ವಿದೇಶಗಳಲ್ಲಿರುವ ಭಾರತೀಯರಲ್ಲಿ ಸಂಸ್ಕೃತಿಗಾಗಿ ತುಡಿತ
Team Udayavani, Dec 26, 2021, 6:10 AM IST
ವಿದೇಶಗಳಲ್ಲಿರುವ ಭಾರತೀಯರು ತಮ್ಮ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಪ್ರಸರಣಕ್ಕೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಸಂಗೀತವನ್ನು ಕಲಿಯುವುದರಿಂದ ಮನುಷ್ಯನಲ್ಲಿ ಉತ್ತಮತೆ, ಸನ್ನಡತೆ ಅಭಿವೃದ್ಧಿಗೊಳ್ಳುತ್ತದೆ. ಇದನ್ನು ನಾನೇ ಅನುಭವಿಸುತ್ತಿದ್ದೇನೆ ಎಂದು ದಾಸವರೇಣ್ಯ ವಿಜಯದಾಸರ ವಂಶಸ್ಥರಾದ ಹಿರಿಯ ಸಂಗೀತ ಕಲಾವಿದೆ ವಿ| ವಾಣಿ ಸತೀಶ್ ಹೇಳಿದ್ದಾರೆ. ಶ್ರೀಕೃಷ್ಣಮಠದ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಸಂಗೀತ ಕಛೇರಿ ನೀಡಲು ಆಗಮಿಸಿದ ಅವರು “ಉದಯವಾಣಿ’ಯೊಂದಿಗೆ ಮಾತನಾಡಿದರು.
ನೀವು ಬಹುಕಾಲ ಅಮೆರಿಕದಲ್ಲಿದ್ದವರು. ಅಲ್ಲಿನ ಐಶಾರಾಮಿ ಆಕರ್ಷಣೆಯನ್ನು ಬಿಟ್ಟು ಭಾರತಕ್ಕೇಕೆ ಬಂದಿರಿ?
ಸಂಗೀತವೇ ನನ್ನ ಉಸಿರು. ನಾನು ಶೆಮ್ಮಂಗುಡಿ ಶ್ರೀನಿವಾಸ ಅಯ್ಯರರ ಶಿಷ್ಯ ವಿ|ಪಿ.ಎಸ್.ನಾರಾಯಣಸ್ವಾಮಿ ಅವರಲ್ಲಿ ಸಂಗೀತ ಕಲಿಯುತ್ತಿದ್ದೆ. ನನ್ನ ಸಂಗೀತ ಭವಿಷ್ಯಕ್ಕಾಗಿ ಪತಿ ಸತೀಶ್ ಅವರು ಅಮೆರಿಕದ ಉದ್ಯೋಗ ತೊರೆದು ಭಾರತಕ್ಕೆ ಬಂದರು. ನಾವು 2,000ನೇ ಇಸ್ವಿಯಿಂದ “ವಿಶೇಷ’ ಫೈನ್ ಆರ್ಟ್ಸ್ ಸಂಸ್ಥೆ ಮೂಲಕ ಸಂಗೀತ ತರಬೇತಿ, ಕಛೇರಿ, ಕಾರ್ಯಾಗಾರ, ಪ್ರಾತ್ಯಕ್ಷಿಕೆಗಳನ್ನು ಆಯೋಜಿಸುತ್ತಿದ್ದೇವೆ.
ನೀವು ವಿಜಯದಾಸರ ವಂಶಸ್ಥರಂತೆ? ಸಂಗೀತ ಕುರಿತು ಕೌಟುಂಬಿಕ ಹಿನ್ನೆಲೆಯೇನು?
ನಾವು ವಿಜಯದಾಸರ ವಂಶಸ್ಥರೆಂದು ನನ್ನ ತಂದೆ ಬಳ್ಳಾರಿ ವೆಂಕಟೇಶಾಚಾರ್ಯ, ಚಿಕ್ಕಪ್ಪ ಬಳ್ಳಾರಿ ಶೇಷಗಿರಿ ಆಚಾರ್ಯ ಹೇಳುತ್ತಿದ್ದರು. ಚೆನ್ನೈಯಲ್ಲಿ ಅಲತ್ತೂರು ಸಹೋದರರು ಇರುವಂತೆ ಇವರು ಬಳ್ಳಾರಿ ಸಹೋದರರು ಎಂದು ಪ್ರಸಿದ್ಧರಾಗಿದ್ದರು. ನಾನು ಈ ಮಟ್ಟಕ್ಕೆ ಬರಲು ಅಣ್ಣ ಬಳ್ಳಾರಿ ರಾಘವೇಂದ್ರನೂ ಕಾರಣ. ಶೇಷಗಿರಿ ಆಚಾರ್ಯರು ರಾಮ, ಕೃಷ್ಣ, ಆಂಜನೇಯ, ದತ್ತಾತ್ರೇಯ, ರಾಘವೇಂದ್ರ ಸ್ವಾಮಿಗಳ ಕುರಿತಾಗಿ ಹಾಡುಗಳನ್ನು ಬರೆದಿದ್ದರು. ಇದನ್ನು ವಿಶೇಷಸ್ತರದಲ್ಲಿ ಬರೆಯುತ್ತಿದ್ದರು ಅಥವಾ ಒಂದು ಶಕ್ತಿಯ ವಿಶೇಷ ಪ್ರೇರಣೆಯಿಂದ ಬರೆಯುತ್ತಿದ್ದರು. ಬಸ್ ಟಿಕೆಟ್‌ಗಳ ಹಿಂದೆ ಬರೆದದ್ದೂ ಇದೆ. ಹಾಡು ರಚಿಸಿದೆ ಎಂದು ಹೇಳದೆ, ಈ ಕೃತಿ ಆಯಿತು, ಈ ಕೃತಿ ಮೂಡಿಬಂತು ಎನ್ನುತ್ತಿದ್ದರು. ಇದನ್ನು ಗಮನಿಸುವಾಗ ದಾಸರ ವಂಶಸ್ಥರು ಇರಬಹುದು ಎಂದು ಕಾಣುತ್ತಿದೆ. ಅವರ ಅಂಕಿತ ನಾಮ “ವಿಶೇಷ’ವನ್ನು ನಮ್ಮ ಸಂಸ್ಥೆಗೆ ಇರಿಸಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನೂ ನಮ್ಮ ಶಿಷ್ಯರೂ ಈ ಕೃತಿಗಳನ್ನು ಹಾಡುತ್ತಿದ್ದೇವೆ.
ತ್ಯಾಗರಾಜರ ಕೃತಿಗಳಿಗೂ, ದಾಸರ ಕೃತಿಗಳಿಗೂ ಏನು ವ್ಯತ್ಯಾಸ ಕಾಣುತ್ತೀರಿ? ದಾಸರ ಕೃತಿಗಳಲ್ಲಿ ಸಂಗೀತಕ್ಕಿಂತ ಸಾಹಿತ್ಯ ಪ್ರಾಧಾನ್ಯವೆ?
ತ್ಯಾಗರಾಜರೇ ಮೊದಲಾದ ಸಂಗೀತ ತ್ರಿಮೂರ್ತಿಗಳ ಕೃತಿಗಳಲ್ಲಿ ಭಕ್ತಿ ಪ್ರಧಾನವಾಗಿ ಕಂಡುಬಂದರೆ ದಾಸರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು. ದಾಸರ ಹಾಡುಗಳು ಸಾಹಿತ್ಯದ ಮೂಲಕ ಜನರಿಗೆ ಮುಟ್ಟುತ್ತಿತ್ತು. ಹೀಗಾಗಿ ಅವರು ಸಂಗೀತಕ್ಕೆ ಹೆಚ್ಚು ಗಮನ ಹರಿಸದೆಯೂ ಇದ್ದಿರಬಹುದು. ಒಂದೇ ಹಾಡುಗಳನ್ನು ಬೇರೆ ಬೇರೆ ರಾಗಗಳಲ್ಲಿ ಹಾಡಲು ಇದೂ ಕಾರಣವಾಗಿರಬಹುದು. ಶಾಸ್ತ್ರೀಯ ಸಂಗೀತದಲ್ಲಿ ಹೀಗಲ್ಲ, ರಾಗ ಬದಲಾಗದು. “ದಾಸನ ಮಾಡಿಕೋ ನೀ ಎನ್ನ…’, “ಓಡಿ ಬಾರಯ್ಯ ವೈಕುಂಠ ಪತಿದೇವ…’ ಮೊದಲಾದ ದಾಸರ ಕೃತಿಗಳಲ್ಲಿಯೂ ನಿರ್ದಿಷ್ಟ ರಾಗಗಳ ಸಂಯೋಜನೆ ಕಂಡುಬರುತ್ತದೆ.
ದಾಸರ ಹಾಡುಗಳಂತೆ ವಚನ ಸಾಹಿತ್ಯವನ್ನು ಕಛೇರಿಗಳಲ್ಲಿ ಹಾಡುತ್ತೀರಾ? ದಾಸರ ಹಾಡುಗಳಿಗೂ ಶರಣರ ಹಾಡುಗಳಿಗೂ ಏನು ವ್ಯತ್ಯಾಸ ಕಂಡಿದ್ದೀರಿ?
ಖಂಡಿತವಾಗಿ. “ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂಬಂತಹ ವಚನಗಳನ್ನು ಕಛೇರಿಗಳಲ್ಲಿ ಹಾಡುತ್ತೇನೆ. ಇನ್ನೂ ಕಲಿಯುತ್ತಿದ್ದೇನೆ. ವಚನ ಸಾಹಿತ್ಯದಲ್ಲಿ ಚಿಕ್ಕ ಚಿಕ್ಕ ಹಾಡುಗಳಿವೆ. ಇದು ಕೂಡಲೇ ಮುಗಿದು ಹೋಗುತ್ತದೆ. ವಚನ ಸಾಹಿತ್ಯಗಳಲ್ಲಿ ಶಾಸ್ತ್ರೀಯತೆಗಿಂತ ಜನಪದ ಧಾಟಿ ಕಂಡುಬರುತ್ತದೆ. ಇಲ್ಲಿ ಶಾಸ್ತ್ರೀಯತೆಯನ್ನು ತುಂಬುವುದು ಕಷ್ಟ. ಕೆಲವರು ಶಾಸ್ತ್ರೀಯತೆಯನ್ನು ಟ್ಯೂನ್ ಮಾಡಲು ಪ್ರಯತ್ನಿಸಿದ್ದಾರೆ. ಜನಸಾಮಾನ್ಯರನ್ನು ತಲುಪುವ ದೃಷ್ಟಿಯಿಂದ ವಚನ ಸಾಹಿತ್ಯ ಪ್ರಮುಖವಾಗಿದೆ.
ಹಿಂದೂಸ್ಥಾನೀ ಸಂಗೀತದಂತೆ ಕರ್ನಾಟಕ ಸಂಗೀತದಲ್ಲಿ ಶೃಂಗಾರ ರಸ ಕಡಿಮೆಯೆ?
ಸಾಮಾನ್ಯವಾಗಿ ಕರ್ನಾಟಕ ಸಂಗೀತದಲ್ಲಿ ಭಕ್ತಿ ಪ್ರಾಧಾನ್ಯ, ಹಿಂದೂಸ್ಥಾನೀ ಸಂಗೀತದಲ್ಲಿ ಶೃಂಗಾರ ಪ್ರಾಧಾನ್ಯವಾಗಿದೆ. ಕರ್ನಾಟಕ ಸಂಗೀತದಲ್ಲಿಯೂ ಕೆಲವು ವರ್ಣ, ಕೃತಿಗಳಲ್ಲಿ ಪದಂ, ಜಾವಳಿಗಳಿಗೆ (ಶೃಂಗಾರಕ್ಕೆ) ಅವಕಾಶಗಳಿವೆ. ಕರ್ನಾಟಕ ಸಂಗೀತದಲ್ಲಿ ಭಕ್ತಿಯಲ್ಲದೆ ವ್ಯಾಕರಣ, ಶ್ರೀಚಕ್ರ, ದೇವಿ ಆರಾಧನೆಯ ಕೃತಿಗಳಿವೆ.
ಅಮೆರಿಕದಲ್ಲಿ ನೀವು ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿ ಕಂಡುಕೊಂಡ ಅನುಭವವೇನು?
ಎಲ್ಲಿ ಅಭಾವವಿರುತ್ತದೋ ಅಲ್ಲಿ ಆಸಕ್ತಿಯೂ ಹೆಚ್ಚಾಗಿರುತ್ತದೆ. ಅಮೆರಿಕದಲ್ಲಿ ಭಾರತೀಯ ಯಾವುದೇ ಕಲೆಗಳಿದ್ದರೂ ಅವುಗಳಿಗೆ ಭಾರತೀಯರು ವಿಶೇಷ ಮನ್ನಣೆ ಕೊಡುತ್ತಾರೆ. ಭಾರತದಿಂದ ಹೋದವರಿಗೆ ನಮ್ಮ ಸಂಸ್ಕೃತಿಯ ಕೊಂಡಿಯನ್ನು ಕಳೆದುಕೊಂಡಿದ್ದೇವೆ ಎಂಬ ಭಾವ ಇರುತ್ತದೆ. ಹೀಗಾಗಿ ಮಕ್ಕಳಲ್ಲಿ ನಮ್ಮ ಸಂಸ್ಕಾರ ಮುಂದುವರಿಯಬೇಕೆಂಬ ತುಡಿತ ಪೋಷಕರಲ್ಲಿರುತ್ತದೆ. ನಾನು ಸಂಗೀತ ಪಾಠ ಮಾಡುವಾಗ ಅದರ ಹಿನ್ನೆಲೆ ಅಂದರೆ ದ್ರೌಪದಿ ಹಾಡು ಬರುವಾಗ ದ್ರೌಪದಿ ಯಾರು? ಜಾಂಬವನ ಹಾಡು ಬರುವಾಗ ಜಂಬೂದ್ವೀಪ, ಜಾಂಬವನ ಕುರಿತು ಕಥೆ ಹೇಳುತ್ತಿದ್ದೆ. ಹೀಗೆ 15 ವರ್ಷ ಅಮೆರಿಕದಲ್ಲಿ ಸಂಗೀತ ಪಾಠ ಮಾಡಿದ್ದೇನೆ.
ನಿಮ್ಮ ಮನೆಯೆ ಸಂಗೀತ ಲೋಕ…
ನನ್ನ ಪತಿ ಮೈಸೂರು ಸತೀಶ್ ಇನ್ಫೋಸಿಸ್ ಅಂಗಸಂಸ್ಥೆಯಲ್ಲಿ ಉನ್ನತಾಧಿಕಾರಿಯಾದರೂ ಸ್ವತಃ ಪಿಟೀಲುವಾದಕರು. ಮಗಳು ಗೌರಿ ಸತೀಶ್ ವೈದ್ಯೆಯಾಗಿದ್ದಾಳೆ. ಮಗ ಶ್ಯಾಮಕೃಷ್ಣ ಎಂಜಿನಿಯರಿಂಗ್ ಓದುತ್ತಿದ್ದಾನೆ. ಇಬ್ಬರೂ ಹಾಡುತ್ತಾರೆ. ನಾವೆಲ್ಲರೂ ಸೇರಿ ನೂರಾರು ಕಛೇರಿಗಳನ್ನು ಕೊಟ್ಟಿದ್ದೇವೆ.
ಕರ್ನಾಟಕ ಸಂಗೀತದ ಬಾನಿ (ಶೈಲಿ) ಕುರಿತು ಕಟ್ಟರ್‌ತನ ಕಡಿಮೆಯೆ?
ಹಿಂದೂಸ್ಥಾನೀ ಸಂಗೀತದಲ್ಲಿ ಘರಾನೆ (ಶೈಲಿ) ಇದ್ದಂತೆ ಕರ್ನಾಟಕ ಸಂಗೀತದ ಬಾನಿಯ ಪರಂಪರೆ ಇದೆ. ಶಮ್ಮಂಗುಡಿ ಬಾನಿ, ಪಾಲೆತ್ತೂರು ಬಾನಿ, ಮಧುರೆ ಮಣಿ ಅಯ್ಯರ್ ಬಾನಿ, ಸಂತಾನಂ ಬಾನಿ ಹೀಗೆ ಹಿರಿಯ ಸಂಗೀತ ದಿಗ್ಗಜರ ಹಾಡಿನ ಶೈಲಿಯೇ ಬಾನಿಯಾಗಿದೆ. ನಮ್ಮಲ್ಲಿ ಸಾಮಾನ್ಯವಾಗಿ ಇತರ ಶೈಲಿಗಳಿಗೂ ಮಾನ್ಯತೆ ಇದೆ. ಶಾಸ್ತ್ರೀಯವಲ್ಲದ್ದಕ್ಕೂ ಪ್ರೋತ್ಸಾಹವಿದೆ. ಉದಾಹರಣೆಗೆ ಪಂಢರೀಬಾಯಿ ಅಣ್ಣ ಪ್ರಭಾಕರ್ ಭಾವಗೀತೆಯನ್ನು ಹಾಡುತ್ತಿದ್ದರು. ಅವರಿಂದಲೂ ನನಗೆ ಪಾಠ ಆಗಿದೆ. ನನ್ನ ತಾಯಿ ಹಿಂದೂಸ್ಥಾನೀ ಸಂಗೀತವನ್ನು ಆಲಿಸುತ್ತಿದ್ದರು. ಅಂತಹ ನಿರ್ಬಂಧಗಳಿಲ್ಲ.
ಸಂಗೀತ ಅಭ್ಯಾಸದಿಂದ ಜನರಿಗೆ ಆಗುವ ಆನುಕೂಲಗಳೇನು?
ಸಂಗೀತವನ್ನು ಅಭ್ಯಸಿಸುವುದರಿಂದ ಮನುಷ್ಯನಲ್ಲಿ ಉತ್ತಮತೆ, ಉತ್ತಮ ನಡತೆ ಅಭಿವೃದ್ಧಿಗೊಳ್ಳುತ್ತದೆ. ನನ್ನ ಮತ್ತು ಪತಿಯ ಜೀವನದಲ್ಲಿಯೂ ಇದು ಸಹಾಯವಾಗಿದೆ. ಯಾವುದೇ ಕಲೆಯಾಗಲಿ ನಮ್ಮ ಆಸಕ್ತಿಯಂತೆ ಅದನ್ನು ಮೈಗೂಡಿಸಿಕೊಳ್ಳುವುದು ಕರ್ತವ್ಯ ಎಂದೆನಿಸುತ್ತದೆ.
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ…ಟ್ರಂಪ್
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.