Ideals; ವೈರಾಗ್ಯ ಚಕ್ರವರ್ತಿ ಶ್ರೀರಾಮ
Team Udayavani, Jan 6, 2024, 5:13 AM IST
ಇದೇ ವರ್ಷದ ಪುಷ್ಯ ಶುದ್ಧ ದ್ವಾದಶಿಯಂದು ಅಯೋಧ್ಯೆಯಲ್ಲಿ ಶ್ರೀರಾಮನ ಪುನಃ ಪ್ರತಿಷ್ಠೆಯಾಗುತ್ತಿದೆ. ಇದು ಜಗತ್ತಿನ ಎಲ್ಲ ಜನರಿಗೂ ಹರ್ಷ, ಅಭಿಮಾನ ಉಂಟುಮಾಡುವ ವಿಷಯ. ಎಲ್ಲರಿಗೂ ಬೇಕಾಗುವ ಮೌಲ್ಯಗಳು ಶ್ರೀರಾಮನಲ್ಲಿ ಇದೆ. ಮಗನಾಗಿ, ಪತಿಯಾಗಿ, ಅಣ್ಣನಾಗಿ, ರಾಜನಾಗಿ ಇನ್ನೂ ಅನೇಕ ವಿಧದಿಂದ ಶ್ರೀರಾಮನ ಆದರ್ಶಗಳು ನಮ್ಮ ಮನಸ್ಸಿನಲ್ಲಿ ಇರುತ್ತವೆ.
ಇಲ್ಲೊಂದು ಪ್ರಶ್ನೆ-ಯತಿಗಳು, ಸಾಧುಸಂತರು ಶ್ರೀರಾಮನ ಬಗ್ಗೆ ಆಕರ್ಷಿತರಾಗುವುದು ಯಾವ ಕಾರಣದಿಂದ? ಮಗನ ಆದರ್ಶ, ಪತಿಯ ಆದರ್ಶ, ಅಣ್ಣನ ಆದರ್ಶ ಮತ್ತು ರಾಜನ ಆದರ್ಶಗಳು ಈ ಯಾವುದೂ ಯತಿಗಳಿಗೆ ಬೇಕಾದವುಗಳಲ್ಲ. ಯತಿಗಳು ಅನುಸರಿಸಬೇಕಾದ ಮೌಲ್ಯಗಳು ಯಾವು ದಾದರೂ ಶ್ರೀರಾಮನಲ್ಲಿವೆಯೇ? ಇಷ್ಟೆಲ್ಲ ಸಾವಿರಾರು ಯತಿಗಳು, ಸಂತರು, ಸಾಧುಗಳು ಈಗ ಅಯೋಧ್ಯೆಯತ್ತ ಧಾವಿಸುತ್ತಿದ್ದಾರೆ. ಇದಕ್ಕೆ ವಿಶಿಷ್ಟವಾದ ಕಾರಣವೇನಾದರೂ ಇದೆಯೇ? ಶ್ರೀರಾಮ ದೇವರು ಎನ್ನುವ ವಿಷಯವು ಸತ್ಯವಾದರೂ ಇಲ್ಲಿ ಪ್ರಸ್ತುತವಲ್ಲ. ಮೌಲ್ಯಗಳು, ಆದರ್ಶಗಳು ನಮಗಿಲ್ಲಿ ಪ್ರಸ್ತುತ. ಅವುಗಳ ದೃಷ್ಟಿಯಿಂದ ಈ ಪ್ರಶ್ನೆಗೆ ಉತ್ತರವೇನು?
ಶ್ರೀರಾಮನು ಮಗನಾಗಿ, ಪತಿಯಾಗಿ, ಅಣ್ಣನಾಗಿ, ರಾಜನಾಗಿ ಆದರ್ಶ ಮೌಲ್ಯಯುತ ವ್ಯಕ್ತಿಯಾಗಿರುವಂತೆ ಅವನು ಪರಿಪೂರ್ಣ ವೈರಾಗ್ಯಶಾಲಿ. ಅವನ ಪರಿಪೂರ್ಣ ವೈರಾಗ್ಯ ಯತಿಗಳನ್ನು ಆಕರ್ಷಿಸುವ ಉತ್ತಮ ಮೌಲ್ಯ. ಅವನಿಗೆ ಪರಿಪಕ್ವ ವೈರಾಗ್ಯವಿತ್ತೆಂಬುದನ್ನು ಶ್ರೀವಾಲ್ಮೀಕಿ ಮಹರ್ಷಿಗಳು ವಾಸಿಷ್ಠ ರಾಮಾಯಣ (ಯೋಗವಾಸಿಷ್ಠ)ದಲ್ಲಿ ಚಿತ್ರಿಸಿದ್ದಾರೆ. ವಿದ್ಯಾಭ್ಯಾಸವನ್ನು ಮುಗಿಸಿ ಮನೆಗೆ ತಿರುಗಿಬಂದ ಅನಂತರ ಶ್ರೀರಾಮನಿಗೆ ತೀರ್ಥಯಾತ್ರೆಗೆ ಹೋಗಬೇಕೆಂಬ ಆಕಾಂಕ್ಷೆ ಹುಟ್ಟಿಕೊಂಡಿತು. ದಶರಥನ ಆಜ್ಞೆ ಪಡೆದು ಅನುಜರೊಂದಿಗೆ ಶ್ರೀರಾಮನು ದೇಶದ ಎಲ್ಲ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದನು.
ತೀರ್ಥಯಾತ್ರೆಯ ಪುಣ್ಯದ ಫಲವಾಗಿ ತೀರ್ಥಯಾತ್ರೆಯಿಂದ ಅಯೋಧ್ಯೆಗೆ ಹಿಂದಿರುಗಿ ಬರುತ್ತಿರುವಂತೆಯೇ ಅವನ ಮನಸ್ಸಿನಲ್ಲಿ ವೈರಾಗ್ಯಭಾವ ಹುಟ್ಟಿಕೊಂಡಿತು. ಆಗ ಹದಿನಾರು ವರುಷದ ವಯಸ್ಸಿನಲ್ಲಿರುವ ಶ್ರೀರಾಮನು ವಿಚಿತ್ರವಾದ ರೀತಿಯಲ್ಲಿ ಕೃಶನಾಗತೊಡಗಿದನು. ಪರಿಪೂರ್ಣ ವೈರಾಗ್ಯದ ಕಾರಣ ಅವನ ಮಾತು, ಮುಖ, ಚರ್ಯೆಗಳೆಲ್ಲವೂ ಬದಲಾದವು. ಈ ಬದಲಾವಣೆಯ ತೀವ್ರತೆ ಎಷ್ಟಿತ್ತೆಂದರೆ ದಶರಥನಾದಿಯಾಗಿ ಅಯೋಧ್ಯೆಯ ಎಲ್ಲ ಜನರೂ ಚಿಂತಿತರಾದರು. ಆದರೆ ವಸಿಷ್ಠರು ಮತ್ತು ವಿಶ್ವಾಮಿತ್ರರು ಶ್ರೀರಾಮನಲ್ಲಿರುವ ಈ ಲಕ್ಷಣಗಳನ್ನು ನೋಡಿ ಅವನಿಗೆ ಪರಿಪೂರ್ಣ ವೈರಾಗ್ಯ ಬಂದಿರುವುದನ್ನು ಅರ್ಥಮಾಡಿಕೊಂಡರು.
ಅವನ ವೈರಾಗ್ಯವನ್ನು ಆದಿಕವಿ ವಾಲ್ಮೀಕಿ ಮಹರ್ಷಿಗಳು ಅದ್ಭುತವಾಗಿ ಚಿತ್ರಿಸಿದ್ದಾರೆ. ಭಗವದ್ಗೀತೆಯಲ್ಲಿ ವ್ಯಾಸರು ಅರ್ಜುನನ ಖನ್ನತೆಯನ್ನು ಎಳೆಎಳೆಯಾಗಿ, ವೈಜ್ಞಾನಿಕವಾಗಿ ವರ್ಣಿಸಿದ್ದಾರೆ. ಅದೇ ರೀತಿ ಅಥವಾ ಅದಕ್ಕಿಂತಲೂ ಸ್ವಲ್ಪ ಉತ್ತಮವಾಗಿಯೇ ವಾಲ್ಮೀಕಿ ಮಹರ್ಷಿಗಳು ಶ್ರೀರಾಮನ ವೈರಾಗ್ಯ ಸ್ಥಿತಿಯನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಮೊದಲು ಮುಖಭಾವ, ಮಾತು ಮುಂತಾದ ವೈರಾಗ್ಯದ ಬಾಹ್ಯ ಚಿಹ್ನೆಗಳನ್ನು ವರ್ಣಿಸಿದರೆ, ಅನಂತರ ಮತ್ತೂ ವಿಸ್ತಾರವಾಗಿ ಅವನ ವೈರಾಗ್ಯದ ಮನಸ್ಥಿತಿಯನ್ನು ವರ್ಣಿಸಿದ್ದಾರೆ. ವೈರಾಗ್ಯವು ಪರಿಪಕ್ವವಾದರೆ ಮನುಷ್ಯನ ನಡತೆ ಹೇಗಿರುತ್ತದೆ ಎಂಬುದನ್ನು ಅರಿಯಲು ವಾಸಿಷ್ಠರಾಮಾಯಣದ ವೈರಾಗ್ಯ ಪ್ರಕರಣವೇ ಅಧಿ ಕೃತವಾದ ಗ್ರಂಥ.
ವೇದಾಂತಗಳು ಬೋಧಿ ಸುವ ಜ್ಞಾನಮಾರ್ಗಕ್ಕೆ ವೈರಾಗ್ಯ ಪ್ರಮುಖವಾದ ಅರ್ಹತೆ. ಆದ್ದರಿಂದಲೇ ಜ್ಞಾನಮಾರ್ಗವನ್ನು ಪ್ರೀತಿಸುವ ಮಹಾತ್ಮರೆಲ್ಲರೂ ಶ್ರೀರಾಮನ ಬಗ್ಗೆ ಆಕರ್ಷಿತರಾಗುತ್ತಾರೆ. ಮನಸ್ಸನ್ನು ಪರಿಪೂರ್ಣ ಏಕಾಗ್ರತೆಯಲ್ಲಿ ನಿಲ್ಲಿಸಲು ಬೇಕಾಗುವ ಪ್ರಮುಖ ಸಾಧನ ವೈರಾಗ್ಯ. ಭಗವದ್ಗೀತೆ ಮತ್ತು ಯೋಗಶಾಸ್ತ್ರ ಇದನ್ನು ಘಂಟಾಘೋಷವಾಗಿ ಹೇಳುತ್ತದೆ. “ಪರಿಮಿತಿಯನರಿತಾಶೆ, ಪರವಶತೆಯಳಿದಸುಖ| ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ||ಪರಿಕಿಸುತ ಜೀವಿತವ ಸತ್ಯವನೆ ಪಿಡಿವಮತಿ| ವರಗಳೀ ನಾಲ್ಕೆವರ- ಮಂಕುತಿಮ್ಮ|| (ಈ ಪದ್ಯದಲ್ಲಿ ವಿರತಿ= ವೈರಾಗ್ಯ) ಎಂಬುದಾಗಿ ಡಿ.ವಿ.ಜಿ. ಯವರು ನಿಜವಾದ ನೆಮ್ಮದಿ ಬಯಸುವವರೆಲ್ಲರಿಗೂ ವೈರಾಗ್ಯ ಬೇಕು ಎನ್ನುತ್ತಾರೆ. ವೈರಾಗ್ಯ ಸಾಮ್ರಾಜ್ಯದ ಚಕ್ರವರ್ತಿಯಾದ ಶ್ರೀ ರಾಮನ ಸಾನ್ನಿಧ್ಯ ಅಯೋಧ್ಯೆಯಲ್ಲಿ ಮತ್ತೆ ತಲೆಯೆತ್ತಿ ನಿಲ್ಲುತ್ತಿದೆ, ಜಗತ್ತಿನ ಅಧ್ಯಾತ್ಮ ಸಾಧಕರನ್ನು ಸೆಳೆಯುತ್ತಿದೆ.
ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ,ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.