ಇನ್ನು ಓದಿದರೂ ಎಸೆಸೆಲ್ಸಿ ತೇರ್ಗಡೆಯಾಗಬಹುದು
Team Udayavani, Mar 12, 2022, 6:10 AM IST
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಮೌಲ್ಯಾಂಕನ ಪರೀಕ್ಷೆ ನಡೆದಿರಲಿಲ್ಲ. ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ತೇರ್ಗಡೆ ಮಾಡಲಾಗಿತ್ತು. ಎರಡು ವರ್ಷಗಳ ಅನಂತರ ಈ ಬಾರಿ ವಾರ್ಷಿಕ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಹೆಚ್ಚಿನ ಸಿದ್ಧತೆ ಮಾಡಿಕೊಳ್ಳುವ ಜತೆಯಲ್ಲಿ ಮಾನಸಿಕ ಸ್ಥೈರ್ಯವನ್ನೂ ತಂದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ “ಉದಯವಾಣಿ’ ವಿವಿಧ ವಿಷಯ ತಜ್ಞರ ಮೂಲಕ ಎಸೆಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಅಂತಿಮ ಹಂತದ ಸಿದ್ಧತೆಗೆ ಪೂರಕವಾದ ಸಲಹೆಗಳನ್ನು ಸರಣಿ ರೂಪದಲ್ಲಿ ಪ್ರಕಟಿಸಲಿದೆ.
ಎರಡು ವರ್ಷ ಪರೀಕ್ಷೆ ಇಲ್ಲದೇ ಉತ್ತೀರ್ಣ ರಾಗಿರುವ ವಿದ್ಯಾರ್ಥಿಗಳನ್ನು ಕೊರೊನಾ ಪಾಸ್ ಎಂದು ಹೇಳುವ ಅಗತ್ಯವಿಲ್ಲ. 8 ಮತ್ತು 9ನೇ ತರಗತಿಯಲ್ಲಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಬರೆಯದೇ ಇರಬಹುದು. ಆದರೆ ಅಧ್ಯಯನ ಮಾಡಿದ್ದಾರೆ. ಎಸೆಸೆಲ್ಸಿ ಪರೀಕ್ಷೆ ಇತರ ಪರೀಕ್ಷೆಗಿಂತ ತೀರಾ ಭಿನ್ನವೇನಲ್ಲ. ಓದು, ಪುನರಾವರ್ತನೆ, ಸೂಕ್ತ ಸಿದ್ಧತೆ ಹಾಗೂ ಬರವಣಿಗೆ ಇವೆಲ್ಲವನ್ನೂ ಸಮರ್ಪಕವಾಗಿ ಜೋಡಿಸಿಕೊಂಡಾಗ ಸುಲಭ ವಾಗಿ ಪರೀಕ್ಷೆ ಎದುರಿಸಬಹುದು ಎಂದು ಉಡುಪಿ ಡಯಟ್ ಉಪ ಪ್ರಾಂಶುಪಾಲರಾದ ಅಶೋಕ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ಎಸೆಸೆಲ್ಸಿ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿ ಗಳಿಗೆ ಅವರು ನೀಡಿರುವ ಐದು ಪ್ರಮುಖ ಸಲಹೆಗಳು ಇಲ್ಲಿವೆ.
ಧನಾತ್ಮಕತೆ
ಪರೀಕ್ಷೆ ಎನ್ನುವ ವಿಚಾರವನ್ನು ಅತ್ಯಂತ ಧನಾತ್ಮಕವಾಗಿ ತೆಗೆದುಕೊಳ್ಳಬೇಕು. 10ನೇ ತರಗತಿಯ ವಾರ್ಷಿಕ ಪರೀಕ್ಷೆ ಮುಂದಿನ ಶಿಕ್ಷಣಕ್ಕೆ ಹೆದ್ದಾರಿಯಿದ್ದಂತೆ. ಈ ವರ್ಷದ ಒಟ್ಟಾರೆ ಪಠ್ಯಕ್ರಮದಲ್ಲಿ ಪರೀಕ್ಷೆಗೆ ಶೇ.20ರಷ್ಟು ರಿಯಾಯತಿ ನೀಡಿದ್ದಾರೆ. ಅಂದರೆ ಶೇ.80ರಷ್ಟು ಪಠ್ಯವನ್ನು ಪರೀಕ್ಷೆಗಾಗಿ ಅಭ್ಯಾಸ ಮಾಡಿದರೆ ಸಾಕಾಗುತ್ತದೆ. ಹಾಗೆಂದು ಶೇ.80ರಷ್ಟೇ ಓದಬೇಕೆಂದೇನೂ ಇಲ್ಲ. ಸಮಯದ ಅವಕಾಶ ಇರುವುದರಿಂದ ಪೂರ್ಣ ಪ್ರಮಾಣದಲ್ಲಿ ಓದಿ, ಶೇ.80ರಲ್ಲಿ ಎಲ್ಲವನ್ನು ಸಮರ್ಥವಾಗಿ ಅರ್ಥೈಸಿಕೊಂಡು ಬರೆಯಲು ಸಿದ್ಧರಾದರೆ ಪರೀಕ್ಷೆಯನ್ನು ಯಾವುದೇ ಅಳುಕಿಲ್ಲದೆ ಎದುರಿಸಬಹುದು.
ಪೂರ್ವಸಿದ್ಧತೆ ಪರೀಕ್ಷೆಯಿಂದ ಪಾಠ
ಈಗಾಗಲೇ ರಾಜ್ಯ ಮತ್ತು ಜಿಲ್ಲಾಮಟ್ಟದ ಪೂರ್ವಸಿದ್ಧತೆ ಪರೀಕ್ಷೆ ನಡೆದು, ಅದರ ಫಲಿತಾಂಶ ವನ್ನು ಶಾಲಾ ಹಂತದಲ್ಲಿ ನೀಡಲಾಗಿದೆ. ಈ ಫಲಿತಾಂಶದಿಂದ ಪ್ರತಿಯೋರ್ವ ವಿದ್ಯಾರ್ಥಿ ಪಾಠವನ್ನು ಕಲಿತು ವಾರ್ಷಿಕ ಪರೀಕ್ಷೆಗೆ ಇನ್ನಷ್ಟು ಪರಿಪೂರ್ಣವಾಗಿ ಸಜ್ಜಾಗಬೇಕಿದೆ. ಪೂರ್ವ ಸಿದ್ಧತೆ ಪರೀಕ್ಷೆಯಲ್ಲಿ ಯಾವ ವಿಷಯದಲ್ಲಿ ಕಡಿಮೆ ಅಂಕ ಬಂದಿದೆ?, ಯಾವ ಪ್ರಶ್ನೆ ಕ್ಲಿಷ್ಟವಾಗಿದೆ?, ಯಾವ ಪ್ರಶ್ನೆಗೆ ಇನ್ನಷ್ಟು ಚೆನ್ನಾಗಿ ಉತ್ತರ ಬರೆಯಬಹುದು?, ಯಾವ ಪ್ರಶ್ನೆಗೆ ಉತ್ತರಿಸುವಾಗ ಹೆಚ್ಚು ಸಮಯ ಹಿಡಿಯಿತು?, ಲಭ್ಯವಿದ್ದ ಸಮಯ ಸಾಕಾಗಿದೆಯೇ? ಎಂಬು ದನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮೊದಲಾದ ಕೋರ್ ವಿಷಯ ಗಳಲ್ಲಿ ಸಮಯದ ನಿರ್ವಹಣೆಗೆ ಪೂರ್ವಸಿದ್ಧತೆ ಪರೀಕ್ಷೆಯಿಂದ ಪಾಠ ಕಲಿಯಬೇಕು.
ಶಿಕ್ಷಕರ ಸಹಾಯ ಪಡೆಯಿರಿ
ಶಿಕ್ಷಕರು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ಆದರೆ ಇತ್ತೀಚೆಗೆ ವಿದ್ಯಾರ್ಥಿಗಳು ಶಿಕ್ಷಕರಲ್ಲಿ ಪ್ರಶ್ನೆ ಕೇಳುವುದೇ ಕಡಿಮೆಯಾಗಿದೆ. ಪರೀಕ್ಷೆಗೆ ಸಂಬಂಧಿಸಿದ ಅಥವಾ ವಿಷಯಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳು ವಿದ್ಯಾರ್ಥಿಗಳನ್ನು ಕಾಡುತ್ತಿರುತ್ತವೆ. ತಮ್ಮಲ್ಲಿನ ಗೊಂದಲಗಳನ್ನು ನಿವಾರಿಸಿಕೊಳ್ಳಲು ಯಾವುದೇ ಹಿಂಜರಿಕೆ, ಅಳುಕನ್ನು ತೋರದೆ ಶಿಕ್ಷಕರ ಸಹಾಯ ಪಡೆದುಕೊಳ್ಳಬೇಕು. ಯಾವುದೇ ವಿಷಯದಲ್ಲಿ ಚಿಕ್ಕಪುಟ್ಟ ಸಂಶಯ, ಗೊಂದಲ ಎದುರಾದರೂ ಅದನ್ನು ಪರಿಹರಿಸಲು ಶಿಕ್ಷಕರು ಸಿದ್ಧರಿರುತ್ತಾರೆ. ವಿಷಯಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರಿಗೆ ಹೆಚ್ಚೆಚ್ಚು ಪ್ರಶ್ನೆಗಳನ್ನು ಕೇಳಬೇಕು. ವಿದ್ಯಾರ್ಥಿಗಳು ಕೇಳುವ ಯಾವ ಪ್ರಶ್ನೆಗೂ ಶಿಕ್ಷಕರು ಉತ್ತರಿಸದೇ ಇರಲು ಸಾಧ್ಯವಿಲ್ಲ. ಇದರಿಂದ ಪರೀಕ್ಷೆಗೆ ಇನ್ನಷ್ಟು ಸುಲಭವಾಗಿ ಸಿದ್ಧರಾಗಬಹುದು. ಇದರಿಂದ ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯವೂ ದೂರವಾಗುತ್ತದೆ.
ಮೇಲುಸ್ತುವಾರಿಯಲ್ಲಿ ಅಧ್ಯಯನ
ಹದಿಹರೆಯದ ವಯಸ್ಸಿನಲ್ಲಿ ಸ್ನೇಹಿತರ ಪ್ರಭಾವ ಅತ್ಯಂತ ಮಹತ್ವದಾಗಿರುತ್ತದೆ. ಹೀಗಾಗಿ ಕೂಡಿ ಓದುವುದು ಅಷ್ಟೇ ಪರಿಣಾಮಕಾರಿಯಾಗಿರುತ್ತದೆ. ಕೂಡಿ ಓದುವುದರಿಂದ ಅನುಕೂಲ, ಅನನುಕೂಲ ಎರಡೂ ಇವೆ. ಆರಂಭದಲ್ಲಿ ಇದು ಚೆನ್ನಾಗಿ ಕಂಡರೂ ಅನಂತರದಲ್ಲಿ ಹಾದಿ ತಪ್ಪುವ ಸಾಧ್ಯತೆ ಇರುತ್ತದೆ. ಹೀಗಾಗಿ ಯಾರ್ಯಾರಿಗೆ ಸಾಧ್ಯವೋ ಅವರೆಲ್ಲರೂ ಶಿಕ್ಷಕರು, ತಂದೆ, ತಾಯಿ, ಅಣ್ಣ, ಅಕ್ಕ ಅಥವಾ ಸಂಬಂಧಿಕರಲ್ಲಿ ನಿಮ್ಮ ಕಲಿಕೆಯನ್ನು ನಿರ್ವಹಣೆ ಮಾಡಬಲ್ಲವರ ಮೇಲುಸ್ತುವಾರಿಯಲ್ಲಿ ಸ್ನೇಹಿತರೊಂದಿಗೆ ಗುಂಪು ಅಧ್ಯಯನ ಮಾಡುವುದು ಸೂಕ್ತ. ಮನೆಯವರಿಗೆ ಅಥವಾ ಶಿಕ್ಷಕರಿಗೆ ಮಾಹಿತಿ ನೀಡದೇ ಗುಂಪು ಅಧ್ಯಯನ ಮಾಡುವುದು ಸರಿಯಲ್ಲ. ಯಾರಾದರೂ ಒಬ್ಬರು ನಿಮ್ಮ ಅಧ್ಯಯನ ಮೇಲೆ ನಿಗಾ ಇಡುವಂತೆ ಮುಂದುವರಿದರೆ ಓದು ಪರಿಣಾಮಕಾರಿಯಾಗಬಲ್ಲುದು.
ಪರೀಕ್ಷೆ ನಡುವಿನ ಅಂತರ
ತರಗತಿ ಆರಂಭದ ಮೊದಲ ದಿನದಿಂದಲೇ ಪರೀಕ್ಷೆಗೆ ಸಿದ್ಧತೆ ಇರಬೇಕು ಎಂಬುದೇನೋ ನಿಜ. ತರಗತಿ ಆರಂಭವಾದಾಗಿನಿಂದಲೂ ಸಿದ್ಧತೆ ಮಾಡಿಕೊಂಡಿಲ್ಲ ಎಂದು ತಲೆಕೆಡಿಸಿಕೊಳ್ಳುವ ಅಗತ್ಯವೇನಿಲ್ಲ. ಇನ್ನಾದರೂ ತದೇಕಚಿತ್ತದಿಂದ ಅಧ್ಯಯನದಲ್ಲಿ ತೊಡಗಿಕೊಂಡರೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಎಲ್ಲರೂ ಉತ್ತೀರ್ಣರಾಗಲು ಸಾಧ್ಯವಿದೆ. ಇನ್ನೂ ಓದು ಆರಂಭಿಸಿಲ್ಲ, ಪರೀಕ್ಷೆ ಆರಂಭವಾಗುವ ಹೊತ್ತಿಗೆ ಓದಿ ಮುಗಿಸಲು ಸಾಧ್ಯವಾಗದು ಎಂದೆಲ್ಲ ಆತಂಕಪಡುವುದು ಬೇಡ. ಪರೀಕ್ಷೆಯ ಆರಂಭದ ದಿನದಿಂದ ಅಂತ್ಯದ ವರೆಗೂ ಒಂದೊಂದು ವಿಷಯದ ಪರೀಕ್ಷೆ ನಡುವೆ ಎರಡರಿಂದ ನಾಲ್ಕು ದಿನಗಳ ಅಂತರ ಇರುತ್ತದೆ. ಪರೀಕ್ಷೆಗಾಗಿ ಯಾವುದೇ ಸಿದ್ಧತೆ ಮಾಡದೇ ಇರುವ ವಿದ್ಯಾರ್ಥಿಗಳು ಈ ಅವಧಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು ಓದಿದರೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸುಲಭವಾಗಿ ತೇರ್ಗಡೆಯಾಗಬಹುದು. ಒಟ್ಟಿನಲ್ಲಿ ಓದಿನಲ್ಲಿ ಏಕಾಗ್ರತೆ, ಶ್ರದ್ಧೆ ಮುಖ್ಯ.
ಎಸೆಸೆಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಕಳೆದೆರಡು ವರ್ಷಗಳಲ್ಲಿ ವಾರ್ಷಿಕ ಪರೀಕ್ಷೆಯನ್ನು ಎದುರಿಸಿಲ್ಲ. ಕೊರೊನಾದಿಂದಾಗಿ ಕಳೆದೆರಡು ವರ್ಷಗಳಲ್ಲಿ ವಾರ್ಷಿಕ ಪರೀಕ್ಷೆಯನ್ನು ನಡೆಸದೇ ವಿದ್ಯಾರ್ಥಿಗಳನ್ನು ನೇರವಾಗಿ ತೇರ್ಗಡೆಗೊಳಿಸಿದ್ದರಿಂದ 8 ಮತ್ತು 9ನೇ ತರಗತಿಯ ವಾರ್ಷಿಕ ಪರೀಕ್ಷೆಯನ್ನು ಎದುರಿಸದೇ ಇದೀಗ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ. ಹೀಗಾಗಿ ಒಂದಿಷ್ಟು ಆತಂಕ ಸಹಜವೇ. ಪೂರ್ಣ ಸಿದ್ಧತೆ ಮಾಡಿಕೊಂಡು ಯಾವುದೇ ಅಳುಕಿಲ್ಲದೆ ಪರೀಕ್ಷೆಯನ್ನು ಎದುರಿಸಿದಲ್ಲಿ ಸುಲಭವಾಗಿ ಎಸೆಸೆಲ್ಸಿ ತೇರ್ಗಡೆಯಾಗಬಹುದು.
– ಅಶೋಕ್ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.