ರಮೇಶ್ ಜಾರಕಿಹೊಳಿ ಕಮಾಲ್
Team Udayavani, May 25, 2019, 5:00 AM IST
ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ಗಡಿನಾಡು ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳು ಹಾಗೂ ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿನ ಹಿಂದೆ ಗೋಕಾಕದ ಪ್ರಭಾವಿ ನಾಯಕ-ಶಾಸಕ ರಮೇಶ ಜಾರಕಿಹೊಳಿ ಅವರ ಸಹಕಾರ ಇದೆಯೇ? – ಇಂತಹ ಒಂದು ಕುತೂಹಲದ ರಾಜಕೀಯ ಚರ್ಚೆ ಈಗ ರಾಜ್ಯ ರಾಜಕಾರಣದಲ್ಲಿ ಬಹಳ ಗಂಭೀರವಾಗಿ ನಡೆಯುತ್ತಿದೆ.
ಕಾಂಗ್ರೆಸ್‌ನಲ್ಲಿ ಉಳಿಯಬೇಕೇ ? ಬಿಜೆಪಿ ಸೇರಿ ಸಮ್ಮಿಶ್ರ ಸರ್ಕಾರ ಉರುಳಿಸಬೇಕೇ ? ಎಂಬ ಆಲೋಚನೆಯಲ್ಲಿ ರಮೇಶ ಜಾರಕಿಹೊಳಿ ಇರುವಾಗ ಈ ಚುನಾವಣೆಯಲ್ಲಿ ಅವರ ಪಾತ್ರದ ಬಗ್ಗೆ ಎರಡೂ ಪಕ್ಷಗಳಲ್ಲಿ ಪರಾಮರ್ಶೆ ನಡೆದಿರುವುದು ಬಹಳ ಕುತೂಹಲ ಮೂಡಿಸಿದೆ. ಮೈತ್ರಿ ಸರಕಾರದ ಅಳಿವು-ಉಳಿವಿನಲ್ಲಿ ರಮೇಶ ಅವರ ಕೆಲಸ ಬಹಳ ಮಹತ್ವದ್ದಾಗಿರುವದರಿಂದ ಅವರ ಮುಂದಿನ ನಡೆ ಈಗ ಎಲ್ಲರಲ್ಲಿ ಕಾತುರ ಹುಟ್ಟಿಸಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಬಳ್ಳಾರಿಯಲ್ಲಿ ತಮ್ಮ ಸಂಬಂಧಿ ದೇವೇಂದ್ರಪ್ಪ ಅವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಮಹತ್ತರ ಪಾತ್ರ ವಹಿಸಿರುವ ರಮೇಶ ಜಾರಕಿಹೊಳಿ ಅಲ್ಲಿಂದಲೇ ನೇರವಾಗಿ ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿದ್ದರು. ಈ ಕ್ಷೇತ್ರದಲ್ಲಿ ಉಗ್ರಪ್ಪ ಅವರ ಸೋಲು, ದೇವೇಂದ್ರಪ್ಪ ಅವರ ಜಯದಲ್ಲಿ ರಮೇಶ ಅವರ ಪಾತ್ರದ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ನಡೆದಿದೆ.
ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರಗಳಲ್ಲಿ ಸಹೋದರ, ಸಚಿವ ಸತೀಶ ಜಾರಕಿಹೊಳಿ ಅವರ ವಿರುದ್ಧ ತೊಡೆತಟ್ಟಿದ್ದ ರಮೇಶ ಬಳ್ಳಾರಿಯಲ್ಲಿ ಶಿವಕುಮಾರ ಅವರನ್ನು ಎದುರು ಹಾಕಿಕೊಂಡು ತೆರೆಮರೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದರು. ಇದರ ಬಗ್ಗೆ ಸ್ವತಃ ಸತೀಶ ಅವರೇ ಅನೇಕ ಸಲ ಬಹಿರಂಗವಾಗಿ ಟೀಕೆ ಮಾಡಿದ್ದರು. ಕಾಂಗ್ರೆಸ್ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದರು. ಆದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳದ ರಮೇಶ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಇಲ್ಲಿ ತೋರಿಸಿಕೊಟ್ಟಿದ್ದಾರೆ ಎಂಬ ಮಾತುಗಳು ಈಗ ಎಲ್ಲ ಕಡೆ ಹರಿದಾಡುತ್ತಿವೆ.
ಬಿಜೆಪಿ ಫ್ಲೆಕ್ಸ್‌ನಲ್ಲಿ ರಮೇಶ ಪೋಟೋ: ಬಳ್ಳಾರಿ, ಚಿಕ್ಕೋಡಿ ಹಾಗೂ ಬೆಳಗಾವಿ ಈ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಭರ್ಜರಿ ಗೆಲುವಿನ ನಂತರ ಅಲ್ಲಿನ ಬಿಜೆಪಿ ನಾಯಕರೇ ಸ್ವತಃ ರಮೇಶ ಜಾರಕಿಹೊಳಿ ಅವರ ಹೆಸರು ಪ್ರಸ್ತಾಪ ಮಾಡಿರುವುದು ಹಾಗೂ ನಿಪ್ಪಾಣಿಯಲ್ಲಿ ಬಿಜೆಪಿ ಕಾರ್ಯಕರ್ತರು ರಮೇಶ ಜಾರಕಿಹೊಳಿ ಅವರಿಗೆ ಆಭಿನಂದನೆ ಸಲ್ಲಿಸಿ ಬ್ಯಾನರ್ ಹಾಕಿರುವುದು ಅವರ ಪ್ರಭಾವಕ್ಕೆ ಸಾಕ್ಷಿಯಾಗಿದೆ.
ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಾಯ ಮಾಡಿದ ರಮೇಶ ಜಾರಕಿಹೊಳಿ ಮೂರೂ ಕಡೆ ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿಗಳ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದ್ದಾರೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿಗೆ ಬರುತ್ತಿದ್ದಾರೆ. ಅವರ ವಿಧಾನಸಭಾ ಕ್ಷೇತ್ರ ಗೋಕಾಕದಲ್ಲಿ ತಮಗೆ ಒಳ್ಳೆಯ ಮುನ್ನಡೆ ಸಿಕ್ಕಿದೆ. ಹೀಗಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಸಂಸದ ಸುರೇಶ ಅಂಗಡಿ ಹೇಳಿರುವುದು ನಾನಾ ರೀತಿಯ ರಾಜಕೀಯ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
ಚುನಾವಣೆಯ ಮೊದಲ ದಿನದಿಂದಲೂ ಕಾಂಗ್ರೆಸ್ ಪಕ್ಷದ ಎಲ್ಲ ಚಟುವಟಿಕೆಗಳಿಂದ ಬಹಳ ದೂರ ಉಳಿದಿದ್ದ ರಮೇಶ ಜಾರಕಿಹೊಳಿ ಒಮ್ಮೆಯೂ ಕಾಂಗ್ರೆಸ್ ಪರ ಪ್ರಚಾರಕ್ಕೆ ಇಳಿಯಲಿಲ್ಲ. ಸ್ವತಃ ತಮ್ಮ ಕ್ಷೇತ್ರ ಗೋಕಾಕದಲ್ಲಿಯೂ ಅವರು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲಿಲ್ಲ. ಬದಲಾಗಿ ತಟಸ್ಥರಾಗಿ ಉಳಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ಕಳೆದ ಮೂರು ತಿಂಗಳ ಅವಧಿಯಲ್ಲಿ ಬಹುತೇಕ ಸಮಯ ತಾವು ಕಾಂಗ್ರೆಸ್ ಬಿಡುವುದು ನಿಶ್ವಿತ ಎಂದು ಹೇಳಿ ಕೊಂಡೇ ಓಡಾಡಿದ್ದ ರಮೇಶ ಜಾರಕಿಹೊಳಿ ಚುನಾವಣೆಯ ಸಮಯದಲ್ಲಿ ಪರೋಕ್ಷವಾಗಿ ಬಿಜೆಪಿ ಪರ ನಿಂತಿದ್ದಲ್ಲದೆ ತಮ್ಮ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಸೂಚನೆ ಸಹ ನೀಡಿದ್ದರು. ಇದಕ್ಕೆ ಗೋಕಾಕ ಕ್ಷೇತ್ರದಲ್ಲಿ ಬಿಜೆಪಿಗೆ ಸಿಕ್ಕ ಮುನ್ನಡೆಯೇ ಸಾಕ್ಷಿ.
* ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.