ಹುಚ್ಚಿನ ಮೂಲ ತಲೆಯಲ್ಲಲ್ಲ, ಹೊಟ್ಟೆಯಲ್ಲಂತೆ…
Team Udayavani, Sep 24, 2022, 6:10 AM IST
“ನಾನು ಕಂಡಂತೆ ಹುಚ್ಚಿಗೆ ಮೂಲ ಕಾರಣ ಶೇ.75 ಲೈಂಗಿಕ ಅತೃಪ್ತಿ. ಆದರೆ ನಾನು ಚಿಕಿತ್ಸೆ ನೀಡಿದ ಹುಚ್ಚರಲ್ಲಿ ಶೇ.98 ಮಂದಿಗೆ ಇದ್ದ ದೋಷವೆಂದರೆ ಮಲಬದ್ಧತೆ’ ಎಂದು ದಾಖಲಿಸಿದ್ದಾರೆ ಸೇಡಿಯಾಪು ಕೃಷ್ಣ ಭಟ್. ನಮ್ಮ ಕಾಲುಬುಡದ ಸಮಸ್ಯೆ ಮೂಲ ತಿಳಿದರೆ ಲೋಕದ ಅರ್ಧಾಂಶ ಸಮಸ್ಯೆ ಇತ್ಯರ್ಥವಾದಂತೆ…
ದಿ| ಸೇಡಿಯಾಪು ಕೃಷ್ಣ ಭಟ್ಟರು ಕನ್ನಡ ಪಂಡಿತರೆಂದೇ ಪ್ರಸಿದ್ಧಿ. ನಾಟಿ ಔಷಧದಲ್ಲಿ ಸಿದ್ಧಹಸ್ತರಾಗಿದ್ದ ಪಂಡಿತರಾಗಿದ್ದರೆಂಬುದು ಬಹುತೇಕರಿಗೆ ಗೊತ್ತಿಲ್ಲ. ಮಂಗಳೂರಿನಲ್ಲಿ ಶಿಕ್ಷಕರಾದ ಮೇಲೆಯೂ ಈ ವೃತ್ತಿಯನ್ನು ಮುಂದುವರಿಸಿದ್ದರು. ಶಿಕ್ಷಕರಾದ ಬಳಿಕ ಬಿಡುವು ಕಡಿಮೆಯಾದ ಕಾರಣ ಸಮಯ ಹೊಂದಾಣಿಕೆ ಮಾಡಿಕೊಂಡೂ ಔಷಧ ಕೊಡಬಹುದು ಎಂದು ಮನೋರೋಗಗಳಿಗೆ ಮಾತ್ರ ಔಷಧ ಕೊಡುತ್ತಿದ್ದರು.
ಒಮ್ಮೆ ಕೃಷ್ಣ ಭಟ್ಟರ ಸಹೋದ್ಯೋಗಿ ರಂಗನಾಥನ್ ಅವರ ಮಗನಿಗೆ ಔಷಧ ನೀಡಬೇಕಾಯಿತು. ಅವರಿಗೆ ಮೂರ್‍ನಾಲ್ಕು ಗಂಡು, ಮೂರ್‍ನಾಲ್ಕು ಹೆಣ್ಣು ಮಕ್ಕಳಿದ್ದು ಹಿರಿಯ ಮಗ ಕೊಯಮತ್ತೂರಿನಲ್ಲಿ ಕಲಿಯುತ್ತಿದ್ದ. ಎಲ್ಲರಿಗಿಂತ ಹಿರಿಯನಾದ ಈತ ಅಷ್ಟೇ ಗಿಡ್ಡ. “ತಮ್ಮನಿಗಿಂತ ಕುಳ್ಳ’ ಎಂಬುದು ತೊಂದರೆ. ಆತನಿಗೆ ಮಲಶೋಧನೆ ಆಗುತ್ತಿರಲಿಲ್ಲ. ಹೀಗಾಗಿ ಊಟ ಮಾಡುವುದೂ ಕಡಿಮೆಯಾಗಿತ್ತು. ರಾತ್ರಿ ಊಟ ಮಾಡುವ ಬದಲು ಪಪ್ಪಾಯಿ ಹಣ್ಣು ತಿಂದು ಹಾಲು ಕುಡಿಯಲು ಸಲಹೆ ನೀಡಿದರು. ನಾಲ್ಕೈದು ದಿನಗಳಲ್ಲಿ ಮಲವಿಸರ್ಜನೆ ಆರಂಭವಾಯಿತು, ಹಸಿವೂ ಆಗಿ ಊಟವನ್ನು ಚೆನ್ನಾಗಿ ಮಾಡತೊಡಗಿದ. ಎರಡು ತಿಂಗಳು ಹೀಗೆ ಮುಂದುವರಿಯಿತು. ಅನಂತರ ವಾರಕ್ಕೆರಡು ಬಾರಿ ಪಪ್ಪಾಯಿ ಹಣ್ಣು ತಿನ್ನಲಿ ಎಂದರು. ಆರು ತಿಂಗಳಲ್ಲಿ ತಮ್ಮನಷ್ಟೇ ಎತ್ತರ ಬೆಳೆದ. ಒಂದು ವರ್ಷದಲ್ಲಿ ತಮ್ಮನಿಗಿಂತ ಎತ್ತರ ಬೆಳೆದ, ಗಟ್ಟಿಮುಟ್ಟೂ ಆದ.
ಭಟ್ಟರೇ ಹೇಳುತ್ತಾರೆ “ಇದು ನನ್ನ ಮನಸ್ಸಿಗೆ ಆ ಕ್ಷಣ ಹೊಳೆದ ಚಿಕಿತ್ಸೆ. ಈತನಿಗೆ ಬೇರೆ ಯಾವ ದೋಷ ಇದ್ದಿರಲಿಲ್ಲ. ಪಪ್ಪಾಯಿ ಮಲಶೋಧನೆಗೆ ಉತ್ತಮ. ಉಷ್ಣ ಆಗಿರುವುದರಿಂದ ಹಾಲು ಕುಡಿಯಬೇಕಷ್ಟೆ. ಆದರೆ ಗರ್ಭಿಣಿಯರು, ಅತಿ ಋತುಸ್ರಾವವಿರುವವರು ಮಾತ್ರ ಪಪ್ಪಾಯಿ ತೆಗೆದುಕೊಳ್ಳಬಾರದು’.
ಒಮ್ಮೆ ಭಟ್ಟರಲ್ಲಿ ಕಾರ್ಕಳದ ಜೈನರೊಬ್ಬರು ಮಗಳನ್ನು ಕರೆದುಕೊಂಡು ಬಂದರಂತೆ. 14-15 ವರ್ಷದ ಹುಡುಗಿ ಮೊದಲು ಚೆನ್ನಾಗಿದ್ದರೂ ಬಳಿಕ ಮಂಕಾಗುತ್ತ ಬಂದಳಂತೆ. ಬುದ್ಧಿಯೂ ಮಂದವಾಯಿತು. ಆಕೆಗೆ ಮಲಶೋಧನೆ ಆಗುತ್ತಿರಲಿಲ್ಲ.
ಕೇವಲ ಪಪ್ಪಾಯಿ ಹಣ್ಣು ತಿನ್ನಿ ಎಂದರೆ ತಾತ್ಸಾರ ಎಂದು ತಿಳಿದುಕೊಂಡಾರು ಎಂದು ಭಾವಿಸಿ ಸುಮ್ಮನೆ ಒಂದಿಷ್ಟು ಪುಡಿ ಕೊಟ್ಟು ರಾತ್ರಿ ಊಟದ ಬದಲು ಪಪ್ಪಾಯಿ ಹಣ್ಣು ತಿಂದು ಹಾಲು ಕುಡಿಯಿರಿ ಎಂದು ಸಲಹೆ ಕೊಟ್ಟರು. 15 ದಿನ ಬಿಟ್ಟು ಮಲಶೋಧನೆ ಶುರುವಾಯಿತು. ಒಂದು ತಿಂಗಳು ಮುಗಿದಾಗ ಆಕೆ ಋತುಮತಿಯಾದಳು. ಮಲವಿಸರ್ಜನೆ ಕ್ರಮಪ್ರಕಾರ ಆಯಿತು. ಮೂರ್‍ನಾಲ್ಕು ತಿಂಗಳಲ್ಲಿ ಸ್ವಲ್ಪ ಬೆಳೆದಳು, ಬುದ್ಧಿಮಾಂದ್ಯ ಕಡಿಮೆಯಾಯಿತು. ಇದನ್ನೇ ಮುಂದುವರಿಸಿದಾಗ ಆಕೆ ಎಲ್ಲರಂತೆ ಆದಳು. ಕೃಷ್ಣ ಭಟ್ಟರು ಮಣಿಪಾಲದಲ್ಲಿ ನೆಲೆಸಿದಾಗ ಅದೇ ವ್ಯಕ್ತಿ ಬೇರೊಬ್ಬರನ್ನು ಕರೆದುಕೊಂಡು ಬಂದರು. ಆಗ ಔಷಧ ಕೊಡುವುದನ್ನು ಭಟ್ಟರು ನಿಲ್ಲಿಸಿದ್ದರು. ಹಿಂದೆ ಔಷಧ ಕೊಟ್ಟ ಹುಡುಗಿಯ ಬಗ್ಗೆ ಕೇಳಿದರು. “ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ’ ಎಂದು ತಂದೆ ತೃಪ್ತಿ ವ್ಯಕ್ತಪಡಿಸಿದರು. (ಪ್ರಾಯಃ ಈಗ ಮೊಮ್ಮಕ್ಕಳೂ ಆಗಿರಬಹುದು.)
5 ಮಾತ್ರೆಯಲ್ಲಿ ಬಾರದ ನಿದ್ದೆ 1ರಲ್ಲಿ
ಇನ್ನೊಂದು ಉದಾಹರಣೆಯನ್ನು ಕೃಷ್ಣ ಭಟ್ಟರು ಕೊಡುತ್ತಾರೆ. ಭಟ್ಟರು ಬೆಂಗಳೂರಿನಲ್ಲಿದ್ದಾಗ ಬಂಧು ಒಬ್ಬನಿಗೆ ಮಾನಸಿಕ ಸ್ವಾಸ್ಥ್ಯ ಕೆಟ್ಟಿತು. ನಿದ್ದೆ ಬರುತ್ತಿರಲಿಲ್ಲ. ನಿದ್ದೆ ಬರಲು ಎರಡು ಲಾಗ್ಯಾìಕ್ಟಿಲ್ ಮಾತ್ರೆಯನ್ನು ತೆಗೆದುಕೊಳ್ಳಲು ಶುರುಮಾಡಿದ್ದರು. ಕ್ರಮೇಣ ನಿದ್ದೆಗೆ ಐದು ಮಾತ್ರೆ ನುಂಗಬೇಕಾಗಿತ್ತು. “ಅರ್ಧ ಔನ್ಸ್ ಶುದ್ಧ ಹರಳೆಣ್ಣೆಯನ್ನು ಒಂದು ಲೋಟ ಹಾಲಿನಲ್ಲಿ ಬೆರೆಸಿ ಕೊಡಿ. ಒಂದು ಮಾತ್ರೆ ಕೊಡಿ ಸಾಕು’ ಎಂದರು ಭಟ್. ಐದು ಮಾತ್ರೆಗಳಲ್ಲಿಯೂ ನಿದ್ದೆ ಬಾರದವ ಒಂದು ಮಾತ್ರೆಯಲ್ಲಿ ನಿದ್ದೆ ಮಾಡಲು ಆರಂಭಿಸಿದ್ದ.
“ಮಲಶೋಧನೆಗೂ ಹುಚ್ಚಿಗೂ ಸಂಬಂಧವಿದೆ. ಹುಚ್ಚಿನ ಮೂಲ ಇರುವುದು ಮಿದುಳಿನಲ್ಲಿ ಅಲ್ಲ, ಹೊಟ್ಟೆಯಲ್ಲಿ. ಮಲ ವಿಸರ್ಜನೆ ಬಹಳ ಕಾಲ ಆಗದಿದ್ದರೆ ಹುಚ್ಚು ಹಿಡಿಯುತ್ತದೆ. ಹೊಟ್ಟೆ ಸರಿ ಮಾಡದೆ ಕೇವಲ ಮಾನಸಿಕ ಅಂತ ಚಿಕಿತ್ಸೆ ಮಾಡಿದರೆ ಗುಣ ಆಗುವುದಿಲ್ಲ’ ಎಂಬ ಭಟ್ಟರ ಮಾತನ್ನು “ಸೇಡಿಯಾಪು ನೆನಪುಗಳು’ ಕೃತಿಯಲ್ಲಿ ಸಾಹಿತಿ ವೈದೇಹಿ ಉಲ್ಲೇಖೀಸಿದ್ದಾರೆ.
ಉಪವಾಸ ವ್ರತವೂ ನೊಬೆಲ್ ಪ್ರಶಸ್ತಿಯೂ…
ಹೊಟ್ಟೆಗೆ 15 ದಿನಗಳಿಗೊಮ್ಮೆ ವಿಶ್ರಾಂತಿ ಕೊಡುವುದಕ್ಕಾಗಿ ಏಕಾದಶಿಯಂತಹ ಉಪವಾಸ (ಶುದ್ಧ ಉಪವಾಸ) ಕ್ರಮ ಬಂದಿದೆ ಎನ್ನುವುದಿದೆ. ಉಪವಾಸದಿಂದ ಜೀವಕೋಶಗಳು ಹೇಗೆ ನವೀಕರಣಗೊಳ್ಳುತ್ತವೆ? (ಆಟೋಪಜಿ ಎಂದು ಕರೆದಿದ್ದಾರೆ) ಮುದಿತನವನ್ನು ಹೇಗೆ ಮುಂದೂಡುತ್ತವೆ? ಜೀವಕೋಶಗಳ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂಬ ಸಂಶೋಧನೆಗಾಗಿ ಜಪಾನ್ ವಿಜ್ಞಾನಿ ಯೋಶಿನೊರಿ ಒಸುಮಿ ಅವರು 2016ರಲ್ಲಿ ನೊಬೆಲ್ ಪಾರಿತೋಷಕ ಪಡೆದರು. ಇದಾದ ಬಳಿಕ ಕೆಲವರು ಏಕಾದಶಿ ಉಪವಾಸಕ್ಕೆ “ಭಲೇ ಭಲೇ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆವೇಶಭರಿತ ವೀರಾವೇಷದಲ್ಲಿ ಬರೆದರೂ ಉಪವಾಸ ಮಾಡದೆ ಇರುವವರು ಮಾಡಲು ತೊಡಗಲಿಲ್ಲ, ಶ್ರದ್ಧೆಯಿಂದ ಮಾಡುವವರು ದಿನ ಲೆಕ್ಕಾಚಾರದಲ್ಲಿ ಮುಳುಗಿದ್ದರೆ ವಿನಾ ಕತ್ತು ಎತ್ತಲೇ ಇಲ್ಲ!
ಇನ್ನೊಬ್ಬರ ಕಷ್ಟವೂ ಹೊಟ್ಟೆ ದುಃಖವೂ…
ಸರ್ ಎಂ. ವಿಶ್ವೇಶ್ವರಯ್ಯನವರ ಸೂತ್ರಗಳಲ್ಲಿ ಒಂದು ವಿಷಯವೆಂದರೆ 2-3 ತಿಂಗಳಿಗೆ ಒಮ್ಮೆಯಾದರೂ ಭೇದಿಗೆ ಔಷಧ ಸೇವಿಸುವುದಾಗಿದೆ. ಹಿರಿಯ ಸಾಹಿತಿ ಎ.ಎನ್.ಮೂರ್ತಿರಾಯರು ತಿನ್ನುವುದರಲ್ಲಿ (ಸ್ವಲ್ಪವನ್ನೇ ಅಗಿದು ಅರೆದು ತಿನ್ನುವುದು), ವಾಕಿಂಗ್‌ನಲ್ಲಿ (ಗಾಳಿ ವಿಹಾರ) ವಿಶ್ವೇಶ್ವರಯ್ಯನವರ ತರಹ. ಇವರಿಬ್ಬರೂ ಶತಕ ಬಾರಿಸಿದವರಾದ ಕಾರಣ ಹೆಚ್ಚು ಕಾಲ ಬದುಕಬೇಕೆಂಬ ಆಸೆ ಇರುವ ಎಲ್ಲರೂ ಇದನ್ನು ನೆನಪಿನಲ್ಲಿಟ್ಟುಕೊಂಡರೆ, ಪ್ರಯತ್ನಿಸಿದರೆ ಸಾಲದು, ಅಳವಡಿಸಿಕೊಳ್ಳಬೇಕು. ಬಹುತೇಕರಿಗೆ ಇನ್ನೊಬ್ಬರ ಸಮಸ್ಯೆ ಅರ್ಥವಾಗುವುದಿಲ್ಲ ಎನ್ನುವುದು ನಮ್ಮೆಲ್ಲರ ಅನುಭವ. ಹಾಗೆಯೇ ತಮ್ಮದೇ ಹೊಟ್ಟೆಯ ಕಷ್ಟವೂ (ಜೀರ್ಣಶಕ್ತಿ ಕುಂಠಿತ) ನಮಗೆ ಅರ್ಥವಾಗುವುದಿಲ್ಲ ಎನ್ನುವುದು ಮಾತ್ರ ಚೋದ್ಯಾತಿಚೋದ್ಯ, ಆದರೂ ಸತ್ಯ.
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.