ಮೌನ ಸಂಭಾಷಣೆ; ಎಲ್ಲಿಯವರೆಗೆ ಬದುಕಿನ ಈ ಪಯಣ


Team Udayavani, Apr 3, 2022, 4:23 PM IST

pigeon

ಬೆಳಕು ಹರಿದಾಗ ಎಂದಿನಂತೆ ನಿತ್ಯವೂ ಏಳುತ್ತೇನೆ. ಏಳುವಾಗಾಗಲಿ, ಎದ್ದ ಮೇಲಾಗಲಿ, ತಿಂಡಿ ತಿನ್ನುವಾಗ, ಊಟ ಮಾಡುವಾಗ, ಹೊರಗೆ ಹೋಗಬೇಕೆಂದೆನಿಸಿದಾಗ.. ಯಾವುದಕ್ಕೂ ಯಾರ ಅಕ್ಷೇಪಣೆಯೂ ಇಲ್ಲ. ನನಗೆ ಬೇಕಾದಾಗ, ಬೇಕಾದ್ದನ್ನು ಮಾಡಿ ತಿನ್ನಬಹುದು, ಎಲ್ಲಿ ಬೇಕೋ ಅಲ್ಲಿ ಹೋಗಿ ಬರಬಹುದು. ಯಾಕೆ, ಏನು, ಎತ್ತ ಎನ್ನುವ ಯಾವ ಪ್ರಶ್ನೆಗಳೂ ಇಲ್ಲ. ನನ್ನದೇ ರಾಜ್ಯಭಾರ. ಅರಸನ ಅಂಕೆಯೂ ಇಲ್ಲ, ದೆವ್ವದ ಕಾಟವೂ ಇಲ್ಲ. ಆದರೆ ಅರಸನ ಅಂಕೆಯೋ, ದೆವ್ವದ ಕಾಟವೋ ಇದ್ದಿದ್ದರೆ ಚೆನ್ನಾಗಿತ್ತು ಎಂದು ಎಷ್ಟೋ ಬಾರಿ ಮನಸ್ಸು ಹೇಳುತ್ತದೆ.

ಯಜಮಾನರು ಕಾಲವಾಗಿ ಎರಡು ವರ್ಷಗಳೇ ಉರುಳಿವೆ. ಅವರಿದ್ದಾಗ ಇದ್ದ ಜೀವನದ ಬಗೆಗಿನ ಆಸಕ್ತಿ, ಕಾತರ ಎಲ್ಲ ಕಳೆದುಹೋಗಿದೆ. ಬೆಳಗ್ಗೆ ಏಳುತ್ತಲೇ ಮಾತನಾಡಲು ಒಬ್ಬರಿರುತ್ತಿದ್ದರು. ಆದರೆ ಈಗ ನಾನೇ ಬೆಳಗ್ಗೆ ಎದ್ದು ಹಲ್ಲುಜ್ಜಿ, ಸ್ನಾನ ಮುಗಿಸಿ ಬಂದಾಗ ನನ್ನ ಪ್ರಾರ್ಥನೆಗಾಗಿಯೇ ದೇವರು ಕಾಯುತ್ತಿದ್ದಾನೆ ಎಂದು ಭಾವಿಸಿ ಅವನೆದುರು ದೀಪ ಬೆಳಗಿ, ತಿಳಿದಿರುವ ನಾಲ್ಕಾರು ಸೂಕ್ತಗಳನ್ನೋ, ಸಹಸ್ರನಾಮವನ್ನೋ ಓದಿ ಮುಗಿಸಿ, ಒಂದಿಷ್ಟು ಉಪಾಹಾರ ಮಾಡಿ ಹೊಟ್ಟೆಗೆ ಹಾಕಿಕೊಂಡರೆ ಬೆಳಗಿನ ಕಾರ್ಯ ಮುಗಿಯಿತು.

ಇತ್ತೀಚೆಗೆ ಬರವಣಿಗೆಯೇ ನನ್ನ ಸಂಗಾತಿ. ಯಾರ ಬಳಿಯೂ ಮಾತು ಬೇಕಿಲ್ಲ, ಮೌನದಿಂದಲೇ ಎಷ್ಟೋ ದಿನಗಳು ಉರುಳಿಹೋಗಿವೆ. ಒಮ್ಮೊಮ್ಮೆ ಕುಳಿತು ಯೋಚಿಸುತ್ತೇನೆ ಮನುಷ್ಯ ಹುಟ್ಟುವುದೂ ಅವನ/ಳ ಇಚ್ಛೆಯಿಂದಲ್ಲ, ಸಾಯುವುದೂ ಇಚ್ಛೆಯಿಂದಲ್ಲ. ಅಂದಮೇಲೆ ಉಳಿದಿರುವ ಕೆಲಕಾಲದ ಈ ಪಯಣಕ್ಕೆ ಎಷ್ಟು ರಂಪರಾದ್ಧಾಂತ?

ಮನಸ್ಸಿಗೆ ಬಂದಂತೆ ಯಾವುದೋ ಲೇಖನವೋ, ಕವನವೋ ಗೀಚಿದ್ದಾಯಿತೆಂದರೆ ಉಳಿದ ಸಮಯ ಹೇಗೆ ಎಂದು ಯೋಚಿಸಿದ ತತ್‌ಕ್ಷಣ ನನ್ನ ದೃಷ್ಟಿ ಕಿಟಕಿಯಿಂದಾಚೆಗೆ ಓಡುತ್ತದೆ. ಎಲ್ಲಿಂದಲೋ ಹಾರಿ ಬಂದ ಪಾರಿವಾಳಗಳ ಗುಂಪು ಮೇಲಿನಿಂದಲೇ ಒಂದು ಪ್ರದಕ್ಷಿಣೆ ಹಾಕಿ, ನೆರೆಮನೆಯವರು ತಂದು ಚೆಲ್ಲಿರುವ ತಿಂಡಿಯ ತುಣುಕುಗಳನ್ನು ಕಂಡಕೂಡಲೇ ಕೆಳಕ್ಕೆ ಬರುತ್ತವೆ. ಎಲ್ಲ ಒಟ್ಟಿಗೆ ತಿನಿಸಿಗೆ ಮುತ್ತಿಗೆ ಹಾಕುತ್ತವೆ. ಆದರೆ ಅವುಗಳು ಕಚ್ಚಾಡುವುದಿಲ್ಲ. ತನಗೆ ಸಿಕ್ಕಲಿಲ್ಲ ಎಂದು ರೋಷ ತೋರುವುದಿಲ್ಲ. ಬದಲಿಗೆ ತಮ್ಮ ಸರದಿಗಾಗಿ ಕಾಯುತ್ತ ಅಲ್ಲೇ ಕುಳಿತಿರುತ್ತವೆ, ಹತ್ತಿರವೇ ಅಡ್ಡಾಡುತ್ತಿರುತ್ತವೆ. ಅವುಗಳನ್ನು ನೋಡಿದ ಕೂಡಲೇ ಡಾ| ಬೇಂದ್ರೆಯವರ ಹಕ್ಕಿ ಹಾರುತಿದೆ ನೋಡಿದಿರ.. ಕವನದ ಸಾಲುಗಳು ನೆನಪಾಗುತ್ತವೆ. ಹಕ್ಕಿಯ ಹಾರಾಟದಲ್ಲಿ ಕಾಲವನ್ನು ಕಟ್ಟಿ ಕೊಡುವ ಸೊಗಸು ಬೇಂದ್ರೆಯವರಿಗೆ ಮಾತ್ರ ಸಾಧ್ಯವೆನಿಸುತ್ತದೆ.

ಮೊದಮೊದಲಿಗೆ ಸಣ್ಣ ನಸುಗಪ್ಪು ಬಣ್ಣದ ಪಾರಿವಾಳಗಳು ಬರುತ್ತಿದ್ದವು, ಆದರೆ ಈಗೀಗ ಬಿಳಿಯ ಪಾರಿವಾಳಗಳೂ ಬರತೊಡಗಿವೆ. ಬಿಳಿಯ ಪಾರಿವಾಳಗಳು ದೇಹದ ಗಾತ್ರದಲ್ಲಿ ಬಹಳ ದೊಡ್ಡವು. ಹಾಗಂದ ಮಾತ್ರಕ್ಕೆ ಅವು ಬಂದ ಕೂಡಲೇ ಸಣ್ಣ ಪಾರಿವಾಳಗಳು ಹೆದರಿ ಓಡುವುದಿಲ್ಲ. ಬಿಳಿಯ ಪಾರಿವಾಳಗಳು ಅವುಗಳನ್ನು ಹೆದರಿಸಿ ಅಟ್ಟುವುದೂ ಇಲ್ಲ. ಅಲ್ಲಿರುವ ಕಾಳುಗಳನ್ನು ತಿಂದು ಮುಗಿಸಿದ ಪಾರಿವಾಳಗಳು ಹಾರಿ ಹೋಗುತ್ತಲೇ ನಾನೂ ಇತ್ತ ಕಡೆಗೆ ಮುಖ ತಿರುಗಿಸುತ್ತೇನೆ. ಆದರೆ ಇಂದೇಕೋ ಅವುಗಳತ್ತಲೇ ನೋಡೋಣ ಎಂದೆನಿಸಿತ್ತು. ಅಷ್ಟರಲ್ಲಾಗಲೇ ಮಹಿಳೆಯೊಬ್ಬಳು ಕಾಣಿಸಿದಳು. ಆಕೆ ಬಂದವಳೇ ತನ್ನ ಕೈಯಲ್ಲಿದ್ದ ಚೀಲದಿಂದ ತಾನು ತಂದಿದ್ದ ಕಾಳುಗಳನ್ನು ಚೆಲ್ಲಿ ಜತೆಯಲ್ಲಿದ್ದ ಮಕ್ಕಳನ್ನು ಕರೆದುಕೊಂಡು ಮುಂದೆ ಹೋದಳು. ಅಗೋ ಮತ್ತೆ ಪಾರಿವಾಳಗಳ ದಾಳಿ!

ಹೊಟ್ಟೆ ಚುರುಗುಟ್ಟತೊಡಗಿದಾಗ ಎದ್ದು ಹೋಗಿ ಒಂದು ತುಣುಕು ಬ್ರೆಡ್‌ಗೆ ಬೆಣ್ಣೆ ಬಳಿದು ತಂದು ತಿನ್ನುತ್ತೇನೆ. ಮತ್ತೆ ನನ್ನ ದೃಷ್ಟಿ ಕಿಟಕಿಯಾಚೆಗೆ ಹೊರಳುತ್ತದೆ. ಇಂಗ್ಲೆಂಡ್‌ನ‌ಲ್ಲಿ ಯಾವಾಗಲೂ ಮೋಡ ತುಂಬಿರುತ್ತದೆ. ಆಕಾಶಕ್ಕೆ ಮೋಡವನ್ನೇ ಹೊತ್ತು ಬೇಸರವಾಯಿತು ಎಂದರೆ ಚಿಟಿಚಿಟಿ ಮಳೆಯ ಹನಿಗಳನ್ನು ಸಿಡಿಯುತ್ತದೆ. ಅದೂ ಬೇಸರ ಬಂದಿತೆಂದರೆ ಹಿಮ ಬೀಳುತ್ತದೆ. ಈ ಮಾರ್ಚ್‌ ತಿಂಗಳ ಮೊದಲಲ್ಲೂ ಕೊರೆಯುವ ಚಳಿ ! ಭಾರತದಲ್ಲಿ ಸೆಕೆ ಎಂದು ಜನ ಪರದಾಡುತ್ತಿದ್ದರೆ ಇಲ್ಲಿ ಚಳಿ. “ಹಲ್ಲಿದ್ದವರಿಗೆ ಕಡಲೆಯಿಲ್ಲ, ಕಡಲೆಯಿದ್ದವರಿಗೆ ಹಲ್ಲಿಲ್ಲ ‘ ಹೊರಗೆ ಹೋಗಬೇಕೆನ್ನುವ ಮನಸ್ಸಂತೂ ಬರುವುದಿಲ್ಲ. ಬೆಚ್ಚನೆಯ ಬಟ್ಟೆಗಳೊಂದಿಗೆ ಬೆಚ್ಚಗೆ ಮನೆಯೊಳಗೆ ಕುಳಿತುಕೊಳ್ಳುವ ಮನಸ್ಸಾಗುತ್ತದೆ.

ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಘೋಷಿಸಿಕೊಂಡ ಬ್ರಿಟನ್‌ನಲ್ಲಿ ಸೂರ್ಯ ತಲೆ ಎತ್ತುವುದಕ್ಕೇ ಸಂಕೋಚಪಡುತ್ತಾನೆ. ಮೋಡಗಳ ಅಬ್ಬರಕೆ ಸೋತು ಹೆದರಿ ಅವುಗಳ ಹಿಂದೆಯೇ ಅಡಗಿ ಹೋಗಿರುತ್ತಾನೆ. ಏನಾದರೂ ಮೋಡಗಳಿಗೆ ಕರುಣೆ ಬಂದು ಸೂರ್ಯನಿಗೆ ಇಣುಕಲು ಅವಕಾಶಕೊಟ್ಟರೆ ತತ್‌ಕ್ಷಣವೇ ಪೈಪೋಟಿಗೆ ಓಡಿ ಬರುತ್ತಾನೆ ನಮ್ಮ ವಾಯುದೇವ. ಬಿಸಿಲಿದೆಯೆಂದು ಭ್ರಮಿಸಿ ಹೊರಗೆ ಹೋದರೆ ವಾಯುವಿನ ಹೊಡೆತ ತಾಳಲಾಗದು. ಅಂತೂ ಬಿಗಿದ ಬಾಗಿಲ ಹಿಂದಿನಿಂದಲೇ ಪ್ರಪಂಚ ದರ್ಶನ!

ಹೀಗಾಗಿ ನಾನು ನನ್ನ ಕಂಪ್ಯೂಟರ್‌ ಆಪ್ತ ಗೆಳೆಯರು. ಮನಸ್ಸಿಗೆ ತೋಚಿದ್ದನ್ನೆಲ್ಲ ಗೀಚುವ ಹಂಬಲಕ್ಕೆ ಎಂದೂ ಎದುರಾಡದೆ ನಾನು ಚಚ್ಚಿದಷ್ಟು ಸಲವೂ ಕೀ ಬೋರ್ಡ್‌ನ ಮೇಲಿನ ಹೊಡೆತವನ್ನು ಮುಗುಳ್ನಗುತ್ತ ಸಹಿಸುವ ನನ್ನ ಸಂಗಾತಿ. ಆದ್ದರಿಂದಲೇ ನನಗೆ ಸಂತೋಷ ಸಿಗಬಹುದು ಎನ್ನುವ ಕಂಪ್ಯೂಟರ್‌ನ ಮನೋಭಾವ ನನಗೆ ಬಹಳ ಅಚ್ಚುಮೆಚ್ಚು.

ಎಷ್ಟೋ ಬಾರಿ ನಾನೇಕೆ ಇಷ್ಟೊಂದು ಬರೆಯುತ್ತೇನೆ ಎಂದುಕೊಳ್ಳುತ್ತೇನೆ. ನನಗೂ ಏನಾದರೂ ಪ್ರಶಸ್ತಿ ಪತ್ರವನ್ನು ಕೊಡಿಸಿಕೊಳ್ಳುವ ಹಂಬಲವೋ?ಎಂದು ಪ್ರಶ್ನಿಸಿಕೊಂಡಾಗ ಇದ್ದಕ್ಕಿದ್ದಂತೆ ಬೇಂದ್ರೆಯವರು ಬರೆದ ಮಾನಪತ್ರದ ನೆನಪಾಗುತ್ತದೆ. ಮಾ ಎಂದರೆ ಲಕ್ಷ್ಮಿ (ದುಡ್ಡು),ನ ಎಂದರೆ ಬೇಡ. ಅಂದರೆ ಹಣ ಬೇಡ. ಆದರೆ ಮಾನಪತ್ರ ಸಿಗಬಹುದೆಂದು. ನಾನು ಬರೆಯುತ್ತೇನೆ ಎಂಬುದು ಸಾಕಷ್ಟು ಜನಕ್ಕೆ ಗೊತ್ತಾಗಬೇಕು ಎನ್ನುವುದು ಮಾತ್ರ ಇಲ್ಲಿ ಅನಿವಾರ್ಯ. ಮಾನಪತ್ರದ ಅರ್ಥ ತಿಳಿದ ಮೇಲೆ ಬೇಕುಬೇಡಾದವರಿಗೆಲ್ಲ ಬೆನ್ನು ಹತ್ತಿದೆ. ಕೊನೆಗೆ ನಾನು ಡಿಸ್ಮಿಸ್‌ ಮಾಡಿದ ಆಳು ಮಗನಿಗೂ ಮಾನಪತ್ರ ಕೊಟ್ಟೆನೆಂದು ಬೇಂದ್ರೆಯವರು ಹೇಳುವಾಗ ನನಗೆ ದೊರಕುವುದೇನು ದೊಡ್ಡ ಮಾತು.

ಒಮ್ಮೊಮ್ಮೆ ನನ್ನನ್ನು ಕಾಡುವ ಮಾತು ಎಂದರೆ ಏಕಾಕಿತನ. ಬೇಂದ್ರೆಯವರ ಕತೆಯಲ್ಲಿನ ಏಕಾಕಿನಿಯಂತೆ ನನ್ನವರೆನಿಸಿಕೊಳ್ಳುವವರಾರೂ ಇರದ ಭಾವನೆ ಕಾಡುತ್ತದೆ. ಒಮ್ಮೊಮ್ಮೆ ಎಲ್ಲಿಯಾದರೂ ದೂರ ಓಡಿ ಹೋಗುವ ಬಯಕೆ. ಏಕಾಕಿನಿಯಂತೆ ಯಾವುದೋ ಭಾವಿಯನ್ನು ಹುಡುಕಿಕೊಂಡು ಹೋಗುವುದು ಕಷ್ಟ ಸಾಧ್ಯವಾದ ಮಾತು. ಹಾಗಾದರೆ ಓಡುವುದು ಎಲ್ಲಿಗೆ? ಉತ್ತರ ಸಿಗದ ಪ್ರಶ್ನೆಗೆ ಮೂಕಳಾಗುತ್ತೇನೆ.

ನನ್ನಿಂದ ಜಗತ್ತಿಗೆ ಏನು ಉಪಕಾರವಾಗಿದೆ ಎಂದು ಯೋಚಿಸತೊಡಗಿದಾಗ “ಹಿಟ್ಟಿಗೆ ದಂಡ, ಭೂಮಿಗೆ ಭಾರ’ ಗಾದೆಯ ನೆನಪಾಗುತ್ತದೆ. ಮೂರು ಹೊತ್ತು ಊಟ ಮಾಡಿ ಭೂಮಿಯ ಬೆಳೆಯನ್ನು ಬರಿದು ಮಾಡಿರುವುದಷ್ಟೇ ಎಂಬ ಕಟುಸತ್ಯದ ಅರಿವಾಗುತ್ತದೆ. ಮನಸ್ಸು ಮುದುಡುತ್ತದೆ.

ಬಲುಬೇಗ ಎಚ್ಚೆತ್ತುಕೊಂಡು ಮತ್ತೆ ಕಿಟಕಿಯಾಚೆಗೆ ನೋಡುತ್ತೇನೆ. ಈಗ ಅಲ್ಲಿದ್ದ ಹಕ್ಕಿಗಳೂ, ಅವುಗಳಿಗಾಗಿ ಹಾಕಿದ ಕಾಳುಗಳೂ ಮಾಯವಾಗಿವೆ. ಮತ್ತೆಲ್ಲಿ ಕಾಳುಗಳಿವೆಯೋ? ಅವನ್ನು ಹುಡುಕುತ್ತ ಹೋಗಿರಬಹುದು ಈ ಪಕ್ಷಿ ವೃಂದ ಎಂದುಕೊಂಡು ಸುಮ್ಮನಾಗುತ್ತೇನೆ.

ಇದ್ದಕ್ಕಿದ್ದಂತೆ ಗಡಿಯಾರದತ್ತ ದೃಷ್ಟಿ ಹೊರಳುತ್ತದೆ. ಆಗಲೇ ಹನ್ನೊಂದು ಗಂಟೆ. ಏನಾದರೂ ತಿನ್ನಲು ಮಾಡಿಕೊಳ್ಳಬೇಕು ಎಂದುಕೊಂಡು ಕಿಟಿಕಿಯಿಂದ ಸರಿದು ಅಡುಗೆ ಮನೆಗೆ ಹೋಗಲು ಹವಣಿಸುತ್ತಿದ್ದಂತೆ ಕಿರ್‌… ಎಂಬ ಶಬ್ದ ಕೇಳಿ ಮತ್ತೆ ಕಿಟಕಿಯಕಡೆಗೆ ತಿರುಗುತ್ತೇನೆ. ಇದೇ ಈಗ ಕ್ಷಣದ ಹಿಂದೆ ಎಲ್ಲ ಪಕ್ಷಿಗಳೂ ಹೊರಟುಹೋಗಿವೆ ಎಂದುಕೊಂಡಿದ್ದ ನನಗೆ ಅಲ್ಲಿ ರಸ್ತೆಯ ನಡುವಿನಲ್ಲಿ ರಕ್ತದ ಮಡುವಿನಲ್ಲಿ ಒಂದು ಹಕ್ಕಿ ಕಾಣುತ್ತದೆ. ಅಕಸ್ಮತ್ತಾಗಿ ಕಾರಿನ ಮುಂದೆ ಬಂದ ಆ ಹಕ್ಕಿಯನ್ನು ಉಳಿಸುವ ಪ್ರಯತ್ನದಲ್ಲಿ ಕಾರು ಬ್ರೇಕ್‌ ಹಾಕಿತಾದರೂ ಚಕ್ರಗಳು ಅದರ ಮೇಲೆ ಉರುಳಿದ ಅನಂತರವೇ ನಿಂತದ್ದು. ಅಂತೂ ಅದನ್ನು ಉಳಿಸಲಾಗಿರಲಿಲ್ಲ.

ಇದನ್ನಲ್ಲವೇ ವಿಧಿ ಎನ್ನುವುದು ! ಎಲ್ಲ ಹಕ್ಕಿಗಳೂ ಹೊರಟು ಹೋಗಿದ್ದರೂ ಇದು ಮಾತ್ರ ಏನನ್ನೋ ಹುಡುಕುತ್ತ ಅಲ್ಲಿ ಉಳಿದದ್ದು ಅದರ ಮೃತ್ಯು ಕರೆಯಾಗಿತ್ತಲ್ಲವೇ? ಅದೂ ಎಲ್ಲರೊಡನೆ ಹಾರಿಹೋಗಿದ್ದರೆ ಸಾಯುತ್ತಿರಲಿಲ್ಲ. ಸಾವು ಅರಸಿಕೊಂಡು ಬಂದರೆ ಯಾರೂ ತಡೆಯಲು ಸಾಧ್ಯವಿಲ್ಲ. ಅಷ್ಟಿಲ್ಲದೆ ಹೇಳುತ್ತಾರೆಯೆ? Death is the best guard ಎಂದು .ಸಾವು ನಮ್ಮನ್ನು ಸದಾ ಕಾಯುತ್ತಿರುತ್ತದೆ. ಅದು ಮನಸ್ಸು ಮಾಡುವ ತನಕ ಬೇರೆ ಯಾರೂ ನಮ್ಮನ್ನು ಮುಟ್ಟಲಾರರು !

ಹಕ್ಕಿ ಸತ್ತ ಕೆಲವು ಹೊತ್ತಿನಲ್ಲೇ ಅಲ್ಲಿ ಗುಂಪು ಗುಂಪಾಗಿ ಬಂದು ಸೇರಿದವು ಬಂಧು, ಬಳಗದ ಹಕ್ಕಿಗಳು. ಸತ್ತ ಪಕ್ಷಿಯ ಬಳಿಗೆ ಹೋಗಿ ನೋಡಿ ಕೊನೆಯ ದರ್ಶನ ಮಾಡಿ ಅಶ್ರುತರ್ಪಣಕೊಟ್ಟು ಹಾರಿಹೋದವು. ಒಂದು ಹಕ್ಕಿ ಮಾತ್ರ ಬಹಳಷ್ಟು ಹೊತ್ತು ಅದರ ಬಳಿಯೇ ಸುಳಿದಾಡುತ್ತಿತ್ತು. ಅದರ ಗಂಡನೋ , ಹೆಂಡತಿಯೋ, ಹಡೆದ ಕೂಸೋ ಯಾರಿಗೆ ಗೊತ್ತು? ಸುಮಾರು ಗಂಟೆಗಳಷ್ಟು ಕಾಲವೂ ಅದರ ಸುತ್ತಮುತ್ತಲೇ ಇದ್ದ ಆ ಹಕ್ಕಿಯೂ ಕೊನೆಗೊಮ್ಮೆ ಹಾರಿಹೋಯಿತು.

ಅದರ ಭಾಷೆ ನಮಗೆ ಗೊತ್ತಿದ್ದರೆ, ಅದು ಪಡುತ್ತಿರುವ ಸಂಕಟ, ಅದರ ವೇದನೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳಬಹುದಿತ್ತು! ಸತ್ತ ಒಂದೊಂದು ವ್ಯಕ್ತಿಗೂ ಲೆಕ್ಕ ಇಡುವ ನಾವು ಸತ್ತ ಹಕ್ಕಿಯ ಬೆಲೆ ಇಟ್ಟಿದ್ದೇವೆಯೇ? ಎಂದು ಯೋಚಿಸುವಾಗ ಹೀಗೆಯೇ ನಾವೂ ಒಂದು ದಿನ ಅಳಿದುಹೋಗುತ್ತೇವೆ, ಹಲವೇ ದಿನಗಳಲ್ಲಿ ಯಾರ ನೆನಪಿಗೂ ಸಿಕ್ಕದೆ ಮುಚ್ಚಿಹೋಗುತ್ತೇವೆ. ಜೀವನದ ಇತಿಹಾಸದ ಪುಟಗಳಲ್ಲಿ ಅಲ್ಲವೇ..? ಇದನ್ನು ಯೋಚಿಸುತ್ತಿದ್ದಂತೆ ಎಲ್ಲಿಯವರೆಗೆ ನನ್ನೀ ಪಯಣ ? ಎಂದು ಪ್ರಶ್ನಿಸಿಕೊಳ್ಳುತ್ತಾ ಅಡುಗೆ ಮನೆ ಸೇರಿದೆ.

-ಡಾ| ಸತ್ಯವತಿ ಮೂರ್ತಿ, ಮ್ಯಾಂಚೆಸ್ಟರ್

ಟಾಪ್ ನ್ಯೂಸ್

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ABV-Modi

A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಭದ್ರ ಬುನಾದಿ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ಬೈಕ್‌ ಕಳವು; ಇಬ್ಬರ ಬಂಧನ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

accident2

Gangolli: ಸ್ಕೂಟರ್‌ – ಬೈಕ್‌ ಢಿಕ್ಕಿ; ಗಾಯ

ತಿರುಚಿದ ದೇಶದ ನಕ್ಷೆ ಬಳಸಿದ್ದು ನಾಚಿಕೆಗೇಡು: ಬಿಜೆಪಿ ಟೀಕೆ

Congress Session: ತಿರುಚಿದ ದೇಶದ ನಕ್ಷೆ ಬಳಸಿದ್ದು ನಾಚಿಕೆಗೇಡು: ಬಿಜೆಪಿ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.