ಸರ್ಪ ಸಾಮ್ರಾಜ್ಯದ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು…
ಬಂಡೆಗಳ ರಾಶಿಯೇ ಹಾವುಗಳಿಗೆ ಸುರಕ್ಷಿತ ತಾಣ ಎಂದು ಕರೆಯಲ್ಪಡುತ್ತಿದ್ದವು.
Team Udayavani, Sep 21, 2022, 10:20 AM IST
ಮಾನವ-ಪ್ರಾಣಿ ಸಂಘರ್ಷ ಇಂದು ನಿನ್ನೆಯದಲ್ಲ. ಆದರೆ ಭಾರತದಲ್ಲಿ ಮನುಷ್ಯರ ಮೇಲಿನ ದಾಳಿಯ ವಿಚಾರಕ್ಕೆ ಬಂದರೆ ಇತರೆಲ್ಲ ಪ್ರಾಣಿಗಳನ್ನು ಮೀರಿಸುತ್ತಿರುವುದು “ಹಾವು’ಗಳು. ಕುಗ್ರಾಮಗಳಿಂದ ಹಿಡಿದು ಮೆಟ್ರೋ ಸಿಟಿಗಳವರೆಗೂ ಮನುಷ್ಯನಿಗೆ ಹಾವಿನ ಕಾಟ ತಪ್ಪಿದ್ದಲ್ಲ. ಭಾರತದಲ್ಲಿ 300 ಜಾತಿಯ ಹಾವುಗಳಿವೆ. (60 ವಿಷಕಾರಿ, 40 ಅಲ್ಪಪ್ರಮಾಣದ ವಿಷಕಾರಿ, 180 ವಿಷಕಾರಿಯಲ್ಲದ್ದು). ಆದರೆ, ಪ್ರತೀ ವರ್ಷ ಹಾವು ಕಡಿದೇ ಭಾರತದಲ್ಲಿ 58 ಸಾವಿರ ಮಂದಿ ಸಾವಿಗೀಡಾಗುತ್ತಾರೆ. ಸರ್ಪ ಕಡಿತದಿಂದ ಪ್ರತೀ 10 ನಿಮಿಷಕ್ಕೊಬ್ಬ ಭಾರತೀಯ ಅಸುನೀಗುತ್ತಾನೆ. ಭಾರತಕ್ಕೂ ಹಾವು ಕಡಿತಕ್ಕೂ ಇರುವ ನಂಟಿನ ವಿವರ ಇಲ್ಲಿದೆ.
ನಗರಗಳೇ ಸ್ವರ್ಗ :
ನಗರೀಕರಣವು ಹೆಚ್ಚುತ್ತಿದ್ದಂತೆಯೇ ಪ್ರಾಣಿಗಳು ವಿಶೇಷವಾಗಿ ಸರೀಸೃಪಗಳು ಹೆಚ್ಚು ಪ್ರಬಲವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ಅಡಗಿಕೊಳ್ಳಲು ಕಲಿತಿವೆ. ಅದರಲ್ಲೂ ಕೆಲವು ಹಾವುಗಳಂತೂ ಕಾಂಕ್ರೀಟ್ ಮೇಲ್ಮೈಗಳಲ್ಲಿ ಬದುಕಲು ಮತ್ತು ಬೇಟೆಯಾಡುವುದನ್ನೂ ರೂಢಿ ಮಾಡಿಕೊಂಡಿವೆ. ನಾಗರಹಾವು ಮತ್ತು ಮಂಡಲ ಹಾವುಗಳು ಕಾಡಿಗಿಂತ ಹೆಚ್ಚಾಗಿ ಇತ್ತೀಚೆಗೆ ನಾಡಿನಲ್ಲೇ ಹೆಚ್ಚು ಆರಾಮವಾಗಿ ಜೀವಿಸುತ್ತಿವೆ. ಉರಗ ರಕ್ಷಕರಿಗೆ ನಗರಪ್ರದೇಶಗಳಲ್ಲೇ ಹೆಚ್ಚಿನ ಕರೆಬರಲು, ಹಾವುಗಳು ಅಲ್ಲಿ ಬದುಕುವ ಕೌಶಲವನ್ನು ರೂಢಿಸಿಕೊಂಡಿರುವುದೇ ಕಾರಣ.
ಹಿಂದೆಲ್ಲ ಹುತ್ತ, ಬಿಲಗಳು, ಬಂಡೆಗಳ ರಾಶಿಯೇ ಹಾವುಗಳಿಗೆ ಸುರಕ್ಷಿತ ತಾಣ ಎಂದು ಕರೆಯಲ್ಪಡುತ್ತಿದ್ದವು. ಆದರೆ ಈಗ ಈ ಸ್ಥಾನವನ್ನು ಒಳಚರಂಡಿ ಪೈಪ್‌ಗ್ಳು, ತ್ಯಾಜ್ಯದ ರಾಶಿಗಳು, ಕಾಂಕ್ರೀಟ್ ಸ್ಲಾéಬ್‌ಗಳು ತುಂಬಿವೆ. ಒಟ್ಟಿನಲ್ಲಿ ನಗರಪ್ರದೇಶದ ಜೀವವ್ಯವಸ್ಥೆಯೇ ಸರೀಸೃಪಗಳ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ.
ಗ್ರಾಮೀಣ ಭಾಗದಲ್ಲೇ ಹೆಚ್ಚು ಸಾವು :
2020ರ ನ್ಯಾಶನಲ್ ಮೋರ್ಟಾಲಿಟಿ ಸ್ಟಡಿಯ ದತ್ತಾಂಶಗಳ ಪ್ರಕಾರ, ಭಾರತದಲ್ಲಿ ಶೇ.94ರಷ್ಟು ಹಾವು ಕಡಿತ ಪ್ರಕರಣಗಳು ಗ್ರಾಮೀಣ ಪ್ರದೇಶಗಳಲ್ಲೇ ವರದಿಯಾಗುತ್ತಿವೆ. ಅಲ್ಲದೇ ಶೇ.77ರಷ್ಟು ಸಾವುಗಳು ಆಸ್ಪತ್ರೆಯ ಹೊರಗೇ ಸಂಭವಿಸುತ್ತವೆ. ಕೂಲಿಕಾರ್ಮಿಕರು ಮತ್ತು ರೈತ ಕುಟುಂಬಗಳೇ ಹೆಚ್ಚಾಗಿ ಹಾವು ಕಡಿತದ ಬಲಿಪಶುಗಳಾಗಿರುತ್ತಾರೆ. ಭಾರತದಲ್ಲಿ ಹಾವು ಕಡಿತವು ಅಧಿಸೂಚಿತ ಕಾಯಿಲೆಯ ಪಟ್ಟಿಯಲ್ಲಿ ಇಲ್ಲದ ಕಾರಣ, ಅನೇಕ ಪ್ರಕರಣಗಳು ವರದಿಯಾಗುವುದೇ ಇಲ್ಲ ಎನ್ನುತ್ತಾರೆ ತಜ್ಞರು.
ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಸಾವಿಗೆ ಕಾರಣವೇನು? :
- ಜೀವರಕ್ಷಕ ಚಿಕಿತ್ಸೆಯು ಸರಿಯಾದ ಸಮಯಕ್ಕೆ ಸಿಗದೇ ಇರುವುದು
- ಹಲವು ರಾಜ್ಯಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು ಕಡಿತಕ್ಕೆ ಚಿಕಿತ್ಸೆ ನೀಡದೇ ಇರುವುದು
- ದೂರದ ಜಿಲ್ಲಾಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುವ ವೇಳೆ ವೆಂಟಿಲೇಟರ್ ವ್ಯವಸ್ಥೆಯಿಲ್ಲದೇ ರೋಗಿ ಅಸುನೀಗುವುದು
- ಗ್ರಾಮೀಣ ಪ್ರದೇಶದ ವೈದ್ಯರಿಗೆ ಇಂಥ ಪ್ರಕರಣಗಳಿಗೆ ಚಿಕಿತ್ಸೆ ನೀಡುವ ಪರಿಣತಿಯ ಕೊರತೆ, ಮೂಲಸೌಕರ್ಯಗಳ ಅಭಾವ
- ಜನರಲ್ಲಿರುವ ಮೂಢನಂಬಿಕೆ
ನಿಯಂತ್ರಣ ಹೇಗೆ? :
ಹಾವು ಕಡಿತದ ಸಮಸ್ಯೆ ನಿವಾರಣೆಯಾಗಬೇಕೆಂದರೆ, ಪರಿಣಾಮಕಾರಿ ಆ್ಯಂಟಿವೆನಮ್(ವಿಷ ನಿರೋಧಕ ಔಷಧ)ಗಳ ಸರಬರಾಜು ಹೆಚ್ಚಬೇಕು. ಹೆಚ್ಚು ಅಪಾಯ ಎದುರಿಸುವಂಥ ಸಮುದಾಯವನ್ನು ಗುರುತಿಸಿ, ಅಂಥ ಪ್ರದೇಶಗಳಿಗೆ ಈ ಔಷಧಗಳು ಸಮರ್ಪಕವಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಹಾವು ಕಡಿತಕ್ಕೆ ಒಳಗಾದವರಿಗೆ ಹೇಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಆರೋಗ್ಯ ಸೇವಾ ಸಿಬಂದಿಗೆ ಸೂಕ್ತ ತರಬೇತಿ ನೀಡಿದರೆ, ಸಾಕಷ್ಟು ಸಾವುಗಳನ್ನು ತಪ್ಪಿಸಲು ಸಾಧ್ಯ. ಅಂತಿಮವಾಗಿ, ಸ್ಥಳೀಯ ಜನರಲ್ಲೂ ಜಾಗೃತಿ ಮೂಡಿಸುವ ಕೆಲಸವಾಗಬೇಕು.
ಹಾವು ಕಚ್ಚಿದಾಗ ಏನು ಮಾಡಬೇಕು? :
- ಆದಷ್ಟು ಬೇಗ ಆ್ಯಂಬುಲೆನ್ಸ್‌ಗೆ ಕರೆ ಮಾಡಿ. ಇಲ್ಲದಿದ್ದರೆ ಸಂತ್ರಸ್ತ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ
- ಆತನ ಮೈಮೇಲಿರುವ ಆಭರಣ, ಬೆಲ್ಟ್, ವಾಚು, ಉಂಗುರ ಇತ್ಯಾದಿಗಳನ್ನು ತೆಗೆಯಿರಿ. ಹಾವು ಕಚ್ಚಿದ ಜಾಗವು ಊದಿಕೊಳ್ಳುವ ಸಾಧ್ಯತೆಯಿರುತ್ತದೆ.
- ವ್ಯಕ್ತಿಯನ್ನು ಎಡಬದಿಗೆ ವಾಲುವಂತೆ ಮಲಗಿಸಿ ಮತ್ತು ಬಲಗಾಲನ್ನು ಮಡಚಿಡಿ. ಕೈಗಳು ಮುಖಕ್ಕೆ ಆಧಾರವಾಗಿರುವಂತೆ ಇಡಿ. ಆಗ ಉಸಿರಾಟ ಸರಾಗವಾಗಿರುತ್ತದೆ.
ಏನು ಮಾಡಬಾರದು? :
- ಆತಂಕ ಪಡಬೇಡಿ. ಗಾಬರಿಗೊಳಗಾದಾಗ ಎದೆಬಡಿತ ಹೆಚ್ಚಾಗಿ, ದೇಹದೊಳಗೆ ವಿಷ ಬೇಗನೆ ಪರಿಚಲನೆಗೊಳ್ಳುತ್ತದೆ.
- ಕಚ್ಚಿದ ಹಾವನ್ನು ಹಿಡಿಯಲು, ಕೊಲ್ಲಲು ಹೋಗಬೇಡಿ
- ಕಚ್ಚಿದ ಜಾಗವನ್ನು ಕತ್ತರಿಸುವುದು,ಚೀಪುವುದು ಮಾಡಬೇಡಿ
- ಸಂತ್ರಸ್ತ ವ್ಯಕ್ತಿಗೆ ಕುಡಿಯಲು ನೀರು, ಆಹಾರ ನೀಡಬೇಡಿ.
- ಕಚ್ಚಿದ ಜಾಗಕ್ಕೆ ಮಂಜುಗಡ್ಡೆ ಇಡಬೇಡಿ ಅಥವಾ ಮಸಾಜ್ ಮಾಡಬೇಡಿ. ಅದು ಮತ್ತಷ್ಟು ಹಾನಿ ಉಂಟುಮಾಡಬಹುದು
2020ರಲ್ಲಿ ಭಾರತದಲ್ಲಿ ಹಾವು ಕಡಿದು ಮೃತಪಟ್ಟವರು: 9,829
ಕೀಟಗಳ ಕಡಿತದಿಂದ ಸಾವು : 1,000
ಇತರೆ ಪ್ರಾಣಿಗಳ ದಾಳಿಯಿಂದಾದ ಮರಣ: 1,305
ನಿಮಗೆ ಗೊತ್ತಿರದ ಸಂಗತಿಗಳು :
- ಮನೆಯೊಳಗೇ ಹಾವುಗಳು ಕಂಡುಬರುವ ಸಾಧ್ಯತೆ ಶೇ.40-50ರಷ್ಟು ಹೆಚ್ಚು
- ಭಾರತದಲ್ಲಿ ವರ್ಷಕ್ಕೆ ಹಾವು ಕಡಿತದಿಂದಲೇ 58,000 ಸಾವು ಸಂಭವಿಸುತ್ತವೆ
- ಇದರ ಶೇ.50ರಷ್ಟು ಬಲಿಪಶುಗಳು 30-69ರ ವಯೋಮಾನದವರು ಭಾರತದಲ್ಲಿರುವ ಶೇ.80ರಷ್ಟು ಹಾವುಗಳು ವಿಷವಿಲ್ಲದ್ದು.
- ಹಾವು ಕಡಿತದ ಬಹುತೇಕ ಪ್ರಕರಣಗಳು ಸಂಭವಿಸುವುದು ರಾತ್ರಿ ಹೊತ್ತಲ್ಲಿ.
- ಹಾವು ಕಡಿದ ಅನಂತರದ 30-40 ನಿಮಿಷಗಳು ಅತ್ಯಂತ ನಿರ್ಣಾಯಕವಾಗಿರುತ್ತದೆ
- 2000-2019ರ ಅವಧಿಯಲ್ಲಿ ಹಾವು ಕಡಿತಕ್ಕೆ ಬಲಿಯಾದವರು- 12 ಲಕ್ಷಕ್ಕೂ ಹೆಚ್ಚು
- ಹಾವು ಕಡಿತದಿಂದ ಪ್ರತೀ ವರ್ಷ ದೈಹಿಕ ಅಸಮರ್ಥತೆಗೆ ಗುರಿಯಾಗುವವರು- 2,32,000
- ಪ್ರತೀ ವರ್ಷ ಜಗತ್ತಿನಲ್ಲಿ ಹಾವು ಕಡಿತಕ್ಕೆ ಒಳಗಾಗುವವರು- 54 ಲಕ್ಷ
-ಹಲೀಮತ್ ಸಅದಿಯಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.