ಸೆ. 5 ಶಿಕ್ಷಕರ ದಿನಾಚರಣೆ; ಆದರ್ಶ ಶಿಕ್ಷಕ ಜೀವನಕ್ಕೆ ತರಹೇವಾರಿ ಮುಖ
Team Udayavani, Sep 4, 2022, 6:15 AM IST
ಸೆ. 5 ಶಿಕ್ಷಕರ ದಿನಾಚರಣೆ. ನಾಲ್ವರು ಆದರ್ಶ ಶಿಕ್ಷಕರನ್ನು ಇಲ್ಲಿ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ.
ಪತ್ರಿಕೆ ವಿತರಿಸುವ ಕಾಲೇಜು ಉಪನ್ಯಾಸಕರು
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಿಬ್ಬರು (ವಾಣಿಜ್ಯ ಶಾಸ್ತ್ರ) ಹಮ್ಮುಬಿಮ್ಮುಗಳಿಲ್ಲದೆ ನಿತ್ಯ ಬೆಳಗ್ಗೆ ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರದ ಇಂದಿರಾಗಾಂಧಿ ಸರಕಾರಿ ಮಹಿಳಾ ಕಾಲೇಜಿನ ವಿಜೇಂದ್ರ ಪ್ರಭು ಅವರ ಪತ್ರಿಕಾ ವಿತರಣೆ ವ್ಯವಸಾಯಕ್ಕೆ 30ನೆಯ ವರ್ಷವಿದು. ಇವರ ಮನೆ ಇರುವುದು ಜಯನಗರದಲ್ಲಿ. ಜಯನಗರ ಮತ್ತು ಹೊಸನಗರದಲ್ಲಿ ಎರಡೂ ಕಡೆ ನೂರಾರು ಪ್ರತಿ ಪತ್ರಿಕೆಗಳನ್ನು ವಿತರಿಸಿ 10 ಗಂಟೆಗೆ ಕಾಲೇಜಿಗೆ ಹೋಗುತ್ತಾರೆ.
ಪ್ರಭು ಅವರ ಅಣ್ಣ ರಾಘವೇಂದ್ರ ಪ್ರಭು ಪತ್ರಿಕೆ ಏಜೆನ್ಸಿಯನ್ನು ಪಡೆದುಕೊಂಡಿದ್ದರು. ಅವರು ಬಿಟ್ಟು ಬೇರೆಡೆ ಹೋಗಬೇಕಾದಾಗ ವಿಜೇಂದ್ರ ಪ್ರಭು ಆರಂಭಿಸಿದರು. ಆಗ ಇವರು ಕೇವಲ ಮೂರನೆಯ ತರಗತಿ. ಅಲ್ಲಿಂದ ಆರಂಭಿಸಿದ ಈ ವೃತ್ತಿ ಇಂದಿಗೂ ಮುಂದುವರಿಯುತ್ತಿದೆ. ಬೆಳಗ್ಗೆ 5ರಿಂದ 8ರ ವರೆಗೆ ಎಡೆಬಿಡದೆ ಪತ್ರಿಕೆ ವಿತರಿಸುತ್ತಾರೆ. ಸ್ನಾತಕೋತ್ತರ ಪದವಿಯನ್ನು ಓದುವಾಗ ಪತ್ರಿಕೆ ವಿತರಿಸಿಯೇ 50 ಕಿ.ಮೀ. ದೂರದ ಶಿವಮೊಗ್ಗಕ್ಕೆ ಹೋಗುತ್ತಿದ್ದರು.
ಬಾಲ್ಯದಲ್ಲಿ ಬಡತನದಿಂದ ಕಲಿಕೆಯ ಅಗತ್ಯ ಗಳಿಗೆ ಪತ್ರಿಕೆ ವಿತರಣೆ ಅನಿವಾರ್ಯವಾಗಿತ್ತು. ಈಗ ಜೀವನದಲ್ಲಿ ಮೇಲೇರಿದ್ದಾರೆ. ಇವರಿಗೆ ಎಲ್ಲಿಂದ ಬಂದಿದ್ದೇನೆಂಬ ಅರಿವು ಇದೆ. ಹೀಗಾಗಿ ಬಡ ವಿದ್ಯಾರ್ಥಿಗಳ ಅಗತ್ಯವನ್ನು ಪೂರೈಸುತ್ತಿದ್ದಾರೆ.
ಹಿಂದೆ ಹೊಸನಗರದ ಕೊಡಚಾದ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಒಟ್ಟು 14 ವರ್ಷಗಳ ಬೋಧನಾನುಭವವಿದೆ. “ಪೂರ್ಣಕಾಲೀನ ಬೋಧಕನಾದ್ದರಿಂದ ಸಮಯ ಸಾಕಾಗುವುದಿಲ್ಲ. ಖಾಯಮಾತಿ ಯಾದರೂ ಕೈಹಿಡಿದ ಪತ್ರಿಕಾ ವಿತರಣೆ ಬಿಡುವುದಿಲ್ಲ’ ಎಂಬ ತೀರ್ಮಾನ ಅವರದು. ಪ್ರಭು ಅವರು ಮೂಲತಃ ಹೊಸನಗರ ತಾಲೂಕಿನ ಸಂತೆಕಟ್ಟೆಯವರು. ಇವರ ತಾಯಿ ಮನೆ ಇರುವುದು ಬೈಂದೂರು ತಾಲೂಕಿನ ಎಳಜಿತ್‌ನಲ್ಲಿ.
ಶಿವಮೊಗ್ಗ ಜಿಲ್ಲೆ ಹೊಸನಗರದ ಕೊಡಚಾದ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಮಹೇಶ್ ಕೆ. ಕಾರ್ಗಡಿ 22 ವರ್ಷಗಳಿಂದ ಪತ್ರಿಕೆಗಳನ್ನು ಮನೆಮನೆಗೆ ವಿತರಿಸುತ್ತಿದ್ದಾರೆ. ಇವರ ಮನೆ ಇರುವುದು ಕಾರ್ಗಡಿಯಲ್ಲಿ (ಕಾರಣಗಿರಿ). ಇಲ್ಲಿ ಪತ್ರಿಕೆಗಳನ್ನು ವಿತರಿಸಿದ ಬಳಿಕ 10 ಗಂಟೆಗೆ ಇವರು ತರಗತಿಗೆ ಹಾಜರಾಗುತ್ತಾರೆ. ಏಳನೆಯ ತರಗತಿಯಲ್ಲಿ ಆರಂಭಿಸಿದ ಈ ಕಾಯಕಕ್ಕೆ 22 ವರ್ಷಗಳು ಸಂದಿವೆ. ಬೆಳಗ್ಗೆ 5ರಿಂದ 8ರ ವರೆಗೆ ಇವರ ಪತ್ರಿಕಾ ವಿತರಣೆಯ ವ್ಯವಸಾಯ ನಡೆಯುತ್ತದೆ. ಹಿಂದೆ ಇದ್ದ ಏಜೆಂಟರೊಬ್ಬರು ಬಿಲ್ ಸಂಗ್ರಹಿಸಲು ಸಾಧ್ಯವಾಗದೆ ಬಿಡಲು ನಿರ್ಧರಿಸಿದಾಗ ಮಹೇಶ್ ಆ ಕೆಲಸಕ್ಕೆ ಕೈ ಹಾಕಿದರು. ಆರಂಭದಲ್ಲಿ ಬೈಸಿಕಲ್‌ನಲ್ಲಿ ಹೋಗಿ ಪತ್ರಿಕೆ ವಿತರಿಸುತ್ತಿದ್ದರು. ಸ್ವಂತ ಎರಡು ಬೈಸಿಕಲ್ ಕಳವಾದಾಗ ಬಾಡಿಗೆಯ ಬೈಸಿಕಲ್ ಪಡೆದು ವಿತರಿಸಿದ್ದೂ ಇದೆ. ಈಗ ಬೈಕ್ ಬಂದಿದೆ.
ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಒಟ್ಟು 13 ವರ್ಷಗಳಿಂದ ಉಪನ್ಯಾಸಕ ವೃತ್ತಿಯಲ್ಲಿದ್ದಾರೆ. ಸಹಾಯಕ ಪ್ರಾಧ್ಯಾಪಕ ಹುದ್ದೆ ಪರೀಕ್ಷೆ ಬರೆದಿದ್ದಾರೆ. “ನನಗೆ ಈ ಕೆಲಸದಲ್ಲಿ ತೃಪ್ತಿ ಇದೆ. ಬೆಳಗ್ಗೆ 5 ಗಂಟೆಯಿಂದ ಚುರುಕಾಗಿರಲು ಸಾಧ್ಯ’ ಎನ್ನುತ್ತಾರೆ ಮಹೇಶ್. ಶಿವಮೊಗ್ಗದಲ್ಲಿ ಸ್ನಾತಕೋತ್ತರ ಪದವಿ ಓದುವಾಗ ಮತ್ತು ಕಡೂರಿನಲ್ಲಿದ್ದಾಗ ತಮ್ಮಂದಿ ರಾದ ಗಣೇಶ್, ಉಮೇಶ್ ಪತ್ರಿಕೆಗಳನ್ನು ವಿತರಿಸಿದ್ದರು. ಈಗಲೂ ಸಹಕರಿಸುತ್ತಿದ್ದಾರೆ, ವಿತರಣೆ ಮಾಡುವುದು ಮಾತ್ರ ಮಹೇಶ್ ಅವರೇ.
ಮಹೇಶ್ ಅವರ ತಂದೆಯವರು ಮೂಲತಃ ಶಂಕರನಾರಾಯಣದವರು. ತಾಯಿ ಮನೆ ಬಾರಕೂರು ಮಸ್ಕಿಬೈಲಿನಲ್ಲಿದೆ. ಪತ್ನಿಯ ಮನೆ ಶಿರ್ವ ಮಂಚಕಲ್.
ಸಿಎಲ್, ಇಎಲ್ ಮಾಡದ ಪ್ರೊಫೆಸರ್
ರಜೆಯ ಕಲ್ಪನೆ ಹುಟ್ಟಿದ್ದು ಎರಡು ಶತಕಗಳ ಹಿಂದೆ. ಕಾರ್ಮಿಕರಿಗೆ ರಜೆಯನ್ನೇ ಕೊಡದ ಬ್ರಿಟಿಷರ ಆ ಕಾಲದಲ್ಲಿ ಮಹಾರಾಷ್ಟ್ರದ ಕಾರ್ಮಿಕ ಮುಖಂಡ ನಾರಾಯಣ ಮೇಘಜೀ ಲೋಖಂಡೆ ಹೋರಾಡಿ ವಾರದ ರಜೆಯನ್ನು ಮಂಜೂರು ಮಾಡಿಸಿಕೊಂಡಿದ್ದರು. ಇದು ಬೆಳೆದೂ ಬೆಳೆದು ಒಟ್ಟು 365 ದಿನಗಳಲ್ಲಿ ಅರ್ಧಾಂಶಕ್ಕಿಂತ ಹೆಚ್ಚು ರಜೆ ಅನುಭವಿಸುವವರನ್ನೂ ಬೆಳೆಸಿ ಬಿಟ್ಟಿದೆ. ಆದರೆ ಒಬ್ಬ ಕಾಲೇಜು ಪ್ರಾಧ್ಯಾಪಕ ನಿವೃತ್ತಿಯ ವರೆಗೂ ನಿವೃತ್ತಿ ಅನಂತರದ ವೃತ್ತಿಜೀವನದಲ್ಲಿಯೂ ಒಂದೇ ಒಂದು ಸಿಎಲ್, ಇಎಲ್ ರಜೆಯನ್ನು ಮಾಡಲಿಲ್ಲವೆಂದರೆ ರಜೆಗಾಗಿ ಸದಾ ಮುಂದಿರುವವರಿಗೆ ಮಾತ್ರವಲ್ಲ ಎಲ್ಲರಿಗೂ ಅಚ್ಚರಿಯಾದೀತು. ಇವರು ಸುಳ್ಯದ ಪ್ರೊ| ಟಿ. ಶ್ರೀಕೃಷ್ಣ ಭಟ್.
1976ರಿಂದ 2006ರ ವರೆಗೆ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಪ್ರೊ| ಭಟ್, ಆರಂಭದಲ್ಲಿ ಇವರೊಬ್ಬರೇ ವಿಭಾಗದಲ್ಲಿ ಉಪನ್ಯಾಸಕರಾದ ಕಾರಣ ಮಕ್ಕಳಿಗೆ ತೊಂದರೆಯಾಗುವುದು ಬೇಡವೆಂದು ರಜೆ ಮಾಡಿರಲಿಲ್ಲ. ಅನಂತರ ಉಪನ್ಯಾಸಕರ ಸಂಖ್ಯೆ ಹೆಚ್ಚಾದರೂ ಅದೇ ಮನೋಧರ್ಮ ವಿಭಾಗ ಮುಖ್ಯಸ್ಥರಾಗಿ ನಿವೃತ್ತಿಯ ವರೆಗೂ ಮುಂದುವರಿಯಿತು. 2006ರಿಂದ 14ರ ವರೆಗೆ ಉಜಿರೆಯ ಎಸ್‌ಡಿಎಂ ರೆಸಿಡೆನ್ಶಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲ ರಾದಾಗಲೂ ರಜೆ ಗೋಜಿಗೆ ಹೋಗಲಿಲ್ಲ. ಇವರು ಭೋಪಾಲ ದಲ್ಲಿ ಎಂಕಾಂ ಪದವಿ ಪಡೆಯುವಾಗಲೂ ಎರಡು ವರ್ಷ ರಜೆ ಮಾಡಲಿಲ್ಲವೆಂದರೆ ಹಾಲಿ ಮತ್ತು ಮಾಜಿ ವಿದ್ಯಾರ್ಥಿಗಳೂ ಹುಬ್ಬೇರಿಸಬಹುದು. “ಕೌಟುಂಬಿಕ ಕಾರ್ಯಕ್ರಮಗಳಿಗೆ ಹೋಗುವ ಅನಿವಾರ್ಯ ಬರಲಿಲ್ಲವೆ?’ ಎಂದು ಪ್ರಶ್ನಿಸಿದರೆ, “ಅಂತಹ ಸಂದರ್ಭ ನನ್ನ ಮನೆಯವರು ಹೋಗುತ್ತಿದ್ದರು’ ಎನ್ನುತ್ತಾರೆ. ಪತ್ನಿ ರಾಜರಾಜೇಶ್ವರಿಯವರೂ ಎಂಕಾಂ ಪದವೀಧರೆ, ಗೃಹಿಣಿ. ಪ್ರೊ| ಭಟ್ ಪ್ರಸ್ತುತ ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಲಯದ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.
ತೆಂಗಿನ ಕಾಯಿ ಕೊಯ್ಯುತ್ತಿದ್ದ ಶಿಕ್ಷಕ
ಜಗನ್ನಾಥ ಕೆ. ಅಂಬಲಪಾಡಿಯವರು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರು, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ಈ ವೇಳೆ ಅವರು ಪ್ರತೀ ಶನಿವಾರ, ರವಿವಾರ ತೆಂಗಿನ ಮರ ಹತ್ತುವ ಕಾಯಕವನ್ನೂ ನಡೆಸುತ್ತಿದ್ದರು.
ಇವರು 1976ರಿಂದ 2013ರ ವರೆಗೆ ಸುದೀರ್ಘ ಕಾಲ ಶಿಕ್ಷಕರಾಗಿದ್ದರು. ಮೊದಲ ಸೇವೆ ಪುತ್ತೂರು ತಾಲೂಕಿನ ನೆಲ್ಯಾಡಿಯಲ್ಲಿ ಆರಂಭವಾಯಿತು. ಅನಂತರ ಹೆಜಮಾಡಿ ಕೋಡಿಯಲ್ಲಿ, ಸುದೀರ್ಘ ಕಾಲ ಮಲ್ಪೆ ಕುದ್ರುಕರೆ ಶಾಲೆಯಲ್ಲಿ (1980- 2013, 2000 ಬಳಿಕ ಮುಖ್ಯಶಿಕ್ಷಕರು) ಸೇವೆ ಸಲ್ಲಿಸಿ ನಿವೃತ್ತರಾದರು. ನೆಲ್ಯಾಡಿ ದೂರದಲ್ಲಿದ್ದ ಕಾರಣ ಮನೆಗೆ ಹಬ್ಬಗಳಿಗೆ ಬರುವಾಗ ರಜೆ ಹಾಕುತ್ತಿದ್ದರು. ಮಲ್ಪೆ ಕುದ್ರುಕರೆ ಶಾಲೆಗೆ ಬಂದ ಬಳಿಕ ಅವರು ರಜೆ ಹಾಕಿದ್ದು ಎರಡೇ ಎರಡು ಬಾರಿ: ತಂದೆ ಮೃತ ಪಟ್ಟಾಗ ಅಂತಿಮ ಸಂಸ್ಕಾರಕ್ಕಾಗಿ ಐದು ದಿನ ಮತ್ತು ಸಹೋದರನನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಲು ಮೂರೂವರೆ ದಿನ.
18ನೆಯ ವಯಸ್ಸಿನಲ್ಲಿ ತೆಂಗಿನ ಮರ ಹತ್ತಲು ಆರಂಭಿಸಿದ ಅವರು 50 ವರ್ಷದ ವರೆಗೂ ಮುಂದುವರಿಸಿದರು. ಬಳಿಕ ತಂದೆಯ ಆರೈಕೆಗಾಗಿ ಬಿಟ್ಟರು. ಜಗನ್ನಾಥರು ಅಂಬಲಪಾಡಿ, ಕಪ್ಪೆಟ್ಟು ಪ್ರದೇಶಗಳಲ್ಲಿ ತೆಂಗಿನ ಕಾಯಿ ಕೊಯ್ಯುತ್ತಿದ್ದರು. “ತೆಂಗಿನ ಮರ ಹತ್ತುವುದು ಉತ್ತಮ ವ್ಯಾಯಾಮ. ಇದರಿಂದ ನನ್ನ ಆರೋಗ್ಯ ಕೆಡಲಿಲ್ಲ, ರಜೆ ಹಾಕುವ ಪ್ರಮೇಯವೂ ಬರಲಿಲ್ಲ. ಮೇಲಾಗಿ ಶಾಲೆ ನನಗೆ ಅನ್ನ ಹಾಕುವ ಸಂಸ್ಥೆ. ರಜೆ ಪಡೆಯುವುದು ಹೇಗೆ ಎಂಬ ಭಾವನೆ ಬರುತ್ತಿತ್ತು’ ಎನ್ನುತ್ತಾರೆ ಅವರು. ಮುಖ್ಯ ಶಿಕ್ಷಕರಾದ ಬಳಿಕವೂ ಚುನಾವಣೆಯ ಬಿಎಲ್‌ಒ (ಬೂತ್ ಮಟ್ಟದ ಅಧಿಕಾರಿ) ಆಗಿ ಕಾರ್ಯ ನಿರ್ವಹಿಸಿದ್ದರು.
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.