ಬಹುಶ್ರುತ ವಿದ್ವಾಂಸ ಕೆ.ಪಿ. ರಾವ್
Team Udayavani, Aug 6, 2023, 6:50 AM IST
ಕಿನ್ನಿಕಂಬಳ ಪದ್ಮನಾಭ ರಾವ್ ಕೆ.ಪಿ. ರಾವ್ ಎಂದೇ ಜನಜನಿತ. ಬಹುಶ್ರುತ ವಿದ್ವಾಂಸರು. ರಸಾಯನ ಶಾಸ್ತ್ರದಿಂದ ತಂತ್ರಜ್ಞಾನದವರೆಗೂ ಹರಿದು ಬಂದ ಅವರ ಪರಿಯೇ ಒಂದು ಸೋಜಿಗ. ಬಹುಸಂಸ್ಕೃತಿಯ ಕಿನ್ನಿಕಂಬಳದಿಂದ ಹೊರಟು ಮುಂಬಯಿಯಂಥ ಶಹರದಲ್ಲಿ ತಿರುಗಿ, ಬದುಕಿ, ಹೈದರಾಬಾದ್‌ನತ್ತ ಹೊರಳಿ, ಚಂಡೀಗಢ, ಚಿಕಾಗೋ, ಲಂಡನ್ ಎಂದೆಲ್ಲ ತಿರುಗಿ ಮಣಿಪಾಲದಲ್ಲಿ ಸದ್ಯಕ್ಕೆ ನೆಲೆ ನಿಂತವರು.
ಕೆ. ಪಿ. ರಾವ್ ನಡೆದು ಹೋದಲ್ಲೆಲ್ಲ ಬರೀ ಹೆಕ್ಕಿಕೊಂಡು ಹೋಗಿಲ್ಲ, ಬಿತ್ತಿಕೊಂಡು ಸಾಗಿದ್ದಾರೆ. ಪ್ರತೀ ಕ್ಷೇತ್ರದಲ್ಲೂ ಅವರು ಬಿತ್ತಿದ ಬೀಜಗಳು ಈಗ ಹೆಮ್ಮರಗಳಾಗಿವೆ. ಕನ್ನಡ ಗಣಕ ಕ್ಷೇತ್ರದಲ್ಲಿ ಹೆಚ್ಚಾಗಿ ಬಳಸುವ ಲಿಪಿಯೂ ಒಂದು. ರಾಸಾಯನ ಶಾಸ್ತ್ರ, ಪರಮಾಣು ಸಂಶೋಧನ ಕಚೇರಿಯಲ್ಲಿ ಕೆಲಸ, ಟಾಟಾ ಪ್ರಸ್, ಮೋನೊಟೈಪ್‌ನ ನೌಕರಿ, ಅನಂತರ ಅಧ್ಯಾಪನ. ಹೀಗೆ ಒಂದಕ್ಕೊಂದು ಸಂಬಂಧವನ್ನು ಸ್ಥಾಪಿಸಿಕೊಳ್ಳುತ್ತಾ ಬಂದ ಇವರ ನಡಿಗೆಯನ್ನು ಕಂಡರೆ ಯಾವುದನ್ನೂ ಇವರು ಉದ್ಯೋಗಕ್ಕೆಂದು ಆಯ್ದುಕೊಳ್ಳಲಿಲ್ಲ, ಬದಲಾಗಿ ಕಲಿಕೆಗಾಗಿ ಬಳಸಿಕೊಂಡರೆನ್ನುವುದು ಉಚಿತ.
ಪರಮಾಣು ಪರಿಣತ ಡಿ. ಡಿ. ಕೋಸಾಂಬಿ ಅವರ ಬದುಕಿನುದ್ದಕ್ಕೂ ಕಲಿಯುವ ಪರಿಪಾಠವನ್ನೂ ರೂಢಿಸಿಕೊಂಡವರು. ಹಾಗಾಗಿಯೇ ಇಂದಿಗೂ ಹೊಸ ಶೋಧನೆಯ ತವಕ ಆವಿಯಾಗಿಲ್ಲ. ಕೆ.ಪಿ. ರಾವ್ ಸರಳರೇಖೆಯಂತೆ ಸುಲಲಿತವಾಗಿ ನಡೆದುಕೊಂಡು ಹೋದವರಲ್ಲ, ಅಡ್ಡಾದಿಡ್ಡಿಯಾಗಿ ಸಾಗುತ್ತಲೇ ಖುಷಿ ಪಟ್ಟವರು. ಇಂಥ ಮಹಾನುಭಾವರಿಗೆ ಉಡುಪಿಯಲ್ಲಿ ಆ.6ರ ರವಿವಾರ ಅಭಿನಂದನೆ ಸಲ್ಲಿಸಲಾಗುತ್ತಿದೆ.
ಕೆ. ಪಿ. ರಾವ್ ಭಾಷೆ, ತಂತ್ರಜ್ಞಾನ, ತಮ್ಮ ಆಸಕ್ತಿ ಸಂಗತಿಗಳ ಮೇಲೆ ಸಾಕಷ್ಟು ಮಾತನಾಡಿದ್ದಾರೆ. ಆದರೆ ಹೋಮಿ ಜಹಾಂಗೀರ್ ಭಾಭಾ, ಆ ಸಂದರ್ಭದ ಆಲೋಚನೆಗಳು ಇತ್ಯಾದಿ ಕುರಿತು ಪ್ರಸ್ತಾವಿಸಿದ್ದು ತೀರಾ ಕಡಿಮೆ. ಈ ಹೊತ್ತಿನಲ್ಲಿ ಸಂದರ್ಶನ ಸಾರ ರೂಪದಲ್ಲಿರುವ ಈ ಲೇಖನ ಆ ವಿಚಾರಗಳ ಸುತ್ತಲೇ ಇದೆ.
ಭಾರತದ ಪರಮಾಣು ಕಾರ್ಯಕ್ರಮ ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದಾಗ ಯಾವತ್ತೂ ಶಾಂತಿ ಸ್ಥಾಪನೆಯ ಉದ್ದೇಶಕ್ಕಾಗಿಯೇ ಇತ್ತು, ಮಿಲಿಟರಿ ಉಪಯೋಗ ಭಾರತದ ವೈಜ್ಞಾನಿಕ ಮತ್ತು ರಾಜಕೀಯ ವಲಯದಲ್ಲಿ ಇರಲಿಲ್ಲ ಎನ್ನುವುದು ಹಿರಿಯ ಬಹುಶ್ರುತ ವಿದ್ವಾಂಸ ಕೆ.ಪಿ. ರಾವ್ ಅವರ ಅಭಿಪ್ರಾಯವಾಗಿದೆ. ಭಾರತದ ಪರಮಾಣು ಕಾರ್ಯಕ್ರಮದ ಜನಕ ಹೋಮಿ ಜಹಾಂಗೀರ್ ಭಾಭಾ ಅವರ ಒಡನಾಡಿಯಾಗಿ ದೇಶದ ಪರಮಾಣು ಕಾರ್ಯಕ್ರಮ ವಿಕಾಸದ ಪ್ರತಿನಿಧಿಯಾಗಿದ್ದಾರೆ ಕೆ.ಪಿ. ರಾವ್.
ಶಾಂತಿಗಾಗಿ ಅಣು ಯೋಜನೆ
ಜಾಗತಿಕವಾಗಿ ಶಾಂತಿ ಸ್ಥಾಪನೆಯ ಉದ್ದೇಶಗಳಿಗೆ ಪರಮಾಣು ವಿಜ್ಞಾನದ ಬಳಕೆಯ ಪ್ರಯತ್ನಗಳಿಗೆ ನಾಯಕತ್ವ ಕೊಟ್ಟಿದ್ದೇ ಭಾರತ. ಜಗತ್ತಿನ ವಿನಾಶ ಅಲ್ಲ , ಸರ್ವರ ವಿಕಾಸವೇ ಯಾವತ್ತಿಗೂ ಭಾರತದ ಮೂಲ ತಣ್ತೀವಾಗಿದೆ. ಜಾಗತಿಕ ಅಣು ಆಯೋಗದ ಅಧ್ಯಕ್ಷ ಆಗಿದ್ದವರೇ ಹೋಮಿ ಭಾಭಾ. ಅವರ ಅನಂತರ ರಾಜಾರಾಮಣ್ಣ, ವಿಕ್ರಂ ಸಾರಾಭಾಯಿ, ಡಿ.ಡಿ. ಕೋಸಾಂಬಿ, ಗಂಗೂಲಿ, ಟೇಲರ್ ಮುಂತಾದವರು ಅದೇ ಮಾರ್ಗವನ್ನು ಕ್ರಮಿಸಿದರು.
ಸೈದ್ಧಾಂತಿಕ ಮತ್ತು ಪ್ರಾಯೋಗಿಕ
ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ಸೈದ್ಧಾಂತಿಕ ಕಲಿಕೆ ಮತ್ತು ಪ್ರಾಯೋಗಿಕ ಕಲಿಕೆ ಮಧ್ಯದ ತಿಕ್ಕಾಟ ಹೊಸದಲ್ಲ. ಸೈದ್ಧಾಂತಿಕ ಕಲಿಕಾ ಕ್ರಮದಿಂದಾಗಿ ಸಂಗತಿಗಳನ್ನು ಅಳವಡಿಸಿಕೊಳ್ಳಲು ವಿಜ್ಞಾನದ ವಿದ್ಯಾರ್ಥಿಗಳಿಗೂ ಆಗದಿದ್ದದ್ದು ಭಾಭಾ ಸೇರಿದಂತೆ ಅನೇಕ ಹಿರಿಯರನ್ನು ಬೇಸರಗೊಳಿಸಿತ್ತು. ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ಶೈಕ್ಷಣಿಕ ಚರ್ಚೆಗಳು ಜಾಗತಿಕವಾಗಿ ದಶಕಗಳಷ್ಟು ಹಿಂದಿನದ್ದಾಗಿವೆ.
ಇದಕ್ಕಾಗಿಯೇ, ಪರಮಾಣು ಆಯೋಗ ಸ್ಥಾಪನೆ ಆದಾಗ ಜಗತ್ತಿನ ನವೀನ ತಾಂತ್ರಿಕ ಲೋಕಕ್ಕೆ ಹೊಸ ತಲೆಮಾರನ್ನು ತರಬೇತುಗೊಳಿಸುವ ಯೋಜನೆಯನ್ನೂ ಆರಂಭಿಸಲಾಗಿತ್ತು. ಆ ಯೋಜನೆಯ ಫಲಾನುಭವಿಗಳಲ್ಲಿ ನಾನು ಒಬ್ಬ.
ಪರಿಣಾಮಕಾರಿ ಸಂಶೋಧನೆಗಳಿಲ್ಲ
ಭಾರತದ ಸಂಶೋಧನ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು ಪರಿಣಾಮಕಾರಿ ಸಂಶೋಧನ ಕಾರ್ಯಗಳನ್ನು ನಡೆಸುವಲ್ಲಿ ವಿಫಲವಾಗಿವೆ. ನಮ್ಮ ಕೊಲೋನಿಯಲ್ ಪ್ರಭಾವದ ಶೈಕ್ಷಣಿಕ ವ್ಯವಸ್ಥೆಯಲ್ಲಿ ದೂರಗಾಮಿ ಪರಿಣಾಮದ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ನೀಡುತ್ತಿಲ್ಲ. ಭಾಭಾ ಸೇರಿದಂತೆ ದೇಶದ ವೈಜ್ಞಾನಿಕ ಕಾರ್ಯಕ್ರಮದ ಅಧ್ವರ್ಯುಗಳನ್ನು ಇದು ವ್ಯಾಪಕವಾಗಿ ಕಾಡುತ್ತಿತ್ತು. ಇದನ್ನು ಮೀರಿ ನಡೆಯಲು ಪ್ರಯತ್ನಗಳು ನಡೆದವಾದರೂ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಕಾಗುತ್ತಿಲ್ಲ.
ಪೋಖ್ರಾಣ್ ಅಣು ಪರೀಕ್ಷೆ
ಅಪ್ಸರಾ ಮತ್ತು ಸೈರಸ್ ಜತೆಗೆ ಝೆರ್ಲಿನಾರ್‌ಎಂಬ ಹೆಸರಿನ ಮೂರನೇ ರಿಯಾಕ್ಟರ್‌ಕೂಡ ಟ್ರೋಂಬೆಯಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ ಹೊರ ಜಗತ್ತಿಗೆ ಭಾರತ ಇದನ್ನು ಹೆಚ್ಚಾಗಿ ಪ್ರಚುರ ಪಡಿಸಿರಲಿಲ್ಲ. ಅದುವೇ ಪೋಖ್ರಾಣ್ ಅಣು ಪರೀಕ್ಷೆಗೆ ಸಹಕಾರಿಯಾಗಿದ್ದು. ಇಲ್ಲವಾದಲ್ಲಿ ಭಾರತ ತನ್ನ ಮೊದಲ ಯತ್ನದಲ್ಲಿ ಯಶಸ್ಸು ಸಾಧಿಸಲು ಆಗುತ್ತಿರಲಿಲ್ಲ. ಭಾರತ ವಿಜ್ಞಾನ ಲೋಕದ ಇಂತಹ ಪ್ರಯತ್ನಗಳೇ ಜಗತ್ತು ನಮ್ಮತ್ತ ನೋಡುವಂತೆ ಮಾಡಿದೆ. ಅಮೆರಿಕಕ್ಕಿಂತ 30 ವರುಷಗಳ ಅನಂತರ ನಮ್ಮಲ್ಲಿ ಪ್ರಯತ್ನಗಳು ಆರಂಭವಾದರೂ ಭಾರತ ತನ್ನ ಸಮಬಲದ ನಡೆಯನ್ನು ಸಾಧಿಸಿದೆ. ಪೋಖ್ರಾಣ್ ಅಣು ಪ್ರಯೋಗಗಳು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಪ್ರಮುಖ ಸ್ಥಾನವನ್ನು ಒದಗಿಸಿವೆ. ಜಗತ್ತಿನ ಯಾವುದೇ ಶಕ್ತಿ ಭಾರತದ ವೈಜ್ಞಾನಿಕ ವಿಕಾಸವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಮೇಕ್ ಇನ್ ಇಂಡಿಯಾ
ಇವತ್ತು ನಡೆಯುತ್ತಿರುವ “ಮೇಕ್ ಇನ್ ಇಂಡಿಯಾ’ದಂತಹ ಪ್ರಯತ್ನಗಳ ಕುರಿತು ಹೋಮಿ ಭಾಭಾ ಕೂಡ ಕನಸು ಕಂಡಿದ್ದರು. ತಾಂತ್ರಿಕ ಯೋಜನೆ ಎಲ್ಲಿಯೇ ಸಿದ್ಧವಾಗಿರಲಿ; ಅದರೆ ಉತ್ಪಾದನೆ ಭಾರತದಲ್ಲಿ ಆಗಬೇಕು, ಇದರಿಂದ ಉದ್ಯೋಗ ಅವಕಾಶಗಳು ಮೂಡಿಬರಲು ಸಾಧ್ಯ ಎಂದು ಭಾಭಾ ಹೇಳುತ್ತಿದ್ದರು.
ಟ್ರೋಂಬೆ ಮತ್ತು ಮ್ಯಾನಹಟನ್
ಅಮೆರಿಕದ ಅಣು ಯೋಜನೆಗೂ ಮತ್ತು ಭಾರತದ ಯೋಜನೆಗೂ ಅಜಗಜಾಂತರವಿದೆ. ಟ್ರೋಂಬೆ ಮತ್ತು ಮ್ಯಾನಹಟನ್ ಯೋಜನೆಗಳ ತುಲನೆಯೇ ಸರಿ ಅಲ್ಲ. ವೈರಿಗಳನ್ನು ಸದೆ ಬಡಿಯಲು ಅಮೆರಿಕದ ನಾಯಕತ್ವ ಮ್ಯಾನಹಟನ್‌ನ ಪರಿಣಾಮಗಳನ್ನು ಉಪಯೋಗಿಸಿಕೊಂಡಿದೆ. ಆದರೆ ಭಾರತದ ರಾಜಕೀಯ ನಾಯಕತ್ವ ಯಾವಾಗಲೂ ಸಂಯಮವನ್ನು ಕಾಪಾಡಿಕೊಂಡು ಬಂದಿದೆ.
ಭಾಭಾ ಅಕಾಲಿಕ ಮರಣ
ವಿಮಾನ ಅಪಘಾತದಲ್ಲಿ ಹೋಮಿ ಜಹಾಂಗೀರ್ ಭಾಭಾ ಅವರು ಅಕಾಲಿಕವಾಗಿ ಮರಣ ಹೊಂದಿ ದುದು ಭಾರತಕ್ಕೆ ಆದ ಅತೀ ದೊಡ್ಡ ನಷ್ಟ. ಬಹುಶಃ ಭಾಭಾ ಇನ್ನಷ್ಟು ಕಾಲ ಬದುಕಿದ್ದಿದ್ದರೆ ಭಾರತದ ವೈಜ್ಞಾನಿಕ ವಿಕಾಸದ ಸ್ವರೂಪವೇ ಬೇರೆ ಆಗಿರುತ್ತಿತ್ತು. ಆದರೂ ಭಾಭಾ ಅನಂತರ ನೇತೃತ್ವ ವಹಿಸಿದ ರಾಜಾ ರಾಮಣ್ಣ ಮತ್ತು ವಿಕ್ರಂ ಸಾರಾಭಾಯಿ ಯೋಗ್ಯ ರೀತಿಯಲ್ಲಿ ನಡೆಸಿಕೊಂಡು ಹೋದರು.
ಮೊನೊಟೈಪ್
ಕಂಪ್ಯೂಟರ್‌ಗಳಲ್ಲಿ ಕೀ ಬೋರ್ಡ್ ಆಧಾರಿತ ಟೈಪ್‌ಗಿಂತ, ಸ್ವರಾಧಾರಿತ ಟೈಪಿಂಗ್ ಅನ್ನು ತೆಲುಗು ಭಾಷೆಯಲ್ಲಿ ಅಭಿವೃದ್ಧಿಪಡಿಸಿದೆನು. ಅನಂತರ ಭಾರತದ ಇತರ ಭಾಷೆಗಳಿಗೆ ಅಳವಡಿಸಲಾಯಿತು. ಅಕಸ್ಮಾತ್ ಇದು ಆಗಿರದೇ ಇದ್ದರೆ, ನೂರಕ್ಕೂ ಹೆಚ್ಚು ಕೀಲಿಗಳನ್ನು ಕೀಲಿಮಣೆಗೆ ಅಳವಡಿಸಬೇಕಿತ್ತು. 1981ರಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಇದನ್ನು ನನ್ನ ಗುರುಗಳಾಗಿದ್ದ ಸೇಡಿಯಾಪು ಅವರ ಹೆಸರಿನಲ್ಲಿ ಉಚಿತವಾಗಿ ನೀಡಿದ್ದೇನೆ.
-ಶ್ರೀರಾಜ ಗುಡಿ,
ಎಂ.ಐ.ಸಿ., ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.