ತತ್ವ ನಿಷ್ಠುರಿ, ಗುಣ ಪಕ್ಷಪಾತಿ ಕವಿ ಅಡಿಗ


Team Udayavani, Jan 6, 2018, 1:58 AM IST

06-1.jpg

ಅಡಿಗರು ಕಾವ್ಯವನ್ನು, ಬರವಣಿಗೆಯನ್ನು ಜೀವನ್ಮರಣದ ಪ್ರಶ್ನೆಯಾಗಿ ಸ್ವೀಕರಿಸಿದವರು. ಅವರಿಗೆ ಬರವಣಿಗೆಯೊಂದು ನೈತಿಕ ಕೆಲಸ. ಅಲ್ಲಿ ಸ್ವಂತಿಕೆಯನ್ನು ಯಾವುದೇ ಕಾರಣಕ್ಕೂ ಮಾರಬಾರದು. ಬರವಣಿಗೆಯಲ್ಲಿ ವಿಚಾರ, ವಿಶ್ಲೇಷಣೆಗಳು ಹಣ ಅಧಿಕಾರ, ಸ್ನೇಹ, ಒತ್ತಡ, ಆಮಿಷ ಅಥವಾ ಇನ್ಯಾವುದೇ ಕಾರಣಗಳಿಂದ ಭ್ರಷ್ಟಗೊಳ್ಳುವುದು ಅಥವಾ ಒಪ್ಪಂದಕ್ಕೆ ಒಳಗಾಗಿ ಮೆತ್ತಗಾಗುವುದು ಅಥವಾ ಹಿಂದೆ ಸರಿವುದು ಹೀನ ಕೆಲಸ, ಸಾವಿಗೆ ಸಮಾನ ಎಂದು ತಿಳಿದಿದ್ದರು. 

ಕವಿ ಎಂ ಗೋಪಾಲಕೃಷ್ಣ ಅಡಿಗರ ಜನ್ಮ ಶತಮಾನೋತ್ಸವವನ್ನು ನಾಡು ಈ ವರುಷ ಆಚರಿಸುತ್ತಿದೆ(ಜನನ 18.02.1918, ಮರಣ 04.11.1992). ಕಳೆದ ಶತಮಾನದಲ್ಲಿ ಕನ್ನಡ ನಾಡು ಕಂಡ ಅತಿ ಮುಖ್ಯ ಕವಿಗಳಲ್ಲಿ ಅಡಿಗರು ಒಬ್ಬರು. ಕನ್ನಡದಲ್ಲಿ ಆಧುನಿಕತೆಯನ್ನು ಕಾವ್ಯದೊಳಗೆ ತಂದು ನವ್ಯ ಕಾವ್ಯ ಚಳವಳಿಯನ್ನು ಪ್ರಾರಂಭಿಸಿದವರು. ಅಖಿಲ ಭಾರತ ಮಟ್ಟದಲ್ಲೂ ಅವರು ಆಧುನಿಕ ಕವಿಯಾಗಿ ಬಲುದೊಡ್ಡ ಹೆಸರು ಮಾಡಿದರು. 

ಕವಿ ಅಡಿಗರು ಪ್ರಾರಂಭದಲ್ಲಿ ಭಾಷಾ ಲಯದ ದೃಷ್ಟಿಯಿಂದ ನವೋದಯದ ಇತರ ಕವಿಗಳಂತೆ ಕವನಗಳನ್ನು ಬರೆಯಲು ಪ್ರಾರಂಭಿಸಿದರು. ಯಾವ ಮೋಹನ ಮುರಲಿ, ಕಟ್ಟುವೆವು ನಾವು ಹೊಸ ನಾಡೊಂದನು, ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ ಎಂದು ಪ್ರಾರಂಭವಾಗುವ “ಇದು ಬಾಳು’ ಎಂಬ ಕವನ- ಹೀಗೆ ಅವರನ್ನು ನವೋದಯ ಕವಿಗಳ ಸಾಲಿನಲ್ಲಿ ನಿಲ್ಲಿಸಬಹುದಾದ ಹಲವು ಕವನಗಳಿವೆ. ಆದರೆ ನಾವು ಅವರ ಮೊತ್ತ ಮೊದಲ ಕವನ “ನನ್ನ ನುಡಿ’ಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಇತರ ನವೋದಯ ಕವಿಗಳಿಂದ ತುಸು ಭಿನ್ನರಾಗಿ ವ್ಯಕ್ತಿಯ ಸ್ವಂತಿಕೆಯತ್ತ ಹೆಚ್ಚು ಆಕರ್ಷಿತರಾದದ್ದನ್ನು ಕಾಣಬಹುದು. ನವೋದಯದ ಇತರ ಮುಖ್ಯ ಕವಿಗಳಾದ ಬೇಂದ್ರೆ “ಇದು ಬರಿ ಬೆಳಗಲ್ಲೋ ಅಣ್ಣಾ’ ಎಂಬುದಾಗಿ ಅಥವಾ ಕುವೆಂಪು “ದೇವರು ರುಜು ಮಾಡಿದನು, ರಸವಶನಾಗುತ ಕವಿ ಅದ ನೋಡಿದನು’ ಎಂದು ಪ್ರಕೃತಿಯನ್ನು ಬೆರಗು, ಆರಾಧನೆ 
ಗಳಿಂದ ಬಣ್ಣಿಸುತ್ತಿದ್ದಾಗ, ಅಡಿಗರು ಈ ವಸುಂಧರೆಗೆ ಸ್ವಯಂ ದೀಪಕತೆ ಇಲ್ಲ ಎಂದರು. ಸ್ವಂತ ಬೆಳಕು ಇಲ್ಲದ ಭೂಮಿಗೆ ಸ್ವಯಂ ದೀಪಕತೆ ಎಂದು ಬಂದೀತು? ಹೇಗೆ ಬಂದೀತು? ಎಂಬ ರೂಪಕಾತ್ಮಕ ಚಿಂತನೆಯಲ್ಲಿ ಮನುಷ್ಯನ ಸ್ವಂತಿಕೆಯ ಅಗತ್ಯವನ್ನು ಸೂಚಿಸಿದರು. ಅಂತಹ ಸ್ವಂತಿಕೆಯ ಮೌಲ್ಯ ಅಡಿಗರಿಗೆ ಇತರ ಎಲ್ಲಾ ಸಾಧನೆಗಳ ನಿಯಾಮಕ, ಮೌಲ್ಯ ಮಾಪಕ ನೈತಿಕ ನಿಲುವುಗಳಾದವು. ಸ್ವಂತಿಕೆಯನ್ನು ಅಪಹರಿಸಬಹುದು ಎಂದು ಅನುಮಾನ ಹುಟ್ಟಿದಲ್ಲಿ ಅಂತಹ ಸಮಾನತೆಯನ್ನು ಅವರು ಪರೀಕ್ಷಿಸತೊಡಗಿದರು. ಪ್ರಜಾಪ್ರಭುತ್ವದ ಸ್ವಾತಂತ್ರ್ಯ, ಸಮಾನತೆಯ ಮೌಲ್ಯಗಳು ಬೇಕು. ಆದರೆ ಸ್ವಂತಿಕೆಯನ್ನು ನಾಶ ಮಾಡುವಂತಹ ಸ್ವಾತಂತ್ರ್ಯ ವ್ಯವಸ್ಥೆ ಬೇಡ. ಹೀಗೆ ಬೇಕು-ಬೇಡಗಳ ನಡುವೆ ತುಯ್ದಾಡುವ ಅವರ ಮನಸ್ಥಿತಿಯನ್ನು “ದ್ವಂದ್ವ’ ಎಂದು ವಿಮರ್ಶಕರು ಗುರುತಿಸಿದರು. ಅದು ಆಧುನಿಕ ಮನಸ್ಸಿನ ಅವಸ್ಥೆಗಳಲ್ಲಿ ಒಂದು. ನೆಲದ ಆಕರ್ಷಣೆ ಇದೆ. ಅದು ಬೇಕು, ಆದರೆ ಆಕಾಶದ ಆಧ್ಯಾತ್ಮಿಕ ಸೆಳೆತವನ್ನು ನಿರಾಕರಿಸುವ ನೆಲದ ವ್ಯಾಮೋಹ ಬೇಡ. ಇಲ್ಲೂಬೇಕು-ಬೇಡಗಳ ದ್ವಂದ್ವ.

ಸ್ವಂತಿಕೆ ಎಂಬುದು ಪ್ರಜ್ಞಾಶೀಲ ನಿಯಂತ್ರಕ ಮೌಲ್ಯ ಎಂಬುದನ್ನು ಅರಿತುಕೊಳ್ಳುವುದಕ್ಕೆ ಅಡಿಗರು ತಾವು ಸಂಪಾದಕರಾಗಿ ಹೊರತರುತ್ತಿದ್ದ “ಸಾಕ್ಷಿ’ ಎಂಬ ಪತ್ರಿಕೆಯ ಮೊದಲ ಸಂಚಿಕೆಗೆ ಬರೆದ ಸಂಪಾದಕೀಯದ ಈ ಮಾತುಗಳನ್ನು ಗಮನಿಸಬಹುದು: “”ತನ್ನ ತನದ ಅರಿವು ಮನುಷ್ಯತ್ವದ ವಿಶೇಷ ಲಕ್ಷಣ. ಮನಸ್ಸಿನ ಒಂದು ಭಾಗ ಕನಸಿನಲ್ಲಿ ಅಥವಾ ಕೆಲಸದಲ್ಲಿ ಮಗ್ನವಾಗಿರುವಾಗ ಅದರ ಯಾವುದೋ ಇನ್ನೊಂದು ಭಾಗ ದೂರ ನಿಂತು ಎಲ್ಲವನ್ನೂ ಗಮನಿಸಲು ಸಮರ್ಥವಾಗುತ್ತದೆ ಮತ್ತು ನಮ್ಮ ಮಾತು ಕೃತಿಗಳನ್ನು ಆಯಾ ಕಾಲದಲ್ಲೇ ತೂಕ ಮಾಡುತ್ತಲೂ ಇರುತ್ತದೆ. ಈ ಆತ್ಮಸಾಕ್ಷಿಯಿಂದ ಮನುಷ್ಯನಿಗೆ ಬಿಡುಗಡೆ ಇಲ್ಲ. ಮನುಷ್ಯತ್ವದ ವಿಶೇಷ ವಿಶೇಷ ಲಕ್ಷಣವಾದ ಈ ಸಾಕ್ಷಿ ಪ್ರಜ್ಞೆಯ ಬೆಳವಣಿಗೆಯೇ ಮನುಷ್ಯ ನಿಜವಾದ ಬೆಳವಣಿಗೆ”

ಇಂತಹ ಪ್ರಾಮಾಣಿಕ ಸಾಕ್ಷಿ ಪ್ರಜ್ಞೆಯ ಎದುರಲ್ಲಿ ಮನುಷ್ಯನ ವೈಯಕ್ತಿಕ ಹಾಗೂ ಸಾಮಾಜಿಕ ನಡೆ, ನುಡಿ, ಕ್ರಿಯೆ, ಕಾರ್ಯಗಳೆಲ್ಲಾ ಪರೀಕ್ಷೆಗೆ ಒಳಗಾಗಬೇಕು ಎಂದು ಅಡಿಗರು ಬಯಸಿದ್ದರು. ಆದರೆ ಅದು ಸುಲಭವಲ್ಲ. ಮನುಷ್ಯನಲ್ಲಿ ಒಳ್ಳೆತನ ಇದೆ. ಆದರೆ “ಒಳ್ಳೆತನ ಸಹಜವೇನಲ್ಲ’ ಎಂಬ ಹೆಸರಿನ ಕವನದಲ್ಲಿ ಅವರು “ಅದು ಅಸಹಜವೂ ಅಲ್ಲ’ ಎಂದರು. ತಮ್ಮ “ಪ್ರಾರ್ಥನೆ’ ಕವನದಲ್ಲಿ ಸ್ವಂತಿಕೆಯ ಭಾಗವಾಗಿ “ಕಲಿಸು ಬಾಗುವುದನ್ನು’ ಎಂದು ಪ್ರಾರ್ಥಿಸಿದ ಅಡಿಗರು ಮರು ಉಸಿರಿಗೆ, ಕಲಿಸು “ಬಾಗದೇ ಸೆಟೆವುದನ್ನು’ ಎಂದು ಕೂಡ ಹೇಳಿದರು. ಅಂತಹ ಸಂಕೀರ್ಣ ಸ್ಥಿತಿ ಆಧುನಿಕ ಬದುಕು. ಅಂತಹ ಆಧುನಿಕ ಬದುಕಿನ ಸಂಕೀರ್ಣ ಅನುಭವವನ್ನು ಹೇಳಲು ಅಡಿಗರು ಆಧುನಿಕ ಭಾಷೆಯೊಂದನ್ನೂ ಕಾವ್ಯದಲ್ಲಿ ನಿರ್ಮಿಸಿದರು. 

ಅಡಿಗರು ಆಧುನಿಕ ಕಾವ್ಯದಲ್ಲಿ ನಿರ್ಮಿಸಿದ ಹೊಸಕಾವ್ಯ ಭಾಷೆಯ ಲಯ ಹಿಂದಿನ ಶಬ್ದ, ನಾದಗಳನ್ನು ಅನುಸರಿಸುವ ಭಾಷಾ ಲಯಗಳಿಂದ ಭಿನ್ನವಾಗಿತ್ತು. ಅಡಿಗರು ಆಧುನಿಕ ಕಾವ್ಯ ಭಾಷೆಯಲ್ಲಿ ಸೃಷ್ಟಿಸಿದ ಈ ಹೊಸ ಲಯವನ್ನು ನಾವು ಅರ್ಥಾನುಸಾರಿ ಲಯ ಎಂದು ಪರಿಗಣಿಸಬಹುದು. 

ಅಡಿಗರ “ಭೂಮಿಗೀತ’ ಎಂಬ ಕವನ ಇದೆ. ಇದರಲ್ಲಿ ಅಡಿಗರು ನೆಲ ತಾಯಿಯನ್ನು ಮಲತಾಯಿ ಎಂದು ಕರೆಯುತ್ತಾರೆ. ತಾನು ಹುಟ್ಟಿ ಆದ ಬಳಿಕ ಬೆಳೆಯುತ್ತಿರುವ ತನ್ನ ಬಗ್ಗೆ ಆಕೆಗೆ ಆಸ್ಥೆಯಿಲ್ಲ. ತನ್ನನ್ನು ತನ್ನ ಪಾಡಿಗೆ ಬಿಟ್ಟು ಪ್ರಕೃತಿಯ ಭಾಗವಾದ ನೆಲ ತನ್ನ ಇತರ ಹೆರಿಗೆ, ಜೀವೋತ್ಪತ್ತಿಗಳಲ್ಲಿ ಮಗ್ನವಾಗಿದೆ. ಆದರೂ “ಇವಳೆದೆಗೆ ಬೇರಿಳಿದ ಕಾಲು ನನ್ನದು’ ಎಂಬ ಅರಿವು ಇದೆ. ಭೂಮಿಗೆ ಇಷ್ಟು ಅಂಟಿದ್ದರೂ, ಆಕಾಶದ ಆಧ್ಯಾತ್ಮ ಲೋಕದ ನಕ್ಷಗಳ ಬಗ್ಗೆ ಆಕರ್ಷಣೆ ಇದೆ. ಆದರೆ ಅಂತಹ ಆಧ್ಯಾತ್ಮ ಪೂರ್ಣ ೈಗೂಡಲಿಲ್ಲ. ಅಲ್ಲಿಗೆ ಹೋಗುವ ದಾರಿಯೂ ತಿಳಿದಿಲ್ಲ, ಅದನ್ನು ಸಾಧಿಸುವ ಶ್ರದ್ಧೆಯೂ ಇಲ್ಲ. ಹಾಗಾಗಿ ಅಡಿಗರು “ಬರಿದೆ ನಕ್ಷತ್ರ ಲೋಕಕ್ಕೂ ರೈಲು ಬಿಟ್ಟೆ’ ಎನ್ನುತ್ತಾರೆ. ರೈಲು ಬಿಡುವುದು ಎಂಬುದು ಸುಮ್ಮನೆ ತಿಳಿಯದಿರುವಂತೆ ನಟನೆ ಮಾಡುತ್ತಾ ಬೊಗಳೆ ಬಿಡುವುದಕ್ಕೆ ಇರುವ ಆಡು ಬಳಕೆಯ ಪದಪುಂಜ. ಅದೊಂದು ರೀತಿಯಲ್ಲಿ ಏನೂ ಅನುಭವ ಇಲ್ಲದ ಸುಳ್ಳು ಮಾತು. ಅದನ್ನು ಬಳಸಿ ನಕ್ಷತ್ರ ಲೋಕಕ್ಕೆ ಹೋಗಲು “ರೈಲು ಬಿಡುವ’ ಚಿತ್ರ ನೀಡುತ್ತಾರೆ. ಆದರೆ ರೈಲು ನಿಜವಾಗಿ ಚಲಿಸುವುದು ನೆಲದಲ್ಲಿ ಮಾತ್ರ. ಈ ವಿರೋಧಾಭಾಸ ಆಧುನಿಕ ಬದುಕಿನ ಒಂದು ಲಕ್ಷಣವೂ ಹೌದು. ನಕ್ಷತ್ರ ಲೋಕಕ್ಕೆ ರೈಲು ಬಿಡುವ ಕಲ್ಪನೆಯೇ ಹೊಸತಾದ ಆ ತನಕ ಕಾವ್ಯದಲ್ಲಿ ಇಲ್ಲದಿದ್ದ ಒಂದು ಹೊಸ ಚಿತ್ರ ಅಥವಾ ಪ್ರತಿಮೆ.

ಅಡಿಗರು ಇತರ ಎಲ್ಲಾ ಕವಿಗಳಿಗಿಂತ ಹೆಚ್ಚು ರಾಜಕೀಯವನ್ನು ಮೈಮೇಲೆ ಎಳೆದು ಹಾಕಿಕೊಂಡ ಕವಿ. “ನೆಹರೂ ನಿವೃತ್ತರಾಗುವುದಿಲ್ಲ’ ಎಂಬುದು ಅವರ ಪ್ರಖ್ಯಾತ ಕವನ. ತುರ್ತು ಪರಿಸ್ಥಿತಿ ಸಮಯ ದಲ್ಲಿ ಅವರು “ದೆಹಲಿಯಲ್ಲಿ’ ಎಂಬ ಒಂದು ಕವನ ಬರೆದರು. “ಎದೆಯಲ್ಲಿ ಹಿರಣ್ಯಾಕ್ಷ ಪೀಠ ಸುಸ್ಥಿರವಿರಲು ಬುರುಡೆಯಲಿ ಪ್ರಹ್ಲಾದ ಪುಟಿವುದೆಂತು?’ ಎಂದು ಅವರು ಕೇಳಿದ್ದು ಇದೇ ಕವನದಲ್ಲಿ. ಪುರಾಣದ ಕತೆಯನ್ನು ಆಧುನಿಕ ರಾಜಕೀಯ ಬದುಕಿಗೆ ಅನ್ವಯಿಸಿದ ಹೊಸ ಪ್ರತಿಮೆ ಇದು. ವ್ಯಕ್ತಿ ಸ್ವಾತಂತ್ರ್ಯವನ್ನು ಹಾಗೂ ಸ್ವಂತಿಕೆಯನ್ನು ಪ್ರಜಾಪ್ರಭುತ್ವದಲ್ಲಿ ಸಮಾನತೆ ಎಂಬ ಮೌಲ್ಯ ಬಲಿಕೊಡಬಾರದು ಎಂಬುದು ಅವರ ಸ್ಪಷ್ಟ ನಂಬುಗೆಯಾಗಿತ್ತು.

ಅಡಿಗರು ಕಾವ್ಯವನ್ನು, ಬರವಣಿಗೆಯನ್ನು ಜೀವನ್ಮರಣದ ಪ್ರಶ್ನೆಯಾಗಿ ಸ್ವೀಕರಿಸಿದವರು. ಅವರಿಗೆ ಬರವಣಿಗೆಯೊಂದು ನೈತಿಕ ಕೆಲಸ. ಅಲ್ಲಿ ಸ್ವಂತಿಕೆಯನ್ನು ಯಾವುದೇ ಕಾರಣಕ್ಕೂ ಮಾರಬಾರದು. ಬರವಣಿಗೆಯಲ್ಲಿ ವಿಚಾರ, ವಿಶ್ಲೇಷಣೆಗಳು ಹಣ ಅಧಿಕಾರ, ಸ್ನೇಹ, ಒತ್ತಡ, ಆಮಿಷ ಅಥವಾ ಇನ್ಯಾವುದೇ ಕಾರಣಗಳಿಂದ ಭ್ರಷ್ಟಗೊಳ್ಳುವುದು ಅಥವಾ ಒಪ್ಪಂದಕ್ಕೆ ಒಳಗಾಗಿ ಮೆತ್ತಗಾಗುವುದು ಅಥವಾ ಹಿಂದೆ ಸರಿವುದು ಹೀನ ಕೆಲಸ, ಸಾವಿಗೆ ಸಮಾನ ಎಂದು ತಿಳಿದಿದ್ದರು. ಆದುದರಿಂದ ಅಡಿಗರು ತತ್ವ ನಿಷ್ಠುರಿ ಹಾಗೂ ಗುಣ ಪಕ್ಷಪಾತಿ. ಬರಹ, ವಿಚಾರ ಚಿಂತನೆಗಳಲ್ಲಿ ಶ್ರೇಷ್ಠ ಗುಣಮಟ್ಟ, ನಿಷ್ಟುರ ನೈತಿಕ ನಿಲುವು ಇರಬೇಕೆಂದು ಅವರು ಪ್ರತಿಪಾದಿಸುತ್ತಿದ್ದರು. ತಮ್ಮ ನಿಲುವುಗಳಿಗಾಗಿ, ಸತ್ಯ ನಿಷ್ಠುರತೆಗಾಗಿ ಯಾವ ಕಷ್ಟ
ನಷ್ಟಗಳನ್ನೂ ಲೆಕ್ಕಿಸದೆ ಮುಂದಿನ ತಿಂಗಳ ಬದುಕಿಗೆ ಏನು ಗತಿ ಎಂಬುದನ್ನು ಯೋಚಿಸದೆ ಹಲವು ಸಲ ತಮ್ಮ ಉದ್ಯೋಗಗಳಿಗೆ ರಾಜೀನಾಮೆ ಇತ್ತು ಹೊರಬಂದಿದ್ದರು.

ಕವಿ ಅಡಿಗರು ಹುಟ್ಟಿದ್ದು ಕುಂದಾಪುರದ ಸಮೀಪದ ಮೊಗೇರಿಯಲ್ಲಿ. ಅವರಿಗೆ ಆಳವಾದ ಸಂಸ್ಕೃತ ಅಧ್ಯಯನ ಇತ್ತು. ಅವರು ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಾಲೇಜುಗಳಲ್ಲಿ ಇಂಗ್ಲಿಷ್‌ ಅಧ್ಯಾಪಕರಾಗಿ ಕೆಲಸ ಮಾಡಿದರು. ಸಾಗರದ ಲಾಲ್‌ಬಹಾದ್ದೂರ್‌ ಕಾಲೇಜು, ಉಡುಪಿಯ ಪೂರ್ಣಪ್ರಜ್ಞ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿದ್ದರು. ಅವರ ಎಲ್ಲಾ ಕವನ ಸಂಕಲನಗಳೂ “ಸಮಗ್ರ ಕಾವ್ಯ’ ಸಂಗ್ರಹದಲ್ಲಿ ಸಿಗುತ್ತವೆ. ಅವರ ಗದ್ಯ ಲೇಖನಗಳ ಸಮಗ್ರ ಸಂಗ್ರಹದ ಹೆಸರು “ಸಾಕ್ಷಿ ಪ್ರಜ್ಞೆ’. ಅವಲ್ಲದೆ ಅವರು ಕಾದಂಬರಿ, ಕತೆಗಳನ್ನೂ ಬರೆದರು. ಅವರ ಆತ್ಮಕಥನ “ನೆನಪಿನ ದೋಣಿಯಿಂದ’. ಹಲವು ಅನುವಾದ ಕೃತಿಗಳನ್ನೂ ಪ್ರಕಟಿಸಿದರು. ರಾಜ್ಯಾದ್ಯಂತ ಸಂಚರಿಸಿ ಉಪನ್ಯಾಸಗಳನ್ನು ನೀಡಿ ತಮ್ಮ ವಿಚಾರಗಳನ್ನು ಪ್ರಸಾರ ಮಾಡಿದರು. ಕಬೀರ್‌ ಸಮ್ಮಾನ್‌, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮೊದಲಾದ ಗೌರವಕ್ಕೆ ಅವರು ಜೀವಿತ ಕಾಲದಲ್ಲಿ ಪಾತ್ರರಾಗಿದ್ದರು. ಅವರ ಪತ್ನಿ ಲಲಿತಾ ಅಡಿಗ ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದವರು. ಅವರ ನಾಲ್ಕು ಜನ ಮಕ್ಕಳಲ್ಲಿ ಇಬ್ಬರು ತೀರಿಕೊಂಡಿದ್ದಾರೆ. ಒಬ್ಬರು ಮಗಳು
ಅಮೆರಿಕದಲ್ಲಿ ಪತಿಯೊಡನೆ ನೆಲೆಸಿದ್ದಾರೆ. ಇನ್ನೊಬ್ಬ ಮಗ ಡಾ.ಪ್ರದ್ಯುಮ್ನ ಅಡಿಗ ಬೆಂಗಳೂರಲ್ಲಿ ಡಾಕ್ಟರ್‌ ಆಗಿ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. 

(ಸಾಹಿತ್ಯ ಅಕಾಡೆಮಿ ಮತ್ತು ಬೆಂಗಳೂರು ಕೇಂದ್ರವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಜನವರಿ 6-7ರಂದು ಸೆಂಟ್ರಲ್‌ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಕವಿ ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವದ ವಿಚಾರ ಸಂಕಿರಣ ನಡೆಯಲಿದೆ. ತನ್ನಿಮಿತ್ತ ಈ ಲೇಖನ)

ಎಸ್‌. ಆರ್‌. ವಿಜಯಶಂಕರ

ಟಾಪ್ ನ್ಯೂಸ್

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

10

Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್‌ ಸ್ಟಾರ್

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

4

Kaup: ಬೆಳಪು ಆಸ್ಪತ್ರೆಗೆ ವಿಟಮಿನ್‌ಎಂ ಕೊರತೆ!

UV Interview: ಕೇಂದ್ರದ ಎಥೆನಾಲ್‌ ನೀತಿಯಿಂದ ರೈತರಿಗಿಲ್ಲ ಲಾಭ…

UV Interview: ಕೇಂದ್ರದ ಎಥೆನಾಲ್‌ ನೀತಿಯಿಂದ ರೈತರಿಗಿಲ್ಲ ಲಾಭ…

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Suri Loves Sandhya movie teaser

Suri Loves Sandhya: ಟೀಸರ್‌ನಲ್ಲಿ ಸೂರಿ ಲವ್‌ ಸ್ಟೋರಿ

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.