ನ್ಯಾ.ಡಿ.ವೈ.ಚಂದ್ರಚೂಡ್ ಮುಂದೆ 5+1 ಕೊಲಿಜಿಯಂ
Team Udayavani, Oct 13, 2022, 7:40 AM IST
ಮುಂದಿನ ಸಿಜೆಐ ಆಗಿ ನ್ಯಾ.ಡಿ.ವೈ.ಚಂದ್ರಚೂಡ್ ಅವರು ಆಯ್ಕೆಯಾಗುವುದು ಖಚಿತವಾಗಿದ್ದು, ಈಗಾಗಲೇ ಹಾಲಿ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರು ಇವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಕೇಂದ್ರ ಸರ್ಕಾರದ ಒಪ್ಪಿಗೆ ನಂತರ ನ.9ರಂದು ನ್ಯಾ. ಡಿ. ವೈ. ಚಂದ್ರಚೂಡ್ ಅವರು ಸಿಜೆಐ ಆಗಿ ಪ್ರಮಾಣವಚನವನ್ನೂ ಸ್ವೀಕಾರ ಮಾಡಲಿದ್ದಾರೆ. ಆದರೆ, ಸಿಜೆಐ ಆಗಲಿರುವ ನ್ಯಾ.ಚಂದ್ರಚೂಡ್ ಅವರ ಮುಂದೊಂದು ಕೊಲಿಜಿಯಂ ಸಂಬಂಧ ತಾಂತ್ರಿಕ ಸಮಸ್ಯೆ ಎದುರಾಗಿದೆ. ಏನಿದು ಸಮಸ್ಯೆ? ಇದನ್ನು ನಿವಾರಣೆ ಮಾಡಲು ಯಾವ ಕ್ರಮ ತೆಗೆದುಕೊಳ್ಳಬಹುದು? ಈ ಕುರಿತ ಒಂದು ನೋಟ ಇಲ್ಲಿದೆ…
ಆರು ನ್ಯಾಯಮೂರ್ತಿಗಳ ಕೊಲಿಜಿಯಂ
ನ್ಯಾ.ಚಂದ್ರಚೂಡ್ ಅವರು ಸುಪ್ರೀಂಕೋರ್ಟ್‌ನ ಸಿಜೆಐ ಆಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ಗೆ ವಿವಿಧ ನ್ಯಾಯಮೂರ್ತಿಗಳು, ಹೈಕೋರ್ಟ್‌ನ ನ್ಯಾಯಮೂರ್ತಿಗಳು, ಮುಖ್ಯ ನ್ಯಾಯಮೂರ್ತಿಗಳ ನೇಮಕದ ಬಗ್ಗೆ ನ್ಯಾ.ಚಂದ್ರಚೂಡ್ ಅವರ ನೇತೃತ್ವದ ಕೊಲಿಜಿಯಂ ನಿರ್ಧಾರ ತೆಗೆದುಕೊಳ್ಳಲಿದೆ. ಅಂದರೆ, ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಂತೆ ಈ ಅವಧಿಯಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳ ನೇಮಕ ಸಂಬಂಧ 18 ಶಿಫಾರಸುಗಳನ್ನು ಈ ಕೊಲಿಜಿಯಂ ಮಾಡಲಿದೆ. ಆದರೆ, ಸದ್ಯ ಕೊಲಿಜಿಯಂನಲ್ಲಿ 5 ನ್ಯಾಯಮೂರ್ತಿಗಳಿದ್ದು, ಮುಂದಿನ ವರ್ಷದ ಮಧ್ಯಂತರದ ವರೆಗೆ ಆರು ನ್ಯಾಯಮೂರ್ತಿಗಳು ಇರುವ ಸಾಧ್ಯತೆ ಇದೆ.
ಮೂರು ತೀರ್ಪು, ಒಂದು ಕೊಲಿಜಿಯಂ
ಕೊಲಿಜಿಯಂ ರಚನೆ ಬಗ್ಗೆ ಸಂವಿಧಾನದಲ್ಲಿ ಯಾವುದೇ ಉಲ್ಲೇಖವಿಲ್ಲ. ಆದರೆ, ಇದನ್ನು ಸುಪ್ರೀಂಕೋರ್ಟ್‌ನ ಮೂರು ತೀರ್ಪುಗಳ ಮೂಲಕ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಈ ತೀರ್ಪುಗಳ ಪ್ರಕಾರ, ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ಇತರೆ ನ್ಯಾಯಮೂರ್ತಿಗಳ ನೇಮಕಕ್ಕಾಗಿ ಸುಪ್ರೀಂ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡಲಾಗುತ್ತದೆ.
1. ಮೊದಲ ಜಡ್ಜಸ್ ಕೇಸ್
ಎಸ್‌ಪಿ ಗುಪ್ತಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ(1981) ಪ್ರಕರಣದಲ್ಲಿ ಏಳು ನ್ಯಾಯಮೂರ್ತಿಗಳ ಪೀಠವೊಂದು ನ್ಯಾಯಮೂರ್ತಿಗಳ ನೇಮಕದ ಬಗ್ಗೆ ತೀರ್ಪೊಂದನ್ನು ನೀಡಿತ್ತು. ಇದು ಸಂವಿಧಾನದ ಪರಿಚ್ಛೇದ 124(2) ಮತ್ತು 217(1) ಅನ್ನು ಉಲ್ಲೇಖಿಸಿ, ಇದು ನ್ಯಾಯಮೂರ್ತಿಗಳ ನೇಮಕವನ್ನು ಅಂತಿಮ ಮಾಡಿತ್ತು. ಅಲ್ಲದೆ, ಈ ತೀರ್ಪಿನಲ್ಲಿ ಕೇಂದ್ರ ಸರ್ಕಾರ ಬೇಕಾದರೆ, ಸಮರ್ಪಕ ಕಾರಣಗಳನ್ನು ನೀಡಿ, ಸಿಜೆಐ ಅವರ ನಿರ್ಧಾರವನ್ನು ತಿರಸ್ಕರಿಸಬಹುದು ಎಂದು ಹೇಳಿತ್ತು.
2. ಎರಡನೇ ಜಡ್ಜಸ್ ಕೇಸ್
1993ರಲ್ಲಿ 9 ನ್ಯಾಯಮೂರ್ತಿಗಳ ಪೀಠವು, 1981ರ ತೀರ್ಪಿನಲ್ಲಿರುವ ಕೆಲವು ಸಂಗತಿಗಳನ್ನು ಸರಿಪಡಿಸಿತು. ಹಿಂದಿನ ತೀರ್ಪಿನಲ್ಲಿದ್ದ “ಸಮಾಲೋಚನೆ’ ಎಂಬ ಪದದ ಅರ್ಥ ನೈಜವಾಗಿ, “ಒಪ್ಪಿಗೆ’ ಎಂದು ಬದಲಾಯಿಸಲಾಯಿತು. ಅಲ್ಲದೆ, ಸಿಜೆಐ ಸೇರಿ ಮೂವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳ ಕೊಲಿಜಿಯಂ ರಚಿಸಿ ಈ ಮೂಲಕ ನ್ಯಾಯಮೂರ್ತಿಗಳ ನೇಮಕ ಮಾಡಬಹುದು ಎಂದು ತೀರ್ಪು ನೀಡಲಾಯಿತು.
3. ಮೂರನೇ ಜಡ್ಜಸ್ ಕೇಸ್
1998ರಲ್ಲಿ ಮೂರನೇ ಬಾರಿಗೆ ನ್ಯಾಯಮೂರ್ತಿಗಳ ನೇಮಕದ ಬಗ್ಗೆ ಆಗಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರು ಒಂದು ಅಭಿಪ್ರಾಯ ಕೇಳಿದ್ದರು. ಅಂದರೆ, ನ್ಯಾಯಮೂರ್ತಿಗಳ ನೇಮಕ ಮಾಡುವ ಅಧಿಕಾರ ಸಿಜೆಐ ನೇತೃತ್ವದ ಸಮಿತಿ ವ್ಯಾಪ್ತಿಗೆ ಬರಲಿದೆಯೇ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಸುಪ್ರೀಂಕೋರ್ಟ್, ಈ ಅಧಿಕಾರ ಸಿಜೆಐ ನೇತೃತ್ವದ ಕೊಲಿಜಿಯಂಗೆ ಇದೆ ಎಂದು ಹೇಳಿತ್ತು. ಅಲ್ಲದೆ, ಕೊಲಿಜಿಯಂನಲ್ಲಿದ್ದ ಮೂವರು ನ್ಯಾಯಮೂರ್ತಿಗಳ ಸಂಖ್ಯೆಯನ್ನು ಐದಕ್ಕೆ ಏರಿಕೆ ಮಾಡಲಾಗಿತ್ತು.
ಕೊಲಿಜಿಯಂನಲ್ಲಿ ಯಾರಿರುತ್ತಾರೆ?
ಸಿಜೆಐ ಹಾಗೂ ಹಿರಿತನದಲ್ಲಿ ನಂತರದ ನಾಲ್ವರು ನ್ಯಾಯಮೂರ್ತಿಗಳು ಈ ಕೊಲಿಜಿಯಂನಲ್ಲಿ ಇರುತ್ತಾರೆ. ಹಾಲಿ ಕೊಲಿಜಿಯಂ ಸಿಜೆಐ ಯು.ಯು.ಲಲಿತ್ ಅವರ ನೇತೃತ್ವದಲ್ಲಿದ್ದು, ಇದರಲ್ಲಿ ಮುಂದಿನ ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಸಂಜಯ್ ಕಿಶನ್ ಕೌಲ್ ಮತ್ತು ಎಸ್. ಅಬ್ದುಲ್ ನಾಜೀರ್ ಅವರಿದ್ದಾರೆ.
ನ್ಯಾ.ಚಂದ್ರಚೂಡ್ ಅವಧಿಯಲ್ಲಿನ ಸಮಸ್ಯೆ ಏನು?
ಹಿಂದಿನಿಂದಲೂ ನಡೆದುಬಂದಿರುವ ಸಂಪ್ರದಾಯದಂತೆ, ಕೊಲಿಜಿಯಂನಲ್ಲಿ ಮುಂದೆ ಮುಖ್ಯ ನ್ಯಾಯಮೂರ್ತಿಯಾಗುವವರೂ ಇರಲೇಬೇಕು. ಆದರೆ, ಈಗ ನ್ಯಾ.ಚಂದ್ರಚೂಡ್ ಅವರು ಎರಡು ವರ್ಷಗಳ ಕಾಲ ಸಿಜೆಐ ಆಗಿ ಇರಲಿದ್ದಾರೆ. ಹೀಗಾಗಿ, ಇವರ ನಂತರದಲ್ಲಿರುವ ಹಿರಿಯ ನ್ಯಾಯಮೂರ್ತಿಗಳು ಈ ಅವಧಿಯಲ್ಲಿ ನಿವೃತ್ತರಾಗಲಿದ್ದಾರೆ. ಈಗಿನ ಲೆಕ್ಕಾಚಾರದ ಪ್ರಕಾರ, ನ್ಯಾ.ಚಂದ್ರಚೂಡ್ ಅವರ ನಂತರದ ಸಿಜೆಐ ನ್ಯಾ.ಸಂಜೀವ್ ಖನ್ನಾ. 2023ರ ಮೇ 15ಕ್ಕೆ ಇವರು ಅಧಿಕೃತವಾಗಿ ಕೊಲಿಜಿಯಂಗೆ ಸೇರಲಿದ್ದಾರೆ.
ನ್ಯಾ.ಚಂದ್ರಚೂಡ್ ಅವರ ಕೊಲಿಜಿಯಂ ಹೇಗಿರಲಿದೆ?
1. ನವೆಂಬರ್ 9
ಸಿಜೆಐ ಆಗಿ ನ್ಯಾ.ಚಂದ್ರಚೂಡ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಆಗ ಕೊಲಿಜಿಯಂನಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಬ್ದುಲ್ ನಾಜೀರ್, ಕೆ.ಎಂ.ಜೋಸೆಫ್ ಮತ್ತು ಎಂ.ಆರ್. ಶಾ.
2. 2023ರ ಜ.4
ನ್ಯಾ. ಅಬ್ದುಲ್ ನಾಜೀರ್ ನಿವೃತ್ತರಾಗಲಿರುವುದರಿಂದ ಇವರ ಜಾಗಕ್ಕೆ ನ್ಯಾ.ಅಜಯ್ ರಸ್ತೋಗಿ ಬರಲಿದ್ದಾರೆ. ಉಳಿದವರು ಹಾಗೆಯೇ ಇರಲಿದ್ದಾರೆ.
3. 2023ರ ಮೇ 15
ನ್ಯಾ.ಎಂ.ಆರ್.ಶಾ ಅವರು ನಿವೃತ್ತರಾಗಲಿರುವುದರಿಂದ ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಕೌಲ್, ಜೋಸೆಫ್, ರಸ್ತೋಗಿ ಅವರ ಜತೆಗೆ ನ್ಯಾ. ಸಂಜೀವ್ ಖನ್ನಾ ಸೇರ್ಪಡೆಯಾಗಲಿದ್ದಾರೆ.
4. ನ್ಯಾ. ಸಂಜೀವ್ ಖನ್ನಾ ಅವರು ನ್ಯಾ.ಚಂದ್ರಚೂಡ್ ಅವರ ಬಳಿಕ ಸಿಜೆಐ ಆಗಬಹುದಾಗಿದ್ದು, ಇವರು 2024ರ ನ.11ರಂದು ಅಧಿಕಾರ ಸ್ವೀಕರಿಸಬಹುದು.
5+1 ಕೊಲಿಜಿಯಂ ಅಂದರೇನು?
ನ್ಯಾ.ಚಂದ್ರಚೂಡ್ ಅವರ ನಂತರ ನ್ಯಾ.ಸಂಜೀವ್ ಖನ್ನಾ ಅವರು ಸಿಜೆಐ ಆಗಬಹುದಾಗಿರುವುದರಿಂದ 2022ರ ನ.9ರಂದೇ ಕೊಲಿಜಿಯಂಗೆ ಆರನೇ ನ್ಯಾಯಮೂರ್ತಿಯಾಗಿ ಇವರು ಸೇರಬಹುದಾಗಿದೆ. 2007ರಲ್ಲೂ ಇದೇ ರೀತಿ ಆಗಿತ್ತು. ಆಗ ಸಿಜೆಐ ಆಗಿ ಕೆ.ಜಿ.ಬಾಲಕೃಷ್ಣನ್ ಅವರು ಅಧಿಕಾರ ವಹಿಸಿಕೊಂಡಾಗ, ಮುಂದಿನ ಸಿಜೆಐ ಆಗಬಹುದಾಗಿದ್ದ ನ್ಯಾ.ಎಸ್.ಎಚ್.ಕಪಾಡಿಯಾ ಅವರನ್ನು ಆರನೇ ಜಡ್ಜ್ ಆಗಿ ಕೊಲಿಜಿಯಂಗೆ ಸೇರಿಸಿಕೊಳ್ಳಲಾಗಿತ್ತು.
ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.