PhD; ಅಪಮೌಲ್ಯಗೊಳ್ಳುತ್ತಿದೆಯೇ ಅತ್ಯುನ್ನತ ಶೈಕ್ಷಣಿಕ ಪದವಿ?
Team Udayavani, Dec 16, 2024, 6:47 AM IST
ಡಾಕ್ಟರೆಟ್ ಅಥವಾ ಪಿಎಚ್.ಡಿ. ಪದವಿಯು ಶೈಕ್ಷಣಿಕ ಪದವಿಗಳಲ್ಲೇ ಅತ್ಯುನ್ನತ ಪದವಿಯಾಗಿದೆ. ಯಾಕೆಂದರೆ ಇದು ಕೇವಲ ಪುಸ್ತಕಗಳಿಂದ ಓದಿದ್ದನ್ನು ಆಧರಿಸಿ ಪರೀಕ್ಷೆ ಬರೆದು ಉತ್ತೀರ್ಣರಾಗುವ ಪದವಿಯಾಗಿರದೆ, ತಾನೇ ಸ್ವಂತ ನೆಲೆಯಲ್ಲಿ ಇದುವರೆಗೆ ಯಾರೂ ಮಾಡಿರದ ಯಾವುದಾದರೂ ಒಂದು ಸಂಶೋಧನೆಯನ್ನು ಮಾಡಿ ಆ ಸಂಶೋಧನೆಯು ಇತರ ಹೆಸರಾಂತ ವಿಜ್ಞಾನಿಗಳಿಂದ ಅನುಮೋದನೆಗೊಂಡು ಪಡೆಯುವ ಪದವಿಯಾಗಿದೆ. ಆದರೆ ಇತ್ತೀಚೆಗೆ ಏಕೋ ಈ ಪದವಿ ತುಂಬಾ ಬಡವಾಗುತ್ತಿದ್ದು ಸೊರಗುತ್ತಿರುವಂತೆ ಭಾಸವಾಗುತ್ತಿದೆ.
ಕೆಲವು ದಶಕಗಳ ಹಿಂದೆ ಅವರು ಪಿಎಚ್. ಡಿ. ಮಾಡಿದ್ದಾರೆ ಎಂದರೆ ಜನ ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಡುತ್ತಿದ್ದರು. ಈಗ ಸ್ನಾತಕೋತ್ತರ ಪದವಿಯಾದ ಪಡೆದ ಕೂಡಲೇ ಇನ್ನೂ ಪಿಎಚ್.ಡಿ. ಆಗಿಲ್ಲವೇ? ಎಂದು ಕೇಳುತ್ತಾರೆ. ನೀವು ಒಂದು ಕಲ್ಲು ಎತ್ತಿ ಯಾವ ಕಡೆಗೆ ಎಸೆದರೂ ಅದು ಹೋಗಿ ಒಬ್ಬ ಪಿಎಚ್.ಡಿ. ಪದವೀಧರನಿಗೆ ಬಡಿಯುತ್ತದೆ ಎನ್ನುವಷ್ಟು ಪಿಎಚ್.ಡಿ. ಪದವೀಧರರಿದ್ದಾರೆ.
ಯಾವುದೇ ವಸ್ತುವಿರಲಿ, ಪದವೀಧರರಿರಲಿ, ಬೇಡಿಕೆಗಿಂತ ಉತ್ಪಾದನೆ ಅಥವಾ ಪೂರೈಕೆ ಜಾಸ್ತಿಯಾದಂತೆ ಅದು ಸ್ವಾಭಾವಿಕವಾಗಿ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತದೆ. ಸದ್ಯ ಡಾಕ್ಟರೆಟ್ ಪದವಿಯಲ್ಲೂ ಇದೆ ಪರಿಸ್ಥಿತಿ ಇದೆ.
ಪಿಎಚ್.ಡಿ. ಹಿಂದಿಗಿಂತ ಈಗ ಸುಲಭ
ಯಾವುದೇ ಸಂಶೋಧನೆ ಬಾಯಿಯಲ್ಲಿ ಹೇಳಿದಷ್ಟು ಸುಲಭವಲ್ಲವಾದರೂ, ತುಲನಾತ್ಮಕವಾಗಿ ಇತ್ತೀಚಿನ ದಿನಗಳಲ್ಲಿ ಅದು ಸುಲಭವೇ ಎನಿಸುತ್ತದೆ. ಇದಕ್ಕೆ ಕಾರಣಗಳೂ ಹಲವು. ನಾಲ್ಕೈದು ದಶಕಗಳ ಮೊದಲು ಸಂಶೋಧನೆಗೆ ಬೇಕಾದ ಮೂಲಸೌಲಭ್ಯಗಳ ಕೊರತೆ ಇತ್ತು. ಅನೇಕ ವಿಶ್ವವಿದ್ಯಾನಿಲಯಗಳು ಶಿಕ್ಷಣಕ್ಕೆ ಕೊಟ್ಟಷ್ಟು ಪ್ರಾಮುಖ್ಯವನ್ನು ಸಂಶೋಧನೆಗೆ ಕೊಡುತ್ತಿರಲಿಲ್ಲ. ಹಾಗೆಯೇ ಗಣಕಯಂತ್ರ, ಅಂತರ್ಜಾಲಗಳ ಬಳಕೆ ಆರಂಭವಾಗಿರಲಿಲ್ಲ. ಆದುದರಿಂದ ಸಂಶೋಧನ ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿಯಬೇಕಾದರೆ ವಾಚನಾಲಯಕ್ಕೆ ಹೋಗಿ ಹಗಲಿರುಳು ಅಧ್ಯಯನ ನಡೆಸಬೇಕಿತ್ತು. ಈಗ ಹಾಗಲ್ಲ. ಚಿಟಿಕೆ ಹೊಡೆಯುವಷ್ಟರಲ್ಲಿ ವಿಶ್ವದಾದ್ಯಂತ ನಡೆದ, ನಡೆಯುತ್ತಿರುವ ಮತ್ತು ನಡೆಯಲಿರುವ ಸಂಶೋಧನೆಗಳ ಮಾಹಿತಿ ನಮ್ಮ ಕೈಯಲ್ಲಿರುವ ಫೋನಿನ ಗುಂಡಿ ಒತ್ತಿದರೆ ಸಿಗುತ್ತದೆ. ಸಂಶೋಧನ ಪ್ರಬಂಧಗಳನ್ನು ರಚಿಸಿ ಕೊಡಬಲ್ಲ ಕೃತಕ ಬುದ್ಧಿಮತ್ತೆಯ ಆವಿಷ್ಕಾರವಾಗಿದೆ. ಯಾವುದನ್ನೂ ಹೊಸದಾಗಿ ಟೈಪ್ ಮಾಡುವ ಅಗತ್ಯವೂ ಇಲ್ಲ. ಎಲ್ಲವೂ “ಕಾಪಿ-ಪೇಸ್ಟ್’ ಎನ್ನುವ ಹಂತಕ್ಕೆ ತಲುಪಿದೆ. ಹೆಚ್ಚಿನ ವಿಶ್ವವಿದ್ಯಾನಿಲಯಗಳಲ್ಲಿ ಮೂಲಸೌಕರ್ಯಗಳ ಬೆಳವಣಿಗೆಯಾಗಿದೆ. ಆಧುನಿಕ ಯಂತ್ರಗಳು, ಸೂಕ್ಷ್ಮದರ್ಶಕಗಳು, ಸಾಫ್ಟ್ವೇರ್‌ಗಳೂ ಪೂರೈಕೆಯಾಗುತ್ತಿದ್ದು ಸಂಶೋಧಕರು ಸುಲಭವಾಗಿ ತಮಗೆ ಬೇಕಾದ ಪ್ರಯೋಗಗಳನ್ನು ಮಾಡಬಹುದಾಗಿದೆ.
ವಿಶ್ವವಿದ್ಯಾನಿಲಯಗಳ ನಡುವಿನ ಪೈಪೋಟಿ
ಯಾವುದು ಶ್ರೇಷ್ಠ ವಿಶ್ವವಿದ್ಯಾನಿಲಯವೆಂದು ಪತ್ತೆಹಚ್ಚಲು ಅನೇಕ ಅಂತಾರಾಷ್ಟ್ರೀಯ ಮಾನದಂಡಗಳಿದ್ದು, ಅವುಗಳಲ್ಲಿ ಪಿಎಚ್.ಡಿ. ಪದವಿ ಪಡೆದವರೆಷ್ಟು ಇದ್ದಾರೆ ಎನ್ನುವುದೂ ಒಂದಾಗಿದೆ. ಇತ್ತೀಚೆಗೆ ತಾವು ಸರ್ವಶ್ರೇಷ್ಠರಾಗಬೇಕೆಂಬ ಪೈಪೋಟಿ ಎಲ್ಲ ವಿಶ್ವವಿದ್ಯಾನಿಲಯಗಳ ನಡುವೆ ಇರುವುದನ್ನು ಕಾಣಬಹುದು. ಇದಕ್ಕಾಗಿ ಪ್ರತಿಯೊಬ್ಬ ಉಪನ್ಯಾಸಕನ ಮೇಲೂ ಪಿಎಚ್.ಡಿ. ಮಾಡಲೇಬೇಕಾದ ಹಾಗೂ ಸಂಶೋಧನೆಗಳ ಸಾರಾಂಶವನ್ನು ಅತ್ಯುತ್ತಮ ನಿಯತಕಾಲಿಕೆಗಳಲ್ಲಿ ಪ್ರಕಟಿಸಬೇಕಾದ ಒತ್ತಡವಿರುತ್ತದೆ. ಸ್ನಾತಕೋತ್ತರ ಪದವಿಯಿದ್ದರೆ ಸಾಲದು. ಉಪನ್ಯಾಸಕನ ಹುದ್ದೆ ಸಿಗಬೇಕಾದರೆ ಪಿಎಚ್.ಡಿ. ಕಡ್ಡಾಯವಾಗಿದೆ. ಹಾಗಾಗಿ ಅದು ಕೇವಲ ಈಗಿರುವ ತರಗತಿಗಿಂತ ಮುಂದಿನ ತರಗತಿಯ ಒಂದು ಅಧ್ಯಯನದಂತಿದ್ದು ಸ್ನಾತಕೋತ್ತರ ಪದವಿ ಪಡೆದ ಪ್ರತಿಯೊಬ್ಬರೂ ಗಳಿಸುವ ಮತ್ತು ಗಳಿಸಬಹುದಾದ ಪದವಿಯಾಗಿದೆ. ಕೆಲವು ದಶಕಗಳ ಹಿಂದೆ ಸ್ನಾತಕೋತ್ತರ ಪದವಿ ಪಡೆದವರಲ್ಲಿ ಕೇವಲ ಶೇ. 5ರಷ್ಟು ಪದವೀಧರರು ಪಿಎಚ್.ಡಿ.ಯಲ್ಲಿ ಆಸಕ್ತರಾಗಿದ್ದು ಒಂದು ಸಂಸ್ಥೆಯಲ್ಲಿ ಬೆರಳೆಣಿಕೆಯಷ್ಟೇ ಡಾಕ್ಟರೆಟ್ ಪಡೆದವರಿರುತ್ತಿದ್ದರು. ಈಗ ಶೇ. 80-90ರಷ್ಟಿದ್ದಾರೆ. ಒತ್ತಡದಿಂದಾಗಿ ಕೇವಲ ಭಡ್ತಿಗಾಗಿ ಮಾಡಿದ ಸಂಶೋಧನೆಗಳು ಸಾರರಹಿತವಾಗಿ ಸಪ್ಪೆಯಾಗಿರುತ್ತವೆ. “ನನಗೆ ಭಡ್ತಿಯ ಅಗತ್ಯವಿಲ್ಲ. ನಾನು ಈ ಆವಿಷ್ಕಾರ ಮಾಡಲೇಬೇಕು. ಇದನ್ನು ಕಂಡು ಹಿಡಿಯುವವರೆಗೆ ವಿರಮಿಸಲಾರೆ’ ಎನ್ನುವ ಮನಃಸ್ಥಿತಿ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ.
ಪರೀಕ್ಷಾ ವಿಧಾನಗಳು
ಹಿಂದೆ ಹೆಚ್ಚಿನ ವಿಶ್ವವಿದ್ಯಾನಿಲಯಗಳಲ್ಲಿ ಪಿಎಚ್.ಡಿ. ಪರೀಕ್ಷಕರಲ್ಲಿ ಕಡ್ಡಾಯವಾಗಿ ಒಬ್ಬರಾದರೂ ವಿದೇಶದವರಾಗಿರಬೇಕಿತ್ತು. ಪರೀಕ್ಷಕರನ್ನು ಗೌಪ್ಯವಾಗಿ ವಿಶ್ವವಿದ್ಯಾನಿಲಯವೇ ಹುಡುಕಿ ಅವರಿಗೆ ಪಿಎಚ್.ಡಿ. ಪ್ರಬಂಧಗಳನ್ನು ಅನುಮೋದನೆಗೆ ಕಳುಹಿಸುತ್ತಿದವು. ಅವರೂ ತುಂಬಾ ಕಟ್ಟುನಿಟ್ಟಿನವರಾಗಿದ್ದು, ಕಡ್ಡಿ ಮುರಿದಂತೆ ಇದು ಪದವಿ ಪಡೆಯಲು ಯೋಗ್ಯವಲ್ಲವೆಂದು ತಿರಸ್ಕರಿಸುತ್ತಿದ್ದರು. ಆದರೆ ಈಗ ಪರೀಕ್ಷಕರನ್ನು ವಿದ್ಯಾರ್ಥಿ ಮತ್ತು ಅವನ ಮಾರ್ಗದರ್ಶಕರೇ ಆಯ್ಕೆ ಮಾಡುತ್ತಿದ್ದು ಪ್ರಬಂಧಗಳನ್ನು ತಿರಸ್ಕರಿಸುವುದು ಅತೀ ವಿರಳವಾಗಿದೆ.
ಹಣಭಕ್ಷಕ ನಿಯತಕಾಲಿಕೆಗಳು
ಧಾರಾಳವಾಗಿ ಹಣ ಸುರಿಯಲು ತಯಾರಿದ್ದರೆ ಎಂಥಾ ಕಳಪೆ ಸಂಶೋಧನ ಪ್ರಬಂಧಗಳನ್ನೂ ಪ್ರಕಟಿಸಬಲ್ಲ ಹಣಭಕ್ಷಕ ನಿಯತಕಾಲಿಕೆಗಳಿಗೆ ಕೊರತೆ ಇಲ್ಲ. ಹಾಗಾಗಿ ವರ್ಷದಲ್ಲಿ ಇಂತಿಷ್ಟೇ ಪ್ರಬಂಧಗಳನ್ನು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದರಷ್ಟೇ ಭಡ್ತಿ ಸಿಗುತ್ತದೆ ಅಥವಾ ಸಂಬಳದಲ್ಲಿ ಏರಿಕೆಯಾಗುತ್ತದೆ ಎನ್ನುವ ವಿಶ್ವವಿದ್ಯಾನಿಲಯಗಳ ಕಟ್ಟಪ್ಪಣೆಗೆ ಸರಿಯಾಗಿ ಸಂಶೋಧಕರೂ ಹಾಗೂ ಹೀಗೂ ಮಾಡಿ, ಹಣ ಕೊಟ್ಟಾದರೂ ತಮ್ಮ ಕಳಪೆ ಸಂಶೋಧನೆಯನ್ನು ಪ್ರಕಟಿಸಿ ಬಿಡುತ್ತಾರೆ.
ಕಾಲ ಮಿಂಚಿಲ್ಲ
ಇನ್ನೂ ಕಾಲ ಮಿಂಚಿಲ್ಲ. ಪಿಎಚ್.ಡಿ. ಪದವಿಯ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ವರೂ ಯೋಚಿಸಬೇಕಿದೆ. ಒತ್ತಡ ಹೇರಿ ಗಳಿಸಿದ ಪಿಎಚ್. ಡಿ., ಮಾಡಿದ ಸಂಶೋಧನೆಯು ವೈಯಕ್ತಿಕ ಭಡ್ತಿ ಗಳಿಸಿ ಕೊಟ್ಟು, ವಿಶ್ವವಿದ್ಯಾನಿಲಯಕ್ಕೆ ಸ್ವಲ್ಪ ಲಾಭಗಳಿಸಿ ಕೊಡಬಹುದಾದರೂ ಇದು ವಿಜ್ಞಾನಕ್ಕೆ ಮತ್ತು ವಿಶ್ವಕ್ಕೆ ಯಾವುದೇ ದೇಣಿಗೆಯನ್ನು ನೀಡುವುದಿಲ್ಲ. ಸಂಶೋಧನೆಯನ್ನೇ ವಿಶ್ವವಿದ್ಯಾನಿಲಯಗಳ ಮತ್ತು ಅಲ್ಲಿನ ಕಾರ್ಮಿಕರ ಶ್ರೇಷ್ಠತೆಯ ಮಾನದಂಡವೆನ್ನುವುದನ್ನು ನಿಲ್ಲಿಸಬೇಕು. ಸಂಶೋಧನೆಗಳ ಅನುಮೋದಕರು, ಪರೀಕ್ಷಕರು ಹಿಂದಿನಂತೆ ಕಟ್ಟುನಿಟ್ಟಿನವರಾಗಬೇಕು. ಪಿಎಚ್.ಡಿ. ಎಲ್ಲರಿಗೂ ಎಟಕುವ ಹಣ್ಣಲ್ಲವೆನ್ನುವಂತಿರ ಬೇಕು. ಆಗಲೇ ಅದರ ಗತಕಾಲದ ಗೌರವವನ್ನು ಮರಳಿ ಪಡೆಯಲು ಸಾಧ್ಯ.
ಡಾಕ್ಟರ್ ಆಫ್ ಫಿಲಾಸಫಿ(ಪಿಎಚ್.ಡಿ.) ಅಧ್ಯಯನ ಇತ್ತೀಚಿನ ವರ್ಷಗಳಲ್ಲಿ ಬಲು ಸುಲಭದ ತುತ್ತಾಗಿದೆ. ಇನ್ನು ವಿಶ್ವವಿದ್ಯಾನಿಲಯಗಳಂತೂ ಪೈಪೋಟಿಗೆ ಬಿದ್ದವುಗಳಂತೆ ಸಂಶೋಧನೆ, ಪಿಎಚ್.ಡಿ. ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಡುತ್ತಿವೆ. ಸಂಶೋಧನ ಪ್ರಬಂಧಗಳ ಪ್ರಕಟನೆಯಂತೂ ಬಲು ಸಲೀಸಾಗಿ ಮಾರ್ಪಟ್ಟಿದೆ. ಇದರ ಪರಿಣಾಮ ಪಿಎಚ್.ಡಿ. ಪದವಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವುದು ಚಿಂತನೀಯ.
ಡಾ| ಸತೀಶ ನಾಯಕ್ ಆಲಂಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UKP; ಕೃಷ್ಣೆಯ ಮೌನ ರೋದನ: ಇನ್ನೂ ಕೈಗೂಡದ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ
Pandit Venkatesh Kumar; ಕರಾವಳಿಗರ ಪ್ರೀತಿ, ಮನ್ನಣೆಯನ್ನೆಂದೂ ಮರೆಯಲಾರೆ
ಜಗತ್ತಿಗೆ ಸಿರಿಯಾ ತಲೆಬೇನೆಯಾ? ಜಾಗತಿಕವಾಗಿ ಭಯೋತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಬೆಂಬಲ?
ಇಂದು ದತ್ತ ಜಯಂತಿ: ಸರ್ವದೇವತಾ ಸ್ವರೂಪಿ, ವಿಶ್ವಗುರು ಶ್ರೀದತ್ತ
“ಗಿಲಿಗಿಲಿ’ ಕೌತುಕದ ಪ್ರೊ|ಶಂಕರ್ ; ಇಂದು ಉಡುಪಿಯಲ್ಲಿ “ಶಂಕರಾಭಿವಂದನೆ’
MUST WATCH
ಹೊಸ ಸೇರ್ಪಡೆ
Chido Cyclone: ಫ್ರಾನ್ಸ್ ನಲ್ಲಿ ಭೀಕರ ಚಂಡಮಾರುತದ… ಸಾವಿರ ಗಡಿ ದಾಟಿದ ಮೃತರ ಸಂಖ್ಯೆ?
INDvsAUS: ಮಳೆಯಾಟದಲ್ಲಿ ಜಾರಿದ ಭಾರತದ ಬ್ಯಾಟಿಂಗ್; ಆಸೀಸ್ ಬಿಗಿ ಹಿಡಿತ
Loophole: ನಿಮ್ಮ ಪಡಿತರ ಅಪಾಯದಲ್ಲಿ? ಸೇವಿಸುವ ಆಹಾರ ಎಷ್ಟು ಸುರಕ್ಷಿತ?
Big Claim: ನನ್ನ ರಾಜಕೀಯ ಜೀವನ ರೂಪಿಸಿದ್ದು, ಕೆಡವಿದ್ದು ಗಾಂಧಿಗಳು: ಮಣಿಶಂಕರ್ ಅಯ್ಯರ್
WPL Auction: ಮಹಿಳಾ ಐಪಿಎಲ್ ಮಿನಿ ಹರಾಜು: ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.