ್ಯಕ್ತಪಡಿಸಿ, ಹಣಕಾಸು ನೆರವನ್ನು ಪಡೆದುಕೊಂಡು ದೇಶವನ್ನು ಸದ್ಯದ ಬಿಕ್ಕಟ್ಟಿನಿಂದ ಪಾರು ಮಾಡುವ ಯೋಚನೆಯಲ್ಲಿತ್ತು.
ಆದರೆ ಐಎಂಎಫ್ ನೊಂದಿಗಿನ ಮಾತುಕತೆ ಮುರಿದು ಬಿದ್ದಿದ್ದು ಆರ್ಥಿಕ ನೆರವು ಪಡೆದುಕೊಳ್ಳುವಲ್ಲಿ ಹಿನ್ನಡೆ ಕಂಡಿದೆ.
ನೆರೆ ಮತ್ತು ಆರ್ಥಿಕ ನಷ್ಟ
ಕಳೆದ ವರ್ಷ ಅಂದರೆ 2022ರಲ್ಲಿ ಅಬ್ಬರಿಸಿದ ನೆರೆಗೆ ತತ್ತರಿಸಿ ಹೋಗಿದ್ದ ಪಾಕಿಸ್ಥಾನ ಅದರ ಪರಿಣಾಮವನ್ನು ಈಗಲೂ ಅನುಭವಿಸುತ್ತಿದೆ. ನೆರೆಯಿಂದ ಆರ್ಥಿಕವಾಗಿ 15.2 ಬಿಲಿಯನ್ ಡಾಲರ್‌ಗಳಷ್ಟು ನಷ್ಟ ಅನುಭವಿಸಿದೆ ಎಂದು ಅಂದಾಜಿಸಲಾಗಿದೆ. ವಸತಿ, ಕೃಷಿ, ಜಾನುವಾರು, ಸಾರಿಗೆ ಕ್ಷೇತ್ರಗಳ ಮೇಲೆ ನೆರೆ ಬಲವಾದ ಪರಿಣಾಮವನ್ನು ಬೀರಿತ್ತು. ವಿಶ್ವಸಂಸ್ಥೆಯ ವರದಿಯ ಪ್ರಕಾರ 2023ರ ಜನವರಿ ತಿಂಗಳ ಮಧ್ಯದವರೆಗೆ 4 ಬಿಲಿಯನ್ ಮಕ್ಕಳು ನೆರೆ ಪೀಡಿತ ಪ್ರದೇಶಗಳಲ್ಲೇ ವಾಸಿಸುತ್ತಿದ್ದಾರೆ. ಜತೆಗೆ 9 ಬಿಲಿಯನ್ ಜನರು ಆರ್ಥಿಕವಾಗಿ ಬಡತನದಲ್ಲಿದ್ದಾರೆ.
ನೆರೆಯಿಂದಾಗಿ 33 ಮಿಲಿಯನ್ ನಾಗರಿಕರು ದೇಶದಲ್ಲಿ ಸಂಕಷ್ಟಕ್ಕೀಡಾಗಿದ್ದರೆ ಸುಮಾರು 1,739 ಮಂದಿ ಸಾವನ್ನಪ್ಪಿದ್ದರು. ಪಾಕ್ ಕಳೆದ ವರ್ಷ ನೆರೆಯಿಂದಾಗಿ ಜಿಡಿಪಿಯಲ್ಲಿ ಶೇ. 2.2ರಷ್ಟು ನಷ್ಟವನ್ನು ಅನುಭವಿಸಿದೆ. ನೆರೆಯ ಪರಿಣಾಮ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ದೇಶದ ಇತಿಹಾಸದಲ್ಲೇ ಎದುರಿಸಿದ ಭೀಕರ ನೆರೆ ಇದಾಗಿತ್ತು. ಈ ನೆರೆ ದೇಶದ ಜನತೆ ಮತ್ತು ಸರಕಾರದ ಬೊಕ್ಕಸಕ್ಕೆ ನೀಡಿದ ಹೊಡೆತದಿಂದ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರ ನಡುವೆ ಕಳೆದ ಮೂರು ವರ್ಷಗಳಿಂದ ಕಾಡುತ್ತಿರುವ ಕೊರೊನಾ ಸಾಂಕ್ರಾಮಿಕ, ಜಾಗತಿಕ ಮಟ್ಟದಲ್ಲಿನ ಆರ್ಥಿಕ ಅನಿಶ್ಚಿತತೆಗಳು ಪಾಕ್‌ನ ಒಟ್ಟಾರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ್ದು ದೇಶದ ಬೊಕ್ಕಸ ಸದ್ಯ ಬಹುತೇಕ ಬರಿದಾಗಿದೆ.
ಆಹಾರದ ತೀವ್ರ ಅಭಾವ
ಈಗ ಪಾಕಿಸ್ಥಾನದಲ್ಲಿ ಆಹಾರದ ಹುಡುಕಾಟದಲ್ಲೇ ಜನರು ಕಾಲು¤ಳಿತ್ತಕ್ಕೆ ಒಳಗಾಗಿ ಸಾವನ್ನಪ್ಪುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು. ದೇಶದಲ್ಲಿ ಜನರು ಉಣ್ಣಲು ಅನ್ನವಿಲ್ಲದೇ ಪರದಾಡುತ್ತಿದ್ದು ಆಹಾರ ಅಭಾವದ ಸಮಸ್ಯೆ ತೀವ್ರಗೊಂಡಿದೆ. ಕನಿಷ್ಠ ಒಂದು ಹೊತ್ತಿನ ಆಹಾರ ದೊರಕಬಹುದು ಎಂಬ ನಂಬಿಕೆಯಿಂದ ಜನರು ಸಾಲುಸಾಲಾಗಿ ಟ್ರಕ್‌ಗಳ ಮುಂದೆ ನಿಂತು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ವಿಶ್ವ ಆಹಾರ ಕಾರ್ಯಕ್ರಮದ ಭಾಗವಾಗಿರುವ ಮತ್ತು ಗೋಧಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಮುಂಚೂಣಿಯಲ್ಲಿರುವ ದೇಶಗಳಲ್ಲಿ ಒಂದಾಗಿರುವ ಪಾಕಿಸ್ಥಾನದಲ್ಲೀಗ ಗೋಧಿಯ ಅಭಾವ ಕಾಣಿಸಿಕೊಂಡಿದೆ ಎಂದರೆ ಅಲ್ಲಿನ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬಹುದು.
ಹಾಗೆ ನೋಡಿದರೆ ಪಾಕ್‌ನಲ್ಲಿ ಆಹಾರ ಸಮಸ್ಯೆ ನಿನ್ನೆ ಮೊನ್ನೆಯದಲ್ಲ, ಮೊದಲಿನಿಂದಲೂ ಅಲ್ಲಿನ ಜನರು ಆಹಾರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇತ್ತೀಚಿನ ವರ್ಷ ಗಳಲ್ಲಿ ಈ ಸಮಸ್ಯೆ ಉಲ್ಬಣ ವಾಗಿದೆ. 2018ರ ರಾಷ್ಟ್ರೀಯ ಪೌಷ್ಟಿಕಾಂಶ ಸಮೀಕ್ಷೆಯ ಅಂಕಿಅಂಶದ ಪ್ರಕಾರ ದೇಶದಲ್ಲಿ ಶೇ. 36.9 ಜನರು ಆಹಾರದ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಜತೆಗೆ ಶೇ. 82ರಷ್ಟು ಮಕ್ಕಳು ಸರಿಯಾದ ಒಂದು ಹೊತ್ತಿನ ಊಟವಿಲ್ಲದೇ ಬಳಲುತ್ತಿದ್ದಾರೆ. ಜನರು ತಮ್ಮ ತಿಂಗಳ ಸಂಬಳದ ಶೇ.50.8 ರಷ್ಟು ಮೊತ್ತವನ್ನು ಆಹಾರ ಕ್ಕಾಗಿಯೇ ವ್ಯಯಿಸುತ್ತಿದ್ದಾರೆ.
ಆರ್ಥಿಕ ಬಿಕ್ಕಟ್ಟು ಕೂಡ ಕಾರಣ
ಕಳೆದ ವರ್ಷದ ನೆರೆಯು ಶೇ.80ರಷ್ಟು ಕೃಷಿಗೆ ಹಾನಿಯುಂಟು ಮಾಡಿದೆ. ದೇಶದಲ್ಲಿನ ಆರ್ಥಿಕ ಅಸ್ಥಿರತೆಯು ಆಹಾರ ಪದಾರ್ಥಗಳ ಆಮದಿಗೂ ಸಂಕಷ್ಟ ತಂದೊಡ್ಡಿದೆ. ಆರ್ಥಿಕ ಸಮಸ್ಯೆಯ ಕಾರಣದಿಂದಾಗಿ ಸರಕಾರ ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸಿದೆ. ದೇಶದ ರಾಷ್ಟ್ರೀಯ ಆರೋಗ್ಯ ಸೇವೆಯ ಸಚಿವಾಲಯವು ಮುಂಬರುವ ದಿನಗಳಲ್ಲಿ ಔಷಧದ ಕೊರತೆಯು ಎದುರಾಗಬಹುದು ಎಂದು ಎಚ್ಚರಿಸಿದೆ. ಪಾಕ್‌ನ ಗಡಿಯಲ್ಲಿ ಔಷಧ ಹಾಗೂ ಆಹಾರಗಳ ಟ್ರಕ್‌ಗಳು, ಕಂಟೈನರ್‌ಗಳು ಸಾಲಾಗಿ ನಿಂತಿದ್ದು, ಆಮದು ಸುಂಕವನ್ನು ನೀಡಲಾಗದ ಪರಿಸ್ಥಿತಿಗೆ ಪಾಕ್ ಬಂದು ತಲುಪಿದೆ. ಬಂದರುಗಳಲ್ಲಿಯೂ ಇದೇ ದೃಶ್ಯವನ್ನು ಕಾಣಬಹುದು.
ಭಾತದೊಂದಿಗೆ ವಿಲೀನಕ್ಕೆ ಆಗ್ರಹ
ಭಾರತದ ಗಡಿ ಭಾಗದಲ್ಲಿರುವ ಪಾಕ್ ಆಕ್ರಮಿತ ಪ್ರದೇಶದಲ್ಲಿ ಇದೀಗ ಭಾರತದೊಂದಿಗೆ ವಿಲೀನಕ್ಕಾಗಿ
ಆಗ್ರಹ ಕೇಳಿ ಬರುತ್ತಿದೆ. ಪಾಕ್ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಂದ ರೋಸಿ ಹೋಗಿರುವ ಅಲ್ಲಿನ ಜನ ಭಾರತದೊಂದಿಗೆ ನಾವು ವಿಲೀನವಾಗುತ್ತೇವೆ ಎಂದು ಕಳೆದ ಕೆಲವು ವಾರಗಳಿಂದ ರಸ್ತೆಗಳಿಗೆ ಇಳಿದು ಹೋರಾಟ ನಡೆಸುತ್ತಿದ್ದಾರೆ. ದೇಶ ಎದುರಿಸುತ್ತಿರುವ ಆಂತರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಗದೇ ಒದ್ದಾಡುತ್ತಿರುವ ಪಾಕ್‌ಗೆ, ಭಾರತದೊಂದಿಗಿನ ವಿಲೀನದ ಕೂಗು ಇನ್ನಷ್ಟು ತಲೆನೋವಾಗಿ ಪರಿಣಮಿಸಿದೆ. ಇಷ್ಟು ಮಾತ್ರವಲ್ಲದೆ ಪಾಕಿಸ್ಥಾನದ ವಿವಿಧ ಪ್ರಾಂತಗಳಲ್ಲಿ ಸ್ವಾಯತ್ತೆಯ ಕೂಗು ಎದ್ದಿರುವುದು
ಅಲ್ಲಿನ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದೆ.
ಕತ್ತಲಲ್ಲಿ ಪಾಕ್
ಆಹಾರ, ಹಣಕಾಸಿನ ಸಮಸ್ಯೆಯ ಜತೆಗೆ ಪಾಕ್‌ನ ಜನರು ವಿದ್ಯುತ್ ಬೆಲೆ ಏರಿಕೆಯ ಬಿಸಿಯಿಂದ ಕತ್ತಲಲ್ಲಿ ಜೀವನ ನಡೆಸುತ್ತಿದ್ದಾರೆ. ಸಮರ್ಪಕ ವಿದ್ಯುತ್ ಪೂರೈಕೆಗೂ ಹೆಣಗಾಡುತ್ತಿರುವ ಪಾಕ್ ರಾಷ್ಟ್ರವ್ಯಾಪಿ ವಿದ್ಯುತ್ ಪೂರೈಕೆ ಕಡಿತ ಮಾಡಲು ಆರಂಭಿಸಿದೆ. ಅದರಲ್ಲೂ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಜನರ ಸ್ಥಿತಿ ಹೇಳತೀರದು. ಯಥೇತ್ಛ ಜಲ ಸಂಪನ್ಮೂಲದಿಂದ ಕೂಡಿರುವ ಹೊರತಾಗಿಯೂ ಪಿಒಕೆಯ ಜನರು ವಿದ್ಯುತ್‌ಗಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಇಂಧನಗಳಿಂದ ಆರ್ಥಿಕತೆಯನ್ನು ಚೇತರಿಸಲು ಪ್ರಯತ್ನಿಸುತ್ತಿರುವ ಪಾಕ್ ವಿದ್ಯುತ್ ಮೇಲಿನ ಸಬ್ಸಿಡಿಯನ್ನು ತೆರವು ಮಾಡಿದೆ. ಅಲ್ಲದೇ ಪ್ರತೀ ಯೂನಿಟ್‌ಗೆ 16ರಿಂದ 22 ರೂಪಾಯಿಗಳಷ್ಟು ಹೆಚ್ಚಿಸಿದೆ. ಮೂರು ವಾರಗಳ ಹಿಂದೆ ದೇಶದ ಪ್ರಮುಖ ನಗರಗಳ ಸಹಿತ ಬಹುತೇಕ ಭಾಗಗಳು ದಿನಗಳ ಕಾಲ ಕಗ್ಗತ್ತಲಲ್ಲೇ ಮುಳುಗುವಂತಾಗಿತ್ತು. ಇದರಿಂದಾಗಿ ಜನಜೀವನ ಅಕ್ಷರಶಃ ಸ್ತಬ್ಧವಾಗಿತ್ತು. ಈಗಲೂ ದೇಶ ವಿದ್ಯುತ್ ಸಮಸ್ಯೆಯಿಂದ ಸಂಪೂರ್ಣವಾಗಿ ಹೊರಬಂದಿಲ್ಲ.
ಜಗ್ಗದ ಐಎಂಎಫ್
ಸದ್ಯದ ಪರಿಸ್ಥಿತಿಯಿಂದ ಪಾರಾಗಲು ಪಾಕಿಸ್ಥಾನ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಂದೆ 1.1 ಶತಕೋಟಿ ಡಾಲರ್ ಸಾಲಕ್ಕಾಗಿ ಮನವಿ ಮಾಡಿಕೊಂಡಿತ್ತು. ಪಾಕ್ ಇದಾಗಲೇ 22 ಬಾರಿ ಐಎಂಎಫ್ನ ಬಳಿ ಸಾಲಕ್ಕಾಗಿ ಅಂಗಲಾಚಿತ್ತು. ಆದರೆ ಐಎಂಎಫ್ನ ಷರತ್ತುಗಳಿಗೆ ತಲೆಬಾಗದ ಪಾಕಿಸ್ಥಾನ ಸರಕಾರ ಈ ಬಾರಿ ಐಎಂಎಫ್ ವಿಧಿಸಿರುವ ಕಟ್ಟುನಿಟ್ಟಿನ ಷರತ್ತುಗಳಿಗೆ ಒಪ್ಪಿಗೆ ನೀಡುವ ಇಂಗಿತ ವ್ಯಕ್ತಪಡಿಸಿತ್ತು. ಜ.31ರಿಂದ ಫೆ.9ರ ವರೆಗೆ ಪಾಕ್ ಪ್ರವಾಸ ಕೈಗೊಂಡಿದ್ದ ಐಎಂಎಫ್ ಆಯೋಗ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ಷರತ್ತುಬದ್ಧ ನೆರವು ನೀಡುವ ಭರವಸೆ ನೀಡಿತ್ತು. ಆದರೆ ಷರತ್ತುಗಳಿಗೆ ಒಪ್ಪಿಗೆ ಸೂಚಿಸುವ ಸಂಬಂಧ ಲಿಖೀತ ಭರವಸೆ ನೀಡಲು ಪಾಕಿಸ್ಥಾನ ಸರಕಾರ ಹಿಂದೇಟು ಹಾಕಿದ ಪರಿಣಾಮ ಆಯೋಗ ನೆರವು ನೀಡುವ ಬಗ್ಗೆ ಯಾವುದೇ ಮಾಹಿತಿ ನೀಡದೆ ಅಲ್ಲಿಂದ ಮರಳಿದೆ. ಐಎಂಎಫ್ನೊಂದಿಗಿನ ಒಪ್ಪಂದದ ಮಾತುಕತೆಯಲ್ಲಿ ಸೋತಿರುವ ಪಾಕ್ ಈಗ ದಾರಿ ತೋಚದೆ ಚಿಂತೆಗೀಡಾಗಿದೆ.
ಚುನಾವಣೆ
ನಡೆಸಲೂ ಹಣ ಇಲ್ಲ !
ಈ ವರ್ಷದ ಅಕ್ಟೋಬರ್‌ನಲ್ಲಿ ಪಾಕಿಸ್ಥಾನದಲ್ಲಿ ಚುನಾವಣೆ ನಡೆಯಲಿದೆ. ಆದರೆ ದೇಶದ ಬೊಕ್ಕಸದಲ್ಲೀಗ ಚುನಾವಣೆಗೆ ವ್ಯಯಿಸುವಷ್ಟೂ ಹಣವಿಲ್ಲ. ಪಾಕ್‌ನ ಚುನಾವಣ ಆಯೋಗವು ಮುಂಬರುವ ಚುನಾವಣೆಗೆ 47 ಬಿಲಿಯನ್ ರೂ. ಬೇಕಾಗಬಹುದು ಎಂದು ಅಂದಾಜಿಸಿದೆ. ಜತೆಗೆ ಕಳೆದ ಹತ್ತು ವರ್ಷಗಳಲ್ಲಿ ಚುನಾವಣ ಖರ್ಚು 34 ಬಿಲಿಯನ್ ರೂ.ಗಳಷ್ಟು ಜಾಸ್ತಿಯಾಗಿದೆ ಎಂದು ಹೇಳಿದೆ. ಪಾಕ್‌ನ 2013ರ ಚುನಾವಣೆಗೆ 13 ಬಿಲಿಯನ್ ರೂ. ಹಾಗೂ 2018ರ ಚುನಾವಣೆಯಲ್ಲಿ 31 ಬಿಲಿಯನ್ ರೂ.ಗಳಷ್ಟು ವ್ಯಯಿಸಲಾಗಿದೆ ಎಂದು ವರದಿಗಳು ಹೇಳಿವೆ.
ಹಣದುಬ್ಬರ; ರೂಪಾಯಿ ಕುಸಿತ
ಆರ್ಥಿಕವಾಗಿ ಜರ್ಝ ರಿತವಾಗಿರುವ ಪಾಕ್‌ನಲ್ಲಿ ಅದರ ಕರೆನ್ಸಿಯಾಗಿರುವ ಪಾಕ್ ರೂಪಾಯಿಯ ಮೌಲ್ಯ ದಿನೇದಿನೆ ಕುಸಿಯು ತ್ತಿದೆ. ಪಾಕಿಸ್ಥಾನದ ಹಣ ದುಬ್ಬರ 48 ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ. ಪಿಕೆ ರೆವೆನ್ಯೂ ವರದಿಯ ಪ್ರಕಾರ ಬ್ಯಾಂಕ್ ಆಫ್ ಪಾಕಿಸ್ಥಾನದ ವಿದೇಶಿ ವಿನಿಮಯದ ಸಂಗ್ರಹ 2.917 ಶತಕೋಟಿ ಡಾಲರ್‌ಗೆ ಇಳಿದಿದೆ. ಜ.26ರಂದು ಅಮೆರಿಕನ್ ಡಾಲರ್‌ನ ಎದುರು ಶೇ. 9.6ರಷ್ಟು ಪಾಕ್‌ನ ರೂಪಾಯಿ ಮೌಲ್ಯ ಕುಸಿದಿದೆ. ಇದು 20 ವರ್ಷಗಳಲ್ಲೇ ಒಂದೇ ದಿನದಲ್ಲಿ ಪಾಕ್ ರೂಪಾಯಿಯ ಮೌಲ್ಯ ಅತೀ ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಕಂಡಿರುವುದಾಗಿದೆ. ಇದೇ ವೇಳೆ ದೇಶದಲ್ಲೀಗ ಹಣದುಬ್ಬರ ದರ ಒಂದೇ ಸಮನೆ ಹೆಚ್ಚುತ್ತಲೇ ಸಾಗಿದ್ದು ಜನರು ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿ ನಲುಗುವಂತಾಗಿದೆ. ಇದರ ಮಧ್ಯೆ ಪಾಕಿಸ್ಥಾನದ ಬಿಸಿನೆಸ್ ಕೌನ್ಸಿಲ್ ಆರ್ಥಿಕತೆಯನ್ನು ಚೇತರಿಸಲು 5000 ರೂ. ನೋಟನ್ನು ಅಮಾನ್ಯಗೊಳಿಸಬೇಕೆಂಬ ಸಲಹೆಯನ್ನು ನೀಡಿದೆ.
ಐಎಂಎಫ್
ವಿಧಿಸಿದ್ದ ಷರತ್ತುಗಳೇನು?
– ವಿದ್ಯುತ್ ದರವನ್ನು ಹೆಚ್ಚಿಸಬೇಕು
– ಸಬ್ಸಿಡಿಯಲ್ಲಿ ಇಳಿಕೆ ಮಾಡಬೇಕು
– ಅಂತಾರಾಷ್ಟ್ರೀಯ ಬೆಲೆಯೊಂದಿಗೆ ಅನಿಲ ಬೆಲೆಗಳನ್ನು ಹೊಂದಿಸಬೇಕು
– ಸಾಲದ ಪತ್ರಗಳ ಮೇಲಿನ ನಿಯಂತ್ರಣವನ್ನು ತೆರೆಯಬೇಕು
ಪರಿಸ್ಥಿತಿ ಸುಧಾರಣೆಗೆ ಇತರ ರಾಷ್ಟ್ರಗಳನ್ನು ಅಂಗಲಾಚಿರುವ ಪಾಕ್‌ಗೆ ಮಿತ್ರ ರಾಷ್ಟ್ರ
ಚೀನವೂ ಕೈಹಿಡಿದಿಲ್ಲ. ಬಿಲಿಯನ್‌ಗಳಷ್ಟು ಅಂತಾರಾಷ್ಟ್ರೀಯ ಸಾಲದ ಹೊರೆಯನ್ನು ಪಾಕ್ ಉಳಿಸಿಕೊಂಡಿರುವುದು ಅದನ್ನು ಇನ್ನಷ್ಟು ಜರ್ಝರಿತವನ್ನಾಗಿಸಿದೆ.
ಧೋರಣೆಗಳಲ್ಲಿ
ಬದಲಾವಣೆ ಅನಿವಾರ್ಯ
ಭಯೋತ್ಪಾದಕರಿಗೆ ಆಶ್ರಯ, ಹಣಕಾಸು ನೆರವು, ಆಡಳಿತದಲ್ಲಿ ಸೇನೆಯ ಹಸ್ತಕ್ಷೇಪ, ನೆರೆ ರಾಷ್ಟ್ರಗಳೊಂದಿಗೆ ವಿನಾಕಾರಣ ತಕರಾರು…ಮತ್ತಿತರ ಕಾರಣಗಳಿಗಾಗಿ ವಿಶ್ವಸಂಸ್ಥೆಯಾದಿಯಾಗಿ ಜಾಗತಿಕ ಸಮುದಾಯ ಪದೇಪದೆ ಎಚ್ಚರಿಕೆ ನೀಡಿದರೂ ಪಾಕಿಸ್ಥಾನ ಈ ವಿಚಾರಗಳ ಬಗೆಗಿನ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳದಿರುವುದೇ ಈಗ ದೇಶದ ಪಾಲಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಹೀಗಾಗಿಯೇ ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲೂ ಜಾಗತಿಕ ಸಮುದಾಯ ಪಾಕಿಸ್ಥಾನದ ಬೆನ್ನಿಗೆ ನಿಲ್ಲಲು ಹಿಂದೇಟು ಹಾಕುತ್ತಿದೆ. ಪ್ರತೀ ಬಾರಿ ತನ್ನ ತಪ್ಪುಗಳನ್ನು ಸಮರ್ಥಿಸಿಕೊಳ್ಳುವ ಪಾಕ್ ಮುಳಗುವ ಸ್ಥಿತಿ ತಲುಪಿದರೂ ಇನ್ನೂ ಪಾಠ ಕಲಿತಿಲ್ಲ. ದೇಶ ಉಳಿಯಬೇಕಾದರೆ ಭಯೋತ್ಪಾದನೆ ದಮನದಂತಹ ವಿಚಾರದಲ್ಲಿ ಪಾಕ್ ವಿಶ್ವ ಸಮುದಾಯದೊಂದಿಗೆ ಕೈಜೋಡಿಸಲೇಬೇಕಿದೆ. ಇಲ್ಲವಾದಲ್ಲಿ ಪಾಕಿಸ್ಥಾನದ ಭವಿಷ್ಯ ಊಹಿಸಲೂ ಅಸಾಧ್ಯ.
– ವಿಧಾತ್ರಿ ಭಟ್, ಉಪ್ಪುಂದ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.