“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Team Udayavani, Nov 2, 2024, 7:20 AM IST
ಆರು ರಾಜ್ಯಗಳ ಜತೆ ಗಡಿ ಹಂಚಿಕೊಂಡಿರುವ ಕರ್ನಾಟಕ ಕಳೆದ 50 ವರ್ಷಗಳಿಂದಲೂ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಲೇ ಇದೆ. ಒಂದೆಡೆ ಬೆಳಗಾವಿಗಾಗಿ ಮಹಾರಾಷ್ಟ್ರದ ಕಿಡಿಗೇಡಿತನ ಇನ್ನೂ ನಿಂತಿಲ್ಲ. ಇನ್ನೊಂದೆಡೆ, ಗಡಿಭಾಗದ ಎಲ್ಲ ಗ್ರಾಮಗಳೂ ನಿರೀಕ್ಷಿತ ಅಭಿವೃದ್ಧಿ ಇಲ್ಲದೆ ಸೊರಗುತ್ತಿದೆ. ಗಡಿಭಾಗದ ಇಕ್ಕೆಡೆ ಗ್ರಾಮಗಳಲ್ಲೂ ಕನ್ನಡದ ಕಂಪನ್ನು ಸೂಸುವ ಕಾರ್ಯಗಳು ಆಗಬೇಕಿದೆ.
ಬಹುಶಃ ಕರ್ನಾಟಕ ಎದುರಿಸುತ್ತಿರುವಷ್ಟು ಗಡಿಭಾಗದ ಸಮಸ್ಯೆಯನ್ನು ಇತರೆ ರಾಜ್ಯಗಳು ಅಷ್ಟೊಂದು ಎದುರಿಸುತ್ತಿಲ್ಲ. ಇದು ಹೊಸದೂ ಅಲ್ಲ. ಹಲವು ದಶಕಗಳಿಂದಲೂ ಕರ್ನಾಟಕದ ಗಡಿಗಳು ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಅದಿನ್ನೂ ಬಗೆಹರಿದಿಲ್ಲ. ಕರ್ನಾಟಕವನ್ನು ಗೋವಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳು ಸುತ್ತುವರೆದಿವೆ. ಮರಾಠಿ, ತೆಲುಗು, ತಮಿಳು, ಮಲಯಾಳ ಜತೆಗೆ ಬಹುತೇಕರು ಮಾತನಾಡುವ ಉರ್ದು ಭಾಷೆಗಳ ಪ್ರಭಾವ ಕನ್ನಡದ ಮೇಲಿದೆ. ಆರು ರಾಜ್ಯಗಳು, ಹಲವು ಭಾಷೆಗಳು ನಮ್ಮನ್ನು ಆವರಿಸಿವೆ.
1956ರಲ್ಲಿ ಭಾಷೆಗಳ ಆಧಾರದ ಮೇಲೆ ರಾಜ್ಯಗಳ ರಚನೆ ಯಾಯಿತು. ಆಗ ಕರ್ನಾಟಕದ ಕೆಲವು ಭಾಗಗಳು ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳು ನಾಡು, ಕೇರಳ ರಾಜ್ಯಗಳಲ್ಲಿದ್ದವು. ಅವುಗಳ ಕೆಲವು ಭಾಗ ಕರ್ನಾಟಕದಲ್ಲೂ ಇತ್ತು. ಸಮಾನ ಮಾತೃಭಾಷಿಕರನ್ನು ಒಂದು ಮಾಡುವ ಹಾಗೂ ತೆರಿಗೆ ಸಂಗ್ರಹಿಸಲು ಅನುಕೂಲವಾಗಲೆಂದು ರಾಜ್ಯ ವಿಂಗಡ ಣೆಯ ಚಿಂತನೆ ಮಾಡಿ, ಫಸಲ್ ಅಲಿ ಸಮಿತಿಯ ವರದಿ ಯನುಸಾರ ಅನು ಷ್ಠಾನವಾಯಿತು. ಉಳಿದ ರಾಜ್ಯಗಳು ವರದಿಯ ನಿಯಮದಂತೆ ನಡೆ ದವು. ಆದರೆ ಮಹಾರಾಷ್ಟ್ರ ಮಾತ್ರ ಬೆಳಗಾವಿಯನ್ನು ಸಂಪೂರ್ಣ ವಾಗಿ ಪಡೆಯಬೇಕೆಂಬ ಇಚ್ಛೆ ಹೊಂದಿತ್ತು. ಆ ಕಾರಣಕ್ಕೆ ಗಡಿ ಗಲಾಟೆಗಳು ಹೆಚ್ಚಾ ದವು. ನಿರಂತರವಾಗಿ ರಾಜಕೀಯ ಪಿತೂರಿ, ಹೋರಾಟಗಳನ್ನು ಅವರು ನಡೆಸಿದರು. ಈಗಲೂ ಮಹಾರಾಷ್ಟ್ರದ ಗುಂಪೊಂದು ಪಿತೂರಿ ನಡೆಸುತ್ತಲೇ ಬರುತ್ತಿದೆ.
ಕನ್ನಡಿಗರಿಗೆ ಭಾಷಾ ನಿರಭಿಮಾನ
ಮೊದಲಿನಿಂದಲೂ ಕನ್ನಡಿಗರು ಭಾಷೆಯ ದುರಭಿ ಮಾನಿ ಗಳಲ್ಲ. ಆದರೆ ಸ್ವಾಭಿಮಾನಿಗಳೂ ಆಗಲಿಲ್ಲ. ಬದಲಾಗಿ ನಿರಭಿಮಾನಿ ಗಳಾದೆವು. ಭಾಷೆ ವಿಚಾರದಲ್ಲಿ ತಾತ್ಸಾರ, ಉದಾ ಸೀನ, ಉದ್ಧಟತನ, ಕೀಳರಿಮೆ, ರಾಜ ಕೀಯ ಅಸ್ತಿತ್ವ, ಗಡಿ ಭಾಗದಲ್ಲಿ ಅಧಿಕಾರಕ್ಕೆ ಬರಲು ರಾಜಕಾರಣಿಗಳಿಂದ ರಾಜೀ ಸೂತ್ರ ಇವೆಲ್ಲ ದರಿಂದ ನಮ್ಮವರಿಂದಲೇ ಕನ್ನಡ ಭಾಷೆಯ ಬೆಳವಣಿಗೆ ಗೌಣವಾಯಿತು. ರಾಜಕೀಯ ಲಾಭಕ್ಕೋಸ್ಕರ ಗಡಿ ನಾಡಿ ನಲ್ಲಿ ಕನ್ನಡ ಭಾಷೆಯ ಸಮಸ್ಯೆಯನ್ನು ಜೀವಂತ ವಾಗಿರಿಸಿದರು. ಕೇವಲ ಭಾಷೆಯ ವಿಚಾರ ದಲ್ಲಿ ವೈಷಮ್ಯವಾಗಲಿಲ್ಲ. ಶಿಕ್ಷಣದಲ್ಲಿ ಕನ್ನಡ, ಆಡಳಿತದಲ್ಲಿ ಕನ್ನಡ ಎಂಬ ದುರಂತ ಎದುರಾದವು. ಬೆಂಗಳೂರಿನಲ್ಲೇ ಕನ್ನಡಿಗರು ಅಲ್ಪಸಂಖ್ಯಾಕ ರಾಗುವ ಪರಿಸ್ಥಿತಿ ನಿರ್ಮಾಣವಾಯಿತು.
ನಿರಂತರ ಸಂಘರ್ಷ
ಕರ್ನಾಟಕದ 31 ಜಿಲ್ಲೆಗಳ ಪೈಕಿ, 19 ಜಿಲ್ಲೆಗಳಲ್ಲಿ ಕನ್ನಡದ ಜತೆಗೆ ಬೇರೆ ಭಾಷಿಕರು ಇದ್ದಾರೆ. ಬೆಳಗಾವಿಯಿಂದ, ಕಾರವಾರದವರೆಗೆ ದ್ವಿಭಾಷೆ, ತ್ರಿಭಾಷೆಯಲ್ಲಿ ಮಾತನಾಡುವವರನ್ನು ನೋಡುತ್ತೇವೆ. 19 ಜಿಲ್ಲೆ 63 ತಾಲೂಕುಗಳಲ್ಲಿ ನಿರಂತರವಾಗಿ ಹೋರಾಟ ನಡೆಯುತ್ತ, ನಿಜಲಿಂಗಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ, ಈ ಕುರಿತು ಮತ್ತೆ ಚಿಂತನೆ ಆಗಬೇಕೆಂದು ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರಿಂದ ವರದಿ ಮಾಡಿಸಿದ್ದರು. 1967ರಲ್ಲಿ ಮಹಾಜನ್ ವರದಿ ಬಂದಿತು. ಇದರ ಪ್ರಕಾರ ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗಲು ಸಾಧ್ಯವಿಲ್ಲ ಎಂಬ ನಿರ್ಣಯವಾಯಿತು. ಅದನ್ನು ಮಹಾರಾಷ್ಟ್ರ ಒಪ್ಪಲಿಲ್ಲ. ಅವರು ನ್ಯಾಯಯುತವಾಗಿ, ಸಂವಿಧಾನಾತ್ಮಕ ನಡೆ ಅನುಸರಿಸಲಿಲ್ಲ. ಹಾಗಾಗಿ ಸಮಸ್ಯೆ ಮುಂದುವರೆಯಿತು. ಗಡಿ ವಿಚಾರವಾಗಿ ಮಹಾರಾಷ್ಟ್ರ ಕೋರ್ಟ್ ಮೊರೆ ಹೋದರು. ಇತ್ತ ಆಂಧ್ರಪ್ರದೇಶದವರು ಸಹ ತಮ್ಮ ರಾಜ್ಯಕ್ಕೆ ನದಿ ಭಾಗ ಹೆಚ್ಚು ಬರಲಿ ಎಂದು ಕೋರ್ಟ್‌ಗೆ ಹೋದರು. ತಮಿಳು ನಾಡಿನವರು ಕಾವೇರಿ, ಹೊಗೇನಕಲ್ ಜಲಪಾತ ಹಾಗೂ ಭಾಷೆಯ ವಿಚಾರವಾಗಿ ನಮ್ಮ ವಿರುದ್ಧ ನಿಂತರು. ಕರ್ನಾಟಕಕ್ಕೇ ಸೇರಬೇಕಾದ ದಕ್ಷಿಣ ಕನ್ನಡ ಸಮೀಪದ ಕಾಸರಗೋಡು ಕೇರಳದ ಪಾಲಾಯಿತು. ಅನಂತರ ನಿರಂತರವಾಗಿ ಅಲ್ಲಿ ಕನ್ನಡದ ಮೇಲಿನ ದೌರ್ಜನ್ಯ ಮುಂದುವರೆಯುತ್ತಲೇ ಬಂತು. ಅಲ್ಲಿದ್ದ ಕನ್ನಡ ಶಾಲೆಗಳು ಮುಚ್ಚಿದವು, ಶಿಕ್ಷಕರು ಕೆಲಸ ಕಳೆದುಕೊಂಡರು.
ಬೇರೆ ರಾಜ್ಯಗಳಲ್ಲಿ ಕನ್ನಡಿಗರಿಗಿಲ್ಲ ಶಿಕ್ಷಣ ಸೌಲಭ್ಯ
ಸಂವಿಧಾನದ ಅನುಸಾರ, ಆಡಳಿತಕ್ಕೆ ರಾಜ್ಯ ಭಾಷೆಯೇ ಅಂತಿಮ. ಜತೆಗೆ ಮಾತೃಭಾಷಿಕರು ಶೇ. 15ಕ್ಕಿಂತ ಹೆಚ್ಚಿದ್ದರೆ, ಅವರನ್ನು ಪೋಷಿಸ ಬೇಕೆಂಬುದು ವಿವಿಧತೆಯಲ್ಲಿ ಏಕತೆಯ ಭಾಗವಾಗಿ ಬಂದಿತು. ಇದನ್ನು ಕರ್ನಾಟಕ ಒಪ್ಪಿ, ಇಲ್ಲಿನ ಶೇ. 15ರಷ್ಟಿದ್ದ ಇತರ ಮಾತೃಭಾಷಿಕರಿಗೆ (ತೆಲುಗು, ತಮಿಳು) ಶಿಕ್ಷಣ ಹಾಗೂ ಇತರ ಕ್ಷೇತ್ರಗಳಲ್ಲಿ ವಿವಿಧ ಸೌಲಭ್ಯ ಒದಗಿಸಿತು. ಆದರೆ ಉಳಿದ ರಾಜ್ಯಗಳು ಇದನ್ನು ಅನುಸರಿಸಲಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಕನ್ನಡಿಗರಿಗೆ ಅನ್ಯಾಯ, ದಬ್ಟಾಳಿಕೆ ಮಾಡಿದರು. ಗಡಿ ಪ್ರದೇಶದಲ್ಲಿದ್ದವರಿಗೆ ಇದು ದೊಡ್ಡ ಸಮಸ್ಯೆ ಆಯಿತು. ಅನಂತರದ ದಿನಗಳಲ್ಲಿ ಡಿ.ಎಸ್. ನಂಜುಡಪ್ಪ, ಬರಗೂರು ರಾಮಚಂದ್ರಪ್ಪ, ವಾಟಾಳ್ ನಾಗರಾಜ್ ಹಾಗೂ ನಾನು, “ಗಡಿ ಕನ್ನಡಿಗರ ಕಥೆ-ವ್ಯಥೆ’ ಕುರಿತಾಗಿ ಹಲವು ವರದಿಗಳನ್ನು ಕೊಟ್ಟೆವು. ಆದರೆ ಇದಕ್ಕೆ ಕರ್ನಾಟಕ ಸರಕಾರ ಸ್ಪಂದಿಸಲಿಲ್ಲ. ಜನಪ್ರತಿನಿಧಿಗಳು ಉದಾಸೀನ ತೋರಿದರು.
ಈಗಲೂ ಗಡಿಭಾಗದಲ್ಲಿ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. 2008ರಲ್ಲಿ ನಾನು ಸೇರಿದಂತೆ ಎಲ್ಲರೂ ಹೋರಾಟ ಮಾಡಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ತರಲು ಶ್ರಮಿಸಿದೆವು. ಆದರೆ ನಮಗಿಂತಲೂ ಮೊದಲು ಶಾಸ್ತ್ರೀಯ ಸ್ಥಾನ ಮಾನ ಪಡೆದ ತಮಿಳು ಭಾಷೆ, ಕೇಂದ್ರದಿಂದ ಅನುದಾನ ಪಡೆದು ಭಾಷೆ ಯನ್ನು ಅಭಿವೃದ್ಧಿಪಡಿಸಿಕೊಂಡಿತು. ಆದರೆ ನಮ್ಮಲ್ಲಿ ಮಾತ್ರ ಪ್ರದೇಶಗಳ ಹೋರಾಟಗಳೇ ಮುಖ್ಯವಾದವು. ನಿರೀಕ್ಷಿತ ಅನುದಾನ ಪಡೆಯುವಲ್ಲಿ ವಿಫಲವಾದೆವು. ಇದರಿಂದ ಆಡಳಿತದಲ್ಲಿ ಕನ್ನಡ ಕುಸಿತವಾಯಿತು. ಭಾಷೆ ಅಭಿವೃದ್ಧಿಗೆ ಯಾವುದೇ ರಾಜ್ಯದಲ್ಲಿ ಇರದಷ್ಟು ಇಲಾಖೆಗಳು ನಮ್ಮಲ್ಲಿವೆ. ಕನ್ನಡ ಸಲಹಾ ಸಮಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತ್, ಕನ್ನಡ ಸಾಹಿತ್ಯ ಅಕಾಡೆಮಿ ಸೇರಿ ಸಾಕಷ್ಟು ಅಕಾಡೆಮಿಗಳಿವೆ. ಇಷ್ಟೆಲ್ಲ ಇದ್ದರೂ ಸೋತಿದ್ದೇವೆ.
ಸರಕಾರದ ನಿಷ್ಕಾಳಜಿ
ಇಲ್ಲಿನ ಪ್ರಬಲ ರಾಜಕಾರಣಿಗಳು ನೆರೆ ರಾಜ್ಯದೊಡನೆ ರಾಜಿಯಾದರು. ಇನ್ನು ಉತ್ಪನ್ನಗಳ ಮಾರಾಟ, ವ್ಯಾಪಾರಗಳಿಗೆ ಪಕ್ಕದ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ತೆರಿಗೆ ಹೆಚ್ಚಿದೆ. ಹಾಗಾಗಿ ಗಡಿ ಭಾಗದ ವ್ಯಾಪಾರಿಗಳು ಪಕ್ಕದ ರಾಜ್ಯಕ್ಕೆ ಹೋಗಿ ವ್ಯಾಪಾರ ಮಾಡುತ್ತಿದ್ದಾರೆ. ಇದನ್ನು ಕರ್ನಾಟಕ ಸರಕಾರ ಯೋಚಿಸಬೇಕಿತ್ತು. ಉದಾ: ಅಥಣಿಯ ವರ್ತಕರು ಮಹಾ ರಾಷ್ಟ್ರದ ಮೀರಜ್, ಸಾಂಗ್ಲಿಗೆ ಹೋಗಿ ವ್ಯಾಪಾರ ಮಾಡುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಬೆಳೆದ ಕಬ್ಬು ಮಹಾರಾಷ್ಟ್ರಕ್ಕೆ ರಫ್ತಾಗುತ್ತದೆ. ಕಬ್ಬಿನ ಪ್ರತೀ ಟನ್‌ಗೆ ಕರ್ನಾಟಕ ನೀಡುವ ಹಣಕ್ಕಿಂತ, ಮಹಾರಾಷ್ಟ್ರ 200-300ರೂ. ಹೆಚ್ಚು ನೀಡುತ್ತದೆ. ಕರ್ನಾಟಕ ಹೆಚ್ಚಿನ ಹಣ ನಿಗದಿಪಡಿಸಿದರೂ, ಸರಿಯಾದ ಸಮಯಕ್ಕೆ ನೀಡುವುದಿಲ್ಲ. ಮಹಾರಾಷ್ಟ್ರ ನಿಯಮಿತ ಅವಧಿಯಲ್ಲಿ ರೈತರಿಗೆ ಹಣ ಸಂದಾಯ ಮಾಡುತ್ತದೆ. ಗಡಿನಾಡಿನ ತಾಲೂಕು ಪಾವ ಗಡದ ಶೇಂಗಾ ಬೆಳೆಗಾರರದ್ದು ಇದೇ ಸಮಸ್ಯೆ. ಇದೆಲ್ಲವೂ ಕರ್ನಾಟಕ ಸರಕಾರದ ನಿಷ್ಕಾಳಜಿಯನ್ನು ತೋರಿಸುತ್ತದೆ ಮತ್ತು ಇದರಿಂದ ನೆರೆ ರಾಜ್ಯಗಳಿಗೆ ಲಾಭವಾಗುತ್ತಾ ಹೋಗುತ್ತದೆ. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಬಹುತೇಕ ಗಡಿ ಭಾಗದ ತಾಲೂಕುಗಳಿಗೆ ಹೋಗಿ ಬಂದಿದ್ದೇನೆ. ಈಗಲೂ ಅಲ್ಲಿ ಕುಡಿಯುವ ನೀರಿಗೆ ಹಾಹಾ ಕಾರವಿದೆ. ರಸಾಯನಿಕ ಮಿಶ್ರಿತ ನೀರಿನಿಂದ ಜನರ ಆರೋಗ್ಯದ ಮೇಲೆ ಪರಿಣಾಮವಾಗುತ್ತಿದೆ, ಜನ ಅಂಗವಿಕಲ ರಾಗುತ್ತಿ ದ್ದಾರೆ. ಸರಕಾರಿ ಶಾಲೆಗಳಲ್ಲಿ ಕಲಿಕೆಯ ಕೊರತೆ ಇದೆ. ಪ್ರತೀ ಜಿಲ್ಲಾ ಗಡಿ ಭಾಗದಲ್ಲಿ ಸಮಸ್ಯೆ ಗಳಿದ್ದರೂ, ಸರಕಾರ ಇದರತ್ತ ಕಳಕಳಿ ತೋರಿಲ್ಲ. ಒಂದು ವೇಳೆ ನಂಜುಡಪ್ಪ ವರದಿ ಸರಿಯಾಗಿ ಅನುಷ್ಠಾನವಾಗಿದ್ದರೆ, ಕನ್ನಡಿ ಗರು ಉದ್ಯೋಗ ವಂಚಿತ ರಾಗುತ್ತಿರಲಿಲ್ಲ. ಬೇರೆ ಕಡೆ ವಲಸೆ ಹೋಗುತ್ತಿರಲಿಲ್ಲ. ಗಡಿಭಾಗದಲ್ಲಿ ನೀರಾವರಿ, ಬೆಂಬಲ ಬೆಲೆ ಸೇರಿ ಹಲವು ಅನುಕೂಲಗಳು ಆಗುತ್ತಿದ್ದವು.
ಆಗಬೇಕಾದ್ದೇನು?
1 ಗಡಿ ಜಿಲ್ಲೆಗಳಲ್ಲಿ ಕನ್ನಡ ಭವನಗಳ ನಿರ್ಮಾಣ ಹಾಗೂ ಅದರ ಕೇಂದ್ರಿತ ಕನ್ನಡ ಅಭಿವೃದ್ಧಿ ಕಾರ್ಯ.
2 ಗಡಿಭಾಗದ ಸರಕಾರಿ ಇಲಾಖೆಗಳಿಗೆ ಕನ್ನಡ ಬಲ್ಲ ಸಿಬಂದಿ, ಅಧಿಕಾರಿಗಳ ವರ್ಗಾವಣೆ.
3 ಕನ್ನಡ ಕಲಿಯುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡುವ ವ್ಯವಸ್ಥೆ ಜಾರಿಯಾಗಬೇಕು
4ಅಂಗಡಿ ಹಾಗೂ ಇತರ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬಳಸಲು ಸೂಚನೆ
5ಗಡಿಭಾಗಗಳ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಆರ್ಥಿಕ ವಲಯವನ್ನು ರಚಿಸುವ ಅಗತ್ಯ.
– ಮುಖ್ಯಮಂತ್ರಿ ಚಂದ್ರು ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.