ವಿಭಜನೆಯ ಒಡಲಲ್ಲಿ ಕರುಣಾಜನಕ ಕಥೆಗಳು
Team Udayavani, Aug 22, 2017, 2:48 AM IST
ಆ ಗುಂಪು ನಮ್ಮ ಓಣಿಗೆ ಬಂತು. ಅಪ್ಪ ಗಾಬರಿಗೊಂಡಿದ್ದ, ಅಮ್ಮನಿಗೆ ಅವಸರದಲ್ಲಿ ಒಂದು ಬಾಟಲಿ ಪೆಟ್ರೋಲು ಮತ್ತು ಕಡ್ಡಿ ಪೊಟ್ಟಣ ಕೊಟ್ಟು -“ಕೆಳಮಹಡಿಯಲ್ಲಿ ನಾನು ಸತ್ತು ಹೋದೆನೆಂದರೆ, ನೀವು ನಿಮ್ಮ ಮಾನ ಕಾಪಾಡಿಕೊಳ್ಳಿ. ಈ ಪೆಟ್ರೋಲ್ ನಿನ್ನ ಮೇಲೆ ಮತ್ತು ಅಮೋಲಕ್‌ಳ ಮೇಲೆ ಸುರಿದು ಬೆಂಕಿ ಹಚ್ಚು. ಯಾವುದೇ ಕಾರಣಕ್ಕೂ ಆ ದುಷ್ಟರ ಕೈಗೆ ಸಿಕ್ಕಿಬೀಳಬೇಡಿ’ ಅಂದ.
“ಹೇಳಿ ನಿಮ್ಮ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಆಕೆಯ ಹೊಟ್ಟೆ ಸೀಳಿಹೋಗಿ ಕರುಳು ಜೋತು ಬಿದ್ದಿದ್ದರೆ ಅದನ್ನು ನೋಡಿ ನಿಮಗೆ ಹೇಗನ್ನಿಸುತ್ತೆ?’
ಈ ಪ್ರಶ್ನೆಯನ್ನು ಎದುರಿಟ್ಟವರು ಪಾಕಿಸ್ತಾನದ ಸಲಾಹುದ್ದಿನ್ ಖಾಲಿದ್. ಈ ಹಿರಿಯ ಜೀವಿ ತನ್ನ ತಾಯಿಯನ್ನು ಕಳೆದುಕೊಂಡಿದ್ದು ವಿಭಜನೆಯ ಸಮಯದಲ್ಲಿ. ಆಗ ಚಿಕ್ಕ ಹುಡುಗನಾಗಿದ್ದ ಸಲಾಹುದ್ದೀನ್ ತಮ್ಮ ಜೀವನದಲ್ಲಿ ಹಿಂಸಾಚಾರ ಮತ್ತು ರಕ್ತಪಾತದ ಅಧ್ಯಾಯವನ್ನು ನೋಡಬೇಕಾಯಿತು.
ಅದು 1947. ಭಾರತ ಮತ್ತು ಪಾಕಿಸ್ತಾನದ ನಡುವೆ ಹೊಸ ಗಡಿಯನ್ನು ಹುಟ್ಟುಹಾಕಲಾಗಿತ್ತು. ವಿಭಜನೆಯ ಆ ಹೊತ್ತಲ್ಲಿ ಸಲಾಹುದ್ದೀನ್‌ನ ಕುಟುಂಬ ದೆಹಲಿಯಲ್ಲಿತ್ತು. “ಯಾರೋ ಜೋರಾಗಿ ಕಿರುಚಿದ್ದು ನನಗೆ ಕೇಳಿಸಿತು. ಹಿಂದಿರುಗಿ ನೋಡಿದಾಗ ಸಿಖ್ ವ್ಯಕ್ತಿಯೊಬ್ಬ ಕೈಯಲ್ಲಿ ಖಡ್ಗ ಹಿಡಿದು ನಿಂತಿದ್ದ. ಆತನನ್ನು ನೋಡಿದ್ದೇ ನನ್ನ ಅಕ್ಕ ಓಡಲಾರಂಭಿಸಿದಳು. ಮೊದಲು ಆತ ಮತ್ತು ಆತನ ಜೊತೆಗಿದ್ದವರು ನನ್ನ ಅಮ್ಮನ ರೂಮು ಹೊಕ್ಕು ಆಕೆಯನ್ನು ಕೊಂದು ಹಾಕಿದರು. ಆಮೇಲೆ ನಮ್ಮತ್ತ ಓಡಿಬಂದರು..’ ಎಂದು ವಿಭಜನೆಯ ವೇಳೆಯ ಹಿಂಸಾಚಾರವನ್ನು ನೆನೆಯುತ್ತಾರೆ ಸಲಾಹುದ್ದೀನ್.
ಅವರೆಲ್ಲ ತಮ್ಮತ್ತ ಬರುತ್ತಿದ್ದಂತೆಯೇ ಭಯಗೊಂಡು ಹೊರಗೆ ಓಡಿಹೋದನಂತೆ ಬಾಲಕ ಸಲಾಹುದ್ದೀನ್. ಆತ ಹಿಂದಿರುಗಿ ಮನೆಗೆ ಬಂದಾಗ ಕಣ್ಣಿಗೆ ಕಂಡಿದ್ದು ಛಿದ್ರವಾಗಿ ಬಿದ್ದಿದ್ದ ತಾಯಿಯ ಶವ! “ನನ್ನ ಮನೆ ಅಕ್ಷರಶಃ ಕಸಾಯಿ ಖಾನೆಯಂತೆಯೇ ಕಾಣಿಸುತ್ತಿತ್ತು. ಅದನ್ನೆಲ್ಲ ನೆನಪಿಸಿಕೊಂಡಾಗ ಈಗಲೂ ನನಗೆ ಅತೀವ ನೋವಾಗುತ್ತದೆ. ನನ್ನ ಹೃದಯ ಕುಗ್ಗಿಹೋಗುತ್ತದೆ’ ಎನ್ನುತ್ತಾರೆ ಸಲಾಹುದ್ದೀನ್’. ಆ ಸಮಯದಲ್ಲಿ ತನ್ನ ತಾಯಿಯ ಸಾವಿಗೆ ಕಾರಣವಾದಂಥ ರಾಜಕೀಯ ವಿಪ್ಲವಗಳ ಬಗ್ಗೆ ಸಲಾಹುದ್ದೀನ್‌ಗೆ ಅರಿವಿರಲಿಲ್ಲ. ಆದರೆ ದೇಶವನ್ನು ಧಾರ್ಮಿಕ ಆಧಾರದಲ್ಲಿ ವಿಭಜಿಸುವ ಪ್ರಕ್ರಿಯೆಯಲ್ಲಿ ಇಂಥ ಸಾಮಾನ್ಯ ಜನರೇ ಭೀಕರ ಪರಿಣಾಮವನ್ನು ಎದುರಿಸಿದವರು.
ವಿಭಜನೆಯ ನಂತರದ ಭಯಾನಕ ಹಿಂಸಾಚಾರಕ್ಕೆ ಸಾಕ್ಷಿಯಾದವರ ಮನಸ್ಸಲ್ಲಿ ಈಗಲೂ ಅಂದಿನ ಭೀಕರ ಘಟನೆಗಳು ಅಚ್ಚೊತ್ತಿದಂತೆ ಕುಳಿತುಬಿಟ್ಟಿವೆ. ಭಾರತ-ಪಾಕ್ ವಿಭಜನೆಯು ಮನುಷ್ಯ ಇತಿಹಾಸದಲ್ಲೇ ಅತಿದೊಡ್ಡ ವಲಸೆ ಪ್ರಕ್ರಿಯೆಯನ್ನು ಹುಟ್ಟುಹಾಕಿತು. ಭಾರತದಾದ್ಯಂತ ಇದ್ದ ಮುಸಲ್ಮಾನರು, ಪಾಕಿಸ್ತಾನದಲ್ಲಿದ್ದ ಹಿಂದೂಗಳು ಮತ್ತು ಸಿಖರು ಗಡಿ ಆಚೆಗಿನ ಪ್ರದೇಶಕ್ಕೆ ತೆರಳಲು ತೀವ್ರ ಪ್ರಯಾಸ ಪಟ್ಟರು.
ಜನರು ತಮ್ಮ ಊರು ಬಿಟ್ಟು ತೆರಳಲಾರಂಭಿಸಿದಾಗ ಹಿಂಸಾಚಾರದ ಅಲೆಗಳು ಬಂದಪ್ಪಳಿಸಲಾರಂಭಿಸಿದವು. ವಿಭಜನೆ ನಂತರದ ಹಿಂಸಾಚಾರದ ಬಗ್ಗೆ ಇತಿಹಾಸಜ್ಞ ವಿಲಿಯಂ ಡ್ಯಾಲಿಪಲ್ ಹೇಳುತ್ತಾರೆ: “”‘ಒಂದು ವರ್ಷದ ಹಿಂದೆ ಪರಸ್ಪರರ ಮದುವೆ ಸಮಾರಂಭಗಳಲ್ಲಿ ಸಂತೋಷದಿಂದ ಪಾಲ್ಗೊಳ್ಳುತ್ತಿದ್ದ ಜನರೆಲ್ಲ, ವಿಭಜನೆಯ ನಂತರ ಪರಸ್ಪರರ ಹತ್ಯೆಯಲ್ಲಿ ತೊಡಗಿದರು, ಚಿಕ್ಕ ಮಕ್ಕಳನ್ನು ಕೊಂದರು, ಹೆಣ್ಣುಮಕ್ಕಳ ಅತ್ಯಾಚಾರ ಮಾಡಿದರು..”’
ಅಂದು ಹೇಗೆ, ಲಾಹೋರ್‌ನಂಥ ನಗರಿಗಳ ರೈಲ್ವೆ ಸ್ಟೇಷನ್‌ಗಳು ಸಾಮೂಹಿಕ ಹತ್ಯಾಕಾಂಡದ ಸೀನ್‌ಗಳಾಗಿ ಬದಲಾಗಿದ್ದವು ಎನ್ನುವುದನ್ನೂ ಅವರು ಬಣ್ಣಿಸುತ್ತಾರೆ: “”ರೈಲ್ವೆ ಪ್ಲಾಟ್‌ಫಾರ್ಮ್ಗಳೆಲ್ಲ ರಕ್ತಮಯವಾಗಿದ್ದವು. ಏಕೆಂದರೆ ಭಾರತಕ್ಕೆ ವಲಸೆ ಹೋಗಲು ಕಾಯುತ್ತಿದ್ದ ಹಿಂದೂಗಳನ್ನು ಕೊಚ್ಚಿಹಾಕಲಾಗಿತ್ತು¤. ಇನ್ನೊಂದೆಡೆ ಭಾರತದಿಂದ ಪಾಕಿಸ್ತಾನಕ್ಕೆ ಬಂದ ರೈಲಿನ ತುಂಬೆಲ್ಲ ಮುಸಲ್ಮಾನರ ಹೆಣಗಳು ತುಂಬಿದ್ದವು. ಒಟ್ಟಲ್ಲಿ, ಎಲ್ಲೆಲ್ಲೂ ಗದ್ದಲವೋ ಗದ್ದಲ…”
ಈ ಗದ್ದಲದ ನಡುವೆಯೇ ಮಹಿಳೆಯರನ್ನು ಪ್ರತ್ಯೇಕಿಸಿ ಹಿಂಸೆ ನೀಡಲಾಯಿತು. ಬಹಳಷ್ಟು ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾಗುವ ಭಯದಲ್ಲೇ ಬದುಕಿದರು.
17 ವರ್ಷದ ಹಿಂದೂ ಹೆಣ್ಣುಮಗಳು ಅಮೋಲಕ್ ಸ್ವಾನಿ ಪಾಕಿಸ್ತಾನದ ಪೇಶಾವರದಲ್ಲಿ ತನ್ನ ಅಪ್ಪ³ ಅಮ್ಮನೊಂದಿಗೆ ವಾಸವಿದ್ದಳು. ತಮ್ಮ ಓಣಿಯತ್ತ ಮುಸಲ್ಮಾನರ ಉದ್ರಿಕ್ತ ಗುಂಪೊಂದು ಬರುತ್ತಿದೆ ಎನ್ನುವ ಸುದ್ದಿ ತಿಳಿದು ಆಕೆಯ ಕುಟುಂಬವೆಲ್ಲ ಬೆಚ್ಚಿಬಿದ್ದಿತು. ಆ ಗುಂಪು ಮನೆಗಳಿಗೆಲ್ಲ ಬೆಂಕಿ ಹಚ್ಚಿ, ಮಹಿಳೆಯರನ್ನು ಹೊತ್ತೂಯ್ಯುತ್ತಿದೆ ಎಂಬ ಬೆಚ್ಚಿಬೀಳಿಸುವ ಸಂಗತಿಯನ್ನು ಅಮೋಲಕ್‌ಳ ತಂದೆ, ಆಕೆಗೆ ಮತ್ತು ಆಕೆಯ ತಾಯಿಗೆ ಹೇಳಿದರು.
“”ಆ ಸಮಯದಲ್ಲಿ ಅಪ್ಪ ಬಹಳ ಗಾಬರಿಗೊಂಡಿದ್ದ, ಅಮ್ಮನಿಗೆ ಆತ ಅವಸರದಲ್ಲಿ ಒಂದು ಬಾಟಲಿ ಪೆಟ್ರೋಲು ಮತ್ತು ಕಡ್ಡಿ ಪೊಟ್ಟಣ ಕೊಟ್ಟು -“ಕೆಳಮಹಡಿಯಲ್ಲಿ ನಾನು ಸತ್ತು ಹೋದೆನೆಂದರೆ, ನೀವು ನಿಮ್ಮ ಮಾನ ಕಾಪಾಡಿಕೊಳ್ಳಿ. ಈ ಪೆಟ್ರೋಲ್ ನಿನ್ನ ಮೇಲೆ ಮತ್ತು ಅಮೋಲಕ್‌ಳ ಮೇಲೆ ಸುರಿದು ಬೆಂಕಿ ಹಚ್ಚು. ಯಾವುದೇ ಕಾರಣಕ್ಕೂ ಆ ದುಷ್ಟರ ಕೈಗೆ ಸಿಕ್ಕಿಬೀಳಬೇಡಿ’ ಅಂದ.” ಎನ್ನುತ್ತಾರೆ ಅಮೋಲಕ್. ಆದರೆ ಸುದೈವವಶಾತ್ ದಾಳಿಕೋರರು ಇವರ ಮನೆಗೆ ಕಾಲಿಡಲೇ ಇಲ್ಲ. ಅಮೋಲಕ್ ಮತ್ತಾಕೆಯ ಕುಟುಂಬ ಪಾಕಿಸ್ತಾನದಿಂದ ತಪ್ಪಿಸಿಕೊಂಡು ಭಾರತದ ಅಮೃತಸರಕ್ಕೆ ವಲಸೆ ಹೋಯಿತು.
ಆದರೆ ಉಳಿದ ಮಹಿಳೆಯರಿಗೆ ಈ ಅದೃಷ್ಟವಿರಲಿಲ್ಲ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಿಂದ ಭಾರತಕ್ಕೆ ವಲಸೆ ಬಂದ ಸರ್ದಾರ್ ಜೋಗಿಂದರ್ ಸಿಂಗ್ ಕೊಹ್ಲಿ, ಆ ರಕ್ತಚರಿತ್ರೆಯನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಾರೆ(ವಿಭಜನೆಯ ಸಮಯದಲ್ಲಿ ಕೊಹ್ಲಿ ಹದಿಹರೆಯದ ಹುಡುಗರಾಗಿದ್ದರು.) ಜೋಗಿಂದರ್ ಸಿಂಗ್ ಅವರ ಊರಲ್ಲಿ “ವೀರಾವಾಲಿ’ ಎನ್ನುವ ಹೆಣ್ಣುಮಗಳಿದ್ದಳಂತೆ. “ಆಕೆ ತುಂಬಾ ಸುಂದರವಾಗಿದ್ದಳು. ಹಿಂಸಾಚಾರದ ಅಲೆ ನಮ್ಮೂರನ್ನು ತಲುಪಿದಾಗ ಮುಸಲ್ಮಾನರ ಗುಂಪು ಆಕೆಯ ಬೆನ್ನತ್ತಿತು. ಆಗ ಆಕೆ ಓಡುತ್ತಾ ನಮ್ಮೂರಿನ ಗುರುದ್ವಾರಕ್ಕೆ ಹೋದಳು. ಅಲ್ಲಿ ನಮ್ಮ ಪವಿತ್ರ ಗ್ರಂಥಕ್ಕೆ ಪೂಜೆ ಸಲ್ಲಿಸಿದ ವೀರಾವಾಲಿ, ನಂತರ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸತ್ತಳು.’
ಅಂದು ಸಾವಿಗೀಡಾಗಿದ್ದು ಆಕೆಯೊಬ್ಬಳೇ ಅಲ್ಲ. ತಮ್ಮೂರಿನ ಬಹುತೇಕ ಪುರುಷರಿಗೂ ಇದೇ ಪರಿಸ್ಥಿತಿ ಎದುರಾಯಿತು ಎನ್ನುತ್ತಾರೆ ಕೊಹ್ಲಿ. “ನಮ್ಮೂರಲ್ಲಿ 25 ಜನ ಪುರುಷರಲ್ಲಿ 18 ಮಂದಿ ಕಗ್ಗೊಲೆಯಾದರು. ಆ ಸಮಯದಲ್ಲಿ ನಾನು ತುಂಬಾ ಅತ್ತೆ. ಆ ಘಟನೆಯನ್ನು ನೆನೆಸಿಕೊಂಡರೆೆ ಈಗಲೂ ಕಣ್ಣು ಮಂಜಾಗುತ್ತವೆ. ಆಗ ನಮಗೆಲ್ಲ ಏನಾಗಿತ್ತು? ಅದೇಕೆ ನಮ್ಮಲ್ಲಿನ ಮಾನವೀಯತೆಯೇ ಸತ್ತುಹೋಗಿ, ಎಲ್ಲರೂ ರಾಕ್ಷಸರಾಗಿ ಬದಲಾಗಿಬಿಟ್ಟರು?’ ಎಂಬ ಪ್ರಶ್ನೆಯಿಡುತ್ತಾರೆ, 86 ವರ್ಷದ ಜೋಗಿಂದರ್ ಸಿಂಗ್ ಕೊಹ್ಲಿ.
ಈ ದೌರ್ಜನ್ಯಗಳು ಪಾಕಿಸ್ತಾನ ಮತ್ತು ಭಾರತದ ನಡುವಿನ ದಶಕಗಳ ಹಗೆತನಕ್ಕೆ ಪ್ರಮುಖ ಕಾರಣವಾಗಿಬಿಟ್ಟವು. ಆದರೂ ಎರಡೂ ಬದಿಯಲ್ಲಿಯೂ ಪರಸ್ಪರ “ದ್ವೇಷ’ವನ್ನು ಕಡಿಮೆ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ ಎನ್ನುವುದು ವಿಶೇಷ.
ಅಮೃತಸರದಲ್ಲಿ ಆ ಕಾಲದ ನೆನಪುಗಳನ್ನು ಜೀವಂತವಾಗಿಡುವುದಕ್ಕಾಗಿ ಹೊಸ ಮ್ಯೂಸಿಯಂ ಸ್ಥಾಪಿಸಲಾಗಿದೆ. “”ಈಗ ಆ ಹಿಂಸಾಚಾರದ ಸಂತ್ರಸ್ತರ ವಯಸ್ಸು ಹೆಚ್ಚುತ್ತಿದೆ. ಹೀಗಾಗಿ ಆ ಕಾಲದ ವೈಯಕ್ತಿಕ ಕಥೆಗಳನ್ನು ಕಲೆಹಾಕಿ ಕಾಪಿಡುವ ಉದ್ದೇಶದಿಂದ “ವಿಭಜನೆ ಮ್ಯೂಸಿಯಂ’ ಸ್ಥಾಪಿಸುವುದು ಅತ್ಯಗತ್ಯವೆನಿಸಿತು” ಎನ್ನುತ್ತಾರೆ ಈ ಸಂಗ್ರಹಾಲಯದ ನಿರ್ವಾಹಕಿ ಮಲ್ಲಿಕಾ ಅಹ್ಲುವಾಲಿಯಾ.
“”ಅದು ಕೇವಲ ವಸ್ತುಗಳು ಅಥವಾ ವ್ಯಕ್ತಿಗಳ ವಲಸೆಯಾಗಿರಲಿಲ್ಲ, ಬದಲಾಗಿ ದುಃಖ ವಿಷಾದದ ಸಾಮೂಹಿಕ ವಲಸೆಯಾಗಿತ್ತು. ಈ ಕಾರಣಕ್ಕಾಗಿಯೇ ವಿಭಜನೆಯ ಕಥೆಗಳನ್ನೆಲ್ಲ ಹೇಳುವುದು ಅಗತ್ಯವಾಗಿದೆ. ಆದರೆ ಈ ಮ್ಯೂಸಿಯಂ ಕೇವಲ ದುರಂತ ಕಥೆಗಳನ್ನಷ್ಟೇ ಸಂಗ್ರಹಿಸುವುದಿಲ್ಲ, ಬದಲಾಗಿ ಹಿಂಸಾಚಾರದ ನಡುವೆಯೇ ಧರ್ಮ ಭೇದವನ್ನು ಮರೆತು ಪರಸ್ಪರರ ರಕ್ಷಣೆಗೆ ನಿಂತ ಹಿಂದೂ, ಮುಸ್ಲಿಂ ಮತ್ತು ಸಿಖರ ಮಾನವೀಯ ಕಥೆಗಳನ್ನೂ ನಾವು ಕಲೆಹಾಕುತ್ತಿದ್ದೇವೆ. ಒಬ್ಬ ಸ್ನೇಹಿತ ಇನ್ನೊಬ್ಬನಿಗೆ ಸಹಾಯ ಮಾಡಿದ್ದು, ಒಬ್ಬ ಅಪರಿಚಿತ ಇನ್ನೊಬ್ಬ ಅಪರಿಚಿತನಿಗೆ ಸಹಾಯ ಮಾಡಿದ್ದು…ಈ ಕಥೆಗಳನ್ನೆಲ್ಲÉ ಈಗಿನ ಜನರಿಗೆ ತಲುಪಿಸುವುದು ಬಹಳ ಮುಖ್ಯ” ಎನ್ನುತ್ತಾರೆ ಮಲ್ಲಿಕಾ.
ಅತ್ತ ಪಾಕಿಸ್ತಾನದಲ್ಲೂ ಇಂಥದ್ದೇ ಒಂದು ಪ್ರಯತ್ನ ನಡೆದಿದೆ. “ಪಾಕಿಸ್ತಾನ ಸಿಟಿಜನ್ ಆಕೈìವ್ಸ್’ ಸಂಸ್ಥೆ ಕಳೆದೊಂದು ದಶಕದಲ್ಲಿ 2,200 ಜನರನ್ನು(ವಿಭಜನೆಯ ಸಂತ್ರಸ್ತರು) ಭೇಟಿ ಮಾಡಿ ಅವರ ಕಥೆಗಳನ್ನು ಸಂಗ್ರಹಿಸಿದೆ. ಈ ಲಾಭರಹಿತ ಸಂಸ್ಥೆಯ ಹಿರಿಯ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಆಲಿಯಾ ತಯ್ಯಬಿ, “ವಿಭಜನೆಯ ಕಾಲದಲ್ಲಿ ಬದುಕುಳಿದ ಸಾಮಾನ್ಯ ಜನರ ಕಥೆಗಳನ್ನು ಕೇಳಿಸಿಕೊಳ್ಳುವುದು ಬಹಳ ಮುಖ್ಯ’ ಎನ್ನುತ್ತಾರೆ. ಮುಂದುವರಿದು, “”ಹಿಂದೂಗಳಾಗಿರಲಿ, ಮುಸಲ್ಮಾನರಿರಲಿ ಅಥವಾ ಸಿಖರೇ ಆಗಿರಲಿ. ಭಾರತ ಮತ್ತು ಪಾಕಿಸ್ತಾನದಲ್ಲಿ ಹಿಂಸಾಚಾರಕ್ಕೆ ತುತ್ತಾಗಿ ಬದುಕುಳಿದ ಅವರ ಮಾತುಗಳನ್ನು ನಾವು ಕೇಳಿಸಿಕೊಳ್ಳಬೇಕು. ಆಗಲಾದರೂ ನಮಗೆಲ್ಲ
ಒಬ್ಬರನ್ನೊಬ್ಬರು ಸಾಯಿಸುತ್ತಾ ಹೋಗುವುದರಿಂದ ಪರಿಹಾರ ಸಿಗುವುದಿಲ್ಲ ಎನ್ನುವುದು ಅರ್ಥವಾಗುತ್ತದೆ. ಯುದ್ಧದ ಭೀಕರತೆ ಹೇಗಿರುತ್ತದೆ ಎನ್ನುವುದು ಮನವರಿಕೆಯಾಗುತ್ತದೆ. ನಮ್ಮೆದುರು ಎರಡು ಸಾಧ್ಯತೆಗಳಿವೆ. ಮೊದಲನೆಯದು ಇತಿಹಾಸದಿಂದ ಪಾಠ ಕಲಿತು ಒಳ್ಳೆಯ ವ್ಯಕ್ತಿಗಳಾಗಲು ಪ್ರಯತ್ನಿಸುವುದು. ಎರಡನೆಯದು, ಇತಿಹಾಸದಿಂದ ಮುಖ ತಿರುಗಿಸಿ,
ಏನೂ ಆಗಿಯೇ ಇಲ್ಲ ಎನ್ನುವಂತೆ ಇದ್ದುಬಿಡುವುದು. ಆದರೆ ಇತಿಹಾಸದ ಕಹಿ ಸತ್ಯವನ್ನು ಅಲ್ಲಗಳೆದರೆ ನಾವು ಮೂರ್ಖರಾಗಿಯೇ ಬದುಕುತ್ತೇವಷ್ಟೆ ‘ ಎನ್ನುವುದು ಆಲಿಯಾರ ಕಿವಿಮಾತು.
ಆದರೆ ಸಲಾಹುದ್ದೀನ್ ಖಾಲಿದ್‌ರಂಥ ಕೆಲವರಿಗೆ ಈ ಹಿಂಸಾಚಾರದ ನೋವು ಇಂದಿಗೂ ಕಡಿಮೆಯಾಗಿಲ್ಲ. “”ಅದ್ಹೇಗೆ ನಾನು ಎಲ್ಲವನ್ನೂ ಮರೆತುಬಿಡಲಿ? ಅದ್ಹೇಗೆ ಕ್ಷಮಿಸಿಬಿಡಲಿ? ನೀವು ನನಗೆ ಮಣಗಟ್ಟಲೇ ಹಣ ಕೊಡಬಹುದು, ಚಿನ್ನ ತಂದು ಸುರಿಯಬಹುದು, ಆದರೆ ನನ್ನ ಅಮ್ಮನನ್ನು ತಂದು ಕೊಡುತ್ತೀರಾ?” ಎಂದು ಪ್ರಶ್ನಿಸುತ್ತಾರೆ ಸಲಾಹುದ್ದೀನ್.
(ಲೇಖಕರು ಕೆನಡಾದ ಪತ್ರಕರ್ತರು, ಅಲ್‌ಜಝೀರಾ ವರದಿಗಾರರು)
ಸ್ಟೀವ್ ಕೇವೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.