ರಾಜಧರ್ಮದ ರಾಜಕಾರಣಿ ಶಂಕರಮೂರ್ತಿ


Team Udayavani, Jun 21, 2018, 12:30 AM IST

p-13.jpg

ಕರ್ನಾಟಕದ ಚಿಂತಕರ ಚಾವಡಿ ಎಂಬ ಗೌರವಕ್ಕೆ ಪಾತ್ರವಾದ ಮೇಲ್ಮನೆಯ ಶಾಸನ ಸಭೆಯ ಪರಮೋಚ್ಚ ಹುದ್ದೆಯಾದ ಸಭಾಪತಿ ಸ್ಥಾನದಿಂದ ರಾಜಧರ್ಮದ ರಾಜಕಾರಣಿ ಶಂಕರಮೂರ್ತಿಯವರು ಇಂದು ನಿವೃತ್ತಿ ಪಡೆಯುತ್ತಿದ್ದಾರೆ. ವಿಧಾನ ಪರಿಷತ್ತಿನ ಸಭಾಪತಿ ಅವಧಿಯೊಂದಿಗೆ ಅವರ ಶಾಸಕತ್ವ ಹುದ್ದೆ ಇಂದೇ ಕೊನೆಗೊಳ್ಳಲಿದೆ. ಒಂದರ್ಥದಲ್ಲಿ ಡಿ. ಹೆಚ್‌. ಶಂಕರಮೂರ್ತಿಯವರು ಶಾಸಕತ್ವ ಮತ್ತು ಸಭಾಪತಿ ಹುದ್ದೆ ಮಾತ್ರವಲ್ಲ, ಬಹುತೇಕ ಚುನಾವಣಾ ರಾಜಕಾರಣ ದಿಂದಲೇ ನಿವೃತ್ತಿಯಾಗುತ್ತಾರೆ ಎನಿಸುತ್ತದೆ. ವಯೋಮಾನಕ್ಕನು ಗುಣವಾಗಿ ರಾಜಕಾರಣಿಗಳು ಸ್ವಯಂ ನಿವೃತ್ತಿ ಘೋಷಿಸಿ ಚುನಾವಣಾ ರಾಜಕಾರಣದಿಂದ ದೂರವಿರಬೇಕೆಂಬ ಆದರ್ಶದ ನಿಲುವಿಗೆ, ಈ ದೇಶದಲ್ಲಿ ಯಾರೆಲ್ಲ ಬದ್ಧರಾಗಿದ್ದಾರೋ ನನಗರಿವಿಲ್ಲ. ಆದರೆ ಸಂಘ ಕಾರ್ಯ ರಾಜಕಾರಣದ ದಾರಿಯಲ್ಲಿ ಸಾಗಿಬಂದ ಶಂಕರಮೂರ್ತಿಯವರು, “ನಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಅನ್ಯರಿಗೆ ಅವಕಾಶ ಕೊಡಿ’ ಎಂದಿರುವುದು ಯಾಕೋ ಏನೋ ದೊಡ್ಡ ಸುದ್ದಿಯಾಗಲಿಲ್ಲ. ಸುದ್ದಿಯಾಗುವುದು ಬಹುತೇಕ ರಾಜಕಾರಣಿಗಳಿಗೆ ಬೇಕಿರಲಿಲ್ಲ. ನಮ್ಮ ಸುದ್ದಿ ಮಾಧ್ಯಮಗಳು ಇದೊಂದು ಅಪರೂಪದ ನಿರ್ಧಾರವೆಂದು ಬಿತ್ತರಿಸಲು ಹೋಗಿಲ್ಲ. ಒಳ್ಳೆಯದು ಕಣ್ಣಿಗೆ ಬೀಳುವುದು ಸುಲಭವೂ ಅಲ್ಲ. ಸಾರ್ವಜನಿಕ ಜೀವನದಲ್ಲಿ ಯಾರೊಬ್ಬರನ್ನೂ ವೈಭವೀಕರಿಸುವುದರಲ್ಲಿ ಅರ್ಥವಿಲ್ಲ. ಹಾಗೆಂದು ಅಧಿಕಾರದ ಕೊನೆಯ ಕ್ಷಣದವರೆಗೂ ಪರಿಶುದ್ಧತೆ, ಪ್ರಾಮಾಣಿಕ ತೆಯಿಂದ ಆದರ್ಶ ರಾಜಕಾರಣ ಮಾಡಿದಂಥವರನ್ನು ಮರೆತು ಬಿಟ್ಟರೆ ಕರ್ತವ್ಯಲೋಪವಾಗಬಹುದು. 

ವಿಧಾನ ಪರಿಷತ್ತಿನ ಪ್ರಸ್ತುತ ಘನವೆತ್ತ ಸಭಾಪತಿ ಶಂಕರಮೂರ್ತಿ ಯವರು ನನ್ನ ತಿಳಿವಳಿಕೆಯ ಮಟ್ಟಿಗೆ ರಾಜಕಾರಣದಲ್ಲಿ ನೈಜ ಪ್ರಾಮಾಣಿಕತೆಯ ಹೆಸರಿನಲ್ಲಿ ಉಳಿದುಕೊಂಡಿರುವ ಅಪರೂಪದ ಕೊನೆಯ ಕೊಂಡಿಗಳಲ್ಲೊಬ್ಬರು. ಈ ಹಿಂದೆ ಕರ್ನಾಟಕದ ಕೇಸರಿಯೆಂದೇ ಪ್ರಖ್ಯಾತರಾದ ಮೊನಚು ಮಾತಿನ ಹಿರಿಯ ಧುರೀಣ ದಿವಂಗತ ಜಗನ್ನಾಥ ರಾವ್‌ ಜೋಷಿಯವರು ಕರ್ನಾಟಕದ ಆಯ್ದ ಶಾಸಕರ ಸಭೆಯೊಂದರಲ್ಲಿ ಮಾತನಾಡುತ್ತಾ “”ಎಲಾ ಮಕ್ಕಳಾ, ನಿಮಗಿಂತ ವಿದ್ಯಾವಂತರು, ನಿಮಗಿಂತ ಬುದ್ಧಿವಂತರು, ನಿಮಗಿಂತ ಸಮರ್ಥರು ಮತ್ತು ರಾಷ್ಟ್ರ ಪ್ರೇಮಿಗಳು ವಿಧಾನಸೌಧದ ಹೊರಗೆ ಕೋಟ್ಯಂತರ ಜನರಿದ್ದಾರೆ. ಆದರೆ ನಿಮ್ಮ ಹಣೆಬರಹ ಚೆನ್ನಾಗಿರುವುದರಿಂದ ನೀವು ಸದನದ ಒಳಗಿದ್ದೀರಿ” ಎಂದು ಹೇಳಿ ಕೊನೆಗೊಂದು ಮಾತು ಸೇರಿಸಿದ್ದರು. “”ನಿಮ್ಮನ್ನು ಆರಿಸಿ ಕಳುಹಿಸಿದ ಕೋಟ್ಯಂತರ ಮಂದಿ ನಿಮಗಿಂತ ಯೋಗ್ಯರು, ಸದನದಲ್ಲಿ ನಿಮ್ಮ ನಡವಳಿಕೆಯನ್ನು ಗಮನಿಸುತ್ತಿದ್ದಾರೆಂದು ತಿಳಿದು ವರ್ತಿಸಿದರೆ ನಿಮ್ಮ ಘನತೆ ಹೆಚ್ಚುತ್ತೆ. ಅದಲ್ಲವಾದರೆ…!” ಜಗನ್ನಾಥ್‌ ರಾವ್‌ ಮಾತು ಮುಗಿಸಿದ್ದರು. ಅಂದಿನ ಜೋಷಿಯವರ ಮಾತುಗಳನ್ನು ಶಂಕರ ಮೂರ್ತಿ ಕೇಳಿಸಿಕೊಂಡಿದ್ದಾರೋ ಇಲ್ಲವೋ ಬೇರೆ ಮಾತು. ಆದರೆ ಒಂದಂತೂ ಸತ್ಯ, ಸರಿಸುಮಾರು 30 ವರ್ಷಗಳ ಕಾಲ ನಿರಂತರವಾಗಿ 6 ಬಾರಿ ಮೇಲ್ಮನೆಯ ಶಾಸಕರಾಗಿ ಕರ್ತವ್ಯ ನಿರ್ವಹಿಸಿದ್ದು ಮಾತ್ರವಲ್ಲ, 2002ರಲ್ಲಿ ವಿರೋಧ ಪಕ್ಷದ ನಾಯಕನಾಗಿ ನಂತರ ಸಮ್ಮಿಶ್ರ ಸರಕಾರ ಬಂದೊಡನೆ ಮಂತ್ರಿಯಾಗಿ ಕೆಲಸ ಮಾಡಿದ ಶಂಕರಮೂರ್ತಿ ಸಾರ್ವಜನಿಕ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಹೊಂದಿಲ್ಲವೆಂಬುದೇ ಇಂದಿನ ರಾಜಕಾರಣದಲ್ಲೊಂದು ಅದ್ಭುತ. ಸಾಮಾನ್ಯ ಯುವ ಪ್ರಜೆಯೊಬ್ಬ ರಾಜಕಾರಣದ ಕಾರ್ಯಕರ್ತನಾಗಿ, ಕಾರ್ಯಕರ್ತನೊಬ್ಬ ಜನಸಂಘಟಕನಾಗಿ, ಜನಸಂಘಟಕ ರಾಜಕೀಯ ಪಕ್ಷದ ನೇತಾರನಾಗಿ, ನೇತಾರ ಶಾಸಕನಾಗಿ, ಶಾಸಕ ವಿರೋಧ ಪಕ್ಷದ ನಾಯಕನಾಗಿ, ವಿಪಕ್ಷದ ಮುಖಂಡ ಸಮ್ಮಿಶ್ರ ಸರಕಾರದ ಸಭಾ ನಾಯಕನಾಗಿ, ಸಭಾನಾಯಕನೇ ಸದನದ ಸಭಾಪತಿಯಾಗಿ ಸುಮಾರು 8 ವರ್ಷಗಳ ಕಾಲ ಶಂಕರಮೂರ್ತಿ ಅಧಿಕಾರ ನಿರ್ವಹಿಸಿದ್ದು ಒಂದು ದಾಖಲೆಯಾದರೆ, ಸಭಾಪತಿ ಹುದ್ದೆಯ ಮೂಲಕ ಸದನದ ಗೌರವ ಹೆಚ್ಚಿಸಿದ್ದು ಇನ್ನೊಂದು ಹೆಗ್ಗಳಿಕೆ. ರಾಜಕಾರಣವೇನೇ ಇರಲಿ ಜನಪರ ಹೋರಾಟದ ಮೂಲಕವೇ ಮೇಲೆದ್ದು ಬಂದ ಕಾಗೋಡು ತಿಮ್ಮಪ್ಪನವರು ಕಿರಿಯರಾದ ನಮಗೆಲ್ಲಾ ಹೇಳಿದ ಬುದ್ಧಿ ಮಾತು.. “”ನಿಮಗೆಲ್ಲಾ ಅಧಿಕಾರದ ಮೆಟ್ಟಿಲುಗಳೇನೆಂದು ಗೊತ್ತೇ ಹೊರತು ಹೋರಾಟದ ಪೆಟ್ಟೇನೆಂದು ಗೊತ್ತಿಲ್ಲ. ನಿತ್ಯ ಊಟಕ್ಕೆ ಪರದಾಡುವ ಬಡವರ ಮಧ್ಯೆ ನಿಂತು ಮಾಡಿದ ಹೋರಾಟಗಳು, ಅದರಿಂದ ತಿಂದ ಪೆಟ್ಟು, ದುಡಿದುಣ್ಣುವವರ ಹಕ್ಕಿಗಾಗಿ ಮಾಡಿದ ಚಳುವಳಿಯಿಂದ ಸಿಕ್ಕಿದ ಜೈಲೂಟ, ಇವೆಲ್ಲಾ ರಾಜಕಾರಣಿಗಳನ್ನು ರೂಪಿಸಬೇಕು. ಆದರಿಂದು ರಾಜಕಾರಣ, ಅಧಿಕಾರ, ಮಂತ್ರಿಗಿರಿಗಳೆಲ್ಲಾ ಹಣದ ಮೂಟೆಯ ಮೂಲಕ ತೀರ್ಮಾನವಾಗುತ್ತದೆ” ಎಂದು ಕಟುಕಿ ಆಡಿದ್ದರು ಕಾಗೋಡು.

ಇಂದು ಹುದ್ದೆಯಿಂದ ನಿರ್ಗಮಿಸುತ್ತಿರುವ ಶಂಕರಮೂರ್ತಿಯವರು ಮಾತ್ರ ಬದುಕಿನ ಕ್ಷಣ-ಕ್ಷಣವೂ ನೋವು-ನಲಿವು, ಸೋಲು-ಗೆಲುವುಗಳ ಹೋರಾಟದ ಕಣದಿಂದಲೇ ಮೂಡಿ ಬಂದವರು. ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ 19 ತಿಂಗಳುಗಳ ಕಾಲ ಸೆರೆಮನೆ ವಾಸ ಅನುಭವಿಸಿದ ಶಂಕರಮೂರ್ತಿಯವರ ಬದುಕಿನ ಪುಟಪುಟಗಳನ್ನು ಅರ್ಥ ಮಾಡಿಕೊಳ್ಳುವುದು ಇಂದಿನ ಹಣಬಲ, ಜಾತಿಬಲ, ತೋಳ್ಬಲದ ರಾಜಕಾರಣಿಗಳಿಗೆ ಸುಲಭವಲ್ಲ. 19 ತಿಂಗಳು ಅನುಭವಿಸಿದ ಜೈಲುವಾಸವನ್ನು ಸಹ ಶಂಕರಮೂರ್ತಿಯವರು ಒಂದು ಅವಕಾಶವನ್ನಾಗಿ ಬಳಸಿಕೊಂಡು ಬೆಳಗಾವಿ ಜೈಲಲ್ಲಿರುವ ಗ್ರಂಥಾಲಯದಿಂದ ಭಗವದ್ಗೀತೆ, ಕುರಾನ್‌, ಬೈಬಲ್‌ಗ‌ಳನ್ನು ತರಿಸಿಕೊಂಡು ಓದಿ ಎಲ್ಲಾ ಧರ್ಮಗ್ರಂಥಗಳ ಸಾರಾಂಶ ಸಂಸ್ಕೃತಿ ಇತಿಹಾಸಗಳನ್ನು ಅರ್ಥೈಸಿಕೊಂಡರಂತೆ. ಜೈಲಲ್ಲಿ ಕೊಡುತ್ತಿರುವ ಊಟ, ಹುಳಹಪ್ಪಟೆಗಳ ಉಗ್ರಾಣದಂತೆ ಕಂಡುಬಂದಾಗ ಸೆಟೆದು ಪ್ರತಿರೋಧ ಮಾಡಿದ ಶಂಕರಮೂರ್ತಿಯವರು “”ನಾವು ಕೊಲೆ, ಸುಲಿಗೆ, ದರೋಡೆ ಮಾಡಿ ಜೈಲಿಗೆ ಬಂದಿಲ್ಲ. ಹಾಗೆ ಬಂದವರಿದ್ದರೂ ನ್ಯಾಯಯುತ ಅನ್ನ ನಿರಾಕರಿಸುವಂತಿಲ್ಲ. ನಮಗೆ ಸಾಮಾಗ್ರಿಗಳನ್ನು ಕೊಡಿ, ನಾವೇ ಅಡಿಗೆ ಮಾಡಿಕೊಳ್ಳುತ್ತೇವೆ” ಎಂದು ತಮ್ಮ ಜೊತೆಗಿದ್ದ ಪಿ.ಜಿ.ಆರ್‌ ಸಿಂಧ್ಯಾ, ಮೈಕೆಲ್‌ ಫೆರ್ನಾಂಡಿಸ್‌ ಮಲ್ಲಿಕಾರ್ಜುನಯ್ಯ ಸಹಿತ 89 ಮಂದಿ ರಾಜಕೀಯ ಖೈದಿಗಳಿಗೆ ಬಾಣಭಟ್ಟನಾಗಿ ತಾವೇ ತಯಾರಿಸಿದ ಅಡುಗೆ ಉಣ್ಣುವಂತೆ ಮಾಡಿದ್ದರು. ಜೈಲೂಟದಲ್ಲಿ ಶಂಕರಮೂರ್ತಿಯವರ ಲೆಕ್ಕಚಾರ ಹೇಗೆ ಕೆಲಸ ಮಾಡಿತ್ತೆಂದರೆ, ಕೊಟ್ಟ ಸಾಮಗ್ರಿಗಳನ್ನು ಉಳಿಸಿ ವಾಪಾಸು ಮಾಡಿ ಇತರೆ ಸಾಮಾಗ್ರಿಗಳನ್ನು ತರಿಸಿ, ಮೂರು ದಿನಕ್ಕೊಮ್ಮೆ ಪಾಯಾಸದೂಟ ಮಾಡಿ ಬಡಿಸುತ್ತಿದ್ದರಂತೆ ಈ ಪುಣ್ಯಾತ್ಮ! ಜೈಲಲ್ಲೂ ಪಾಠ-ಪ್ರವಚನ, ಭಜನೆ, ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸುವುದನ್ನು ನೋಡಿ, ಜೈಲಿನ ಅಧಿಕಾರಿಗಳೇ ಬೆಚ್ಚಿಬಿದ್ದ ನಿದರ್ಶನಗಳುಂಟು.

ವಿದ್ಯಾರ್ಥಿ ಜೀವನದಿಂದ ಪ್ರಾರಂಭವಾಗಿ ಆರು ದಶಕ ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಸಭಾಪತಿಯವರ ನಡವಳಿಕೆಯೇ ಒಂದು ಇತಿಹಾಸ. ತುರ್ತು ಪರಿಸಿತಿ§ಯ ಕರಾಳ ದಿನಗಳಲ್ಲಿ ಶಿವಮೊಗ್ಗದ ಪೇಟೆ ಬೀದಿಯಲ್ಲಿ ರಾಷ್ಟ್ರಧ್ವಜ ಹಿಡಿದು ಭಾರತ್‌ ಮಾತಾಕೀ ಜೈ ಎಂದ ಕಾರಣಕ್ಕೆ ಶಂಕರಮೂರ್ತಿಯವರ ಬಂಧನವಾಗುತ್ತಾದರೇ, ಅವರ ಸಹೋದರನನ್ನು ಆರ್‌ಎಸ್‌ಎಸ್‌ನ ಜಿಲ್ಲಾ ಕಾರ್ಯವಾಹ ಎಂಬ ಕಾರಣಕ್ಕೆ ಮೊದಲೇ ಬಂಧಿಸಿ ಜೈಲಿಗಟ್ಟಲಾಗಿತ್ತು. ಅಚ್ಚರಿಯೆಂದರೆ ಶಂಕರಮೂರ್ತಿಯವರನ್ನೂ ಸೇರಿದಂತೆ ಅವರ ಕುಟುಂಬದ 17 ಮಂದಿಯನ್ನು ಸರಕಾರ ಜೈಲಿಗಟ್ಟಿತ್ತು. ಅವರ ಪೈಕಿ 5 ಮಂದಿ ಮಹಿಳೆಯರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದೇ ಕುಟುಂಬದ 17 ಮಂದಿ ರಾಷ್ಟ್ರ ರಕ್ಷಣೆಯ ಹೋರಾಟಕ್ಕಾಗಿ ಜೈಲುವಾಸ ಅನುಭವಿಸಿದ್ದು ಸಭಾಪತಿ ಶಂಕರಮೂರ್ತಿಯವರ ಕುಟುಂಬ ಮಾತ್ರ. ಶಂಕರಮೂರ್ತಿ ಮತ್ತು ಅವರ ಅಣ್ಣ, ಜೈಲಿನಲ್ಲಿರುವಾಗಲೇ ಪ್ರೀತಿಯ ತಂದೆ ಮೃತರಾಗಿದ್ದರು. ತುರ್ತು ಪರಿಸಿತಿ§ಯ ವಿರುದ್ಧ ಹೋರಾಡಿ ಎಂದು ಆಶೀರ್ವಾದ ಮಾಡಿ ಕಳುಹಿಸಿದ ತಂದೆ ಮಡಿದಾಗಲೂ ಅವರ ಶವ ಸಂಸ್ಕಾರಕ್ಕೆ ಶಂಕರಮೂರ್ತಿಯವರಿಗೆ ಅಂದಿನ ಸರಕಾರ ಅವಕಾಶ ಕೊಟ್ಟಿಲ್ಲ ಎಂಬ ಸತ್ಯ ಅರಗಿಸಿಕೊಳ್ಳಲಾಗದಷ್ಟು ಕಠಿಣವಾಗಿದೆ. ಇಂತಹ ಹೋರಾಟದ ಶಕ್ತಿ ಇಂದಿನ ರಾಜಕಾರಣಿಗಳಲ್ಲಿ ಬೆಳೆದಿದೆಯೇ?! ಬೆಳೆದಿದ್ದರೆ ಉಳಿದಿದೆಯೇ? 2003ರಲ್ಲಿ ಎಸ್‌. ಎಮ್‌. ಕೃಷ್ಣರವರು ಮುಖ್ಯಮಂತ್ರಿಯಾಗಿದ್ದ ದಿನಗಳವು.

ವಿಪಕ್ಷದ ಮುಖಂಡರಾಗಿ ಆಯವ್ಯಯದ ಮೇಲೆ ಭಾಷಣ ಮಾಡುತ್ತಿದ್ದ ಶಂಕರಮೂರ್ತಿ ರಾಜ್ಯದಲ್ಲಿ ಯುವಕ ಯುವತಿಯರು ಕಾಲೇಜು ಶಿಕ್ಷಣ ಪಡೆಯಲೋಸುಗ ಪದವಿ ಕಾಲೇಜುಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ಸೃಜಿಸಬೇಕು, ಇಲ್ಲವಾದರೆ ಬಡವರ ಮಕ್ಕಳ ಉನ್ನತ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಬೀಳಲಿದೆಯೆಂದು ಸರ್ಕಾರವನ್ನು ಎಚ್ಚರಿಸಿದ್ದರು, ಮಾತ್ರವಲ್ಲ ಮುಖ್ಯಮಂತ್ರಿಗಳು ಮೌನ ವಹಿಸಿದಾಗ ಸಭಾತ್ಯಾಗ ಮಾಡಿದ್ದರು. ಆಗ ಮಾತನಾಡಿದ ಎಸ್‌.ಎಮ್‌ ಕೃಷ್ಣ, ಪ್ರಸ್ತುತ ಪರಿಸ್ಥಿತಿಯಲ್ಲಿ ಸಂಪನ್ಮೂಲದ ಕೊರತೆಯಿಂದ ಶಂಕರಮೂರ್ತಿಯವರ ಬೇಡಿಕೆ ಈಡೇರಿಸಲಾಗದು, ಪ್ರತಿಭಟನೆ ಮಾಡಿ ಸಭಾತ್ಯಾಗ ಮಾಡುವ ಶಂಕರಮೂರ್ತಿಯವರೇ ಶಿಕ್ಷಣ ಮಂತ್ರಿಯಾದಾಗ ಹೊಸ ಕಾಲೇಜು ಸ್ಥಾಪಿಸಲಿ ಎಂದು ವ್ಯಂಗ್ಯಭರಿತ ಧ್ವನಿಯಲ್ಲಿ ಉತ್ತರಿಸಿದರು. ಆದರೇನು? ಕಾಲ ಸರಿದು ಹೋಯಿತು. ಶಂಕರಮೂರ್ತಿಯವರು 2008ರಲ್ಲಿ ಸಮ್ಮಿಶ್ರ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಒಂದೇ ಬಾರಿ 184 ಹೊಸ ಕಾಲೇಜುಗಳನ್ನು ಪ್ರಾರಂಭಿಸಿಯೇ ಬಿಟ್ಟರು. ಅಚ್ಚರಿಯೆಂದರೆ, ಅಲ್ಲಿಯವರೆಗೆ 60 ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿದ್ದ ಪದವಿ ಕಾಲೇಜುಗಳ ಸಂಖ್ಯೆ 158 ಮಾತ್ರ. 60 ವರ್ಷ ಸಾಧಿಸಲಾಗದ್ದು, 20 ತಿಂಗಳಲ್ಲಿ ಸಾಧಿಸಬಹುದು ಎಂಬುವುದಕ್ಕೆ ಮೂರ್ತಿಯವರೇ ಸಾಕ್ಷಿ. ಸುದೀರ್ಘ‌ 8 ವರ್ಷದ ಸಭಾಪತಿಯ ಅವಧಿಯಲ್ಲಿ ಶಂಕರಮೂರ್ತಿ ಯವರ ಕಾರ್ಯಶೈಲಿ, ಸಾರ್ವತ್ರಿಕ ಪ್ರಶಂಸೆಗೆ ಕಾರಣವೆಂದರೆ ಅವರ ಶ್ರದ್ಧೆ, ತಾಳ್ಮೆ ಮತ್ತು ಸಮತೋಲಿತ ನಡವಳಿಕೆ. ಅರ್ಥಪೂರ್ಣ ಆಡಳಿತ ನಡೆಸುವ ಸರಕಾರಕ್ಕೆ ಎಷ್ಟೋ ಕಟು ಸೂಚನೆಗಳನ್ನೂ ನೀಡುತ್ತಿದ್ದರಲ್ಲದೇ, ವಿಪಕ್ಷಗಳು ಎಡವಿದಾಗ ನಿಷ್ಠುರದ ಮಾತಿನಲ್ಲಿ ಸರಿದಾರಿಗೆ ತರುತ್ತಿದ್ದರು. ಅಭಿವೃದ್ಧಿ ಕಾರ್ಯದಲ್ಲಿ ಸರಕಾರಕ್ಕೆ ಆದ್ಯತೆಗಳಿರಬೇಕು. ಅದಕ್ಕನುಗುಣವಾಗಿ ನಿಶ್ಚಿತ ಗುರಿ ಮತ್ತು ಕಾಲಮಿತಿಯ ಅನುಷ್ಟಾನದ ಬಗ್ಗೆ ಶಕ್ತಿ ಇಲ್ಲವಾದರೆ, ಯೋಜನೆಗಳೇ ವ್ಯರ್ಥ ಎಂದು ಸಭಾಪತಿಗಳು ಹೇಳುತ್ತಿರುವಾಗಲೇ ಉತ್ತರ ಕೊಡುತ್ತಿರುವ ಮಂತ್ರಿಗಳು ಜಾಗೃತವಾಗುತ್ತಿದ್ದರು. ನಿಮ್ಮ ಪ್ರಶ್ನೆ ಏನೆಂದು ಕೇಳಿ, ಪ್ರಶ್ನೆಯೇ ಕಥೆಯ ರೂಪದಲ್ಲಿದ್ದರೆ ಸರಕಾರ ಉತ್ತರ ಕೊಡುವುದು ಹೇಗೆ ಎಂದು ವಿಪಕ್ಷಗಳನ್ನು ಮಾತಿನಲ್ಲಿ ತಿವಿದು ಸರಿ ದಾರಿಗೆ ತರುವುದೇ ಶಂಕರಮೂರ್ತಿತನ.

ಕರ್ನಾಟಕ ರಾಜ್ಯದ ಆರುವರೆ ಕೋಟಿ ಮೀರಿದ ಸಾಮಾನ್ಯ ಜನರು ಸಮಸ್ಯೆಗಳನ್ನು ಹೇಳಿಕೊಳ್ಳಲು ರಾಜಧಾನಿಗೋ- ವಿಧಾನಸೌಧಕ್ಕೋ ಬರಲಾಗದು. ಅವರ ಪ್ರತಿನಿಧಿಗಳಾಗಿ ಕೆಲಸ ಮಾಡುವ ಅವಕಾಶ ನಿಮಗೆ ಸಿಕ್ಕಿದೆ. ಜನರ ಧ್ವನಿಯಾಗಿ ಕೆಲಸ ಮಾಡಿಯೆಂದು ಮೊನ್ನೆ ಸ್ಪೀಕರ್‌ ರಮೇಶ್‌ ಕುಮಾರ್‌ರವರು ಹೇಳಿದ ಕಿವಿ ಮಾತಿನಂತೆ, ಶಂಕರಮೂರ್ತಿಯವರು ಪ್ರಜಾಪ್ರಭುತ್ವದ ತಿರುಳುಗಳನ್ನು ಮೇಲ್ಮನೆಯ ಶಾಸಕರಿಗೆ ವಿವರಿಸುತ್ತಿದ್ದರು. ಹೊಸದಾಗಿ ಬಂದ ಶಾಸಕರು ಎಡವಿದರೆ ಅವರ ನೆರವಿಗೆ ಬಂದು ಅವಕಾಶ ಕಲ್ಪಿಸುತ್ತಿದ್ದರು. ಒಂದು ಸಾರಿ ಬಜೆಟ್‌ ಅಧಿವೇಶನದ ಮೇಲೆ ಮಾತನಾಡುತ್ತಿದ್ದ ನಾನು, “”ಸಭಾಪತಿಯವರೆ, ತಿಂಗಳಿಗೆ ಲಕ್ಷ ರೂಪಾಯಿ ಸಂಬಳ ಪಡೆಯುವ ಸರಕಾರಿ ನೌಕರರ ಭಡ್ತಿ ಬಗ್ಗೆ ದಿನಗಟ್ಟಲೆ ಈ ಸದನ ಮಾತನಾಡುತ್ತೆಯಾದರೆ ಸರಕಾರಿ ಶಾಲೆಯಲ್ಲಿ ತಿಂಗಳಿಗೆ ಒಂದೂವರೆ ಸಾವಿರ ರೂಪಾಯಿ ಸಂಬಳ ಪಡೆಯುವ ಬಿಸಿಯೂಟವನ್ನು ಮಾಡುವ ಮಹಿಳೆಯರಿಗೆ ಸಂಬಳ ಸಿಗದೆ ಆರು ತಿಂಗಳಾಯಿತು. ಅವರ ನೆರವಿಗೆ ಬರುವಂತೆ ತಾವು ಆದೇಶ ಮಾಡಬೇಕು” ಎಂದು ಕೋರಿದೆ. ಚರ್ಚೆ ಬೇರೆ ರೂಪ ಪಡೆದು ಆ ದಿನ ಕಲಾಪ ಮುಂದೂಡಲ್ಪಟ್ಟಿತ್ತು. ಮರುದಿನ ಕಲಾಪ ಪ್ರಾರಂಭವಾದಾಗ ಸಭಾಪತಿ ಬಂದು ಆಸೀನರಾಗುತ್ತಲೇ ಕಲಾಪ ಕೈಗೆತ್ತಿಕೊಳ್ಳುತ್ತಾ, “”ನಿನ್ನೆಯ ಕಲಾಪದಲ್ಲಿ ಸರಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಮಹಿಳೆಯರಿಗೆ ತಿಂಗಳಿಗೆ ಕೊಡುವ ಒಂದೂವರೆ ಸಾವಿರ ರೂಪಾಯಿಯನ್ನು ಕೊಡದೇ ಆರು ತಿಂಗಳಾಯ್ತು ಎಂದು ಪೂಜಾರಿ ಹೇಳಿದ ಮಾತು ರಾತ್ರಿಯಿಡಿ ನನ್ನ ನಿದ್ದೆಗೆ ಧಕ್ಕೆ ತಂತು. ಈ ಬಗ್ಗೆ ತಕ್ಷಣ ಗಮನಹರಿಸಿ” ಎಂದು ಸರಕಾರಕ್ಕೆ ಸೂಚಿಸಿದ್ದನ್ನು ಕೇಳಿ ನಾನು ಕ್ಷಣಕಾಲ ಭಾವುಕನಾದೆ. ಹೀಗೆ ಶಂಕರಮೂರ್ತಿಯವರು ಸಭಾಪತಿಯಾಗಿ ಸವೆಸಿದ ಹಾದಿ, ನಡೆದ ದಾರಿಗಳೆಲ್ಲಾ ಹೂವಿನ ಹಾಸಿಗೆಯಾಗಿಯೂ ಇರಲಿಲ್ಲ. ರಾಜಕೀಯ ಕಾರಣಗಳಿಗಾಗಿ ಅನೇಕ ಅಡೆತಡೆಗಳು ಅವರನ್ನು ಕಾಡಿದ್ದು, ಒಂದು ವರ್ಷದ ಹಿಂದೆಯಷ್ಟೇ ಪೀಠದ ಘನತೆಯನ್ನು ಲೆಕ್ಕಿಸದೆ ಅವರ ಮೇಲೆ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯಿತು. ಗೊತ್ತುವಳಿಯಲ್ಲಿ ಗೆಲುವು ಸಾಧಿಸಿದ ಶಂಕರಮೂರ್ತಿಯವರು “”ನನ್ನ ಬದುಕು ತೆರೆದ ಪುಸ್ತಕ, ಕೆಟ್ಟ ಮನಸ್ಸುಗಳಿಗೆ ಪ್ರತಿಕ್ರಿಯಿಸಲಾರೆ” ಎಂದಿದ್ದರು. ಅಟಲ್‌ಜೀ, ಅಡ್ವಾಣಿ ಸಹಿತ ಸಂಘ ಪರಿವಾರದ ಗರಡಿಯಲ್ಲೇ ಮೇಲೆದ್ದು ಬಂದ ಶಂಕರಮೂರ್ತಿಯವರು ಬದುಕಿನಲ್ಲಿ ಶಿಸ್ತಿನ ಸಿಪಾಯಿ. ರಾಷ್ಟ್ರೀಯತೆಯ ಪ್ರಶ್ನೆ ಬಂದಾಗ, ರಾಜಿಯೇ ಇಲ್ಲದಿರುವ ಕಟು ನಿರ್ಧಾರ. ತಾನು ಸಂಘ ಸ್ವಯಂ ಸೇವಕ ಎನ್ನಲು ಅಪರಿಮಿತ ಹೆಮ್ಮೆ.

ಸದನದಲ್ಲಿ ಮೊಳಗಿತು ವಂದೇ ಮಾತರಂ…
ಸಭಾಪತಿ ಸ್ಥಾನ ಅಲಂಕರಿಸಿದ ಪ್ರಥಮ ಅಧಿವೇಶನದಲ್ಲೆ ಸದನ ಪ್ರಾರಂಭವಾಗುವ ಮುಂಚೆ ಎಲ್ಲರೂ ಎದ್ದು ನಿಂತು ವಂದೇ ಮಾತರಂಗೆ ದನಿ ಗೂಡಿಸುವ ಸಂಪ್ರದಾಯ ಪ್ರಾರಂಭಿಸಿದ ಮೂರ್ತಿ ಸದನದ ಅಂತಿಮ ದಿನ ಜನಗಣಮನ ಹಾಡಿಸುವುದರ ಮೂಲಕ ರಾಷ್ಟ್ರಗೀತೆಗೆ ಗೌರವ ಕೊಡುತ್ತಿದ್ದರು. ಇದು ಅವರೇ ರೂಪಿಸಿದ ನಿಯಮ. ರಾಜ್ಯಸಭೆ ಮತ್ತು ಲೋಕಸಭೆಯಲ್ಲೂ ಅನುಷ್ಠಾನವಾಯಿತು.

ಪರಿಷತ್ತಿನ ಸಭಾಂಗಣದಲ್ಲಿ ಸುಭಾಶ್ಚಂದ್ರ ಬೋಸ್‌, ಸ್ವಾಮಿ ವಿವೇಕಾನಂದ, ಲಾಲ್‌ ಬಹದ್ದೂರ್‌ ಶಾಸಿŒ, ಸರ್‌. ಎಂ ವಿಶ್ವೇಶ್ವರಯ್ಯರವರೊಂದಿಗೆ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಭಾವಚಿತ್ರಗಳು ರಾರಾಜಿಸುವಂತೆ ಮಾಡಿದ್ದು, ಅವರ ಆಸಕ್ತಿಯ ಸ್ವರೂಪ. ಒಟ್ಟಾರೆ ಸ್ಥಿತಃಪ್ರಜ್ಞ ರಾಜಕಾರಣಿ ಶಂಕರಮೂರ್ತಿಯವರು ತಮ್ಮ 20ರ ಹರೆಯದ ದಿನಗಳಿಂದ ರಾಷ್ಟ್ರೀಯತೆಯ ಹೋರಾಟದ ಮೂಲಕ ಇದೀಗ 79 ರ ತುಂಬು ವಯಸ್ಸಿನಲ್ಲೂ ರಾಜಧರ್ಮದ ರಾಜಕಾರಣದೊಂದಿಗೆ ಅಧಿಕಾರ ಮುಗಿಸಿ ಮರಳುತ್ತಿದ್ದಾರೆ. ಶಂಕರಮೂರ್ತಿಯಂತಹ ಕುಶಲಮತಿ ಆಡಳಿತಗಾರ ರಾಜ್ಯದ ಮಟ್ಟಿಗೆ ಬಹುಕಾಲ ದುರ್ಲಭ. ಕೆಲ ಸಮಯದ ಹಿಂದೆ ಸಭಾ ನಾಯಕರಾಗಿದ್ದ ಹಿರಿಯ ಸದಸ್ಯ ಎಸ್‌. ಆರ್‌. ಪಾಟೀಲ್‌, “”ಸಭಾಪತಿಯವರೇ.. ದೆಹಲಿಯ ಸುದ್ದಿಗಳ ಪ್ರಕಾರ, ನಿಮ್ಮ ಅಧಿಕಾರದ ಅವಧಿಯು ಮುಗಿಯುತ್ತಲೇ ತಾವು ಯಾವುದಾದರೊಂದು ರಾಜ್ಯಕ್ಕೆ ರಾಜ್ಯಪಾಲರಾಗುವಿರಂತೆ!” ಎಂದಿದ್ದರು. ಸಭಾಪತಿಗಳು ಮುಗುಳ್ನಕ್ಕಿದ್ದರು. ಆ ಮುಗುಳ್ನಗೆಗೆ ಅರ್ಥ ಮತ್ತು ಅವಕಾಶವಾಗಲಿ ಎಂಬುದೇ ಶಂಕರಮೂರ್ತಿ ಯವರನ್ನು ಬಲ್ಲವರ ಆಶಯ.

ಕೋಟ ಶ್ರೀನಿವಾಸ ಪೂಜಾರಿ

ಟಾಪ್ ನ್ಯೂಸ್

1-horoscope

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-horoscope

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ

courts

Udupi: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು; ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.