ಬೆಲೆ ಹೆಚ್ಚಳದ ಬಲೆ ಜನಸಾಮಾನ್ಯರು ಕಂಗಾಲು
Team Udayavani, Sep 3, 2021, 6:30 AM IST
ಕಳೆದ ಕೆಲವು ತಿಂಗಳುಗಳಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಾಗುತ್ತಿರುವ ನಿರಂತರ ಹೆಚ್ಚಳದಿಂದಾಗಿ ಸಾಮಾನ್ಯ ಜನರಿಗೆ ಹಣದುಬ್ಬರದ ಬಿಸಿ ತೀವ್ರವಾಗಿ ತಟ್ಟತೊಡಗಿದೆ. ಈ ಹೆಚ್ಚಿನ ವೆಚ್ಚವನ್ನು ಸರಿದೂಗಿಸಲು ಜನರು ತಮ್ಮ ಆಹಾರ ಮತ್ತು ಆರೋಗ್ಯ ಸಂಬಂಧಿತ ವೆಚ್ಚಗಳಲ್ಲಿ ಕಡಿತ ಮಾಡಿದ್ದಾರೆ. ದೇಶದಲ್ಲಿ ಜನರು ತಮ್ಮ ದೈನಂದಿನ ಓಡಾಟಕ್ಕಾಗಿ ವಾಹನಗಳನ್ನೇ ಅವಲಂಬಿಸಿರುವುದರಿಂದ ತೈಲ ಬೆಲೆಗಳ ಹೆಚ್ಚಳ ಬಲುದೊಡ್ಡ ಹೊರೆಯಾಗಿ ಪರಿಣಮಿಸಿದೆ. ಇನ್ನು ಜುಲೈಯಿಂದೀಚೆಗೆ ಎಲ್‌ಪಿಜಿ ಬೆಲೆಯೂ 75ರೂ. ಗಳಷ್ಟು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಜನರು ದಿನಸಿ ಸಾಮಗ್ರಿಗಳ ಸಹಿತ ಆಹಾರಕ್ಕಾಗಿ ಮಾಡುತ್ತಿರುವ ವೆಚ್ಚಕ್ಕೆ ಒಂದಿಷ್ಟು ಕಡಿವಾಣ ಹಾಕಿದ್ದಾರೆ. ಇದರ ಪರಿಣಾಮ ಈ ಉತ್ಪನ್ನಗಳ ಬೇಡಿಕೆಯೂ ಕಡಿಮೆಯಾಗಿದೆ.
ಗಗನಕ್ಕೇರಿದ ಎಲ್‌ಪಿಜಿ ಬೆಲೆ :
ತೈಲೋತ್ಪನ್ನಗಳ ಬೆಲೆ ಕಳೆದ ಹಲವಾರು ತಿಂಗಳುಗಳಿಂದ ನೂರರ ಗಡಿಯಲ್ಲಿರುವಂತೆಯೇ ಇತ್ತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ ಸಾವಿರದ ಸನಿಹಕ್ಕೆ ಬಂದು ನಿಂತಿದೆ. ಪೆಟ್ರೋಲಿಯಂ ಕಂಪೆನಿಗಳು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಬುಧವಾರ 25ರೂ.ಗಳಷ್ಟು ಮತ್ತೆ ಹೆಚ್ಚಿಸಿದ್ದು ಇದರೊಂದಿಗೆ 14.2ಕೆ.ಜಿ. ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದಿಲ್ಲಿಯಲ್ಲಿ 884.50ರೂ. ಗಳಿಗೇರಿದೆ. ಆಗಸ್ಟ್ 18ರಂದು ಕಂಪೆನಿಗಳು ಸಿಲಿಂಡರ್ ಬೆಲೆಯನ್ನು 25ರೂ.ಗಳಷ್ಟು ಹೆಚ್ಚಿಸಿದ್ದವು. ಜುಲೈ ಆರಂಭದಲ್ಲಿ ಕೂಡ ಎಲ್‌ಪಿಜಿ ಸಿಲಿಂಡರ್ ಬೆಲೆ 25ರೂ.ಗಳಷ್ಟು ಏರಿಕೆಯಾಗಿತ್ತು. ಇದರೊಂದಿಗೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಸಿಲಿಂಡರ್ ಬೆಲೆ 75ರೂ. ಹೆಚ್ಚಳವಾಗಿದೆ. ಇದೇ ವೇಳೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಇದೀಗ 1,693ರೂ.ಗಳಾಗಿವೆ.
ಕಳೆದ ವರ್ಷದ ಮೇಯಿಂದೀಚೆಗೆ ಎಲ್‌ಪಿಜಿ ಸಬ್ಸಿಡಿಯನ್ನು ರದ್ದುಗೊಳಿಸಲಾಗಿದ್ದು ಇದು ಜನಸಾಮಾನರ ಮೇಲೆ ಆರ್ಥಿಕವಾಗಿ ಭಾರೀ ಹೊರೆ ಬೀಳುವಂತೆ ಮಾಡಿದೆ. ಒಂದೆಡೆಯಿಂದ ಸರಕಾರ ಸರ್ವರಿಗೂ ಎಲ್‌ಪಿಜಿ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ)ಯನ್ನು ಅನುಷ್ಠಾನಗೊಳಿಸಿದ್ದರೆ ಮತ್ತೂಂದೆಡೆಯಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವು ದರಿಂದಾಗಿ ಕಳೆದ ಕೆಲವು ತಿಂಗಳುಗಳಿಂದೀಚೆಗೆ ಎಲ್‌ಪಿಜಿ ಸಿಲಿಂಡರ್‌ಗಳ ಬೇಡಿಕೆ ಕುಸಿಯುವಂತೆ ಮಾಡಿದೆ. ತಿಂಗಳ ಹಿಂದೆಯಷ್ಟೇ ಪ್ರಧಾನಿ ಅವರು ಪಿಎಂಯುವೈ ನ 2ನೇ ಆವೃತ್ತಿಗೆ ಚಾಲನೆ ನೀಡಿದ್ದರು. ಇದಾದ ಬಳಿಕ ನಿರಂತರವಾಗಿ ಎಲ್‌ಪಿಜಿ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೇಂದ್ರ ಸರಕಾರದ ಈ ನಡೆ ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. 2014ರ ಮಾರ್ಚ್‌ನಲ್ಲಿ ಎಲ್‌ಪಿಜಿ 14.2ಕೆ.ಜಿ. ಸಿಲಿಂಡರ್‌ನ ಬೆಲೆಯು 410.5ರೂ.ಗಳಷ್ಟಿತ್ತು. ಆದರೆ ಇದೀಗ ಬೆಲೆಯು ದುಪ್ಪಟ್ಟಾಗಿದೆ. ಕೇಂದ್ರ ಸರಕಾರದ ಈ ನಡೆ ಜನಸಾಮಾನ್ಯರು ಅದರಲ್ಲೂ ಬಡವರನ್ನು ಸಂಕಷ್ಟಕ್ಕೀಡು ಮಾಡಿದೆ. ಕೊರೊನಾ ದಿಂದಾಗಿ ಜೀವನ ಸಾಗಿಸಲು ಹರಸಾಹಸ ಪಡುತ್ತಿರುವ ಜನರು ಬೆಲೆ ಏರಿಕೆಯ ನೇರ ಹೊಡೆತ ಅನುಭವಿಸುತ್ತಿದ್ದಾರೆ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯೂ ಗಗನಮುಖೀಯಾಗಿದ್ದು ಮುಂದಿನ ದಿನಗಳಲ್ಲಿ ಹಬ್ಬಗಳ ಸರಣಿಯೇ ಮುಂದಿದ್ದು ಜನರನ್ನು ಬೆಲೆ ಏರಿಕೆಯ ಬಿಸಿ ಮತ್ತಷ್ಟು ತಟ್ಟಲಿದೆ.
ಒಂದು ವರ್ಷದಲ್ಲಿ ಪೆಟ್ರೋಲ್ ಶೇ. 26, ಡೀಸೆಲ್ ಶೇ. 11ರಷ್ಟು ತುಟ್ಟಿ :
ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್ ಬೆಲೆ ಶೇ.26 ಮತ್ತು ಡೀಸೆಲ್ ಬೆಲೆ ಶೇ. 11ರಷ್ಟು ದುಬಾರಿಯಾಗಿದೆ. ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ಎರಡು ವಾರಗಳ ಹಿಂದೆ ಪೆಟ್ರೋಲ್ ಲೀ. ಗೆ 101.84 ರೂ. ಗಳಲ್ಲಿ ಸ್ಥಿರವಾಗಿತ್ತು. ಒಂದು ವರ್ಷದ ಹಿಂದೆ ಇದು 80.43 ರೂ. ಗಳಷ್ಟಿತ್ತು. ಇದೇ ರೀತಿ ಡೀಸೆಲ್ ಲೀ.ಗೆ 89.87 ರೂ. ಆಗಿದ್ದರೆ ವರ್ಷದ ಹಿಂದೆ 81.05 ರೂ. ಗಳಾಗಿತ್ತು. ಈ ವರ್ಷ ಜನವರಿ 1 ರಂದು ಪೆಟ್ರೋಲ್ ಬೆಲೆ ಲೀ. ಗೆ 83.97 ರೂ. ಮತ್ತು ಡೀಸೆಲ್ ಬೆಲೆ ಲೀ.ಗೆ 74.12 ರೂ. ಆಗಿತ್ತು. ಅಂದರೆ 6 ತಿಂಗಳಲ್ಲಿ ಪೆಟ್ರೋಲ್ ಲೀ.ಗೆ 17.87 ರೂ. ಮತ್ತು ಡೀಸೆಲ್ ಲೀ.ಗೆ 15.75 ರೂ. ಜಾಸ್ತಿಯಾಗಿದೆ. ಕಳೆದ 10 ದಿನಗಳಿಂದೀಚೆಗೆ ತೈಲ ಬೆಲೆಗಳಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು ದಿಲ್ಲಿಯಲ್ಲಿ ಗುರುವಾರ ಪೆಟ್ರೋಲ್ ಬೆಲೆ ಲೀ.ಗೆ 101.34ರೂ. ಮತ್ತು ಡೀಸೆಲ್ ಲೀ.ಗೆ 88.77 ರೂ.ಗಳಾಗಿತ್ತು.
ಅಬಕಾರಿ ಸುಂಕದಿಂದ ಆದಾಯ :
2014ರಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಅನಂತರ ಪೆಟ್ರೋಲಿಯಂ ಉತ್ಪನ್ನ ಗಳ ಮೇಲಿನ ಅಬಕಾರಿ ಸುಂಕದಲ್ಲಿ ಭಾರೀ ಹೆಚ್ಚಳ ಮಾಡಲಾ ಗಿದೆ. 2014-15ರ ಆರ್ಥಿಕ ವರ್ಷದಲ್ಲಿ ಪೆಟ್ರೋ ಲಿಯಂ ಉತ್ಪನ್ನಗಳ ಮೇಲಣ ಅಬಕಾರಿ ಸುಂಕದಿಂದ ಕೇಂದ್ರ ಸರಕಾರ 1.72 ಲಕ್ಷ ಕೋಟಿ ರೂ. ಆದಾಯ ಗಳಿಸಿದ್ದರೆ 2020-21ರಲ್ಲಿ ಇದು 4.54 ಲಕ್ಷ ಕೋಟಿ ರೂ.ಗಳಿಗೆ ಏರಿಕೆ ಯಾಗಿದೆ. ಅಂದರೆ ಕೇವಲ 6 ವರ್ಷಗಳಲ್ಲಿ ಅಬಕಾರಿ ಸುಂಕ ದಿಂದ ಕೇಂದ್ರ ಸರಕಾರದ ಗಳಿಕೆ 3ಪಟ್ಟು ಹೆಚ್ಚಿದೆ. ಇನ್ನು ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯ ಸರಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವ್ಯಾಟ್ ವಿಧಿಸುವ ಮೂಲಕ ಗಳಿಸಿದ ಆದಾಯದಲ್ಲಿ ಶೇ. 43ರಷ್ಟು ಏರಿಕೆಯಾಗಿದೆ.
ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಗ್ರಾಹಕರಿಗೆ ಲಾಭ :
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಗ್ರಾಹಕರಿಗೆ ಲಾಭವಾಗಲಿದೆ. ಜಿಎಸ್‌ಟಿ ಅನ್ವಯವಾದಲ್ಲಿ ಕಚ್ಚಾ ತೈಲದ ಬೆಲೆ ಪೆಟ್ರೋಲ್‌ಗೆ 84 ರೂ. ಮತ್ತು ಡೀಸೆಲ್ ಲೀ.77ರೂ. ಇರುತ್ತಿತ್ತು. ಆದರೆ ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಪ್ರಸ್ತಾವನೆಗೆ ಸಮ್ಮತಿಸುವ ಸಾಧ್ಯತೆ ಬಲು ಕಡಿಮೆ.
ಮೂಲ ಬೆಲೆಗಿಂತ ಮೂರು ಪಟ್ಟು ಅಧಿಕ! :
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ 3 ಪಟ್ಟು ಹೆಚ್ಚಾಗಿದ್ದು ಇದರಿಂದಾಗಿ ಮೂಲ ಬೆಲೆಗಿಂತ ಮೂರು ಪಟ್ಟು ದುಬಾರಿಯಾಗಿದೆ. ಈಗಲೂ ಪೆಟ್ರೋಲ್-ಡೀಸೆಲ್‌ನ ಮೂಲ ಬೆಲೆ ಲೀ. ಗೆ ಸರಿಸುಮಾರು 40 ರೂ.ಗಳಾಗಿವೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರ ವಿಧಿಸುವ ತೆರಿಗೆಗಳಿಂದಾಗಿ ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ಲೀ. ಗೆ 110 ರೂ. ದಾಟಿದೆ. ಕೇಂದ್ರ ಸರಕಾರ 33ರೂ. ಅಬಕಾರಿ ಸುಂಕ ವಿಧಿಸಿದರೆ ರಾಜ್ಯ ಸರಕಾರಗಳು ತೈಲೋತ್ಪನ್ನಗಳಿಗೆ ವ್ಯಾಟ್ ಮತ್ತು ಸೆಸ್ ವಿಧಿಸುತ್ತಿದ್ದು ಗ್ರಾಹಕರು ಮೂಲ ಬೆಲೆಗಿಂತ ಮೂರು ಪಟ್ಟು ಅಧಿಕ ಬೆಲೆಯನ್ನು ತೆರುತ್ತಿದ್ದಾರೆ. ಕೇಂದ್ರ ಸರಕಾರ ಕಳೆದ ವರ್ಷ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು 10 ರೂ. ಹೆಚ್ಚಿಸಿತ್ತು. ಲೀಟರ್ ಪೆಟ್ರೋಲ್ ಮೇಲೆ ಅಬಕಾರಿ ಸುಂಕ ಸದ್ಯ 32.98 ರೂ. ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ 31.83 ರೂ. ಗಳಾಗಿವೆ. ಸದ್ಯ ದೇಶದಲ್ಲಿ ಪೆಟ್ರೋಲ್ ಲೀ.ಗೆ 55ರೂ. ಮತ್ತು ಡೀಸೆಲ್ ಲೀ. ಗೆ 44 ರೂ. ತೆರಿಗೆ ಹೇರಲಾಗುತ್ತಿದೆ.
ಪೆಟ್ರೋಲ್, ಡೀಸೆಲ್‌ಗೆ ವಿಧಿಸಲಾಗುತ್ತಿರುವ ತೆರಿಗೆ ವಿವರ (ರೂ. ಗಳಲ್ಲಿ)
ತೆರಿಗೆ ಪೆಟ್ರೋಲ್ ಡೀಸೆಲ್
ಅಬಕಾರಿ ಸುಂಕ 32.90 31.80
ಡೀಲರ್ ಕಮಿಷನ್ 3.82 2.60
ವ್ಯಾಟ್ 22.82 13.05
ಕಚ್ಚಾ ತೈಲ ಪೆಟ್ರೋಲ್ ಡೀಸೆಲ್
(ಡಾಲರ್/ ಬ್ಯಾರೆಲ್) ರೂ./ಲೀ. ರೂ./ಲೀ
75 84 77
70 81 74
65 78 71
60 75 68
50 69 62
40 63 56
30 57 50
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.