Rohit Army ವಿಶ್ವಕಪ್‌ನಲ್ಲಿ ಸೋಲನ್ನೇ ಕಾಣದ ಮಹಾರಥಿಗಳಿವರು…
Team Udayavani, Nov 19, 2023, 6:10 AM IST
ಇನ್ನೇನು ಒಂದು ಹೆಜ್ಜೆಯಷ್ಟೇ. ಭಾರತ ವಿಶ್ವಕಪ್ ಒಲಿಸಿಕೊಳ್ಳುವ ಹೊತ್ತು ಇದು. ಈ ಕೂಟ ಆರಂಭವಾದಾಗಿನಿಂದ, ಫೈನಲ್‌ವರೆಗೆ ಅಜೇಯವಾಗಿ ಭಾರತ ನಡೆದುಬಂದಿದೆ. ಅಂದರೆ ಕಳೆದ 10ಕ್ಕೆ 10 ಪಂದ್ಯಗಳನ್ನೂ ಗೆದ್ದು ಸೋಲಿಲ್ಲದ ಸರದಾರನಾಗಿ ಬಂದಿದೆ. ಈ ಯಶಸ್ವಿ ದಂಡಯಾತ್ರೆಗೆ ಭಾರತ ತಂಡದ ಎಲ್ಲ ಸಮರ ಕಲಿಗಳೂ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಭಾರತ ಇಡೀ ತಂಡವಾಗಿ ಆಡಿದ್ದು, ಪ್ರತಿಯೊಬ್ಬರ ಫಾರ್ಮ್ ಕೂಡ ಈ ಯಶಸ್ಸಿನಲ್ಲಿ ಸೇರಿದೆ.
ರೋಹಿತ್ ಶರ್ಮ, ಬ್ಯಾಟರ್ ರನ್: 550
ಭಾರತ ತಂಡದ ಹಿಟ್‌ಮ್ಯಾನ್ ಆಗಿರುವ ನಾಯಕ ರೋಹಿತ್ ಶರ್ಮ, ವಿಶ್ವಕಪ್‌ನ ಬಹುತೇಕ ಪಂದ್ಯಗಳಲ್ಲೂ ತಂಡಕ್ಕೆ ಅತ್ಯಂತ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಹಾಗೆ ನೋಡಿದರೆ ಮೊದಲ ಪಂದ್ಯದಲ್ಲಿ ಮಾತ್ರ ರೋಹಿತ್ ವೈಫಲ್ಯ ಅನುಭವಿಸಿದ್ದು. ಆದರೆ ಮುಂದಿನ ಎಲ್ಲ ಪಂದ್ಯಗಳಲ್ಲೂ ಅವರ ಸಮಚಿತ್ತ ಮತ್ತು ಹೊಡಿಬಡಿ ಆಟವನ್ನು ಕಾಣಬಹುದು. ಮೊದಲ 10 ಓವರ್ ಅಥವಾ ಪವರ್‌ಪ್ಲೇನಲ್ಲಿ ಹೆಚ್ಚು ರನ್ ಗಳಿಸಿದರೆ, ಅನಂತರದಲ್ಲಿ ನಿಧಾನಕ್ಕೆ ವಿಕೆಟ್ ಉಳಿಸಿಕೊಂಡು ಆಡಬಹುದು ಎಂಬುದು ಅವರ ಚಿಂತನೆ. ಅಲ್ಲದೆ ಆರಂಭದಲ್ಲಿ ಉತ್ತಮ ರನ್ ಕಲೆಹಾಕಿದರೆ, ಅನಂತರದ ಬ್ಯಾಟಿಗರಿಗೆ ಅಷ್ಟೇನೂ ಹೊರೆ ಬೀಳುವುದಿಲ್ಲ ಎಂಬ ಚಿಂತನೆಯೂ ಅವರಲ್ಲಿದೆ. ರೋಹಿತ್ ಬ್ಯಾಟಿಂಗ್ ಅಬ್ಬರ ಶುರುವಾಗುವುದೇ 2ನೇ ಪಂದ್ಯದಿಂದ. ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದಲ್ಲಿ 84 ಎಸೆತಗಳಲ್ಲಿ 131 ರನ್ ಚಚ್ಚಿ ಭಾರತವನ್ನು ಸುಲಭವಾಗಿ ಗುರಿ ಮುಟ್ಟಿಸಿದರು. ಪಾಕ್ ವಿರುದ್ಧ 51, ಬಾಂಗ್ಲಾ ವಿರುದ್ಧ 48, ನ್ಯೂಜಿಲ್ಯಾಂಡ್ ವಿರುದ್ಧ 46, ಇಂಗ್ಲೆಂಡ್ ವಿರುದ್ಧ 87, ದಕ್ಷಿಣ ಆಫ್ರಿಕಾ ವಿರುದ್ಧ 40, ನೆದರ್ಲೆಂಡ್ಸ್ ವಿರುದ್ಧ 61 ರನ್ ಗಳಿಸಿದರು. ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 47 ರನ್ ಗಳಿಸಿದ ರೋಹಿತ್ ಉತ್ತಮ ಅಡಿ ಪಾಯ ಹಾಕಿಕೊಟ್ಟರು.
ವಿರಾಟ್ ಕೊಹ್ಲಿ, ಬ್ಯಾಟರ್ ರನ್: 711
ಸದ್ಯ ವಿಶ್ವಕಪ್‌ನ ಟಾಪ್ ಸ್ಕೋರರ್ ಆಗಿರುವ ವಿರಾಟ್ ಕೊಹ್ಲಿ ಈಗಾಗಲೇ ತಮ್ಮ ಹೆಸರಿಗೆ ನಾನಾ ದಾಖಲೆಗಳನ್ನೂ ಬರೆಸಿಕೊಂಡಿದ್ದಾರೆ. ಭಾರತ 10ಕ್ಕೆ 10 ಗೆಲ್ಲುವಲ್ಲಿ ವಿರಾಟ್ ಕೊಹ್ಲಿ ಪಾತ್ರ ದೊಡ್ಡದು. ಅ.8ರಂದು ಭಾರತದ ಅಭಿಯಾನ ಶುರುವಾಗಿದ್ದು, ಮೊದಲ ಪಂದ್ಯ ಆಸ್ಟ್ರೇಲಿಯ ವಿರುದ್ಧ ನಡೆದಿತ್ತು. ಈ ಪಂದ್ಯದಲ್ಲಿ ತಮ್ಮ ಕರಾಮತ್ತು ತೋರಿಸಿದ ಕೊಹ್ಲಿ 85 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಅಫ್ಘಾನಿಸ್ಥಾನ ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಕೊಹ್ಲಿ ಕಾಣಿಕೆ 55 ರನ್. ಬಾಂಗ್ಲಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಕೊಹ್ಲಿ 97 ಎಸೆತಗಳಲ್ಲಿ 103 ರನ್ ಗಳಿಸಿದರು. ನ್ಯೂಜಿಲ್ಯಾಂಡ್ ವಿರುದ್ಧ 95 ರನ್ ಗಳಿಸಿ ಐದು ರನ್‌ನಿಂದ ಶತಕ ವಂಚಿತರಾದರು. ಶ್ರೀಲಂಕಾ ವಿರುದ್ಧ 88, ಆಫ್ರಿಕಾ ವಿರುದ್ಧ 101 ರನ್ ಗಳಿಸಿದರು. ನೆದರ್ಲೆಂಡ್ಸ್ ವಿರುದ್ಧ 51 ರನ್ ಗಳಿಸಿದರು. ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 117 ರನ್ ಗಳಿಸಿದ ಕೊಹ್ಲಿ, ತಮ್ಮ ವೃತ್ತಿ ಬದುಕಿನ 50ನೇ ಸೆಂಚುರಿ ಬಾರಿಸಿ ದಾಖಲೆ ನಿರ್ಮಿಸಿದರು.
ಕೆ.ಎಲ್.ರಾಹುಲ್, ಬ್ಯಾಟರ್ ಕಮ್ ವಿಕೆಟ್ ಕೀಪರ್ ರನ್: 386
ವಿಕೆಟ್ ಕೀಪರ್ ಆಗಿ, ತಂಡದ ಪ್ರಮುಖ ಬ್ಯಾಟಿಗರಾಗಿ ಮಿಂಚುತ್ತಿದ್ದಾರೆ ಕೆ.ಎಲ್.ರಾಹುಲ್. ಫಿಟ್‌ನೆಸ್ ಸಮಸ್ಯೆಯಿಂದಾಗಿ ದೂರ ಉಳಿದಿದ್ದ ರಾಹುಲ್ ಏಷ್ಯಾ ಕಪ್ ಸರಣಿಯಲ್ಲಿ ತಂಡ ಸೇರಿಕೊಂಡು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ದ್ದರು. ಬಳಿಕ ವಿಶ್ವಕಪ್‌ನಲ್ಲೂ ಸೊಗಸಾದ ಕೀಪಿಂಗ್ ಮತ್ತು ಬ್ಯಾಟಿಂಗ್ ನಡೆಸುತ್ತಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜತೆ ಸೇರಿ ಅಜೇಯ 97 ರನ್ ಗಳಿಸಿ ತಂಡವನ್ನು ಗೆಲ್ಲಿಸಿದ್ದರು. ಅತ್ಯಂತ ಕಷ್ಟ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧ 39 ರನ್ ಬಾರಿಸಿದರು. ನೆದರ್ಲೆಂಡ್ಸ್ ವಿರುದ್ಧ ಕೇವಲ 64 ಎಸೆತಗಳಲ್ಲಿ 102 ರನ್ ಗಳಿಸಿ ಹೊಸ ದಾಖಲೆಯನ್ನೇ ನಿರ್ಮಿಸಿದರು. ನ್ಯೂಜಿಲ್ಯಾಂಡ್ ವಿರುದ್ಧ ಸೆಮೀಸ್‌ನಲ್ಲಿ 39 ರನ್ ಗಳಿಸಿದರು.
ಶುಭಮನ್ ಗಿಲ್, ಬ್ಯಾಟರ್ ರನ್: 346
ಆರಂಭಿಕನಾಗಿ ರೋಹಿತ್ ಶರ್ಮ ಜತೆ ಸೇರಿ ಉತ್ತಮ ಅಡಿಪಾಯ ಹಾಕಿದವರು ಶುಭಮನ್ ಗಿಲ್. ಮೊದಲ ಕೆಲವು ಪಂದ್ಯಗಳಲ್ಲಿ ಅನಾರೋಗ್ಯದಿಂದಾಗಿ ಆಡದ ಗಿಲ್, ಅನಂತರದಲ್ಲಿ ಕ್ರೀಸ್‌ಗೆ ಕಚ್ಚಿಕೊಂಡರು. ಬಾಂಗ್ಲಾ ದೇಶದ ವಿರುದ್ಧ ಅಮೂಲ್ಯ 53 ರನ್ ಗಳಿಸಿ ತಮ್ಮ ಬ್ಯಾಟಿಂಗ್ ಪ್ರದರ್ಶಿಸಿದರು. ಶ್ರೀಲಂಕಾ ವಿರುದ್ಧ 92 ಎಸೆತಗಳಲ್ಲಿ 92 ರನ್ ಗಳಿಸಿ ಭಾರತಕ್ಕೆ ಗಟ್ಟಿ ಅಡಿಪಾಯ ಹಾಕಿದ್ದರು. ನೆದರ್ಲೆಂಡ್ಸ್ ವಿರುದ್ಧ 51 ರನ್ ಗಳಿಸಿ ರೋಹಿತ್ ಜತೆ ಸೇರಿ ಉತ್ತಮ ಆರಂಭ ಒದಗಿಸಿದರು. ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 80 ರನ್ ಗಳಿಸಿದ ಗಿಲ್‌ಗೆ ಶತಕ ಗಳಿಸುವ ಎಲ್ಲ ಅವಕಾಶಗಳಿದ್ದವು. ಆದರೆ ಗಾಯಗೊಂಡು ಹೊರಹೋಗಿದ್ದರಿಂದ ಸೆಂಚುರಿ ಸ್ಟಾರ್ ಆಗಲು ಆಗಲಿಲ್ಲ.
ಶ್ರೇಯಸ್ ಅಯ್ಯರ್, ಬ್ಯಾಟರ್ ರನ್: 526
ಈ ಬಾರಿಯ ಭಾರತಕ್ಕೆ ಹೆಚ್ಚು ಶಕ್ತಿ ಬಂದಿದ್ದು ಮಿಡಲ್ ಆರ್ಡರ್‌ನಿಂದಾಗಿ. ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ ಅವರ ಬ್ಯಾಟಿಂಗ್ ಫಾರ್ಮ್ ಇದಕ್ಕೆ ಸಹಕಾರಿಯಾಯಿತು. ಪಾಕಿಸ್ಥಾನ ವಿರುದ್ಧ ತಮ್ಮ ಬ್ಯಾಟಿಂಗ್ ವೈಭವ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್, ಅತ್ಯಮೂಲ್ಯ 53 ರನ್ ಗಳಿಸಿ ತಂಡದ ಗೆಲುವಿಗೆ ಸಹಕಾರಿಯಾದರು. ಶ್ರೀಲಂಕಾ ವಿರುದ್ಧವೂ ಅಯ್ಯರ್ ಉತ್ತಮ ಪ್ರದರ್ಶನ ನೀಡಿ 56 ಎಸೆತಗಳಲ್ಲಿ 82 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ 77 ರನ್ ಗಳಿಸಿ ತಂಡದ ಮೊತ್ತ 300 ದಾಟಲು ನೆರವಾದರು. ನೆದರ್ಲೆಂಡ್ಸ್ ವಿರುದ್ಧ 128 ರನ್ ಗಳಿಸಿ ತಂಡದ ಮೊತ್ತ 400 ದಾಟಲು ಕಾರಣವಾದರು. ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಅಮೋಘ 105 ರನ್ ಗಳಿಸಿ ಸತತ 2 ಶತಕ ಬಾರಿಸಿದ ದಾಖಲೆಯನ್ನೂ ಮಾಡಿದರು.
ಸೂರ್ಯಕುಮಾರ್ ಯಾದವ್, ಬ್ಯಾಟರ್ ರನ್: 88
ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಸಿಕ್ಕಾಗಲೆಲ್ಲ ಉತ್ತಮವಾಗಿಯೇ ಆಡಿದ್ದಾರೆ ಸೂರ್ಯಕುಮಾರ್ ಯಾದವ್. ಆದರೆ ಅಗ್ರ ಕ್ರಮಾಂಕದ ಆಟಗಾರರ ಉತ್ತಮ ಪ್ರದರ್ಶನದಿಂದಾಗಿ ಕೆಲವು ಪಂದ್ಯಗಳಲ್ಲಿ ಬ್ಯಾಟಿಂಗ್ ಅವಕಾಶವೇ ಸಿಗಲಿಲ್ಲ. ಇಂಗ್ಲೆಂಡ್ ವಿರುದ್ಧ ತಂಡ ಸಂಕಷ್ಟದಲ್ಲಿದ್ದಾಗ ಸೂರ್ಯಕುಮಾರ್ 49 ರನ್ ಗಳಿಸಿ ಆಸರೆಯಾದರು. ಆಫ್ರಿಕಾ ವಿರುದ್ಧ 22 ರನ್ ಗಳಿಸಿದರು.
ರವೀಂದ್ರ ಜಡೇಜ, ಆಲ್‌ರೌಂಡರ್ ವಿಕೆಟ್: 16
ವಿಶ್ವಕಪ್‌ನ ಆರಂಭದಿಂದಲೂ ಪರಿಣಾಮಕಾರಿ ಬೌಲಿಂಗ್ ಮತ್ತು ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿಕೊಂಡು, ತಂಡದ ನಂಬುಗೆಯ ಆಲ್‌ರೌಂಡರ್ ಆಗಿದ್ದಾರೆ ರವೀಂದ್ರ ಜಡೇಜ. ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯದಲ್ಲಿ 28 ರನ್ ಕೊಟ್ಟು 3 ವಿಕೆಟ್ ಪಡೆದು, ತಮ್ಮ ಬೌಲಿಂಗ್‌ನ ಮೊನಚು ಪ್ರದರ್ಶಿಸಿದ್ದರು. ಬಾಂಗ್ಲಾ ವಿರುದ್ಧ 38 ರನ್‌ಗೆ 2 ವಿಕೆಟ್ ಪಡೆದು ಮಿಂಚಿದರು. ಅಪಾಯಕಾರಿ ಲಿಟನ್ ದಾಸ್ ಮತ್ತು ನಾಯಕ ನಜ್ಮುಲ್ ಹುಸೈನ್ ಶಂಟೋ ಅವರ ವಿಕೆಟ್ ಪಡೆದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಮೊನಚಾದ ದಾಳಿ ಮಾಡಿದ ಜಡೇಜ 33 ರನ್‌ಗೆ 5 ವಿಕೆಟ್ ಪಡೆದರು. ನೆದರ್ಲೆಂಡ್ಸ್ ವಿರುದ್ಧ 2 ವಿಕೆಟ್ ಸಿಕ್ಕಿತು.
ಜಸ್‌ಪ್ರೀತ್ ಬುಮ್ರಾ, ಬೌಲರ್ ವಿಕೆಟ್: 18
ಭಾರತದ ಪ್ರಮುಖ ಬೌಲರ್ ಆಗಿರುವ ಜಸ್‌ಪ್ರೀತ್ ಬುಮ್ರಾ, ಬಹುತೇಕ ಎಲ್ಲ ಪಂದ್ಯಗಳಲ್ಲೂ ತಮ್ಮ ಬೌಲಿಂಗ್ ತೀವ್ರತೆಯನ್ನು ಪ್ರದರ್ಶಿಸಿಕೊಂಡೇ ಬಂದಿದ್ದಾರೆ. ಮೊನಚಾದ ದಾಳಿ, ರನ್ ನಿಯಂತ್ರಣ ಹಾಗೂ ವಿಕೆಟ್ ತೆಗೆದುಕೊಳ್ಳುವ ಚಾಕಚಕ್ಯತೆಯಿಂದಾಗಿ ಎದುರಾಳಿ ಆಟಗಾರರು ಒಂದು ಕ್ಷಣ ಹೆದರುವಂತೆ ಮಾಡುತ್ತಾರೆ. ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯದಲ್ಲಿ 38 ರನ್ ನೀಡಿ 2 ವಿಕೆಟ್ ಪಡೆದು ಉತ್ತಮ ಅಭಿಯಾನವನ್ನೇ ಆರಂಭಿಸಿದ್ದರು. ಅಫ್ಘಾನಿಸ್ಥಾನ ವಿರುದ್ಧದ ಎರಡನೇ ಪಂದ್ಯದಲ್ಲಿ ಬುಮ್ರಾ 39 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಪಾಕ್ ವಿರುದ್ಧದ 3ನೇ ಪಂದ್ಯದಲ್ಲಿ ಬುಮ್ರಾ ದಾಳಿ ಇನ್ನಷ್ಟು ಪ್ರಖರವಾಗಿತ್ತು. 19 ರನ್‌ಗೆ 2 ವಿಕೆಟ್ ಪಡೆದಿದ್ದರು. ಬಾಂಗ್ಲಾ ವಿರುದ್ಧ 41 ರನ್ ನೀಡಿ 2 ವಿಕೆಟ್, ಇಂಗ್ಲೆಂಡ್ ವಿರುದ್ಧ 32ಕ್ಕೆ 3, ನೆದರ್ಲೆಂಡ್ಸ್ ವಿರುದ್ಧ 2 ವಿಕೆಟ್ ಪಡೆದರು.
ಮೊಹಮ್ಮದ್ ಶಮಿ, ಬೌಲರ್ ವಿಕೆಟ್: 23
ಈ ಬಾರಿ ಭಾರತ ಫೈನಲ್ ಸೇರಿರುವುದರ ಹಿಂದೆ ಮೊಹಮ್ಮದ್ ಶಮಿ ಪಾತ್ರ ಹಿರಿದು. ಕೇವಲ 6 ಪಂದ್ಯಗಳಲ್ಲಿ ಆಡಿದ್ದರೂ, ತಮ್ಮ ಮೊನಚಾದ ದಾಳಿಯಿಂದಾಗಿ ಎದುರಾಳಿ ತಂಡದ ಬೆನ್ನುಮೂಳೆ ಮುರಿದರು. ಬಾಂಗ್ಲಾ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರಿಂದ, ಈ ಸ್ಥಾನಕ್ಕೆ ಬಂದವರೇ ಮೊಹಮ್ಮದ್ ಶಮಿ. ಸಿಕ್ಕ ಮೊದಲ ಅವಕಾಶದಲ್ಲೇ ಮಿಂಚಿದ ಶಮಿ, ನ್ಯೂಜಿಲ್ಯಾಂಡ್‌ನ 5 ವಿಕೆಟ್ ಪಡೆದರು. ಹೆಚ್ಚು ಕಡಿಮೆ ಪ್ರಮುಖ ಆಟಗಾರರೆಲ್ಲರೂ ಶಮಿ ಬಲೆಗೇ ಬಿದ್ದಿದ್ದರು. ಇಂಗ್ಲೆಂಡ್ ವಿರುದ್ಧ ಭಾರತ ಕಡಿಮೆ ಸ್ಕೋರ್ ಮಾಡಿದ್ದರೂ ಗೆಲುವಿನಲ್ಲಿ ಶಮಿ ನೆರವಾದರು. 22 ರನ್‌ಗೆ 4 ವಿಕೆಟ್ ಪಡೆದು ಮಿಂಚಿದರು. ಲಂಕಾ ವಿರುದ್ಧವೂ ಶಮಿ ಬೌಲಿಂಗ್ ದಾಳಿ ಮುಂದುವರಿದು ಕೇವಲ 18 ರನ್‌ಗೆ 5 ವಿಕೆಟ್ ಪಡೆದರು. ಆಫ್ರಿಕಾ ವಿರುದ್ಧ 2 ವಿಕೆಟ್ ಪಡೆದರು. ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ 7 ವಿಕೆಟ್ ಪಡೆದ ಶಮಿ, ಹೊಸ ದಾಖಲೆಯನ್ನೇ ನಿರ್ಮಿಸಿದರು. ಭಾರತದ ಗೆಲುವಿಗೂ ಕಾರಣರಾದರು.
ಮೊಹಮ್ಮದ್ ಸಿರಾಜ್, ಬೌಲರ್ ವಿಕೆಟ್: 13
ಏಷ್ಯಾ ಕಪ್‌ನಲ್ಲಿ ಶ್ರೀಲಂಕಾ ಬ್ಯಾಟಿಗರ ಆತಂಕಕ್ಕೆ ಕಾರಣವಾಗಿದ್ದ ಮೊಹಮ್ಮದ್ ಸಿರಾಜ್, ವಿಶ್ವಕಪ್‌ನಲ್ಲೂ ಅದೇ ಲಯ ಮುಂದುವರಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಪ್ರಮುಖ 2 ವಿಕೆಟ್ ಕಿತ್ತು ತಮ್ಮ ಬೌಲಿಂಗ್‌ನ ಮೊನಚು ತೋರಿಸಿದ್ದರು. ಆರಂಭಿಕ ಅಬ್ದುಲ್ ಶಫೀಕ್ ಮತ್ತು ಬಾಬರ್ ಆಜಂರನ್ನು ಸಿರಾಜ್ ಪೆವಿಲಿಯನ್‌ಗೆ ಕಳುಹಿಸಿದ್ದರು. ಬಾಂಗ್ಲಾ ವಿರುದ್ಧ 60ಕ್ಕೆ 2 ವಿಕೆಟ್ ಪಡೆದರು. ಲಂಕಾ ವಿರುದ್ಧ ಸಿರಾಜ್ ಬೌಲಿಂಗ್ ಹೆಚ್ಚು ಮೊನಚಾಗಿತ್ತು. ಇಲ್ಲಿ 16 ರನ್‌ಗೆ 3 ವಿಕೆಟ್ ಪಡೆದು ಸಿರಾಜ್ ಮಿಂಚಿದರು. ನೆದರ್ಲೆಂಡ್ ವಿರುದ್ಧ 2 ವಿಕೆಟ್ ಪಡೆದು ಮಿಂಚಿದರು.
ಕುಲದೀಪ್ ಯಾದವ್, ಸ್ಪಿನ್ ಬೌಲರ್ ವಿಕೆಟ್: 15
ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಕುಲದೀಪ್ ಯಾದವ್ ಅವರ ಕೊಡುಗೆಯನ್ನು ಮರೆಯುವಂತಿಲ್ಲ. ಪ್ರತಿ ಪಂದ್ಯದಲ್ಲೂ ರನ್ ನಿಯಂತ್ರಣದ ಜತೆಗೆ ವಿಕೆಟ್ ಕೀಳುತ್ತಲೇ ಬಂದಿರುವ ಅವರು, ಎದುರಾಳಿ ಬ್ಯಾಟಿಗರಿಗೆ ಸಿಂಹಸ್ವಪ್ನವಾಗಿದ್ದಾರೆ. ಪಾಕಿಸ್ತಾನ ವಿರುದ್ಧ 35 ರನ್ ನೀಡಿ 2 ವಿಕೆಟ್ ಪಡೆದು ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇಂಗ್ಲೆಂಡ್ ವಿರುದ್ಧ 2, ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 7 ರನ್ ನೀಡಿ 2 ವಿಕೆಟ್ ಪಡೆದದ್ದು ಶ್ರೇಷ್ಠ ಸಾಧನೆಯಾಗಿತ್ತು. ನೆದರ್ಲೆಂಡ್ ವಿರುದ್ಧ 2 ವಿಕೆಟ್ ಬಂದಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.