ಯಕ್ಷಗಾನದ ನವರಸ ನಾಯಕ ಪುಳಿಂಚ
Team Udayavani, Jul 22, 2022, 11:53 PM IST
ಇನಿತ ಆಟೊಗು ಪುಳಿಂಚೆರ್ ಉಲ್ಲೆರಾ…? (ಇಂದಿನ ಆಟದಲ್ಲಿ ಪುಳಿಂಚರು ಇದ್ದಾರೆಯೇ?)- ಎಂಭತ್ತರ ದಶಕದಲ್ಲಿ ಯಕ್ಷಗಾನ ರಸಿಕರು ಕರ್ನಾಟಕ ಮೇಳದ ಟೆಂಟ್ ಹತ್ತಿರ ಬಂದು ಮೊದಲು ಕೇಳುತ್ತಿದ್ದ ಪ್ರಶ್ನೆ ಇದು. ಕಾರಣ ಆಗಿನ ಎಲ್ಲ ತುಳು ಪ್ರಸಂಗಗಳಲ್ಲಿ ಜನರ ನಿರೀಕ್ಷೆಯ ಪಾತ್ರಧಾರಿ ಪುಳಿಂಚ ರಾಮಯ್ಯ ಶೆಟ್ಟಿ! ಯಕ್ಷಗಾನ ರಂಗಸ್ಥಳದಲ್ಲಿ ಅವರು ಮಾಡದ ಪಾತ್ರವಿಲ್ಲ. ಒಂದರ್ಥದಲ್ಲಿ ಅವರು ಯಕ್ಷರಂಗದ ನವರಸನಾಯಕ!
ಪುಳಿಂಚ ರಾಮಯ್ಯ ಶೆಟ್ಟರು ತೀರಾ ಸಂಪ್ರದಾಯಬದ್ಧ ವೇಷಧಾರಿ ಯಾಗಿಯೇ ರಂಗಕ್ಕೆ ಬಂದವರು. 1959 ರಿಂದ ಧರ್ಮಸ್ಥಳ ಮೇಳದಲ್ಲಿ ಪುಂಡು ವೇಷ ಹಾಕಿ ರಂಗಸ್ಥಳ ಹುಡಿ ಹಾರಿಸಿದ ಅವರು ಮೂಲ್ಕಿ ಮೇಳದಲ್ಲಿ (1973) ರಾಜವೇಷ ತೊಟ್ಟು ರಾರಾಜಿಸಿದರು. ಬಳಿಕ ಕೂಡ್ಲು ಮೇಳದಲ್ಲಿ (1977) ಒಂದನೇ ಬಣ್ಣದ ವೇಷ ಧರಿಸಿ ಯಕ್ಷರಾತ್ರಿಗಳನ್ನು ನಡುಗಿಸಿದ ಪುಳಿಂಚ, ಇರುಳು ಬೆಳಗಾಗು ವುದರಲ್ಲಿ ತನ್ನ ಪೌರಾಣಿಕ ಆವರಣವನ್ನು ಕಳಚಿ ತುಳು ಯಕ್ಷ ಹಾಸ್ಯಭೂಮಿಕೆಗಳಲ್ಲಿ ಪ್ರೇಕ್ಷಕರನ್ನು ಮರುಳುಗೊಳಿಸಿದರೆಂದರೆ ಅವರ ನಟನ ಸಾಮರ್ಥ್ಯಕ್ಕೆ ಬೇರೆ ನಿದರ್ಶನ ಬೇಕಿಲ್ಲ.
ಪಾರಂಪರಿಕ ಪಾತ್ರಗಳಲ್ಲಿ ವಿಜೃಂಭಿಸಿದ ಅವರು 1981ರಿಂದ 2000ರ ವರೆಗೆ ಕಲ್ಲಾಡಿ ವಿಟಲ ಶೆಟ್ಟರ ಕರ್ನಾಟಕ ಮೇಳದಲ್ಲಿ ಮಲ್ಲಯ ಬುದ್ಯಂತ, ನಕ್ಕುರ, ಸಿದ್ದು, ಸೋಂಪ ಪಾತ್ರಗಳಿಂದ ಪ್ರಸಿದ್ಧ ರಾದುದು ಇತಿಹಾಸ. ಕಾಡಮಲ್ಲಿಗೆ ಪ್ರಸಂಗದ ಸಿದ್ದುವಂತೂ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚೊತ್ತಿ ಹೋಗಿದೆ.
ತುಳು ಯಕ್ಷಗಾನ ರಾಮಯ್ಯ ಶೆಟ್ಟರ ಬಣ್ಣದ ಬದುಕಿಗೆ ಹೊಸ ತಿರುವು ನೀಡಿತು. ಸಾಮಾಜಿಕ ವಿಷಯಗಳನ್ನು ಗ್ರಾಮೀಣ ಶೈಲಿಯಲ್ಲಿ ಪಡಿಮೂಡಿಸುವ ತುಳು ಬದುಕಿನ ವ್ಯಕ್ತಿ ಚಿತ್ರಣ, ನಂಜು- ಮಾತ್ಸರ್ಯ ಸಂಚುಗಾರಿಕೆಯ ಅಭಿವ್ಯಕ್ತಿಯಲ್ಲಿ ಅವರ ಪಾತ್ರ ನಿರ್ವಹಣೆ ಅಮೋಘ. ರಾಮದಾಸ ಸಾಮಗರು, ಕೋಳ್ಯೂರು, ಮಿಜಾರು, ಅರುವ ರೊಂದಿಗೆ ರಾಮಯ್ಯ ಶೆಟ್ಟರು ನಿರ್ವಹಿಸು ತ್ತಿದ್ದ ಪಾತ್ರಗಳೆಲ್ಲ ಒಂದು ಕಾಲ ಘಟ್ಟದಲ್ಲಿ ಯಕ್ಷರಂಗದ ರಸಗವಳಗಳೇ ಆಗಿದ್ದವು.
ಪುಣಚದ ಪುಳಿಂಚ
ಶೆಟ್ಟರ ಹುಟ್ಟೂರು ವಿಟ್ಲ ಸಮೀಪದ ಕೇಪು ಗ್ರಾಮದ ಮೈರ. 1939ರಲ್ಲಿ ದಿ| ಬಂಟಪ್ಪ ಶೆಟ್ಟಿ ಮತ್ತು ಉಂಞ್ಞಕ್ಕೆ ದಂಪತಿಗೆ ಜನಿಸಿದ ಅವರು ಪುಣಚ (ತುಳುವಿನಲ್ಲಿ ಪುಳಿಂಚ)ದಲ್ಲಿ ನೆಲೆಸಿ ಪುಳಿಂಚರೇ ಆದರು. ಆರನೇ ತರಗತಿ ಪೂರೈಸಿ ತನ್ನ 14ನೇ ವಯಸ್ಸಿನಲ್ಲಿ (1953) ಶ್ರೀ ಧರ್ಮಸ್ಥಳ ಮೇಳ ಸೇರಿ ಕಟ್ಟುವೇಷ. ಕೋಡಂಗಿಯಾಗಿ ರಂಗ ಪ್ರವೇಶ ಮಾಡಿ ಪುಂಡು ವೇಷಧಾರಿಯಾಗಿ ಭಡ್ತಿ ಪಡೆ ದರು. ಬಳಿಕ ಕೂಡ್ಲು, ಇರಾ, ಕರ್ನಾಟಕ, ಕುದ್ರೋಳಿ, ಇರುವೈಲು ಮತ್ತು ಮೂಲ್ಕಿ ಮೇಳಗಳಲ್ಲಿ ಒಟ್ಟು 47 ವರ್ಷಗಳ ಸುದೀರ್ಘ ತಿರುಗಾಟ ನಡೆಸಿ 2000ರಲ್ಲಿ ನಿವೃತ್ತಿ ಹೊಂದಿದರು.
ಸಂಚಾರಿ ಮೇಳವನ್ನು ಕಟ್ಟಿ (1963) ಮೈಸೂರು, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಯಕ್ಷಗಾನದ ಕೀರ್ತಿ ಪತಾಕೆ ಹಾರಿಸಿದ್ದರು. ಹಲವು ಪ್ರಸಂಗ ಗಳನ್ನು ರಚಿಸಿದ್ದಾರಲ್ಲದೆ “ಕನ್ನಡಿಗರ ಕರ್ಮ ಕಥೆ’ ಎಂಬ ಕಾದಂಬರಿ ಯನ್ನೂ ಬರೆದಿದ್ದಾರೆ. ಸುಮಾರು ಇನ್ನೂರಕ್ಕೂ ಹೆಚ್ಚು ಹಾಸ್ಯ ಪ್ರಸಂಗಗಳನ್ನು ಹೊಸೆದು ಅವುಗಳನ್ನು ಕ್ಯಾಸೆಟ್ ರೂಪ ದಲ್ಲಿ ಜನಪ್ರಿಯಗೊಳಿಸಿದ್ದಾರೆ.
ತಮ್ಮ ಇಳಿವಯಸ್ಸಿನಲ್ಲಿ ಕಲ್ಲಡ್ಕ ಸಮೀಪದ ಬಾಳ್ತಿಲದ ಚೆಂಡೆ ನಿವಾಸದಲ್ಲಿ ವಾಸವಾಗಿದ್ದರು. 2002ರ ಜುಲೈ 22ರಂದು ಅವರು ವಿಧಿವಶರಾದರು.
ಪುಳಿಂಚ ಸೇವಾ ಪ್ರತಿಷ್ಠಾನ
ರಾಮಯ್ಯ ಶೆಟ್ಟರ ಪುತ್ರ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ ಅವರ ನೇತೃತ್ವದಲ್ಲಿ ಸ್ಥಾಪನೆಯಾದ “ಪುಳಿಂಚ ಸೇವಾ ಪ್ರತಿಷ್ಠಾನ’ದ ವತಿಯಿಂದ 2013ರಲ್ಲಿ ಪ್ರಾರಂಭ ವಾದ ಪುಳಿಂಚ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಪ್ರತೀ ಮೂರು ವರ್ಷಗಳಿಗೊಮ್ಮೆ ಪುಳಿಂಚರ ಕಾಯಕ ಕ್ಷೇತ್ರವಾಗಿದ್ದ ಬಾಳ್ತಿಲ ಗ್ರಾಮದ ಚೆಂಡೆ ಪುಳಿಂಚ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತದೆ.
-ಭಾಸ್ಕರ ರೈ ಕುಕ್ಕುವಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.