ನಮನ: ಹಾಡುಗಳೊಂದಿಗೆ ನಮ್ಮ ಜತೆಗಿರುತ್ತಾರೆ ರಾಜನ್
Team Udayavani, Oct 13, 2020, 6:23 AM IST
ಸಾರ್, ಸ್ವಲ್ಪವೂ ಟೆನ್ಷನ್ ಇಲ್ಲದೇ ತಮಾಷೆಯ ಮೂಡ್‌ನಲ್ಲಿ ಇದ್ದುಕೊಂಡು ರಾಗ ಸಂಯೋಜನೆ ಮಾಡಿದ ಹಾಡು ಯಾವುದಾದ್ರೂ ಇದೆಯಾ?- ಹೀಗೊಂದು ಪ್ರಶ್ನೆ ಯನ್ನೂ ರಾಜನ್ ಅವರಿಗೆ ಒಮ್ಮೆ ಕೇಳಿದ್ದುಂಟು. ಅವರು ಹೇಳಿದ್ದರು. “”ನಮ್ಮದು ಮೈಸೂರು. ಅಂಥಾ ಮೈಸೂರಿನ ಬಗ್ಗೆ ಒಂದು ಹಾಡಿಗೆ ಸಂಗೀತ ಸಂಯೋಜಿಸಬೇಕಾಗಿ ಬಂತು. ಅದು, ದ್ವಾರಕೀಶ್ ನಿರ್ಮಾಣದ – “ಪ್ರೀತಿ ಮಾಡು ತಮಾಷೆ ನೋಡು’ ಚಿತ್ರದಲ್ಲಿ…
ಎತ್ತರದ ಆಳ್ತನ, ತೀಕ್ಷ್ಣ ನೋಟ, ಸ್ವಲ್ಪ ಬಿಗಿದುಕೊಂಡಂತೆ ಕಾಣುತ್ತಿದ್ದ ಮುಖ, ಅಗತ್ಯ ಇದ್ದರಷ್ಟೇ ಮಾತು. ಅದೂ ಹೇಗೆ; ಪ್ರತಿಯೊಂದು ಶಬ್ದವನ್ನೂ ಅಳೆದು ತೂಗಿ ಆಡಿದ ಹಾಗೆ- ರವಿವಾರ ರಾತ್ರಿ ನಮ್ಮನ್ನು ಅಗಲಿದ ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರು ಇದ್ದುದು ಹೀಗೆ. ನೋಡಿದ ತತ್‌ಕ್ಷಣ ಶಿಸ್ತಿನ ಮನುಷ್ಯ ಎಂಬಂತೆ ಕಾಣುತ್ತಿ ದ್ದರಲ್ಲ; ಅದೇ ಕಾರಣಕ್ಕೆ ರಾಜನ್ ಅವರ ಜತೆ ಸಲುಗೆಯಿಂದ ಮಾತಾಡಲು ಹಲವರು ಹಿಂಜರಿಯುತ್ತಿದ್ದುದುಂಟು.
ನಗುವುದನ್ನೇ ಮರೆತಂತಿದ್ದ ಈ ಮನುಷ್ಯ, ರಾಗ ಸಂಯೋ ಜಿಸಿದ ಗೀತೆಗಳು ಮಾತ್ರ ಮುಪ್ಪಾನು ಮುದುಕ ರನ್ನೂ ಕುಣಿಯುವಂತೆ ಮಾಡುವಷ್ಟು ಇಂಪಾಗಿದ್ದವು. ಆ ಹಾಡುಗಳಾದರೂ ಯಾವುವು ಅಂತೀರಿ? “”ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು…’, “”ಆಕಾಶದಿಂದ ಧರೆಗಿಳಿದ ರಂಭೆ…’, “”ಮಾಮರವೆಲ್ಲೋ ಕೋಗಿಲೆ ಯೆಲ್ಲೋ’, “”ಆಸೆಯ ಭಾವ ಒಲವಿನ ಜೀವ…’, “”ಎಲ್ಲೆಲ್ಲಿ ನೋಡಲೀ”, “”ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ”, “”ಹೇಳಿದ್ದು ಸುಳ್ಳಾಗಬಹುದು…” , “”ಅಲ್ಲಿ ಇಲ್ಲಿ ನೋಡುವೆ ಏಕೆ…”, “”ನೀರ ಬಿಟ್ಟು ನೆಲದ ಮೇಲೆ…”, “”ನಾವಾಡುವ ನುಡಿಯೇ ಕನ್ನಡನುಡಿ…” ಮತ್ತು ಇವೆಲ್ಲಕ್ಕೂ ಕಳಶವಿಟ್ಟಂತೆ- “”ಆಕಾಶವೆ ಬೀಳಲಿ ಮೇಲೆ…” ಹೀಗೆ, ಜನಪ್ರಿಯ ಗೀತೆಗಳ ಗೊಂಚಲನ್ನೇ ಕನ್ನಡಿಗರಿಗೆ ಉಡುಗೊರೆಯಾಗಿ ಕೊಟ್ಟವರು ರಾಜನ್-ನಾಗೇಂದ್ರ. ಎಲ್ಲ ಅರ್ಥದಲ್ಲೂ ಅವರು ಸಂಗೀತ ಸಾರ್ವಭೌಮರು, ಮಾಧುರ್ಯದ ಮಹಾನುಭಾವರು.
1960ರಿಂದ 1980ರವರೆಗೆ ಚಿತ್ರಗೀತೆಗಳನ್ನು ಕೇಳಲೆಂದು ರೇಡಿಯೋ ಹಾಕಿದರೆ ಸಾಕು; ದಿನಕ್ಕೆ ಎರಡು ಬಾರಿಯಾದರೂ- “”ಸಂಗೀತ ನಿರ್ದೇಶನ: ರಾಜನ್-ನಾಗೇಂದ್ರ” ಎಂಬ ಮಾತುಗಳನ್ನು ಕೇಳಲೇಬೇಕಾಗಿತ್ತು. ಅಷ್ಟರಮಟ್ಟಿಗೆ, ಚಿತ್ರಗೀತೆಗಳನ್ನು ಈ ಜೋಡಿ ಆವರಿಸಿ ಕೊಂಡಿತ್ತು. ರವಿವಾರ ರಾಜನ್ ನಿಧನರಾದಾಗ- “”ಕನ್ನಡ ಚಿತ್ರಗೀತೆಗಳ ಸುವರ್ಣ ಯುಗದ ಕೊನೆಯ ಕೊಂಡಿ ಕಳಚಿತು”- ಎಂಬುದೇ ಹೆಚ್ಚಿನವರ ಉದ್ಗಾರವಾಗಿತ್ತು. ಆ ಮಾತುಗಳನ್ನು ಕೇಳುತ್ತಿದ್ದಂತೆಯೇ, ರಾಜನ್-ನಾಗೇಂದ್ರ ರಾಗ ಸಂಯೋಜನೆಯ ಹಾಡುಗಳು ಮತ್ತು ಅವು ಪಡೆದಿದ್ದ ಜನಪ್ರಿಯತೆ ಕಣ್ಮುಂದೆ ಬಂದು ಹೋಯಿತು.
ಅವರಿಬ್ರೂ ಫ್ರೆಂಡ್ಸ್ ಅಂತೆ… ಅವಳಿ- ಜವಳಿ ಅಂತೆ… ಹತ್ತಿರದ ಬಂಧುಗಳಂತೆ…ರಾಜನ್-ನಾಗೇಂದ್ರ ಅವರನ್ನು ಕುರಿತು ಜನ, ತಮ್ಮ ತಮ್ಮಲ್ಲಿಯೇ ಹೀಗೆ ಮಾತಾಡುತ್ತಾ, ತಮಗೆ ಒಪ್ಪಿಗೆ ಆದದ್ದನ್ನೇ ಸತ್ಯ ಎಂದು ನಂಬಿದ್ದ ದಿನಗಳಿದ್ದವು. ಅವರು ಗೆಳೆಯರಲ್ಲ, ಅವಳಿಗಳಲ್ಲ, ಸ್ವಂತ ಅಣ್ಣ- ತಮ್ಮ! ರಾಜನ್ ದೊಡ್ಡವರು, ನಾಗೇಂದ್ರ ಚಿಕ್ಕವರು. ರಾಗ ಸಂಯೋಜನೆಯಲ್ಲಿ ರಾಜನ್ ಪಳಗಿದ್ದಾರೆ. ಆರ್ಕೆಸ್ಟ್ರಾ ಮತ್ತು ರೆಕಾರ್ಡಿಂಗ್ ವಿಷಯವಾಗಿ ನಾಗೇಂದ್ರ ಹೆಚ್ಚಿನ ತಿಳಿವಳಿಕೆಯಿದೆ ಎಂಬ ಸಂಗತಿಗಳು ಅರ್ಥವಾಗುವ ಹೊತ್ತಿಗೆ, ಈ ಸೋದರರು ರಾಗ ಸಂಯೋಜಿಸಿದ್ದ ಹಾಡುಗಳು ಎಲ್ಲರಿಗೂ ಬಾಯಿ ಪಾಠ ಆಗಿಹೋಗಿದ್ದವು.
ಇಂಪಾದ ಸಂಗೀತದ ಮೂಲಕ ಪೂರ್ತಿ 45 ವರ್ಷಗಳ ಕಾಲ ಕನ್ನಡ ಚಿತ್ರಗೀತೆಗಳ ಸೊಗಸು ಹೆಚ್ಚಿಸಿದ ರಾಜನ್- ನಾಗೇಂದ್ರ ಅವರು ಮೈಸೂರಿನವರು. ಇವರ ತಂದೆಯ ಹೆಸರು ರಾಜಪ್ಪ. ಅವರೂ ಸಂಗೀತಗಾರರು. ಅವರಿಗೆ ಹಾರ್ಮೋನಿಯಂ ಮತ್ತು ಕೊಳಲು ವಾದನದಲ್ಲಿ ಒಳ್ಳೆಯ ಹೆಸರಿತ್ತು.
ಮನೆಯಲ್ಲಿ ಸಂಗೀತದ ವಾತಾವರಣವಿದ್ದುದರಿಂದ, ರಾಜನ್- ನಾಗೇಂದ್ರ ಬಾಲ್ಯದಿಂದಲೇ ಸಂಗೀತ ಕಲಿಕೆ ಯೆಡೆಗೆ ಆಕರ್ಷಿತರಾದರು. ರಾಜನ್‌ಗೆ ವಯಲಿನ್ – ನಾಗೇಂದ್ರ ಅವರಿಗೆ ಜಲತರಂಗ್ ಜತೆಯಾಯಿತು. ಬಾಲ್ಯದಲ್ಲಿ ಪಿಟೀಲು ಚೌಡಯ್ಯ ಅವರಂಥ ಘನ ವಿದ್ವಾಂಸರಿಂದ ಪಾಠ ಹೇಳಿಸಿಕೊಂಡ ಈ ಜೋಡಿ, ಅನಂತರ ವಿದ್ಯಾಭ್ಯಾಸದ ಕಾರಣಕ್ಕೆ ಬೆಂಗಳೂರಿಗೆ ಬಂತು. ಆ ನಂತರದಲ್ಲಿ ಕೆಲ ಕಾಲ ಜೈ ಮಾರುತಿ ಆರ್ಕೆಸ್ಟ್ರಾ ತಂಡದಲ್ಲಿ ಕೆಲಸ ಮಾಡಿದ ರಾಜನ್ – ನಾಗೇಂದ್ರ, ಕೆಲಕಾಲ ಪಿ.ಕಾಳಿಂಗರಾವ್ ಅವರ ತಂಡದಲ್ಲೂ ಕೆಲಸ ಮಾಡಿದರು. ಮುಂದೆ 1952ರಲ್ಲಿ, ಬಿ. ವಿಠಲಾಚಾರ್ಯ ನಿರ್ದೇಶನದ “ಸೌಭಾಗ್ಯ ಲಕ್ಷ್ಮೀ’ ಚಿತ್ರಕ್ಕೆ ಸಂಗೀತ ನೀಡುವ ಅವಕಾಶ ದೊರೆಯಿತು. ಆ ನಂತರದಲ್ಲಿ ರಾಜನ್- ನಾಗೇಂದ್ರ ಹಿಂದಿರುಗಿ ನೋಡಲಿಲ್ಲ.
ಹೂವಿನ ಹಾಸಿಗೆ ಆಗಿರಲಿಲ್ಲ…
ಹಾಗಂತ, ಈ ಸೋದರರು ನಡೆದುಬಂದ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ. ಆ ದಿನಗಳಲ್ಲಿ ವರ್ಷಕ್ಕೆ 10-20 ಚಿತ್ರಗಳಷ್ಟೇ ತಯಾರಾಗುತ್ತಿದ್ದವು. ಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಜಿ.ಕೆ. ವೆಂಕಟೇಶ್, ಟಿ.ಜಿ. ಲಿಂಗಪ್ಪ, ಉಪೇಂದ್ರ ಕುಮಾರ್, ಎಂ. ರಂಗರಾವ್, ವಿಜಯ ಭಾಸ್ಕರ್… ಮುಂತಾದ ಘಟಾನುಘಟಿಗಳಿದ್ದರು. ಆಗ ತಮ್ಮ ಸಾಮರ್ಥ್ಯವನ್ನು ಪಣಕ್ಕಿಟ್ಟ ರಾಜನ್-ನಾಗೇಂದ್ರ, ನಿರೀಕ್ಷೆ ಮೀರಿ ಯಶಸ್ಸು ಸಾಧಿಸಿದರು.
ಕಡಿಮೆ ವಾದ್ಯಗಳನ್ನು ಬಳಸಿ ಸುಮಧುರ ಗೀತೆಗಳನ್ನು ಸೃಷ್ಟಿಸಿದ್ದು ರಾಜನ್- ನಾಗೇಂದ್ರ ಅವರ ಹೆಗ್ಗಳಿಕೆ. ಮಾಮರವೆಲ್ಲೋ ಕೋಗಿಲೆಯೆಲ್ಲೋ, ಆಸೆಯ ಭಾವ ಒಲವಿನ ಜೀವ.., ಆಕಾಶ ದೀಪವು ನೀನು…, ಒಮ್ಮೆ ನಿನ್ನನ್ನೂ ಕಣ್ತುಂಬಾ…ಗೀತೆಗಳನ್ನು ಈ ಮಾತಿಗೆ ಉದಾಹರಣೆಯಾಗಿ ನೀಡಬಹುದು. ಅಂತೆಯೇ, ಹೆಚ್ಚು ವಾದ್ಯಗಳನ್ನು ಬಳಸಿದಾಗ ಕೂಡ ಹಾಡಿನ ಇಂಪು ಹೆಚ್ಚುವಂತೆ ಮಾಡಿದ್ದು ಈ ಸೋದರರ ಹೆಚ್ಚುಗಾರಿಕೆ. ಈ ಮಾತಿಗೆ – ತಂನಂ ತಂನಂ ನನ್ನೀ ಮನಸು…, ನಾವಾಡುವ ನುಡಿಯೇ ಕನ್ನಡ ನುಡಿ…, ಎಲ್ಲೆಲ್ಲಿ ನೋಡಲಿ…ಗೀತೆಗಳು ಸಾಕ್ಷಿಯಾಗಬಲ್ಲವು. “”ಇಂದು ಎನಗೆ ಗೋವಿಂದ.’ ಗೀತೆಯನ್ನು ಎರಡು ಕನಸು, ಶ್ರೀನಿವಾಸ ಕಲ್ಯಾಣ ಚಿತ್ರಗಳಲ್ಲಿ ಬಳಸಿ, ಎರಡೂ ಕಡೆ ಅದು ಹಿಟ್ ಆಗುವಂತೆ ನೋಡಿಕೊಂಡದ್ದು ಈ ಸೋದರರ ಪ್ರಚಂಡ ಆತ್ಮವಿಶ್ವಾಸಕ್ಕೆ ಸಾಕ್ಷಿ. ಇದಲ್ಲದೆ, ಮತ್ತೂಂದು ವಿನೂತನ ಪ್ರಯೋಗವನ್ನೂ ರಾಜನ್-ನಾಗೇಂದ್ರ ಮಾಡಿದರು. ಅದನ್ನು ತಿಳಿಯಬೇಕೆಂದರೆ, ಗಂಧದ ಗುಡಿ ಚಿತ್ರದ- “”ಎಲ್ಲೂ ಹೋಗಲ್ಲ, ಮಾಮ…” ಗೀತೆಯನ್ನು ಆಲಿಸ ಬೇಕು. ಅದರಲ್ಲಿ ಹಾಡು ಅರ್ಧ ಮುಗಿದಿ ¨ªಾಗ, ಒಂದು ಕ್ಷಣ ಎಲ್ಲ ವಾದ್ಯ ಗಳ ಸದ್ದೂ ನಿಂತುಹೋಗುತ್ತದೆ. ಆಗಲೇ – “”ಅಪ್ಪ ಇಲ್ಲ ಅಮ್ಮ ಇಲ್ಲ ನೀನೇ ನನಗೆಲ್ಲ…” ಎಂಬ ಸಾಲು ಕೇಳುತ್ತದೆ. ಆಗ ಹೊರಡುವುದು ಶೋಕದ ಸ್ವರ. ಅದನ್ನು ಹೊರಡಿಸು ವವರು ಸಂಗೀತ ನಿರ್ದೇಶಕರಲ್ಲ, ಹಾಡು ಕೇಳುವ ಪ್ರೇಕ್ಷಕರು! ವಾದ್ಯದ ಸದ್ದೇ ನಿಲ್ಲಿಸಿ, ಆ ಜಾಗದಲ್ಲಿ ಕೇಳುಗರ ಗದ್ಗದ ದನಿಯೇ ಜಾಗ ಪಡೆಯುವಂತೆ ಮಾಡಿದರಲ್ಲ- ಅದು ಅವರ ಸ್ವರ ಸಂಯೋಜನೆಗಿದ್ದ ತಾಕತ್ತು.
ನಮ್ಮೂರು ಮೈಸೂರು…
“”ಸಾರ್, ಸ್ವಲ್ಪವೂ ಟೆನ್ಷನ್ ಇಲ್ಲದೇ ತಮಾಷೆಯ ಮೂಡ್‌ನಲ್ಲಿ ಇದ್ದುಕೊಂಡು ರಾಗ ಸಂಯೋಜನೆ ಮಾಡಿದ ಹಾಡು ಯಾವುದಾದ್ರೂ ಇದೆಯಾ?- ಹೀಗೊಂದು ಪ್ರಶ್ನೆಯನ್ನೂ ರಾಜನ್ ಅವರಿಗೆ ಒಮ್ಮೆ ಕೇಳಿದ್ದುಂಟು. ಅವರು ಹೇಳಿದ್ದರು. “”ನಮ್ಮದು ಮೈಸೂರು. ಅಂಥಾ ಮೈಸೂರಿನ ಬಗ್ಗೆ ಒಂದು ಹಾಡಿಗೆ ಸಂಗೀತ ಸಂಯೋಜಿಸಬೇಕಾಗಿ ಬಂತು. ಅದು, ದ್ವಾರಕೀಶ್ ನಿರ್ಮಾಣದ – “ಪ್ರೀತಿ ಮಾಡು ತಮಾಷೆ ನೋಡು’ ಚಿತ್ರದಲ್ಲಿ- “”ನಮ್ಮೂರು ಮೈಸೂರು, ನಿಮ್ಮೂರು ಯಾವೂರು…?”- ಗೀತೆಯಿದೆ. ಸ್ವಾರಸ್ಯವೆಂದರೆ, “”ದ್ವಾರಕೀಶ್ ಕೂಡ ಮೈಸೂರಿನವನೇ. ಆ ಹಾಡಿಗೆ ರಾಗ ಸಂಯೋಜಿಸುವಾಗ, ಚಿಕ್ಕಂದಿನಲ್ಲಿ ಓಡಾಡಿದ್ದ ಜಾಗಗಳೆಲ್ಲಾ ಕಣ್ಮುಂದೆ ಬಂದಂತೆ ಆಗಿ ಖುಷಿ ಆಗಿಬಿಡು¤. ಯಾವುದೇ ಟೆನ್ಷನ್ ಇಲ್ಲದೇ ಕಂಪೋಸ್ ಮಾಡಿದ ಹಾಡು ಅದು… ”
ಸಲ್ಲಬೇಕಿದ್ದ ಗೌರವ ಸಂದಿತಾ?
ರಾಜನ್- ನಾಗೇಂದ್ರ ಅವರು ಪೂರ್ತಿ 45 ವರ್ಷಗಳ ಕಾಲ ಕನ್ನಡಿಗರಿಗೆ ಸುಮಧುರ ಗೀತೆಗಳನ್ನು ಕೇಳಿಸಿದರು. ಆ ಮೂಲಕ ಚಿತ್ರರಂಗಕ್ಕೆ ಅಸಾಧಾರಣ ಕೊಡುಗೆ ನೀಡಿದರು. ಚಿತ್ರಗಳ ಯಶಸ್ಸಿಗೆ, ನಾಯಕ- ಗಾಯಕರು ಖ್ಯಾತಿ ಪಡೆಯಲು ಕಾರಣರಾದರು. ಅದಕ್ಕೆ ಪ್ರತಿಯಾಗಿ ಅವರಿಗೆ ಸಲ್ಲಬೇಕಿದ್ದ ಗೌರವ ಸಂದಿತಾ? ಇಲ್ಲ ಎಂದೇ ಹೇಳಬೇಕಾಗುತ್ತದೆ. ಸ್ವಾಭಿಮಾನಿಯಾಗಿದ್ದ ರಾಜನ್ ಈ ಬಗ್ಗೆ ಎಲ್ಲೂ ಏನನ್ನೂ ಹೇಳಿಕೊಳ್ಳಲಿಲ್ಲ. ನಮ್ಮ ಕೆಲಸವನ್ನು ನಾವು ನಿರ್ವಂಚನೆಯಿಂದ ಮಾಡಿದ್ದೇವೆ. ದಕ್ಕದೇ ಹೋಗಿದ್ದರ ಬಗ್ಗೆ ಹೇಳಿ ಪ್ರಯೋಜನವೇನು ಎಂಬರ್ಥದ ಮಾತಾಡಿದ್ದರು. ರಾಗಗಳ ಜತೆಗೇ ಬದುಕಿದ, ಮಾಧುರ್ಯ ಎಂಬ ಮಾತಿಗೊಂದು ಹೊಸ ಅರ್ಥ ನೀಡಿದ, ಆ ಮೂಲಕ ಚಿತ್ರರಂಗವನ್ನು ಶ್ರೀಮಂತ ಗೊಳಿಸಿದ ರಾಜನ್ ಅವರು ನಮ್ಮನ್ನು ಅಗಲಿದ್ದಾರೆ ಎನ್ನಲು ಮನಸ್ಸು ಒಪ್ಪು ವುದಿಲ್ಲ. ಅವರ ಸಂಯೋಜನೆಯ ನೂರಾರು ಹಾಡುಗಳ ಮೂಲಕ ಅವರು ಸದಾ ನಮ್ಮ ಜತೆಗೇ ಇರುತ್ತಾರೆ.
ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.