ಮಾನವೀಯ ಭಾಷೆ ಮೊಳಗಲಿ…
Team Udayavani, Feb 6, 2020, 7:00 AM IST
– ನಾನು ಹೋರಾಟಗಾರನಲ್ಲ; ಚಳವಳಿ ನನ್ನ ಕನ್ನಡದ ಕೆಲಸದಲ್ಲಿತ್ತು…
– ಲೇಖಕನ ಧ್ವನಿ ಬಹಳ ಆಳದಿಂದ ಹೊಮ್ಮುವಂಥ ವಿವೇಕದ ವಾಣಿ.
ಕಾವ್ಯವೇ ಜೀವನ, ಮೌನವೇ ಅದರ ಅನುಸಂಧಾನ ಎನ್ನುತ್ತಾ, ಕನ್ನಡದ ಸಾರಸ್ವತ ಪರಂಪರೆಯಲ್ಲಿ ಗುರುತಿಸಿಕೊಂಡವರು ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ. ಪಾಠ- ಪ್ರವಚನ ಮುಖೇನ, ಪರಂಪರಾಗತ ಕವಿಗಳ ಶ್ರೇಷ್ಠರಚನೆಗಳನ್ನು ಭಿನ್ನನೋಟದಲ್ಲಿ ಬಿಡಿಸುತ್ತಾ, ಕಾವ್ಯಗಂಧವನ್ನು ಅಸಂಖ್ಯ ಕನ್ನಡಿಗರ, ವಿದ್ಯಾರ್ಥಿಗಳ ಹೃದಯಕ್ಕೆ ದಾಟಿಸಿದ ಮೇಷ್ಟ್ರು. ಹಳೆಗನ್ನಡ- ಹೊಸಗನ್ನಡಗಳ ನಡುವೆ ಸೇತುವೆ ಕಟ್ಟಿ, ಭಾವಗೀತೆಗಳಿಂದಲೇ ಜಗದೆಲ್ಲೆಡೆಯ ಕನ್ನಡ ಮನಸುಗಳನ್ನು ತಬ್ಬಿದ ಭಾವಮಾಂತ್ರಿಕ ಕವಿ. ರಾಮ, ಕೃಷ್ಣ, ಬುದ್ಧ, ಗಾಂಧಿ, ಪಂಪ, ಕುಮಾರವ್ಯಾಸರನ್ನೂ ಸಮಕಾಲೀನಗನ್ನಡಿಯಲ್ಲಿ ನೋಡಲು ಪ್ರೇರೇಪಿಸಿದ ಎಚ್ಚೆಸ್ವಿ, ಪ್ರಸ್ತುತ ಕಲಬುರಗಿಯಲ್ಲಿ ನಡೆಯುತ್ತಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾರಥಿ. ಹೂ ಮನಸ್ಸಿನ ಕವಿಯ ಜತೆಗೆ “ಉದಯವಾಣಿ’ ನಡೆಸಿದ ಮಾತಿನ ವಿಹಾರ ಹೀಗಿದೆ…
1. ಕನ್ನಡ ಕಾವ್ಯ ಪರಂಪರೆಯ ಸಾಲಿನ ಮೇರುಕವಿಗಳಲ್ಲಿ ನೀವೂ ಒಬ್ಬರೆಂದು, ಈ ನಾಡು ನಿಮಗೆ ಸಮ್ಮೇಳನಾಧ್ಯಕ್ಷ ಗೌರವವನ್ನು ನೀಡುತ್ತಿದೆ. ನುಡಿಹಬ್ಬದ ಕುರಿತು ನಿಮ್ಮ ನಿರೀಕ್ಷೆಗಳೇನು?
ಕನ್ನಡದ ಹೆಸರಿನಲ್ಲಿ, ಕನ್ನಡ ಸಾಹಿತ್ಯದ ಹೆಸರಿನಲ್ಲಿ ಸಾವಿರಾರು ಜನ ಸೇರುವುದು ಇದೆಯಲ್ಲ, ಅದೊಂದು ರೋಮಾಂಚನ. ಜಾತ್ರೆ, ಪರಿಷೆ, ಹಬ್ಬ, ಹುಣ್ಣಿಮೆ ಅಥವಾ ರಾಜಕೀಯ ಸಭೆಗಳು…- ಹೀಗೆ ಜನ ಬೇರೆ ಬೇರೆ ಸಂಗತಿ, ಕಾರಣಗಳಿಗೆ ಸೇರಬಹುದು; ಆದರೆ, ಇಲ್ಲಿ ಮಾತ್ರ ಕನ್ನಡವೇ ನೆಪ. ಕನ್ನಡದ ಸಮುದಾಯ ಇಲ್ಲಿ ಒಂದುಗೂಡುತ್ತದೆ. ಅಪಾರ ಸಂಖ್ಯೆಯಲ್ಲಿ ಕನ್ನಡಿಗರು ಸಾಕ್ಷಿ ಆಗುತ್ತಾರೆಂಬ ನಿರೀಕ್ಷೆ ನನ್ನದು. ಆ ಕನ್ನಡಿಗರ ಆಶೀರ್ವಾದವನ್ನು ಪಡೆಯುವ ಸೌಭಾಗ್ಯ ನನ್ನದು. ಎಂತೆಂಥ ಮಹಾನುಭಾವರೆಲ್ಲ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆ ದೊಡ್ಡ ದೊಡ್ಡ ಸಾಧಕರ ಸಾಲಿನಲ್ಲಿ ನನಗೂ ಒಂದು ಜಾಗ ಸಿಕ್ಕಿತಲ್ಲ ಎನ್ನುವುದು ನನ್ನ ವಿನಯವನ್ನು, ಸಂತೋಷವನ್ನು ಹೆಚ್ಚುಮಾಡಿದೆ.
2. ಪರಿಷತ್ತಿಗೆ ಇಂಥ ಗೋಷ್ಠಿಯೇ ಮಾಡಿ, ಸಮ್ಮೇಳನ ಇಂಥ ಕಲ್ಪನೆಯಲ್ಲಿಯೇ ಮೂಡಿಬರಲಿಯೆಂದು ಮಾರ್ಗದರ್ಶನ ಮಾಡುವ ಸ್ವಾತಂತ್ರ್ಯ, ಅಧ್ಯಕ್ಷರಾಗಿ ನಿಮಗೆ ಇದೆಯೇ? ಇಲ್ಲಾ, ಅಧ್ಯಕ್ಷ ಪದವಿ ಅಂತ ಕೂರಿಸಿ, ಅವರ ಪಾಡಿಗೆ ಅವರು ಸಮ್ಮೇಳನ ನಡೆಸುತ್ತಾರಾ?
ನನಗೆ ಗೊತ್ತಿರುವ ಹಾಗೆ, ಅಲ್ಲೊಂದು ಕಮಿಟಿ ಮಾಡುತ್ತಾರೆ. ಯಾವ ಗೋಷ್ಠಿಗಳಾಗಬೇಕು? ಏನು ಚರ್ಚೆಯಾಗಬೇಕು? ಯಾರನ್ನು ಕರೆಯಬೇಕು?- ಎಂಬುದನ್ನು ಆ ಕಮಿಟಿ ನಿರ್ಧರಿಸುತ್ತೆ. ಮತ್ತೆ ಮತ್ತೆ ಸಭೆ ನಡೆಸಿ, ಕೂಲಂಕಷವಾಗಿ ಚರ್ಚಿಸಿ, ಗೋಷ್ಠಿಯ ಸ್ವರೂಪದ ಬಗ್ಗೆ ತೀರ್ಮಾನಿಸುತ್ತಾರೆ. ಅವರು ನನ್ನ ಸಲಹೆಯನ್ನೇನೂ ಕೇಳಿಲ್ಲ. ಈ ಹಿಂದೆ ಹೀಗೆಯೇ ಇತ್ತೋ, ಗೊತ್ತಿಲ್ಲ. ವಿಶೇಷವಾದ ಸಂಗತಿಯನ್ನೇನಾದರೂ ಸೇರಿಸಬೇಕೇ ಅಂತ ಪರಿಷತ್ತಿನವರು ನನ್ನನ್ನು ಕೇಳಿದ್ದರು. “ನಾಡು, ನುಡಿ, ಸಾಹಿತ್ಯ, ಕನ್ನಡ ಸಮುದಾಯಕ್ಕೆ ಏನು ಅಗತ್ಯವೋ ಅಂಥ ಚರ್ಚೆಗಳಾಗಲಿ’ ಎಂಬ ಆಶಯವನ್ನು ಮುಂದಿಟ್ಟೆ. “ಆ ನೆಲೆಯಲ್ಲಿಯೇ ನಾವು ಗೋಷ್ಠಿಗಳನ್ನು ಏರ್ಪಡಿಸಿದ್ದೇವೆ’ ಎಂದು ಅವರು ಭರವಸೆ ಕೊಟ್ಟಿದ್ದಾರೆ.
3. ಜೈನ ಪುರಾಣಗಳಲ್ಲಿ ತೀರ್ಥಂಕರರ ಜನನವಾದಾಗ, ಇಂದ್ರನ ಆಸನ ಕಂಪಿಸುತ್ತೆ ಎನ್ನುವ ನಿಮ್ಮ ಸಾಲುಗಳು ಬಹಳ ಆಪ್ತ. ಜಗತ್ತಿನಲ್ಲಿ, ನಾಡಿನಲ್ಲಿ ಎಲ್ಲೋ ಸಂಭವಿಸುವ ಘಟನೆ ನಮ್ಮ ಕಾಲುಬುಡವನ್ನೂ ಹಾಗೆಯೇ ಕಂಪಿಸುವಂತೆ ಮಾಡುತ್ತಿರುವ ಸಂದರ್ಭವಿದು. ಈ ವೇಳೆ ಪ್ರತಿಕ್ರಿಯೆ- ಮೌನ… ಇವುಗಳಲ್ಲಿ ಲೇಖಕನ ಆಯ್ಕೆ ಯಾವುದಾಗಬೇಕು? ಏಕೆ?
ಬಹಿರಂಗದಲ್ಲಿ ಮೌನ; ಸಾಹಿತ್ಯಿಕ ಮತ್ತು ಆಂತರಿಕವಾಗಿ ಸ್ಪಂದನ. ಲೇಖಕನ ಸ್ಪಂದನ ಎನ್ನುವಂಥದ್ದು ಬಹಳ ಆಳದಿಂದ ಹೊಮ್ಮುವಂಥ ವಿವೇಕದ ವಾಣಿ. ಸುಲಭದ ಪಕ್ಷಪಾತ ವಹಿಸಿಕೊಳ್ಳಲು ಅದು ಇಚ್ಛಿಸದು. ಒಂದು ಸಂದರ್ಭವನ್ನು ಸಮಗ್ರವಾಗಿ ಪರಿವೀಕ್ಷಿಸಿ, ಅಂತರಂಗದಲ್ಲಿ ಅದು ಅನೇಕ ಕುದಿಗಳನ್ನು ಪಡೆದು, ಸಾಹಿತ್ಯ ರೂಪದಲ್ಲಿ ಹೊರಬರುತ್ತೆ. ಹಿಂದೆಲ್ಲ ಗಮನಿಸಿ, ಪಂಪ, ಕುಮಾರವ್ಯಾಸ ಆಡಿದ ಮಾತುಗಳು, ಅವರ ಕಾಲಧರ್ಮವನ್ನು ಸೂಚಿಸುವಂತಿದ್ದವು. ಹಾಗೆಯೇ, ಪಂಪನ ಮಾತು ಅವನ ಧ್ವನಿ ಹೇಗೋ, ಪಂಪನ ಯುಗದ ಧ್ವನಿಯೂ ಆಗುತ್ತಿತ್ತು. ಕವಿ ಇದ್ದಾಗ ಮತ್ತು ಹೋದಾಗ ಅವನು ಮಾತಾಡೋದು ಕವಿತೆಯ ಮೂಲಕ. ಕವಿಯು ತೀರಿದ ಮೇಲೆ ಕವಿತೆಯೇ ನಾಲಿಗೆ.
ನಡೆ- ನುಡಿಗಳ ನಡುವಿನ ಕಂದಕವನ್ನು ತಪ್ಪಿಸುವ ಯತ್ನವನ್ನು ಪ್ರತಿಯೊಬ್ಬರೂ ಮಾಡುತ್ತಿರಬೇಕು. ಪ್ರತಿ ಮಾತಿಗೊಂದು ಪ್ರತಿಮಾತು ಎನ್ನುವುದು ಇರುತ್ತೆ. ಮಾತನ್ನು, ಪ್ರತಿಮಾತನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸಿ, ಅವುಗಳ ಘರ್ಷಣೆಯ ಮೂಲಕ ಹೊಮ್ಮುವಂಥ ಯಾವ ಹೊಸ ಮೌಲ್ಯವಿದೆ? ಯಾವ ಸಿದ್ಧಾಂತಕ್ಕೆ ಬರಬೇಕೆಂಬುದನ್ನು ತಾಳ್ಮೆಯಿಂದ ಮತ್ತು ತಣ್ಣನೆಯ ಮನಸ್ಸಿನಲ್ಲಿ ಯೋಚಿಸಿ, ಆ ನಂತರವೇ ನಾವೊಂದು ನಾವು ನಿರ್ಣಯಕ್ಕೆ ಬರಬೇಕಾಗುತ್ತದೆ. ತಕ್ಷಣವೇ ನಾನು ಸ್ಪಂದನ ಕೊಡಬೇಕು ಎನ್ನುವುದಾಗಲೀ, ಕೂಡಲೇ ನಾನು ಉತ್ತರಿಸಬೇಕು ಎಂಬ ಹಕ್ಕೊತ್ತಾಯವಾಗಲೀ, ಇವು ಅವಸರದ ತೀರ್ಮಾನಕ್ಕೆ ದಾರಿಮಾಡಿಕೊಡುತ್ತವೆ. ಮಾತಿಗಿಂತ ಮೌನದ ಅನುಸಂಧಾನ ಬಹಳ ಮುಖ್ಯ.
4. ನೀವು ನಾಡು- ನುಡಿಗೆ ಸಂಬಂಧಿಸಿದಂತೆ ವ್ಯಕ್ತಿಗತವಾಗಿ ಯಾವುದೇ ಚಳವಳಿಯಲ್ಲಿ ಕಾಣಿಸಿಕೊಂಡವರಲ್ಲ. ನಿಮ್ಮ ಕಾವ್ಯ ರಚನೆಗಳ ಪಾಲ್ಗೊಳ್ಳುವಿಕೆಯೂ ಅದರಿಂದ ದೂರವೇ. ಬದುಕು- ಭಾವಗಳೊಟ್ಟಿಗೆ ಮಿಡಿಯುವಂಥವು. ವೈಚಾರಿಕ ಚರ್ಚೆ, ವಿವಾದಗಳಾದಾಗ ಅದರ ದಡದಲ್ಲಿ ನಿಂತ ವೀಕ್ಷಕರಾಗಿ ಎಚ್ಚೆಸ್ವಿ ಕಾಣಿಸುತ್ತಾರೆ ಎನ್ನುವ ಮಾತಿದೆ. ಹಾಗಿದ್ದರೆ, ನಿಮ್ಮ ನಿಲುವು ಏನು?
ಒಬ್ಬ ಲೇಖಕ, ಮುಖ್ಯಲೇಖಕ ಆಗೋದೇ ಈ ಪ್ರಶ್ನೆಯನ್ನು ಎದುರಿಸಿದಾಗ. ಈಗ ನನ್ನ ಬರವಣಿಗೆ ಯಾರ ಪರವಾಗಿದೆ? ಅದು ಮನುಷ್ಯತ್ವ ಪರವಾಗಿದೆಯೋ, ಮನುಷ್ಯ ವಿರೋಧಿಯಾಗಿದೆಯೋ? ಸಮಾಜದ ಪರವಾಗಿದೆಯೋ, ಸಮಾಜ ವಿರೋಧಿಯಾಗಿದೆಯೋ? ಪ್ರಗತಿಪರವೋ, ಪ್ರತಿಗಾಮಿಯೋ? ನನ್ನ ರಚನೆಗಳಲ್ಲಿ ಹೊಸ ಕಾಲಕ್ಕೆ ಬೇಕಾದ ಮೌಲ್ಯಗಳನ್ನು ನಾನು ಹೇಳುತ್ತಾ ಇದ್ದೇನೆ ಎಂದು ಅನೇಕ ವಿಮರ್ಶಕರು ಪ್ರಶಂಸಿಸುತ್ತಾ ಬಂದಿದ್ದಾರೆ. “ಅಮೆರಿಕದಲ್ಲಿ ಬಿಲ್ಲುಹಬ್ಬ’ ಕಾವ್ಯದಲ್ಲಿ, ಭಾರತ ಎದುರಿಸುತ್ತಿರುವ ವಲಸೆ ಸಮಸ್ಯೆಯನ್ನು ಹೇಳಿದ್ದೆ. ಪು.ತಿ.ನ. ಅವರು ಗೋಕುಲ ನಿರ್ಗಮನ ಬರೆದರಲ್ಲ. ಅದರ ಮುಂದುವರಿದ ಭಾಗ ಎನ್ನುವ ಹಾಗೆ ನಾನು “ಕಂಸಾಯಣ’ ಬರೆದೆ. ಹಳ್ಳಿಯಿಂದ ನಗರ ದಿಕ್ಕಿಗೆ ಬಂದಂಥ ಕೃಷ್ಣ ಮತ್ತು ಅವನ ಸ್ನೇಹಿತರು, ಮಥುರೆಯನ್ನು ಬೃಂದಾವನ ಮಾಡುವಂಥ ವಿಚಾರ ಇಟ್ಟುಕೊಳ್ಳುತ್ತಾರೆ. ಅಂದರೆ, ಇದು ಆಧುನಿಕ ಸಂಗತಿ. ನಾವು ಬೆಂಗಳೂರನ್ನು ಶಿವಮೊಗ್ಗ, ತೀರ್ಥಹಳ್ಳಿ, ಹೊದ್ದಿಗೆರೆ, ಚನ್ನಗಿರಿ ಮಾಡಬೇಕು. ಹಾಗೆ ಮಾಡದೆ ಹೋದರೆ, ಎಲ್ಲೋ ಒಂದು ಕಡೆ ಮನುಷ್ಯತ್ವವನ್ನೇ ನಾವು ಕಳಕೊಳ್ಳುತ್ತೇವೆ.
ನನ್ನ “ಅಳು’ ಎಂಬ ಸಾನೆಟ್, ಮಾನವೀಯ ಧ್ವನಿಯನ್ನು ಹೊಮ್ಮಿಸುವ ಕವಿತೆ. ಕಣ್ಣೀರು ಎನ್ನುವುದು ಬಹಳ ಭೌತಿಕವಾದಂಥ ಸಂಗತಿ. ಯಾರಿಗೆ, ಏನೇ ನೋವಾದರೂ, ನನ್ನ ಕರುಣಾಪರಿಧಿ ಹಿಗ್ಗುತ್ತದೆ. ಅವುಗಳೇ ಕವಿತೆಯಾಗುತ್ತವೆ. ಮಹಾತ್ಮಗಾಂಧಿ ಹಾಗೆ ದೇಶಕ್ಕೆ ಅತ್ತರು. ಅದಕ್ಕಿಂತ ದೊಡ್ಡದು ಇನ್ನೊಂದಿದೆ, ವಿಶ್ವಕ್ಕಾಗಿ ಅಳ್ಳೋದು. ಬುದ್ಧನಂಥವರು ಹಾಗೆ ವಿಶ್ವಕ್ಕೋಸ್ಕರ, ಜಗತ್ತಿನ ಕಣ್ಣೀರು ತೊಡೆಯಬೇಕೆಂದು ಹೊರಟವರು. ಈ ಅಳುವಿನ ಪರಿಧಿ ಎನ್ನುವಂಥದ್ದು ನಿಧಾನವಾಗಿ, ಹಿಗ್ಗುತ್ತಾ ಹಿಗ್ಗುತ್ತಾ, ದೊಡ್ಡದಾಗುತ್ತಾ ಹೋಗುತ್ತೆ. ನಿಮ್ಮ ಅಳುವಿನ ಪರಿಧಿ ಎಷ್ಟು ದೊಡ್ಡದಾಗುತ್ತೋ, ನೀವು ಅಷ್ಟು ಸಾರ್ಥಕ ಬದುಕಿನ ಕಡೆಗೆ ಹೋಗ್ತಿರಿ. ಇದು ಪ್ರಚಾರಕ್ಕೆ ಮಾಡೋದಲ್ಲ. ಹೋರಾಟದ ಮುನ್ನೆಲೆಯಲ್ಲಿ ನಿಂತು ಹೇಳುವಂಥದ್ದೂ ಅಲ್ಲ.
ಹೋರಾಟಕ್ಕೆ ನಾನು ನೇರವಾಗಿ ಬರಲಿಲ್ಲ, ನಿಜ. ಚಳವಳಿ ಮಾಡೋದು ನನ್ನ ಕೆಲಸ ಆಗಿರಲಿಲ್ಲ. ನನ್ನ ಚಳವಳಿ ನನ್ನ ಕನ್ನಡದ ಕೆಲಸದಲ್ಲಿತ್ತು. ಒಂದೊಂದು ತರಗತಿಯೂ ನನಗೆ ಪ್ರಯೋಗಶಾಲೆಯೇ ಆಗಿತ್ತು. ಅಗ್ನಿದಿವ್ಯ ಅಂತ ತಿಳಿದು ನಮ್ಮ ಮಕ್ಕಳಿಗೆ 30 ವರ್ಷ ನಾನು ಪಾಠ ಮಾಡಿದೆನಲ್ಲ, ಇದಕ್ಕಿಂತ ದೊಡ್ಡ ಚಳವಳಿ ಬೇಕೆ? ಆಚಾರ ಹೇಳ್ಳೋದು, ಬದನೆಕಾಯಿ ತಿನ್ನುವ ಕೆಲಸವನ್ನು ನಾನು ಮಾಡಿದವನೇ ಅಲ್ಲ. ಕನ್ನಡದ ಬಗ್ಗೆ, ಕಾವ್ಯದ ಬಗ್ಗೆ ಮೌಲ್ಯಯುತವಾದ ಬರವಣಿಗೆ ಮಾಡಬೇಕು; ಫಲಾಪೇಕ್ಷೆ ಇಲ್ಲದೆ ಬರವಣಿಗೆ ಮಾಡಬೇಕು. ಇದೇ ನನ್ನ ಬದುಕಿನ ತತ್ವ ಆಗಿತ್ತು.
5. ಇತ್ತೀಚೆಗೆ ಶೃಂಗೇರಿಯಲ್ಲಿ ಜರುಗಿದ ಸಮ್ಮೇಳನದ ವೇಳೆ ನಿಮ್ಮ ಮೌನ ಅಥವಾ ನಿಲುವು ರವಾನಿಸಿದ ಸಂದೇಶವೇನು?
ಮೌನ ಹೇಳುವುದು, “ದುಡುಕಬೇಡ. ಯೋಚನೆ ಮಾಡು’ ಅಂತ. ಯಾವುದೇ ಒಂದು ಗುಂಪಿಗೆ ಪ್ರಿಯವಾದ ಮಾತುಗಳನ್ನು ಆಡುವುದು ಸುಲಭ. ಆದರೆ, ಮನಸ್ಸಿನ ಕ್ಷಮತೆಯನ್ನು, ಸಮಾಧಾನವನ್ನು ಉಳಿಸಿಕೊಳ್ಳುವುದು ಇಂದು ಬಹಳ ಕಷ್ಟ. ಇದು ಎಷ್ಟು ಅಲ್ಲೋಲಕಲ್ಲೋಲ ಪ್ರಪಂಚವೆಂದರೆ, ನಿಮ್ಮನ್ನು ಸದಾ ಡಿಸ್ಟರ್ಬ್ ಮಾಡುತ್ತಲೇ ಇರುತ್ತೆ. ಅಲ್ಲಿ ನೀವು ಏಕಾಂತವನ್ನು, ಧ್ಯಾನವನ್ನು ಉಳಿಸಿಕೊಳ್ಳದೆ ಹೋದರೆ, ಅದು ನಿಮ್ಮ ವ್ಯಕ್ತಿತ್ವಕ್ಕೆ ಆಗುವಂಥ ಲೋಪ. ಇಂದು ಆತ್ಮವಂತರಾಗುವುದು ಬಹಳ ಮುಖ್ಯವಿದೆ. ಪ್ರತಿ ಸಮಸ್ಯೆಗೂ ನಾನು ಪ್ರತಿಕ್ರಿಯಿಸಬೇಕು ಎನ್ನುವಂಥ ಹೊರಗಿನ ಒತ್ತಾಯವಿದೆಯಲ್ಲ, ಇದು ಸರಿ ಅಂತ ನನಗೆ ಯಾವತ್ತೂ ಅನ್ನಿಸಿಲ್ಲ. ಸ್ಪಂದನಾ ಮಾಡುವವರು ಬೇಕಾದಷ್ಟು ಜನ ಇದ್ದಾರೆ. ಇದರಲ್ಲಿ ಪೂರ್ವಪಕ್ಷ, ಪ್ರತಿಪಕ್ಷಗಳೆಲ್ಲ ಇವೆ. ಅದರ ಬಗ್ಗೆ ನನಗೆ ಸರಿಯಾದ ಕಲ್ಪನೆ ಖಂಡಿತಾ ಇಲ್ಲ. “ಇಷ್ಟು ಕಾಲ ಒಟ್ಟಿಗೆ ಇದ್ದು, ಎಷ್ಟು ಬೆರೆತರೂ ಅರಿತೆವೇನು ನಮ್ಮ ಅಂತರಾಳವಾ’ ಎಂಬ ಮಾತಿದೆ. ನಮ್ಮ ವೇದಋಷಿಗಳು ಕೂಡ “ಇದಂಮಿತ್ತಂ’ ಅಂತ ಇದೇ ಕೊನೆಯ ಮಾತು ಎಂದು ಯಾವತ್ತೂ ಹೇಳಲಿಲ್ಲ. ಹೇಳಲೇಬೇಕಾದ ಮಾತನ್ನು ಆತ ಸಾಹಿತ್ಯದಲ್ಲಿ ಹೇಳಬೇಕೇ ಹೊರತು, ಮೈಕ್‌ನಲ್ಲಿ ಅಲ್ಲ.
6. ಯಾವ ಪ್ರೇರಣೆಯಿಂದ ನಿಮಗೆ ಬರೆಯಬೇಕು ಅಂತನ್ನಿಸಿತು? ನಿಮ್ಮ ಕಲ್ಪನಾಪರಿಧಿಗಳನ್ನು ಹಿಗ್ಗಿಸಿದ ವಾತಾವರಣ ಯಾವುದು?
ನಾನು ಬೆಳೆದ ಪರಿಸರದಲ್ಲಿಯೇ ಸಾಹಿತ್ಯದ ವಾತಾವರಣವಿತ್ತು. ಆಗ ಸಾಹಿತ್ಯ, ಕಲೆ ಎನ್ನುವಂಥದ್ದು ಬದುಕಿನ ಹೊರಗಿರಲಿಲ್ಲ. ಬದುಕಿನ ಒಳಗಿತ್ತು. ನಮ್ಮ ಊರಿನಲ್ಲಿ ಯಾವುದೋ ಸಣ್ಣ ಗುಡಿ ಇದ್ದರೆ, ಆ ಗುಡಿಯೊಳಗೆ ಯಾರೋ ಹಾಡುತ್ತಿದ್ದರು. ಪುರಂದರದಾಸರ, ಕನಕದಾಸರ ಕೀರ್ತನೆಗಳನ್ನು ಹಾಡುತ್ತಿದ್ದರು. ಕ್ಲಾಸ್‌ನಲ್ಲಿ ಮೇಷ್ಟ್ರು ಪಾಠ ಮಾಡುವ ಮೊದಲೇ, ಕನಕದಾಸರನ್ನು- ಪುರಂದರ ದಾಸರನ್ನು ನಾನು ಕಂಡಿದ್ದೆ. ನನ್ನ ತಾಯಿ ತೊಟ್ಟಿಲು ತೂಗುವಾಗ ಹಾಡಿದ ದಾಸರ ಪದಗಳು, ತತ್ವಪದಗಳು; ಹಳ್ಳಿಯ ಪ್ರತಿ ಮನೆಗಳಲ್ಲಿ ಕೇಳಿದ ಕುಮಾರವ್ಯಾಸನ ಗಮಕ ವಾಚನಗಳು; ಬೀದಿಯಲ್ಲಿ ಕೇಳಿದ ನಿಜಗುಣ ಶಿವಯೋಗಿಯ ಹಾಡುಗಳು… ಇವ್ಯಾವುದೂ ನಮಗೆ ಪಠ್ಯದಿಂದ ಬಂದಿರಲಿಲ್ಲ. ಅಂದು ಪ್ರತಿಮನೆ ಮುಂದೆ ರಂಗೋಲಿಯನ್ನು ಕಾಣುತ್ತಿದ್ದೆ. ಅದನ್ನು ಬಿಡಿಸುವವರು ಖ್ಯಾತ ಪೇಂಟರ್‌ಗಳು ಆಗಿರಲೇ ಇಲ್ಲ. ಆದರೂ ಪ್ರತಿ ಗೃಹಿಣಿ ಒಂದು ಎಳೆ ರಂಗೋಲಿಯ ಚುಕ್ಕಿಯನ್ನು ತಪ್ಪದೇ ಇಡುತ್ತಿದ್ದಳು. ಅಂದು ನಮ್ಮ ಕವಿಗಳು ನಮ್ಮೊಳಗೇ ಇರುತ್ತಿದ್ದರು. ನಮ್ಮನೆಯಲ್ಲೇ ಇರುತ್ತಿದ್ದರು. ನಮ್ಮ ಬೀದಿಯಲ್ಲಿ ಓಡಾಡ್ತಾ ಇರುತ್ತಿದ್ದರು. ದೇವಸ್ಥಾನಗಳಲ್ಲಿ, ಜಾತ್ರೆಗಳಲ್ಲಿ, ಉತ್ಸವಗಳಲ್ಲಿ, ಕಲೆ- ಕುಣಿತಗಳಲ್ಲಿ ಕಾಣಿಸುತ್ತಿದ್ದರು. ನಮ್ಮ ಈ ತಿಳಿವಳಿಕೆಗಳು, ಘನವಾದ ಅಧ್ಯಾಪಕರಿಂದ ಸಂಸ್ಕಾರಗೊಂಡವು. ಸಾಹಿತ್ಯದಲ್ಲೂ ನನಗೆ ಗುರು ಸಿಕ್ಕರು. ಪಂಪ ನನ್ನ ಗುರು, ಕುಮಾರವ್ಯಾಸ ನನ್ನ ಗುರು. ಅವರು ಯಾವ ಧರ್ಮದವರು ಅಂತ ನಾನು ತಲೆಕೆಡಿಸಿಕೊಳ್ಳಲಿಲ್ಲ. ಲೇಖಕ ಯಾವ ಮೂಲದವನು ಅಂತ ಹುಡುಕಾಟ ಇಲ್ಲದೆಯೇ, ಆತನ ಸಾಹಿತ್ಯವನ್ನು ಓದುವ, ಪ್ರೀತಿಸುವ, ಇದು ಕನ್ನಡ ಸಾಹಿತ್ಯ ಅಂತ ಸ್ವೀಕಾರ ಮಾಡುವ ದಿನಗಳು ಆಗಿದ್ದವು.
7. ಕನ್ನಡದ ಪುಸ್ತಕೋದ್ಯಮ ಕನ್ನಡ ಉಸಿರಿನಲ್ಲಿ ಬದುಕಿ ಬಾಳಲು ಯಾವ ಕ್ರಮ ಅನುಸರಿಸಬೇಕು?
ನನ್ನ ಪ್ರಕಾರ, ಪುಸ್ತಕದ ವ್ಯಾಪಾರವು ಅದೊಂದು ಉದ್ಯಮವೇ ಅಲ್ಲ; ಹಣ ಸಂಪಾದನೆಯ ಮಾರ್ಗ ಖಂಡಿತಾ ಅಲ್ಲ. ಅದನ್ನು ಮೊದಲು ಪ್ರಕಾಶಕರು ಗೊತ್ತು ಮಾಡಿಕೊಳ್ಳಬೇಕು. ಹಣ ಸಂಪಾದನೆಯನ್ನೇ ಮಾಡಬೇಕಾದರೆ, ಒಂದು ಹೋಟೆಲ್ ಇಡಬಹುದು. ಪುಸ್ತಕದ ಅಂಗಡಿಗಿಂತ ಹೋಟೆಲ್‌ನಲ್ಲಿ ಜಾಸ್ತಿ ರಶ್ ಇರುತ್ತೆ. ಗಿರಾಕಿಗಳು ಜಾಸ್ತಿ ಬರುತ್ತಾರೆ. ಊಟ, ತಿಂಡಿ ಮನುಷ್ಯನಿಗೆ ತೀರಾ ಅನಿವಾರ್ಯ ಕೂಡ. ಆದರೆ, ಪುಸ್ತಕವನ್ನು ಓದದೇ ಮನುಷ್ಯ ಬದುಕಿರಬಲ್ಲ. ಮಹತ್ವದ ಕಾವ್ಯ ಓದದೆ, ಆತ ಸಂತೋಷವಾಗಿರಬಲ್ಲ. ಸಾಮಾನ್ಯವಾಗಿ ಪ್ರಕಾಶಕ ಮತ್ತು ಲೇಖಕ ಇಬ್ಬರೂ ಬಡವರು. ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಪ್ರಕಾಶಕರಿಗೆ ಪೇಪರ್ ಅನ್ನು ಕಡಿಮೆ ದರದಲ್ಲಿ ಒದಗಿಸುವುದರಿಂದ, ಪುಸ್ತಕದ ಅಂಗಡಿಗಳಿಗೆ ಟ್ಯಾಕ್ಸ್ ಅನ್ನು ಕಡಿಮೆ ಮಾಡುವುದರಿಂದ, ಕನ್ನಡ ಸಿನಿಮಾಕ್ಕೆ ನೀಡುವಂಥ ಸಬ್ಸಿಡಿಯನ್ನು ಪುಸ್ತಕಕ್ಕೂ ಮೀಸಲಿಡುವುದರಿಂದ, ಲೈಬ್ರರಿಯಿಂದ ಗ್ರಂಥ ಖರೀದಿಯ ವ್ಯವಸ್ಥೆ ಮಾಡುವುದರಿಂದ ಎಷ್ಟೋ ಲೇಖಕರು, ಪ್ರಕಾಶಕರು ಬದುಕಿಕೊಳ್ಳುತ್ತಾರೆ.
8. ರಾಮ, ಕೃಷ್ಣ, ಬುದ್ಧ, ಗಾಂಧಿಯ ತತ್ವ ಧ್ಯಾನ ನಿಮಗೆ ಅತ್ಯಂತ ಖುಷಿಕೊಡುವ ರಚನಾವಸ್ತುಗಳು. ಇವರುಗಳಲ್ಲಿ ಯಾರ ತಾತ್ವಿಕತೆಯನ್ನು ಜಗತ್ತು ತನ್ನ ಆತ್ಮರಕ್ಷಣೆಗಾಗಿ ಇಂದು ಹಂಬಲಿಸುತ್ತಿದೆ?
ರಾಮ, ಕೃಷ್ಣ, ಬುದ್ಧ ಅನ್ನೋರು ನನ್ನ ಕಣ್ಣಮುಂದೆ ವ್ಯಕ್ತಿಗಳಾಗಿ ನಿಲ್ಲೋದಿಲ್ಲ. ಇವರೆಲ್ಲ ಅದ್ಭುತವಾದ ಮನುಷ್ಯತ್ವದ ಭಾಷೆ (ಇಂಗ್ಲಿಷ್- ಕನ್ನಡ ಇದ್ದಹಾಗೆ) ಇದೆಯಲ್ಲ, ಆ ಭಾಷೆಯ ಸೃಷ್ಟಿಗಳು. ಕೋದಂಡರಾಮ, ರಾವಣನನ್ನು ಕೊಂದವನಲ್ವಾ? ನನಗೆ ಅವನಿಗಿಂತ ಮುಖ್ಯ ಸೀತಾರಾಮ. ಶ್ರೀಸಂಸಾರಿ. ತನ್ನ ಸಂಸಾರದಲ್ಲಿ ತನ್ನ ಕುಟುಂಬವನ್ನು ಮಾತ್ರವಲ್ಲ, ತನ್ನ ಹೆಂಡತಿ- ಮಕ್ಕಳು, ಅಣ್ಣ- ತಮ್ಮಂದಿರನ್ನು ಮಾತ್ರವಲ್ಲ, ಸುಗ್ರೀವ- ಜಾಂಬವ, ವಿಭೀಷಣ ಹಾಗೆ ಬೇರೆ ಬೇರೆ ದೇಶದ, ಬೇರೆ ಬೇರೆ ವರ್ಗದ ಜನಗಳನ್ನೂ ಅವನು ಒಳಗೊಳ್ಳುತ್ತಾನೆ. ಎಲ್ಲರನ್ನೂ ಒಳಗೊಳ್ಳುವ ತತ್ವವಾಗಿ ರಾಮ ನನಗೆ ಗ್ರೇಟ್ ಆಗುತ್ತಾನೆ. ಕತ್ತಿ- ಖಡ್ಗ ಇರುವ ದೇವರಿಗಿಂತ ಸೌಟಿನಲ್ಲಿ ಅನ್ನ- ಸಾರು ಇರುವಂಥ ಅನ್ನಪೂರ್ಣೇಶ್ವರಿ ನನಗೆ ಮುಖ್ಯ. ಕರುಣಾಮೂರ್ತಿ ಕ್ರಿಸ್ತ ಮುಖ್ಯ. ಮಗುವಿನ ಹಾಗೆ ನಗ್ನವಾಗಿ ನಿಂತ ಗೊಮ್ಮಟೇಶ್ವರ ಮುಖ್ಯ. ನೇಗಿಲು ಹಿಡಿದುಕೊಂಡ ಒಬ್ಬ ರೈತ ಮುಖ್ಯ. ಚಕ್ರ ಹಿಡಿದಿರ್ತಾನಲ್ಲ, ಅದು ಸುದರ್ಶನ ಅಲ್ಲ ನನಗೆ. ಚರಕ ಅದು. ನನ್ನ ಒಂದು ಕವಿತೆಯಲ್ಲಿ ಅದನ್ನೇ ಹೇಳಿದ್ದೇನೆ. ಕೃಷ್ಣ ಅವತ್ತು ಚಕ್ರ ಹಿಡಿದಿದ್ದಾನೆ, ಇವತ್ತು ಚರಕ ಹಿಡಿದಿದ್ದಾನೆ. ಆ ಕೃಷ್ಣನೇ ಇವತ್ತು ಗಾಂಧಿಯ ರೂಪದಲ್ಲಿ ಮತ್ತೆ ಕಾಣುತ್ತಾನೆ. ಹೊಸ ಮೆಟಫರ್ ಆಗಿ ತೋರುತ್ತಾನೆ. ಹಳೇ ಪ್ರತಿಮೆಗಳಲ್ಲಿ, ಹೊಸ ವಿಸ್ತರಣೆ- ಅಗತ್ಯಗಳನ್ನು ಕಂಡುಕೊಳ್ಳುವ ಪ್ರಕ್ರಿಯೆ ಇದು. ರಾವಣನನ್ನು ಕೊಂದ ಅಂತ ರಾಮ ಹೀರೋ ಅಲ್ಲ. ಶಬರಿಗೆ ಪ್ರೀತಿ ತೋರಿಸುತ್ತಾನಲ್ಲ, ಅಹಲ್ಯೆಯನ್ನು ಉದ್ಧಾರ ಮಾಡುತ್ತಾನಲ್ಲ, ಹೆಣ್ಣಿನ ಬಗ್ಗೆ ಕರುಣೆ- ಆಕೆಯ ತಾಯ್ತನದ ಬಗ್ಗೆ ಗೌರವ ತೋರುತ್ತಾನಲ್ಲ, ಅದು ಗ್ರೇಟ್. ರಾಮ, ಕೃಷ್ಣ, ಬುದ್ಧ, ಗಾಂಧಿ- ಇವು ಭಾರತದ ಅದ್ಭುತವಾದ ಮಾನವೀಯ ಭಾಷೆಗಳು.
ರಾಮಾಯಣದಲ್ಲಿ ಒಂದು ಪ್ರಸಂಗವಿದೆ. ಲಂಕೆಯಿಂದ ಎಲ್ಲರೂ ವಾಪಸು ಬಂದಮೇಲೆ, ಭರತನಿಗೆ ಗೊತ್ತಾಗಿರುತ್ತೆ, ಸುಗ್ರೀವ- ವಿಭೀಷಣರು ರಾಮನಿಗೆ ಹೇಗೆಲ್ಲ ನೆರವಾದರು ಎಂಬುದು ಗೊತ್ತಾಗುತ್ತೆ. ಆ ಸುಗ್ರೀವ ಬಂದು ಭರತನನ್ನು ಅಪ್ಪಿಕೊಂಡಾಗ, ರಾಮ ಹೇಳ್ತಾನೆ, “ಇವನು ಸುಗ್ರೀವ ಅಂತ ನನ್ನ ಜೀವಸಖ’. ಆಗ ಭರತ ಹೇಳ್ತಾನೆ, “ಇಲ್ಲಿಯವರೆಗೂ ನಾವು ನಾಲ್ವರು ಅಣ್ಣತಮ್ಮಂದಿರಿದ್ದೆವು. ಈಗ 5 ಜನ ಆದೆವು’. ಎಂಥ ಅದ್ಭುತವಾದ ಮಾತು. ಸುಗ್ರೀವ ವಾನರ ಕುಲದವನು. ದಸುÂ. ದ್ರಾವಿಡ ಅವನು. ಆದರೆ, ರಾಮ ಅವನನ್ನು ತಮ್ಮನಂತೆ ಕಂಡ. ಭರತ ಅವನನ್ನು ಅಣ್ಣ ಅಂತ ಹೇಳುತ್ತಿದ್ದಾನೆ. ತನ್ನ ವರ್ಗಕ್ಕೆ, ತನ್ನ ಧರ್ಮಕ್ಕೆ, ಸ್ಥಳ- ಕಾಲಗಳಿಗೆ ಮೀರಿದಂಥ ವ್ಯಕ್ತಿತ್ವವನ್ನು ತೋರಿಸುತ್ತಾನೆ. ಗಾಂಧಿ, ರಮಣ ಮಹರ್ಷಿ, ಪರಮಹಂಸ ಇದನ್ನೇ ಮಾಡಿದ್ದಲ್ಲವೇ?
9. ಹಿಂದೆ ಕೆಲವು ಅಧ್ಯಕ್ಷರು ವರ್ಷಪೂರ್ತಿ ನಾಡಿನಾದ್ಯಂತ ಸಂಚರಿಸಿ, ಉಪನ್ಯಾಸ ಇತ್ಯಾದಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅನಕೃ, ಬಿಎಂಶ್ರೀ, ಹಾ.ಮಾ. ನಾಯಕ್, ನರಸಿಂಹಸ್ವಾಮಿ- ಇಂಥವರೆಲ್ಲ ಆ ಕೆಲಸ ಮಾಡಿದಂಥವರು. ಇತ್ತೀಚೆಗೆ ಆ ಪ್ರಯತ್ನಗಳು ಅಪರೂಪವೇ ಆಗಿದೆಯಲ್ಲ?
ಬಹುಶಃ ನನ್ನಷ್ಟು ಸಂಚಾರ ಮಾಡಿದವರು, ನನ್ನ ಪೀಳಿಗೆಯಲ್ಲಿ ಬಹಳ ಜನ ಇಲ್ಲ. ಕರ್ನಾಟಕದ ಮೂಲೆ ಮೂಲೆಯ ಹಳ್ಳಿಗಳಿಗೂ ಹೋಗಿದ್ದೇನೆ. ಚಳ್ಳಕೆರೆಯ ಬಳಿ, 500 ಮನೆಗಳ ಒಂದು ಗ್ರಾಮ. ನಾನು, ಶಿವರುದ್ರಪ್ಪನವರು ಅಲ್ಲಿಗೆ ಹೋಗಿ ಭಾಷಣ ಮಾಡಿದ್ದೆವು. ಮುಂದೆಯೂ ನಾನು ಸಂಚಾರ ಕೈಬಿಡೋದಿಲ್ಲ. ಕೇವಲ ಒಂದು ವರುಷ ಮಾತ್ರವಲ್ಲ, ಈ ಜೀವ ಗಟ್ಟಿ ಇರುವ ತನಕ ಕನ್ನಡಕ್ಕಾಗಿ ಸಂಚರಿಸುತ್ತೇನೆ. ನನಗೆ ಮನೆಯಲ್ಲಿದ್ದಾಗ ಕೆಲವು ಸಲ ಪಾಠ ಮಾಡುವ ಹುಕಿ ಬರುತ್ತೆ. ಪಂಪ ಹೀಗೆ ಹೇಳಿದ್ದಾನೆ ಅಂತ ಶುರುಮಾಡಿಬಿಟ್ಟರೆ, “ಓಹ್… ಇದು ಕ್ಲಾಸಲ್ಲ. ಮನೆ’ ಅಂತಾಳೆ ಸೊಸೆ. ನನಗೆ ಪಾಠ ಮಾಡುವುದು, ಅನಿವಾರ್ಯ.
10. “ಮಾತೃಭಾಷೆ ದೂರ ಆಗುತ್ತಿರುವ ಹೊತ್ತಿನಲ್ಲಿ ಕನ್ನಡಿಗರಿಗೆ, ಕನ್ನಡದ ಕಂದಮ್ಮಗಳನ್ನು ಹೆತ್ತ ಪೋಷಕರಿಗೆ ನೀವು ಹೇಳುವುದೇನು?
ಕನ್ನಡ ವರ್ಣಮಾಲೆಯ 50 ಅಕ್ಷರಗಳು, ಬೀಜಾಕ್ಷರಗಳಿದ್ದಂತೆ. ಇದನ್ನು ಕಲಿತಾದ ಮೇಲೆ, ಮಕ್ಕಳು ಯಾವ ಭಾಷೆಯನ್ನಾದರೂ ಕಲಿಯಲಿ. ನಾವು ಮಕ್ಕಳೊಂದಿಗೆ ಕನ್ನಡ ಮಾತಾಡುವ ಸಂಕಲ್ಪ ಮಾಡಬೇಕು. ಕನ್ನಡದಲ್ಲಿಯೇ ಮುದ್ದಿಸಬೇಕು. ಕನ್ನಡದಲ್ಲಿ ಪ್ರೀತಿಸಬೇಕು. ಮನೆಯ ಎಲ್ಲ ಭಾಗದಲ್ಲೂ ಕನ್ನಡ ಚಲಾವಣೆಯಲ್ಲಿರಬೇಕು. ಊಟದ ಕೋಣೆಯಲ್ಲಿ ಕುಳಿತಾಗ, ರೈಸ್ ಬಡಿಸಿ ಸ್ವಲ್ಪ ಅಂತೀರಲ್ಲ, “ಅನ್ನ ಬಡಿಸಿ ಸ್ವಲ್ಪ’ ಅಂದರೂ ಸಾಕು. ಕನ್ನಡವನ್ನು ಮನೆಯ ಒಳಗೆ ಮತ್ತು ಹೊರಗೆ, ಮನಸ್ಸಿನ ಒಳಗೆ ಮತ್ತು ಹೊರಗೆ, ಚಲಾವಣೆಗೆ ತರಬೇಕು. ಕ್ಲಾಸ್‌ನಲ್ಲಿ ತಕ್ಷಣ ಇಂಗ್ಲಿಷ್ ಮೀಡಿಯಂ ಬದಲಿಸಲು ಆಗದೇ ಇದ್ದರೆ, ಮನೆಯಲ್ಲಿ ಕನ್ನಡ ಬರಲಿ, ಮೈದಾನದಲ್ಲಿ ಕನ್ನಡ ಬರಲಿ. ಇಂದಿನ ಮಕ್ಕಳಲ್ಲಿ ಬಹಿರಂಗದ ಅಲಂಕಾರ ಜಾಸ್ತಿ; ಅಂತರಂಗದ ಸಂಸ್ಕಾರ ಕಡಿಮೆ. ಮಕ್ಕಳನ್ನು ಮಕ್ಕಳ ಹಾಗೆ ಬೆಳೆಯಲು ಪೋಷಕರು ಬಿಡುತ್ತಿಲ್ಲ. ನಾಡಿನ ಮಕ್ಕಳೆಲ್ಲ ಬಡವ- ಶ್ರೀಮಂತ ಎಂಬ ಅಂತರವಿಲ್ಲದೆ, ಓದುವಂತಾಗಲು ಸರ್ಕಾರ ಶ್ರಮವಹಿಸಬೇಕು.
ನನಗೂ ಮೊದಲೇ, ನನ್ನ ಕವಿತೆ ಅಮೆರಿಕ ಹೋಗಿತ್ತು!
ಕವಿ ಬರೆದಾದ ಮೇಲೆ ಅದು ಓದುಗರ ಕವಿತೆ ಆಗುತ್ತೆ. ಕೆ.ಎಸ್. ನರಸಿಂಹ ಸ್ವಾಮಿ ಮುಂದೆ ಭಿಕ್ಷುಕನೊಬ್ಬ, ಅವರ ಕವಿತೆಯನ್ನೇ ಹಾಡಿ ದುಡ್ಡು ತಗೊಳ್ತಾನೆ. ಆಗ ಕೆಎಸ್‌ನ ಅವರಿಗೆ ಆದ ಖುಷಿ ಅಷ್ಟಿಷ್ಟಲ್ಲ. “ನನ್ನ ಪದ್ಯ ಯಾರೋ ಒಬ್ಬ ಬಡವನಿಗೆ ಹೊಟ್ಟೆಪಾಡಿಗೆ ದಾರಿ ಆಯ್ತಲ್ಲ, ಅಷ್ಟು ಸಾಕು’ ಎಂದಿದ್ದರು. ಕಾವ್ಯವು ಕವಿಯ ಮನೆಯಿಂದ ಹೊರಟು, ಬೀದಿಬೀದಿಯಲ್ಲಿ ಪಯಣಿಸುತ್ತಾ, ಕಾಡಿಗೆ ಹೋಗುತ್ತೆ; ಸಮುದ್ರದಾಚೆಯ ದ್ವೀಪಕ್ಕೆ ಹೋಗುತ್ತೆ. ನಾನು ಹೋಗುವುದಕ್ಕೂ ಮೊದಲೇ ನನ್ನ ಕವಿತೆಗಳು ಪ್ರಪಂಚದ ಹಲವೆಡೆ ಹೋಗಿವೆ. ನಾನು ಇನ್ನೂ ಅಮೆರಿಕಕ್ಕೆ ಹೋಗಿರಲಿಲ್ಲ, ಅಲ್ಲಾಗಲೇ ಯಾರೋ ಕೇಳಿದ್ದರು, “ಓಹ್… ಅಮ್ಮಾ ನಾನು ದೇವರಾಣೆ… ಅದನ್ನು ನೀವೇ ಅಲ್ವಾ ಬರೆದಿದ್ದು?’ ಅಂತ. ಕವಿತೆಗೆ ವೀಸಾದ ಗೊಂದಲ ಇರುವುದಿಲ್ಲ.
ಕನ್ನಡವೆಂದರೆ, ಜಗತ್ತಿಗೆ ಹಿಡಿದ ಕನ್ನಡಿ ಅಂತ. ಬರೀ ನಮ್ಮನ್ನು ನಾವೇ ನೋಡಿಕೊಳ್ಳೋದು ಅಲ್ಲ ಅದು. ವಿಶ್ವವನ್ನು ನಾವು ಕನ್ನಡಿಸುವ ಬಗೆ. “ವಿಷಯ- ವಿಲೀನ- ವಿಶೇಷ’ ಅಂತ ಹೇಳುತ್ತಾರೆ ನೋಡಿ, “ಕವಿರಾಜಮಾರ್ಗ’ದಲ್ಲಿ. ಅಂದರೆ, ಪ್ರಪಂಚವನ್ನು ಹಳ್ಳಿಗೆ ಆವಾಹಿಸುವುದು. ಹಳ್ಳಿಯನ್ನು ದೊಡ್ಡ ನಗರ ಮಾಡೋದಲ್ಲ. ಇಡೀ ಜಗತ್ತು ಹಳ್ಳಿಗೆ ಬಂದುಬಿಡಬೇಕು. ವಿಶ್ವವಿಲೀನ. ಕೃಷ್ಣ ಬಾಯಿ ತೆರೆದು, ಬ್ರಹ್ಮಾಂಡ ತೋರಿಸುತ್ತಾನಲ್ಲ… ಅದೇ ಇದು.
ಚಿತ್ರನಟರಿಗೆ ಇಮಿಡಿಯೇಟ್ ರೆಸ್ಪಾನ್ಸ್ ಅಂತ ಇರುತ್ತೆ. ನಟ ನಟಿಸುತ್ತಿರುವಾಗಲೇ ಪ್ರೇಕ್ಷಕರು ಶಿಳ್ಳೆ ಹೊಡೀತಾರೆ. ಒನ್ಸ್ ಮೋರ್ ಹೇಳುತ್ತಾರೆ. ಸಾಹಿತಿಗಳಿಗೆ ಅಂಥ ಅವಕಾಶವಿಲ್ಲ. ನಾವು ಬರೆಯುವುದು, ಏಕಾಂಗಿಯಾಗಿ. ಯಾರೋ ಎಲ್ಲೋ ಮತ್ತೂಬ್ಬ ಏಕಾಂಗಿ ಓದುತ್ತಾನೆ. ಒಬ್ಬ ವ್ಯಕ್ತಿ, ಮತ್ತೆಲ್ಲೋ ದೂರದಲ್ಲಿ ಕುಳಿತ ವ್ಯಕ್ತಿಯೊಂದಿಗೆ ನಡೆಸುವಂಥ ಸಂವಾದವೇ ಸಾಹಿತ್ಯ.
ಸಂದರ್ಶನ: ಕೀರ್ತಿ ಕೋಲ್ಗಾರ್
ಚಿತ್ರಗಳು: ಫಕ್ರುದ್ದೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.