ಪುರಂದರರ ಕೀರ್ತನೆ ಅಧ್ಯಾತ್ಮ ಔಷಧ
ಇಂದು ಪುರಂದರದಾಸರ ಆರಾಧನೆ
Team Udayavani, Jan 29, 2025, 6:14 AM IST
ದಾಸವರೇಣ್ಯರಾದ ಪುರಂದರದಾಸರು ನಾಲ್ಕು ಲಕ್ಷಕ್ಕೂ ಅಧಿಕ ಕೀರ್ತನೆಗಳನ್ನು ಬರೆದಿದ್ದಾರೆಂದು ಅಂದಾಜು ಮಾಡಲಾಗಿದೆ. ಅವರ ಕೀರ್ತನೆಗಳ ಪ್ರಧಾನ ಆಶಯ ಶ್ರೀಹರಿಭಕ್ತಿ. ಇದರೊಂದಿಗೆ ಸಮಾಜದ ಅಂಕುಡೊಂಕುಗಳ ಚಿತ್ರಣ. ಇವುಗಳಲ್ಲಿ ಬದುಕಿನ ಬವಣೆಗೆ ಅಧ್ಯಾತ್ಮ ಔಷಧೀಯ ಅಂಶಗಳಿವೆ. ಭಗವಂತನನ್ನು “ಭವರೋಗ ಹರ’ ಎಂದು ಬಣ್ಣಿಸಿದ ದಾಸರು ಭವ ರೋಗಕ್ಕೆ ಕಾರಣವಾಗುವ ಆರು ವೈರಿಗಳನ್ನು ನಿಯಂತ್ರಿಸುವ ಸೂತ್ರಗಳನ್ನೂ ಹೇಳುತ್ತಾರೆ. ದೈಹಿಕ ವ್ಯಾಧಿಗೆ ಮನೋ ವ್ಯಾಧಿಯೂ ಪ್ರಧಾನ ಕಾರಣ. ಬದುಕಿಗೆ ದೈಹಿಕ ದೃಢತೆ ಎಷ್ಟು ಮುಖ್ಯವೋ ಮಾನಸಿಕ ದೃಢ ತೆಯೂ ಅಷ್ಟೇ ಮುಖ್ಯ. ದೀರ್ಘಾವಧಿ ಬದುಕುವ ಹಂಬಲ ಎಲ್ಲಋರಲ್ಲೂ ಸಹಜವಾಗಿರುತ್ತದೆ. ಆದರೆ ಅಲ್ವಾವಧಿಯ ಲ್ಲಿಯೇ ಇಹಲೋಕ ತ್ಯಜಿಸಬೇಕಾದ ಕಹಿ ಎದುರಾಗಬಹುದು. ಕನಕದಾಸರು ಅದಕ್ಕೇ ಹೇಳಿರಬೇಕು “ಮೃತ್ಯು ಬೆನ್ನೊಳಗಿಹುದು’ ಎಂದು. ಪುರಂದರ ದಾಸರ ಈ ಮೂರು ಕೀರ್ತನೆಗಳು ಈ ಹಿನ್ನೆಲೆ ಯಲ್ಲಿ ನಮ್ಮ ಗಮನ ಸೆಳೆಯುತ್ತವೆ.
ಬಂದದ್ದೆಲ್ಲ ಬರಲಿ ಗೋವಿಂದನ ದಯೆಯೊಂದಿರಲಿ
ಪುರಂದರದಾಸರಿಗೆ ಭಗವಂತನ ಮೇಲೆ ಪೂರ್ಣ ವಿಶ್ವಾಸ. ಭಗವಂತನು ಕಷ್ಟಗಳನ್ನು ತನ್ನ ನಂಬಿದವರಿಗೆ ಕೊಡಲಾರನು. ಕೊಟ್ಟರೂ ಅದಕ್ಕೆ ಅರಿಹಾರವನ್ನೂ ಅವನೇ ತೋರಿಸುತ್ತಾನೆ. ಇದು ನಂಬಿಕೆಯ ಪ್ರಶ್ನೆ. ಕೆಲವೊಮ್ಮೆ ನಂಬಿಕೆಯೇ ನಿಜ ವಾಗಬಹುದು. ಬಂದದ್ದೆಲ್ಲ ಬರಲಿ ಕೀರ್ತನೆಯ ಆಶಯವೂ ಇದೇ ಆಗಿದೆ. ನಾವು ಎಣಿಸಿದಂತೆ ಬದುಕು ಸಾಗದು. ಕಷ್ಟಗಳಾಗಲಿ, ಸುಖಗಳಾಗಲಿ, ರೋಗಬಾಧೆಯಾ ಗಲಿ, ಅಪಘಾತಗಳಾಗಲಿ, ಸಾವು-ನೋವುಗಳಾಗಲಿ ಯಾವ ಕ್ಷಣದಲ್ಲೂ ನಮ್ಮನ್ನು ಸಂಕಟದತ್ತ ತಳ್ಳಬಹುದು. ಹಾಗಾಗದಿರಲಿ ಎಂಬ ಪ್ರಾರ್ಥನೆ ಭಗವಂತನ ಮುಂದೆ ಭಕ್ತ ಸಮುದಾಯದವರದ್ದು.
ಆದದ್ದೆಲ್ಲ ಒಳಿತೇ ಆಯಿತು
ಇದು ಪುರಂದರದಾಸರ ಇನ್ನೊಂದು ಪ್ರಸಿದ್ಧ ಕೀರ್ತನೆ. ನವಕೋಟಿ ನಾರಾಯಣ ನಾಗಿದ್ದ ಶ್ರೀನಿವಾಸ ನಾಯಕನ ಬದುಕಿಗೆ ತಿರುವು ಕೊಟ್ಟ ಮೂಗುತಿಯ ಘಟನೆ ಈ ಕೀರ್ತನೆಯಲ್ಲಿದೆ. ಈ ಘಟನೆಯ ಅನಂತರ ಅವರು “ವ್ಯಾಪಾರ ನಮಗಾಯಿತು ಶ್ರೀಪತಿಯ ಪಾದಾರವಿಂದ ಸೇವೆಯೆಂಬೋ’ ಎಂದು ಹಾಡುತ್ತಾ ಹೊರಟರು. ನಮ್ಮ ಬದುಕನ್ನೇ ವಿಶ್ಲೇಷಿದರೆ ಇಂದಿಗೂ ಈ ಕೀರ್ತನೆ ಪ್ರಸ್ತುತ ಎನಿಸುತ್ತದೆ. ಸಕಾರಾತ್ಮಕ ಚಿಂತನೆಗೆ ಈ ಕೀರ್ತನೆ ಪೂರಕ ಎನಿಸುತ್ತದೆ. ಏನೇ ಕಷ್ಟ ಬಂದರೂ ಭರವಸೆಯೇ ಬದುಕಿಗೆ ಆಧಾರ ಎಂಬ ಮಾತಿನಂತೆ ಅದರಲ್ಲಿ ಒಳಿತನ್ನು ಹುಡುಕುವ ಪ್ರಯತ್ನ. ಕಷ್ಟಗಳು ಒದಗಿದಾಗ ಮಾನಸಿಕವಾಗಿ ಕುಗ್ಗುವುದು ಸಹಜ. ಮಾನಸಿಕವಾಗಿ ಕುಗ್ಗಿದಾಗ ಬದುಕು ಮತ್ತಷ್ಟು ಸಂಕಟಮಯವಾಗಬಹುದು. ಸಾಧ್ಯವಾದಷ್ಟು ಸಕಾರಾತ್ಮಕ ಚಿಂತನೆಯ ಮೂಲಕ ದುಃಖದಿಂದ ಹೊರಬರಲು ಪ್ರಯತ್ನಿಸಬೇಕು. ಹಾಗಾಗಿ ದಾಸರು ತಮ್ಮ ಜೀವನದ ಘಟನೆಯ ಮೂಲಕ ಮಾನವ ಕುಲಕ್ಕೆ ಆದದ್ದೆಲ್ಲ ಒಳಿತೇ ಆಯಿತು ಎಂದು ಸ್ವೀಕರಿಸುವಂತೆ ಸಂದೇಶ ನೀಡುತ್ತಾರೆ.
ಹರಿ ಚಿತ್ತ ಸತ್ಯ: ಪುರಂದರದಾಸರ ಇನ್ನೊಂದು ಹಾಡು ಹರಿಚಿತ್ತ ಸತ್ಯ. ನರಚಿತ್ತಕೆ ಬಂದುದು ಲವಲೇಶ ನಡೆಯದು. ಕಷ್ಟ ನೋವುಗಳ ನಡುವೆ ಆಗುವ ಜ್ಞಾನೋದಯ ಈ ಕೀರ್ತನೆಯ ವಸ್ತು. ಕೊನೆಗೆ ಎಲ್ಲವೂ ಹರಿಚಿತ್ತ ಎಂಬ ಸಮಾಧಾನ. ಪುರಂದರದಾಸರ “ಗಿಳಿಯು ಪಂಜರದೊಳಿಲ್ಲ’ ಎಂಬ ಕೀರ್ತನೆಯಲ್ಲಿ ಮಗನನ್ನು ಕಳೆದುಕೊಂಡ ದುಃಖ ಕೊನೆಯಲ್ಲಿ ನಿರೂಪಕ ಕಣ್ಣೀರು ಸುರಿಸಿ ಸೋತು ಅಂತಿಮವಾಗಿ “ಸಾಮಜಪೋಷಕ ತಾನು ಪ್ರೇಮದಿ ಸಾಕಿದ ಗಿಳಿ’ ಎಂಬ ತೀರ್ಮಾನದ ಮೂಲಕ ಸಮಾಧಾನ ತಂದುಕೊಳ್ಳಲು ಯತ್ನಿಸುತ್ತಾನೆ.
ದಿನದಿಂದ ದಿನಕ್ಕೆ ಹೆಚ್ಚು ವರದಿಯಾಗುತ್ತಿರುವ ಆತ್ಮಹತ್ಯೆಯಂಥ ಪ್ರಕರಣಗಳು ನಮ್ಮ ಸಮಾಜದ ನಿದ್ರೆ ಕೆಡಿಸುತ್ತಿವೆ. ಯಾರು ಎಷ್ಟೇ ಸಮಾಧಾನ ಹೇಳಿದರೂ ಮನಸ್ಸಿನ ದುಃಖದಿಂದ ಹೊರಬರುವುದು ಹೇಳಿಕೊಂಡಷ್ಟು ಸುಲಭವಲ್ಲ. ಆದರೂ ಬದುಕಬೇಕು. ಬದುಕಿಗೆ ವಿಶ್ವಾಸ ತುಂಬುವ ಇಂಥ ಸಾಹಿತ್ಯದ ಅಧ್ಯಯನದ ಮೂಲಕ ಬದುಕಿನ ಭಾರವನ್ನು ಹಗುರವಾಗಿಸಿಕೊಳ್ಳಲು ಪ್ರಯತ್ನಿಸೋಣ.
-ಶ್ರೀಕಾಂತ್, ಸಿದ್ದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Results:27 ವರ್ಷದ ಬಳಿಕ ದೆಹಲಿಯಲ್ಲಿ ಅರಳಿದ ಕಮಲ-ಐವರು CM ಹುದ್ದೆ ರೇಸ್ ನಲ್ಲಿ…
Propose Day : ಸತ್ತಿರುವವನಿಗೆ ಹೀಗೊಂದು ಪ್ರೊಪೋಸಲ್ ……
Delhi Results 2025: ಚುನಾವಣೆಯಲ್ಲಿ ಕೇಜ್ರಿವಾಲ್, ಸಿಸೋಡಿಯಾಗೆ ಅಲ್ಪಮತಗಳಿಂದ ಸೋಲು!
Doors: ವಿಶೇಷ ಸಂದರ್ಭಗಳಲ್ಲಿ ಬಾಗಿಲುಗಳ ಪಾತ್ರ
ಹೂಡಿಕೆದಾರರ ಸಮಾವೇಶದಿಂದ ಕೈಗಾರಿಕ ವಲಯಕ್ಕೆ ಹೊಸ ಆಯಾಮ: ಎಂ.ಬಿ.ಪಾಟೀಲ್