ಕಾಡಿನಲ್ಲೊಂದು ದಿನ.. : ಕಾಟಿಯ ಒಣಜಂಭ ಮುರಿದ ಗಜರಾಜ
Team Udayavani, Jan 21, 2018, 6:07 AM IST
ಮೊದಲನೇ ಕಾಟಿ ತನ್ನ ಭುಜವನ್ನು ಹೊಸದಾಗಿ ಬಂದಿದ್ದ ಕಾಟಿಗೆ ಪ್ರದರ್ಶನ ಮಾಡಿ ಆ ಕೆರೆಗೆ “ನಾನೇ ಸುಲ್ತಾನ್’ ಎಂದು ಬಿಟ್ಟಿತು. ಅಯ್ಯೋ ಪಾಪ, ಬಾಯಾರಿ ಬಂದಿದ್ದ ಎರಡನೇ ಕಾಟಿಗೆ ದಾರಿಯೇ ಇಲ್ಲದೆ ಕೆರೆ ಏರಿಯ ಹತ್ತಿರವಿದ್ದ ರೋಜಾ ಕಡ್ಡಿ ಪೊದೆಯ ಬಳಿ ಹೋಗಿ, ಮಂತ್ರಿ ಆಗಲು ತಮಗೂ ಅವಕಾಶ ಸಿಗಬಹುದೆಂದು ಕಾಯುವವರಂತೆ ಆಸೆಯಿಂದ ಕಾದು ನಿಂತಿತು.
ವನ್ಯಜೀವಿಗಳನ್ನು ಅಭ್ಯಸಿಸಲು ಬಹುಪಯೋಗಿ ಮಾರ್ಗವೆಂದರೆ ಕಾಡಿನಲ್ಲಿ ಮರದ ಮೇಲೆ ಅಟ್ಟಣಿಯನ್ನು ಕಟ್ಟಿ ಕಾದು ಕುಳಿತುಕೊಳ್ಳುವುದು. ಹಿಂದಿನ ಪ್ರಖ್ಯಾತ ಬೇಟೆಗಾರರೆಲ್ಲರೂ ಮಾಡುತ್ತಿದ್ದದ್ದು ಇದೇ ಕೆಲಸ. ಆದರೆ ಆಗ ದನವನ್ನೋ, ಎಮ್ಮೆಯನ್ನೋ, ಕುರಿಯನ್ನೋ ಅಟ್ಟಣಿಯ ಕೆಳಗೆ ಕಟ್ಟಿ ಹುಲಿ, ಚಿರತೆಯಂತಹ ಮಾಂಸಾಹಾರಿ ಪ್ರಾಣಿಗಳಿಗೆ ಕಾದು ಅವುಗಳನ್ನು ಬೇಟೆಯಾಡುತ್ತಿದ್ದರು. ಜಿಮ್ ಕಾರ್ಬೆಟ್, ಕೆನೆತ್ ಆಂಡರ್‌ಸನ್ ಇನ್ನಿತರ ಹೆಸರಾಂತ ಬೇಟೆಗಾರರೆಲ್ಲರೂ ಅಟ್ಟಣಿಯ ಮೇಲೆಯೇ ಕುಳಿತುಕೊಳ್ಳುತ್ತಿದ್ದರು. ಆದರೆ ವನ್ಯಜೀವಿ ಆಸಕ್ತರು ಅಟ್ಟಣಿಯನ್ನು ಬೇರೆ ಕಾರಣಕ್ಕೆ ಉಪಯೋಗಿಸುತ್ತಾರೆ. ನನಗೂ ಅಟ್ಟಣಿಯ ಮೇಲೆ ಕುಳಿತು ಪ್ರಾಣಿಗಳ ಚಲನವಲನ ಮತ್ತು ಅವುಗಳ ಸ್ವಾಭಾವಿಕ ವರ್ತನೆ ಗಮನಿಸುವುದೆಂದರೆ ಬಹಳ ಆಸಕ್ತಿ. ಡಬ್ಬಿಯಲ್ಲಿ ಒಂದಿಷ್ಟು ಊಟ, ಜೊತೆಗೊಂದು ಪುಸ್ತಕವಿದ್ದರೆ ಸಾಕು ದಿನವಿಡೀ ಕಾಲ ಕಳೆಯಬಹುದು. ಆಗಾಗ ಬಂದು ಹೋಗುವ ಪ್ರಾಣಿಗಳು, ದೀರ್ಘಕಾಲದ ಮೌನ, ಮುಂದೇನು ಬರಬಹು ದೆನ್ನುವ ಕೌತುಕತೆ, ಎಲ್ಲವೂ ಒಂದು ಸಸ್ಪೆನ್ಸ್ ಸಿನೆಮಾದ ಹಾಗಿರುತ್ತದೆ. ಕೆಲವೊಮ್ಮೆ ಏನೂ ಕಾಣದೆ ವಾಪಸ್ಸು ಬರುತ್ತೇವೆ.
ಅದೊಂದು ಬೇಸಿಗೆಯ ದಿನ ಬಿ.ಆರ್.ಹಿಲ್ಸ್‌ನ ಆನೆಕೆರೆಯ ಬದಿಯಲ್ಲಿದ್ದ ದೊಡ್ಡ ಮರದ ಮೇಲಿದ್ದ ಅಟ್ಟಣಿಯಲ್ಲಿ ಒಬ್ಬನೇ ಕೂರಲು ನಿರ್ಧರಿಸಿದೆ. ಅಟ್ಟಣಿಯಲ್ಲಿ ಕೂರಲು ಒಬ್ಬರು, ಹೆಚ್ಚೆಂದರೆ ಇಬ್ಬರು ಮಾತ್ರ ಹೋಗಬೇಕು. ಜನ ಹೆಚ್ಚಾದರೆ ಯಾವ ಪ್ರಾಣಿಯೂ ಕಾಣಸಿಗುವುದಿಲ್ಲ. ಜೊತೆಗೆ ಹೆಚ್ಚಾಗಿ ಅಲ್ಲಾಡುವುದು, ಎದ್ದು ನಿಲ್ಲುವುದು, ಮೂತ್ರ ವಿಸರ್ಜನೆ ಮಾಡಲು ಹೋಗುವುದು, ಕೆಮ್ಮುವುದು, ಮಾತನಾಡುವುದು, ಇವೆಲ್ಲ ಮಾಡಿದರೆ ಪ್ರಾಣಿಗಳಿಗೆ ನಾವಿರುವ ಕುರುಹು ಸಿಕ್ಕಿ, ಚುನಾವಣೆ ಗೆದ್ದ ನಮ್ಮ ರಾಜಕಾರಣಿಗಳ ಹಾಗೆ ಆ ಕಡೆ ತಲೆ ಹಾಕುವುದೇ ಇಲ್ಲ!
***
ಕೆರೆಯಲ್ಲಿ ನೀರು ಬಹಳ ಕಡಿಮೆಯಾಗಿತ್ತು. ಕೇವಲ 30ರಷ್ಟು ಮಾತ್ರ ನೀರಿತ್ತು. ಒಂದೆರಡು ಮುಂಗಾರು ಮಳೆ ಬಿದ್ದು ಕೆಲ ಮರಗಳಲ್ಲಿ ಗಿಣಿಹಸಿರು ಬಣ್ಣದ ಎಲೆಗಳಿಂದ ಕಾಡು ಸ್ವಲ್ಪ ಮಟ್ಟಿಗೆ ಚಿಗುರಿತ್ತು. ಸುಮಾರು ಎಂಟುಹತ್ತು ಎಕರೆಯಷ್ಟಿದ್ದ ಕೆರೆಯ ಎಡಬದಿಯ ಏರಿಯ ಮೇಲಿದ್ದ ಸಾಗಡೆ ಮರವೊಂದು ಮಾತ್ರ ತಿಳಿಗೆಂಪು ಬಣ್ಣದ ಚಿಗುರೆಲೆಗಳಿಂದ ಕೂಡಿದ್ದು, ಅಲ್ಲಿನ ಭೂದೃಶ್ಯಕ್ಕೆ ವರ್ಣಚಿತ್ರದ ಮೆರಗು ಕೊಟ್ಟಿತ್ತು.
ಮಧ್ಯಾಹ್ನವಾದರೂ ಒಂದೆರೆಡು ಗುಂಪು ಜಿಂಕೆಗಳು ಬಿಟ್ಟರೆ, ಕೆರೆಗೆ ಹೆಚ್ಚು ಪ್ರಾಣಿಗಳು ಬಂದಿರಲಿಲ್ಲ. ಮುಂಗಾರು ಮಳೆಯಾಗಿದ್ದರಿಂದ ಕಾಡಿನ ಎಲ್ಲಾ ಭಾಗಳಲ್ಲಿಯೂ ಅಲ್ಲಲ್ಲಿ ನೀರು ಸಿಗುತ್ತಿರಬಹುದು, ಹಾಗಾಗಿ ಪ್ರಾಣಿಗಳು ಕೆರೆಗೆ ಬರುವುದಿಲ್ಲವೇನೊ ಎಂದು ಭಾವಿಸಿದೆ. ಶಾಸ್ತ್ರದ ಊಟ ಮುಗಿಸಿ ಪುಸ್ತಕ ಮುಂದುವರೆಸಿದೆ. ಅಟ್ಟಣಿಯಲ್ಲಿ ಕುಳಿತ್ತಿದ್ದರೆ ಪುಸ್ತಕವನ್ನು ಲಕ್ಷ್ಯವಿಟ್ಟು ಓದಲಾಗುವುದಿಲ್ಲ. ಪ್ರಾಣಿಗಳು ಬಹು ನಿಶಬ್ದವಾಗಿ ಬರುತ್ತವೆ, ಸರಿಯಾಗಿ ಗಮನವಿಡದಿದ್ದರೆ ಪ್ರಾಣಿಗಳು ಬಂದು ಹೋಗುವುದು ಗೊತ್ತೇ ಆಗುವುದಿಲ್ಲ. ಕೆಲವೊಮ್ಮೆ ಕೆರೆಯ ಬದಿಯಲ್ಲೆಲ್ಲೋ ಪೊದೆಯಿಂದ ಪೊದೆಗೆ ಯಾವುದಾದರೂ ಪ್ರಾಣಿ ಓಡಿಹೋದರೆ ತಿಳಿಯುವುದೇ ಇಲ್ಲ. ನನ್ನ ಫೀಲ್ಡ್ ನೋಟ್ ಪುಸ್ತಕದ ಪ್ರಕಾರ, ಸರಿಯಾಗಿ ಮೂರು ಗಂಟೆ ನಾಲ್ಕು ನಿಮಿಷಕ್ಕೆ ನನ್ನ ಎಡಬದಿಯಿಂದ ಹೆಣ್ಣು ಕಾಟಿ (ಕಾಡೆಮ್ಮೆ) ಯೊಂದು ಕಾಡಿನಿಂದಾಚೆ ಬಂದು ಅದರ ಗೊರಸು ಮಾತ್ರ ಮುಚ್ಚುವಷ್ಟು ನೀರಿದ್ದ ಕೆರೆಯ ಭಾಗದಲ್ಲಿ ತನ್ನ ದಾಹವನ್ನು ಆರಿಸಿಕೊಳ್ಳಲು ಪ್ರಾರಂಭಿಸಿತು. ಕಾಟಿಯ ಮೈ ಚಾಕ್ಲೇಟ್ ಬಣ್ಣದಿಂದ ಕೂಡಿದ್ದು, ಮಂಡಿಯಿಂದ ಕೆಳಕ್ಕೆ ಎನ್.ಸಿ.ಸಿಗೆ ಹೋಗುವ ಹುಡುಗರು ಹಾಕುವ ಖಾಕಿ ಬಣ್ಣದ ಕಾಲುಚೀಲದಂತಿರುತ್ತದೆ. ಮೈಮೇಲಿನ ಈ ಬಣ್ಣದ ವಿಭಿನ್ನತೆ ಬಹುಸುಂದರ. ಬೇಸಿಗೆಯಲ್ಲಿ ನೈಸರ್ಗಿಕವಾಗಿ ಕಾಡಿನಲ್ಲಿ ಪೌಷ್ಠಿಕ ಆಹಾರ ಕಡಿಮೆಯಾಗಿ, ಕಾಟಿಯ ಪಕ್ಕೆಲುಬುಗಳೆಲ್ಲಾ ಎದ್ದು ಕಾಣುತ್ತಿದ್ದವು. ಕಾಟಿಯು ಒಂದೆರೆಡು ನಿಮಿಷ ನೀರು ಕುಡಿದು ಕಾಡಿಗೆ ಹಿಂದಿರುಗಿದರೆ, ಹಿಂದೆಯೇ ಇನ್ನೆರೆಡು ಹೆಣ್ಣು ಕಾಟಿಗಳು ಬಂದವು. ಅವು ನೀರು ಕುಡಿದು ಮುಗಿಸುವ ಹೊತ್ತಿಗೆ ಇನ್ನೆçದು ಕಾಟಿಗಳು, ಸುಮಾರು ಒಂದೂವರೆ ವರ್ಷದ ಮರಿಯೊಂದಿಗೆ ನೀರಿಗಿಳಿದವು.
ಕಾಟಿಗಳು ನೀರು ಕುಡಿಯುತ್ತಿದ್ದರೆ, ನಿಮಗಾಗಿಯೇ ಕಾಯುತ್ತಿದ್ದೆವು ಎನ್ನುವಂತೆ ಗೊರವಂಕ ಪಕ್ಷಿಗಳು ಅವುಗಳ ಬೆನ್ನೇರಿ ಉಣ್ಣೆಗಳನ್ನು ಭಕ್ಷಿಸುವ ಪ್ರಯತ್ನ ಮಾಡುತ್ತಿದ್ದವು. ಎರಡು ಪ್ರಾಣಿಗಳಿಗೂ ಇದರಿಂದ ಲಾಭವೇ ಆದುದರಿಂದ ಕಾಟಿಗಳೇನೂ ಗೊರವಂಕಗಳನ್ನು ಓಡಿಸುವ ಗೊಡವೆಗೆ ಹೋಗುತ್ತಿರಲಿಲ್ಲ. ಅದರ ಮಧ್ಯೆ ದೊಡ್ಡ, ಗಂಡು ಕಾಟಿಯೊಂದು ನೀರು ಕುಡಿಯಲು ಗುಂಪು ಸೇರಿತು. ನೀರು ಕುಡಿಯುತ್ತಿದ್ದ ಕಾಟಿಗಳು ಆಗಾಗ ತಲೆಯೆತ್ತಿ ಯಾವುದಾದರೂ ಅಪಾಯವಿದೆಯೇ ಎಂದು ಗಮನಿಸುತ್ತಿದ್ದರೆ ಅವುಗಳ ಬಾಯಿಯಿಂದ ದಾರದಂತೆ ಸೋರಿ ಮತ್ತೆ ಕೆರೆ ಸೇರುತ್ತಿದ್ದ ನೀರು ನನಗೆ ಸ್ಪಷ್ಟವಾಗಿ ಕಾಣುತಿತ್ತು. ನಾನು ಕುಳಿತ ಜಾಗದಿಂದ ಕಾಟಿಗಳು ಸುಮಾರು ನಲವತ್ತು ಮೀಟರ್‌ಗಿಂತ ಕಡಿಮೆ ದೂರದಲ್ಲಿದ್ದವು ಮತ್ತು ಕಾಡು ಬಹಳ ನಿಶ್ಶಬ್ದವಾಗಿತ್ತು. ಇದರಿಂದ ಕಾಟಿಗಳು ನೀರು ಕುಡಿಯುವಾಗ ಮೂಗಿನ ಹೊಳ್ಳೆಯಿಂದ ಬುಸ್, ಬುಸ್ ಎಂದು ಬಿಡುತ್ತಿದ್ದ ಭಾರವಾದ ಉಸಿರು ಸಹ ನನಗೆ ಸ್ಪಷ್ಟವಾಗಿ ಕೇಳುತಿತ್ತು. ಹೀಗೆ ಕಾಟಿಗಳು ಬಂದು ಹೋಗುವುದು ಸುಮಾರು ಹತ್ತು ನಿಮಿಷಗಳ ಕಾಲ ನಡೆಯಿತು. ಇದಾದ ನಂತರ ಎಲ್ಲವೂ ಮತ್ತೆ ನಿಶ್ಶಬ್ದ. ನಾಟಕದ ಭಾಗವೊಂದು ಮುಗಿದಿತ್ತು. ಪಾತ್ರಧಾರಿಗಳೆಲ್ಲರೂ ಒಟ್ಟಿಗೆ ತಾತ್ಕಾಲಿಕವಾಗಿ ವಿರಾಮ ತೆಗೆದುಕೊಂಡಂತಿತ್ತು.
ಮೂರು ಐವತ್ಮೂರು
ಕೆರೆಯ ಎದುರಿನ ಮೂಲೆಯಲ್ಲಿ ಬಲಿಷ್ಠವಾದ ಗಂಡು ಕಾಟಿಯೊಂದು ಏರಿಯ ಮೇಲಿಂದ ಕೆಳಗಿಳಿದು ನೀರಿಗೆ ಬಂದಿತು. ಇದರ ಪಕ್ಕೆಯ ಎಲುಬುಗಳು ಕೂಡ ಸ್ವಲ್ಪ ಕಾಣುತ್ತಿದ್ದರೂ ಅದರ ಬಲಿಷ್ಠತೆಗೆ ಧಕ್ಕೆಯಾಗಿರಲಿಲ್ಲ. ಆಧುನಿಕ ಜಿಮ್‌ಗಳಲ್ಲಿ ಕೊಡುವ ಮಾಂಸಖಂಡಗಳನ್ನು ವೃದ್ಧಿಸುವ ಯಾವುದೇ ಪೋಷಕಗಳಿಲ್ಲದೆ ಮಾಂಸಪುಷ್ಟಿಯುಳ್ಳ ಈ ಪ್ರಾಣಿ, ನಮ್ಮ ಬಾಡಿ ಬಿಲ್ಡರ್‌ಗಳನ್ನೂ ಸಹ ನಾಚಿಸಬಲ್ಲದು. ಕೇವಲ ಸೊಪ್ಪು ಸೊದೆ ತಿಂದು ಪ್ರಪಂಚದ ಕಾಡು ಜಾನುವಾರುಗಳಲ್ಲಿ ಅತೀ ದೊಡ್ಡ ಪ್ರಾಣಿಯಿದು ಎಂದರೆ ಆಶ್ಚರ್ಯಕರವಾದ ವಿಚಾರ. ವಯಸ್ಕ ಗಂಡು ಕಾಟಿ ಸುಮಾರು ಒಂದು ಟನ್ ತೂಗಿದರೂ, ಬಹು ನಾಚಿಕೆಯ ಪ್ರಾಣಿ.
ಎಡೆಬಿಡದೆ ಎರಡು ನಿಮಿಷ ನೀರು ಕುಡಿದ ಕಾಟಿ ಇದ್ದಕ್ಕಿದ್ದ ಹಾಗೆ ತಲೆಯೆತ್ತಿ ಸಾಗಡೆ ಮರದತ್ತ ಒಮ್ಮೆ ದೃಷ್ಟಿ ಹಾಯಿಸಿ ಮತ್ತೆ ನೀರಿನ ಕಡೆ ಗಮನಹರಿಸಿತು. ಸರಿಯಾಗಿ ಒಂದು ನಿಮಿಷದ ನಂತರ ಕೆರೆಯ ಕಡೆಗೆ ಇನ್ನೊಂದು ಗಂಡು ಕಾಟಿ ನಿಧಾನಗತಿಯಲ್ಲಿ, ಹಿಂಜರಿಯುತ್ತ, ಮೊದಲಿದ್ದ ಗಂಡು ಕಾಟಿಯತ್ತ ನಡೆದು ಬರುತಿತ್ತು. ಸುಮಾರು ನೂರು ಮೀಟರ್ ದೂರವನ್ನು ಕ್ರಮಿಸಲು ಮೂರು ನಿಮಿಷ ತೆಗೆದುಕೊಂಡಿತು. ಮೊದಲಿದ್ದ ಕಾಟಿಯ ಹತ್ತಿರ ಬಂದೊಡನೆ, ಮೊದಲನೇ ಕಾಟಿಯು ತನ್ನ ಕುತ್ತಿಗೆಯನ್ನು ಎಡಕ್ಕೆ ಬಾಗಿಸಿ ಬಲ ಭುಜವನ್ನು ಬಂದ ಕಾಟಿಗೆ ತೋರಿತು. ಒಂದು ಕ್ಷಣ ಮೊದಲನೇ ಕಾಟಿಯನ್ನು ನೋಡಿದ ಎರಡನೇ ಕಾಟಿ ಸ್ವಲ್ಪ ಮುಂದೆ ನಡೆದು ಹೋದರೂ ಕೂಡ, ಬಿಡದೆ ತನ್ನನ್ನು ಸ್ವಲ್ಪ ಬಲಗಡೆಗೆ ತಿರುಗಿಸಿ ಮತ್ತಷ್ಟು ಭುಜಬಲವನ್ನು ತೋರುತ್ತಿದೆ, ಮೊದಲನೇ ಕಾಟಿ.
ಮೊದಲನೇ ಕಾಟಿಯು ತನ್ನ ಭುಜವನ್ನು ಆಗತಾನೆ ಹೊಸದಾಗಿ ಬಂದಿದ್ದ ಕಾಟಿಗೆ ಪ್ರದರ್ಶನ ಮಾಡಿ ಆ ಕೆರೆಗೆ ‘ನಾನೇ ಸುಲ್ತಾನ್’ ಎಂದು ಬಿಟ್ಟಿತು. ಅಯ್ಯೋ ಪಾಪ, ಬಾಯಾರಿ ಬಂದಿದ್ದ ಎರಡನೇ ಕಾಟಿಗೆ ದಾರಿಯೇ ಇಲ್ಲದೆ ಕೆರೆ ಏರಿಯ ಹತ್ತಿರವಿದ್ದ ರೋಜಾ ಕಡ್ಡಿ ಪೊದೆಯ ಬಳಿ ಹೋಗಿ, ಮಂತ್ರಿಯಾಗಲು ತಮಗೂ ಅವಕಾಶ ಸಿಗಬಹುದೆಂದು ಕಾಯುವವರಂತೆ ಆಸೆಯಿಂದ ಕಾದು ನಿಂತಿತು. ಮೊದಲನೇ ಕಾಟಿ ತಾನು ನೀರು ಕುಡಿಯುವುದನ್ನು ಮುಂದುವರಿಸಿತ್ತು. ಹತ್ತಾರು ಕಾಟಿಗಳು ಸೇರಿ ನೀರು ಕುಡಿಯಲು ಜಾಗವಿದ್ದರೂ ಕೂಡ, ತಾನೇ ಕೆರೆಗೆ ಅಧಿಪತಿಯಂತೆ ವರ್ತಿಸುತ್ತಿರುವ ಕಾಟಿಯನ್ನು ನೋಡಿ ನನಗೆ ಆಶ್ಚರ್ಯವಾಯಿತು. ಕಾಟಿಗಳು ಸಾಮಾನ್ಯವಾಗಿ ಸಂಘ ಜೀವಿಗಳು. ಗಂಡು ಕಾಟಿಗಳು ತಮ್ಮದೇ ಗುಂಪು ಕಟ್ಟಿಕೊಂಡು ಓಡಾಡುತ್ತವೆ. ಆದರೆ, ಆವಾಸಸ್ಥಾನ ಹಾಗೂ ಸಂಪನ್ಮೂಲಗಳಿಗೂ ಸಹ ಸೀಮೆಯನ್ನು ಹಾಕಿಕೊಂಡಿವೆ ಯೆಂದರೆ ಕೌತುಕದ ಸಂಗತಿ.
ಆನೆಯ ಎಂಟ್ರಿ
ಮೂರ್ನಾಲ್ಕು ನಿಮಿಷವಾಗಿರಬೇಕು ಎರಡನೇ ಕಾಟಿ ಯಾಕೋ ಕೆರೆಯ ಏರಿಯ ಮೇಲಿದ್ದ ರೋಜಾ ಕಡ್ಡಿ ಪೊದೆಯತ್ತ ತಿರುಗಿ ನೋಡಿತು. ಒಂದರ್ಧ ನಿಮಿಷವಾಗಿರಬೇಕು ಕೆರೆಯ ಏರಿಯ ಮೇಲೆ ಸುಮಾರು ಹದಿನೈದು ವರ್ಷದ ಆನೆಯೊಂದು ಕಾಣಿಸಿಕೊಂಡಿತು. ಆನೆ ಕಂಡಾಕ್ಷಣ ಎರಡನೇ ಕಾಟಿ ತಕ್ಷಣ ಕಾಡು ಸೇರಿ ಕಣ್ಮರೆಯಾಯಿತು. ಏರಿ ಹತ್ತಿ, ಬಲಕ್ಕೆ ತಿರುಗಿ ಗಾಂಭೀರ್ಯವಾಗಿ ನಡೆಯುತ್ತಿದ್ದ ಆನೆ ಇದ್ದಕ್ಕಿದ್ದ ಹಾಗೆ ರೋಜಾ ಕಡ್ಡಿ ಪೊದೆಯ ಮಧ್ಯೆಯಿದ್ದ ಸ್ವಲ್ಪ ಜಾಗದ ಮೂಲಕ ಕೆರೆಯೆಡೆಗೆ ನುಗ್ಗಿತು. ಏರಿಯ ಇಳಿಜಾರಿನಿಂದಾಗಿ ತನ್ನ ವೇಗವನ್ನು ಹೆಚ್ಚಿಸಿದ ಆನೆ, ಬೋಲ್ಟ್ ನ ವೇಗದಲ್ಲಿ ನೆಮ್ಮದಿಯಿಂದ ನೀರು ಕುಡಿಯುತ್ತಿದ್ದ ಮೊದಲನೆಯ ಕಾಟಿಯೆಡೆಗೆ ನುಗ್ಗಿತು. ಇದು, ಸುಮಾರು ಹತ್ತು ಮೀಟರ್‌ನಷ್ಟು ಹತ್ತಿರ ಬರುವವರೆಗೂ ಕಾಟಿಗೆ ಗೊತ್ತಾಗಲೇ ಇಲ್ಲ. ಇನ್ನೇನು ಆನೆ ಕಾಟಿಗೆ ಗುದ್ದಿತೇನೋ ಎಂದು ನಾನು ಅಂದುಕೊಂಡಾಗ, ಕಾಟಿ ಹಿಂದಿರುಗಿ ನೋಡಿ ಜಾಂಟಿ ರೋಡ್ಸ್‌ನ ರಿಫ್ಲೆಕ್ಸ್ ನಂತೆ ಛಂಗನೆ ಎಡಕ್ಕೆ ಹಾರಿ ಗಂಡಾಂತರದಿಂದ ತಪ್ಪಿಸಿಕೊಂಡಿತು. ಸ್ವಲ್ಪ ದೂರ ಕಾಟಿಯನ್ನು ಓಡಿಸಿದ ಆನೆ, ಹಿಂದಿರುಗಿ ಬಂದು ಕಾಟಿ ನೀರು ಕುಡಿಯುತ್ತಿದ್ದ ಜಾಗದಲ್ಲೇ ನೀರಿಗಿಳಿಯಿತು. ಆನೆಯಿಂದ ಪರಾಭವಗೊಂಡ ಮೊದಲನೇ ಕಾಟಿಯು, ಕಾಕತಾಳೀಯವೇನೋ ಎಂಬಂತೆ ಎರಡನೇ ಕಾಟಿ ನಿಂತಿದ್ದ ಜಾಗಕ್ಕೆ ಬಂದು ಪೊದೆಯ ಪಕ್ಕದಲ್ಲಿದ್ದ ಮರದ ಕೆಳಗೆ ನಿಂತು ಒಂದೆರೆಡು ಕ್ಷಣ ಆನೆಯನ್ನು ನೋಡಿ ಕಾಡಿನಲ್ಲಿ ಮರೆಯಾಯಿತು.
ತನ್ನದೇ ಪ್ರಭೇದದ ಇನ್ನೊಂದು ಕಾಟಿಗೂ ಜಾಗ ನೀಡದೆ ತಾನೇ ಕೆರೆಯ ಒಡೆಯನಂತೆ ವರ್ತಿಸಿದ ಒಂದನೇ ಕಾಟಿಯ ಜಂಭವನ್ನು ಆನೆ ಮುರಿದಿತ್ತು. ನಾಟಕದ ಈ ಭಾಗ ಮುಗಿಯುವ ಹೊತ್ತಿಗೆ ನಾಲ್ಕೂವರೆಯಾಗಿತ್ತು. ಕಾಡಿನ ಗುಬ್ಬಿ ಕಂಪೆನಿಯಲ್ಲಿ, ಎಣಿಕೆಗೊ ಸಿಗದಷ್ಟು ನಡೆಯುವ ಅಧ್ಯಾಯಗಳಲ್ಲಿ ಮತ್ತೂಂದು ಕಂಡಿಕೆ ಮುಗಿದಿತ್ತು. ವನ್ಯಜೀವಿಗಳ ನಿಗೂಢ ಜಗತ್ತಿನ ಇನ್ನೊಂದು ಕೌತುಕ ಸನ್ನಿವೇಶವನ್ನು ಚಿಕ್ಕದೊಂದು ಕಿಂಡಿಯಿಂದ ವೀಕ್ಷಿಸಿ. ಹಿಂದೆ ಕಾಡಿನಲ್ಲಿ ಸಾವಿರಾರು ಬಾರಿ ನಡೆದಿರಬಹುದಾದ ಈ ನಾಟಕವನ್ನು ಇಂದು ನಾನು ಬಾಲ್ಕನಿ ಸೀಟಿನಲ್ಲಿ ಕುಳಿತು ನೋಡಿದ ಅದ್ಭುತ ಅನುಭವದಿಂದ ಸಂತಸಗೊಂಡಿದ್ದೆ. ನಿಸರ್ಗದ ನಿಯಮಗಳೇ ವಿಚಿತ್ರ. ಆದರೆ ಕಾಲಚಕ್ರವೂ ಬದಲಾಗಬಹುದೆಂಬ ವಾದಕ್ಕೆ ಇನ್ನೊಂದು ನಿದರ್ಶನವಿದೆ.
– ಸಂಜಯ್ ಗುಬ್ಬಿ ; [email protected]
– ಚಿತ್ರ: ಸಂಜಯ್ ಗುಬ್ಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.