ಅಳುತ ಆಗಮನ-ನಗುತ ನಿರ್ಗಮನ
ಕನ್ನಡನಾಡಿನಲ್ಲಿ ಪರ್ಷಿಯಾ ಮೂಲದವನ ಸ್ಮರಣೀಯ ಆಡಳಿತ
Team Udayavani, Oct 31, 2021, 6:50 AM IST
ನಿನ್ನ ಜನ ನಗುತಿರಲು
ನೀನಳುತ ಬಂದೆ|
ನಿನ್ನ ಜನವಳುತಿರಲು
ನೀಂ ನಗುತ ಪೋಗು||
ಪಾರಸಿ ಭಾಷೆಯ ಕವನದ ಈ ಭಾಗವನ್ನು ಮೈಸೂರು ರಾಜ್ಯದಲ್ಲಿ ದಿವಾನ್ ಆಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಆಗಾಗ್ಗೆ ಸ್ಮರಿಸುತ್ತಿದ್ದರು. ಈ ಕವನ ಫಿದೂìಸಿಯದ್ದಿರಬಹುದು.
ಸಾಮಾನ್ಯ ಪ್ರಜೆಯಿಂದ ಹಿಡಿದು ಪ್ರಧಾನಿ, ರಾಷ್ಟ್ರಪತಿಯವರೆಗಿನವರೆಗೆ ಈ ಕವನ ನಿತ್ಯ ಪಠನ ಸೂಕ್ತ.ಮಿರ್ಜಾ ಪೂರ್ವಜರು ಪರ್ಷಿಯಾದ ಶಿರಾಜ್ ಪಟ್ಟಣದಿಂದ (ಈಗ ಇರಾನ್) ಕುದುರೆ ವ್ಯಾಪಾರಕ್ಕಾಗಿ ಬಂದು ಮೈಸೂರು ರಾಜರ ಆಶ್ರಯದಲ್ಲಿ ಸೇರಿದರು, ಬೆಂಗಳೂರಿನ ಹವೆಗೆ ಮನಸೋತು ಇಲ್ಲೇ ನಿಂತರು. ಹೊರದೇಶ ಮೂಲದ ಮಿರ್ಜಾ ಕನ್ನಡನಾಡಿನಲ್ಲಿ ಒಂದಾಗಿ ಹೋದರು. ಕನ್ನಡ-ಸಂಸ್ಕೃತ ಎರಡರ ಅಭಿಮಾನಿಯೂ ಆಗಿದ್ದರು. ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸಿದರು ಎಂಬುದನ್ನು ರಾಜ್ಯೋತ್ಸವದ ಸಂದರ್ಭ ನೆನೆಸಿಕೊಳ್ಳಬೇಕು. ಪ್ರಜಾಪ್ರತಿನಿಧಿಗಳು, ಸಭೆ ಸಮಾರಂಭಗಳ ಗಣ್ಯರ ಅಭಿಪ್ರಾಯಕ್ಕೂ ಹೊರತಾಗಿ ಹೊರಗಿನ ವಿಶಾಲ ಪ್ರಪಂಚದಲ್ಲಿ ಕಾಣುವ ಸಾಮಾನ್ಯ ಜನರ ಮನಸ್ಸು ಸಭೆ, ಸಂಸ್ಥೆಗಳವರ ಮನಸ್ಸಿಗಿಂತ ಹೆಚ್ಚು ಮಾನ್ಯವಾದದ್ದು ಎನ್ನುವ ಪ್ರಜಾ ಹಿತದ ಆಡಳಿತ ಕಾರ್ಯವೈಖರಿ ಇಂದಿನ ಆಡಳಿತಗಾರರಿಗೆ ಮಾರ್ಗಸೂಚಿ. ಶ್ರೀಲಂಕಾ, ಬರ್ಮಾ, ನೇಪಾಲ, ಅಫ್ಘಾನಿಸ್ಥಾನ, ಪಾಕಿಸ್ಥಾನ ಸೇರಿದಂತೆ ಬೃಹತ್ ಅಖಂಡ ಭಾರತದ ಅವರ ಪ್ರತಿಪಾದನೆ ಈಗಿನ ಅಖಂಡ ಭಾರತದ ಕಲ್ಪನೆಗಿಂತ ಹಿರಿದಾದುದು. ಬೆಂಗಳೂರು, ಮೈಸೂರನ್ನು ಅಭಿವೃದ್ಧಿಪಡಿ ಸಲು ಕಾರಣವಾದ ಸೌಂದರ್ಯೋಪಾಸನ ಪ್ರವೃತ್ತಿಯನ್ನು ನೆನಪಿಸಿಕೊಳ್ಳಬೇಕು.
ಕೃಷ್ಣರಾಜ ಒಡೆಯರ್ ಅವಧಿಯಲ್ಲಿ ಮಿರ್ಜಾ ದಿವಾನ್ ಆಗಿ ವಿವಿಧ ಕೈಗಾರಿಕೆಗಳ ಸ್ಥಾಪನೆ, ಹಳ್ಳಿಗಳಿಗೆ ವಿದ್ಯುತ್ ಪೂರೈಕೆ, ನೀರಾವರಿ ಕಾಮಗಾರಿ, ಕೃಷಿ ಪಂಪ್‌ಸೆಟ್ ಇತ್ಯಾದಿಗಳಿಗೆ ಆದ್ಯತೆ ಕೊಟ್ಟರು. ಯೂರೋಪ್ ಮಾರುಕಟ್ಟೆಯಲ್ಲಿ ಮೈಸೂರಿನ ಗಂಧದೆಣ್ಣೆ, ರೇಷ್ಮೆ, ಮೈಸೂರು ಸ್ಯಾಂಡಲ್ ಸೋಪ್, ಅಗರಬತ್ತಿ ಇತ್ಯಾದಿಗಳು ಬೇಡಿಕೆಯನ್ನು ಕುದುರಿಸಿಕೊಂಡವು.
ಇದನ್ನೂ ಓದಿ:80 ಸಾವಿರ ಫಲಾನುಭವಿಗಳಿಗೆ ಅನುಗ್ರಹ ಯೋಜನೆ ಲಾಭ: ಪ್ರಭು ಚೌವ್ಹಾಣ್
ಮಿರ್ಜಾ 1959ರ ಜನವರಿ 5ರಂದು ನಿಧನ ಹೊಂದಿದ ದಿನ ಅಂತಿಮ ಸಂಸ್ಕಾರ ನಡೆಯುವಾಗ ರಾತ್ರಿ ಆಗಿತ್ತು. ಹೆಸರಾಂತ ಸಾಹಿತಿ ಡಿ.ವಿ.ಗುಂಡಪ್ಪನವರೂ ಹೋಗಿದ್ದರು. ಅಲ್ಲೊಬ್ಬ ವ್ಯಕ್ತಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಡಿವಿಜಿ ವಿಚಾರಿಸಿದರು. ಆತ ಅಕ್ಕಸಾಲಿಗ ವೃತ್ತಿಯ ಕಬ್ಬನ್‌ಪೇಟೆಯವನು. ಒಂದು ದಿನ ಇವರ ಹೆಂಡತಿ ನೀರು ತರಲು ಬನ್ನಪ್ಪ ಪಾರ್ಕ್ ನಳ್ಳಿಗೆ ಹೋದಳು. ಜನರೂ ಬಹಳಷ್ಟು ಇದ್ದರು. ಜಗಳ, ಗಲಾಟೆ ನಡೆಯಿತು. ಒಂದು ಗಂಟೆ ಕಾದ ಬಳಿಕ ಈಕೆಗೆ ನೀರು ಸಿಕ್ಕಿತು. ಆಕೆ ಬಸುರಿ. ದೊಡ್ಡ ಕೊಡ. ಬಹಳ ಕಷ್ಟಪಟ್ಟು ಕೊಡವನ್ನು ತಂದಳು. ಜಗಳ, ಬೈಗುಳ, ತುಸು ಮೈಕೈ ನೋವೂ ಸೇರಿ ಕಣ್ಣೀರಿಡುತ್ತ ಮನೆಗೆ ಬಂದಳು. ಆಕೆಯ ಹಿಂದೆ ಸರಕಾರದ ಸಿಬಂದಿಯೊಬ್ಬ ಮನೆಗೆ ಬಂದು “ದಿವಾನ್ ಸಾಹೇಬರು ಸೈಂಟ್ ಮಾರ್ಥಾ ಆಸ್ಪತ್ರೆ ಹತ್ತಿರ ಮೊಕ್ಕಾಂ ಇದ್ದಾರೆ. ಮನೆ ತಿಳಿದುಕೊಂಡು ಬರುವಂತೆ ಹೇಳಿದ್ದಾರೆ’ ಎಂದ.
ಮನೆ ಯಜಮಾನ ಹೆದರಿಕೊಂಡು ಸಿಬಂದಿ ಹಿಂದೆಯೇ ದಿವಾನರಲ್ಲಿ ಹೋದಾಗ ದಿವಾನರು ವಿಚಾರಿಸಿದರು. “ನಿಮ್ಮ ಮನೆಯಲ್ಲಿ ನೀರಿನ ನಳ್ಳಿ ಇಲ್ಲವೆ?’ ಎಂದರು. “ಇಲ್ಲ ಸ್ವಾಮಿ, ಅಷ್ಟಕ್ಕೆ ಅನುಕೂಲವಿಲ್ಲ. ಬೀದಿ ನಳ್ಳಿಯಿಂದಲೇ ನೀರು ತಂದುಕೊಳ್ಳುವುದು’ ಎಂದ ಅಕ್ಕಸಾಲಿಗ. ಬೀದಿ ನಳ್ಳಿಗೂ ಮನೆಗೂ ಅರ್ಧ ಮೈಲಿ ಆಗಬಹುದು ಎಂಬುದನ್ನು ಮಿರ್ಜಾ ತಿಳಿದುಕೊಂಡರು.
ಎಂಜಿನಿಯರ್‌ರನ್ನು ಕರೆದು “ಇವರ ಮನೆ ಪಕ್ಕ ನಳ್ಳಿ ಹಾಕಿಸಿಕೊಡಲು ಆಗುತ್ತದೆಯೆ?’ ಎಂದು ಕೇಳಿದರು. “ಮಂಜೂರು ಮಾಡಿದರೆ ಕೆಲಸ ಮಾಡಿಸುತ್ತೇನೆ’ ಎಂದರು. “ಈಗಲೇ, ಇಲ್ಲೇ ಮಂಜೂರು ಮಾಡಿದ್ದೇನೆ. ನಾಳೆ ಬೆಳಗ್ಗೆ ಅವರ ಮನೆಗೆ ನೀರು ಹೊಸ ನಳ್ಳಿಯಿಂದ ಬರಬೇಕು. ಜನದಟ್ಟಣೆ ಇರುವ ಪ್ರದೇಶದಲ್ಲಿ ಒಂದೋ ಎರಡೋ ನಳ್ಳಿಗಳನ್ನಿಟ್ಟರೆ ಉಪಯೋಗವಿಲ್ಲ. ಒಂದೊಂದು ಸಣ್ಣ ಪ್ರದೇಶಕ್ಕೂ ಮಧ್ಯೆ ಅನುಕೂಲವಾದ ಕಡೆಗಳಲ್ಲಿ ನಳ್ಳಿಗಳಿರಬೇಕು. ನಾಳೆ ನಾನು ಇಲ್ಲಿಗೆ ಬರುವ ವೇಳೆಗೆ ಇವರಿಗೆ ನೀವು ನಳ್ಳಿ ಕಲ್ಪಿಸಿ ಉಪಕಾರ ಮಾಡಬೇಕು’ ಎಂದವರು ದಿವಾನ್.
“ನಳ್ಳಿ ನೀರು ಬಂತು. ಆ ನೀರು ಕುಡಿಯುತ್ತಿದ್ದೇವೆ. ನೂರಾರು ಮಂದಿ ಹೆಂಗಸರು ನೀರಿಗೆ ಜಗಳ ಆಡುವುದನ್ನು, ಬಸುರಿ ಒಬ್ಬಳು ಕಷ್ಟ ಪಡುತ್ತಿದ್ದುದನ್ನು ನೋಡಿ ಕನಿಕರ ಪಟ್ಟವರು ಆ ಧಣಿ’ ಎಂದು ಮಿರ್ಜಾ ಗತಿಸಿದಾಗ ಅಕ್ಕಸಾಲಿಗ ದುಃಖಿಸುತ್ತಿದ್ದ.
ಹೇಗೆ ಬದುಕಿದರೆ ಹೇಗೆ ಜನರು ಸ್ಮರಿಸುತ್ತಾರೆನ್ನುವುದಕ್ಕೆ ಇದು ಉದಾಹರಣೆ. ಮಿರ್ಜಾ ಜನ್ಮದಿನದ ಸಂದರ್ಭ (1883ರ ಅಕ್ಟೋಬರ್ 24) ಆ ಘಟನೆಯನ್ನು ವಿವಿಧ ಬಗೆಯ ಹೊಣೆಗಾರಿಕೆ ಹೊಂದಿರುವ ನಾವೆಲ್ಲರೂ ಮೆಲುಕು ಹಾಕಬೇಕು. ಈಗಂತೂ “ಡಿಸಿ ನಡೆ ಹಳ್ಳಿ ಕಡೆ’, “ತಹಶೀಲ್ದಾರ್ ನಡೆ ಹಳ್ಳಿ ಕಡೆ’, “ಕಂದಾಯ ಸಚಿವರ ಗ್ರಾಮ ವಾಸ್ತವ್ಯ’ ಹೀಗೆ ಪುಂಖಾ ನುಪುಂಖ ಶಬ್ದಪುಂಜಗಳು ರಾರಾಜಿ ಸುತ್ತವೆ. ಮಿರ್ಜಾ ಮಾದರಿಯಲ್ಲಿ ಕೆಲಸ ಮಾಡಲು ಈಗ ವಿಪುಲ ಅವಕಾಶಗಳಿವೆ. ಆಗ ಮಾತ್ರ ಜನರು ಉಪಕಾರ ಮಾಡಿದವರನ್ನು ಸ್ಮರಿಸಿಕೊಳ್ಳುತ್ತಾರೆ.
ಮಿರ್ಜಾರ ಮೈಸೂರು ಸೇವಾವಧಿಯ ಕೊನೆಯಲ್ಲಿ 80 ವರ್ಷಗಳ ಹಿಂದೆ ಉಡುಪಿ ಶ್ರೀಕೃಷ್ಣಮಠಕ್ಕೆ ಅದಮಾರು ಮಠದ ಶ್ರೀವಿಬುಧಮಾನ್ಯತೀರ್ಥ ಶ್ರೀಪಾದರ ಪರ್ಯಾಯದಲ್ಲಿ (1940-41) ಆಗಮಿಸಿದ್ದರು ಎನ್ನುವುದನ್ನು ಉಡುಪಿ ಮುಕುಂದ ಕೃಪಾ ಶಾಲೆ ಸಮೀಪದ ನಿವಾಸಿ ದಿ| ಅನಂತಕೃಷ್ಣ ರಾವ್ ಉಲ್ಲೇಖೀ ಸುತ್ತಿದ್ದರು. ಮೈಸೂರು ಬಳಿಕ ಜೈಪುರ, ಹೈದರಾಬಾದ್ ಸಂಸ್ಥಾನದ ದಿವಾನರಾದರು.
ಕೊನೆಯ ದಿನಗಳಲ್ಲಿ ಶಸ್ತ್ರಚಿಕಿತ್ಸೆಗಾಗಿ ಯೂರೋಪಿಗೆ ಹೋಗಿ ಪೂರ್ವಿಕರ ಜನ್ಮಸ್ಥಳ ಪರ್ಷಿಯಾಕ್ಕೂ ಹೋಗಿ ಬಂದರು. ಆ ದೇಶ ಮತ್ತು ಏಶ್ಯಾ ಖಂಡದ ಸ್ಥಿತಿ ಆಶಾಜನಕವಾಗಿಲ್ಲವೆಂದು ದುಃಖ ತೋಡಿಕೊಳ್ಳುತ್ತಿದ್ದರು. ಬಂದ ಮೂರನೆಯ ದಿನ ಸ್ನೇಹಿತರೊಬ್ಬರು ಲ್ಯಾಂಡ್‌ಫೋನ್‌ಗೆ ಕರೆ ಮಾಡಿದಾಗ “ಪ್ರಯಾಣಕ್ಕೆ ಸಿದ್ಧನಾಗುತ್ತಿದ್ದೇನೆ’ ಎಂದರಂತೆ. ಡಿವಿಜಿಯವರು ಪಾರಸಿ ಕವಿಯ ಕವನವನ್ನು ಹೀಗೆನ್ನುತ್ತಾರೆ:
ಅಳುತ ನೀಂ ಬಂದಂದು
ನಿನ್ನ ಜನ ನಕ್ಕರ್|
ನಗುತ ನೀಂ ಪೋಪಂದು
ನಿನ್ನ ಜನವಳುವರ್||
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.