ತನ್ನ ಪ್ರಭಾವಲಯವನ್ನು ಕುಣಿತದ ಮೂಲಕ ಶೋಭಾಯಮಾನವಾಗಿಸುವ ಶಕ್ತಿರೂಪ ಕೃಷ್ಣ
Team Udayavani, Sep 10, 2020, 6:10 AM IST
ಆಚಾರ್ಯ ಶ್ರೀ ಮಧ್ವರು ತನ್ನೆಡೆಗೆ ತೇಲಿ ಬಂದ, ತೋರಿ ಬಂದ ತಾವರೆ ಕಣ್ಗಳ ಆ ಭಾವ ಬಿಂಬವನ್ನು ಆನಂದ ಮುಕುಂದನೆಂದು ಬಣ್ಣಿಸಿದರು.
ಆ ಬಣ್ಣನೆಯಲ್ಲಿ ತನ್ನೆಲ್ಲ ವೇದಾಂತ ದರ್ಶನವನ್ನು ಸಾಕ್ಷಾತ್ಕರಿಸಿಕೊಂಡರು.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದಲ್ಲಿರುವ ಉಡುಪಿಯಲ್ಲಿ ನಂದಾ ದೀಪಗಳ ದಿವ್ಯ ಬೆಳಕಿನಲ್ಲಿ ಸದಾ ಬೆಳಗಿಕೊಂಡಿರುವ ಆ ಮುದ್ದು ಮೂರುತಿಯನ್ನು ಕಂಡಾಕ್ಷಣ ನಮ್ಮೊಳಗೊಬ್ಬ ಆಚಾರ್ಯರು ಮೂಡಿ ಬರುತ್ತಾರೆ. ಭಕ್ತಿ ಭಾವದ ಚಿಲುಮೆ ಚಿಮ್ಮತೊಡಗುತ್ತದೆ. ನಂಬಿಕೆಯ ಬಿಂಬವಾಗಿ ನಮ್ಮ ಎದೆ ತಂಬಿಗೆಯಲ್ಲಿ ದ್ವಾಪರದ ಕೃಷ್ಣನ ಆವಾಹನೆಯಾಗುತ್ತದೆ. ಕ್ಷಣಮಾತ್ರದ ಧ್ಯಾನ.
ನೋಟದಲ್ಲಿ ಆ ಕೃಷ್ಣ ನಮಗೆ ಕಣ್ಮಣಿಯಾಗಿ ಕಂಡು ಬರುತ್ತಾನೆ. ದೇವಕಿ, ಯಶೋದೆ, ವಸುದೇವ, ನಂದಗೋಪ, ಯಮುನೆ, ವೃಂದಾವನ, ಗೋಪಗೋಪಿಕೆಯರೆಲ್ಲ ನಮ್ಮ ಹೃದಯ ರಂಗಸ್ಥಳದಲ್ಲಿ ಕುಣಿಯತೊಡಗುತ್ತಾರೆ. ಕಾರಣ ಕೃಷ್ಣ ತನ್ನ ಪ್ರಭಾವಲಯವನ್ನು ಕುಣಿತದ ಮೂಲಕ ಶೋಭಾಯಮಾನವಾಗಿಸುವ ಶಕ್ತಿರೂಪ.
ಕುಣಿತದಲ್ಲಿ ಕೃಷ್ಣನನ್ನು ಕಾಣುವುದು – ಕೃಷ್ಣನಲ್ಲಿ ಕುಣಿತವನ್ನು ಕಾಣುವುದು ಕೃಷ್ಣ ಭಕ್ತರ ಅಧ್ಯಾತ್ಮದ ಅಂತಃಸತ್ತ್ವ. ಈ ಅರಿವಿನಿಂದಲೇ ಅವನನ್ನು ‘ಲೀಲಾಮಾನುಷ ವಿಗ್ರಹ’ವಾಗಿ ಪೂಜಿಸುವುದೇ ಅವರಿಗೆ ತುಂಬ ಇಷ್ಟವಾದ ಸಂಗತಿ. ಕೃಷ್ಣ ಲೀಲೆಯ ಒಂದು ಮುಖವೇ ನೃತ್ಯ. ಕುಣಿಯುವುದು. ಕುಣಿಯುವುದು. ದಣಿಯದೆ ಕುಣಿಯುವುದು. ಕೃಷ್ಣನೊಟ್ಟಿಗೆ ಕುಣಿಯುತ್ತ ಕುಣಿಯುತ್ತ ಅವನಿಗೆ ಮಣಿಯುವುದು. ಮಣಿದು ಕೃಷ್ಣನೊಡನೆ ಒಂದಾಗುವುದು.
ವೃಂದಾವನದ ತನ್ನ ಗೆಳೆಯ ಗೆಳತಿಯರೊಡನೆ ತುಂಬಿದ ತಿಂಗಳ ಬೆಳಕಿನಲ್ಲಿ ನೃತ್ಯದ ಒಂದು ಪ್ರಮುಖವಾದ ರಂಗಲೇಖವನ್ನು ಸಂಯೋಜಿಸಿದ ಆ ನೃತ್ಯ ಲೀಲಾವಿನೋದಿಯ ಹೆಜ್ಜೆಗಾರಿಕೆ ಇಂದಿಗೂ ನೃತ್ಯಾಸಕ್ತರಿಗೆಲ್ಲ ಸುಂದರ ಸ್ಫೂರ್ತಿ. ದಣಿವರಿಯದೆ ತನ್ಮಯತೆಯಿಂದ ಕುಣಿಯಲು ಶಕ್ತಿ ಮೂಲ. ಆ ಕುಣಿಯುವ ಕೃಷ್ಣನನ್ನು ತನ್ನೊಳಗೆ ಪರಿಪೂರ್ಣವಾಗಿ ತುಂಬಿಸಿಕೊಂಡಿರುವ ಭಾಗವತವನ್ನಾಧರಿಸಿ ಬಂದ ಎಲ್ಲ ಅಕ್ಷರ ಪ್ರಪಂಚಕ್ಕೆ ಲೆಕ್ಕವಿಡುವುದು ಸಾಧ್ಯವೇ? ಒಂದೇ ಎರಡೇ?
ಸಹಸ್ರಾರು ಶ್ಲೋಕಗಳು, ಸ್ತುತಿಗಳು, ಅಷ್ಟೋತ್ತರಗಳು, ಸಹಸ್ರನಾಮಗಳು, ಸೂಕ್ತಿಗಳು, ಕೀರ್ತನೆಗಳು, ಕಾವ್ಯಬಂಧಗಳು – ಎಲ್ಲವೂ ಕೃಷ್ಣ ಕರುಣಿಸಿದ ನೃತ್ಯ ಸಾಧ್ಯತೆಗಳ ಆಧಾರ ಸ್ತಂಭಗಳು. ಅಂದಿನ ಆ ಗೋಕುಲದ ನೃತ್ಯ ರಂಗದಿಂದ ಹಿಡಿದು ಇಂದಿನ ವಿಠಲಪಿಂಡಿ ಸ್ವರೂಪದ ಶ್ರೀಕೃಷ್ಣ ಲೀಲಾ ನೃತ್ಯವಿಕಾಸದಲ್ಲಿ ಅಧ್ಯಾತ್ಮವೂ ಅಡಗಿದೆ. ಭಕ್ತಿ ತುಂಬಿದೆ. ಭಾವ ಲಹರಿ ಇದೆ. ಧ್ಯಾನವಿದೆ. ತಪಸ್ಸಿದೆ. ಈ ಎಲ್ಲವನ್ನೂ ನೆನಪಿಸಿಕೊಂಡು ಎದೆ ತುಂಬಿಸಿಕೊಳ್ಳುವ ದಿನವಾಗುವುದೇ ಕೃಷ್ಣ ಜನ್ಮಾಷ್ಟಮಿಯ ವೈಶಿಷ್ಟ್ಯವಲ್ಲವೇ?
ಒಬ್ಬರೇ ಇಬ್ಬರೇ? ಮಹಾದಾರ್ಶನಿಕ ಕವಿಗುರು ವೇದವ್ಯಾಸರು, ಶುಕಮುನಿಗಳಿಂದ ಪ್ರಾರಂಭವಾದ ಈ ಕಾವ್ಯ ಪ್ರವಾಹವು ತಾನೇ ಒಂದು ನೃತ್ಯ ಸಾಧ್ಯತೆಯಾಗಿ ಸೇರಲು ತವಕ ಪಡುವುದು ಆ ಕೃಷ್ಣನೆಂಬ ಮಹಾಸಾಗರವನ್ನೆ. ಒಬ್ಬೊಬ್ಬ ಕವಿಭಕ್ತನ ನಡೆ ಒಂದೊಂದು ತೆರ. ಒಂದೊಂದು ಸ್ವರೂಪದ್ದು. ಸಮ ಭಂಗಿಯಿಂದ ಹಿಡಿದು ತ್ರಿಭಂಗಿಯತನಕ ವಿವಿಧ ಕರಣ ಜತಿಗಳನ್ನೊಳಗೊಂಡ ನೃತ್ಯಪ್ರಬಂಧಗಳಿಗೆ ಆಧಾರ ದ್ರವ್ಯ ಈ ಎಲ್ಲ ಕೃಷ್ಣನನ್ನು ಧ್ಯಾನಿಸುವ ಶ್ಲೋಕಗಳು. ಭಾರತದ ಶಾಸ್ತ್ರೀಯ ನೃತ್ಯದ ಎಲ್ಲ ಸಂಕೀರ್ಣ ಸೂಕ್ಷ್ಮಗಳನ್ನು ಅರ್ಥೈಸಲು ಈ ಸಾಲು ಸಾಲು ಸಾಹಿತ್ಯಗಳು ಆಧಾರ ದ್ರವ್ಯವಾಗಿವೆ.
ಈ ದ್ರವ್ಯದಲ್ಲಿ ತಾನೇ ಮುಳುಗಿ ಎದ್ದಿರುವನೋ ಎಂಬಂತೆ ಕವಿ ಜಯದೇವ ಗೀತ ಗೋವಿಂದದೊಳಗೆ ಸೇರಿಹೋಗಿದ್ದಾನೆ. ಇಂಥ ರಮ್ಯ ನುಡಿ ಲಹರಿಗಳು ದೇಶದ ಎಲ್ಲ ಭಾಷೆಗಳಲ್ಲಿಯೂ ಮೈವೆತ್ತು ನಮ್ಮ ಮುಂದಿವೆ. ಹರಿದಾಸರ ಕೀರ್ತನೆಗಳು ನೃತ್ಯಾಭಿವ್ಯಕ್ತಿಗೆ ವಿಪುಲ ಅವಕಾಶವನ್ನೊದಗಿಸುತ್ತವೆ ಎಂಬುದು ಮರೆಯಲಸಾಧ್ಯ. ಅನೇಕ ಯತಿವರೇಣ್ಯರ ಕಾವ್ಯ ರಚನೆಗಳಲ್ಲೂ ನಾವು ಭಾರತೀಯ ನೃತ್ಯವಿಕಾಸದ ಹೆಜ್ಜೆಗಳನ್ನು ಗುರುತಿಸಬಹುದು.
ಮಂಡಲೀಕೃತ – ಮನೋರಮ-ರಾಮಾ – ಕುಂಡಲ – ದ್ಯುತಿ – ಸುದೀಪಿತ – ಸೀಮಾ | ಎಂಬುದಾಗಿ ಪ್ರಾರಂಭಗೊಳ್ಳುವ ಕವಿಯತಿ ಶ್ರೀ ವಾದಿರಾಜರ ಕೃಷ್ಣನ ರಾಸ ಬಣ್ಣನೆ ಒಂದು ಸ್ವತಂತ್ರ ನೃತ್ಯ ರೂಪಕ ನಿರ್ಮಾಣಕ್ಕೆ ಅಭೂತಪೂರ್ವ ಆಧಾರ. ಈ ಯತಿವರೇಣ್ಯರ ಮಹಾಕಾವ್ಯ – ರುಗ್ಮಿಣೀಶ ವಿಜಯದ ನವಮ ಸರ್ಗದ 65 ಶ್ಲೋಕಗಳಲ್ಲಿ ಪ್ರತಿಯೊಂದು ಸಾಲೂ, ಅಕ್ಷರವೂ, ಛಂದೋ ಶೈಲಿಯೂ ಗೋಪೀ ಕೃಷ್ಣ ವಿಲಾಸವನ್ನು ಸುಂದರ ಮಧುರ ನೃತ್ಯರೂಪಕವಾಗಿಸಲು ನೃತ್ಯ ಪಟುಗಳಿಗೆ ದಿವ್ಯ ಪ್ರೇರಣೆಯಾಗಬಲ್ಲವು. ಈ ಶ್ಲೋಕವನ್ನು ಗಮನಿಸಿ. ಅಕ್ಷರ ಅಕ್ಷರವೂ ನೃತ್ಯದ ಹೆಜ್ಜೆಗಳಂತೆ ಧಿಗಿಣ ಧಿಗಿಣವೆಂದು ಕುಣಿಯುವಂತಿವೆ.
ಚಾರುಪಾದತಲ ಸನ್ನಖ ಕಾಂತ್ಯಾ | ಧೀರನೂಪುರ ರುಚಾವಿಚರಂತ್ಯಾ |
ಸಾರರತ್ನಮಯ ಮಂಡಪ ಪಂಕ್ತ್ಯಾಹಾರಿ ಭೂಮಿ ವಿಭವೋ ವಿಲಸಂತ್ಯಾ ||
ದ್ವಿತೀಯ ಮತ್ತು ಅಂತ್ಯಪ್ರಾಸದ ಬಿಗಿ, ಲಾಸ್ಯಾಭಿನಯಕ್ಕೆಡೆ ಮಾಡಿಕೊಡುವ ಭಾವಲಹರಿ, ಕಲ್ಪನಾತ್ಮಕವಾಗಿ ಮನಸ್ಸಿನಲ್ಲಿ ಮೂಡಿಬರುವ ಚಿತ್ರಣ ಎಲ್ಲವೂ ಸೊಗಸೊ ಸೊಗಸು. ರಂಗನೊಂದಿಗೆ ರಂಗದಲ್ಲಿ ಕುಣಿತ ಮತ್ತು ಆ ಕುಣಿತದ ಮೂಲಕ ಆ ಸ್ಥಳವೇ ರಂಗಸ್ಥಳದಂತೆ ಕಂಡುಬರುತ್ತಿದೆ ಎಂಬ ಬಣ್ಣನೆ ಅತ್ಯಪೂರ್ವ. ಬೇರೆ ಬೆಳಕಿಲ್ಲ. ಪಕ್ಕದ ಪರದೆಗಳಿಲ್ಲ. ವಾದನಗಳ ಅಬ್ಬರವಿಲ್ಲ. ಅರ್ಥವಿಲ್ಲದ ಹೊಗೆ ಇಲ್ಲ. ಇರುವುದು ನಡುವೆ ಎಲ್ಲ ನೃತ್ಯದ ಮೂಲಶಕ್ತಿಯಾದ ರಂಗ, ಸುತ್ತಸುಳಿಯುತ್ತಿರುವ ಗೋಪಿಕೆಯರು. ಅವರ ಕಾಲ್ಗೆಜ್ಜೆ – ಗೆಜ್ಜೆಯನಾದ, ಅಲುಗಿಸುವ ಪವಿತ್ರಪಾದಗಳ ಶುಭ್ರ ಉಗುರುಗಳಿಂದ ಹೊರ ಹೊಮ್ಮುವ ಮಿಂಚುವಂಥ ಪ್ರಭೆಯ ಸುಳಿದಾಟ. ಸುತ್ತ ಹಸಿರಿನ ತೆರೆ. ತಿಂಗಳ ಬೆಳಕಿನ ನೊರೆ ಎಲ್ಲವೂ ಯತಿಕವಿ ತನ್ನ ಹೃದಯ ರಂಗದಲ್ಲಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಬಗೆಯ ಪ್ರತೀಕವಲ್ಲವೇ?
ನೃತ್ಯ ಪರಿಣತ ಕೃಷ್ಣನೊಂದಿಗೆ ಒಂದಾಗಿ ಕುಣಿಯುತ್ತಿರುವ ಆ ಭಕ್ತಿಪರವಶರಾದ ಗೋಪಿಕೆಯರ ಮೃದುಪಾದಗಳು ನೃತ್ಯದ ಗತಿಗನುಸಾರವಾಗಿ ಸ್ಪರ್ಶಿಸುತ್ತಿರುವ ಆ ವ್ರಜಭೂಮಿಯೇ ರಂಗಸ್ಥಳವಾಯಿತಂತೆ. ಅವರ ಉಗುರಿನ ಹೊಂಬೆಳಕು ಆ ರಂಗಸ್ಥಳವನ್ನು ಬೆಳಗಿಸಿತಂತೆ. ಲಯಬದ್ಧವಾಗಿ ಆದರೆ ಗೆಜ್ಜೆಗಳ ಮೂಲಗುಣವಾದ ಕಿಣಿಕಿಣಿ ಎಂಬ ಚಾಂಚಲ್ಯಭರಿತ ನುಡಿತದ ಹಿರಿಮೆಯಿಂದ ಆ ರಾಸವು ಆಯಾಸಕ್ಕೆಡೆಮಾಡದ ಅದ್ಭುತ ವಿಲಾಸ ನೃತ್ಯವಾಯಿತಂತೆ. ಅಂಥ ಕುಣಿತಮಣಿತದಲ್ಲಿ ದಿವ್ಯ ದರ್ಶನವು ಸಾಕ್ಷಾತ್ಕಾರಗೊಳ್ಳದೆ ಇನ್ನೇನಾಗುವುದು ಸಾಧ್ಯ. ಕೃಷ್ಣ ಜನ್ಮೋತ್ಸವದ ಸಡಗರದಲ್ಲಿ ಈ ದಿವ್ಯ ಸ್ಮರಣೆಯೂ ಒಂದು ಮಹಾಪೂಜೆಯಾಗಲಾರದೆ?
ಯಾರದು ಎಂದು ಅಂಕಿತವಿಲ್ಲ. ಇತಿ ಶ್ರೀಕೃಷ್ಣ ತಾಂಡವ ಸ್ತೋತ್ರಮ್ – ಎಂದು ಮಂಗಳಗೊಳ್ಳುವ ಎಂಟು ಶ್ಲೋಕಗಳ ನೃತ್ಯಸಾಂಗತ್ಯವನ್ನು ಈ ದಿವ್ಯ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಕೃಷ್ಣ ಎಂದೊಡನೆ ರಾಸ-ಲಾಸ್ಯ ಎಂದೇ ಭಾವಿಸುವವರಿಗೆ ಈ ಅಷ್ಟಕವು ಶ್ರೀ ಕೃಷ್ಣನ ತಾಂಡವದ ನೆನಪನ್ನು ಉದ್ದೀಪನಗೊಳಿಸುತ್ತದೆ.
ಹೌದು, ಕೃಷ್ಣ ತಾಂಡವ ಎಂದೊಡನೆ ನಮ್ಮ ಅರಿವಿನಲ್ಲಿರುವುದು ಕಾಳಿಯ ಹೆಡೆಗಳನ್ನು ತುಳಿದು ಕುಣಿದ ಬಾಲಕೃಷ್ಣನ ವೀರಭಂಗಿ. ಈ ಎಂಟು ಶ್ಲೋಕಗಳಲ್ಲಿ ಅದರ ಪ್ರಸ್ತಾಪವಿಲ್ಲ. ಇಲ್ಲದಿರುವುದೇ ಅದರ ವಿಶೇಷತೆ. ಅಂದರೆ ಕೃಷ್ಣನ ಬಗೆಬಗೆಯ ನೃತ್ಯಗಳಲ್ಲಿ ಒಂದಾದ ತಾಂಡವದ ವಿಭಿನ್ನ ನಡೆಗಳನ್ನು ಸಂಯೋಜಿಸಿ ಅಳವಡಿಸಿಕೊಳ್ಳುವಂತೆ ಈ ಶ್ಲೋಕ ಬಂಧಗಳ ರಚನೆಯಾಗಿದೆ.
ತಾಂಡವ ಎಂದೊಡನೆ ನಮ್ಮ ಮನಸ್ಸಿನಲ್ಲಿ ಮೂಡಿ ಬರುವುದು ಶಿವ ತಾಂಡವ. ಮೂಲದಲ್ಲಿ ಸುಮಾರು ನೂರು ಬಗೆಗಳಲ್ಲಿದ್ದು ನಂತರ ತಂಡುಮುನಿಯ ಮೂಲಕ ಹನ್ನೆರಡು ಪ್ರಮುಖ ಸ್ಥಾನ ಪಡೆದು ಚಾಲ್ತಿಯಲ್ಲಿ ಸಂಧ್ಯಾ ತಾಂಡವ, ಉಮಾತಾಂಡವ ಇತ್ಯಾದಿಯಾಗಿ ಏಳಾಗಿ ಈಗ ಒಂದೇ ಸ್ವರೂಪದ ಅಬ್ಬರದ ಶಿವ ತಾಂಡವಕ್ಕಿಂತ ಭಿನ್ನವಾಗಿ ಶ್ರೀ ಕೃಷ್ಣನ ತಾಂಡವವನ್ನು ಸಂಯೋಜಿಸಲು ಈ ಎಂಟು ಶ್ಲೋಕಗಳು ವಿಪುಲ ಅವಕಾಶಗಳನ್ನೀಯುತ್ತವೆ. ಇದು ಹರಿಹರಭೇದದ ಒಡಕು ಧ್ವನಿಯಲ್ಲ. ಅಗಾಧ ನೃತ್ಯ ಸಂಪತ್ತಿನ ನಮ್ಮ ಪರಂಪರೆಯಲ್ಲಿ ಒಂದು ಶಿವ-ಕೃಷ್ಣ ತಾಂಡವ ಸಂಗಮಕ್ಕೆ ಹೆದ್ದಾರಿ.
ಹಾಗೆಂದು ಈ ಶ್ಲೋಕಗಳಲ್ಲಿ ಮನೋಧರ್ಮದ ವಿಸ್ತಾರಕ್ಕೆ ಯಾವುದೇ ಕೃಷ್ಣ ಚರಿತೆಯ ಪ್ರಸ್ತಾಪವಿಲ್ಲ. ಕಾಳಿಯ ಮರ್ದನವೂ ಸೇರಿ. ಇರುವುದು ಕೇವಲ ವಂದನೆ-ಅಭಿವಂದನೆಯ ಭಾವ. ಆರು ಶ್ಲೋಕಗಳ ಅಂತ್ಯದಲ್ಲಿ ನಮಾಮಿ ನಂದನಮ್, ನಮಾಮಿ ನಂದ ಸಂಭವಮ್, ನಮಾಮಿ ಕೃಷ್ಣ ಬಾಲಕಮ್ – ಹೀಗೆ ಭಿನ್ನ ಸಂಬೋಧನೆಯ ವಂದನೆಗಳೇ. ಉಳಿದ ಎರಡು ಶ್ಲೋಕಾಂತ್ಯದಲ್ಲಿರುವುದು ಸಮಸ್ತ ಭಕ್ತ ಪಾಲಕಃ ಮತ್ತು ಕೃಪಾವಿಧೀಯತಾಮ್ ಎಂಬ ನಿವೇದನೆಯ ಭಾವ ಲಹರಿಗಳೆ.
ಆದರೆ ಈ ಎಂಟೂ ಶ್ಲೋಕಗಳು ತಮ್ಮ ನುಡಿ ವೈಭವದಿಂದ ಸರಳ ಗತಿ ವಿಲಾಸದಿಂದ ನೃತ್ಯ ವಿಸ್ತಾರಕ್ಕೆ ಸ್ಫೂರ್ತಿದಾಯಕವಾಗಿವೆ. ಒಡಿಸ್ಸಿ, ಕಥಕ್ ಶೈಲಿಗಳಲ್ಲಿ ಈ ಎಂಟು ಶ್ಲೋಕಗಳಲ್ಲಿ ಒಂದೆರಡನ್ನು ತಮ್ಮ ನೃತ್ಯ ಪ್ರಸ್ತುತಿಯ ಭಾಗವಾಗಿಸಿಕೊಳ್ಳುವುದು ರೂಢಿಯಲ್ಲಿದೆ. ಇಂದಿನ ಈ ಪರ್ವ ದಿನದಲ್ಲಿ ಶ್ರೀಕೃಷ್ಣನ ಪೂಜೆಯೋ ಎಂಬಂತೆ ಅವನಿಗೆ ತುಂಬ ಇಷ್ಟವಾದ ನೃತ್ಯೋಲ್ಲಾಸಕ್ಕೆ ಸಾಕಷ್ಟು ಸಾಧ್ಯತೆಗಳನ್ನು ನೀಡಬಹುದಾದ ಈ ಶ್ಲೋಕಗುಚ್ಛದ ಸ್ಮರಣೆಯಾಗಲಿ ಎಂಬುದು ಈ ಬರಹದ ಉದ್ದೇಶ.
ಆ ಸಾಧ್ಯತೆಗಳಿಗೆ ಆಧಾರವಾಗಬಹುದಾದ ಈ ಅಷ್ಟಕಗಳಲ್ಲಿ ಉದಾಹರಣೆಯಾಗಿ ಒಂದನ್ನು ಒಕ್ಕಣಿಸಿ ಈ ನಿವೇದನಾ ಲೇಖನಕ್ಕೆ ಮಂಗಳ ಹಾಡಲೆ?-
ಭಜೆ ವ್ರಜೈಕ ಮಂಡನಂ ಸಮಸ್ತ ಪಾಪಖಂಡನಮ್ | ಸ್ವಭಕ್ತ ಚಿತ್ತರಂಜನಂ ಸದೈವ ನಂದನಂದನಂ ||
ಸುಪಿಚ್ಛಗುಚ್ಛಮಸ್ತಕಂ ಸುನಾದವೇಣುಹಸ್ತಕಂ | ಅನಂಗ ರಾಗ ಸಾರಗಂ ನಮಾಮಿ ಸಾಗರಂಭಜೆ ||
ಶಿವ ತಾಂಡವದ ಹತ್ತಾರು ಬಗೆಗಳಂತೆ ಪೂರ್ವದ ‘ಅಗಸ್ತ್ಯಸೂತ್ರಗಳೋ’ ಇನ್ನಾವುದೋ ನಟನ ಸೂತ್ರಗಳಲ್ಲಿ ಹುದುಗಿರಬಹುದಾದ ನೃತ್ತ-ನೃತ್ಯದ ಲಕ್ಷಣಗಳನ್ನು ಶೋಧಿಸಿ ಈ ಶ್ಲೋಕಗಳ ಅಕ್ಷರ ಅಕ್ಷರಗಳಿಗೆ ನೃತ್ಯದಲ್ಲಿ ಆಕಾರ ನೀಡುವ ಪ್ರಯತ್ನ ನಡೆಯಲಿ ಎಂದು ಆಶಿಸಿ ಕೃಷ್ಣನ ಹುಟ್ಟುಹಬ್ಬದ ವೈಭವಕ್ಕೆ ತಲೆಬಾಗುತ್ತೇನೆ ಸಹಸ್ರ ಸಹಸ್ರ ಕೃಷ್ಣಭಕ್ತರೊಡನೆ ಒಬ್ಬನಾಗಿ.
ಕೋವಿಡ್ 19 ಮಹಾಮಾರಿಯ ದಿಗ್ಬಂಧನವಿದ್ದರೂ ನಮ್ಮ ಮನಸ್ಸೆಂಬ ರಂಗಭೂಮಿಯಲ್ಲಿ ಈ ಎಲ್ಲ ಭಕ್ತಿ ಕಾವ್ಯಗಳನ್ನು ನೆನಪಿಸಿಕೊಳ್ಳುತ್ತಾ ಕುಣಿಯುವ ಕೃಷ್ಣನನ್ನು ಸಾಕ್ಷಾತ್ಕರಿಸಿಕೊಳ್ಳಬಹುದಲ್ಲವೇ? ಸಂತೋಷದ ವಿಷಯವೇನೆಂದರೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನಮ್ಮ ನೆಲದ ಪ್ರತಿಭಾವಂತ ಕಲಾವಿದ ಕಲಾವಿದೆಯರು ಕಿಂಚಿತ್ತೂ ನಿರುತ್ಸಾಹಗೊಳ್ಳದೆ, ಎಲ್ಲ ಆಧುನಿಕ ಮಾಧ್ಯಮಗಳನ್ನು ಬಳಸಿ ತಮ್ಮ ಅಂತರ್ಜಾಲ ಪ್ರದರ್ಶನಗಳ ಮೂಲಕ ಆ ಕುಣಿಯುವ ಕೃಷ್ಣನೆಂಬ ಕಣ್ಮಣಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತಿದ್ದಾರೆ.
– ಉದ್ಯಾವರ ಮಾಧವ ಆಚಾರ್ಯ – ವ್ಯಾಸ, ಚಿಟ್ಪಾಡಿ ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.