ರಾಜಕೀಯ ಪಕ್ಷಗಳ ಆರ್ಭಟ; ಮತದಾರ ಇನ್ನೂ “ಮೌನಿ’
Team Udayavani, Feb 14, 2023, 6:30 AM IST
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ನೂರು ದಿನಗಳು ಸಹ ಉಳಿದಿಲ್ಲ. ರಾಜಕೀಯ ಪಕ್ಷಗಳು ಮತದಾರರ ಕೈಹಿಡಿಯಲು ಹಲವು ಕಸರತ್ತುಗಳೊಂದಿಗೆ ಮನೆ ಬಾಗಿಲು ಬಡಿಯುತ್ತಿವೆ. ಆದರೆ ಮತದಾರ ಮಾತ್ರ ಇನ್ನೂ ಯಾವ ಪಕ್ಷದ ಕಡೆಗೂ ತನ್ನ ವಾರೆನೋಟ ಬೀರಿಲ್ಲ. ಮತದಾರ ಪ್ರಭುವಿನ ಮೌನ ಹಾಗೂ ಪ್ರತೀ ಚುನಾವಣೆಯಲ್ಲೂ ನಿರ್ಣಾಯಕ ಪಾತ್ರವಹಿಸುವ ಯಾವ ಪಕ್ಷದ ಕಾರ್ಯಕರ್ತರೂ ಅಲ್ಲದ ತಟಸ್ಥ ಮತದಾರರೇ ಈ ಸಲ ಗೊಂದಲದಲ್ಲಿ ಮುಳುಗಿರುವುದು ರಾಜಕೀಯ ಪಕ್ಷಗಳನ್ನು ಆತಂಕಕ್ಕೆ ದೂಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿಕೊಂಡಿರುವಂತೆ ಅವರವರ ಪಕ್ಷದ ಪರವಾಗಿ ಅಲೆ ಎದ್ದಿಲ್ಲ, ಸದ್ಯಕ್ಕಂತೂ ಯಾವ ಕಡೆಗೂ ಯಾವುದೇ ಗಾಳಿ ಬೀಸುತ್ತಿಲ್ಲ. ಎಲ್ಲ ನಾಯಕರು ತಮ್ಮ ಪಕ್ಷದ ಪರವಾಗಿ ಅಲೆ ಎದ್ದಿದೆ ಎಂದು ಬಿಂಬಿಸಿಕೊಂಡು ಜನಾಭಿಪ್ರಾಯ ರೂಪಿಸಿಕೊಳ್ಳುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ.
ಪ್ರತೀ ಚುನಾವಣೆಯಲ್ಲಿ ಶೇ. 5ರಿಂದ 7ರಷ್ಟು ಮತದಾರರು ರಾಜಕೀಯ ಪಕ್ಷಗಳ ಚುನಾವಣ ಭವಿಷ್ಯ ನಿರ್ಧರಿಸುತ್ತಾರೆ. ಇವರು ಯಾವುದೇ ಪಕ್ಷದ ಕಾರ್ಯಕರ್ತರಲ್ಲ, ಸಾರಸಗಟು ಒಂದೇ ಪಕ್ಷದ ಮತದಾರರೂ ಅಲ್ಲ. ಇವರ ಮತದಾನ ಆಯ್ಕೆ ಪ್ರತೀ ಚುನಾವಣೆಯಲ್ಲೂ ಪಕ್ಷ ಮತ್ತು ಅಭ್ಯರ್ಥಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಇವರ ಮತ ಪಡೆದ ಪಕ್ಷ ಗೆಲುವಿನ ದಡ ಸೇರುತ್ತದೆ. ಇವರನ್ನು “ತಟಸ್ಥ’ ಮತದಾರ ರೆಂದೇ ರಾಜಕೀಯ ಪಕ್ಷಗಳು ಹೇಳುತ್ತವೆ. ಚುನಾವ ಣೆಯ ಕೊನೆದಿನದ ತನಕ ಕಾಯ್ದು ಯೋಚಿಸಿ ಮತ ಹಾಕುವ ಮಂದಿಯೇ ಪ್ರತೀ ಸಲವೂ ನಿರ್ಣಾಯಕರು.
ಇವರ ಒಲವು ಏನೆಂಬುದನ್ನು ತಿಳಿಯಲು ರಾಜಕೀಯ ಪಕ್ಷಗಳಿಗೆ ಇನ್ನೂ ಆಗಿಲ್ಲ. ತಟಸ್ಥ ಮತದಾರರು ಇದುವರೆಗೂ ತಟಸ್ಥರಾಗಿರುವುದೇ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ. ಮೂರು ಪಕ್ಷಗಳ ಆಡಳಿತ ವೈಖರಿ ಗಮನಿಸಿರುವ ಮತದಾರರು ಭ್ರಮನಿರಸನರಾಗಿದ್ದಾರೆ. “ಬೆಸ್ಟ್’ ಆಯ್ಕೆ ಇಲ್ಲದೇ ಇರುವುದರಿಂದ ಮೂವರಲ್ಲಿಯೇ ಆಯ್ಕೆ ಅನಿವಾರ್ಯವಾ ಗಿದೆ. ಹೀಗಾಗಿ ಮತದಾರರ ಮನಗೆಲ್ಲಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಹಲವು ಕಸರತ್ತು ನಡೆಸಿದರೂ ಇವರು ಮಾತ್ರ ಮೌನವಾಗಿದ್ದಾರೆ. ಅಭ್ಯರ್ಥಿಗಳ ಘೋಷಣೆಯಾಗುವ ತನಕ ಕ್ಷೇತ್ರವಾರು ಸ್ಪಷ್ಟ ಚಿತ್ರಣ ಸಿಗುವುದು ಕಷ್ಟ.
ಮ್ಯಾಜಿಕ್ ನಂಬರ್ ದಾಟದ ಸಮೀಕ್ಷೆ: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ನಡೆಸಿರುವ ಅಂತರಿಕ ಸಮೀಕ್ಷೆಗಳು ವಾಸ್ತವವಾಗಿ ಮ್ಯಾಜಿಕ್ ನಂಬರ್ (113) ದಾಟಿಲ್ಲ. ಆದರೆ ಈ ಎರಡೂ ಪಕ್ಷಗಳು 125 ರಿಂದ 130 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಹೇಳಿಕೊಂಡಿವೆ. ಶತಕ ದಾಟಿದರೆ ಸಾಕು ಅಧಿಕಾರ ಗ್ಯಾರೆಂಟಿ ಎಂಬ ಲೆಕ್ಕಾಚಾರದಲ್ಲಿರುವ ಪಕ್ಷಗಳು ಸೆಂಚುರಿ ಬಾರಿಸಲು ಪ್ರಯತ್ನಿಸುತ್ತಿವೆ. ಈ ಲೆಕ್ಕಾಚಾರವನ್ನೇ ಅವಲೋಕಿಸಿದರೆ ರಾಜ್ಯದ ಮತದಾರ ಇನ್ನೂ ಯಾವ ಪಕ್ಷದ ಕಡೆಗೂ ಕಣ್ಣು ಬಿಟ್ಟಿಲ್ಲ ಎಂಬುದಕ್ಕೆ ನಿದರ್ಶನ.
ರಾಜ್ಯದ ಪ್ರಜ್ಞಾವಂತ ಮತದಾರರು ಈ ಹಿಂದಿನ ಚುನಾವಣೆಗಳಲ್ಲಿ ಮತದಾನ ನಡೆಯುವ ಕೊನೆ ದಿನದ ತನಕವೂ ತನ್ನ ನಾಡಿಮಿಡಿತ ಏನೆಂಬುದನ್ನು ಬಿಟ್ಟು ಕೊಟ್ಟಿಲ್ಲ. ಅದೇ ಸ್ಥಿತಿ ರಾಜ್ಯದಲ್ಲಿ ಈಗಲೂ ಇದೆ. ಆಡಳಿತರೂಢ ಬಿಜೆಪಿ ಬಗ್ಗೆ ಪೂರ್ಣ ಸಮಾಧಾನವೂ ಇಲ್ಲ, ಕಾಂಗ್ರೆಸ್ ಬಗ್ಗೆ ಪರಿಪೂರ್ಣ ಒಲವೂ ಇಲ್ಲ. ಇನ್ನು ಜೆಡಿಎಸ್ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಯಾವ ಪಕ್ಷದ ಕಡೆಗೂ ವಾಲದ ಮತದಾರನ ಮನಮಿಡಿಯುವಿಕೆ ತಿಳಿಯಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಉರಿ ಬಿಸಿಲಿನಲ್ಲೂ ಕ್ಷೇತ್ರವಾರು ಪ್ರವಾಸಕೊಂಡು ಧೂಳೆಬ್ಬಿಸುತ್ತಿವೆ.
ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಚುನಾವಣ ಕಾವು ಈಗಷ್ಟೇ ಶುರುವಾಗಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ವಲಯದಲ್ಲಿ ಒಂದಷ್ಟು ಹುರುಪು, ಉತ್ಸಾಹ ಕಾಣುತ್ತಿದೆ. ಅಲ್ಲದೆ ಹಲವು ಕಡೆ ಅಸಮಾಧಾನವೂ ಇದೆ. ಅಧಿಕಾರ ಇದ್ದಾಗ ಸರಿಯಾಗಿ ನಡೆಸಿಕೊಂಡಿಲ್ಲ, ಅಧಿಕಾರ ನೀಡಿಲ್ಲ ಎಂಬ ಕೊರಗು ಇದೆ. ಹೀಗಾಗಿ ಕಾರ್ಯಕರ್ತರನ್ನು ಸರಿಪಡಿಸಿಕೊಂಡು ಮುನ್ನುಗ್ಗುವ ಪ್ರಯತ್ನಗಳು ನಡೆದಿವೆ.
ಟ್ರೆಂಡ್ ಸೆಟ್‌ಗೆ ಸಿದ್ಧ ವಾ ಗದ ಭೂಮಿಕೆ
ಜನ ಸೇರುವುದು ಬೇರೆ, ಜನ ಬರುವುದು ಬೇರೆ. ಈಗ ನಡೆಯುತ್ತಿರುವ ರಾಜಕೀಯ ಪಕ್ಷಗಳ ಸಮಾವೇಶದಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಜನಜಂಗುಳಿ ಎಲ್ಲ ಪಕ್ಷಗಳ ಸಮಾವೇಶಗಳಲ್ಲೂ ಕಂಡುಬರುತ್ತದೆ. ಟಿಕೆಟ್ ಆಕಾಂಕ್ಷಿಗಳು ಸ್ಥಳೀಯವಾಗಿ ತಮ್ಮ ಶಕ್ತಿಪ್ರದರ್ಶನ ಮಾಡಲು ಜನರನ್ನು ಸೇರಿಸುತ್ತಿದ್ದಾರೆ. ಅವು ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆ ಆಗುತ್ತವೆ ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ. ಆದರೆ ಕಾರ್ಯಕರ್ತರಿಗೆ ಮಾತ್ರ ಇದು ಸುಗ್ಗಿಕಾಲ. ಚುನಾವಣ ಕಾವು ಮತದಾರ ಸಮುದಾಯಕ್ಕೆ ಬಿಸಿ ತಟ್ಟಿಲ್ಲ. ಹೀಗಾಗಿ “ಟ್ರೆಂಡ್ ಸೆಟ್’ ಆಗಿಲ್ಲ. ಬಜೆಟ್ ಮಂಡನೆ ಅಥವಾ ಅಧಿವೇಶನ ಮುಗಿದ ಬಳಿಕ ಎಲ್ಲರೂ ಕ್ಷೇತ್ರಗಳಿಗೆ ದೌಡಾಯಿಸುವುದರಿಂದ ಚುನಾವಣ ಕಾವು ಏರತೊಡಗುವ ಸಾಧ್ಯತೆಗಳಿದ್ದು ಅಲ್ಲಿಂದ “ಟ್ರೆಂಡ್ ಸೆಟ್’ಗೆ ಭೂಮಿಕೆ ಸಿದ್ಧವಾಗಲಿದೆ.
– ಎಂ.ಎನ್.ಗುರುಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.