ಪರಂಪರೆಗೆ ಸಾವಿಲ್ಲ… ಹೊಸ ಹೆದ್ದಾರಿ ಮಧ್ಯೆ ಕಾಲು ಹಾದಿಯೂ ಇರಲಿ


Team Udayavani, Jan 14, 2023, 6:32 PM IST

ಪರಂಪರೆಗೆ ಸಾವಿಲ್ಲ

ಪಂಡಿತ್‌ ಗಣಪತಿ ಭಟ್‌ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪುಟ್ಟ ಗ್ರಾಮ ಹಾಸಣಗಿಯವರು. ಪಂಡಿತ್‌ ಬಸವರಾಜ ರಾಜಗುರು ಅವರಲ್ಲಿ “ಗಂಡಾಬಂಧಿ’ ಶಿಷ್ಯರಾಗಿ ಗುರುಕುಲ ಕ್ರಮದಲ್ಲಿ ಅಭ್ಯಾಸ ಮಾಡಿ, ಇಂದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಗೀತಗಾರರಾಗಿ ಸುಪ್ರಸಿದ್ಧರು. ಕಿರಾನಾ-ಗ್ವಾಲಿಯರ್‌ ಘರಾನಾ ಸಂಪ್ರದಾಯದ ಇವರು, ಪಂಡಿತ್‌ ಸಿ.ಆರ್‌. ವ್ಯಾಸ ಅವರಿಂದಲೂ ಪಾಠ ಹೇಳಿಸಿಕೊಂಡಿದ್ದಾರೆ. ಎಂದಿಗೂ ವೇಗ ಹಾಗೂ ಪ್ರಸಿದ್ಧಿಯ ಹಪಾಹಪಿತನಕ್ಕೆ ತಮ್ಮನ್ನಾಗಲೀ, ತಮ್ಮ ಸಂಗೀತವನ್ನಾಗಲೀ ಒಗ್ಗಿಸಿದವರಲ್ಲ. ಒಲವು ಮತ್ತು ಬದುಕು ಎರಡೂ ಸಂಗೀತವೇ. ಪ್ರಸಿದ್ಧಿಗಾಗಿ ಹೆದ್ದಾರಿಗಳ ಹಾದಿ ಹಿಡಿಯದೆ ತಮ್ಮ ಇಷ್ಟದ ಕಾಲು ಹಾದಿಗಳಲ್ಲೇ ಸಾಗಿ ಶಿಖರವನ್ನು ಮುಟ್ಟಿದವರು. ಅವಕಾಶಗಳಿಗಾಗಿ ನಗರಗಳತ್ತ ವಲಸೆ ಹೋಗುವವರ ಮಧ್ಯೆ ಅಪರೂಪವೆಂಬಂತೆ ತೋರಿದವರು. ಕಲಾವಿದನಾಗಿಯೂ, ಕಲಾ ಸಂಘಟಕನಾಗಿಯೂ, ಸಮರ್ಥ ಗುರುವಾಗಿಯೂ ತಮ್ಮ ಪಾತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದು. ತಮ್ಮ ಗುರುವಿನ ಸಂಸ್ಮರಣೆಯಾಗಿ ಮಂಚಿಕೇರಿಯಲ್ಲಿ ಹಲವು ವರ್ಷಗಳ ಕಾಲ ಸಂಗೀತ ಉತ್ಸವ ಸಂಘಟಿಸಿ, ದೊಡ್ಡ ದೊಡ್ಡ ಕಲಾವಿದರಿಗೆಲ್ಲ ತಮ್ಮ ಹಳ್ಳಿಯ ಹಾದಿಯನ್ನು ಪರಿಚಯಿಸಿದವರು. ಅಷ್ಟೇ ಅಲ್ಲ, ಹಳ್ಳಿಗರಿಗೂ ಕಲಾಭಿರುಚಿಯ ಹೆಬ್ಟಾಗಿಲು ತೆರೆದವರು. ಗುಡಿಯಲ್ಲಿ ದೇವರನ್ನು ಕಾಣಲು ಗಡಿಬಿಡಿಯಲ್ಲಿ ಬಂದವರಿಗೆಲ್ಲ ,”ನಿಮ್ಮದು ಮುಗಿಸಿ’ ಎಂದು ದಾರಿಬಿಟ್ಟು ಅವರ ಆನಂದವನ್ನೇ ಅನುಭವಿಸುತ್ತಾ ಬದಿಯಲ್ಲಿ ನಿಂತವರು. ವೇಗ-ಗಡಿಬಿಡಿ ಎರಡರಿಂದಲೂ ದೂರ. ಸಾವಧಾನದ ಪರಿಮಳ ಹೆಚ್ಚು ಇಷ್ಟವೆನ್ನುವ ಗಣಪತಿ ಭಟ್‌ ಮಾತಿಗೆ ತೆರೆದುಕೊಳ್ಳುವುದೂ ಹಾಗೆಯೇ ತುಸು ನಿಧಾನ… ಅನಂತರ ಪ್ರವಾಹ. ಹುಬ್ಬಳ್ಳಿಯ ಡಾ| ಗಂಗೂಬಾಯಿ ಹಾನಗಲ್‌ ಗುರುಕುಲದಲ್ಲಿ ಗುರುವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉದಯವಾಣಿಯ ದೀಪಾವಳಿ ವಿಶೇಷಾಂಕಕ್ಕಾಗಿ ಹಾಸಣಗಿಯ ಮನೆಯಲ್ಲಿ ಮಾತಿನ ಮಂಥನದಲ್ಲಿ ಸಿಕ್ಕ ನವನೀತ ಇಲ್ಲಿದೆ.

ಗುರುಶಿಷ್ಯ ಪರಂಪರೆ
ವೇಗಯುಗದಲ್ಲಿ ಗುರುಶಿಷ್ಯ ಪರಂಪರೆಯಂಥ ಮಾದರಿ ಏನಾಗಬಹುದು ಎಂಬ ಆತಂಕ ಸಹಜ. ಆದರೆ ಇದು ನಶಿಸುವುದಿಲ್ಲ; ಸಾಂಸ್ಥಿಕ ರೂಪಕ್ಕೆ ಬರಬಹುದು. ಇದು ಬರಿಯ ಆಶಾವಾದವೂ ಅಲ್ಲ. ಒಬ್ಬ ಗುರುವಿನ ಜೀವಿತಾವಧಿಯಲ್ಲಿ 8-10 ಮಂದಿ ಸಮರ್ಥರು ರೂಪುಗೊಳ್ಳ ಬಹುದು. ಇದನ್ನೇ ಮಾಡಿಯೇ ತೀರುವೆನೆಂಬ ಹಠ ಹಾಗೂ ಗಂಭೀರ ಆಸಕ್ತಿ ಇರುವಂಥ ವಿದ್ಯಾರ್ಥಿಗಳು ಬೇಕು, ಸಿಗುತ್ತಾರೆ. ಸಂಖ್ಯೆ ಕಡಿಮೆ ಎನಿಸಬಹುದು. ಇದು ತಪಸ್ಸಿನ ವಿದ್ಯೆ. ಎಲ್ಲರಿಗೂ ದಕ್ಕುತ್ತದೆ ಎಂದಲ್ಲ. ಒಳ್ಳೆಯ ಶಾರೀರದ ಜತೆ ಕಲೆಯ ಸೂಕ್ಷ್ಮಗಳನ್ನು ಗ್ರಹಿಸುವ ಸಾಮರ್ಥ್ಯ ಅವಶ್ಯ. ಇಲ್ಲಿ ಪಠ್ಯಕ್ರಮವಿಲ್ಲ, ಪರೀಕ್ಷೆಯಿಲ್ಲ. ಅಲ್ಲಿಂದ ಹೊರ ಬೀಳುವುದು ಒಬ್ಬ ಕಲಾವಿದನಾಗಿಯೇ. ಸರ್ಟಿಫಿಕೇಟ್‌ ಎಂದರೆ ಗುರುವಿನ ಮೊಹರಷ್ಟೇ. ಕಲಿತದ್ದು, ರೂಢಿಸಿಕೊಂಡದ್ದು, ದಕ್ಕಿಸಿಕೊಂಡದ್ದೇ ಲಾಭ. ನಿರಂತರ ಅಭ್ಯಾಸ ಹಾಗೂ ಸ್ವಪ್ರಯತ್ನವೇ ದಾರಿದೀಪ. ಈ ಕಾಲೇಜು, ಕೋರ್ಸ್‌ ಎಲ್ಲವೂ ಪ್ರೊಫೆಸರ್‌, ಡಾಕ್ಟರ್‌ಗಳನ್ನು ಸೃಷ್ಟಿಸಬಲ್ಲವು; ಶ್ರೇಷ್ಠ ಕಲಾವಿದರನ್ನಲ್ಲ. ಕೋರ್ಸ್‌ ಮುಗಿದ ಮೇಲೂ ಕಲಾವಿದನಾಗಲು ಮತ್ತೆ ಒಬ್ಬ ಗುರುವಿನಲ್ಲಿ ಕಲಿಯಬೇಕು. ಈ ಮಾತು ಎಲ್ಲ ಕಲೆಗಳಿಗೂ ಅನ್ವಯ.

ರಿಯಾಜ್‌ ಮತ್ತು ಕಲಾವಿದ
ನನ್ನ ದೃಷ್ಟಿಯಲ್ಲಿ ಸಂಗೀತಗಾರ ನಡೆಸುವುದೆಲ್ಲವೂ ರಿಯಾಜ್‌. ಕಛೇರಿಯೂ ಕೂಡ. ಪೂರ್ವಸಿದ್ಧತೆ ಅವನ ಗಾನ ಸೃಷ್ಟಿಗೆ ಬೆಂಬಲವಷ್ಟೇ ಹೊರತು ಒಂದಾದ ಮೇಲೆ ಮತ್ತೂಂದು ಎಂಬಂತೆ ಕಂಠಪಾಠ ಮಾಡಿ ಒಪ್ಪಿಸುವ ಮಾದರಿಯಲ್ಲ. ಕಲಿಕೆಯ ಒಂದು ಹಂತ ತಲುಪಿದ ಮೇಲೆ ಇದುವರೆಗೆ ಮಾಡಿದ್ದು ಏನು? ಸರಿಯೇ? ಎಂಬ ಶೋಧ ನಮ್ಮೊಳಗೇ ಆರಂಭವಾಗುತ್ತದೆ. ರಿಸರ್ಚ್‌ ಎಂದರೆ ಅದೇ, ಹುಡುಕಾಟ. ಅದೇ ರಾಗಗಳು, ಅದೇ ಸ್ವರಗಳು, ಅದೇ ತಾಳಗಳು, ಬಂದಿಶ್‌ಗಳು… ಅದರಲ್ಲೇ ಹೊಸತರ ಸೃಷ್ಟಿಯ ಸವಾಲು. ರಿಯಾಜ್‌ ಎಂದರೆ ಪುನರಾವರ್ತನೆಯಲ್ಲ; ಹೊಸತನ್ನು ಸೃಷ್ಟಿಸುವ ಪ್ರಯತ್ನ. ಪ್ರತೀ ಬಾರಿಯೂ ಹೊಸತೇನೋ ಹೊಳೆ ಯುತ್ತದೆ. ನಮ್ಮ ಹಿರಿಯರ ಸೃಷ್ಟಿಯನ್ನು ಆಧರಿಸಿಯೇ ಮತ್ತೆ ಹೊಸತರ ಸೃಷ್ಟಿ, ಪರಿಷ್ಕರಣೆಗೆ ಪ್ರಯತ್ನಿಸುತ್ತೇವೆ. ಹಾಗಾಗಿ ಅದು ಹೊಸತರ ಶೋಧ.

ಕೆಲವರ ಮೇಲೆ ಹಾಡಿದ್ದೇ ಹಾಡುತ್ತಾರೆ ಎಂಬ ಅಪವಾದವಿದೆ. ಆದರೆ ನಿಜವಾಗಿಯೂ ಹೇಳುವುದಾದರೆ ಒಬ್ಬ ಸಂಗೀತಗಾರನಿಗೆ ಎಲ್ಲ ರಾಗಗಳ ಪರಿಚಯವಿರುತ್ತದೆ; ಆಪ್ತತೆಯಲ್ಲ. ರಾಗ ತಿಳಿದ ಮಾತ್ರಕ್ಕೆ ಎಲ್ಲವನ್ನೂ ಹಾಡುತ್ತಾರೆ ಎನ್ನುವುದು ಸುಳ್ಳು. ರಾಗಗಳೊಂದಿಗೆ ಆತ್ಮೀಯತೆ, ಒಡನಾಟ, ಸಾಂಗತ್ಯ ಅಗತ್ಯ. ಇವು ಒಂದು ರೀತಿಯಲ್ಲಿ ಸಂಬಂಧಿಕರಿದ್ದಂತೆ. ರಾಗಗಳಿಗೂ ಸ್ವಭಾವಗಳಿವೆ. ಕಲಾವಿದರು ತಮ್ಮ ಸ್ವಭಾವಕ್ಕೆ ಹೊಂದುವಂಥವುಗಳನ್ನು ಒಪ್ಪಿಕೊಂಡು ಜೀವನಪರ್ಯಂತ ಅವುಗಳೊಂದಿಗೇ ಬದುಕುತ್ತಾರೆ. ಬೇರೆ ರಾಗಗಳು ಬೇಕೆನಿಸದು. ಅವುಗಳನ್ನೇ ಹೊಸತೆನ್ನುವಂತೆ, ಶ್ರೋತೃಗಳು ಕೇಳುವ ಹಾಗೆ, ಕೇಳಲು ಬಯಸುವ ಹಾಗೆ ಪ್ರಸ್ತುತಪಡಿಸುತ್ತಿರುತ್ತಾರೆ.

ಪ್ರಯೋಗಶೀಲತೆ ಹಾಗೂ ಶುದ್ಧತೆ
ಇನ್ನು ಶುದ್ಧತೆ. ಇದು ರಾಗಕ್ಕಿರಬೇಕೋ, ಭಾವಕ್ಕೋ ಅಥವಾ ಕಲಾವಿದನಿಗೋ ಎಂಬ ಪ್ರಶ್ನೆ ಇದೆ. ರಾಗಕ್ಕೆ ಶುದ್ಧತೆ ಇದ್ದೇ ಇದೆ. ಲಕ್ಷಣಗಳಿವೆ, ನಿರ್ದಿಷ್ಟ ಸ್ವರಗಳಿವೆ. ರಾಗಕ್ಕೆ ಜೀವ ತುಂಬಬೇಕು. ಬರೀ ಆರೋಹ, ಅವರೋಹ ಹೇಳಿದರೆ ಸಾಕಾಗದು. ಆಲಾಪ, ಲಯಕಾರಿ ಇತ್ಯಾದಿ ಸೇರಿದರೇ ರಾಗ. ಒಂದು ಬಂದಿಶ್‌ನಲ್ಲಿರುವ ಪಾತ್ರಗಳನ್ನು ಶ್ರೋತೃಗಳ ಕಣ್ಣಿಗೆ ಕಟ್ಟಿಕೊಡುವ ದೃಷ್ಟಿಕೋನ, ಪ್ರಯತ್ನವಿರಬಹುದು. ಸಂಗೀತದಲ್ಲಿ ಸಾಮಾನ್ಯವಾಗಿ ಭಕ್ತಿ ಹಾಗೂ ಶೃಂಗಾರ ಎರಡು ಪ್ರಮುಖ ರಸಗಳು. ಅವುಗಳಿಗೆ ಸಂಬಂಧಿಸಿ ಒಬ್ಬ ಭಕ್ತನ ಪಾತ್ರ, ಪ್ರಿಯಕರ- ಪ್ರಿಯತಮೆಯ ಪಾತ್ರ, ಒಂದು ಸಂದರ್ಭ, ಸನ್ನಿವೇಶ ಇರುತ್ತದೆ. ಅದನ್ನು ಪ್ರಸ್ತುತಪಡಿಸುವ ನಾವು ಸ್ವರ-ಲಯಗಳ ಸೂಕ್ತ ಹೊಂದಾಣಿಕೆಯ ಮೂಲಕ ಆ ಪಾತ್ರಗಳೇ ಆಗುತ್ತಾ, ಆ ಭಾವವನ್ನು ಅನುಭವಿಸುತ್ತಾ ಇಡೀ ವಾತಾವರಣವನ್ನು ಮರು ಸೃಷ್ಟಿಸಬೇಕು. ಅಂಥ ಪ್ರಯತ್ನಗಳು ಒಂದು ಕಲಾಕೃತಿಯಾಗಿ ಶೋಭಿಸಬಲ್ಲದು. ಸಂಗೀತವೂ ಭಾಷೆಯಾದ್ದರಿಂದ ಭಾವ ತುಂಬಿ ಪ್ರಸ್ತುತಪಡಿಸಬೇಕು. ಹಾಗಾಗಿ ಶುದ್ಧತೆ ಎನ್ನುವುದು ಎಲ್ಲದರ ಆಧಾರ.
ಆದರೆ ಈ ಶುದ್ಧತೆ ಎನ್ನುವುದು ನಿಂತ ನೀರಲ್ಲ; ಹರಿಯುವ ಝರಿ. ಹಾಗಾಗಿ ಕಾಲಕಾಲಕ್ಕೆ ಪ್ರಯೋಗಗಳು ನಡೆಯುತ್ತಿರುತ್ತವೆ. ಒಬ್ಬ ಪ್ರತಿಭಾವಂತ ಕಲಾವಿದ ಯಾವುದೋ ರಾಗದಲ್ಲಿ ಇಷ್ಟು ದಿನ ಅನುಸರಿಸಿದ್ದನ್ನು ಬಿಟ್ಟು ಮತ್ತೇನೋ ಹೊಸತನ್ನು ಪ್ರಯತ್ನಿಸುತ್ತಾನೆ. ಅದನ್ನು ಜನ ಒಪ್ಪಿಕೊಳ್ಳುತ್ತಾರೆ. ಪ್ರಯೋಗಶೀಲತೆಯೂ ಪರಂಪರೆಯ ಭಾಗ.

ಪರಂಪರೆಯ ಉಳಿವಿಗೆ ಶುದ್ಧತೆ ಒಂದು ಹಂತದವರೆಗೆ ಬೇಕು. ಆಮೇಲೆ ನಿಮ್ಮಿಂದಲೇ ಹೊಸ ಸೃಷ್ಟಿ ಸಾಧ್ಯವೆನಿಸುವಾಗ ತಡೆ ಬೇಕಿಲ್ಲ. ಸಂಗೀತ ನಿಂತ ನೀರಲ್ಲ; ಪ್ರವಹಿಸುವ, ಅನೇಕ ರೂಪಗಳನ್ನು ಪಡೆದುಕೊಳ್ಳುವ ಪ್ರವಾಹ. ಕಲಾವಿದ‌ನಿಗೆ ಸತತ ಶೋಧದ ದೃಷ್ಟಿ ಇದ್ದರೆ ಹೊಸತರ ಸೃಷ್ಟಿ ಸಾಧ್ಯ.

ರಂಜನೆ, ಗಿಮಿಕ್‌ಗಳು ಹಾಗೂ ಪರಂಪರೆ
ಈ ಹಿಂದೆ ಒಂದು ಕಛೇರಿಗೆ ಇಷ್ಟೊಂದು ವಾದ್ಯಗಳು ಬೇಕಾ ಎನಿಸುತ್ತದೆ. ಒಂದು ತಾಳ, ತಬಲ, ಹಾರ್ಮೋನಿಯಂ ಅಷ್ಟೇ. ಪಂ| ಭೀಮಸೇನ ಜೋಷಿ ಕಾಲದವರೆಗೂ ಹೀಗೆಯೇ ಇತ್ತು. ರಂಜಿಸುವ ನೆಪದಲ್ಲಿ ಈಗ ಚಮತ್ಕಾರಿಕ ಅಂಶಗಳೂ ಸಂಗೀತ ಕಛೇರಿಯನ್ನು ಆವರಿಸಿಕೊಳ್ಳುತ್ತಿವೆ. ಹಿಂದುಸ್ತಾನಿಯಲ್ಲಿ ತಾನ್‌ಗಳ ವಿಷಯದಲ್ಲಿ ಹೀಗೆ ಹೇಳಬಹುದು. ಬಹಳ ವೇಗದಲ್ಲಿ ತಾನ್‌ ಪ್ರಸ್ತುತಪಡಿಸುವವನು ದೊಡ್ಡ ಕಲಾವಿದ ಎನಿಸಿಕೊಳ್ಳುತ್ತಾನೆ, ಕೆಲವೊಮ್ಮೆ ಶ್ರೋತೃಗಳೂ ಚಪ್ಪಾಳೆ ತಟ್ಟಿ ಬೆಂಬಲಿಸುತ್ತಾರೆ. ನಿಜವಾಗಿ ರಾಗ ಅರಳುವುದು ಆಲಾಪನೆಯಲ್ಲಿ, ತಾನ್‌ ಒಂದು ಉಪಸಂಹಾರವಿದ್ದಂತೆ. ಈಗ ವಿಷಯಕ್ಕಿಂತ ಉಪಸಂಹಾರವೇ ಮುಖ್ಯ ಸ್ಥಾನ ಆಕ್ರಮಿಸಿಕೊಳ್ಳುತ್ತಿದೆ. ಸತ್ಯ, ಅಷ್ಟು ಸೂಕ್ಷ್ಮಅಂಶಗಳನ್ನು ಗ್ರಹಿಸುವ ತರಬೇತಿ ಶ್ರೋತೃಗಳಿಗೂ ಬೇಕು. ಆದರೂ ಇವೆಲ್ಲವೂ ರಸಾನುಭವಕ್ಕೆ ಅಡ್ಡಿಯಾದ ದಿನ ಕೊಚ್ಚಿ ಹೋಗುತ್ತವೆ.

ಘರಾನಾಗಳು, ಪರಂಪರೆ, ಸಾಹಿತ್ಯ
ಘರಾನಾ ಶೈಲಿ ಎಂದೂ ಬದಲಿಸದ ಸಂಗತಿಯೇ ಎಂಬ ಮಾತಿದೆ. ಹಾಗಲ್ಲ. ಪಂ| ಕುಮಾರ ಗಂಧರ್ವ ಅವರೇ ಘರಾನಾ ಬಗ್ಗೆ ಒಂದು ಮಾತು ಹೇಳಿದ್ದಾರೆ; ಟೈಪ್‌ರೈಟರ್‌ನಿಂದ ಹಲವು ಪ್ರತಿಗಳನ್ನು ತೆಗೆಯುತ್ತೇವೆ. ಅಂಥ ಕೊನೆಯ ಪ್ರತಿ ಈ ಘರಾನಾಗಳು. ಏನೋ ಬರೆದಿರುವಂತೆ ತೋರುತ್ತದೆ, ಓದಲು ಬರುವುದಿಲ್ಲ. ಅದರರ್ಥ ಶುದ್ಧವಾಗಿ ಉಳಿಯವು ಎಂದಲ್ಲವೇ. ಕೆಲವು ಸೇರಬಹುದು, ಕೆಲವು ಕಳೆಯಬಹುದು, ಕರಗಬಹುದು. ಈಗ ಎಲ್ಲ ಘರಾನಾಗಳ ಒಳ್ಳೆಯ ಅಂಶಗಳನ್ನು ಮತ್ತೂಂದರ ಜತೆ ಬೆಸೆಯುವ ಮಾದರಿ ಆರಂಭವಾಗಿದೆ. ಒಂದು ರೀತಿ ಕಲಸು ಮೇಲೋಗರ ಎನಿಸಿದರೂ ಈ ಪ್ರಕ್ರಿಯೆ ಒಳ್ಳೆಯದೇ. ಎಲ್ಲದರ ಒಳ್ಳೆಯ ಅಂಶಗಳನ್ನು ಸ್ವೀಕರಿಸುವ ಪ್ರಯತ್ನ ಸಂಗೀತವನ್ನು ಸಮೃದ್ಧಗೊಳಿಸುವುದಕ್ಕಾಗಿ. ಆ ಮುಕ್ತತೆ, ಆಯ್ಕೆಯ ಪ್ರಬುದ್ಧತೆ ಹಾಗೂ ಎಚ್ಚರ ಕಲಾವಿದನಿಗೆ ಇರಬೇಕು.

ಬಂದಿಶ್‌ನ ಪ್ರಸ್ತುತಿಯಲ್ಲಿ ಸಾಹಿತ್ಯಕ್ಕೆ ಪ್ರಾಮುಖ್ಯ ಕಡಿಮೆ ಎಂಬ ಮಾತು ಸರಿಯಲ್ಲ. ಕೆಲವು ಕಲಾವಿದರ ಪ್ರಸ್ತುತಿಯಲ್ಲಿ ಸಾಹಿತ್ಯ ಅಸ್ಪಷ್ಟವಾಗಿ ಕೇಳಿಸ ಬಹುದು. ಅದಕ್ಕೆ ಅವರವರ ಅಭ್ಯಾಸ ಕ್ರಮ ಕಾರಣ. ಆದರೆ ಕಲಾವಿದನಿಗೆ ಆ ಸಾಹಿತ್ಯದ ಒಟ್ಟು ಕಲ್ಪನೆ, ಪಾತ್ರ, ಸಂದರ್ಭದ ಅರಿವಿಲ್ಲದಿದ್ದರೆ ಪ್ರಸ್ತುತಿಯಲ್ಲಿ ಭಾವ ತುಂಬಲಾಗದು. ರಾಗದ ಮಾಧುರ್ಯದ ಜತೆ ಸಾಹಿತ್ಯವೂ ಅರ್ಥ ವಾಗುವಂತಿದ್ದರೆ ಪ್ರೇಕ್ಷಕರಿಗೆ ದುಪ್ಪಟ್ಟು ಖುಷಿ.

ಕಛೇರಿ ಮತ್ತು ಕಲಾವಿದ
ಒಬ್ಬ ಕಲಾವಿದನ ಭವಿಷ್ಯ, ಸೋಲು-ಗೆಲುವನ್ನು ನಿರ್ಧರಿಸು ವುದು ನನ್ನ ದೃಷ್ಟಿಯಲ್ಲಿ ಕಛೇರಿಯೇ. ಎಷ್ಟೇ ಅಭ್ಯಾಸ ಮಾಡಿದರೂ ಪ್ರೇಕ್ಷಕರೆದುರಿನ ಪ್ರಸ್ತುತಿ ಒಪ್ಪವಾಗಿರಲೇಬೇಕು. ಶಾಸ್ತ್ರಗಳ ಲೆಕ್ಕದಲ್ಲಿ ಸ್ವರಗಳನ್ನು ಹಚ್ಚಲು ಒಂದು ಕ್ರಮವಿದೆ. ಅದನ್ನು ಅನುಸರಿಸದಿದ್ದರೆ ಕಛೇರಿ ಕೆಟ್ಟು ಹೋಗುತ್ತದೆ. ಅಲ್ಲಿ ಅವನು ಸೋತಂತೆಯೇ. ಅದು ಆ ದಿನಕ್ಕೇ ಇರಬಹುದು. ಆದರೂ ಸೋತಂತೆಯೇ. ಪ್ರೇಕ್ಷಕರು ಅಪಸ್ವರವನ್ನು ಒಪ್ಪುವುದಿಲ್ಲ. ಈ ಮಾತು ತಾಳಗಳಿಗೂ ಅನ್ವಯ. ಲೆಕ್ಕಾಚಾರ ಹೆಚ್ಚು ಕಡಿಮೆಯಾದರೆ ಖತಂ. ಪ್ರೇಕ್ಷಕರೇ ಕಲಾವಿದನ ಗುಣಮಟ್ಟವನ್ನು ನಿರ್ಧರಿಸುವವರು. ಪುಣೆಯ ಸವಾಯಿ ಗಂಧರ್ವ ಉತ್ಸವದಲ್ಲಿ ಎಷ್ಟೇ ಪ್ರಸಿದ್ಧರಾಗಿದ್ದರೂ ಸರಿಯಾಗಿ ಹಾಡದಿದ್ದರೆ ಶ್ರೋತೃಗಳು ಸಹಿಸುವುದೇ ಇಲ್ಲ. 15-20 ನಿಮಿಷಗಳಲ್ಲೇ ಎಬ್ಬಿಸಿಬಿಡುತ್ತಾರೆ. ಎಂಥೆಂಥ ಕಲಾವಿದರಿಗೂ ಈ ಅನುಭವ ಆಗಿದೆ. ಹಾಗಾಗಿ ಕಲಾವಿದನಿಗೆ ಪ್ರತೀ ಕಛೇರಿಯೂ ಅಗ್ನಿ ಪರೀಕ್ಷೆ. ಕಲಾವಿದನಿಗೆ ಇತಿಹಾಸ (ಒಳ್ಳೆಯ ಹೆಸರು ಇತ್ಯಾದಿ) ಅವಕಾಶ ಪಡೆಯಲಷ್ಟೇ ವಿನಾ ಬೇರೆ ಯಾವುದಕ್ಕೂ ಅಲ್ಲ.

ಸಣ್ಣದೊಂದು ಅಳುಕಿನ ಎಚ್ಚರಿಕೆ ಮತ್ತು ಜವಾಬ್ದಾರಿ
ಸಂಗೀತಗಾರನಿಗೆ ಕಛೇರಿಗೆ ಮುನ್ನ ಸಣ್ಣದೊಂದು ಅಳುಕು ಇರುತ್ತದೆ. ಅಭ್ಯಾಸದ ವಿಶ್ವಾಸವಿದ್ದರೂ ನಮ್ಮ ಶಾರೀರವೇ ಸಾಧನ-ವಾದ್ಯ. ಸಣ್ಣದೊಂದು ಹೆಚ್ಚು ಕಡಿಮೆಯಾದರೂ ಆತಂಕ ಹೆಚ್ಚಾಗುತ್ತದೆ. ಧೈರ್ಯ ಕುಂದುತ್ತದೆ. ಇಂಥ ಸಂದರ್ಭ ಕಡಿಮೆ. ಆದರೂ ಆತಂಕ ತಪ್ಪಿದ್ದಲ್ಲ. ಗುಲಾಂ ಮುಸ್ತಫಾ ಎಂಬ ದೊಡ್ಡ ಕಲಾವಿದರಿದ್ದರು. ಅವರು ಹುಬ್ಬಳ್ಳಿಯ ಒಂದು ಕಛೇರಿಯಲ್ಲಿ ಬಹಳ ಚೆನ್ನಾಗಿ ಹಾಡುತ್ತಿದ್ದರು. ಹಾಡುತ್ತಾ ಹಾಡುತ್ತ ಅರ್ಧ ಗಂಟೆಯಾದ ಮೇಲೆ ಮೇಲಿನ ಷಡ್ಜ ಹತ್ತಲೇ ಇಲ್ಲ. ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲೇ ಇಲ್ಲ. ಕೈ ಮುಗಿದು ಎದ್ದುಹೋದರು. ಇದು ಎಂಥ ಹಿಂಸೆಯೆಂದರೆ ಹೇಳಲಿಕ್ಕಾಗದು, ಅನುಭವಿಸಿದವರಿಗೇ ಗೊತ್ತು. ಈ ಮಾತು ವಾದ್ಯದವರಿಗೂ ಅನ್ವಯ. ಅದಕ್ಕೇ ಅತಿಯಾದ ವಿಶ್ವಾಸಕ್ಕಿಂತ ಸಣ್ಣದೊಂದು ಅಳುಕಿದ್ದರೆ ಎಚ್ಚರ ಇರುತ್ತದೆ, ಜವಾಬ್ದಾರಿಯೂ ಇರುತ್ತದೆ. ಇದು ನನ್ನ ಅಭಿಪ್ರಾಯ

ವರ್ಚುವಲ್‌ ಜಗತ್ತು, ಆತ್ಮಸಂತೋಷ, ಪರಿಪೂರ್ಣತೆ
ವರ್ಚುಯಲ್‌ ಜಗತ್ತಿನ ಬಗ್ಗೆ ಕೇಳುತ್ತಿದ್ದೇವೆ. ಪ್ರೇಕ್ಷಕರೆದುರು ಪ್ರಸ್ತುತಪಡಿಸುವಾಗ ಸಿಗುವ ಸುಖ, ಖುಷಿ ಈ ವರ್ಚುವಲ್‌ನಲ್ಲಿ ಸಾಧ್ಯವಿಲ್ಲ. ಪ್ರೇಕ್ಷಕರೆದುರಿನ ಕಾರ್ಯಕ್ರಮದಲ್ಲಿ ತತ್‌ಕ್ಷಣವೇ ಫ‌ಲ. ಪ್ರೇಕ್ಷಕರ ಪ್ರತಿಕ್ರಿಯೆ, ಸ್ಪಂದನೆ ತತ್‌ಕ್ಷಣವೇ ಸಿಗುತ್ತದೆ. ಅದು ಕಲಾವಿದನಿಗೆ ಬಹಳ ಮುಖ್ಯ. ಅದೇ ವರ್ಚುವಲ್‌ನಲ್ಲಿ ನಾನು ಇಲ್ಲಿ ಕೆಮರಾಗಳ ಮುಂದೆ ಹಾಡುವುದು ಲಕ್ಷಾಂತರ ಮಂದಿಗೆ ತಲುಪಬಹುದು. ಆದರೆ ಅವರ ಪ್ರತಿಕ್ರಿಯೆ ಕಲಾವಿದನಿಗೆ ತಲುಪದು. ಒಬ್ಬ ಕಲಾವಿದನಿಗೆ ಪ್ರೇಕ್ಷಕರ ಸ್ಪಂದನೆ ಅವಶ್ಯ.

ಹಾಗಾದರೆ ಆತ್ಮಸಂತೋಷಕ್ಕೆ ಹಾಡುವುದು ಎಂಬ ಮಾತು ಏನು ಎಂದು ಕೇಳಬಹುದು. ಆ ಹಂತಕ್ಕೆ ತಲುಪಲು ಪ್ರಶಂಸೆ, ಪ್ರಶಸ್ತಿ, ಪುರಸ್ಕಾರ ಎಲ್ಲವನ್ನೂ ಮೀರಿ ನಿಲ್ಲಬೇಕು. ಆ ಮನಃಸ್ಥಿತಿಯನ್ನು ಸಾಧಿಸುವುದು, ತಲುಪುವುದು ಒಂದು ತಪಸ್ಸು. ಬಹಳ ಸಾಧನೆ, ತಾಳ್ಮೆ ಬೇಕು. ಮನುಷ್ಯ ಮಾತೃತ್ವವನ್ನು ಮೀರಿ ಸಂತನ ಸ್ಥಿತಿ ಮುಟ್ಟಬೇಕು. ಪ್ರಾಮಾಣಿಕವಾಗಿದ್ದವರು ನನ್ನ ಮೊದಲ ಶ್ರೋತೃ ನಾನೇ ಎಂದುಕೊಂಡು ಆ ಸ್ಥಿತಿಯನ್ನು ಮುಟ್ಟಲು ಪ್ರಯತ್ನಿಸುತ್ತಾರೆ. ಆ ಸ್ಥಿತಿಯಲ್ಲಿ ರಾಗವೂ ಬೇಕಾಗದು. ಕೇವಲ ಓಂಕಾರ ಹಚ್ಚಿಕೊಂಡರೆ ಸಾಕು, ಅದೇ ಪರಮಸುಖ. ಇದೇ ಪರಿಪೂರ್ಣ ತೆಯೋ ಎಂದರೆ, ಗೊತ್ತಿಲ್ಲ. ಯಾಕೆಂದರೆ ಪರಿಪೂರ್ಣತೆ ಎಂಬುದಿಲ್ಲ. ಅಲೌಕಿಕ ವಾದುದನ್ನು ಹೇಗೆ ಯಾವ ಮಾನದಂಡದಿಂದ ಅಳೆಯುತ್ತೀರಿ-ಅದು ಆಕಾಶವಿದ್ದಂತೆ. ನೋಡುವಾಗ ಹಿಡಿಯಬಹುದು ಎನಿಸುತ್ತದೆ. ವಾಸ್ತವವಾಗಿ ಸಾಧ್ಯವಾಗದು. ಅಲೌಕಿಕ ಅನುಭವ ನೀಡುವ ಲಲಿತಕಲೆ ಅಳತೆಗೋಲಿಗೆ ಸಿಗುವಂಥದ್ದೇ ಅಲ್ಲ. ಒಂದುವೇಳೆ ಸಾಂಕೇತಿಕವಾಗಿ ಯಾವುದೋ ಅಳತೆಗೋಲಿನಿಂದ ಅಳೆಯುತ್ತೀರಿ ಎಂದುಕೊಳ್ಳಿ. ಅದು ಅಷ್ಟೇ ಅಲ್ಲ. ಅದನ್ನು ಮೀರಿ ಮತ್ತೇನೋ ಇರುತ್ತದೆ. ಅದಕ್ಕೇ ನಾನು ಆಕಾಶವನ್ನು ಉದಾಹರಿಸಿದ್ದು. ಪೂರ್ಣತೆ ಎಂದರೆ ಏನು, ಎಷ್ಟು ಎಂಬ ವ್ಯಾಖ್ಯೆಯಿಲ್ಲ. ಅದೊಂದಿದೆ ಎನ್ನುವ ಕಲ್ಪನೆ ಇದೆಯಷ್ಟೇ. ಅದರ ಶೋಧವೇ ಎಲ್ಲರ ಪ್ರಯತ್ನ. ಹುಡುಕಾಟ, ಅಲೆದಾಟ ಎಲ್ಲವೂ ಅದೇ.

ನಿಸರ್ಗ, ಸಂಗೀತ ಮತ್ತು ಅಧ್ಯಾತ್ಮ
ಪ್ರಕೃತಿ ಕರಗುತ್ತಿರುವ ಹೊತ್ತಿದು. ನಿಸರ್ಗ ಮತ್ತು ಕಲಾವಿದರ ಸಂಬಂಧದ ಅನನ್ಯತೆಗೆ ಧಕ್ಕೆಯಾಗುತ್ತಿಲ್ಲವೇ? ನಾಳೆ ಪ್ರಕೃತಿಯೇ ಇಲ್ಲವಾದರೆ ಈ ಕಲೆ ಉಳಿದೀತೆ ಎಂಬ ಪ್ರಶ್ನೆಯೂ ಬಂದದ್ದಿದೆ. ಈ ಮಾತು ಬರೀ ಸಂಗೀತಗಾರನಿ ಗಷ್ಟೇ ಅಲ್ಲ, ಎಲ್ಲ ಕಲಾವಿದರಿಗೂ ಸಂಬಂಧಿಸಿದೆ. ಪ್ರಕೃತಿಯ ಪರಿಣಾಮ ಎಲ್ಲರ ಮೇಲೂ ಇದ್ದೇ ಇದೆ. ನಿಸರ್ಗದ ಮಧ್ಯೆ ಇರುವಾಗ ಮನಸ್ಸು ಪ್ರಫ‌ುಲ್ಲವಾಗಿರುತ್ತದೆ. ಅದನ್ನು ಹೊರತುಪಡಿಸಿದಾಗ ಪ್ರಕ್ಷುಬ್ಧವಾಗಿರುತ್ತದೆ ಎಂಬುದು ನಮ್ಮ ಅನುಭವಕ್ಕೆ ಬಂದಿದೆ. ಸಮುದ್ರವನ್ನು ಕಂಡಾಗ ಆ ಅಗಾಧ ಜಲ ರಾಶಿಯ ಅನುಭವ ಅಚ್ಚರಿ ಹುಟ್ಟಿಸುತ್ತದೆ. ಹಿಮಾಲಯದ ಎದುರು ಆಗುವ ಅನುಭವ ಬೇರೆ. ಈ ಎಲ್ಲ ಅದ್ಭುತಗಳನ್ನು ಕಂಡಾಗಿನ ಅನುಭವ ನಮ್ಮ ಕಲೆಯ ಮೇಲೆ, ಕಲಾಕೃತಿಯ ಮೇಲೆ ಪರಿಣಾಮ ಬೀರುತ್ತದೆ. ಆ ಅನು ಭವದ ಜತೆಗೆ ನಮ್ಮ ಕಲೆಯ ಪ್ರಸ್ತುತಿಯನ್ನು ಸಮೀಕರಿಸಲು ಯತ್ನಿಸುತ್ತೇವೆ. ಸಮುದ್ರವನ್ನು ಕಂಡಾಗ ಹೊರಟ ಆಯಾಚಿತ ಉದ್ಗಾರವೇ ಒಂದು ಸ್ವರ ಹಚ್ಚಿದಾಗಲೂ ಹೊರಹೊಮ್ಮಬಹುದು. ಮುಂದೊಂದು ದಿನ ಪ್ರಕೃತಿ ಏಕ ರೂಪತೆಗೆ ಬಂದುಬಿಟ್ಟರೆ ಎಂಬ ಆತಂಕ ಸಹಜ. ಆದರೆ ಅದು ಸಾಧ್ಯವಿಲ್ಲ. ಪ್ರಕೃತಿಯ ಮೂಲ ಸ್ವರೂಪವೇ ವೈವಿಧ್ಯ. ನಮ್ಮ ಊರು ಕೂಡ 50 ವರ್ಷಗಳಲ್ಲಿ ಬೆಳೆದಿದೆ. ಆಧುನಿಕ ಸೌಲಭ್ಯಗಳು ಬಂದಿವೆ, ಬದುಕಿನಲ್ಲಿ ಪ್ರಕ್ಷುಬ್ಧತೆ ಹೆಚ್ಚಿರಬಹುದು. ಪ್ರಕೃತಿಯಲ್ಲಿ ಆ ಬದಲಾವಣೆಯಾಗಿಲ್ಲ. ಪ್ರಕ್ಷುಬ್ಧತೆ ಎಂದರೆ ಆಧುನೀಕರಣ-ಸುಖ ಸೌಲಭ್ಯದ ಸೌಕರ್ಯಗಳಿಂದ ನಮ್ಮ ಮನಸ್ಸು ಪ್ರಕ್ಷುಬ್ಧವಾಗಿದೆ. ಎಲ್ಲವೂ ಸುಲಭ ಎನಿಸಿಬಿಡುತ್ತದೆ, ಹಾಗಾಗಿ ದಕ್ಕಿಸಿಕೊಳ್ಳುವ ಸಿಗುವ ಖುಷಿ-ಥ್ರಿಲ್‌ ಇಲ್ಲ. ಕನಿಷ್ಠ ಪ್ರಯತ್ನವೂ ಇಲ್ಲದೇ ಸುಲಭವಾಗಿ ಸಿಗುವುದೇ ಈಗಿನ ಸಮಸ್ಯೆ. ಅದು ನಮ್ಮೊಳಗಿನ ಹಪಾಹಪಿತನ ಹೆಚ್ಚಿಸುತ್ತದೆ. ಸುಖ, ಸಂತೋಷ ಎನ್ನುವುದೆಲ್ಲ ತಾತ್ಕಾಲಿಕ ಎನ್ನುವಂತಾಗಿದೆ.
ಸಂಗೀತ ಮತ್ತು ಅಧ್ಯಾತ್ಮ ಒಟ್ಟಿಗೇ ಸಾಗುವಂಥದ್ದು. ಇದು ತಿಳಿದದ್ದೂ ಇತ್ತೀಚೆಗೆ. ಹಿಂದಿನ ಕಾಲದಿಂದ ಬಂದ ವೇದಗಳಿವೆ, ಮಂತ್ರಗಳಿವೆ, ಶ್ಲೋಕ ಗಳಿವೆ… ಸಣ್ಣವರಿದ್ದಾಗ ಗೊತ್ತಿಧ್ದೋ, ಗೊತ್ತಿಲ್ಲದೆಯೋ, ಒತ್ತಾಯಕ್ಕೋ ಕಲಿತಿ ದ್ದೇವೆ. ಈಗ ವಯಸ್ಸಾಗುತ್ತಾ ಆಗುತ್ತಾ ಅವೆಲ್ಲವೂ ನೆನಪಾಗುತ್ತಿವೆ. ಮಾನಸಿಕ ಪೂಜೆ. ಈ ಮನಃಸ್ಥಿತಿ ಯಾಕೆ ಆರಂಭವಾಯಿತೆಂಬುದೂ ನನ್ನೊಳಗಿನ ಪ್ರಶ್ನೆ. ಅದಕ್ಕೆ ಉತ್ತರ ಹುಡುಕಿಕೊಳ್ಳಬೇಕಿದೆ. ಇದು ವಯಸ್ಸಾಯಿತೆಂಬ ಭಯವಲ್ಲ. ಈ ಮೂಲಕ ಹೆಚ್ಚು ಅಂತರ್ಮುಖೀಯಾಗುತ್ತೇವೆ. ಸಂಗೀತ ಕಲಿಯುವಾಗಲೂ ಅದೊಂದು ಶಾಸ್ತ್ರ, ವಿದ್ಯೆ ಎನಿಸಿತ್ತು. ಈಗ ಅದರಲ್ಲೂ ಅಧ್ಯಾತ್ಮ ಇದೆ ಎನ್ನಿಸುತ್ತಿದೆ. ಇದೂ (ಸಂಗೀತ) ಕೊಂಡೊಯ್ಯಲಾಗದ ಸ್ಥಿತಿಗೆ ಅದು (ಅಧ್ಯಾತ್ಮ) ಕೊಂಡೊಯ್ಯಬಲ್ಲದು ಅನ್ನಿಸತೊಡಗಿದೆ.

ಅಲ್ಲಿ ಸಿಕ್ಕಿದ್ದೇ ಅದೃಷ್ಟ  , ಅದೇ ಅನುಭವ
ಇಡೀ ಕಾರ್ಯಕ್ರಮವೇ ತತ್ಕಾಲೀನ ಸೃಷ್ಟಿ, ಎರಡು ತಾನ್‌ಪುರ ಹಚ್ಚಿಕೊಂಡು ಯಾವುದೋ ಒಂದು ರಾಗವನ್ನು ಆಯ್ದುಕೊಂಡು ಆರಂಭ ಮಾಡಿಕೊಳ್ಳುತ್ತೇವಷ್ಟೇ. ಜತೆಗೆ ಒಂದು ಬಂದಿಶ್‌ ಇರುತ್ತದೆ. ತಾಳವಿರುತ್ತದೆ. ತಾಂತ್ರಿಕವಾಗಿ ಕೆಲವು ಅಂಶಗಳನ್ನು ನಿರ್ಧರಿಸಿರುತ್ತೇವೆ. ಆದರೆ ಅದು ಎಲ್ಲಿಗೆ ಒಯ್ಯುತ್ತದೆ, ಏನನ್ನು ಸೃಷ್ಟಿಸುತ್ತದೆ ಎಂಬುದೆಲ್ಲ ಆ ಕ್ಷಣದ್ದು. ಹಾಡುತ್ತಾ ಹಾಡುತ್ತ ಹೊಸದೇನೋ ಹೊಳೆಯಲೂಬಹುದು, ನಮಗೇ ಗೊತ್ತಿಲ್ಲದಂಥ ಅನುಭವವೂ ದಕ್ಕ‌ಬಹುದು. ಖಯಾಲ್‌ ಎಂದರೆ ಅದೇ, ಕಲ್ಪನೆ ಎಂದರ್ಥ. ನಮ್ಮ ಕಲ್ಪನೆ ಏನಿರುತ್ತದೋ ಅದಕ್ಕೆ ಅನುಗುಣವಾಗಿ ಹಲವು ವಲಯಗಳು ಸೃಷ್ಟಿಯಾಗುತ್ತವೆ. ಆದ ಕಾರಣ ಅದು ಸಿದ್ಧರೂಪವಲ್ಲ, ಹೊಸ ಸೃಷ್ಟಿ. ಪ್ರತೀ ಕಛೇರಿಯೂ ಸಂಗೀತಗಾರನಿಗೆ ಶೋಧವೂ ಹೌದು, ಉಪಾಸನೆಯೂ ಹೌದು. ಲಲಿತ ಕಲೆಯ ಉಪಾಸನೆ ಬದುಕಿಗೆ ಅವಶ್ಯ. ಅದು ಯಾವುದೇ ಇರಬಹುದು. ಸಂಗೀತವನ್ನೇ ನೋಡೋಣ. ಎಷ್ಟು ಮಂದಿ ಆ ಬಗೆಗಿನ ಆಸಕ್ತಿ, ಅಭಿರುಚಿ ಉಳಿಸಿಕೊಂಡಿದ್ದಾರೆ? ಸಂಗೀತ, ಸಾಹಿತ್ಯ, ಕಲೆ ಸಂಸ್ಕೃತಿ ಇತ್ಯಾದಿ ಕುರಿತು ಅಷ್ಟಾಗಿ ಗಮನವಿಲ್ಲ, ಆಸಕ್ತಿಯಿಲ್ಲ. ಅದು ಇಲ್ಲದೆಯೇ ಬದುಕಬಹುದೆಂಬುದಕ್ಕೆ ಉದಾಹರಣೆಯಾಗುತ್ತಿದ್ದೇವೇನೋ ಎನಿಸುತ್ತದೆ. ಪ್ರೌಢಶಾಲೆ ಮಟ್ಟದಲ್ಲಾದರೂ ಕಡೇಪಕ್ಷ ಪರಿಚಯಾತ್ಮಕವಾಗಿ ಲಲಿತಕಲೆಗಳನ್ನು ತಿಳಿಸುವ-ತಲುಪಿಸುವ ಪ್ರಯತ್ನವಿದ್ದರೆ ಮಕ್ಕಳಲ್ಲಿ ಚೂರಾದರೂ ಆಸಕ್ತಿ, ಅಭಿರುಚಿ ಹುಟ್ಟಬಹುದು.

ಅಭಿರುಚಿ ನಿರ್ಮಾಣ ನಮ್ಮೆಲ್ಲರ ಹೊಣೆ
ಕಲೆ ಕುರಿತು ಅಭಿರುಚಿ ನಿರ್ಮಿಸುವ ಹೊಣೆಗಾರಿಕೆ ಕಲಾವಿದ, ಸಮಾಜ ಹಾಗೂ ಸರಕಾರದ್ದು. ನಮ್ಮಲ್ಲಿ ಶಾಸ್ತ್ರೀಯ ಸಂಗೀತ ಎಂದರೆ ಬಹಳಷ್ಟು ಮಂದಿ ಹಿಂದುಳಿಯುತ್ತಾರೆ. ಯಾವುದು ನಮ್ಮ ಮೇಲೆ ಒಳ್ಳೆಯ ಪರಿಣಾಮ ಬೀರಬಲ್ಲದೋ ಅದನ್ನು ಅರಿಯಬೇಕು. ಕಲಾವಿದನಾಗಲು ಅಲ್ಲದಿದ್ದರೂ ಆಸ್ವಾದಿಸಲು. ನಾನು ಸಂಗೀತ ಕಲಿತು ಇಲ್ಲಿಗೆ ಬಂದಾಗ
ಶಾಸ್ತ್ರೀಯ ಸಂಗೀತದ ವಾತಾವರಣವಿರಲಿಲ್ಲ. ಯಕ್ಷಗಾನವೇ ಹೆಚ್ಚಿತ್ತು. ನನ್ನ ಸಂಗೀತವನ್ನು ಗುರುತಿಸುವವರಿರಲಿಲ್ಲ, ಅನಾಥ ಪ್ರಜ್ಞೆ ಕಾಡತೊಡಗಿತ್ತು. ಕಾಲಕ್ರಮೇಣ ಎಲ್ಲೆಲ್ಲಿ ಪುಟ್ಟ ಕಾರ್ಯಕ್ರಮಗಳಿರುತ್ತದೋ ಅಲ್ಲಿ ಹೋಗಿ ಹಾಡಲು ಅವಕಾಶ ಕೋರಿದೆ. ಸಿಕ್ಕಿದಲ್ಲಿ ಹಾಡಿದೆ. ಜನರಿಗೆ ತಿಳಿಯುತ್ತದೆಯೋ ಇಲ್ಲವೋ ಎಂದು ಯೋಚಿಸಲಿಲ್ಲ. ಕ್ರಮೇಣ ಜನರಲ್ಲಿ ಅಭಿರುಚಿ ಬೆಳೆಯತೊಡಗಿತು. ಮಂಚಿಕೇರಿಯಲ್ಲಿ ಸುಮಾರು 16 ವರ್ಷ ನನ್ನ ಗುರುಗಳ ಸಂಸ್ಮರಣೆಯಲ್ಲಿ ಸಂಗೀತೋತ್ಸವ ನಡೆದಿದೆ. ಎಲ್ಲರ ಸಹಕಾರ ಸಿಕ್ಕಿತು. ದೊಡ್ಡ ದೊಡ್ಡ ಕಲಾವಿದರೆಲ್ಲ ಬಂದು ಹಾಡಿದರು. ಈಗ ಕಟ್ಟಾ ಸಂಗೀತ ಶ್ರೋತೃಗಳು ರೂಪುಗೊಂಡಿದ್ದಾರೆ. ರಾತ್ರಿ ಹೊತ್ತಿಗೆ ಟಿವಿಯ ಬದ‌ಲಿಗೆ ರೇಡಿಯೋ ಹಚ್ಚಿಕೊಂಡು ಸಂಗೀತ ಕೇಳುವವರಿದ್ದಾರೆ. ಹುಬ್ಬಳ್ಳಿ, ಕುಂದಗೋಳ ಎನ್ನದೇ ಎಲ್ಲೇ ಸಂಗೀತ ಕಾರ್ಯಕ್ರಮವಿದ್ದರೂ ಹೋಗುವವರಿದ್ದಾರೆ. ಹಾಗಾಗಿ ಅಭಿರುಚಿ ನಿರ್ಮಿಸುವುದು ಎಲ್ಲರ ಕೆಲಸ ಮತ್ತು ಜವಾಬ್ದಾರಿ.

ನಿರೂಪಣೆ: ಋತುಮಿತ್ರ

ಟಾಪ್ ನ್ಯೂಸ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು ?

India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

kuladalli keelyavudo kannada movie

Kannada Cinema: ಕ್ಲೈಮ್ಯಾಕ್ಸ್‌ ನತ್ತ ʼಕುಲದಲ್ಲಿ ಕೀಳ್ಯಾವುದೋʼ

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.