Raksha Bandhan: ತಂಗಿಗಿರಲಿ ಅಣ್ಣನ ಶ್ರೀರಕ್ಷೆ: ಅಣ್ಣ ತಂಗಿಯ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬ
Team Udayavani, Aug 30, 2023, 9:39 AM IST
ರಕ್ಷಾ ಬಂಧನವು ಅಣ್ಣ-ತಂಗಿಯರ ಹಬ್ಬ. ತಂಗಿಯ ರಕ್ಷಣೆ ಯಾವತ್ತೂ ಅಣ್ಣನದೇ, ಮತ್ತದನ್ನು ತಂಗಿ ರಾಖಿ ಎನ್ನುವ ಒಂದು ದಾರವನ್ನು ಅಣ್ಣನ ಕೈಗೆ ಕಟ್ಟುವುದರ ಮೂಲಕ ಆತನ ಕಾರ್ಯವನ್ನು ಜ್ಞಾಪಿಸುತ್ತಾಳೆ. ಇಂಥದ್ದೊಂದು ಆಚರಣೆ ಅಣ್ಣ-ತಂಗಿಯರಿಗೆ ಸಂಭ್ರಮ. ತನ್ನ ಒಡಹುಟ್ಟಿದವನಿಗೆ ರಾಖಿ ಕಟ್ಟಿ, ತನ್ನ ಜವಾಬ್ದಾರಿಯನ್ನು ಆತನಿಗೆ ಒಪ್ಪಿಸಿಬಿಡುವ ತಂಗಿ, ಅವಳಿಗೆ ಸದಾ ಶ್ರೀರಕ್ಷೆಯಾಗಿರುವ ಅಣ್ಣ… ಇವೆಲ್ಲವೂ ಅಣ್ಣ-ತಂಗಿಯರನ್ನು ಮತ್ತಷ್ಟು ಬೆಸೆಯುತ್ತದೆ ತನ್ಮೂಲಕ ಸಹೋದರತೆಯ ಭಾವವನ್ನು ಎತ್ತಿಹಿಡಿಯುತ್ತದೆ.
ಹಾಗಾದರೆ ಈ ಆಚರಣೆ, ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳಲು ಸಮರ್ಥಳಿರುವ ಹೆಣ್ಣು ಇನ್ನೊಬ್ಬರ ರಕ್ಷಣೆಯನ್ನು ಕೋರುತ್ತಾಳೆಂದೇ? ಅಲ್ಲವೇ ಅಲ್ಲ. ಸಹೋದರರಿಗೆ ಇದೊಂದು ಬಗೆಯ ಗೌರವ ಸೂಚಿಸುವ ಕ್ರಮ. ತನ್ನೆಲ್ಲ ಜವಾಬ್ದಾರಿಯನ್ನು ತಾನು ಬಯಸಿ/ಬಯಸದೇ ತೆಗೆದುಕೊಂಡು ಅದನ್ನು ಸಮರ್ಥವಾಗಿ ನಿರ್ವಹಿಸುವ ಅಣ್ಣನಿಗೊಂದು ತಂಗಿಯ ಕಡೆಯಿಂದ ನಮನ ಸಲ್ಲಿಕೆಯಿದು. ರಾಖಿಯ ಬದಲಿಗೆ ಆಕೆ ಆತನಿಂದ ಉಡುಗೊರೆಯನ್ನೂ ಪಡೆಯುತ್ತಾಳೆ.
ಕೃಷ್ಣನಿಂದ ದ್ರೌಪದಿ ಬಯಸಿದ್ದೂ ಇದೇ ಶ್ರೀರಕ್ಷೆಯನ್ನು. ಇಲ್ಲಿ ಕೃಷ್ಣ ಒಡಹುಟ್ಟಿದವನಲ್ಲದಿದ್ದರೂ ದ್ರೌಪದಿಯನ್ನು ತನ್ನ ತಂಗಿಯೆಂದು ಪರಿಭಾವಿಸಿ ಕಷ್ಟದಲ್ಲಿ ಅವಳನ್ನು ಸಂರಕ್ಷಿಸಿದ ರೀತಿ ಎಲ್ಲರಿಗೂ ಮಾದರಿ. ಇದರಿಂದ ಕೇವಲ ಒಡಹುಟ್ಟಿದವರು ಮಾತ್ರ ಅಣ್ಣ-ತಂಗಿಯರಲ್ಲ ಎಂಬುದು ಸ್ಪಷ್ಟವಾಗುತ್ತದೆ ಹಾಗೂ ಸಹೋದರ/ಸಹೋದರಿ ಇಲ್ಲ ಎಂದು ಕೊರಗುವವರು ಇಲ್ಲಿ ಸಹೋದರತೆ ಎಂದರೇನು ಎಂಬುದರ ಅರ್ಥ ಕಂಡುಕೊಳ್ಳಬಹುದು.
ರಕ್ಷಾ ಬಂಧನವನ್ನು ಬಹು ಹಿಂದಿನಿಂದಲೂ ಆಚರಿಸುತ್ತಾ ಬಂದಿದ್ದರೂ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದು ಈ ತಂತ್ರಜ್ಞಾನದ ಯುಗದಲ್ಲೇ. ಸಾಮಾಜಿಕ ಜಾಲತಾಣದ ಲೈಕ್, ಕಮೆಂಟ್‌ಸ್‌ಗಾಗಿ ಇದನ್ನು ಆಚರಿಸುವವರೂ ಬಹಳಷ್ಟು ಜನರಿದ್ದಾರೆ! ತಪ್ಪಲ್ಲ! ಯಾವುದೋ ಬಗೆಯಲ್ಲಿ ದಿನವೊಂದನ್ನು ಸಂತೋಷವಾಗಿ ಕಳೆಯುವುದು ಮುಖ್ಯವಷ್ಟೇ. ಹಾಗೆಂದು ಇದು ಕೇವಲ ಆಚರಣೆ, ಲೈಕ್, ಕಮೆಂಟ್ ಗೆ ಸೀಮಿತವಾಗಿರದೆ ನಿಜಾರ್ಥದಲ್ಲಿ ಸಮಾಜದಲ್ಲಿ ಸಹೋದರತೆಯ ಭಾವವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳುವುದು ಬಲುಮುಖ್ಯ.
ಪುರಾಣದಲ್ಲಿ ರಾಖಿ ಹಬ್ಬದ ಕುರಿತು ಹಲವು ದಂತಕಥೆಗಳಿವೆ. ಪ್ರತಿಯೊಂದು ಕಥೆಯೂ ಹೇಳುವುದು ಸಹೋದರತೆಯ ಬಗ್ಗೆ, ತಂಗಿ ಅಣ್ಣನಲ್ಲಿ ಸಹಾಯ ಕೋರಿದದು, ಅಣ್ಣ ಮುಕ್ತ ಮನಸ್ಸಿನಿಂದ ಸಹಾಯ ಮಾಡಿದುದು… ಹೀಗೆ. ರಾಖಿ ಎಂಬ ದಾರವೊಂದಕ್ಕೆ ಇರುವ ಪ್ರಾಮುಖ್ಯವನ್ನು ನಾವಿಲ್ಲಿ ಸ್ಪಷ್ಟವಾಗಿ ಅರ್ಥೈಸಿಕೊಳ್ಳಬಹುದು. ಅದು ಕೇವಲ ದಾರವಲ್ಲ ಒಂದು ಸವಿಯಾದ, ಶುದ್ಧವಾದ ಬಂಧವೆನ್ನಬಹುದು.
ದಶಕಗಳ ಹಿಂದೆ ಉತ್ತರ ಭಾರತದಲ್ಲಷ್ಟೇ ಹೆಚ್ಚು ಪ್ರಾಮುಖ್ಯ ಪಡೆದಿದ್ದ ಈ ಹಬ್ಬ ಇತ್ತೀಚಿನ ವರ್ಷಗಳಲ್ಲಿ ದೇಶದೆಲ್ಲೆಡೆ ಆಚರಿಸಲ್ಪಡುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಮಕ್ಕಳು ರಾಖಿ ತಂದು ಸಹಪಾಠಿಗಳ ಕೈಗೆ ಕಟ್ಟುವ ಮೂಲಕ ಪರಸ್ಪರ ಸಹೋದರತೆಯ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಅಣ್ಣ-ತಂಗಿಯರ ಹಬ್ಬ ರಕ್ಷಾಬಂಧನವೆಂದಾದ ಮೇಲೆ ಒಡಹುಟ್ಟಿದ ಸಹೋದರ ಇಲ್ಲದ ಸಹೋದರಿ ಆಚರಿಸುವುದು ಬೇಡವೇ? ಅಥವಾ ಸಹೋದರನೋರ್ವನಿಗೂ ತಂಗಿಯಿಲ್ಲದ ಸಂಕಟ ಕಾಡದಿರುವುದೇ? ಆದರೆ ರಕ್ತಸಂಬಂಧಿಯಲ್ಲದಿದ್ದರೂ ಮನಸ್ಸಿನಿಂದ ಕರೆದ, ಹಚ್ಚಿಕೊಂಡ, ಹಾಗೆಯೇ ನಡೆದುಕೊಂಡ ಪ್ರತಿಯೊಬ್ಬರೂ ಅಣ್ಣ- ತಂಗಿಯೇ, ಅವರೂ ಈ ಆಚರಣೆಯಲ್ಲಿ ಪಾಲುದಾರರಾಗಬಹುದು. ಇದೇ ಈ ರಾಖಿ ಹಬ್ಬದ ವಿಶೇಷತೆ.
ರಕ್ಷಾ ಬಂಧನವನ್ನು ವರ್ಷಕೊಮ್ಮೆ ಆಚರಿಸಿ ಅನಂತರ ಮರೆತುಬಿಡುವುದೇ? ಇಲ್ಲ , ಒಮ್ಮೆ ರಾಖಿಯನ್ನು ಅಣ್ಣನ ಕೈಗೆ ಕಟ್ಟಿದಳೆಂದರೆ ಮತ್ತವಳ ಕ್ಷೇಮ ನೋಡುವುದು ಅಣ್ಣನಾದವನ ಜವಾಬ್ದಾರಿ. ಅವಳದನ್ನು ಬಯಸದೆಯೇ ಇರಬಹುದು. ಆದರೆ ಸಹೋದರ ನಿರ್ಲಕ್ಷಿಸುವಂತಿಲ್ಲ. ಮನುಷ್ಯ ಬೆಳೆದಂತೆಲ್ಲ ಜತೆಗೆ ಹುಟ್ಟಿದವರನ್ನು ದ್ವೇಷಿಸಿ ದೂರ ತಳ್ಳುವುದಲ್ಲ. ನಮ್ಮ ಸಂಸ್ಕೃತಿಯಂತೆ ಕೊನೇ ತನಕವೂ ನಮ್ಮವರು ಅನ್ನುವ ಭಾವ ತಳೆದಿರುವುದು, ಹೊರೆಯೆನ್ನದಿರುವುದು, ಹೊರೆಯೆನಿಸದಿರುವುದು ಮುಖ್ಯವಾಗುತ್ತದೆ.
ರಕ್ಷಾಬಂಧನ, ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ಒಂದು ಆಚರಣೆ. ಹಾಗಾಗಿ ಇದು ಬೇರೆಲ್ಲ ಹಬ್ಬಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ ಮತ್ತು ತನ್ನ ವೈಶಿಷ್ಟ್ಯವನ್ನು ಸಾರುತ್ತದೆ. ಕೆಲಸದ ಸ್ಥಳದಲ್ಲೋ ಅಥವಾ ಇನ್ನೆಲ್ಲೋ ಯಾರಿಂದಲೋ ಸಮಸ್ಯೆೆ ಎದುರಾದಾಗ ನನಗೊಬ್ಬ ಅಣ್ಣನಿರಬೇಕು ಎಂದು ಬಹಳಷ್ಟು ಮಹಿಳೆಯರಿಗೆ ಅನಿಸದಿರುವುದಿಲ್ಲ. ಅದು ಅವರನ್ನು ಸದಾ ಕಾಡದಿರುವುದಿಲ್ಲ. ಹೀಗಿದ್ದಾಗ ಒಡಹುಟ್ಟಿದವರಲ್ಲದೆ ಇನ್ಯಾರೋ ಸಹೋದರ ಪ್ರೀತಿ ತೋರಿದಾಗ, ದುರುದ್ದೇಶವಿಲ್ಲದೆ ಕಾಳಜಿ ವಹಿಸಿದಾಗ ಹೆಣ್ಣು ಕರಗದಿರಳು. ತನಗೆ ಸಿಕ್ಕ ಆಸರೆಗೆ ಸಮಾಧಾನಪಡಬಲ್ಲಳು.
ಕೆಲವು ಕಡೆ ಮನೆಯ ಹಿರಿಯ ಮಹಿಳೆಯೇ ಅಣ್ಣನ ಸ್ಥಾನ ವಹಿಸುವುದುಂಟು, ಮನೆಯವರನ್ನೆಲ್ಲ ಪೊರೆಯುವುದುಂಟು. ಇದನ್ನು ನಾವು ಅವಳ ಸುಗುಣ ಅಥವಾ ನಿಸ್ವಾರ್ಥತೆ ಎನ್ನಬಹುದು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶುದ್ಧ ಮನಸ್ಸಿನಿಂದ ನೋಡುವವರೆಲ್ಲರೂ ಸಹೋದರರೇ. ಇಂತಹ ಪರಿಶುದ್ಧ ಪ್ರೀತಿಯೇ, ಆ ಶಕ್ತಿಯೇ ಜಗತ್ತನ್ನು ಕಾಪಾಡುವುದು. ಸಮಸ್ತ ಹೆಣ್ಣುಕುಲಕ್ಕೂ ಅಣ್ಣಂದಿರು ದೊರೆಯಲಿ, ತಂಗಿಗಾಗಿ ಹಂಬಲಿಸುವವರಿಗೆಲ್ಲ ಅವಳು ಸಿಗಲಿ. ಸಹೋದರ-ಸಹೋದರಿಯರೆಲ್ಲರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು.
– ವಿನಯಾ ಕೌಂಜೂರು, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.