ಪಂಚಾಯತ್ ಸದಸ್ಯರ ಗೌರವಧನ ಪರಿಷ್ಕರಣೆ ಅನಿವಾರ್ಯ
ಸಂವಿಧಾನದ 73ನೇ ತಿದ್ದುಪಡಿಯ ಅನಂತರ ದೇಶಾದ್ಯಂತ 3 ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ.
Team Udayavani, Apr 26, 2022, 10:20 AM IST
ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮ, ನೀರು, ವಸತಿ, ಆರೋಗ್ಯ ಮತ್ತು ಶಿಕ್ಷಣ ಮುಂತಾದ ಪ್ರಮುಖ ಕಾರ್ಯಕ್ರಮಗಳನ್ನು ಪಂಚಾಯತ್ ಮಟ್ಟದಲ್ಲಿ ಪರಿಣಾಮಕಾರಿ ಯಾಗಿ ಜಾರಿಗೊಳಿಸುವಲ್ಲಿ ಪಂ. ಪ್ರತಿನಿಧಿಗಳ ಪಾತ್ರ ಪ್ರಮುಖವಾದುದಾಗಿದೆ.
ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ದೇಶ. ಪ್ರಜಾಪ್ರಭುತ್ವದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಹೆಚ್ಚಿನ ಮಹತ್ವವಿದೆ. ಪಂಚಾಯತ್ ರಾಜ್ ವ್ಯವಸ್ಥೆ ಯನ್ನು ಪ್ರಜಾಪ್ರಭುತ್ವದ ಬುನಾದಿ ಎಂದು ಕರೆಯುತ್ತಾರೆ. ಪಂಚಾಯತ್ ರಾಜ್ ವ್ಯವಸ್ಥೆ ಸಂವಿಧಾನದ 73ನೇ ತಿದ್ದು ಪಡಿಗಿಂತಲೂ ಮುಂಚಿತವಾಗಿ ದೇಶದಲ್ಲಿ ಬೇರು ಬಿಟ್ಟಿರುವುದು ನಮಗೆಲ್ಲ ತಿಳಿದ ವಿಷಯವಾಗಿದೆ. ಸಂವಿಧಾನದ 73ನೇ ತಿದ್ದುಪಡಿಯ ಅನಂತರ ದೇಶಾದ್ಯಂತ 3 ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ.
1993ರಲ್ಲಿ ಸಂವಿಧಾನದ ತಿದ್ದುಪಡಿಯ ಆಧಾರದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ಜಾರಿಗೆ ತರಲಾಯಿತು. ಅನಂತರ ಕರ್ನಾಟಕದಲ್ಲಿ 6 ಅವಧಿಗೆ ಚುನಾ ವಣೆಗಳು ನಡೆದಿವೆ. 6ನೇ ಅವ ಧಿಯ ಚುನಾಯಿತ ಪ್ರತಿನಿಧಿಗಳು ಪ್ರಸಕ್ತ ಗ್ರಾ. ಪಂ.ಗಳ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಅಧಿಕಾರ ವಿಕೇಂದ್ರೀಕರಣದ ಆಶಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಯತ್ನಗಳನ್ನು ಮಾಡುತ್ತಿವೆ. ಗ್ರಾ. ಪಂ.ಗಳಿಗೆ ಹೆಚ್ಚಿನ ಅಧಿಕಾರ ಮತ್ತು ಕಾರ್ಯಕ್ರಮಗಳ ಅನುಷ್ಠಾನದ ಹೊಣೆಗಾರಿಕೆ ವರ್ಗಾಯಿಸಲಾಗುತ್ತದೆ.
ಕಾರ್ಯಕ್ರಮಗಳಿಗೆ ಅನುಗುಣವಾಗಿ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಅನುದಾನವನ್ನೂ ಬಿಡುಗಡೆ ಮಾಡಲಾಗುತ್ತಿದೆ. ಪ್ರಮುಖವಾಗಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮ, ನೀರು, ವಸತಿ, ಆರೋಗ್ಯ ಮತ್ತು ಶಿಕ್ಷಣ ಮುಂತಾದ ಪ್ರಮುಖ ಕಾರ್ಯಕ್ರಮಗಳನ್ನು ಪಂಚಾಯತ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಪಂಚಾಯತ್ ಪ್ರತಿನಿಧಿಗಳ ಪಾತ್ರ ಪ್ರಮುಖವಾದುದಾಗಿದೆ.
ಗ್ರಾಮೀಣಾಭಿವೃದ್ಧಿ ದೃಷ್ಟಿಯಿಂದ ಇದು ಇಂದಿನ ತುರ್ತು ಆವಶ್ಯಕತೆ ಎಂದರೆ ತಪ್ಪಲ್ಲ. ಈ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪಂಚಾಯತ್ ಪ್ರತಿನಿಧಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಈಗಲೂ ಕೂಡ ಶ್ರಮಿಸುತ್ತಿದ್ದಾರೆ.
ಇಷ್ಟು ಜವಾಬ್ದಾರಿ ಮತ್ತು ಕರ್ತವ್ಯ ಇರುವ ಪ್ರತಿನಿಧಿಗಳ ಈಗಿರುವ ಕನಿಷ್ಠ ಗೌರವಧನ ಕಳೆದ 6 ವರ್ಷಗಳಿಂದ ಪರಿಷ್ಕರಣೆ ಆಗಿರುವುದಿಲ್ಲ. ಜವಾಬ್ದಾರಿ ಇರುವ ಪ್ರತಿನಿಧಿ ತನ್ನ ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಲು, ಸಮಸ್ಯೆಗೆ ಪರಿಹಾರ ನೀಡಲು, ಸಂಬಂಧಪಟ್ಟ ಅರ್ಜಿಯ ಕುರಿತು ಮಾಹಿತಿ ನೀಡಲು ಅದಕ್ಕಿಂತ ಹೆಚ್ಚಾಗಿ ಪಂಚಾಯತ್ ಅಧಿಕಾರಿಗಳು ಮತ್ತು ಜನರ ಮಧ್ಯೆ ಸಂವಹನ ಮಾಧ್ಯಮವಾಗಿ ಸಹಕರಿಸಲು ಪ್ರತೀ ದಿನ ಅವನ ಎಲ್ಲ ಕಾರ್ಯವನ್ನು ಬದಿಗೊತ್ತಿ ಪಂಚಾಯತ್‌ಗೆ ಭೇಟಿ ನೀಡಬೇಕಾಗುತ್ತದೆ. ಅಲ್ಲದೇ ಪ್ರತೀ ಪ್ರತಿನಿಧಿಯೂ ತಿಂಗಳಿಗೆ 6 ರಿಂದ 8 ಬಾರಿಯಾದರೂ ಒಂದಲ್ಲ ಒಂದು ಸಭೆಗೋ ತರಬೇತಿಗೋ ಹಾಜರಾಗಬೇಕಾಗುತ್ತದೆ. ಈ ಕಾರ್ಯವನ್ನು ಪ್ರತೀ ಪ್ರತಿನಿಧಿಯೂ ಕಾಯಾ-ವಾಚಾ-ಮನಸಾ ರೂಪದಲ್ಲಿ ಮಾಡುತ್ತಿದ್ದಾನೆ.
ಪಂಚಾಯತ್ ಪ್ರತಿನಿಧಿ ಗಳು ಶೇ. 100ರಷ್ಟು ಗ್ರಾಮೀಣ ಪ್ರದೇಶದ ವರಾಗಿದ್ದು ಹೆಚ್ಚಿನವರಿಗೆ ಯಾವುದೇ ಇತರ ಮೂಲ ಆದಾಯ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಆಡಳಿತ ಚುನಾವಣೆಗೆ ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರು ಮತ್ತು ಮೀಸಲಾತಿ ಕ್ಷೇತ್ರ ಗಳಿಂದ ಆಯ್ಕೆ ಆಗಿದ್ದು ಅವರ ದೈನಂದಿನ ಚಟುವಟಿಕೆಗಳಿಗೆ ಕೂಲಿ ಕೆಲಸ ಮತ್ತು ಸ್ವಂತ ಕೆಲಸವನ್ನು ನಂಬಿರುತ್ತಾರೆ. ಅವರಿಂದ ಗ್ರಾಮೀಣ ಪಂಚಾಯತ್ ಮಟ್ಟದಲ್ಲಿ ಈಗಿರುವ ಪರಿಸ್ಥಿತಿಯಲ್ಲಿ ಉತ್ತಮ ಆಡಳಿತ ನಿರೀಕ್ಷಿಸುವುದು ತಪ್ಪಾದರೂ ಅವರ ಕರ್ತವ್ಯವನ್ನು ಬಲು ಕಷ್ಟದಿಂದ ಮಾಡುತ್ತಿದ್ದು ಶ್ಲಾಘನೀಯವಾಗಿದೆ. ಆದರೆ ಯಾವುದೇ ಸರಕಾರ ಬಂದರೂ ಗೌರವಧನ ಹೆಚ್ಚಿಸುವ ಯೋಚನೆ ಮತ್ತು ಯೋಜನೆ ಕಾರ್ಯರೂಪಕ್ಕೆ ತಾರದೆ ರಾಜ್ಯ ಪ್ರತಿನಿಧಿಗಳ ಗೌರವಧನವನ್ನು ದುಪ್ಪಟ್ಟುಗೊಳಿಸುವಲ್ಲಿ ಪಕ್ಷಾತೀತವಾಗಿ ಒಕ್ಕೊರಲಿನಿಂದ ಮಸೂದೆಗೆ ಅಂಗೀಕಾರ ನೀಡಿರುವುದು ವಿಪರ್ಯಾಸ ಮತ್ತು ಪ್ರತೀ 5 ವರ್ಷಗಳಿಗೊಮ್ಮೆ ಶಾಸಕರ, ಸಚಿವರ ವೇತನ ಭತ್ತೆ ಪರಿಷ್ಕರಣೆಯಾಗಬೇಕು ಎಂದು ಮಸೂದೆಯಲ್ಲಿ ಸೇರಿಸಿರುವುದು ಕುತೂಹಲಕಾರಿಯಾದ ಅಂಶವಾಗಿದೆ.
ಪಂಚಾಯತ್ ಪ್ರತಿನಿಧಿಗಳಿಗೆ ಯಾವ ರೀತಿಯ ಆರ್ಥಿಕ ಸಮಸ್ಯೆ ಎನ್ನುವ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ತನ್ನ ಸ್ವಂತ ಕಾರ್ಯವನ್ನು ಬಿಟ್ಟು ಸಂಪಾದನೆ ಮಾಡಲು ಸಮಯ ಸಿಗದ ಸ್ಥಿತಿ ಒಂದೆಡೆಯಾದರೆ ಅತೀ ಬಡವರ ಕೆಲವೊಂದು ಪಂಚಾಯತ್ ಕಾರ್ಯ ಮಾಡಿಕೊಡಲು ತನ್ನ ಸ್ವಂತ ಹಣವನ್ನು ಅನಿವಾರ್ಯವಾಗಿ ಉಪಯೋಗಿಸಬೇಕಾಗಿರುತ್ತದೆ. ಅಲ್ಲದೇ ಪ್ರಾಕೃತಿಕ ವಿಕೋಪ, ಆತ್ಮಹತ್ಯೆ, ಅಸ್ವಾಭಾವಿಕ ಮರಣದ ಸಂದರ್ಭದಲ್ಲಿ ಸ್ವಾಭಿಮಾನದ ಪ್ರತಿಷ್ಠೆಗಾಗಿ ತನ್ನ ಜೇಬಿಗೆ ಕೈ ಹಾಕುವ ಸ್ಥಿತಿ ಎದುರಾಗುತ್ತದೆ. ಅದರಲ್ಲಿಯೂ ಜನರು ನಮ್ಮ ಮೇಲೆ ಇಟ್ಟ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಗೆ ಒಳಗಾಗಿ ಕೆಲವೊಂದು ಕಾರ್ಯಕ್ರಮಗಳಿಗೆ ವಂತಿಗೆ ನೀಡುವ ಸಂಪ್ರದಾಯವು ಪಂಚಾಯತ್ ಪ್ರತಿನಿಧಿಗೆ “ಸಾಲಮಾಡಿ ತುಪ್ಪ ತಿನ್ನುವ” ಸ್ಥಿತಿಯಂತಾಗಿದೆ.
ಮುಂದಿನ ದಿನಗಳಲ್ಲಿ ಸರಕಾರ ಪಂಚಾಯತ್ ಪ್ರತಿನಿಧಿಗಳ ಗೌರವಧನ ಹೆಚ್ಚಳ ಮಾಡದಿದ್ದರೆ ಪಂಚಾಯತ್ ರಾಜ್ ವ್ಯವಸ್ಥೆಯ ಅಭಿವೃದ್ಧಿಗೆ ಹೊಡೆತ ಬೀಳುವ ಸಂದರ್ಭ ಬಂದರೂ ಬರಬಹುದು. ಸ್ವಾಭಿಮಾನಿಗಳಾದ ಪಂಚಾಯತ್ ಪ್ರತಿನಿಧಿಗಳು ಸರಕಾರದಿಂದ ಇಂತಿಷ್ಟು ನೀಡಿ ಎಂದು ಕೈ ಚಾಚುವಷ್ಟು ಸಣ್ಣವರಲ್ಲ. ಸರಕಾರದ ಪ್ರತಿನಿಧಿಗಳು ಇದರ ಕುರಿತು ಚಿಂತನೆ ನಡೆಸಿ ಪ್ರಜಾಪ್ರಭುತ್ವದ ತಾಯಿ ಬೇರಿಗೆ ನೀರೆರೆದರೆ ಉತ್ತಮ ಫಲ ನೀಡಿ ಗ್ರಾಮ ಸ್ವ-ರಾಜ್ಯದ ಕನಸು ನನಸಾಗಬಹುದೇನೋ.
– ಕನ್ನಾರು ಕಮಲಾಕ್ಷ ಹೆಬ್ಟಾರ್ ಚೇರ್ಕಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.