Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!
Team Udayavani, Nov 1, 2024, 8:15 AM IST
ಐಪಿಎಸ್ ಅಧಿಕಾರಿಯಾದಾಗ, ನನಗೆ ದೇಶದಲ್ಲಿ ಎಲ್ಲಾದರೂ ಪೋಸ್ಟಿಂಗ್ ಕೊಡಿ ಎಂದು ಕೇಳಿದ್ದೆ. ಕರ್ನಾಟಕ ಸಿಕ್ಕಿದ್ದು, ನನ್ನ ಸೌಭಾಗ್ಯ. 1976 ಜನವರಿಯಲ್ಲಿ ಕರ್ನಾಟಕಕ್ಕೆ ಬಂದೆ. ಇಲ್ಲಿಗೆ ಬಂದಾಗ, ಎಲ್ಲೋ ಬಂದಿದ್ದೇನೆ, ಕಷ್ಟ ಇದೆ ಎಂಬ ಭಾವನೆಯೇ ಬರಲಿಲ್ಲ. ಮೈಸೂರು ನನಗೆ ಅತ್ಯಂತ ಇಷ್ಟವಾದ ಊರು. ಅಲ್ಲೇ ನನ್ನ ತರಬೇತಿಯೂ ನಡೆಯಿತು. ಮಂಡ್ಯ, ಮೈಸೂರು ಸುತ್ತಮುತ್ತಲಿನ ಪ್ರಾಕೃತಿಕ ಸೌಂದರ್ಯ ಇನ್ನೂ ನನ್ನ ಕಣ್ಮುಂದಿದೆ. ಮುಂದಿನ ತರಬೇತಿಗಾಗಿ ಮಂಗಳೂರಿಗೆ ಹೋದೆ. ಅಲ್ಲಿನ ಪಣಂಬೂರು ಬೀಚ್, ಸುಳ್ಯ, ಕುಂದಾಪುರ, ಮರವಂತೆ, ಮೂಡಬಿದಿರೆ ಸುತ್ತಮುತ್ತಲಿನ ಪ್ರಾಕೃತಿಕ ವಾತಾವರಣ ನನ್ನನ್ನು ಪ್ರಭಾವಿಸಿತು. ಅಲ್ಲಿಂದಲೇ ಕನ್ನಡ ಭಾಷೆ ಕಲಿಯಲು ಆರಂಭಿಸಿದೆ. ಯಕ್ಷಗಾನ, ಸಾಹಿತ್ಯದ ವಿವಿಧ ಪ್ರಕಾರಗಳು, ಅದರಲ್ಲೂ ಮುಖ್ಯವಾಗಿ ವಚನ ಸಾಹಿತ್ಯದಲ್ಲಿ ನನಗೆ ಬಹಳ ಆಸಕ್ತಿ. ಬಸವೇಶ್ವರ, ಅಲ್ಲಮಪ್ರಭು, ಅಕ್ಕಮಹಾದೇವಿ ಅವರ ವಚನಗಳು, ಶರಣರ ಆಂದೋಲನ ನನ್ನನ್ನು ಪ್ರಭಾವಿಸಿವೆ.
ಇದು ನನ್ನ ಮನೆ:
ಉತ್ತರಪ್ರದೇಶದ ಫಿರೊಜಾಬಾದ್ ನನ್ನ ಸ್ವಂತ ಊರು. ಬಾಲ್ಯದಿಂದಲೇ ನನಗೆ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಇತ್ತು. ಕಾಲೇಜು ದಿನಗಳಲ್ಲಿ ಅನೇಕ ಸಾಹಿತಿಗಳ ಜೊತೆ ಒಡನಾಟವಿತ್ತು. ಕರ್ನಾಟಕದಲ್ಲಿ ನನ್ನ ಈ ಆಸಕ್ತಿಗೆ ಮತ್ತಷ್ಟು ಪುಷ್ಟಿ ನೀಡಿದ್ದು, ನಾನು ಶಿವಮೊಗ್ಗದಲ್ಲಿದ್ದಾಗ. ಅಲ್ಲಿದ್ದಾಗ ರಂಗಕರ್ಮಿ ಕೆ.ವಿ. ಸುಬ್ಬಣ್ಣನವರ ಪರಿಚಯ ಆಯ್ತು. ಅವರ ಮೂಲಕ ಗೋಪಾಲಕೃಷ್ಣ ಅಡಿಗರು, ಸಿದ್ಧಲಿಂಗಯ್ಯ ಮುಂತಾದ ಕವಿ, ಸಾಹಿತಿಗಳು ಪರಿಚಯವಾದರು. ಆಗ ನನಗೆ “ಕರ್ನಾಟಕ ನನ್ನ ಮನೆ’ ಎಂಬ ಭಾವನೆ ಮೂಡಿತು. ಕನ್ನಡ ಸಾಹಿತ್ಯವನ್ನು ಓದಲಿಕ್ಕೆ ಆಗದಿದ್ದರೂ, ಅದರ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ಗೋಪಾಲಕೃಷ್ಣ ಅಡಿಗರ ಕವನಗಳನ್ನು ಕನ್ನಡದಿಂದ ಹಿಂದಿಗೆ ತರ್ಜುಮೆ ಮಾಡಲು ಆರಂಭಿಸಿ, ಅದರಲ್ಲಿ ಯಶಸ್ವಿಯಾದೆ.
ನನಗೆ ಬಸವ ಸಮಿತಿಯಿಂದ “ವಚನ ಶ್ರೀ’ ಗೌರವ ನೀಡಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆದಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ವಚನದ ಮೂಲಕ ತಮ್ಮ ಭಾಷಣ ಆರಂಭಿಸಿದ್ದರು, “ಇವ ನಮ್ಮವ ಇವ ನಮ್ಮವ…’ ಎಂದು. ಈ ಮಾತನ್ನು ನನ್ನ ಕುರಿತು ಹೇಳಿದ್ದರು. ಮೈಸೂರಿನಿಂದ ಮಂಗಳೂರಿನವರೆಗೆ, ಕರಾವಳಿಯಿಂದ ಮಲೆನಾಡಿನ ವರೆಗೆ ಎಲ್ಲವೂ ರಮಣೀಯ. ಕರ್ನಾಟಕದಲ್ಲಿ ಅಪಾರ ಸ್ನೇಹ ಬಳಗ ಸಂಪಾದಿಸಿದ್ದೇನೆ.
-ಅಜಯ್ ಕುಮಾರ್ ಸಿಂಗ್,ನಿವೃತ್ತ ಐಪಿಎಸ್ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lucknow: ಹೊಟೇಲ್ ಬಳಿಕ 7 ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ
Jammu: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸೋದರ, ಬಿಜೆಪಿ ಶಾಸಕ ದೇವೇಂದ್ರ ಸಿಂಗ್ ರಾಣಾ ನಿಧನ
New Delhi: ಹಬ್ಬದ ಋತು; ದೇಶದಲ್ಲಿ 4.5 ಲಕ್ಷ ವಾಹನಗಳ ದಾಖಲೆ ಮಾರಾಟ!
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
Ranchi: ಹೇಮಂತ್ ಸೊರೇನ್ ವಯಸ್ಸು 5 ವರ್ಷದಲ್ಲಿ 7 ವರ್ಷ ಹೆಚ್ಚಳ!; ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.