R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ
ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಆಗಿರ್ತಾರೆ, ಅನುಮಾನವೇ ಬೇಡ
Team Udayavani, Sep 20, 2024, 6:45 AM IST
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ವಿರುದ್ಧದ ಆರೋಪ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಸರಕಾರದಲ್ಲಿ ಗೊಂದಲಗಳು ಶುರುವಾಗಿವೆ. ಕೆಲವು ಹಿರಿಯ ಸಚಿವರು ಸೇರಿ ಅರ್ಧ ಡಜನ್‌ಗೂ ಹೆಚ್ಚು ನಾಯಕರು ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸುತ್ತಿದ್ದಾರೆ.ಈ ಇಡೀ ರಾಜಕೀಯ ಬೆಳವಣಿಗೆಯ ಕೇಂದ್ರಬಿಂದು ಸ್ವತಃ ಸರಕಾರದ ಭಾಗವಾಗಿರುವ ರಾಜ್ಯ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು. “ಸಚಿವನಾಗಿ ನಾನೂ ದಣಿದಿದ್ದೇನೆ. ಇನ್ನೇನಿದ್ದರೂ ಸಿಎಂ ಆಗಬೇಕು’ ಎಂದು ಈಚೆಗೆ ಸಿಎಂ ತವರು ಜಿಲ್ಲೆ ಮೈಸೂರಿನಲ್ಲೇ ಹೇಳಿಕೆ ನೀಡುವ ಮೂಲಕ ರಾಜಕಾರಣದಲ್ಲಿ “ಸಂಚಲನ’ ಮೂಡಿಸಿದ್ದರು. ಈ ಬಾರಿ ಸಂಪುಟದಲ್ಲೂ ಸ್ಥಾನ ಸಿಗದ ದೇಶಪಾಂಡೆ ಅವರು ನಿಜವಾಗಿಯೂ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರಾ? ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸಿಎಂ ಹುದ್ದೆ ಇವೆರಡರಲ್ಲಿ ಯಾವುದಕ್ಕೆ ಅವರು ಸಿದ್ಧರಾಗಿದ್ದಾರೆ? ಸರಕಾರದಲ್ಲಿ ಎಲ್ಲವೂ ಸರಿಯಾಗಿದೆಯೇ? ಇಂತಹ ಹಲವು ಪ್ರಶ್ನೆಗಳಿಗೆ “ಉದಯವಾಣಿ’ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
9 ಬಾರಿ ಶಾಸಕರಾಗಿ, ಒಮ್ಮೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ನಿಮ್ಮನ್ನು ಸಂಪುಟದಿಂದ ಹೊರಗಿಡ ಲಾಗಿದೆ. ನೀವು ಈಗ ಸಿಎಂ ಆಕಾಂಕ್ಷಿ ಅಂತ ಹೇಳುತ್ತಿದ್ದೀರಲ್ಲ?
ನಾನು 9 ಬಾರಿ ಶಾಸಕನಾಗಲಿ ಅಥವಾ 14 ಬಾರಿಯಾದರೂ ಗೆದ್ದು ಬರಲಿ. ಪ್ರತೀ ಬಾರಿ ನಾನು ಸಂಪುಟ ಸಚಿವನಾಗಿ ಇರಲೇಬೇಕೆಂಬ ನಿಯಮ ಏನೂ ಇಲ್ಲ. ಸಚಿವ ಹುದ್ದೆ ಎನ್ನು ವುದು ನನ್ನ ಜನ್ಮಸಿದ್ಧ ಹಕ್ಕೂ ಅಲ್ಲ. ಸಚಿವ ಸಂಪುಟ ರಚನೆ ಮಾಡುವ ಮುಖ್ಯಮಂತ್ರಿಗಳು ಅವರು ಹಲವು ಅಂಶಗಳನ್ನು ಪರಿಗಣಿಸಿ, ಅಳೆದು ತೂಗಿ ರಚನೆ ಮಾಡಿರುತ್ತಾರೆ. ಅದರಂತೆ ಸಂಪುಟ ಸಚಿವರು ಕೆಲಸ ಮಾಡುತ್ತಿದ್ದಾರೆ.
ದಿನೇಶ್ ಗುಂಡೂರಾವ್ ಅವರನ್ನು ಸೇರಿಸಲು ನಿಮ್ಮನ್ನು ಕೈಬಿಡಲಾಯಿತು. ನಿಜಾನಾ?
ಇದು ತಪ್ಪು, ದಿನೇಶ್ ಗುಂಡೂರಾವ್ ಅರ್ಹತೆ ಮೇಲೆ ಸಚಿವ ರಾಗಿದ್ದಾರೆ. ಅದನ್ನು ನನಗೆ ತಳುಕು ಹಾಕುವುದು ಸರಿ ಅಲ್ಲ.
ಸಮುದಾಯದ ದೃಷ್ಟಿಯಿಂದಲೂ ನಿಮಗೆ ಸಿಎಂ ಹುದ್ದೆ ಸಿಗುವುದು ಅನುಮಾನ. ಆದಾಗ್ಯೂ ಸಿಎಂ ಆಕಾಂಕ್ಷಿಯಾಗಿದ್ದೀರಿ. ಇದು ಸಾಧ್ಯವಿದೆಯೇ ಅಥವಾ ಅಂತಹ ಸುಳಿವು ಏನಾದರೂ ಸಿಕ್ಕಿದೆಯೇ?
ನೋಡಿ, ಈ ವಿಚಾರದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ನೀವು 9 ಬಾರಿ ಆಯ್ಕೆಯಾಗಿದ್ದೀರಿ. ನಿಮಗೆ ಮುಖ್ಯಮಂತ್ರಿಯಾಗುವ ಆಕಾಂಕ್ಷೆ ಇಲ್ಲವೇ ಅಂತ ಮಾಧ್ಯಮಗಳು ನನ್ನನ್ನು ಕೇಳಿದವು. ಆಗ ನಾನು ಹೇಳಿದ್ದಿಷ್ಟು- ಪ್ರತಿಯೊಬ್ಬ ವ್ಯಕ್ತಿಗೆ ಆಕಾಂಕ್ಷೆ ಇದ್ದೇ ಇರುತ್ತದೆ. ಆದರೆ ಈಗ ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಇರುತ್ತಾರೆ ಅಂತ. ನಾನು ನಿಮ್ಮ ಮೂಲಕವೂ ಮತ್ತೂಮ್ಮೆ ಈ ವಿಚಾರದಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ. ಸಿಎಂ ಕುರ್ಚಿ ಖಾಲಿ ಇಲ್ಲ. ಐದೂ ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ.
ಸಿಎಂ ಹುದ್ದೆ ಮತ್ತು ಕೆಪಿಸಿಸಿ ಅಧ್ಯಕ ಸ್ಥಾನ ಇವೆರಡರಲ್ಲಿ ಯಾವುದಕ್ಕೆ ನೀವು ರೆಡಿ ಆಗಿದ್ದೀರಾ?
ನಾನು ಯಾವುದಕ್ಕೆ ರೆಡಿ ಆಗಿದ್ದೇನೆ ಅನ್ನುವುದು ಮುಖ್ಯವಲ್ಲ; ಪಕ್ಷ ಮತ್ತು ಹೈಕಮಾಂಡ್ ರೆಡಿ ಇರಬೇಕಾಗುತ್ತದೆ. ಅದು ಏನು ಹೊಣೆ ಕೊಡುತ್ತದೆಯೋ ಅದನ್ನು ಸ್ವೀಕರಿಸಿ, ಸಮರ್ಥವಾಗಿ ನಿರ್ವಹಿಸು ವುದು ನನ್ನ ಕರ್ತವ್ಯ. ಹಾಗಾಗಿ ಈ ಪ್ರಶ್ನೆಗೆ ಉತ್ತರ ನನ್ನ ಕೈಯಲ್ಲೂ ಇಲ್ಲ. ಪಕ್ಷದ ಮುಖಂಡರು, ಹೈಕಮಾಂಡ್ ಏನು ಮನಸ್ಸು ಮಾಡಿದರೆ, ನಾನು ಏನಾದರೂ ಹೇಳಲು ಸಾಧ್ಯ. ಇನ್ನೂ ಆ ಪರಿಸ್ಥಿತಿಯೂ ಇಲ್ಲ; ವಿಚಾರವೂ ಇಲ್ಲ. ಮಾತುಗಳನ್ನೂ ಆಡಿಲ್ಲ.
ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಸಿಎಂ ಹುದ್ದೆ ಸಿಗದಿರಲಿ ಎಂಬ ಕಾರಣಕ್ಕೆ ಹಲವರು ತಾವೂ ಸಿಎಂ ಆಕಾಂಕ್ಷಿ ಅಂತ ಬಿಂಬಿಸಿಕೊಳ್ಳುತ್ತಿದ್ದಾರೆ. ನಿಮ್ಮ ಹೇಳಿಕೆಯೂ ಆ ಪ್ರಯತ್ನದ ಭಾಗವೇ?
ಛೇ… ಛೇ… ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆಯೂ ಇದೆ. ಕೆಪಿಸಿಸಿ ಅಧ್ಯಕ್ಷರಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಯಾವ ಸಂದೇಹವೂ ಇಲ್ಲ. ಹಲವು ಖಾತೆಗಳನ್ನೂ ಅವರು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾತುಗಳು ಕೇಳಿಬರುತ್ತಿವೆ. ಅದಕ್ಕೂ ಆಕಾಂಕ್ಷಿ ಆಗಿದ್ದೀರಾ?
ಯಾವ ಬದಲಾವಣೆ ಮಾತುಗಳೂ ಸದ್ಯಕ್ಕೆ ಇಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷ ಸಂಘಟನೆಯನ್ನು ಚೆನ್ನಾಗಿ ಮಾಡುತ್ತಿದ್ದಾರೆ. ನನಗಂತೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗೆಗಿನ ಯಾವುದೇ ಮಾತುಗಳು ಕಿವಿಗೆ ಬಿದ್ದಿಲ್ಲ. ಅಂತಹ ಸನ್ನಿವೇಶವೂ ಇಲ್ಲ.
ಸರಕಾರ ಉತ್ತಮವಾಗಿ ನಡೆಯುತ್ತಿದೆ ಅಂತ ನಿಮಗೆ ಅನಿಸುತ್ತಿದೆಯೇ? ಹಾಗಿದ್ದರೆ, ಈ ಸರಕಾರಕ್ಕೆ ಎಷ್ಟು ಅಂಕ ಕೊಡುತ್ತೀರಿ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅತ್ಯಂತ ಪಾರದರ್ಶಕವಾಗಿ ಸರಕಾರ ನಡೆಯುತ್ತಿದೆ. ವರ್ಷದಲ್ಲಿ ಐದೂ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಮುಖ್ಯವಾಗಿ ಮಹಿಳೆ ಯರು ಹೆಚ್ಚು ಖುಷಿಯಾಗಿದ್ದಾರೆ. ಬಡವರಿಗೂ ಸಾಕಷ್ಟು ಅನು ಕೂಲ ಆಗಿದೆ. ಇನ್ನು ಅಂಕ ನೀಡುವ ಬಗ್ಗೆ ಹೇಳುವುದಾದರೆ, ನಾನು ಲೆಕ್ಕ ಮಾಡಿಲ್ಲ. ಆದರೆ ನಮ್ಮ ಪಕ್ಷ ಮತ್ತು ಸರಕಾರ ಜನಕ್ಕೆ ಸಹಾಯ ಮಾಡಿರುವುದರಿಂದ ನಾನಂತೂ ಫುಲ್ ಮಾರ್ಕ್ಸ್ ಕೊಡುತ್ತೇನೆ.
ನಿಮ್ಮ ಲೆಕ್ಕಾಚಾರದ ಪ್ರಕಾರ ಸಿದ್ದರಾಮಯ್ಯ ಪರ ಹೆಚ್ಚು ಶಾಸಕರಿದ್ದಾರೆಯೇ ಅಥವಾ ಡಿ.ಕೆ. ಶಿವಕುಮಾರ್ ಕಡೆಗೆ ಹೆಚ್ಚು ಶಾಸಕರಿದ್ದಾರಾ?
ಲೆಕ್ಕಾಚಾರದ ಪ್ರಶ್ನೆಯೇ ಬರುವುದಿಲ್ಲ. ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ ಸೇರಿ ಇಡೀ ಶಾಸಕಾಂಗ ಪಕ್ಷದ ಸಭೆ ಸಿದ್ದರಾಮಯ್ಯ ಪರ ಇದೆ. ಪ್ರತಿಯೊಬ್ಬ ಶಾಸಕ ಸಿದ್ದರಾಮಯ್ಯ ಬೆನ್ನಿಗಿದ್ದಾರೆ. ಅವರ ಬಳಿ ಇಷ್ಟು ಶಾಸಕರು, ಇವರ ಬಳಿ ಅಷ್ಟು ಶಾಸಕರು ಎಂಬ ಮಾತೇ ಇಲ್ಲ.
ಕರ್ನಾಟಕದಲ್ಲಿ ಅಜಿತ್ ಪವಾರ್ ಯಾರಾಗಬಹುದು?
ಆ ಪ್ರಮೇಯವೂ ಇಲ್ಲ. ಯಾರೂ ಆಗುವುದೂ ಇಲ್ಲ. ಅಜಿತ್ ಪವಾರ್ ಇಲ್ಲಿ ಹುಟ್ಟಿಯೂ ಇಲ್ಲ.
ಸರಕಾರ ಜಾರಿಗೊಳಿಸಿದ ಐದು ಗ್ಯಾರಂಟಿಗಳ ಅಗತ್ಯ ಇತ್ತಾ?
ಅಗತ್ಯತೆ ಅಂತ ಅಲ್ಲ; ಇದು ನಮ್ಮ ಬದ್ಧತೆ. ನಾವು ಐದು ಗ್ಯಾರಂಟಿ ಗಳನ್ನು ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಅಧಿಕಾರಕ್ಕೆ ಬಂದ ಬಳಿಕ ಅವುಗಳನ್ನು ಮಾಡಿಕೊಟ್ಟಿದ್ದೇವೆ ಅಷ್ಟೇ. ಜನರಿಗೆ ಮಾತು ಕೊಟ್ಟಂತೆ ನಡೆದುಕೊಳ್ಳಬೇಕಲ್ಲವೇ? ವಿಶ್ವಾಸದ್ರೋಹ ಮಾಡಲು ಆಗುವುದಿಲ್ಲವಲ್ಲ.
ಗ್ಯಾರಂಟಿಗಳ ಬದಲಾವಣೆ ಮಾಡಬೇಕು ಅಂತೀರಾ? ಆ ನಿಟ್ಟಿನಲ್ಲಿ ಸರಕಾರಕ್ಕೆ ನಿಮ್ಮ ಸಲಹೆಗಳು ಏನು?
ಗ್ಯಾರಂಟಿಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಚರ್ಚೆಗಳು ಆಗಿಲ್ಲ. ನನ್ನ ಸಲಹೆಗಳು ಏನೂ ಇಲ್ಲ. ಎಲ್ಲವೂ ಉತ್ತಮವಾಗಿ ನಡೆಯುತ್ತಿದ್ದು, ಜನ ಕೂಡ ಖುಷಿಯಾಗಿದ್ದಾರೆ.
– ವಿಜಯ ಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UKP; ಕೃಷ್ಣೆಯ ಮೌನ ರೋದನ: ಇನ್ನೂ ಕೈಗೂಡದ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ
PhD; ಅಪಮೌಲ್ಯಗೊಳ್ಳುತ್ತಿದೆಯೇ ಅತ್ಯುನ್ನತ ಶೈಕ್ಷಣಿಕ ಪದವಿ?
Pandit Venkatesh Kumar; ಕರಾವಳಿಗರ ಪ್ರೀತಿ, ಮನ್ನಣೆಯನ್ನೆಂದೂ ಮರೆಯಲಾರೆ
ಜಗತ್ತಿಗೆ ಸಿರಿಯಾ ತಲೆಬೇನೆಯಾ? ಜಾಗತಿಕವಾಗಿ ಭಯೋತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಬೆಂಬಲ?
ಇಂದು ದತ್ತ ಜಯಂತಿ: ಸರ್ವದೇವತಾ ಸ್ವರೂಪಿ, ವಿಶ್ವಗುರು ಶ್ರೀದತ್ತ
MUST WATCH
ಹೊಸ ಸೇರ್ಪಡೆ
Chhattisgarh: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ
Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ
ಕಾಶ್ಮೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
Sandalwood: ಪವನ್ ಒಡೆಯರ್ ನಿರ್ದೇಶನದಲ್ಲಿ ಶಿವಣ್ಣನ ಸಿನಿಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.