ನ್ಯಾಯಾಂಗದಲ್ಲಿ ಶೇ. 50 ಮಹಿಳಾ ಪ್ರಾತಿನಿಧ್ಯ ಕಾರ್ಯಸಾಧುವೇ?
7 ದಶಕಗಳಲ್ಲಿ ಸು. ಕೋ.ಗೆ ನೇಮಕವಾದ ಮಹಿಳಾ ನ್ಯಾಯಾಧೀಶರು ಕೇವಲ 11
Team Udayavani, Oct 10, 2021, 6:15 AM IST
ನ್ಯಾಯಾಂಗ ವ್ಯವಸ್ಥೆ ಮತ್ತು ಕಾನೂನು ಕಾಲೇಜುಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕು. ಇದು ಮಹಿಳೆಯರ ಹಕ್ಕಾಗಿದೆಯೇ ಹೊರತು ದಾನವಲ್ಲ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಇತ್ತೀಚೆಗೆ ಪ್ರತಿಪಾದನೆ ಮಾಡಿದ್ದರು. ತಿಂಗಳ ಹಿಂದೆಯಷ್ಟೇ ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡಿದ್ದ 9 ನೂತನ ನ್ಯಾಯಾಧೀಶರ ಪೈಕಿ ಮೂವರು ಮಹಿಳೆ ಯರಾಗಿದ್ದರು. ಇದರ ಬೆನ್ನಲ್ಲೇ ಸಿಜೆಐ ಈ ಹೇಳಿಕೆ ನೀಡಿದ್ದರು. ಆದರೆ ವಾಸ್ತವವಾಗಿ ಸುಪ್ರೀಂ ಕೋರ್ಟ್ ಆರಂಭವಾದಾಗಿನಿಂದ ಈವರೆಗೆ ಅಂದರೆ ಏಳು ದಶಕಗಳ ಅವಧಿಯಲ್ಲಿ ನೇಮಕಗೊಂಡ ಮಹಿಳಾ ನ್ಯಾಯಾಧೀಶರ ಸಂಖ್ಯೆ ಎಷ್ಟು?, ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಪ್ರಾತಿನಿಧ್ಯದ ಸ್ಥಿತಿಗತಿ ಏನು?, ಮಹಿಳೆಯರಿಗೆ ನ್ಯಾಯಾಂಗದಲ್ಲಿ ಶೇ. 50 ಪ್ರಾತಿನಿಧ್ಯ ನೀಡಬೇಕೆಂಬ ಸಿಜೆಐ ಅವರ ಸಲಹೆ ದೇಶದ ಈಗಿನ ಸ್ಥಿತಿಯಲ್ಲಿ ಕಾರ್ಯಸಾಧುವೇ? ಇವೆಲ್ಲದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.
1950ರ ಜ. 26ರಂದು ಸಂವಿಧಾನ ಜಾರಿಗೆ ಬಂದ ಬಳಿಕ ದೇಶದ ಮೊದಲ ಮುಖ್ಯ ನ್ಯಾಯಮೂರ್ತಿಯಾಗಿ ಹರಿಲಾಲ್ ಕಾನಿಯಾ ನೇಮಕಗೊಂಡಿದ್ದರು. ಅವರೊಂದಿಗೆ ಒಟ್ಟು ಐದು ನ್ಯಾಯಾಧೀಶರನ್ನು ನೇಮಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಸುಪ್ರೀಂ ಕೋರ್ಟ್‌ಗೆ ಒಟ್ಟಾರೆ 256 ನ್ಯಾಯಾಧೀಶರನ್ನು ನೇಮಿಸಲಾಗಿದೆ. ಅವರಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆ 11 ಮಾತ್ರ. ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಒಟ್ಟು 33 ಮಂದಿ ನ್ಯಾಯಾಧೀಶರಿದ್ದು ಅವರಲ್ಲಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಬಿ.ವಿ. ನಾಗರತ್ನಾ, ಬೇಲಾ ಎಂ. ತ್ರಿವೇದಿ, ಹಿಮಾ ಕೊಹ್ಲಿ ಹಾಲಿ ಇರುವ ನಾಲ್ವರು ಮಹಿಳಾ ನ್ಯಾಯಾಧೀಶ ರಾಗಿದ್ದಾರೆ. ಇವರಲ್ಲಿ ಇಂದಿರಾ ಬ್ಯಾನರ್ಜಿ ಅವರನ್ನು ಹೊರತುಪಡಿಸಿ ಉಳಿದ ಮೂವರು ಇತ್ತೀಚೆಗಷ್ಟೇ ನೇಮಕಗೊಂಡವರಾಗಿದ್ದಾರೆ. 2021ರ ಮಾರ್ಚ್‌ನಲ್ಲಿ ನ್ಯಾ| ಇಂದು ಮಲ್ಹೋತ್ರಾ ನಿವೃತ್ತಿಯಾದ ಅನಂತರ ನ್ಯಾ| ಇಂದಿರಾ ಬ್ಯಾನರ್ಜಿ ಒಬ್ಬರೇ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ನ್ಯಾಯಾಧೀಶರಾಗಿದ್ದರು. ಸದ್ಯ ಸುಪ್ರೀಂ ಕೋರ್ಟ್‌ನಲ್ಲಿರುವ ನ್ಯಾಯಾಧೀಶರಲ್ಲಿ ಮಹಿಳಾ ನ್ಯಾಯಾಧೀಶರ ಪ್ರಮಾಣ ಶೇ. 12ರಷ್ಟಾಗಿದೆ. ಸುಪ್ರೀಂ ಕೋರ್ಟ್‌ನ ಇತಿಹಾಸವನ್ನು ಪರಿಗಣಿಸಿದರೆ ಮಹಿಳಾ ನ್ಯಾಯಾಧೀಶರ ಪ್ರಾತಿನಿಧ್ಯ ಕೇವಲ ಶೇ. 0.4. ಇದೇ ಮೊದಲ ಬಾರಿಗೆ ಸುಪ್ರೀಂನಲ್ಲಿ ಏಕಕಾಲದಲ್ಲಿ ನಾಲ್ವರು ಮಹಿಳಾ ನ್ಯಾಯಾಧೀಶರಿದ್ದು ಈವರೆಗೆ ಈ ಸಂಖ್ಯೆ ಎರಡನ್ನು ಮೀರಿರಲಿಲ್ಲ ಎಂಬುದು ಗಮನಾರ್ಹ.
ಮೊದಲ ಮಹಿಳಾ ನ್ಯಾಯಾಧೀಶರು
ಸುಪ್ರೀಂ ಕೋರ್ಟ್
1950ರಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದ ಮೊದಲ ಮಹಿಳೆ ಫಾತಿಮಾ ಬೀಬಿ ಅವರು 1989ರಲ್ಲಿ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಹೈಕೋರ್ಟ್
ಬ್ಯಾರಿಸ್ಟರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ್ದ ಅನ್ನಾ ಚಾಂಡಿ ದೇಶದಲ್ಲಿಯೇ ಮೊದಲ ಬಾರಿಗೆ ಹೈಕೋರ್ಟ್ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದರು. 1937ರಲ್ಲಿ 1959ರಲ್ಲಿ ಅನ್ನಾ ಚಾಂಡಿ ಕೇರಳ ಹೈಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆಯಾದರು. ಇವರು 1967ರ ವರೆಗೆ ಕೇರಳ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದರು.
ಪ್ರಾತಿನಿಧ್ಯ ಏಕೆ ಮುಖ್ಯ?
ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಾಗುವುದರಿಂದ ಕೇವಲ ಈ ಕ್ಷೇತ್ರದಲ್ಲಿ ಮಾತ್ರ ವಲ್ಲದೆ ಇತರ ಕ್ಷೇತ್ರಗಳಲ್ಲಿನ ಪುರುಷ- ಮಹಿಳೆಯರ ನಡುವಿನ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಾಗಲಿದೆ. ಹೈಕೋರ್ಟ್, ಸು.ಕೋ.ನಂತಹ ನ್ಯಾಯಾಂಗ ವ್ಯವಸ್ಥೆಯ ಉನ್ನತ ಸ್ತರದಲ್ಲಿ ಮಹಿಳೆಯರು ನ್ಯಾಯಾಧೀಶರಾಗಿ ನೇಮಕಗೊಂಡಾಗ ನ್ಯಾಯಾಂಗ ವ್ಯವಸ್ಥೆಯ ಮೇಲೆ ಮಹಿಳೆಯರಿಗಿರುವ ಮನೋಭಾವ ಬದಲಾಗಿ ಅವರಲ್ಲಿ ಹೆಚ್ಚಿನ ವಿಶ್ವಾಸ ಮೂಡಲು ಕಾರಣವಾಗುತ್ತದೆ. ಅಲ್ಲದೆ ಸಹಜವಾಗಿ ಕಾರ್ಯಾಂಗ, ಶಾಸಕಾಂಗಗಳಲ್ಲಿಯೂ ಮಹಿಳಾ ಪ್ರಾತಿನಿಧ್ಯ ಹೆಚ್ಚಲು ಇದು ಪ್ರೇರಣೆಯಾಗಲಿದೆ.
ಸು.ಕೋ.ನ ಹಾಲಿ ಮಹಿಳಾ ನ್ಯಾಯಾಧೀಶರು
ನ್ಯಾ| ಇಂದಿರಾ ಬ್ಯಾನರ್ಜಿ
ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಇವರು, 2018ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.
ನ್ಯಾ| ಬಿ.ವಿ. ನಾಗರತ್ನಾ
2008ರ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿದ್ದು, 2010ರ ಫೆಬ್ರ ವರಿಯಲ್ಲಿ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂ ಡರು. ಪ್ರಸ್ತುತ ಸು.ಕೋ.ನ ನ್ಯಾಯಾಧೀಶೆಯಾಗಿದ್ದಾರೆ.
ನ್ಯಾ| ಬೇಲಾ ಎಂ. ತ್ರಿವೇದಿ
ಗುಜರಾತ್ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದು, 2021ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.
ನ್ಯಾ| ಹಿಮಾ ಕೊಹ್ಲಿ
ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದು, 2021ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನಿಯುಕ್ತರಾಗಿದ್ದಾರೆ.
ಹೈಕೋರ್ಟ್‌ಗಳಲ್ಲಿ ಮಹಿಳಾ ಪ್ರಾತಿನಿಧ್ಯ
ವರ್ಷದ ಹಿಂದೆ ಹೈಕೋರ್ಟ್‌ಗಳಲ್ಲಿ ಕೇವಲ 78 ಅಂದರೆಸುಮಾರು ಶೇ. 7ರಷ್ಟು ಮಹಿಳಾ ನ್ಯಾಯಾಧೀಶರಿದ್ದಾರೆ. ಪುರುಷ ನ್ಯಾಯಾಧೀಶರ ಸಂಖ್ಯೆ 1,079. ಇದರಲ್ಲಿ 6 ಹೈಕೋರ್ಟ್‌ಗಳಲ್ಲಿ ಕೇವಲ ಒಬ್ಬರು, 5 ಹೈಕೋರ್ಟ್‌ಗಳಲ್ಲಿ ಮಹಿಳಾ ನ್ಯಾಯಾಧೀಶರೇ ಇಲ್ಲ.
ಹೈಕೋರ್ಟ್‌ಗಳಲ್ಲಿ ಮಹಿಳಾ ಪ್ರಾತಿನಿಧ್ಯ
ಸುಪ್ರೀಂ ಕೋರ್ಟ್‌ನಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಹಾಲಿ ನ್ಯಾಯಾಧೀಶರ ವಯೋಮಿತಿಯನ್ನು ಪರಿಗಣಿಸಿದಾಗ 2027ರಲ್ಲಿ ಭಾರತದ ಮೊದಲ ಮಹಿಳಾ ಸಿಜೆಐ ನೇಮಕಗೊಳ್ಳಲಿದ್ದಾರೆ. ತಿಂಗಳ ಹಿಂದೆಯಷ್ಟೇ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿರುವ ಕರ್ನಾಟಕ ಮೂಲದ ನ್ಯಾ| ಬಿ.ವಿ. ನಾಗರತ್ನಾ ಅವರು ಈ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 2027ರಲ್ಲಿ ಅವರು ಸಿಜೆಐ ಆಗಿ ನೇಮಕಗೊಂಡರೂ ಅವರ ಅಧಿಕಾರಾವಧಿ ಕೇವಲ 36 ದಿನಗಳವರೆಗೆ ಇರಲಿದ್ದು ಆ ಬಳಿಕ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ. ನ್ಯಾ| ಬಿ.ವಿ. ನಾಗರತ್ನಾ ಅವರು 2008ರ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಅನಂತರ 2010ರ ಫೆಬ್ರವರಿಯಲ್ಲಿ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ಅವರ ತಂದೆ ಇ.ಎಸ್.ವೆಂಕಟರಾಮಯ್ಯ ಅವರು 1989ರಲ್ಲಿ ಸುಪ್ರೀಂ ಕೋರ್ಟ್‌ನ 19ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದರು.
ಶೇ.50 ಮಹಿಳಾ ಪ್ರಾತಿನಿಧ್ಯಕ್ಕೆ ಇರುವ ಸವಾಲುಗಳು
01. ಸಂವಿಧಾನದ ಕಲಂ 243- ಡಿ ಅಡಿಯಲ್ಲಿ ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿಗೆ ಅವಕಾಶವಿದೆ. ಆದರೆ ನ್ಯಾಯಾಂಗದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿ ಅಥವಾ ನ್ಯಾಯಾಂಗದ ಆದೇಶ ಅನಿವಾರ್ಯವಾಗಿದೆ.
02. ಇತರ ವರ್ಗಗಳ ಮೀಸಲಾತಿ ಬೇಡಿಕೆ ಅಧಿಕವಾಗಿರುವುದರಿಂದ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಕಳೆದ ಹಲವು ದಶಕಗಳಿಂದ ಸ್ಥಗಿತಗೊಂಡಿದೆ. ಹೀಗಾಗಿ ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ನೀಡುವುದು ಕಷ್ಟಸಾಧ್ಯವೇ.
03. ನ್ಯಾಯಾಧೀಶರಾಗಲು ವಕೀಲರಾಗುವುದು ಆವಶ್ಯಕ. ಪ್ರಸ್ತುತ ಸಿಎಲ್‌ಎಟಿ ಅಡಿಯಲ್ಲಿ ನಡೆಸುವ ಪ್ರವೇಶ ಪರೀಕ್ಷೆ ಬರೆಯಲು ಕಾಲೇಜುಗಳಲ್ಲಿ ಮಹಿಳಾ ಮೀಸಲಾತಿಗೆ ಹಲವು ನಿಬಂಧನೆಗಳಿವೆ. ದೇಶಾದ್ಯಂತ ಇರುವ ಕಾನೂನು ಕಾಲೇಜುಗಳಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿಯ ನಿಯಮವಿಲ್ಲ.
04. ಜಿಲ್ಲಾ ನ್ಯಾಯಾಲಯಗಳಲ್ಲಿ ಮಹಿಳೆಯರಿಗೆ ಶೇ. 5ರಿಂದ 35ರಷ್ಟು ಮೀಸಲಾತಿ ನಿಯಮವಿದೆ. ಬಿಹಾರದಲ್ಲಿ ಐದು ವರ್ಷಗಳ ಹಿಂದೆ ಶೇ.35 ಮೀಸಲಾತಿಯ ಕಾನೂನು ಮಾಡಲಾಗಿತ್ತು. ಇದನ್ನು ಹೊರತುಪಡಿಸಿ ಕೆಳ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆ ಕೇವಲ ಶೇ.11.5ರಷ್ಟು ಮಾತ್ರ. ಅಭಿವೃದ್ಧಿ ಹೊಂದಿದ ಗೋವಾ, ಮೇಘಾಲಯದಂತಹ ಸಣ್ಣ ರಾಜ್ಯಗಳಲ್ಲಿ ಯಾವುದೇ ಮೀಸಲಾತಿ ಇಲ್ಲದೇ ಹೋದರೂ ಶೇ. 65ರಿಂದ 73ರಷ್ಟು ಮಹಿಳಾ ನ್ಯಾಯಾಧೀಶರಿದ್ದಾರೆ.
05.ಕೆಳ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಹೈಕೋರ್ಟ್, ಅನಂತರ ಸುಪ್ರೀಂ ಕೋರ್ಟ್‌ಗೆ ಭಡ್ತಿ ನೀಡಲಾಗುತ್ತದೆ. ಆದರೆ ಮೀಸಲಾತಿ ನಿಯಮ ಮತ್ತು ನೇರ ನೇಮಕಾತಿಗಾಗಿ ಮಹಿಳೆಯರಿಗಾಗಿ ಯಾವುದೇ ಪ್ರತ್ಯೇಕ ನಿಯಮವಾಗಲೀ ಕಾನೂನು ಆಗಲೀ ಇಲ್ಲ.
ಪುಟ ನಿರ್ವಹಣೆ: ವಿದ್ಯಾ ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.