ವಿಶ್ವದಲ್ಲಿ ಸುರಿಯುತ್ತಿದೆ ಪ್ಲಾಸ್ಟಿಕ್ ಮಳೆ!
Team Udayavani, Dec 18, 2022, 8:05 AM IST
ನಮ್ಮ ದಿನ ನಿತ್ಯದ ಜೀವನದಲ್ಲಿ ನಾವು ಪ್ಲಾಸ್ಟಿಕ್ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂದರೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಮ್ಮ ಮನೆಗಳಲ್ಲಿ ಪ್ಲಾಸ್ಟಿಕ್ ಒಂದಲ್ಲೊಂದು ತೆರನಾಗಿ ಉಪಯೋಗಿಸಲ್ಪಡುತ್ತಿದೆ. ಪ್ಲಾಸ್ಟಿಕ್ ಸೃಷ್ಟಿಸುತ್ತಿರುವ ಅನಾಹುತಗಳ ಬಗೆಗೆ ಕಳೆದೊಂದೆರಡು ವರ್ಷಗಳಿಂದೀಚೆಗೆ ವಿಶ್ವ ಮಟ್ಟದಲ್ಲಿ ಜನರಲ್ಲಿ ಒಂದಿಷ್ಟು ಜಾಗೃತಿ ಮೂಡತೊಡಗಿದೆ. ಕೇವಲ ಮನುಕುಲ ಮಾತ್ರವಲ್ಲದೆ ಈ ಭೂಮಿಯ ಮೇಲಣ ಸಕಲ ಜೀವರಾಶಿ, ಪ್ರಕೃತಿ, ಮಣ್ಣು, ಜಲ, ವಾಯು…ಹೀಗೆ ಪ್ರತಿಯೊಂದರ ಪಾಲಿಗೂ ಕಂಟಕಪ್ರಾಯವಾಗಿ ಪರಿಣಮಿಸಿರುವ ಪ್ಲಾಸ್ಟಿಕ್‌ನ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಶಕಗಳಿಂದ ನಡೆಯುತ್ತಿರುವ ಪ್ರಯತ್ನಗಳು ಈವರೆಗೂ ಯಶಸ್ವಿಯಾಗಿಲ್ಲ. ಇದನ್ನರಿತ ಜಾಗತಿಕ ಸಮುದಾಯ ಪ್ಲಾಸ್ಟಿಕ್ ಬಳಕೆಯನ್ನು ಹಂತಹಂತವಾಗಿ ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳತೊಡಗಿದೆ. ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳು ಪ್ರಾಣಿ, ನೀರಿನ ಮೂಲಕ ಮಾನವ ದೇಹ ಪ್ರವೇಶಿಸುತ್ತಿರುವ ಬಗೆಗೆ ಈಗಾಗಲೇ ಸಾಕಷ್ಟು ಅಧ್ಯಯನ ವರದಿಗಳು ಎಚ್ಚರಿಕೆಯನ್ನು ನೀಡಿವೆ. ಆದರೆ ಕಳೆದೆರಡು ವರ್ಷಗಳಿಂದೀಚೆಗೆ ವಿಶ್ವದ ಹಲವೆಡೆ ನಡೆಸಲಾದ ಸಂಶೋಧನೆಯಲ್ಲಿ ಪ್ಲಾಸ್ಟಿಕ್‌ನ ಸೂಕ್ಷ್ಮಕಣಗಳು ವಾತಾ ವರಣವನ್ನು ಈಗಾಗಲೇ ಸೇರಿಕೊಂಡಿದ್ದು ನಮ್ಮ ಉಸಿರಾಟದ ಮೂಲಕವೂ ದೇಹ ವನ್ನು ಪ್ರವೇಶಿಸುತ್ತಿರುವುದನ್ನು ಸಾಬೀತುಪಡಿಸಿವೆ. ಹಾಗಿದ್ದರೆ ಏನಿದು ಸಂಶೋ ಧನೆ?, ಮೈಕ್ರೋಪ್ಲಾಸ್ಟಿಕ್ ಕಣಗಳು ವಾತಾವರಣವನ್ನು ಸೇರುತ್ತಿರುವು ದಾದರೂ ಹೇಗೆ?, ಅದು ಹೇಗೆ ಗೋಚರಿಸಲಾ ರಂಭಿಸಿವೆ? ವಿಶ್ವದ ಎಲ್ಲೆಲ್ಲಿ ಇದು ಸಾಬೀತಾಗಿದೆ? ಎಂಬೆಲ್ಲ ವಿಷಯಗಳತ್ತ ಇಲ್ಲಿ ಬೆಳಕು ಚೆಲ್ಲಲಾಗಿದೆ.
ಏನಿದು ವರದಿ?
ನ್ಯೂಜಿಲ್ಯಾಂಡ್‌ನ ಆಕ್ಲೆಂಡ್‌ನಲ್ಲಿ ಕಳೆದೆರಡು ವರ್ಷಗಳಿಂದ ನಡೆಸಲಾದ ಅಧ್ಯಯನದ ವರದಿಯನ್ನು ಇದೇ ಡಿ.12ರಂದು ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ. ಈ ವರದಿಯ ಪ್ರಕಾರ ಆಕ್ಲೆಂಡ್‌ನಲ್ಲಿ 74 ಟನ್‌ಗಳಷ್ಟು ಮೈಕ್ರೋಪ್ಲಾಸ್ಟಿಕ್‌ಗಳು ಗಾಳಿಯಲ್ಲಿ ಸೇರಿಕೊಂಡು ಮನೆ, ಕಟ್ಟಡಗಳ ಛಾವಣಿಗಳು, ಉದ್ಯಾನಗಳು ಮತ್ತು ಇತರ ಮೇಲ್ಮೆ„ಗಳಲ್ಲಿ ನೆಲೆಗೊಂಡಿದ್ದವು. ಅಷ್ಟು ಮಾತ್ರವಲ್ಲದೆ ಇಲ್ಲಿ ಸಂಗ್ರಹಿಸಲಾಗಿದ್ದ ಮೈಕ್ರೊಪ್ಲಾಸ್ಟಿಕ್‌ನ ಪ್ರಮಾಣವು ಮೂರು ಮಿಲಿಯನ್ ಪ್ಲಾಸ್ಟಿಕ್ ಬಾಟಲಿಗಳಿಗೆ ಸಮನಾಗಿರುತ್ತದೆ ಎಂದು ತಿಳಿದುಬಂದಿತ್ತು. ಪ್ಲಾಸ್ಟಿಕ್ ಹಿಮ ಮಳೆ ಅಥವಾ ಮಳೆ ಕಾಲ್ಪನಿಕವಲ್ಲ. ಇದು ಈಗಾಗಲೇ ನಗರ ಪ್ರದೇಶಗಳಲ್ಲಿ ವಾಸ್ತವವಾಗಿಯೂ ಸುರಿಯತೊಡಗಿದೆ. ಈ ಮಳೆಯನ್ನು ನಾವು ಬರಿಗಣ್ಣಿನಿಂದ ನೋಡಲು ಸಾಧ್ಯವಾಗದಿದ್ದರೂ ಅತೀಸೂಕ್ಷ್ಮವಾಗಿ ಪರಿಶೀಲನೆ ಅಥವಾ ಅಧ್ಯಯನ ನಡೆಸಿದಾಗ ಇದು ಗೋಚರಿಸಿದೆ. ಅಂದರೆ ಪ್ಲಾಸ್ಟಿಕ್‌ನ ಸೂಕ್ಷ್ಮಕಣಗಳು ವಾತಾವರಣವನ್ನು ಸೇರ್ಪಡೆ ಯಾಗಿರುವುದನ್ನು ಇದು ದೃಢಪಡಿಸಿದೆ.
ಪರಿಣಾಮವೇನು?
ಈ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು 5 ಮಿ.ಮೀ.ಗಿಂತಲೂ ಕಡಿಮೆ ಉದ್ದವಿದ್ದು, ನಮ್ಮ ಆಹಾರ ಸರಪಳಿಗಳಲ್ಲಿ ಸೇರಿಕೊಂಡು ರಕ್ತನಾಳಗಳನ್ನು ಸೇರಿಕೊಳ್ಳುತ್ತದೆ. ಈ ಹೊಸ ಪ್ರಸರಣ ವಿಧಾನ ನಗರಗಳಲ್ಲಿ ವಾಸಿಸುತ್ತಿರುವವರಲ್ಲಿ ಹೆಚ್ಚಾಗಿ ಕಂಡು ಬಂದಿದ್ದು ಅವರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ವಾತಾವರಣದಲ್ಲಿ, ಮೋಡ ಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳು ಸೇರಿಕೊಂಡಿರುವುದು ಗೊತ್ತಿರುವ ವಿಚಾರವಾದರೂ ಈ ಸಮಸ್ಯೆಯ ಪ್ರಮಾಣವನ್ನು ಪ್ರಮಾಣಿಕರಿಸಲು ನಡೆಸಿದ ಮೊದಲ ಅಧ್ಯಯನ ಇದಾಗಿದೆ. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕದೇ ಹೋದಲ್ಲಿ ಕೆಲವೇ ದಶಕಗಳಲ್ಲಿ ಇದು ಭೂಮಿಯ ಮೇಲಣ ಪ್ರತಿಯೊಂದೂ ಜೀವಿ ಮತ್ತು ಪರಿಸರದ ಮೇಲೆ ಅತ್ಯಂತ ಬೀಕರ ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ತಿಳಿದೊ ತಿಳಿಯದೆಯೊ ನಾವೆಲ್ಲರೂ ಇದನ್ನು ನಿರ್ಲಕ್ಷಿಸುತ್ತಿದ್ದೇವೆ ಎನ್ನುತ್ತಾರೆ ವಿಜ್ಞಾನಿಗಳು.
ಸಂಶೋಧನೆ ಏನು ಹೇಳುತ್ತದೆ?
ಆಕ್ಲೆಂಡ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಬಗ್ಗೆ ಕೆಲವು ಸಂಶೋಧನೆಗಳನ್ನು ನಡೆಸಿದ್ದಾರೆ. ವಾತಾವರಣದಲ್ಲಿರುವ ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಗುರುತಿಸಲು ಶಾಖವನ್ನು ಹಲವು ರೀತಿಯಲ್ಲಿ ಬಳಸಿಕೊಂಡಿದ್ದರು. ಏಕೆಂದರೆ ಇವು ಬರಿಗಣ್ಣಿಗೆ ಕಾಣಸಿಗುವುದಿಲ್ಲ. ಇದಕ್ಕೆ ಪರಿಮಳವಿಲ್ಲ, ರುಚಿಯೂ ಇಲ್ಲ. ಈ ಸಂಶೋಧನೆಯ ವೇಳೆ ಕಂಡುಕೊಂಡಂತೆ ದಿನವೊಂದರಲ್ಲಿ ಒಂದು ಚದರ ಮೀಟರ್ ವ್ಯಾಪ್ತಿಯಲ್ಲಿ ಸರಾಸರಿ 4,885 ಪ್ಲಾಸ್ಟಿಕ್ ಕಣಗಳು ಸಂಗ್ರಹವಾಗಿವೆ. ಅಂದರೆ ಒಂದು ವರ್ಷದಲ್ಲಿ 74 ಮೆಟ್ರಿಕ್ ಟನ್ ಪ್ಲಾಸ್ಟಿಕ್ ಸಂಗ್ರಹವಾಗುತ್ತದೆ. ಇದು 3 ಮಿಲಿಯನ್ ಪ್ಲಾಸ್ಟಿಕ್ ಬಾಟಲಿಗಳಿಗೆ ಸಮಾನವಾಗಿರುತ್ತದೆ.
ಬಾಟಲಿ ನೀರಿನಲ್ಲೂ ಮೈಕ್ರೋಪ್ಲಾಸ್ಟಿಕ್!
ಫ್ರೆಡೋನಿಯಾದಲ್ಲಿ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ ನಡೆಸಿದ ಅಧ್ಯಯನದಲ್ಲಿ ಶೇ. 93ರಷ್ಟು ನೀರಿನ ಬಾಟಲಿಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳಿರುವುದು ಪತ್ತೆಯಾಗಿತ್ತು. ಪ್ರತೀ ಲೀಟರ್ ಬಾಟಲಿ ನೀರಿನಲ್ಲಿ ಸರಾಸರಿ 325 ಮೈಕ್ರೋಪ್ಲಾಸ್ಟಿಕ್ ಕಣಗಳು ಕಂಡುಬಂದಿದ್ದವು. ಈ ತೀರ್ಮಾನಕ್ಕೆ ಬರುವ ಮೊದಲು ಸಂಶೋಧಕರು 11 ಬ್ರ್ಯಾಂಡ್‌ಗಳ 259 ಬಾಟಲಿಗಳನ್ನು ಪರೀಕ್ಷಿಸಿದ್ದರು. ಮೈಕ್ರೋಪ್ಲಾಸ್ಟಿಕ್ ಕಣಗಳು ಪ್ಯಾಕೇಜಿಂಗ್ ಅಥವಾ ಬಾಟಲಿಂಗ್ ಪ್ರಕ್ರಿಯೆ ವೇಳೆ ಭಾಗಶಃ ಸೇರ್ಪಡೆಯಾಗುತ್ತಿರುವುದು ಕೂಡ ಈ ಅಧ್ಯಯನದ ವೇಳೆ ಸಾಬೀತಾಗಿತ್ತು.
ಎಲ್ಲೆಲ್ಲಿ?
ಇತ್ತೀಚಿನ ವರ್ಷಗಳಲ್ಲಿ ಲಂಡನ್, ಹ್ಯಾಂಬರ್ಗ್ ಮತ್ತು ಪ್ಯಾರಿಸ್‌ನಲ್ಲಿಯೂ ಗಾಳಿಯಲ್ಲಿ ಮೈಕ್ರೋಪ್ಲಾಸ್ಟಿಕ್‌ನ ಮಟ್ಟ ಕಂಡು ಬಂದಿದೆ. ಆದರೆ ಆಕ್ಲೆಂಡ್‌ನ ಗಾಳಿಯಲ್ಲಿ ಕಂಡುಬರುವ ಮಟ್ಟಕ್ಕಿಂತ ಹಲವು ಪಟ್ಟು ಕಡಿಮೆಯಾಗಿದೆ. ಅತ್ಯಾಧುನಿಕ ರಾಸಾಯನಿಕ ವಿಧಾನಗಳನ್ನು ಬಳಸಿಕೊಂಡು ವಿಜ್ಞಾನಿಗಳು ನಡೆಸಿದ ಹೊಸ ಅಧ್ಯಯನದಲ್ಲಿ ಮಿಲಿಮೀಟರ್‌ನ 0.01 ರಷ್ಟು ಸಣ್ಣ ಕಣಗಳನ್ನು ಹುಡುಕಿದ್ದೇ ಅಲ್ಲದೆ ಅದರ ಬಗ್ಗೆ ವಿಶ್ಲೇಷಣೆಯನ್ನೂ ನಡೆಸಿದ್ದಾರೆ.
ಹಿಂದೇನಾಗಿತ್ತು?
ಬ್ರಿಟನ್‌ನಲ್ಲಿ 2020ರಲ್ಲಿ ಇದೇ ರೀತಿಯ ಕೆಲವು ಸಂಶೋಧನೆಗಳನ್ನು ಮಾಡ ಲಾಗಿತ್ತು. ಸರಾಸರಿ 771 ಮೈಕ್ರೋಪ್ಲಾಸ್ಟಿಕ್ ಕಣಗಳು ಲಂಡನ್‌ನಲ್ಲಿ ಬೀಳುತ್ತವೆ ಎಂಬುದು ಸಾಬೀತಾಗಿತ್ತು. ಆದರೆ ಇದು ಆಕ್ಲೆಂಡ್‌ನ ಸಂಖ್ಯೆಗಿಂತ 6 ಪಟ್ಟು ಕಡಿಮೆ ಯಾಗಿತ್ತು. ಆದರೆ ಲಂಡನ್‌ನಲ್ಲಿ ಪರಿಸರ ಮಾಲಿನ್ಯ ಕಡಿಮೆ ಇದೆ ಎಂದು ಇದರ ಅರ್ಥವಲ್ಲ. ಹಿಂದಿನ ದಿನಗಳಲ್ಲಿ ಇವುಗಳನ್ನು ಅಂದಾಜು ಮಾಡಿರದ ಕಾರಣ ಈ ಅಂಕಿಅಂಶ ಕಡಿಮೆ ಯಾಗಿರುವಂತೆ ತೋರುತ್ತದೆ.
ಹೇಗೆ ರೂಪುಗೊಳ್ಳುತ್ತದೆ?
ಮೈಕ್ರೋ ಪ್ಲಾಸ್ಟಿಕ್ ಕಣಗಳು ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆಯ ಸಂದರ್ಭ ಮತ್ತು ದೊಡ್ಡ ದೊಡ್ಡ ಪ್ಲಾಸ್ಟಿಕ್ ವಸ್ತುಗಳು ಒಡೆಯುವುದರಿಂದ ಉಂಟಾಗುತ್ತದೆ. ಇವು ಮಳೆ ಬರುವ ಸಂದರ್ಭ ಸಮುದ್ರ, ನದಿ ಹೀಗೆ ನೀರಿನಲ್ಲಿ ಸೇರಿಕೊಳ್ಳುತ್ತದೆ. ಸಂಶೋಧಕರ ಪ್ರಕಾರ ನೀರಿಗೆ ಸೇರಿದ ಪ್ಲಾಸ್ಟಿಕ್ ಕಣಗಳು ಅವುಗಳಲ್ಲಿ ಕರಗದೆ ಹಾಗೇ ವರ್ಷಗಟ್ಟಲೆ ಉಳಿದುಹೋಗಬಹುದು. ಹೀಗೆ ಇವು ನೀರಿನೊಟ್ಟಿಗೆ ಸೇರಿ ವಾತಾವರಣವನ್ನು ಸೇರಿಬಿಡುತ್ತವೆ.
ಹೇಗಿದೆ ಪರಿಸ್ಥಿತಿ?
ಈಗ ಮಳೆ ನೀರು, ಸಮುದ್ರ, ಆಹಾರ ಮತ್ತು ಆಹಾರ ಸರಪಳಿಯಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳು ಸೇರಿಕೊಂಡಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆಕ್ಲೆಂಡ್‌ನಲ್ಲಿ ನಡೆಸಿದ ಸಂಶೋಧನೆಯಲ್ಲಿ ಕಂಡುಬಂದ ಮೈಕ್ರೋಪ್ಲಾಸ್ಟಿಕ್ ಕಣಗಳ ಗಾತ್ರ 10 ರಿಂದ 50 ಮೈಕ್ರೋಮೀಟರ್‌ಗಳಷ್ಟಿತ್ತು. ಈ ಕಣಗಳಲ್ಲಿ ಹೆಚ್ಚಿನವು ಪ್ಲಾಸ್ಟಿಕ್‌ನಿಂದ ಕೂಡಿದ್ದವು. ಕೇವಲ ಶೇ.3ರಷ್ಟು ಪ್ಲಾಸ್ಟಿಕ್ ಕಣಗಳು 100 ಮೈಕ್ರೋಮೀಟರ್‌ಗಳಿಗಿಂತ ಹೆಚ್ಚಿನ ಗಾತ್ರವನ್ನು ಹೊಂದಿದ್ದವು. ಪ್ರಸ್ತುತ ಗಾಳಿಯಲ್ಲಿರುವ ಮೈಕ್ರೋಪ್ಲಾಸ್ಟಿಕ್ ಕಣಗಳು ನಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬುದನ್ನು ವಿಜ್ಞಾನಿಗಳು ಸಂಶೋಧನೆಗಳ ಮೂಲಕ ತಿಳಿದುಕೊಳ್ಳುತ್ತಿದ್ದಾರೆ. ಒಂದು ವರದಿಯ ಪ್ರಕಾರ, ಪ್ರತೀ ವರ್ಷ ಸರಾಸರಿ 74 ಸಾವಿರ ಪ್ಲಾಸ್ಟಿಕ್ ಕಣಗಳು ಮನುಷ್ಯನ ದೇಹವನ್ನು ಸೇರುತ್ತವೆ. ಈ ವರ್ಷದ ಮಾರ್ಚ್‌ನಲ್ಲಿ ವಿಜ್ಞಾನಿಗಳು ಮೊದಲ ಬಾರಿಗೆ ಮಾನವ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳು ಸೇರ್ಪಡೆಗೊಂಡಿರುವುದನ್ನು ಪತ್ತೆ ಹಚ್ಚಿದ್ದರು. ಉಸಿರಾಟದ ವೇಳೆ ಮೈಕ್ರೋಪ್ಲಾಸ್ಟಿಕ್ ಕಣಗಳು ಮಾನವ ದೇಹವನ್ನು ಪ್ರವೇಶಿಸುತ್ತಿರುವುದು ಈಗಾಗಲೇ ದೃಢಪಟ್ಟಿದೆ.
ಕರ್ನಾಟಕದಲ್ಲೂ ನಡೆದಿತ್ತು ಸಂಶೋಧನೆ
ಬೆಂಗಳೂರು ಮೂಲದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಸಂಶೋಧಕರು 2022ರ ಎಪ್ರಿಲ್‌ನಲ್ಲಿ ಹೊಸ ಅಧ್ಯಯನ ನಡೆಸಿದ್ದು ದಕ್ಷಿಣ ಭಾರತದ ಕಾವೇರಿ ನದಿಯಲ್ಲಿರುವ ಮೀನುಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಅನ್ನು ಕಂಡುಹಿಡಿದಿದ್ದರು. ಕರ್ನಾಟಕದ ಮಂಡ್ಯ ಜಿÇÉೆಯಲ್ಲಿ ಕಾವೇರಿ ನದಿಯ ಉಪನದಿ ಗಳಾದ ಹೇಮಾವತಿ ಮತ್ತು ಲಕ್ಷ್ಮಣ ತೀರ್ಥಗಳ ಸಂಗಮದ ಕೆಳಗೆ ಇರುವ ಕೃಷ್ಣರಾಜ ಸಾಗರ ಅಣೆಕಟ್ಟಿನಲ್ಲಿ ಈ ಅಧ್ಯಯನವನ್ನು ನಡೆಸಲಾಗಿತ್ತು.
ಮುಂದೇನು?
ಪ್ಲಾಸ್ಟಿಕ್ ನಿರ್ಮೂಲನೆಯಾಗದ ಹೊರತು ಈ ಸಮಸ್ಯೆ ಪರಿಹಾರವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಯಾವ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆಯಾಗಬಾರದು. ಆದರೂ ಈ ಹಿಂದೆ ನಾವು ಉಪಯೋಗಿಸಿದ್ದ ಪ್ಲಾಸ್ಟಿಕ್‌ಗಳ ಪ್ರಮಾಣವೇ ಹೆಚ್ಚಿರುವುರಿಂದ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಮಟ್ಟಿನ ಕಾಳಜಿ ವಹಿಸುವುದರ ಜತೆಗೆ ನಮ್ಮ ಮುಂದಿನ ಪೀಳಿಗೆಗೆ ಪ್ಲಾಸ್ಟಿಕ್ ಬಳಸದಿರುವಂತೆ ಜಾಗೃತಿ ಮೂಡಿಸಬೇಕು. ಹಾಗಾದಾಗ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಪ್ಲಾಸ್ಟಿಕ್ ತ್ಯಾಜ್ಯ ಪರಿಸರವನ್ನು ಸೇರದಂತೆ ಎಚ್ಚರಿಕೆ ವಹಿಸಬೇಕು. ಮರುಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನಷ್ಟೇ ಉತ್ಪಾದಿಸಬೇಕು. ಇವೆಲ್ಲ ಕಾರ್ಯಸಾಧ್ಯವಾದಲ್ಲಿ ಮಾತ್ರವೇ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಸಾಧ್ಯ. ಇನ್ನೂ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಇಂದು ವಿಶ್ವದ ಬೃಹತ್ ದೇಶ, ನಗರಗಳಲ್ಲಿ ಈಗ ಕಾಣುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಹಳ್ಳಿ ಹಳ್ಳಿಗಳಿಗೂ ವ್ಯಾಪಿಸಿ ಕೇವಲ ಮನುಕುಲವನ್ನು ಮಾತ್ರವಲ್ಲ ಇಡೀ ಭೂಮಿಯನ್ನೇ ಬರಡಾಗಿಸುವುದು ನಿಶ್ಚಿತ.
- ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.