ಲೀಲೆಗಳಿಂದ ಲೋಕ ಮಾದರಿಯಾದ ಮುರಾರಿ
Team Udayavani, Aug 30, 2021, 6:20 AM IST
ಭಗವಂತನ ಶ್ರೀಕೃಷ್ಣಾವತಾರದ ಆದ್ಯಂತವಾಗಿ ನಮಗೆ ಕಾಣಿಸುವುದು ಮುರಲೀಲೋಲನ ಬಗೆಬಗೆಯ ಲೀಲೆಗಳು. ಎಳೆಯ ಶಿಶುವಾಗಿದ್ದಲ್ಲಿಂದ ತೊಡಗಿ ಅವನ ಪರಂಧಾಮದ ತನಕ ಜಗದ್ಕಲ್ಯಾಣ ಕಾರ್ಯಗಳನ್ನು ಸೂತ್ರಧಾರನಂತೆ ನಿಂತು ಲೀಲೆಗಳ ಮೂಲಕ ನಡೆಸಿಕೊಟ್ಟವನಾತ. ಮುರಾರಿ, ಕಾಲೀಯಮರ್ದನ, ಕಂಸಾಂತಕ ಎಂಬಿತ್ಯಾದಿ ಲೀಲೆಗಳನ್ನು ಆಧರಿಸಿ ಶ್ರೀಕೃಷ್ಣನ ನಾಮಧೇಯಗಳು ಇದನ್ನೇ ಹೇಳುತ್ತವೆ. ಒಂದೊಂದು ಲೀಲೆಗೆ ಒಂದೊಂದು ಕಥೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಉಡುಪಿಯ ಶ್ರೀಮಠಗಳ ಸ್ವಾಮೀಜಿಗಳು ಕೃಷ್ಣಾವತಾರದ ವೈಶಿಷ್ಟ್ಯ ತಮಗಿಷ್ಟವಾದ ಕೃಷ್ಣ ಕಥೆಗಳನ್ನು ತಿಳಿಸಿದ್ದಾರೆ.
ಮುಗ್ಧರು, ಸಜ್ಜನರ ಸಂರಕ್ಷಣೆ ಕೃಷ್ಣನ ಆದ್ಯತೆ:
ಶ್ರೀಕೃಷ್ಣನ ಹೆಸರೇ ಅಪಕರ್ಷತಿ ಎಂಬುದನ್ನು ಸೂಚಿಸುತ್ತದೆ. ಅಪಕರ್ಷತಿ ಎಂದರೆ ದೋಷ ನಾಶಕ ಎಂದು. ಈಗ ಶ್ರೀಕೃಷ್ಣ ನಮ್ಮ ಕಣ್ಣ ಮುಂದಿಲ್ಲ. ಕೃಷ್ಣ ಗ್ರಂಥಗಳು ಆ ವಿಶೇಷ ಸಾಮರ್ಥ್ಯವನ್ನು ಹೊಂದಿವೆ. ಶ್ರೀಕೃಷ್ಣನ ಕಥೆ, ಗ್ರಂಥಗಳ ವಿಮರ್ಶನದಲ್ಲಿ ಜೀವನಕ್ಕೆ ಬೇಕಾದ ಅಗತ್ಯ ಸಂದೇಶಗಳಿವೆ.
ನಮ್ಮ ಗುರಿಯೂ ದೋಷ ರಹಿತವಾಗಿರಬೇಕು. ಕಂಸ ಆತನ ಮಾವನೇ ಆಗಿದ್ದರೂ ಮಹಾದೋಷಯುಕ್ತ ವ್ಯಕ್ತಿ. ಅದುವರೆಗೆ ತಂಗಿಯನ್ನು ವಿಶ್ವಾಸದಿಂದ ಕಾಣುತ್ತಿದ್ದ ಕಂಸ ತನ್ನ ಸಾವಿನ ವಿಷಯ ಬಂದಾಗ ತಂಗಿ ಯನ್ನೇ ಕೊಲ್ಲುವ ಕೆಲಸಕ್ಕೆ ಮುಂದಾದ. ಮಹಾ ದೋಷಯುಕ್ತನಾದ ಕಂಸನನ್ನು ಕೃಷ್ಣ ಕೊಲ್ಲಲು ಇದು ಕಾರಣ. ಕೇವಲ ಎಂಟನೆಯ ವಯಸ್ಸಿನಲ್ಲಿ ಕೃಷ್ಣ ಈ ಮಹಾಕಾರ್ಯ ಮಾಡಿದ.
ಕೃಷ್ಣನ ತಂತ್ರಗಾರಿಕೆ ಏನು ಎಂಬುದನ್ನು ಸರಿಯಾಗಿ ಅರಿಯಬೇಕು. ಇದನ್ನು ತಿಳಿದು ಕೊಳ್ಳುವಾಗ ಆತನ ಕಾಲ, ಸಾಮಾಜಿಕ ಸ್ಥಿತಿಗತಿ ಯನ್ನು ಅರ್ಥ ಮಾಡಿಕೊಳ್ಳಬೇಕು. ಜರಾಸಂಧ ಯುದ್ಧಕ್ಕೆ ಬಂದಾಗ ಬೇರೆ ಬೇರೆ ರೀತಿಯಲ್ಲಿ ತಪ್ಪಿಸಿಕೊಂಡ. ಅಷ್ಟೂ ಬಾರಿ ಆತನ ಸೇನೆಯನ್ನು ಖಾಲಿ ಮಾಡಿಸುತ್ತ ಬಂದ. ಒಂದು ಬಾರಿಯ ತಂತ್ರವನ್ನು ಮತ್ತೂಮ್ಮೆ ಅನುಸರಿಸಲಿಲ್ಲ. ಕೊನೆಗೆ ಭೀಮನ ಮೂಲಕ ನಾಶ ಮಾಡಿದ.
ಅಕ್ರೂರ ಕಂಸನ ಆಡಳಿತದಲ್ಲಿದ್ದ. ಆದರೆ ಕೃಷ್ಣ ಭಕ್ತ. ಆತನಿಗೋ ಕೃಷ್ಣನನ್ನು ನೋಡಬೇಕೆಂಬ ಅದಮ್ಯ ಬಯಕೆ ಇತ್ತು. ಕಂಸನೇ ಅಕ್ರೂರನನ್ನು ಕೃಷ್ಣನೆಡೆಗೆ ಕಳುಹಿಸುತ್ತಾನೆ. ಕೃಷ್ಣ ಮನೆಯಲ್ಲಿರದೆ ಗೋಶಾಲೆಯಲ್ಲಿದ್ದ. ಅಕ್ರೂರನಿಗೆ ತಾನೂ ಗೋವಾಗಿರಬೇಕೆಂದೆನಿಸಿತು, ಕೃಷ್ಣ ಪ್ರೀತಿಗಾಗಿ. ಕೂಡಲೇ ಕೃಷ್ಣ ಬಂದು ಅಕ್ರೂರನನ್ನು ಅಪ್ಪಿಕೊಂಡ. ಭಕ್ತಿ ಇದ್ದಾಗ ಮಾತ್ರ ಇದು ಸಾಧ್ಯ. ಕೇವಲ ತುಳಸಿ ದಳವನ್ನು ಹಾಕಿದರೂ ಸಾಕು, ಆಡಂಬರದ ಪ್ರದರ್ಶನ ಅಗತ್ಯವಿಲ್ಲ ಎಂಬ ಸಂದೇಶ ಇಲ್ಲಿದೆ.
ಉತ್ತರ ಭಾರತದಲ್ಲಿ ಕೃಷ್ಣನಿಗೆ ರಣಛೋಡ್ ಎಂಬ ಹೆಸರಿದೆ. ಜರಾಸಂಧನಿಂದ ವಾಪಸು ಹೋದದ್ದು ಇದಕ್ಕೆ ಕಾರಣ. ನಮಗೆ ಮೇಲ್ನೋಟಕ್ಕೆ ಕಾಣುವುದು ಪಲಾ ಯನವಾದ. ಆದರೆ ಜರಾಸಂಧನನ್ನು ಸುಸ್ತಾಗುವಂತೆ ಮಾಡಿದ್ದು ಕೃಷ್ಣನ ತಂತ್ರ. ಎಷ್ಟೋ ಬಾರಿ ಯುದ್ಧ ಮಾಡುವುದೇ ಸಾಹಸವಲ್ಲ. ಬುದ್ಧಿವಂತಿಕೆ ಅಗತ್ಯ. ಕಲಿ ಯುಗದಲ್ಲಿ “ಶಟಂ ಪ್ರತಿ ಶಾಟ್ಯಂ’ ಎಂಬ ಮಾತಿನಂಂತೆ ಸುಳ್ಳರಿಗೆ ಸುಳ್ಳಿನಿಂದಲೇ ಬಗ್ಗು ಬಡಿಯಬೇಕು. ಒಟ್ಟಾರೆಯಾಗಿ ಧರ್ಮರಕ್ಷಣೆಯಾಗಬೇಕು. ಧರ್ಮರಕ್ಷಣೆ ಅಂದರೆ ಏನು ಎಂಬ ಜಿಜ್ಞಾಸೆ ಬರುತ್ತದೆ. ಸಜ್ಜನರ ಉಳಿವಿಗೆ ಕಾರ್ಯ ಮಾಡಬೇಕು. ಅಂದರೆ ಎಲ್ಲ ಕಾರ್ಯ, ಮಾತು, ಅಭಿವ್ಯಕ್ತಿ ಸಜ್ಜನರ ಉಳಿವಿಗೆ ಸಹಾಯಕವಾಗಬೇಕು. – ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಅದಮಾರು ಮಠ, ಶ್ರೀಕೃಷ್ಣ ಮಠ, ಉಡುಪಿ
ನೀಲೆಯ ಕಲ್ಯಾಣ- ಲೋಕಕ್ಕೆ ಕಲ್ಯಾಣ :
ಕೋಸಲ ದೇಶದ ರಾಜ ನಗ್ನಜಿತ್. ಅವನ ಪ್ರೀತಿಯ ಕುವರಿ ನೀಲಾದೇವಿ. ನೀಲಾದೇವಿಗೆ ಕೃಷ್ಣನನ್ನು ವರಿಸುವ ಹೆಬ್ಬಯಕೆ. ಇದಕ್ಕಾಗಿ ತಪಸ್ಸನ್ನೂ ಮಾಡಿದ್ದಳು. ಇದನ್ನರಿಯದ ನಗ್ನಜಿತುವಿಗೆ ನೀಲಾದೇವಿಯನ್ನು ಸಮರ್ಥನಾದ ರಾಜನಿಗೆ ಮದುವೆ ಮಾಡಿಕೊಡಬೇಕೆಂಬ ಆಸೆ. ಹೀಗಾಗಿ ರುದ್ರದೇವರ ವರವುಳ್ಳ ಅಸುರರ ಸಹಿತ ಬಲಿಷ್ಠಗಳಾದ ಏಳು ಗೂಳಿಗಳನ್ನು ಏಕಕಾಲದಲ್ಲಿ ಕಟ್ಟಿಹಾಕುವ ವ್ಯಕ್ತಿಗೆ ಕನ್ಯಾದಾನವನ್ನು ಮಾಡುತ್ತೇನೆ ಎಂದು ಘೋಷಣೆ ಮಾಡುತ್ತಾನೆ.
ಸಮರ್ಥವಾದ ರಾಜರೆಲ್ಲರೂ ಆ ಗೂಳಿಗಳನ್ನು ನೋಡಿಯೇ ಓಡಿಹೋದರು. ನೀಲಾದೇವಿಯ ಭಕ್ತಿಪೂರ್ವಕವಾದ ಪ್ರೇಮವನ್ನು ಅರಿತಿದ್ದ ಕೃಷ್ಣನು ಅಲ್ಲಿಗೆ ಬಂದು ಲೀಲಾಜಾಲ ವಾಗಿ ಆ ಗೂಳಿಗಳನ್ನು ನಿಗ್ರಹಿಸಿದನು. ನಗ್ನಜಿತ್ ರಾಜನು ಮಗಳನ್ನು ಕೃಷ್ಣನಿಗೆ ಕೊಟ್ಟು ಮದುವೆ ಮಾಡಿದನು. ಕೃಷ್ಣನ ಅಷ್ಟ ಮಹಿಷಿಯರಲ್ಲಿ ಒಬ್ಬಳು ಈ ನೀಲಾದೇವಿ. ಈ ಕಥೆಯನ್ನು ನಾವು ಭಾಗವತದಲ್ಲಿ ಕೇಳುತ್ತೇವೆ.
ನಮ್ಮ ಪಾಲಿಗೆ ಈ ಕಥೆಯು ಆದರ್ಶವಾಗಬೇಕು- ನಮ್ಮ ಪ್ರೀತಿಯ ಅಮೂಲ್ಯ ಹೃದಯವೇ ನೀಲಾದೇವಿ. ನೀಲಾದೇವಿಯು ಕೃಷ್ಣನನ್ನು ಬಯಸಿದಂತೆ, ನಮ್ಮ ಹೃದಯವೂ ಕೃಷ್ಣನನ್ನು ಬಯಸಬೇಕು. ದುವ್ಯìಸನಗಳನ್ನು ಬಿಡುವುದೇ ಕೃಷ್ಣನನ್ನು ಪಡೆಯಲು ಬೇಕಾದ ತಪಸ್ಸು. ಈ ತಪಸ್ಸಿನೊಂದಿಗೆ ನಮ್ಮ ಕರ್ತವ್ಯಗಳನ್ನು ಕೃಷ್ಣನು ನಮ್ಮಿಂದ ಮಾಡಿಸುತ್ತಿದ್ದಾನೆ ಎಂಬ ಭಾವನೆಯಿಂದ ಮಾಡಿದರೆ ನಮ್ಮ ಹೃದಯವು ನೀಲೆಯಾಗುತ್ತದೆ.
ಈ ಹೃದಯವೆಂಬ ನೀಲೆಯನ್ನು ನಮ್ಮ ಜೀವನೆಂಬ ನಗ್ನಜಿತು ಕೃಷ್ಣನಿಗೆ ಅರ್ಪಿಸ ಬೇಕು. ಅದಕ್ಕಾಗಿ ನಮ್ಮ ಹತ್ತಿರ ಇರುವ ಬಲಿಷ್ಠಗಳಾದ ಏಳು ಗೂಳಿಗಳನ್ನು ಕಟ್ಟಿಹಾಕುವ ಪಂಥಾಹ್ವಾನವನ್ನು ಕೃಷ್ಣನಿಗೆ ನೀಡಬೇಕು. ಕಿವಿ, ಕಣ್ಣು, ಚರ್ಮ, ನಾಲಗೆ, ಮೂಗು, ಮನಸ್ಸು, ಬುದ್ಧಿ ಇವುಗಳೇ ನಮ್ಮಲ್ಲಿರುವ ಏಳು ಗೂಳಿಗಳು. ಈ ಏಳು ಗೂಳಿಗಳನ್ನು ನಿಯಂತ್ರಿಸುವುದು ಬಹಳ ಕಷ್ಟ. ಹೀಗಾಗಿ ನಾವು ಕೃಷ್ಣನಲ್ಲಿ ಪ್ರಾರ್ಥನೆ ಮಾಡಬೇಕು -ಕೃಷ್ಣ! ನನ್ನ ದೇಹದಲ್ಲಿರುವ ಏಳು ಗೂಳಿಗಳನ್ನು ನೀನು ನಿಯಂತ್ರಿಸಿದರೆ, ನನ್ನ ಹೃದಯವೆಂಬ ನೀಲೆಯನ್ನು ನಿನಗೆ ಕೊಡುತ್ತೇನೆ ಎಂದು. ಹೀಗೆ ನಮ್ಮ ಹೃದಯವು ಕೃಷ್ಣನಿಗೆ ಸಮರ್ಪಿಸಲ್ಪಟ್ಟರೆ ನಮ್ಮ ಬದುಕು ಬಂಗಾರ. ಈಗ ಜಗತ್ತಿನಲ್ಲಿ ಕೊರೊನಾ, ತಾಲಿಬಾನ್‌ನಂಥ ಗೂಳಿಗಳು ಮುನ್ನುಗ್ಗುತ್ತಿವೆ. ಇವುಗಳನ್ನು ಕೂಡಾ ಬೇಗನೇ ನಿಗ್ರಹಿ ಸುವಂತೆ ಕೃಷ್ಣನಲ್ಲಿ ವಿಶೇಷವಾಗಿ ಪ್ರಾರ್ಥಿಸೋಣ. ಇದೇ ನೀಲಾಕಲ್ಯಾಣದ ಸಾರ. ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು,ಪಲಿಮಾರು ಮಠ
ಶ್ರೀಕೃಷ್ಣ ದೇವರ ವಿಶ್ವಸಂದೇಶ :
ಹಿಂದೆ ದ್ವಾಪರ ಯುಗದಲ್ಲಿ ಭೂಮಿಯ ಮೇಲೆ ದುರ್ಜನರ ಹಾವಳಿ ಅಧಿಕವಾಗಿತ್ತು. ಸಾಧುಗಳಿಗೆ, ಸಾಧು ಸ್ವಭಾವದ ಪ್ರಾಣಿಗಳಿಗೆ ಹಿಂಸೆಯೂ ಅಧಿಕವಾಯಿತು. ಎಲ್ಲರೂ ದೇವರ ಮೊರೆ ಹೋದರು. ಆಗ ಸಜ್ಜನರನ್ನು ರಕ್ಷಣೆ ಮಾಡಿ, ದುರ್ಜನರನ್ನು ದಂಡನೆ ಮಾಡುವುದಕ್ಕಾಗಿ ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್| ಎಂಬ ಶ್ರೀಕೃಷ್ಣ ದೇವರ ಮಾತಿನಂತೆ ಪುರುಷೋತ್ತಮನಾದ ಪರಬ್ರಹ್ಮನೇ ಅವತರಿಸಿದನು.
ಶ್ರೀ ಕೃಷ್ಣನ ಅವತಾರದ ಸಂದೇಶ:
ವಸುದೇವ ದೇವಕಿಯರನ್ನು ಕಂಸನು ಕಾರಾಗೃಹದಲ್ಲಿ ಇಟ್ಟಿದ್ದನು. ಕೈಗಳಿಗೆ ಸಂಕೋಲೆ ಹಾಕಿದ್ದ. ಅಲ್ಲಿಯೇ ಶ್ರೀಕೃಷ್ಣನ ಅವತಾರವಾದದ್ದು. ಅವತಾರ ಆಗುವಾಗ ವಸುದೇವ -ದೇವಕಿಯರ ಎದುರು ಶಂಖ ಚಕ್ರ ಗದಾ ಪದ್ಮಗಳನ್ನು ಕೈಯಲ್ಲಿ ಧರಿಸಿ ಪ್ರತ್ಯಕ್ಷನಾದನು. ಶ್ರೀಕೃಷ್ಣನನ್ನು ನೋಡಿದ ತಂದೆ-ತಾಯಿಯರು, ಹೇ ಶ್ರೀಕೃಷ್ಣನೇ ನೀನು ನಿಮ್ಮ ಮಗನಲ್ಲ. ನಮ್ಮೆಲ್ಲರ ತಂದೆ ಸ್ವಾಮೀ, ಸಾಕ್ಷಾತ್ ಪರಬ್ರಹ್ಮ ಎಂದು ಕೊಂಡಾಡಿದರು. ಅನಂತರ ಮತ್ತೆ ಶಿಶುರೂಪದಲ್ಲಿ ಕಾಣಿಸಿದನು.
ಇದರಿಂದ ಶ್ರೀ ಕೃಷ್ಣನು ನಮ್ಮಂತೆ ಮನುಷ್ಯನಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಸಾಮಾನ್ಯವಾಗಿ ಕೃಷ್ಣ ದೇವರ ಬಗ್ಗೆ ಕೆಲವರು ಹೇಳುವುದಿದೆ, ಅವನು ಸ್ತೀಲೋಲುಪ, ಜಗಳ ಮಾಡಿಸಿದವ, ಯುದ್ಧ ಮಾಡಿಸಿ ಅನೇಕರಿಗೆ ಹಿಂಸೆ ಮಾಡಿ ದವನು, ಅವನೊಬ್ಬ ನಮ್ಮಂತೆ ಮನುಷ್ಯ ಹೀಗೆ ನಾನಾ ರೀತಿಯ ನಿಂದನೆ ಮಾಡಲಾಗುತ್ತದೆ.
ಆದರೆ ಶಾಸ್ತ್ರಗಳು ಕೃಷ್ಣನನ್ನು ಮನುಷ್ಯ ಎಂದು ಹೇಳಲಿಲ್ಲ. ಮನುಷ್ಯ ರೂಪದಲ್ಲಿ ಇರುವ ದೇವರು ಎಂದು ತಿಳಿಸಿದೆ. ಸರ್ವೋತ್ತಮ ಎಂದು ಕರೆದಿದೆ. ಈ ವಿಷಯವು ಶ್ರೀ ಕೃಷ್ಣ ದೇವರ ಅವತಾರದಿಂದಲೇ ಸ್ಪಷ್ಟವಾಗುತ್ತದೆ. ಶ್ರೀಕೃಷ್ಣನ ಜನನವಾದಾಗ ಕೈಯಲ್ಲಿ ಅನೇಕ ಆಯುಧಗಳಿದ್ದವು. ಕಿರೀಟಾದಿ ಆಭರಣಗಳಿದ್ದವು. ಸ್ವಯಂ ತಂದೆ-ತಾಯಿಯಂದಿರೇ ಇವನು ನಮ್ಮ ಮಗನಲ್ಲ. ಜಗತ್ತನ್ನು ಸೃಷ್ಟಿ ಮಾಡಿದ ದೇವರು. ನಮ್ಮ ಸ್ವಾಮೀ ಎಂದು ನುಡಿದರು. ಇದರಿಂದ ಜಗತ್ತಿಗೆ ಒಂದು ಸಂದೇಶ ನೀಡಿದಂತಾಗಿದೆ.
ಶ್ರೀಕೃಷ್ಣ ಕಥೆಯಲ್ಲಿ ಅನೇಕ ಘಟನೆಗಳು ತುಂಬಾ ವಿಚಿತ್ರವಾಗಿ ಕಾಣಿಸುತ್ತವೆ. ಅದು ಸರಿಯೇ?, ಇದು ಸರಿಯೇ? ಎಂದು ಪ್ರಶ್ನೆಗಳು ಮೂಡುತ್ತವೆ. ಆದರೆ ಅವೆಲ್ಲದರ ಹಿಂದಿನ ಉದ್ದೇಶವೇ ಬೇರೆ. ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ತಿಳಿಯುವುದು. ಜಗತ್ತಿನ ಸ್ವಾಮಿಯಾದ ದೇವರು ಯಾವುದೋ ಉದ್ದೇಶದಿಂದ ತಾನು ಆ ರೀತಿಯಾಗಿ ವರ್ತಿಸು ತ್ತಾನೆ ವಿನಾ ಅವನು ನಮ್ಮಂತೆ ಮನುಷ್ಯನಲ್ಲ. ಅವನು ನಮಗಿಂತ ತುಂಬಾ ಎತ್ತರದಲ್ಲಿರುವ ನಮ್ಮ ಪರಮ ಆತ್ಮೀಯನಂತಿರುವ ದೇವರು ಎಂದು ತಿಳಿಯಬೇಕು. ಸ್ವಯಂ ಶ್ರೀಕೃಷ್ಣನೇ ತನ್ನ ಸರ್ವೋತ್ತಮತ್ವವನ್ನು ತಾನೇ ತನ್ನ ಗೀತೆಯಲ್ಲಿ ತಿಳಿಸಿದ್ದಾನೆ. ಅತೋ ಸ್ಮಿ ಲೋಕೋ ವೇದೇ ಚ ಪ್ರಥಿತಃ ಪುರುಷೋತ್ತಮಃ|| ಎಂದು. ಪವಿತ್ರವಾದ ಶ್ರೀಕೃಷ್ಣ ಅವತಾರದ ಪುಣ್ಯಕಾಲದಲ್ಲಿ ಅವನನ್ನು ಸರ್ವೋತ್ತಮನೆಂದು ತಿಳಿದು ಕೃತಾರ್ಥರಾಗೋಣ. ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಕಾಣಿಯೂರು ಮಠ
ಶ್ರೀಕೃಷ್ಣಾ ! ಮತ್ತೆ ಮತ್ತೆ ಬಾ! : “ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಮ್| ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ’ ಎಂದು ಅಭಯ ವಿತ್ತಿರುವ ಭಗವಂತ ಯುಗಯುಗಗಳಲ್ಲೂ ಅವತರಿಸಿದ್ದಾನೆ, ದುಷ್ಟರನ್ನು ಶಿಕ್ಷಿಸಿದ್ದಾನೆ, ಶಿಷ್ಟರನ್ನು ಪೊರೆದಿದ್ದಾನೆ.
ನರಕಾಸುರ ಸಂಹಾರ, ಜರಾಸಂಧನ ಸಂಹಾರ, ಕಂಸಾಸುರನ ಸಂಹಾರ ಇವೆಲ್ಲ ಕೃಷ್ಣಾವತಾರದ ಪ್ರಮುಖ ಘಟ್ಟಗಳು. ಕಂಸ ತಾನು ಮೆರೆಯಬೇಕೆಂದು ತನ್ನ ಅಪ್ಪ ಉಗ್ರಸೇನ ಮಹಾರಾಜರನ್ನೇ ಸೆರೆಯಲ್ಲಿಟ್ಟ, ತಂಗಿ ದೇವಕಿಯ ಹೊಟ್ಟೆಯಲ್ಲಿ ತನ್ನನ್ನು ಕೊಲ್ಲುವ ಮಗು ಹುಟ್ಟುವುದೆಂದು ತಿಳಿದು ತಂಗಿಯನ್ನೇ ಕೊಲ್ಲಲು ಮುಂದಾದ. ವಸುದೇವ ಉಪಾಯದಿಂದ ಅದನ್ನು ತಡೆದರೂ ಕಂಸ ಅವರಿಬ್ಬರನ್ನೂ ಸೆರೆಯಲ್ಲಿಟ್ಟ. ಯದುಗಳು, ವೃಷಿ¡ಗಳು, ಭೋಜರು, ಅಂಧಕರು ಎಂಬ ಕುಲ ಬಾಂಧವರನ್ನೆಲ್ಲ ಊರು ಬಿಟ್ಟೋಡಿಸಿದ. ತನ್ನದೇ ಸ್ವಭಾವದ ದುಷ್ಟಪಡೆಯನ್ನು ನಿರ್ಮಿಸಿ ಅದರ ಮೂಲಕ ಗೋಹತ್ಯೆ- ಶಿಶುಹತ್ಯೆ ಗೈಯುತ್ತಾ ಅದರಲ್ಲೇ ಖುಷಿ ಕಂಡ.
ಇನ್ನೊಂದೆಡೆ ನರಕಾಸುರ ಅಪರಿಮಿತನಾದ ತನ್ನ ತೋಳ್ಬಲ, ವರಬಲಗಳಿಂದ ಕೊಬ್ಬಿದವನಾಗಿ ತನ್ನದೇ ಸ್ವಭಾವದ ದುಷ್ಟರ ಪಡೆಯನ್ನು ನಿರ್ಮಿಸಿಕೊಂಡು ರಾಜ್ಯ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅಲ್ಲಿನ ರಾಜಕುವರಿಯರನ್ನು, ಹೆಣ್ಣುಮಕ್ಕಳನ್ನೆಲ್ಲ ಬಲಾತ್ಕಾರವಾಗಿ ಹೊತ್ತು ತಂದ. ತನ್ನ ಉಪಭೋಗಕ್ಕೆಂದೇ ಅವರ ಇಚ್ಛೆಗೆ ವಿರುದ್ಧವಾಗಿ ಅವರನ್ನೆಲ್ಲ ಸೆರೆಯಲ್ಲಿಟ್ಟ. ಅಮಾಯಕ ಹೆಣ್ಣು ಮಕ್ಕಳ ಕಣ್ಣೀರ ಕೋಡಿ ಹರಿಸಿದ.
ಮತ್ತೂಂದೆಡೆ ಜರಾಸಂಧ ಅಸಾಧಾರಣವಾದ ದೈಹಿಕ ಸಾಮರ್ಥ್ಯ, ವರಬಲ ಗಳಿಂದ ಕೊಬ್ಬಿದವನಾಗಿ ರಾಜ್ಯರಾಜ್ಯಗಳ ರಾಜಾಧಿರಾಜರನ್ನೆಲ್ಲ ತನ್ನ ಗುಲಾಮ ರನ್ನಾಗಿ ಮಾಡಿಕೊಂಡ. ತಾನು ಕರೆದಲ್ಲಿಗೆ, ತಾನು ಕರೆದಾಗಲೆಲ್ಲ ತಮ್ಮ ತಮ್ಮ ಸೈನ್ಯ ಸಮೇತರಾಗಿ ಬಂದು ತನ್ನ ಪರವಾಗಿ ಯುದ್ಧ ಮಾಡುವಂತೆ ಬಲಾತ್ಕರಿಸಿದ. ಆಯಾ ರಾಜ್ಯಗಳ ರಾಜಕುವರರನ್ನೆಲ್ಲ ಸೆರೆ ಹಿಡಿದು ತಂದು ಬಂಧನದಲ್ಲಿಟ್ಟು ಯಜ್ಞದಲ್ಲಿ ಪಶುಬಲಿ ನೀಡುವಂತೆ ತಲೆ ಕಡಿದು ನರಬಲಿ ಕೊಡಬೇಕೆಂದು ತೀರ್ಮಾನಿಸಿದ.
ಇವರೆಲ್ಲ ಎಷ್ಟು ಬಲಿಷ್ಠರಾಗಿದ್ದರೆಂದರೆ ಇವರನ್ನೆಲ್ಲ ಪ್ರಶ್ನಿಸುವುದೇ ಯಾರಿಗೂ ಅಂದು ಸಾಧ್ಯವಾಗಿರಲಿಲ್ಲ. ಇವರು ಆಡಿದ್ದೇ ಆಟ ಎಂದಾಗಿತ್ತು. ಅಂದಿನ ಪರಿಸ್ಥಿತಿ ಹೇಗಿತ್ತು ಎಂದು ಅರ್ಥೈಸಿಕೊಳ್ಳಬೇಕೆಂದರೆ ನಮ್ಮ ನೆರೆಯ ದೇಶದ ದಯನೀಯ ಸ್ಥಿತಿಯತ್ತ ಒಮ್ಮೆ ಕಣ್ಣಾಡಿಸಿದರೆ ತಿಳಿಯುತ್ತದೆ. ಶ್ರೀಕೃಷ್ಣ ಮತ್ತೆ ಮತ್ತೆ ಅವತರಿಸಿ ಬರಲಿ. –ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪೇಜಾವರ ಮಠ
ವೃಕ್ಷರೂಪದಲ್ಲಿದ್ದ ಉಗ್ರಾಸುರನ ಸಂಹಾರ :
ಕೃಷ್ಣಾಷ್ಟಮಿಯ ಶುಭ ಸಂದರ್ಭದಲ್ಲಿ ಕೃಷ್ಣ ಅವತಾರದ ಉದ್ದೇಶವನ್ನು ತಿಳಿದು ಕೃಷ್ಣನ ವಿವಿಧ ಲೀಲೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ದುಷ್ಟ ನಿಗ್ರಹ, ಭೂಭಾರಹರಣ ಹಾಗೂ ಸಜ್ಜನರ ಪಾಲನೆ ಇಷ್ಟು ಮಾತ್ರ ಭಗವಂತನ ಅವತಾರದ ಉದ್ದೇಶಗಳಾಗಿರುವುದಿಲ್ಲ. ಇದರ ಜತೆಗೆ ಮತ್ಯಾìಯವತಾರಸ್ತಿ$Ìಹ ಮರ್ತ್ಯ ಶಿಕ್ಷಣಂ ಎಂದು ಪ್ರಮಾಣಗಳು ತಿಳಿಸುವಂತೆ ಜನರಿಗೆ ಬದುಕುವ ರೀತಿಯನ್ನು ತಿಳಿಸುವುದಕ್ಕೋಸ್ಕರವೂ ಆಗಿರುತ್ತದೆ. ಕೃಷ್ಣನ ಲೀಲೆಗಳನ್ನು ಈ ದೃಷ್ಟಿಯಿಂದ ನೋಡಿದಾಗ ಅವನ ಜೀವನದ ಯಾವುದೇ ಘಟನೆ ಗಳು ಪ್ರಸ್ತುತ ಸಮಾಜದ ವಿವಿಧ ಸಮಸ್ಯೆಗಳಿಗೆ ಉತ್ತರದಾಯಿಗಳಾಗಿವೆ. ಇದಕ್ಕೆ ಸಂವಾದಿ ಯಾಗಿ ಶ್ರೀಕೃಷ್ಣ -ಬಲರಾಮರು ವೃಂದಾ ವನದಲ್ಲಿ ನಡೆಸಿದ ವೃಕ್ಷರೂಪದಲ್ಲಿದ್ದ ಉಗ್ರ ಎಂಬ ಅಸುರನ ಸಂಹಾರ ಮೇಲಿನ ವಿಷಯವನ್ನೇ ದೃಢಗೊಳಿಸುತ್ತದೆ.
ನಂದಗೋಕುಲದಲ್ಲಿ ಬಹಳ ಕಾಲ ನೆಲೆಸಿದ್ದರಿಂದ ಆ ಸ್ಥಳದ ಪ್ರಾಕೃತಿಕ ರೂಪ ಮರೆಯಾಗಿ ಪಟ್ಟಣದ ರೂಪ ಪಡೆಯುತ್ತಿರಲು ವನಪ್ರಿಯರಾದ ಶ್ರೀಕೃಷ್ಣ -ಬಲರಾಮರು ಗೋಕುಲವನ್ನು ತ್ಯಜಿಸಿ ತಮ್ಮವರು ಹಾಗೂ ಪಶುಗಳ ಮಂದೆಗಳೊಡನೆ ವೃಂದಾವನಕ್ಕೆ ತೆರಳುತ್ತಾರೆ. ಅಲ್ಲಿ ವೃಕ್ಷ ರೂಪ ದಲ್ಲಿದ್ದ ಉಗ್ರಾಸುರನ ಉಪಟಳದಿಂದಾಗಿ ಕೃಷ್ಣನನ್ನು ಹೊರತು ಉಳಿದವರೆಲ್ಲರೂ ರೋಗಗ್ರಸ್ತರಾಗುತ್ತಾರೆ. ದಾರಿಹೋಕರಿಗೆ ನೆರಳು ನೀಡುವುದು, ಮನುಷ್ಯರಿಗೆ, ಪಕ್ಷಿಗಳಿಗೆ, ಪ್ರಾಣಿಗಳಿಗೆ ಹೂಹಣ್ಣುಗಳನ್ನು ನೀಡುವುದು. ಕೀಟಗಳಿಗೆ ಮಧುವನ್ನು ಕೊಡುವುದು, ನಿರ್ಮಾಣ ಕಾರ್ಯಗಳಿಗೆ ಉಪಯೋಗಿಯಾದಂತಹ ಮೋಪನ್ನು ಒದಗಿಸುವುದು- ಹೀಗೆ ವೃಕ್ಷ ಜನ್ಮದಿಂದ ಪರೋಪಕಾರಗಳ ಸಮೂಹವನ್ನೇ ಮಾಡ ಬಹುದು. ಆದರೆ ದುರ್ಜನರು ಇಂಥ ಜನ್ಮ ಹೊಂದಿದರೂ ತಮ್ಮ ಹುಟ್ಟುಗುಣ ಬಿಡಲೊಲ್ಲರು ಎಂಬುದಕ್ಕೆ ಈ ವೃಕ್ಷರೂಪದಲ್ಲಿದ್ದ ಉಗ್ರಾಸುರನೇ ಸಾಕ್ಷಿಯಾಗುತ್ತಾನೆ. ಇವನ ಸಂಪರ್ಕಕ್ಕೆ ಬಂದ ಗಾಳಿಯಿಂದ ಕೂಡ ವೃಂದಾವನ ವಾಸಿಗಳಿಗೆ ವಿವಿಧ ರೋಗಗಳು ಬರುವಂತಾಗುತ್ತದೆ. ವರಬಲದಿಂದ ಇವನು ಎಷ್ಟೊಂದು ಘೋರಶಕ್ತಿ ಯನ್ನು ಪಡೆದಿದ್ದನೆಂದರೆ ಸಾಕ್ಷಾತ್ ಶೇಷನ ಅವತಾರ ಎನಿಸಿದ, ಸ್ವಯಂ ವಿಷಧರ ನಾಗಿದ್ದ ಬಲರಾಮನು ಕೂಡ ಇವನ ಸಂಪರ್ಕದಿಂದ ರೋಗಗ್ರಸ್ತನಾಗುತ್ತಾನೆ. ಕೃಷ್ಣನು ತನ್ನ ಆಲಿಂಗನದಿಂದ ಬಲರಾಮನ ರೋಗವನ್ನು ನೀಗಿಸಿ, ವೃಕ್ಷರೂಪದಲ್ಲಿದ್ದ ಉಗ್ರಾಸುರನನ್ನು ಸಮೂಲವಾಗಿ ಕಿತ್ತು ನಾಶ ಮಾಡುತ್ತಾನೆ. ಹೀಗೆ ವೃಂದಾವನಕ್ಕೆ ಬಂದ ಆಪತ್ತನ್ನು ಪರಿಹರಿಸಿ ತನ್ನವರನ್ನು ಕಾಪಾಡುತ್ತಾನೆ. ಈ ಕಥೆಯಿಂದ ನಾವು ತಿಳಿಯಬಹುದಾದ ತಣ್ತೀವೇನೆಂದರೆ ಅಸುರರು ಸಜ್ಜನರನ್ನು ಬಾಧಿಸಲು ಯಾವುದೇ ವಿಧವಾದ ವೇಷ ಧರಿಸಲು ಕೂಡ ತಯಾರಿರುತ್ತಾರೆ. ಅವರ ಉದ್ದೇಶ ವನ್ನು ಗುರುತಿಸಿ ಅವರನ್ನು ನಿಗ್ರಹಿಸಿ, ಸಜ್ಜನರನ್ನು ರಕ್ಷಿಸಬೇಕಾದದ್ದು ಪಾಲಕರ ಕರ್ತವ್ಯವಾಗಿರುತ್ತದೆ. ಉಗ್ರವಾದ ವಿಶ್ವಾದ್ಯಂತ ವಿಸ್ತರಿಸುತ್ತಿರುವ ಈ ಕಾಲದಲ್ಲಿ ಉಗ್ರ ರನ್ನು ನಿಗ್ರಹಿಸಿದರೆ ಮಾತ್ರ ಕಾನೂನಿನ ಸುವ್ಯವಸ್ಥೆ ಸಾಧ್ಯವಾಗುತ್ತದೆ.–ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಕೃಷ್ಣಾಪುರ ಮಠ
ಶ್ರೀಕೃಷ್ಣ ಹೇಳಿದ ಮಹಾಗುಟ್ಟು : ಈಗ ಒಬ್ಬರ ಗುಟ್ಟನ್ನು ಮತ್ತೂಬ್ಬರು ಹೊರಹಾಕುವುದರಲ್ಲಿ ತಜ್ಞರಾಗಿದ್ದೇವೆ. ಇದು ಒಬ್ಬ ತಿನ್ನುವುದರಿಂದ ಶುರುವಾಗುತ್ತದೆ. ಈಗ ತಂತ್ರಜ್ಞಾನ ಮುಂದುವರಿದು ಉಪಗ್ರಹಗಳೂ ಎಲ್ಲರ ಗುಟ್ಟುಗಳನ್ನು ಸೆರೆ ಹಿಡಿಯುತ್ತವೆ. ಇದು ಯಾರಿಗೂ ಗೊತ್ತಾಗುವುದಿಲ್ಲ. ಶ್ರೀಕೃಷ್ಣ ತನ್ನನ್ನೇ ದೊಡ್ಡ ಗುಟ್ಟು ಎನ್ನುತ್ತಾನೆ. ನಾವು ಮಾಡುವ ಎಲ್ಲ ಗುಟ್ಟುಗಳನ್ನು ಕಂಡು ಹಿಡಿಯುವುದರಲ್ಲಿ ನಾನು ಅವ್ಯಕ್ತ ಮೂರ್ತಿಯಾಗಿದ್ದೇನೆ. ಇದಕ್ಕಿಂತ ದೊಡ್ಡ ಗುಟ್ಟು ಜಗತ್ತಿನಲ್ಲಿ ಇನ್ನೇನಿದೆ? ನಾನೇ ರಾಜಗುಟ್ಟು ಎನ್ನುತ್ತಾನೆ.
ಲೋಕವ್ಯವಸ್ಥೆಗಾಗಿ ಕಾಪಿಟ್ಟ ಲೌಕಿಕ ಗುಟ್ಟನ್ನು ರಟ್ಟು ಮಾಡುವುದಕ್ಕಿಂತ ಗುಟ್ಟುಗಳ ರಾಜನಾದ ನನ್ನನ್ನು ತಿಳಿದರೆ ಅದರಿಂದಲೇ ಲೋಕ ಸುಸ್ಥಿತಿಗೆ ಬರುತ್ತದೆ. ಇದನ್ನು ತಿಳಿ. ನಿಮ್ಮೆಲ್ಲ ಗುಟ್ಟು ಗಳು ಇರುವುದು, ನಡೆಯುವುದು ನನ್ನ ಕಾಲಾಕಾಶಗಳಲ್ಲಿ ಎಂಬ ಗುಟ್ಟಿಗಿಂತ ದೊಡ್ಡ ಗುಟ್ಟು ಯಾರ ಬಳಿ ಇದೆ? ಇರಲು ಸಾಧ್ಯ ವಿದೆಯೆ? ಪ್ರಜೆಗಳಲ್ಲಿ ಭಗವಂತನಾದ ನಾನು ಸರ್ವತ್ರ ವ್ಯಾಪ್ತನಾಗಿದ್ದೇನೆ ಎಂಬ ರಾಜವಿದ್ಯೆ ಜಾಗೃತಿಯಿಂದಲೇ ರಾಜರು ರಾಜ್ಯವಾಳುತ್ತಾರೆ ಹೊರತು ಇಲ್ಲದಿದ್ದರೆ ರಾಜನಿದ್ದರೂ ಅರಾಜಕತೆ ರಾರಾಜಿಸುತ್ತದೆ. ಆದ್ದರಿಂದಲೇ ನಾನು ರಾಜವಿದ್ಯೆ, ರಾಜಗುಹ್ಯ ಎಂಬ ಮಾತನ್ನು ಕೃಷ್ಣ ನುಡಿಯುತ್ತಾನೆ.
ಉಡುಪಿಯಲ್ಲಿ ಕನಕದಾಸರ ಕಥೆ ಎಲ್ಲರಿಗೂ ಗೊತ್ತಿದೆ. ಕನಕದಾಸರು “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ, ಕಾಗಿನೆಲೆಯಾದಿ ಕೇಶವನೆ’ ಎಂದಾಗ ಕಿಂಡಿಯಲ್ಲಿ ಕೃಷ್ಣನ ಮೂರ್ತಿ ಕಂಡಿತು. ಭಕ್ತಿಗೆ ಜಾತಿ ಇಲ್ಲ, ಲಿಂಗವಿಲ್ಲ, ವಾದಿರಾಜರು ಕನಕರ ಭಕ್ತಿಯನ್ನು ಗೌರವಿಸಿದರು.
ಈ ಕಥೆಯ ಹಿಂದೆ ಪ್ರತಿಯೊಬ್ಬ ಸಾಧಕನೂ ಒಬ್ಬ ಕನಕನ ಪ್ರತೀಕವಾಗುತ್ತಾನೆ. ಭಗವಂತನ ದರ್ಶನಕ್ಕಾಗಿ ಹೋಗುತ್ತಾನೆ. ಅರಿಷಡ್ವರ್ಗಗಳ ಗೋಡೆ ಇದಿರಾಗುತ್ತದೆ. ಭಕ್ತಿಯ ಪ್ರಾರ್ಥನೆಗೆ ಈ ಗೋಡೆ ಒಡೆಯುತ್ತದೆ. ಜ್ಞಾನ, ಭಕ್ತಿ, ವೈರಾಗ್ಯಗಳೆಂಬ ಮೂರು ನಂಬರ್‌ಗಳಿಂದ ಬೀಗ ತೆರೆಯುತ್ತದೆ. ಶ್ರೀಕೃಷ್ಣನ ಹೆಸರೇ ಕನಕನ ಕಥೆ ಯನ್ನು ಹೇಳುತ್ತದೆ. ಅಯಸ್ಕಾಂತದಂತೆ ಶ್ರೀಕೃಷ್ಣ ನಾಮ ಆಕರ್ಷಿಸುತ್ತದೆ. ಉಪ ನಿಷತ್ತಿನಲ್ಲಿ “ಭಿದ್ಯತೇ ಹೃದಯಗ್ರಂಥಿಃ… ತಸ್ಮಿನ್ ದೃಷ್ಟೇ ಪರಾವರೇ||’ ಭಗವಂತನ ದರ್ಶನವಾದಾಗ ಹೃದಯದ ಗೋಡೆ ಬಿರಿಯುತ್ತದೆ. ಇದು ವೇದಾಂತ ಸಂದೇಶ. –ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.