ಸ್ವತ್ಛ ರಾಜಕೀಯ ಸಂಸತ್ತಿನ ಹೊಣೆ
Team Udayavani, Oct 4, 2018, 10:18 AM IST
ನಮ್ಮ ದೇಶದಲ್ಲಿ ಈ ತನಕ ನಡೆದ ವಿದ್ಯಮಾನ ಇಷ್ಟೇ. ಜನತಾ ಪ್ರಾತಿನಿಧ್ಯ ಕಾಯಿದೆಗೆ ಮಹತ್ತರವಾದ ತಿದ್ದುಪಡಿಗಳನ್ನು ತರುವ ಪ್ರಯತ್ನ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಯಾವ ಸರಕಾರವೂ ಕೈಗೊಂಡಿಲ್ಲ. ಈಗ ಸರ್ವೋಚ್ಚ ನ್ಯಾಯಾಲಯ ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ ಸರಕಾರ ಕ್ರಾಂತಿಕಾರಿ ಚುನಾವಣಾ ಸುಧಾರಣೆಗಳನ್ನು ಕೈಗೊಳ್ಳುವ ಕ್ರಮಕ್ಕೆ ಮುಂದಾದರೆ ಉತ್ತಮ.
ಕ್ರಿಮಿನಲ್ ಅಪರಾಧದ ಹಿನ್ನೆಲೆಯುಳ್ಳವರ ರಾಜಕೀಯ ಪ್ರವೇಶವನ್ನು ನಿರ್ಬಂಧಿಸುವ ಜವಾಬ್ದಾರಿ ಸಂಸತ್ತಿನ ಮೇಲಿದೆ. ಅದು ನ್ಯಾಯಾಲಯದ ಕೆಲಸವಲ್ಲ ಎಂದು ಮೊನ್ನೆ ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯ ನೀಡಿದೆ. ಈ ಸೂಚನೆ ಶಾಸನ ಸಭೆಯಲ್ಲಿರುವ ಚುನಾಯಿತ ಪ್ರತಿನಿಧಿಗಳು ತಮ್ಮ ಕರ್ತವ್ಯವೇನೆಂಬುದನ್ನು ಅರಿತುಕೊಳ್ಳಲು ಸಹಕಾರಿಯಾಗ ಬಹುದಾದ ಪಾಠ. ಕಾನೂನು ರೂಪಿಸುವುದು, ತಿದ್ದುಪಡಿ ಮಾಡುವುದು ಹಾಗೂ ರದ್ದುಪಡಿಸುವುದು ಶಾಸನಸಭೆಯ ಕರ್ತವ್ಯ. ಆದರೆ ಈ ಪ್ರಕ್ರಿಯೆ ಸಾರ್ವಜನಿಕ ಹಿತಾಸಕ್ತಿಗೆ ತಕ್ಕಂತೆ ಇರಬೇಕೆಂಬುದು ಸಂವಿಧಾನದ ಆಶಯ. ಉದಾ: ಸಂವಿಧಾನದಲ್ಲಿ ಮೀಸಲಾತಿ ಅವಕಾಶ ಕಲ್ಪಿಸಲಾಗಿದೆ.
ಅರ್ಹತೆಯನ್ನು ಗುರುತಿಸುವ, ಪ್ರಮಾಣವನ್ನು ನಿಗದಿಗೊಳಿಸುವ ಹಾಗೂ ಕ್ಷೇತ್ರವನ್ನು ವಿಸ್ತರಿಸುವ ಯಾ ಸಂಕುಚಿತಗೊಳಿಸುವ ಜವಾಬ್ದಾರಿ ಸಂಸತ್ತಿಗೆ ಸೇರಿದೆ.
ನಿರ್ವಹಣೆಯಲ್ಲಿ ಎಡವಟ್ಟು ಮಾಡಿಕೊಂಡು ನ್ಯಾಯಾಲಯದ ಸೂಚನೆಗೆ ಕಾಯುವುದು ಹಾಗೂ ತೀರ್ಪಿನ ರಕ್ಷಣೆಯಲ್ಲಿ ಆಡಳಿತ ನಡೆಸುವುದು ಸಂಸತ್ತಿಗೆ ಶೋಭೆ ತರುವಂಥದ್ದಲ್ಲ. ಸಂಸತ್ ಸದಾ ಕ್ರಿಯಾಶೀಲವಾಗಿರತಕ್ಕದ್ದು ಎನ್ನುವುದು ಸಾರ್ವಜನಿಕರ ನಿರೀಕ್ಷೆ. ಆ ಭರವಸೆ ನೀಡಿಯೇ ಆಯ್ಕೆಯಾಗಿ ಬಂದ ಪ್ರತಿನಿಧಿಗಳ ಒಕ್ಕೂಟ ಅದು. ಆದರೆ ಸಂಸತ್ ತನ್ನ ನಿಜ ಕರ್ತವ್ಯವನ್ನು ಪರಿಪಾಲಿಸುತ್ತಿದೆಯೇ ಎನ್ನುವುದು ಪ್ರಶ್ನೆ.
ಚುನಾವಣಾ ನೀತಿ, ನಿಯಂತ್ರಣ ಹಾಗೂ ಮೇಲ್ವಿಚಾರಣೆ ಅರ್ಥಾತ್ ಮುಕ್ತ ಹಾಗೂ ನ್ಯಾಯಯುತ ಚುನಾವಣೆ ನಡೆಸುವ ಅಧಿಕಾರ ಸಂವಿಧಾನದ ಪರಿಚ್ಛೇದ 324ರಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ ದತ್ತವಾಗಿದೆ.
ಆರ್ಟಿಕಲ್ 327ರಲ್ಲಿ ಸೂಕ್ತ ಕಾನೂನು ರೂಪಿಸಲು ಸಂಸತ್ತಿಗೆ ಇರುವ ಜವಾಬ್ದಾರಿಯಂತೆ, ಜನತಾ ಪ್ರಾತಿನಿಧ್ಯ ಕಾಯಿದೆ 1950 ಹಾಗೂ 1951ನ್ನು ರೂಪಿಸಲಾಗಿದ್ದು, ಅವುಗಳು ಊರ್ಜಿತದಲ್ಲಿವೆ. ಈ ಕಾನೂನುಗಳಲ್ಲಿ ಕಂಡು ಬರುವ ನ್ಯೂನತೆಗಳನ್ನು ಸರಿಪಡಿಸುವ ಹಾಗೂ ಕಾನೂನನ್ನು ಬಲಪಡಿಸುವ ನಿಟ್ಟಿನಲ್ಲಿ ಆಯೋಗದ ಸಲಹೆ ಸೂಚನೆಯಂತೆ ಸಂಸತ್ ಕಾನೂನು ತಿದ್ದುಪಡಿ ಮಾಡಲು ಅವಕಾಶವಿದ್ದು, ಈ ತನಕ ತಂದ ಬದಲಾವಣೆಗಳೆಲ್ಲ ಮತದಾರ ಕೇಂದ್ರೀಕೃತವಾದವುಗಳೇ ಹೊರತು ಅಭ್ಯರ್ಥಿ ಕೇಂದ್ರೀಕೃತವಾದವುಗಳು ಅಲ್ಲವೇ ಅಲ್ಲ. ಹಾಲಿ ಶಾಸನಸಭೆಗಳಲ್ಲಿ ಶೇಕಡಾ 30ರಷ್ಟು ಕ್ರಿಮಿನಲ್ ಆರೋಪ ಇರುವ ಜನ ಪ್ರತಿನಿಧಿಗಳಿದ್ದಾರೆ ಎಂದು ಸರಕಾರದ ಅಧಿಕೃತ ವರದಿಗಳೇ ಸಾರುತ್ತಿವೆ. ರಾಜಕೀಯದ ಅಪರಾಧೀಕರಣವನ್ನು ನಿಯಂತ್ರಿಸಲು ಯಾವ ಸರಕಾರವೂ ಈ ತನಕ ದಿಟ್ಟ ಕ್ರಮವನ್ನು ಕೈಗೊಂಡ ಉದಾಹರಣೆಯಿಲ್ಲ.
ಸ್ವತ್ಛ ಹಾಗೂ ಪಾರದರ್ಶಕ ಆಡಳಿತ ನಡೆಸುವುದು ಸಂಸತ್ತಿನ ಕರ್ತವ್ಯವಲ್ಲವೇ? ಸ್ಥಾಪಿತ ಹಿತಾಸಕ್ತಿಯುಳ್ಳವರ, ಕಾಳಸಂತೆ ಖದೀಮರ ಹಾಗೂ ಕ್ರಿಮಿನಲ್ ಹಿನ್ನೆಲೆಯುಳ್ಳವರ ಒಕ್ಕೂಟದಿಂದ ಸ್ವತ್ಛ ಆಡಳಿತ ನಡೆಸಲು ಸಾಧ್ಯವೇ? ಅಂಥ ಅಯೋಗ್ಯರು ರಾಜಕೀಯ ಪ್ರವೇಶಿಸದಂತೆ ನಿರ್ಬಂಧಿಸುವ ಜವಾಬ್ದಾರಿ ಸಂಸತ್ತಿಗಿದ್ದು ಅದನ್ನು ತಡೆಯಲು ಎದ್ದು ನಿಲ್ಲುವುದಲ್ಲವಾದರೆ ಸಂಸತ್ತಿನ ಭಾವ ಶುದ್ಧಿಯನ್ನೇ ನಾವು ಪ್ರಶ್ನಿಸಬೇಕಾಗುತ್ತದೆ. ನಿಜ, ಸಂಸತ್ತಿಗೆ ಅದು ಬೇಡ. ಏಕೆಂದರೆ, ಸಂಸತ್ ಅಂದರೆ ಚುನಾಯಿತ ಪ್ರತಿನಿಧಿಗಳ ಅರ್ಥಾತ್ ರಾಜಕಾರಣಿಗಳ ಕೂಟ. ಆ ಕೂಟ ರಾಜಕಾರಣಿಗಳಿಗೆ ವಿರೋಧವಾಗುವ ಕಾನೂನು ರೂಪಿಸುವುದುಂಟೇ! ಇತ್ತ ಚುನಾವಣಾ ಆಯೋಗ ಸ್ವತಂತ್ರ ಪ್ರಾಧಿಕಾರವಾದರೂ ಅದರ ಶಕ್ತಿ ಸಂಚಯವಿರುವುದು ಸಂಸತ್ತಿನಲ್ಲಿ. ಕಾನೂನು ರೂಪಿಸಿ, ಅಧಿಕಾರ ಆಯೋಗಕ್ಕೆ ದತ್ತವಾದರೆ ಅನುಷ್ಠಾನದಲ್ಲಿ ಸ್ವಾತಂತ್ರ್ಯವಿದೆ ಎನ್ನವುದೇನೋ ಸತ್ಯ. ಸಂಸತ್ತು ತನ್ನ ನಿಜ ಅಧಿಕಾರವನ್ನು ಬಳಸಿ ಕಾನೂನು ರೂಪಿಸದೆ ಪರಿಹಾರಕ್ಕೆ ನ್ಯಾಯಾಲಯದ ನಿರ್ದೇಶನವನ್ನು ಕಾಯುವುದಾದರೆ ಅದು ಖಂಡಿತ ಕರ್ತವ್ಯ ಲೋಪ.
ನಮ್ಮ ದೇಶದಲ್ಲಿ ಈ ತನಕ ನಡೆದ ವಿದ್ಯಮಾನ ಇಷ್ಟೇ. ಜನತಾ ಪ್ರಾತಿನಿಧ್ಯ ಕಾಯಿದೆಗೆ ಮಹತ್ತರವಾದ ತಿದ್ದುಪಡಿಗಳನ್ನು ತರುವ ಪ್ರಯತ್ನ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಯಾವ ಸರಕಾರವೂ ಕೈಗೊಂಡಿಲ್ಲ. ಈಗ ಸರ್ವೋಚ್ಚ ನ್ಯಾಯಾಲಯ ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ ಸರಕಾರ ಕ್ರಾಂತಿಕಾರಿ ಚುನಾವಣಾ ಸುಧಾರಣೆಗಳನ್ನು ಕೈಗೊಳ್ಳುವ ಕ್ರಮಕ್ಕೆ ಮುಂದಾದರೆ ಉತ್ತಮ. ಇಲ್ಲವಾದರೆ ಸಾರ್ವಜನಿಕರು ಅದರ ಮರ್ಮವನ್ನು ಅರಿತು ಪ್ರತಿಕ್ರಿಯಿಸಬೇಕಾದ ಅನಿವಾರ್ಯತೆ ಇದೆ. ಮತದಾರ ಮತದಾನ ಮಾಡಿ ತನ್ನ ಕರ್ತವ್ಯ ಮುಗಿಯಿತು ಎನ್ನುವ ನಿಶ್ಚಿಂತೆ ಹಾಗೂ ಜಡತ್ವದ ಮನೋಭಾವದಿಂದ ಹೊರಬರಬೇಕಾಗಿದೆ. ಸಂವಿಧಾನ ನೀಡಿದ ಭರವಸೆಯನ್ನು ಈಡೇರಿಸಲು ಅಸಮರ್ಥವಾದ ರಾಜಕೀಯ ಪಕ್ಷವನ್ನು ಮರಳಿ ಆಡಳಿತಕ್ಕೆ ಬರಲು ಬಿಡಬಾರದು. ಆ ಕ್ರಿಯಾಶೀಲತೆಯನ್ನು ತೋರಿಸುವ ಮಟ್ಟಕ್ಕೆ ಜನ ಎದ್ದು ನಿಲ್ಲಬೇಕಾಗಿದೆ. ಜನ ಮನಸ್ಸು ಮಾಡಿದರೆ ರಕ್ತರಹಿತ ಕ್ರಾಂತಿ ಮಾಡಲು ಸಾಧ್ಯವಾಗುವುದು ಪ್ರಜಾಸತ್ತೆಯಲ್ಲಿ ಮಾತ್ರ.
ಈ ನಡುವೆ ಸೇವಾ ಸಂಸ್ಥೆಗಳು ತಮ್ಮ ಚಟುವಟಿಕೆಗಳ ರೂಪ ಬದಲಾಯಿಸಬೇಕಾದ ಅಗತ್ಯ ಇಲ್ಲಿ ಒತ್ತಿ ಹೇಳಬೇಕಾಗಿದೆ. ನಮ್ಮ ಸಮಾಜದಲ್ಲಿ ಅನೇಕ ಸಾರ್ವಜನಿಕ ಸೇವಾ ಸಂಸ್ಥೆಗಳಿದ್ದಾವೆ. ಈ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಸರಕಾರದೊಡನೆ ಹೋರಾಟ ಮಾಡುವುದಲ್ಲದೆ ನ್ಯಾಯಾಲಯದ ಕದ ತಟ್ಟುವ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಮೊನ್ನೆ ಸರ್ವೋಚ್ಚ ನ್ಯಾಯಾಲಯದಲ್ಲಿ ಚರ್ಚಿತವಾದ ಕ್ರಿಮಿನಲ್ ಆರೋಪಿಗಳ ರಾಜಕೀಯ ಪ್ರವೇಶ ತಡೆ ಪ್ರಕರಣಕ್ಕೂ ಒಂದು ಸೇವಾ ಸಂಸ್ಥೆಯ ಸಕ್ರೀಯ ಸಹಭಾಗಿತ್ವವೇ ಕಾರಣ.
ಸಮಾಜದ ಹಿತಕ್ಕಾಗಿ ಈ ಸೇವಾ ಸಂಸ್ಥೆಗಳು ದುಡಿಯುವ ವಿಧಾನಗಳಲ್ಲಿ ಸ್ವಲ್ಪ ಸುಧಾರಣೆ ತರಬೇಕಾದ ಅಗತ್ಯವಿದೆ ಎಂದೆನ್ನಿಸುತ್ತಿದೆ. ನಮ್ಮ ಆಡಳಿತದ ದುರವಸ್ಥೆಗೆ ಮತದಾರರ ಕೊಡುಗೆಯೂ ಇದೆ ಎಂದರೆ ಅವಸರದ ಹೇಳಿಕೆಯಾಗಲಾರದು. ನಮ್ಮ ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಈಗ ಗಣನೀಯವಾಗಿ ಹೆಚ್ಚಳವಾಗಿದೆ. ಆದರೆ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದರಲ್ಲಿ ನಾವು ಈಗ ಹೆಚ್ಚಿದ ಸಾಕ್ಷರತೆಯ ಪ್ರಭಾವವನ್ನು ತೋರಿಸುವ ಮಟ್ಟಕ್ಕೆ ತಲುಪಿಲ್ಲ. ಐವತ್ತು ವರ್ಷದ ಹಿಂದೆ ಅಮಾಯಕ ಜನಸ್ಥಾಪಿತ ಹಿತಾಸಕ್ತಿಗಳನ್ನು ಗೆಲ್ಲಿಸಿದಂತೆ, ಈಗ ಸಾಕ್ಷರತೆಯುಳ್ಳ ಜನರ ಸಹಕಾರದಿಂದ ಕ್ರಿಮಿನಲ್ ಆರೋಪಿಗಳು ಗೆದ್ದು ಬರುತ್ತಿದ್ದಾರೆ. ಇಲ್ಲಿ ಸಾಕ್ಷರತೆ ಕೇವಲ ಅಕ್ಷರಾಭ್ಯಾಸಕ್ಕೆ ಸೀಮಿತವಾಗಿದೆ. ಹಾಗಾಗಿ ಅವರುಗಳಿಗೆ ಆಡಳಿತದ ಕುರಿತಾದ ವಿಶೇಷ ಮಾಹಿತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಸೇವಾ ಸಂಸ್ಥೆಗಳು ಆಸಕ್ತಿ ತೋರಿಸಿದರೆ ಉತ್ತಮ. ನಮ್ಮ ಸಂವಿಧಾನ ಹಾಗೂ ಅದಕ್ಕೆ ಸಂಗತವಾದ ಆಡಳಿತದ ಕುರಿತು ಮಾಹಿತಿ ಸಂಗ್ರಹಿಸಿ ಜನಕ್ಕೆ ತಲ್ಪಿಸುವ ಕೆಲಸವಾಗಬೇಕಾಗಿದೆ. ಇಲ್ಲಿ ವೈಯಕ್ತಿಕ ರಾಜಕಾರಣಿ ನಮ್ಮ ಗುರಿಯಲ್ಲ, ಆಗಬಾರದು. ಒಟ್ಟು ಆಡಳಿತದ ಸ್ಥಿತಿಗತಿಯನ್ನು ಬಿಂಬಿಸುವ ಮಾಹಿತಿ ಪ್ರಸರಣವಾಗಬೇಕು. ಒಂದು ಉದಾಹರಣೆ ನೀಡಿ ಪುಷ್ಟೀಕರಿಸುವುದಾದರೆ, ಈಗ ನಮ್ಮ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನವೂ ಅನೇಕ ಅಪಘಾತಗಳು ಸಂಭವಿಸುತ್ತವೆ. ನಮ್ಮ ಸ್ಪಂದನ ಕೇವಲ ಅನುಕಂಪಕ್ಕೆ ಸೀಮಿತವಾಗಿರುತ್ತದೆ.
ಬಹುತೇಕ ಸಂದರ್ಭಗಳಲ್ಲಿ ಅಪಘಾತಕ್ಕೆ ಕಾರಣವಾದ ಅತಿ ವೇಗಕ್ಕಿಂತ ಆಚೆ ನಮ್ಮ ತರ್ಕ ಹೋಗುವುದಿಲ್ಲ. ಆದರೆ ಅನೇಕ ಕಡೆ ರಸ್ತೆ ಅವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ ಎಂಬ ವಿಚಾರ ನಮಗೆ ಗೊತ್ತೆ ಇರುವುದಿಲ್ಲ. ಇಂಥ ಮಾಹಿತಿಗಳ ಪ್ರಸರಣ ದೂರಗಾಮಿ ಪರಿಣಾಮ ಬೀರಬಲ್ಲುದು. ಸೇವಾ ಸಂಸ್ಥೆಗಳು ಈಗಿನ ತಂತ್ರಜ್ಞಾನವನ್ನು ಬಳಸಿ ಮಾಹಿತಿ ಪ್ರಸರಣದಲ್ಲಿ ತೊಡಗಿಸಿಕೊಳ್ಳುವುದು ಪ್ರಜಾಸತ್ತೆಗೆ ದೊಡ್ಡ ಕೊಡುಗೆ. ಸೇವಾ ಸಂಸ್ಥೆಗಳಿಂದ ಇಂಥ ಕಾರ್ಯಗಳು ನಡೆಯಲಿ.
– ಬೇಳೂರು ರಾಘವ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.