ಸಾಲ ಮನ್ನಾ ಪರಿಹಾರವೇ?
Team Udayavani, Mar 31, 2017, 2:01 PM IST
ನಮ್ಮ ರಾಜಕೀಯ ನೇತೃತ್ವ ಜನಸಾಮಾನ್ಯರ ಜೇಬಿನಿಂದ ಬಂದ ತೆರಿಗೆ ಹಣದಲ್ಲಿ ಸಾಲ ಮನ್ನಾದಂತಹ ಅಗ್ಗದ, ಸುಲಭದ, ಜನಮರುಳು ಯೋಜನೆಗಳ ಬದಲು ರೈತರನ್ನು ಸ್ವಾಭಿಮಾನಿ ಮತ್ತು ಸ್ವಾವಲಂಬಿಗಳನ್ನಾಗಿ ರೂಪಿಸುವಂತಹ ಸಕಾರಾತ್ಮಕ ದಿಕ್ಕಿನಲ್ಲಿ ಚಿಂತಿಸಬೇಕಾಗಿದೆ.
ರೈತರ ಸಾಲ ಮನ್ನಾ ಮಾಡುವುದು ಮುಂದಿನ ದಿನಗಳಲ್ಲಿ ಸಾಲ ಮರುಪಾವತಿಯ ಶಿಸ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ದೇಶದ ಅತಿ ದೊಡ್ಡ ಸರಕಾರಿ ಸ್ವಾಮ್ಯದ ಬ್ಯಾಂಕ್ ಎನಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಮಹಾರಾಷ್ಟ್ರ ವಿಧಾನಸಭಾ ಸದಸ್ಯರೋರ್ವರು ಅವರಿಗೆ ಹಕ್ಕುಚ್ಯುತಿ ನೊಟೀಸ್ ನೀಡಿದ್ದಾರೆ. ಎಸ್‌ಬಿಐ ಅಧ್ಯಕ್ಷೆ ದೇಶದ ರೈತರು ಮತ್ತು ಸದನಕ್ಕೆ ಅಪಮಾನ ಮಾಡಿದ್ದಾರೆ ಎಂದು ದೂರಿದ್ದಾರೆ. ಆದೇಶಗಳನ್ನು ಪಾಲಿಸಬೇಕಾದ ಅಧಿಕಾರಿಯೋರ್ವರು ಸರಕಾರದ ನೀತಿಯ ವಿರುದ್ಧ ಅನವಶ್ಯಕವಾಗಿ ಮೂಗು ತೂರಿಸುತ್ತಿದ್ದಾರೆ, ಇದು ಸದನದ ವಿಶೇಷಾಧಿಕಾರದ ಉಲ್ಲಂಘನೆ ಎನ್ನುವುದು ಮಾನ್ಯ ಸದಸ್ಯ ಮಹೋದಯರ ಆರೋಪ. ಕಂಡದ್ದು ಕಂಡ ಹಾಂಗೆ ಹೇಳಿದರೆ ಕೆಂಡದಂಥ ಕೋಪವಂತೆ! ಹಾಗೆ ನೋಡಿದರೆ ಎಸ್‌ಬಿಐ ಅಧ್ಯಕ್ಷೆಯ ಹೇಳಿಕೆಯಲ್ಲಿ ರಿಸರ್ವ್ ಬ್ಯಾಂಕಿನ ನೀತಿಯೇ ಧ್ವನಿತವಾಗಿದೆ ಹೊರತು ಅದನ್ನು ಮೀರಿ ಏನೂ ಇಲ್ಲ.
ಸಂಪನ್ಮೂಲವಿಲ್ಲದ ರಾಜ್ಯಗಳು: ರಾಜಕೀಯ ವಲಯದಲ್ಲಿ ಬಹುಚರ್ಚಿತ ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ರಾಜ್ಯ ಸರಕಾರಗಳಿಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಇದೀಗ ಕೇಂದ್ರ ವಿತ್ತ ಮಂತ್ರಿ ಅರುಣ್ ಜೇಟ್ಲಿ ಹೇಳಿದ್ದಾರೆ. ರಾಜ್ಯ ಸರಕಾರಗಳು ಇದಕ್ಕಾಗಿ ತಮ್ಮದೇ ಆದ ಸಂಪನ್ಮೂಲಗಳನ್ನು ಕಂಡುಕೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರಕಾರ ಯಾವುದೇ ಒಂದು ರಾಜ್ಯದ ಸಾಲ ಮನ್ನಾ ಯೋಜನೆಯ ಹಣಕಾಸಿನ ವೆಚ್ಚವನ್ನು ಭರಿಸಲು ಮುಂದಾದರೆ ಉಳಿದ ರಾಜ್ಯಗಳು ಇದೇ ತರಹದ ಬೇಡಿಕೆಗಳನ್ನು ಮುಂದಿಡುವ ಸಾಧ್ಯತೆ ಇದೆ. ಈ ವಿಷಯದಲ್ಲಿ ಕೇಂದ್ರದತ್ತ ದೃಷ್ಟಿ ನೆಟ್ಟಿದ್ದ ಪಂಜಾಬ್, ಉತ್ತರಪ್ರದೇಶ, ಕರ್ನಾಟಕ, ಮಹಾರಾಷ್ಟ್ರದಂತಹ ರಾಜ್ಯಗಳಿಗೆ ಘೋರ ನಿರಾಶೆಯಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ನೌಕರರ ಸಂಬಳ ಸಾರಿಗೆ ಖರ್ಚು ವೆಚ್ಚದಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಸಾಲುವುದಿಲ್ಲ ಎಂದು ದೂರುತ್ತಿರುವ ರಾಜ್ಯಗಳು ರೈತರ ಸಾಲ ಮನ್ನಾ ಮಾಡಲು ತಮ್ಮದೇ ಆದ ಸಂಪನ್ಮೂಲ ಕ್ರೋಢೀಕರಿಸಿಕೊಳ್ಳುವುದು ಅಷ್ಟೇನು ಸುಲಭ ಸಾಧ್ಯವಲ್ಲ. ರಾಜಕೀಯ ಪಕ್ಷಗಳು ಚುನಾವಣೆಯ ಸಮಯದಲ್ಲಿ ರೈತರ ಹಿತೈಷಿಗಳೆಂದು ತೋರಿಸಿಕೊಳ್ಳಲು ಸಾಲ ಮನ್ನಾದಂತಹ ಜನಪ್ರಿಯತೆ ಗಿಟ್ಟಿಸುವ ಆಶ್ವಾಸನೆಗಳನ್ನು ಹಿಂದೆ ಮುಂದೆ ನೋಡದೇ ನೀಡಿಬಿಡುತ್ತವೆ. ಆರ್ಥಿಕ ಹೊರೆಯನ್ನು ಹೇಗೆ ಭರಿಸುವುದು, ಇದರ ದೂರಗಾಮಿ ಪರಿಣಾಮಗಳೇನು ಎನ್ನುವ ಸಾಧಕ ಬಾಧಕಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ದೇಶದ ದೊಡ್ಡ ರಾಜ್ಯಗಳಲ್ಲೊಂದಾಗಿರುವ, ಸುಮಾರು 22 ಕೋಟಿಯ ಜನಸಂಖ್ಯೆಯುಳ್ಳ ಉತ್ತರಪ್ರದೇಶದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಈಗಷ್ಟೇ ನಡೆದ ಚುನಾವಣೆಯ ಸಮಯದಲ್ಲಿ ರೈತರ ಸಾಲ ಮನ್ನಾ ಮಾಡಲಾಗುವ ಕುರಿತು ಹೆಚ್ಚು ಕಡಿಮೆ ಎಲ್ಲ ಪಕ್ಷಗಳೂ ಆಶ್ವಾಸನೆ ನೀಡಿದವು. ರಾಜ್ಯದ 2016-17ರ ಪರಿಷ್ಕೃತ ಅಂದಾಜು ಆದಾಯವೇ 3,40,255 ಕೋಟಿ ರೂಪಾಯಿಗಳು. ರೈತರಿಗೆ ನೀಡಿದ ಒಟ್ಟು ಸಾಲದ 86,241 ಕೋಟಿಗಳ ಪೈಕಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ನೀಡಿದ ಮೊತ್ತವನ್ನು ಮನ್ನಾ ಮಾಡಹೊರಟರೂ 27,419 ಕೋಟಿ ರೂ.ಗಳು ಬೇಕಾಗುತ್ತವೆ. ಅರ್ಥಾತ್ ರಾಜ್ಯದ ಒಟ್ಟು ಆದಾಯದ ಶೇ.8ನ್ನು ತೆಗೆದಿರಿಸಬೇಕಾಗುತ್ತದೆ! ಕೇಂದ್ರದ ಬೆಂಬಲವಿಲ್ಲದೆ ರಾಜ್ಯ ಸರಕಾರಕ್ಕೆ ಇದು ಸಾಧ್ಯವೇ?
ತೋರಿಕೆಯ ರೈತಪರ ಕಾಳಜಿ: ಕಳೆದೆರಡು ವರ್ಷಗಳಿಂದ ಮಾನ್ಸೂನ್ ಅಭಾವದಿಂದ ರೈತರು ಕಂಗೆಟ್ಟಿದ್ದಾರೆ. ಸರಕಾರದ ಅಂಕಿ ಅಂಶಗಳ ಪ್ರಕಾರ 2014ರಲ್ಲಿ 5,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2015ರಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಈ ವರ್ಷ ಕರ್ನಾಟಕದಲ್ಲಿ ರಾಜ್ಯ ಸರಕಾರ 110ಕ್ಕೂ ಹೆಚ್ಚಿನ ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಿದೆ. ರೈತರು ತಮ್ಮ ಬೆಳೆ ಸಾಲ ಮನ್ನಾ ಮಾಡುವಂತೆ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರದರ್ಶನ ನಡೆಸಿದ್ದಾರೆ. ರೈತರಿಗೆ ಮೂಲ ಸೌಕರ್ಯಗಳನ್ನು ಒದಗಿಸುವತ್ತ ಗಮನ ಕೊಡಬೇಕೇ ಅಥವಾ ಇರುವ ಸಂಪನ್ಮೂಲವನ್ನು ಸಾಲ ಮನ್ನಾ ಮಾಡಲು ಉಪಯೋಗಿಸಬೇಕೇ? ಸಾಲ ಮನ್ನಾ ಸೌಲಭ್ಯ ಪಡೆದು ಮತ್ತೂಮ್ಮೆ ಚುನಾವಣೆಗಳಿಗಾಗಿ ಕಾಯುತ್ತಾ ಕುಳಿತುಕೊಳ್ಳುವ ವಿಷಚಕ್ರಕ್ಕೆ ಅಡಿಗಲ್ಲು ಹಾಕಬೇಕೇ? ದೇಶದ ಆರ್ಥಿಕತೆಯ ಬೆನ್ನೆಲುಬಾದ ಬ್ಯಾಂಕಿಂಗ್ ರಂಗ ದಿನೇ ದಿನೆ ಹೆಚ್ಚುತ್ತಿರುವ ವಸೂಲಾಗದ ಸಾಲ ಭಾರದಿಂದ ಸೊರಗುತ್ತಿದೆ. ಆರ್ಥಿಕ ಅಭಿವೃದ್ಧಿಗೆ ಇನ್ನಷ್ಟು ಬಲ ನೀಡಲು ಸರಕಾರಗಳು ಕಾಲಕಾಲಕ್ಕೆ ನೀಡುವ ಸೂಚನೆಗಳಿಗೆ ತಲೆಬಾಗಿ ಔದ್ಯೋಗಿಕ ಮತ್ತು ಮೂಲ ಸೌಕರ್ಯ ಕ್ಷೇತ್ರಕ್ಕೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಉದಾರವಾಗಿ ಸಾಲ ನೀಡಬೇಕಾಗುತ್ತದೆ. ಎಲ್ಲವೂ ಚೆನ್ನಾಗಿದ್ದರೆ ಸರಿ. ಯಾವುದೋ ಕಾರಣಕ್ಕಾಗಿ ಹೆದ್ದಾರಿಗಳು, ಏರ್‌ಪೋರ್ಟ್‌ಗಳು, ಉದ್ದಿಮೆಗಳು ನಿರೀಕ್ಷಿಸಿದಷ್ಟು ಯಶಸ್ಸು ಕಾಣದಿದ್ದರೆ ಬ್ಯಾಂಕುಗಳು ಅವುಗಳಿಗೆ ನೀಡಿದ ಸಾಲ ಅನುತ್ಪಾದಕವಾಗಿ ಬಿಡುತ್ತದೆ. ಇವೆಲ್ಲವುಗಳನ್ನು ಅರ್ಥಮಾಡಿಕೊಳ್ಳದ ಜನ ಉದ್ದಿಮೆಗಳಿಗೆ ಬೇಕಾಬಿಟ್ಟಿ ಹಣ ನೀಡುವ ಖಳನಾಯಕರಂತೆ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನೋಡುತ್ತಿದ್ದಾರೆ. ಜನರ ಈ ಭಾವನೆಯನ್ನು ನಗದೀಕರಿಸಲು ಪಕ್ಷಗಳು ರೈತರಿಗೆ ನೀಡಿದ ಸಾಲ ಮನ್ನಾ ಘೋಷಿಸುತ್ತವೆ.
ವಿಫಲ ಸಾಲ ಮನ್ನಾ ಯೋಜನೆಗಳು: ಸಾಲ ಮನ್ನಾ ರಿವಾಜಿಗೆ ದೊಡ್ಡ ಇತಿಹಾಸವೇ ಇದೆ. 1989ರಲ್ಲಿ ಕೇಂದ್ರದಲ್ಲಿ ವಿಶ್ವನಾಥ ಪ್ರತಾಪ್ ಸಿಂಗ್ ಅವರ ಸರಕಾರ ಪ್ರಥಮ ಬಾರಿಗೆ ಸುಮಾರು ಆರು ಸಾವಿರ ಕೋಟಿ ರೂ. ವೆಚ್ಚದಲ್ಲಿ ಹತ್ತು ಸಾವಿರ ರೂ. ವರೆಗಿನ ನಾಲ್ಕು ಕೋಟಿ ರೈತರ ಸಾಲ ಮನ್ನಾ ಮಾಡಿ ಸಾಲ ಮನ್ನಾ ಪರಂಪರೆಗೆ ನಾಂದಿ ಹಾಡಿತು. 2012ರಲ್ಲಿ ಉ. ಪ್ರದೇಶದಲ್ಲಿ ಸಮಾಜವಾದಿ ಸರಕಾರ ಸಹಕಾರಿ ಸಂಸ್ಥೆಗಳಿಂದ ರೈತರು ಪಡೆದ 50,000ರೂ.ವರೆಗಿನ ಸಾಲ ಮನ್ನಾ ಮಾಡಿತು. 2008ರಲ್ಲಿ ಯುಪಿಎ ಸರಕಾರ ಸಣ್ಣ ಮತ್ತು ಮಧ್ಯಮ ವರ್ಗದ ಸಾಲ ಮನ್ನಾ ಮಾಡಿತು. ಆನಂತರ ಇದನ್ನು ದೊಡ್ಡ ರೈತರಿಗೂ ವಿಸ್ತರಿಸಿದ್ದರಿಂದ ಈ ಮೊತ್ತ 71,600 ಕೋಟಿ ರೂ.ಗಳಿಗೆ ಹೆಚ್ಚಿತು. ಸಂಸತ್ತಿನಲ್ಲಿ ಮಂಡಿಸಿದ ಸಿ.ಎ.ಜಿ. ವರದಿಯಲ್ಲಿ ಈ ಸಾಲ ಮನ್ನಾ ಯೋಜನೆಯಲ್ಲಿ ನಡೆದ ದುರುಪಯೋಗ ಬೆಳಕಿಗೆ ಬಂದಿತು. ಕೆಲವೆಡೆ ರೈತರು ಕೃಷಿಯೇತರ ಕಾರಣಗಳಿಗಾಗಿ ಪಡೆದ ವೈಯಕ್ತಿಕ ಸಾಲಗಳನ್ನೂ ಕೂಡ ಕೃಷಿ ಸಾಲದ ರೂಪದಲ್ಲಿ ಮನ್ನಾ ಮಾಡಲಾಗಿತ್ತು.
ಸರಕಾರಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಾಲ ಮನ್ನಾ ಮಾಡಲು ಹಣ ನೀಡುತ್ತವೆ ನಿಜ. ಆದರೆ, ಅನ್ನದಾತರ ಋಣಭಾರವನ್ನು ಹಗುರವಾಗಿಸುವುದರೊಂದಿಗೆ ಅವರ ಸಮಸ್ಯೆಗಳು ಮುಗಿದು ಹೋಗುತ್ತವೆಯೇ? ಖಂಡಿತ ಇಲ್ಲ. ಸಾಲ ಮನ್ನಾದ ಲಾಭಾನ್ವಿತರಿಗೆ ಬ್ಯಾಂಕುಗಳು ಮುಂದಿನ ಬೆಳೆಗಾಗಿ ಹೊಸ ಸಾಲ ನೀಡಲು ಹಿಂಜರಿಯುತ್ತವೆ. ಹೊಸ ಸಾಲ ಪಡೆಯಲಾಗದವರು ಹತಾಶರಾಗುತ್ತಾರೆ ಇಲ್ಲವೇ ಬಡ್ಡಿ ವ್ಯವಹಾರ ಮಾಡುವವರನ್ನು ಹುಡುಕುತ್ತಾರೆ. ಇನ್ನೊಂದೆಡೆ ಸಾಲ ಮನ್ನಾ ಯೋಜನೆಗಳು ಸಾಲ ಮರುಪಾವತಿಗೆ ಶಕ್ತರಾದ ರೈತರಿಗೆ ಕೂಡ ಸಾಲ ಮರುಪಾವತಿಯ ಕಂತು ಕಟ್ಟದಂತೆ ಪ್ರಚೋದಿಸುತ್ತವೆ. ಇಂತಹ ಯೋಜನೆಗಳು ಪದೇ ಪದೆ ಜಾರಿಯಾಗುವುದರಿಂದ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಿದ್ದವರಲ್ಲಿ ತಾವೂ ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿ ಮಾಡದಿದ್ದರೆ ಸಾಲ ಮನ್ನಾದ ಪ್ರಯೋಜನ ಪಡೆಯಬಹುದಿತ್ತು ಎನ್ನುವ ಅತೃಪ್ತಿ ಸ್ವಾಭಾವಿಕವಾಗಿಯೇ ಉದ್ಭವಿಸುತ್ತದೆ.
ಸ್ವಾವಲಂಬಿ ಮತ್ತು ಸ್ವಾಭಿಮಾನಿ ರೈತ: ತಾವು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗದೇ ನೊಂದ ರೈತರು ಮಾರುಕಟ್ಟೆಗಳಲ್ಲಿ ತರಕಾರಿ, ಬೆಳೆಗಳನ್ನು ಎಸೆದುಹೋಗುವ ಅನೇಕ ಘಟನೆಗಳು ವರದಿಯಾಗುತ್ತಿರುತ್ತವೆ. ಗೋದಾಮುಗಳನ್ನು, ಸಂಸ್ಕರಣ ಘಟಕಗಳನ್ನು ಹೆಚ್ಚಿಸುವ, ಉತ್ಪಾದನೆಗಳಿಗೆ ಯೋಗ್ಯ ಬೆಲೆ ದೊರಕಿಸುವ, ನೀರಾವರಿ, ವಿದ್ಯುತ್ ಒದಗಿಸುವ, ರೈತರಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ನೆರವು ನೀಡಿ ಸುಧಾರಿತ ಕೃಷಿಗೆ ಒತ್ತು ನೀಡುವಂತಹ ಸಕಾರಾತ್ಮಕ ಚಿಂತನೆಗಳಿಗೆ ಬದಲಾಗಿ ಜನಸಾಮಾನ್ಯರ ಜೇಬಿನಿಂದ ಬಂದ ತೆರಿಗೆ ಹಣದಲ್ಲಿ ಸಾಲ ಮನ್ನಾದಂತಹ ಅಗ್ಗದ, ಸುಲಭದ, ಜನಮರುಳು ಯೋಜನೆಯನ್ನು ನಮ್ಮ ರಾಜಕೀಯ ನೇತೃತ್ವ ರೂಪಿಸುತ್ತಿರುವುದು ದುರದೃಷ್ಟಕರ.
ಕೇಂದ್ರ ಸರಕಾರದ ಬೆಳೆ ವಿಮೆ, ಮಣ್ಣು ಪರೀಕ್ಷೆ, ಕೃಷಿಕರಿಗಾಗಿ ಪ್ರತ್ಯೇಕ ಟಿವಿ ಚಾನೆಲ್ ಮುಂತಾದ ನಿರ್ಣಯಗಳು ಕ್ರಾಂತಿಕಾರಕ ಹೆಜ್ಜೆಗಳೇ ಆದರೂ ತಳ ಮಟ್ಟದವರೆಗೆ ಇಂತಹ ಯೋಜನೆಗಳ ಲಾಭ ಸರಿಯಾಗಿ ತಲುಪಬೇಕಾದರೆ ಅನುದಾನ, ಮನ್ನಾದ ಸುತ್ತಲೇ ಗಿರಕಿ ಹೊಡೆಯುತ್ತಿರುವ ಚಿಂತನೆಗಳಿಂದ ಹೊರಬರಬೇಕಾದ ಅಗತ್ಯವಿದೆ. ನಮ್ಮ ನಾಯಕರು ರೈತರನ್ನು ಸ್ವಾವಲಂಬಿಯಾಗಿಸುವ ಮತ್ತು ಸ್ವಾಭಿಮಾನಿಗಳಾಗಿಸುವತ್ತ ಯೋಚಿಸುವಂತಾಗಲಿ.
– ಬೈಂದೂರು ಚಂದ್ರಶೇಖರ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.