ರೋಗಿ – ವೈದ್ಯರ ಪವಿತ್ರ ಸಂಬಂಧದ ಮರಣ
Team Udayavani, Jul 1, 2017, 10:15 PM IST
ಶುಶ್ರೂಷೆ ನೀಡುವವರು, ವಿಮಾ ಕಂಪನಿಗಳು ಮತ್ತು ಸರ್ಕಾರ ಸೇರಿದಂತೆ ನಾವೆಲ್ಲರೂ ಒಟ್ಟಾಗಿ ಎಲ್ಲರಿಗೂ ವೈದ್ಯಕೀಯ ಸೌಲಭ್ಯ ಸಿಗುವಂತೆ ಶ್ರಮಿಸಬೇಕು. ಅಲ್ಲದೆ, ರೋಗಿ ಮತ್ತು ಅವರ ಕುಟುಂಬದ ಮೇಲೆ ವೈದ್ಯಕೀಯ ಆರೈಕೆಯ ವೆಚ್ಚದ ಹೊರೆ ಅತಿಯಾಗದಂತೆ ಮಾಡಬೇಕಿದೆ.
ನಂಬಿಕೆ, ವಿಶ್ವಾಸ ಮತ್ತು ಗೌರವಗಳನ್ನು ಆಧರಿಸಿದ ರೋಗಿ ಮತ್ತು ವೈದ್ಯರ ನಡುವಿನ ಆರೋಗ್ಯಕರ ಸಂಬಂಧ ನಿಧಾನಕ್ಕೆ ಹಂತಹಂತವಾಗಿ ಇಳಿಮುಖವಾಗುತ್ತಿರುವುದು, ಅಲ್ಲದೇ ಬಹುತೇಕ ಮರಣ ಹೊಂದಿರುವುದು ವೈದ್ಯ ಕ್ಷೇತ್ರದ ನಮ್ಮಲ್ಲಿ ಅನೇಕರಿಗೆ ಬಹಳ ನೋವಿನ ವಿಷಯವಾಗಿದೆ. ನಿಜಕ್ಕೂ ಅತ್ಯಂತ ಭಾರವಾದ ಹೃದಯದಿಂದ ಈ ಸಂತಾಪ ಸೂಚನೆಯನ್ನು ನಾನು ಬರೆಯುತ್ತಿದ್ದೇನೆ. ಈ ಕ್ಷೇತ್ರದಲ್ಲಿ 4 ದಶಕಕ್ಕೂ ಹೆಚ್ಚಿನ ಅವಧಿಯಿಂದ ಇರುವುದರೊಂದಿಗೆ, ವೈದ್ಯಕೀಯ ವೃತ್ತಿಯ ವೈಭವದ ಉತ್ತುಂಗವನ್ನು ಅಲ್ಲದೇ ದುರದೃಷ್ಟವಶಾತ್ ಅದು ಇತ್ತೀಚೆಗೆ ಪಾತಾಳಕ್ಕಿಳಿದಿರುವುದನ್ನೂ ಕಂಡಿದ್ದೇನೆ.
ನಾವು ಚಿಕ್ಕವರಾಗಿದ್ದಾಗ ಕುಟುಂಬದ ವೈದ್ಯರನ್ನು, ಮನೆಯ ವರೆಲ್ಲರಿಗೆ ವೈದ್ಯರಾಗಿ ಮಾತ್ರವಲ್ಲದೇ ಹೆಚ್ಚುವರಿಯಾಗಿ ದೇವರು, ಸ್ನೇಹಿತರು, ತತ್ವಜ್ಞಾನಿ ಮತ್ತು ಮಾರ್ಗದರ್ಶಿಯಂತೆ ನೋಡಲಾ ಗುತ್ತಿತ್ತು. ಅವರು ಮನೆಗೆ ಬಂದರೆ ಇಡೀ ಕುಟುಂಬ ಗೇಟ್‌ನ ಬಳಿ ಇರುತ್ತಿತ್ತಲ್ಲದೇ ಅವರ ಬ್ಯಾಗ್ ಒಯ್ಯಲು ಎಳೆಯರ ನಡುವೆ ಪೈಪೋಟಿ ಏರ್ಪಡುತ್ತಿತ್ತು. ಆಗ ಬಹುತೇಕ ಯಾವ ಎಳೆಯರನ್ನು ಕೇಳಿದರೂ ಅವನು/ಅವಳು ಎರಡು ಮಾತಿಲ್ಲದೇ ತಾವು ಎಂಬಿಬಿಎಸ್ ಓದಿ ಗೌರವಾನ್ವಿತ ಖ್ಯಾತ ವೈದ್ಯರಾಗಬೇಕು ಎಂದೇ ಹೇಳುತ್ತಿದ್ದರು. ಯಶಸ್ವಿ ವೈದ್ಯರಾಗಲು ಮತ್ತು ಮಾನವರ ನೋವುಗಳನ್ನು ದೂರವಾಗಿಸಲು ಅತ್ಯುತ್ತಮರು ಮತ್ತು ಪ್ರತಿಭಾವಂತರು ಅನೇಕ ವರ್ಷಗಳ ಕಾಲ ಅತ್ಯಂತ ಶ್ರಮದೊಂದಿಗೆ ದುಡಿಯುತ್ತಿದ್ದರು.
ಇದೇ ವೃತ್ತಿ ದೋಷಪೂರ್ಣವಾಗಿರುವುದು ಮತ್ತು ಒಮ್ಮೆ ದೇವರೆಂದು ಪರಿಗಣಿಸಲಾದ ವೈದ್ಯರು ಇಂದು ದೆವ್ವಗಳಾಗಿರುವುದು ಎಷ್ಟು ದುಃಖದ ವಿಷಯ…ವೈದ್ಯರನ್ನು ಬೈಯುವುದು, ದೈಹಿಕ ಬೆದರಿಕೆಗಳು, ಹಲ್ಲೆಗಳು, ಆಸ್ಪತ್ರೆಗಳು ಮತ್ತು ವೈದ್ಯರ ಕಾರ್ಯ ಸ್ಥಳಗಳನ್ನು ಹಾಳುಗೆಡವುವುದು ಇಂದು ದೈನಂದಿನ ವಿಷಯವಾಗಿದೆ. ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ಅನೇಕ ವೈದ್ಯರು ವೈದ್ಯ ವೃತ್ತಿ ಕೈಗೊಳ್ಳುವುದಕ್ಕೆ ಭಯ ಪಡುತ್ತಿದ್ದಾರಲ್ಲದೇ ಶೀಘ್ರ ನಿವೃತ್ತಿ ತೆಗೆದುಕೊಳ್ಳುತ್ತಿದ್ದಾರೆ ಅಥವಾ ಬದಲಿ ವೃತ್ತಿ ಆರಿಸಿಕೊಳ್ಳುತ್ತಿದ್ದಾರೆ. ವೈದ್ಯಕೀಯ ವೃತ್ತಿ ಕೈಗೆತ್ತಿಕೊಳ್ಳಲು ಯಾವ ಎಳೆಯ ವಯಸ್ಸಿನವರೂ ಇಷ್ಟಪಡುತ್ತಿಲ್ಲ ಅಥವಾ ಅವರ ಪೋಷಕರೂ ಇದನ್ನು ಬಯಸುತ್ತಿಲ್ಲ. ನಾನೇ ನೋಡಿದಂತೆ ಈ ಇಳಿಕೆ ಕಳೆದ ಎರಡು ದಶಕಗಳಲ್ಲಿ ಕ್ಷಿಪ್ರಗತಿಯಲ್ಲಿ ಸಂಭವಿಸಿದೆ. ರೋಗಿಗಳು ಮತ್ತು ವೈದ್ಯಕೀಯ ವೃತ್ತಿಪರರ ನಡುವಿನ ಈ ತೀವ್ರ ಅಪನಂಬಿಕೆಯ ಕಾರಣಗಳು ಮತ್ತು ಅದಕ್ಕೂ ಮುಖ್ಯವಾಗಿ ವೈದ್ಯರು ಮತ್ತು ರೋಗಿಗಳ ನಡುವಿನ ಪವಿತ್ರ ಸಂಬಂಧವನ್ನು ಪುನರ್ ಸ್ಥಾಪಿಸುವುದಕ್ಕೆ ಬೇಕಾದ ಪರಿಹಾರಗಳನ್ನು ಕುರಿತು ಸುದೀರ್ಘ ಕಾಲದಿಂದ ಆಳವಾಗಿ ಚಿಂತಿಸಿದ್ದೇನೆ. ಈ ಕೆಳಗಿನವು ಈಗಿರುವ ಸಮಸ್ಯೆಗಳು ಹಾಗೂ ಸಾಧ್ಯವಾಗಬಹುದಾದ ಪರಿಹಾರಗಳು ಎಂದು ನಾನು ಭಾವಿಸುತ್ತೇನೆ.
ನನ್ನ ಅಭಿಪ್ರಾಯದ ಪ್ರಕಾರ ಈ ಮುಖ್ಯ ಸಂಬಂಧ ಸತತವಾಗಿ ಇಳಿಮುಖವಾಗಲು ಕೆಲವು ಕಾರಣಗಳು ಈ ಕೆಳಗಿನಂತಿವೆ.
ಚಿಕಿತ್ಸಾ ವೆಚ್ಚದಲ್ಲಿ ಬೃಹತ್ ಹೆಚ್ಚಳ: ಈ ಹಿಂದೆ ಬದುಕುಳಿಯಲು ಅಸಾಧ್ಯವಾಗಿದ್ದಂಥ ತೀವ್ರ ಅಸ್ವಸ್ಥರಿಗೆ ತೀವ್ರ ನಿಗಾ ಘಟಕಗಳಲ್ಲಿ ಆರೈಕೆ ಮಾಡುವ ಸಾಮರ್ಥ್ಯ ದಿಂದ ಚಿಕಿತ್ಸೆಯ ವೆಚ್ಚದಲ್ಲಿ ನಾಟಕೀಯ ಬದಲಾವಣೆ ಕಂಡು ಬಂದಿದೆ. ತಂತ್ರಜ್ಞಾನ ಉನ್ನತೀಕರಣ, ಮೂಲ ಸೌಕರ್ಯ, ಚಿಕಿತ್ಸೆಗೆ ಬಳಸುವ ವಸ್ತುಗಳು ಹಾಗೂ ಔಷಧಗಳ ವೆಚ್ಚಗಳು ಆಕಾಶಕ್ಕೇರಿವೆ. ದುರದೃಷ್ಟವಶಾತ್ ಬಹುತೇಕರಿಗೆ ಥರ್ಡ್ ಪಾರ್ಟಿ ವಿಮೆ ಸೌಲಭ್ಯ ಲಭ್ಯವಿರದ ಕಾರಣ ಬಹಳಷ್ಟು ಸಮಯಗಳಲ್ಲಿ ಸ್ವಾಭಾವಿಕವಾಗಿ ರೋಗಿಗಳು ಇದರ ಹೊರೆ ಹೊರಬೇಕಾಗಿದೆ.
ತಪ್ಪು ಕಲ್ಪನೆ: ಸಾಮಾನ್ಯವಾಗಿ ಚಿಕಿತ್ಸೆಯ ವೆಚ್ಚ ಬಹಳ ಏರು ಮಟ್ಟದ್ದಾಗಿದ್ದು, ವ್ಯಕ್ತಿ ತನ್ನ ಜೇಬಿನಿಂದಲೇ ಪಾವತಿ ಮಾಡಬೇಕಾಗುತ್ತದೆ. ಇದು ಹಣಕಾಸಿನ ಹೊರೆಯಾಗುತ್ತದೆ. ಇಂಥ ಸ್ಥಿತಿಯಲ್ಲಿ ಬಹುತೇಕರು ಕಳಪೆ ಫಲಿತಾಂಶವನ್ನು ನಿರ್ಲಕ್ಷÂಕ್ಕೆ ಸಮನಾಗಿ ಪರಿಗಣಿಸುತ್ತಾರೆ. ದುರದೃಷ್ಟವಶಾತ್ ವೈದ್ಯಕೀಯ ಕ್ರಮದಲ್ಲಿ ಕಾಣಿಸಿಕೊಳ್ಳುವ ಹಾಗೂ ಈಗಾಗಲೆ ತಿಳಿದಿರುವ ಸಂಕೀರ್ಣ ತೊಂದರೆಗಳನ್ನೂ ಅನೇಕ ಬಾರಿ ಜನರು ವೈದ್ಯರ ನಿರ್ಲಕ್ಷÂವೆಂದೇ ಪರಿಗಣಿಸುತ್ತಾರೆ.
ಭ್ರಷ್ಟಾಚಾರ ಮತ್ತು ಅನೈತಿಕ ಅಭ್ಯಾಸಗಳು: ನಮ್ಮ ವೃತ್ತಿಯಲ್ಲಿನ ಕೆಲವು ಮಾನಗೇಡಿಗಳು ಲಂಚ, ಅನಗತ್ಯ ಪರೀಕ್ಷೆಗಳನ್ನು ಮಾಡಿಸುವುದು ಮತ್ತು ಬಹಳ ದುಬಾರಿ ಕ್ರಮಗಳನ್ನು ಕೈಗೊಳ್ಳುವುದು ಅಲ್ಲದೇ ಔಷಧ ವ್ಯಾಪಾರಿಗಳೊಂದಿಗೆ ಕೈಜೋಡಿಸಿ ಅಕ್ರಮ ನಡೆಸುವುದು ಇವೇ ಮುಂತಾದ ಭ್ರಷ್ಟ ಅಭ್ಯಾಸಗಳಲ್ಲಿ ತೊಡಗಿದ್ದು ವೈದ್ಯಕೀಯ ಸಮುದಾಯದ ಖ್ಯಾತಿಯನ್ನು ಗಂಭೀರವಾಗಿ ಹಾಳುಗೆಡವಿದ್ದಾರೆ. ಸಣ್ಣ ಸಂಖ್ಯೆಯ ಜನರ ತಪ್ಪುಗಳು ಸಂಪೂರ್ಣ ವೈದ್ಯ ವೃತ್ತಿಯ ವರ್ಚಸ್ಸನ್ನು ಮಂಕಾಗಿಸಿವೆ, ಅಲ್ಲದೇ ತಮ್ಮ ವೈದ್ಯರಲ್ಲಿ ಜನರು ಇಟ್ಟಿದ್ದ ನಂಬಿಕೆಯನ್ನು ನಾಶಗೊಳಿಸಿವೆ.
ಕಾನೂನುಬಾಹಿರ ನಡವಳಿಕೆ ಇವಷ್ಟೇ ಅಲ್ಲದೇ ರೌಡಿಗಳು/ಗೂಂಡಾಗಳು ಮತ್ತು ಕೆಲವು ಅಹಿತಕರ ವ್ಯಕ್ತಿಗಳು, ಈ ವ್ಯವಸ್ಥೆ ಯಲ್ಲಿ ಸೇರಿಕೊಂಡು ಕಾನೂನು ಕೈಗೆತ್ತಿಕೊಂಡು ಸುಲಿಗೆಯಲ್ಲಿ ತೊಡಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಿಲ್‌ಗಳು ಹೆಚ್ಚಿನ ಮೊತ್ತ ಹೊಂದಿರುವಲ್ಲಿ ಹಾಗೂ ಫಲಿತಾಂಶಗಳು ನಿರೀಕ್ಷಿತ ಮಟ್ಟದಲ್ಲಿ ಇರದ ಸಂದರ್ಭಗಳಲ್ಲಿ ಇದು ಹೆಚ್ಚಾಗಿ ಕಂಡು ಬಂದಿದೆ. ಕಾನೂನು ಅನುಷ್ಠಾನ ಏಜೆನ್ಸಿಗಳು ಈ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಲ್ಲದೇ ಇಂಥವರನ್ನು ಹತ್ತಿಕ್ಕಬೇಕಿದೆ.
ಮಾಧ್ಯಮ ಪ್ರಸಾರ: ಕೆಲವೊಮ್ಮೆ ಜಾಗರೂಕತೆಯಿಂದಲೋ ಅಥವಾ ಅಜಾಗರೂಕತೆ ಯಿಂದಲೋ ನಡೆಯುವ ಮಾಧ್ಯಮ ಪ್ರಸಾರಗಳು(ವರದಿಗಳು) ರೋಗಿ ಮತ್ತು ಅವರ ಕುಟುಂಬದಲ್ಲಿ ಅಪನಂಬಿಕೆ ಮತ್ತು ಶಂಕೆಯನ್ನು ಬೆಳೆಸುತ್ತವೆ. ಇದೇ ಸಮಯದಲ್ಲಿ ಉಭಯ ಪಕ್ಷಗಳ ನಡುವೆ ಆರೋಗ್ಯಕರ ಮತ್ತು ಪರಸ್ಪರ ಲಾಭದಾಯಕ ಸಂಬಂಧದ ಅಗತ್ಯ ಕುರಿತು ಸೌಹಾರ್ದಯುತ ನಂಬಿಕೆ ಹಾಗೂ ಜಾಗೃತಿ ಬೆಳೆಸುವಲ್ಲಿ ಮಾಧ್ಯಮಗಳು ಅದ್ಭುತ ಪಾತ್ರ ವಹಿಸಬಹುದಾಗಿದೆ. ಅಲ್ಲದೇ ಅನೈತಿಕ ಮತ್ತು ಭ್ರಷ್ಟ ಅಭ್ಯಾಸಗಳನ್ನು ಬೆಳಕಿಗೆ ತರುವಲ್ಲಿ ಮಾಧ್ಯಮ ಕಾವಲುಗಾರರಾಗಿ ಕೂಡ ಕಾರ್ಯ ನಿರ್ವಹಿಸಬಹುದಾಗಿದೆ.
ಸಮಯ ಮೀರಿಲ್ಲ: ಸಮಾಜ ಮತ್ತು ವೈದ್ಯಕೀಯ ಸಮುದಾಯ ಒಟ್ಟಾಗಿ ಕೆಲಸ ಮಾಡಿ ಈ ಹಿಂದೆ ವೈದ್ಯರು ಮತ್ತು ರೋಗಿಗಳು ಪರಸ್ಪರ ಇಟ್ಟುಕೊಂಡಿದ್ದ ನಂಬಿಕೆ ಮತ್ತು ಅದ್ಭುತವಾದ ಸಂಬಂಧದ ಪುನರುಜ್ಜೀವನಕ್ಕಾಗಿ ಶ್ರಮಿಸುವ ಅಗತ್ಯವಿದೆ. ಇದಕ್ಕಾಗಿ ನನ್ನ ಮಂತ್ರ ಎಂದರೆ
1. ರೋಗಿಗಳಲ್ಲಿ ಸಹಾನೂಭೂತಿ ಹೊಂದಿರುವ ವೈದ್ಯರಾಗಿರಿ.
2. ತರಬೇತಿಯ ದಿನಗಳಿಂದಲೇ ರೋಗಿ ಮತ್ತು ಅವರ ಕುಟುಂಬಗಳನ್ನು ನಿಭಾಯಿಸುವಲ್ಲಿ ಉತ್ಕೃಷ್ಟ ಮೃದು ಕೌಶಲಗಳನ್ನು ಅಳವಡಿಸಿಕೊಳ್ಳಿ.
3. ರೋಗಿಗಳೊಂದಿಗೆ ವ್ಯವಹರಿಸುವಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನೈತಿಕ ಕ್ರಮಗಳನ್ನು ಅಳವಡಿಸಿಕೊಳ್ಳಿ.
ಉತ್ತಮ ಮಾಹಿತಿ ಹೊಂದಿರುವ ರೋಗಿ ವೈದ್ಯ ತಂಡದೊಂದಿಗೆ ಚರ್ಚೆಯ ಅನಂತರ ವೈದ್ಯಕೀಯ ಸ್ಥಿತಿ, ಅದರ ಮಾರ್ಗ, ಸಂಕೀರ್ಣತೆಗಳು, ಫಲಿತಾಂಶಗಳನ್ನು ಅರ್ಥ ಮಾಡಿಕೊಳ್ಳುವು ದಲ್ಲದೆ, ಅದಕ್ಕೂ ಮುಖ್ಯವಾಗಿ ಶುಶ್ರೂಷೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಮತ್ತು ವೈದ್ಯಕೀಯ ಕ್ರಮದಲ್ಲಿನ ಎಲ್ಲ ಸೂಕ್ಷ್ಮತೆಗಳನ್ನು ಕುರಿತು ಜಾಗೃತಿ ಹೊಂದಿರುತ್ತಾರೆ.
ರೋಗಿಗಳು ಮತ್ತು ಅವರ ಕುಟುಂಬಕ್ಕೆ ರೋಗಿಯ ಪರಿ ಸ್ಥಿತಿಯನ್ನು ಕುರಿತು ಸಾಮಾನ್ಯ ಜನರ ಭಾಷೆಯಲ್ಲಿ ಪ್ರಾಮಾಣಿಕ ಮತ್ತು ನಿಖರ ರೀತಿಯಲ್ಲಿ ಆಗಿಂದ್ದಾಗ್ಗೆ ವೈದ್ಯರು ವಿವರಿಸಬೇಕು.
ರೋಗಿ ಮತ್ತು ಅವರ ಕುಟುಂಬದೊಂದಿಗೆ ಸಂವಾದ ನಡೆಸಲು ಉತ್ತಮ ಹಣಕಾಸು ಸಲಹೆಗಾರರು ಇರಬೇಕಲ್ಲದೆ ಅವರು ವೈದ್ಯಕೀಯ ಕ್ರಮಗಳ ವೆಚ್ಚ ಮತ್ತು ಹೆಚ್ಚುತ್ತಿರುವ ವೆಚ್ಚಗಳಿಗೆ ಕಾರಣವನ್ನು ಸೂಕ್ತ ರೀತಿಯಲ್ಲಿ ವಿವರಿಸಬೇಕು. ಕಷ್ಟಕರ ಅಥವಾ ಸಂಕೀರ್ಣ ತೊಂದರೆಗಳು, ಅನಿರೀಕ್ಷಿತ ಫಲಿತಾಂಶಗಳು ಎದುರಾದಾಗ, ಇಲ್ಲವೇ, ಆರೈಕೆ ವಿಚಾರದಲ್ಲಿ ರೋಗಿಯ ಕುಟುಂಬ ಅನಾನುಕೂಲ ಹೊಂದಿರುವ ಪ್ರಕರಣಗಳನ್ನು ನಿಭಾಯಿಸುವಲ್ಲಿ ಮತ್ತೂಬ್ಬ ತಜ್ಞ ವೈದ್ಯರ 2ನೇ ಅಭಿಪ್ರಾಯಕ್ಕೆ ಅವಕಾಶ ಮಾಡಿಕೊಡಿ.
ಮತ್ತೂಮ್ಮೆ ಹೇಳಬೇಕೆಂದರೆ, ಈ ವಿಷಯದಲ್ಲಿ ಮಾಧ್ಯಮದ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಗ್ರಹಿಕೆಗೆ ಬಂದಿರುವ ವೈದ್ಯಕೀಯ ನಿರ್ಲಕ್ಷ್ಯದ ಕುರಿತು ಅವರು ಅತ್ಯಂತ ಸಮತೋಲಿತ ರೀತಿಯಲ್ಲಿ ವರದಿ ಮಾಡಬೇಕಿರುತ್ತದೆ. ಆಧುನಿಕ ಆರೋಗ್ಯ ಶುಶ್ರೂಷೆಯ ಸೂಕ್ಷ್ಮತೆಗಳನ್ನು ಕುರಿತು ಜಾಗೃತಿ ಮೂಡಿಸುವಲ್ಲಿ ಮತ್ತು ರೋಗಿ ಹಾಗೂ ವೈದ್ಯರ ನಡುವಿನ ಆರೋಗ್ಯಕರ ಸಂಬಂಧವನ್ನು ಪೋಷಿಸುವಲ್ಲಿ ಮಾಧ್ಯಮ ಅತ್ಯಂತ ಸಕಾರಾತ್ಮಕ ಪಾತ್ರ ವಹಿಸಬಹುದಾಗಿದೆ. ಅಲ್ಲದೆ, ಅನೈತಿಕ ಅಭ್ಯಾಸಗಳನ್ನು ಹತ್ತಿಕ್ಕುವಲ್ಲಿ ಸಮಾಜದ ಕಾವಲುಗಾರರಾಗಿ ಅವರು ಪ್ರಮುಖ ಪಾತ್ರವನ್ನೂ ವಹಿಸಬಹುದಾಗಿದೆ. ವೈದ್ಯಕೀಯ ಸಮುದಾಯ ಮತ್ತು ನಿಯಂತ್ರಣ ಪ್ರಾಧಿಕಾರ (ವೈದ್ಯಕೀಯ ಮಂಡಳಿಗಳು)ಗಳು ಅನೈತಿಕ ಮತ್ತು ಭ್ರಷ್ಟ ಚಟುವಟಿಕೆಗಳಲ್ಲಿ ತೊಡಗಿರುವ, ಅಲ್ಲದೆ, ದೊಡ್ಡ ಸಂಖ್ಯೆಯ ಪ್ರಾಮಾಣಿಕ ವೈದ್ಯರ ಖ್ಯಾತಿಗೆ ತೀವ್ರ ಹಾನಿ ಉಂಟು ಮಾಡಿರುವ ಜನರು ಮತ್ತು ಸಂಘಟನೆಗಳ ಮೇಲೆ ಅತ್ಯಂತ ಕಠಿಣ ಕ್ರಮ ಜರುಗಿಸಬೇಕು.
ಶುಶ್ರೂಷೆ ನೀಡುವವರು, ವಿಮಾ ಕಂಪನಿಗಳು ಮತ್ತು ಸರ್ಕಾರ ಸೇರಿದಂತೆ ನಾವೆಲ್ಲರೂ ಒಟ್ಟಾಗಿ ಎಲ್ಲರಿಗೂ ವೈದ್ಯಕೀಯ ಸೌಲಭ್ಯ ಸಿಗುವಂತೆ ಶ್ರಮಿಸಬೇಕು. ಅಲ್ಲದೆ, ರೋಗಿ ಮತ್ತು ಅವರ ಕುಟುಂಬದ ಮೇಲೆ ವೈದ್ಯಕೀಯ ಆರೈಕೆಯ ವೆಚ್ಚದ ಹೊರೆ ಅತಿಯಾಗದಂತೆ ಹಾಗೂ ಅವರು ಒತ್ತಡಕ್ಕೆ ಸಿಲುಕದಂತೆ ಮಾಡಬೇಕಿದೆ. ಇದನ್ನು ಸಾಧಿಸಲು ಸಾಧ್ಯವಾಯಿತೆಂದರೆ, ಆರೋಗ್ಯ ಶುಶ್ರೂಷೆ ನೀಡುವವರು ಮತ್ತು ಸಮುದಾಯದ ನಡುವೆ ಆರೋಗ್ಯಕರ ಸಂಬಂಧ ಬೆಳೆಸಲು ನೆರವಾಗಲಿದೆ. ಇದರಿಂದ ನಮ್ಮ ಜಗತ್ತು ಮತ್ತಷ್ಟು ಉತ್ತಮವಾಗಬಹುದಲ್ಲದೆ, ಅದು ನಮ್ಮ ಪಾಲಿಗೆ ಹೆಚ್ಚು ಆರೋಗ್ಯಕರ ಸ್ಥಳವಾಗಲಿದೆ. ಹೆಚ್ಚು ಅಗತ್ಯವಿರುವ “ನಂಬಿಕೆ ಆಧಾರಿತ’ ಆರೋಗ್ಯ ಶುಶ್ರೂಷೆಯನ್ನು ಪುನರುಜ್ಜೀವಗೊಳಿಸುವಲ್ಲಿ ನಮ್ಮ ಬಳಿ ಇರುವ ಎಲ್ಲ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಹೆಚ್ಚುವರಿ ಸಮಯದಲ್ಲಿ ನಾವೆಲ್ಲರೂ ದುಡಿಯೋಣ.
– ಡಾ. ಎಚ್. ಸುದರ್ಶನ್ ಬಲ್ಲಾಳ್ ಚೇರ್ಮನ್, ಮಣಿಪಾಲ್ ಆಸ್ಪತ್ರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.