ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು
Team Udayavani, Dec 6, 2020, 6:20 AM IST
ಸಾಂದರ್ಭಿಕ ಚಿತ್ರ
ಸರಕಾರದ ಅಧೀನದಲ್ಲಿರುವ ಆದರೆ ಸ್ವತಂತ್ರ, ಶಿಸ್ತು ಬದ್ಧ, ಸಮವಸ್ತ್ರಧಾರಿ ಸ್ವಯಂಸೇವಕರನ್ನು ಒಳಗೊಂಡ ಸಂಸ್ಥೆಯೇ ಗೃಹರಕ್ಷಕ ದಳ. “ನಿಷ್ಕಾಮ ಸೇವೆ’ ಎಂಬ ಮೂಲಮಂತ್ರ ದೊಂದಿಗೆ ಸಮಾಜದ ಎಲ್ಲ ವರ್ಗದ ಜನರಿಗೆ ರಕ್ಷಣೆ ನೀಡುವ ಧ್ಯೇಯ ಇದರದ್ದಾಗಿದೆ.
ಎರಡನೇ ಮಹಾಯುದ್ಧದ ಸಮಯದಲ್ಲಿ ಹಿಟ್ಲರನ ನಾಜಿ ಪಡೆಯನ್ನು ಹಿಮ್ಮೆಟ್ಟಿಸಲು ಪೊಲೀಸ್ ಮತ್ತು ಸೇನಾ ಪಡೆಗೆ ಪರ್ಯಾಯವಾಗಿ ದೇಶವನ್ನು ರಕ್ಷಿಸಲೆಂದೇ ಉದಯಿಸಿದ ನಾಗರಿಕ ಪಡೆ ಇದಾಗಿದೆ. ಆರಂಭದಲ್ಲಿ ಇದನ್ನು LDV ಅಂದರೆ LOCAL DEFENCE VOLUNTEER (ಸ್ಥಳೀಯ ರಕ್ಷಣ ಕಾರ್ಯಕರ್ತ) ಎಂದು ಕರೆಯಲಾಗುತ್ತಿತ್ತು. 1946ರ ಡಿಸೆಂಬರ್ 6ರಂದು ದೇಶದಲ್ಲಿ ಮೊದಲ ಬಾರಿಗೆ ಬಾಂಬೆ ಪ್ರಾಂತ್ಯದಲ್ಲಿ ಗೃಹರಕ್ಷಕ ದಳ ಅಸ್ತಿತ್ವಕ್ಕೆ ಬಂದಿತು. ದೇಶದ ಮೂರು ಸೇನಾ ಪಡೆಗಳ ಜತೆಗೆ ಜನರಿಗೆ ಮತ್ತು ದೇಶಕ್ಕೆ ತುರ್ತು ಸಂದರ್ಭಗಳಲ್ಲಿ ರಕ್ಷಣೆ ನೀಡುವುದೇ ಗೃಹರಕ್ಷಕ ದಳದ ಮುಖ್ಯ ಕಾರ್ಯವಾಗಿದೆ. ಪ್ರತೀ ವರ್ಷ ಡಿ. 6ರಂದು ದೇಶದಲ್ಲಿ ಗೃಹರಕ್ಷಕ ದಳದ ಸ್ಥಾಪನ ದಿನವನ್ನಾಗಿ ಆಚರಿಸಲಾಗುತ್ತದೆ.
ಮೊರಾರ್ಜಿ ದೇಸಾಯಿ ಅವರು ದೇಶದ ಪ್ರಧಾನಿಯಾಗಿದ್ದ ಕಾಲದಲ್ಲಿ ಗೃಹರಕ್ಷಕ ದಳದ ಕಾಯಿದೆ ಮತ್ತು ಕಾನೂನುಗಳನ್ನು ಗೃಹ ಸಚಿವಾಲಯದ ಅಡಿಯಲ್ಲಿ ತರಲಾಯಿತು. ಮತೀಯ ಗಲಭೆ, ಹಿಂಸಾಚಾರಗಳ ಸಂದರ್ಭದಲ್ಲಿ ರಕ್ಷಣೆ ಒದಗಿಸಲು ಈ ರೀತಿಯ ಸ್ವಯಂ ಸೇವಕರ ಪಡೆ ನಿಯೋಜಿಸಲಾಗಿತ್ತು. ಸಾಮಾನ್ಯ ದಿರಿಸಿನಲ್ಲಿ ಪೊಲೀಸರಿಗೆ ಸಹಾಯ ನೀಡುವ ಸದುದ್ದೇಶದಿಂದ ಈ ಅಂಗಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಹಂತಹಂತವಾಗಿ ದೇಶದ ಇತರ ರಾಜ್ಯಗಳಲ್ಲಿಯೂ ಸ್ವಯಂ ಸೇವಕರ ಪಡೆ ಅಸ್ತಿತ್ವಕ್ಕೆ ಬಂದವು. 1962ರಲ್ಲಿ ಭಾರತ-ಚೀನ ಯುದ್ಧದ ಸಂದರ್ಭದಲ್ಲಿ ದೇಶದ ರಕ್ಷಣ ಕಾರ್ಯಕ್ಕೆ ಬಳಸುವ ಉದ್ದೇಶದಿಂದ ಈ ಸ್ವಯಂ ಸೇವಕರ ತಂಡಕ್ಕೆ “ಗೃಹರಕ್ಷಕ ದಳ’ ಎಂದು ಮರು ನಾಮಕರಣ ಮಾಡಲಾಯಿತು.
ಸೇರ್ಪಡೆ ಪ್ರಕ್ರಿಯೆ
ಸೇವಾ ಮನೋಭಾವವುಳ್ಳ, ದೈಹಿಕವಾಗಿ ಸದೃಢರಾಗಿರುವ ಸಮಾಜದ ಎಲ್ಲ ಸ್ತರದ ವ್ಯಕ್ತಿಗಳು ಗೃಹರಕ್ಷಕ ದಳಕ್ಕೆ ಸೇರ್ಪಡೆ ಯಾಗಬಹುದು. ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರೂ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಮುಕ್ತ ಅವಕಾಶವಿರುತ್ತದೆ. ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ ಮತ್ತು ವಯೋಮಿತಿ 19 ರಿಂದ 50 ವರ್ಷಗಳ ಒಳಗಿರಬೇಕು. ಒಮ್ಮೆ ದಳದ ಸದಸ್ಯರಾಗಿ ಸೇರ್ಪಡೆಯಾದ ಬಳಿಕ ಪ್ರತೀ 3 ವರ್ಷಗಳಿಗೊಮ್ಮೆ ಮರು ದಾಖಲಾತಿ ಮಾಡಿಕೊಳ್ಳಬೇಕು. ಗೃಹ ರಕ್ಷಕರ ನಿವೃತ್ತಿ ವಯಸ್ಸು 60 ಆಗಿರುತ್ತದೆ. ಸರಕಾರವೇ ನಿಗದಿಪಡಿಸಿದ ಅರ್ಜಿ ನಮೂನೆಗಳು ಗೃಹರಕ್ಷಕ ದಳದ ಜಿಲ್ಲಾ ಕಛೇರಿಗಳಲ್ಲಿ ಉಚಿತವಾಗಿ ದೊರಕುತ್ತದೆ. ಅದನ್ನು ಭರ್ತಿ ಮಾಡಿ ನಿಗದಿತ ದಿನಾಂಕದಲ್ಲಿ ಅರ್ಜಿಯ ಜತೆಗೆ ವಿದ್ಯಾರ್ಹತೆ, ವಯಸ್ಸಿನ ದಾಖಲೆ ಮತ್ತು ವಾಸ ಸ್ಥಳಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳ ನಕಲು ಪ್ರತಿ ಲಗತ್ತಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ವ್ಯಕ್ತಿ ಅಪರಾಧ ಹಿನ್ನೆಲೆ ಹೊಂದಿಲ್ಲವೆಂದು ಸಾಬೀತಾದ ಬಳಿಕ ಅಯ್ಕೆಗೆ ಸಂದರ್ಶನ ನಡೆಯುತ್ತದೆ. ಈ ಆಯ್ಕೆ ಸಮಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠರು, ಜಿಲ್ಲಾ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಗೃಹ ರಕ್ಷಕ ಸಮಾದೇಷ್ಠರು ಇರುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆರು ತಿಂಗಳುಗಳ ಕಾಲ ಪ್ರಾಥಮಿಕ ತರಬೇತಿ ನೀಡಲಾಗುತ್ತದೆ. ಪ್ರಥಮ ಚಿಕಿತ್ಸೆ, ಪ್ರವಾಹ ರಕ್ಷಣೆ, ಅಗ್ನಿಶಮನ, ಸಂಚಾರ ನಿಯಂತ್ರಣ, ನಿಶಸ್ತ್ರ ಹಾಗೂ ಶಸ್ತ್ರ ತರಬೇತಿಗಳನ್ನು ಜಿಲ್ಲಾ ಮಟ್ಟದಲ್ಲಿ ಹಾಗೂ ಬೆಂಗಳೂರಿನ ಗೃಹ ರಕ್ಷಕ ಮತ್ತು ಪೌರ ತರಬೇತಿ ರಕ್ಷಣ ಅಕಾಡೆಮಿಯಲ್ಲಿ ಉನ್ನತ ತರಬೇತಿಗಳನ್ನು ನೀಡಲಾಗುತ್ತದೆ. ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಗೃಹರಕ್ಷಕ ದಳಕ್ಕೆ ಸೇರಲಿ ಎಂಬ ಉದ್ದೇಶದಿಂದ ಮತ್ತು ಜನರ ಸೇವೆಯನ್ನು ಗುರುತಿಸುವ ಸಲುವಾಗಿ ಸರಕಾರ ಕಿಂಚಿತ್ ಪ್ರಮಾಣದ ಗೌರವ ಧನ ನೀಡಿ ಪ್ರೋತ್ಸಾಹಿಸುತ್ತಿದೆ.
ಗೃಹರಕ್ಷಕ ದಳ ಎನ್ನುವುದು ಸರಕಾರಿ ಪ್ರಾಯೋಜಿತ ಸ್ವಯಂ ಸೇವಾ ಸಂಸ್ಥೆಯಾಗಿದ್ದು ಸಮಾಜದ ಎಲ್ಲ ಧರ್ಮ, ಜಾತಿ ಮತ್ತು ವರ್ಗದ ಜನರಿಗೆ ಮುಕ್ತವಾಗಿ ತೆರೆದಿರುತ್ತದೆ. ಸಮಾಜಸೇವೆಯ ತುಡಿತ ಇರುವ ವ್ಯಕ್ತಿಗಳು, ಯಾವುದೇ ಫಲಾಪೇಕ್ಷೆ ಇಲ್ಲದೆ ಸಮುದಾಯದ ಸೇವೆ ಮಾಡುವ ಆಶಯವುಳ್ಳವರಿಗೆ ಗೃಹರಕ್ಷಕ ದಳ ಉತ್ತಮ ವೇದಿಕೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಪಾಡುವ ಜತೆಯಲ್ಲಿ ದೇಶದ ಭದ್ರತೆ, ಆರ್ಥಿಕ, ಸಾಮಾಜಿಕ, ನೈತಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆ ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಗೆ ಗೃಹರಕ್ಷಕ ದಳ ತನ್ನದೇ ಆದ ಕೊಡುಗೆಯನ್ನು ನೀಡಿದೆ.
ಗೃಹರಕ್ಷಕರ ಕರ್ತವ್ಯಗಳು
ದೇಶದ ಆಂತರಿಕ ಭದ್ರತೆಯನ್ನು ಕಾಪಾಡಲು ಪೊಲೀಸ್ ವ್ಯವಸ್ಥೆಗೆ ಪೂರಕವಾಗಿ ಕರ್ತವ್ಯ ನಿರ್ವಹಣೆ.
ನೈಸರ್ಗಿಕ ವಿಕೋಪಗಳಾದ ನೆರೆ ಹಾವಳಿ, ಭೂಕಂಪ, ಚಂಡಮಾರುತ, ಸುನಾಮಿ, ಭೂಕುಸಿತ ಇತ್ಯಾದಿ ದುರಂತಗಳ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆ.
ಯುದ್ಧ ಅಥವಾ ತುರ್ತು ಪರಿಸ್ಥಿತಿಯ ವೇಳೆ ವೈಮಾನಿಕ ದಾಳಿಗಳು ನಡೆದಲ್ಲಿ ಸಮುದಾಯವನ್ನು ಎಚ್ಚರಿಸುವುದು ಮತ್ತು ರಕ್ಷಣೆ.
ಕಟ್ಟಡ ಕುಸಿತ, ಅನಿಲ ದುರಂತ, ಭೂ ಕುಸಿತ, ಅಗ್ನಿ ಆಕಸ್ಮಿಕ ಅಥವಾ ಇನ್ನಿತರ ದುರ್ಘಟನೆ ಅಥವಾ ಅವಘಡಗಳು ಸಂಭವಿಸಿದಾಗ ಜನರ ಪ್ರಾಣ, ಆಸ್ತಿಪಾಸ್ತಿ ರಕ್ಷಣೆ. ಗಾಯಾಳುಗಳು ಮತ್ತು ಮೃತದೇಹಗಳ ಶೋಧನಾಕಾರ್ಯ ಮತ್ತು ಸ್ಥಳಾಂತರಕ್ಕೆ ನೆರವು.
ಜಾತ್ರೆ, ಉತ್ಸವ, ರಾಷ್ಟ್ರೀಯ ಹಬ್ಬಗಳ ಆಚರಣೆ, ಮುಷ್ಕರ, ಪ್ರತಿಭಟನೆ, ಸಾರ್ವಜನಿಕ ಸಭೆ ಸಮಾರಂಭಗಳ ಸಮಯದಲ್ಲಿ ಬಂದೋಬಸ್ತ್ ಕರ್ತವ್ಯ.
ಕಾನೂನು ಮತ್ತು ಸುವ್ಯವಸ್ಥೆ ಪಾಲನೆ, ಸಂಚಾರ ನಿರ್ವಹಣೆ, ಸಾರ್ವಜನಿಕ ಕಟ್ಟಡಗಳಿಗೆ ಪಹರೆ.
ಪೊಲೀಸ್ ಆಂತರಿಕ ಭದ್ರತೆ, ರಾಜ್ಯ ಗುಪ್ತಚರ ವಾರ್ತೆ, ಕಾರಾಗೃಹ, ಭಾರತೀಯ ಆಹಾರ ನಿಗಮ, ಆಕಾಶವಾಣಿ, ಸಾರಿಗೆ, ಅಬಕಾರಿ, ಪ್ರವಾಸೋದ್ಯಮ, ಸರಕಾರಿ ಅಸ್ಪತ್ರೆಗಳು, ಪ್ರಾಚ್ಯ ವಸ್ತು ಸಂಗ್ರಹಾಲಯ, ಗಣಿ ಮತ್ತು ಭೂ ವಿಜ್ಞಾನ ಇತ್ಯಾದಿ ಕಚೇರಿ ಮತ್ತು ಸ್ಥಳಗಳಿಗೆ ಪಹರೆ ಹಾಗೂ ಸಾರ್ವಜನಿಕ ಸೊತ್ತುಗಳ ರಕ್ಷಣ ಕಾರ್ಯ.
ಚುನಾವಣೆ ಸಂದರ್ಭಗಳಲ್ಲಿ ಜಿಲ್ಲಾಡಳಿತ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಹಕಾರ.
ದೇಶದ ಗಡಿಯನ್ನು ಕಾಯುವಲ್ಲಿ ಗಡಿ ಭದ್ರತ ಪಡೆ (BSF)ಗೆ ಸಹಕಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.