ಸೆಲೆಬ್ರಿಟಿ ವಿಜ್ಞಾನಿಯಾಗಿದ್ದ ಕಾಲಜ್ಞಾನಿ ಹಾಕಿಂಗ್
Team Udayavani, Mar 15, 2018, 12:30 AM IST
2014ರ ಆಗಸ್ಟ್ ತಿಂಗಳಲ್ಲಿ ಜಗತ್ತಿನಾದ್ಯಂತ ಒಂದು ಆಟ ಜನಪ್ರಿಯವಾಯಿತು. ಅದುವೇ “ಐಸ್ ಬಕೆಟ್ ಚಾಲೆಂಜ್’. ಅಂದರೆ, ಯಾವುದೇ ವ್ಯಕ್ತಿ ಶೈತ್ಯಗಟ್ಟಿದ ನೀರನ್ನು ಬಕೆಟ್‌ನಲ್ಲಿ ತುಂಬಿಕೊಂಡು ತನ್ನ ಮೈಮೇಲೆ ಸುರಿದುಕೊಳ್ಳಬೇಕು ಮತ್ತು ತನ್ನಂತೆಯೇ ಮಾಡಿ ತೋರಿಸಿ ಎಂದು ಮೂವರು ಗೆಳೆಯರಿಗೆ ಪಂಥಾಹ್ವಾನ ಕೊಡಬೇಕು! ಹಾಗೆ ನೀರು ಸುರುವಿಕೊಳ್ಳುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ತಾನು ಪಂಥವನ್ನು ಪೂರ್ತಿಗೊಳಿಸಿದ್ದೇನೆ ಎನ್ನುವುದನ್ನು ಜಗತ್ತಿಗೆ ಸಾರಿ ಹೇಳಬೇಕು. ಶುರುವಾದ ಒಂದೇ ತಿಂಗಳಲ್ಲಿ ಈ ಆಟ ಎಷ್ಟು ಜನಪ್ರಿಯವಾಯಿತೆಂದರೆ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಶ್ ಕೂಡ ಅದನ್ನು ಆಡಿ ಉಳಿದವರಿಗೆ ಚಾಲೆಂಜ್ ಹಾಕಿದರು! ಈ ಆಟವನ್ನು ಎಎಲ್‌ಎಸ್ ಎಂಬ ರೋಗದ ಬಗ್ಗೆ ಜನಜಾಗೃತಿ ಮೂಡಿಸಲು ಆಡಲಾಯಿತು ಎನ್ನುವುದೇ ಇದರ ವಿಶೇಷ. ಈ ಕಾಯಿಲೆಯಿಂದ ಬಳಲುತ್ತಿರುವವರು ಜಗತ್ತಿನಲ್ಲಿ ಹೆಚ್ಚು ಜನ ಇಲ್ಲವಾದರೂ, ಅದಕ್ಕೆ ಬೇಕಾದ ಸೂಕ್ತಚಿಕಿತ್ಸೆ ಇನ್ನೂ ನಮ್ಮ ಕೈಗೆಟುಕಿಲ್ಲ. ಸ್ಟೀಫನ್ ಹಾಕಿಂಗ್ ಎಂಬ ಲೋಕವಿಜಾnನಿ ತನ್ನ ಜೀವನದ ಐವತ್ತೆ„ದು ವರ್ಷಗಳನ್ನು ಗಾಲಿಕುರ್ಚಿಗೆ ಅಂಟಿ ಕಳೆಯುವಂತಾದದ್ದು ಈ ಕಾಯಿಲೆಯಿಂದಲೇ.
ನೀವಿದನ್ನು ಓದುವ ಹೊತ್ತಿಗೆ ಸ್ಟೀಫನ್ ಹಾಕಿಂಗ್ ಅವರ ಮರಣದ ಸುದ್ದಿಯನ್ನು ಹಲವು ಮೂಲಗಳಿಂದ ಪಡೆದೇ ಇರುತ್ತೀರಿ. ಯಾಕೆಂದರೆ 20-21ನೇ ಶತಮಾನದಲ್ಲಿ ಬದುಕಿಹೋದ ವಿಜಾnನಿಗಳ ಪೈಕಿ ಜಗತ್ತಿನೆಲ್ಲ ಜನರಿಗೂ ಗುರುತಿರುವ ವ್ಯಕ್ತಿಗಳು ಹೆಚ್ಚಿಗೆ ಇಲ್ಲ. 19-20ನೇ ಶತಮಾನಕ್ಕೆ ಐನ್‌ಸ್ಟೈನ್ ಇದ್ದಂತೆ, ಈಗಿನ ಜಮಾನಕ್ಕೆ ಹಾಕಿಂಗ್. ಕಾಲದ ಸಂಕ್ಷಿಪ್ತ ಚರಿತ್ರೆ ಎಂಬ ಅವರ ಕೃತಿ ಸತತ 200 ವಾರಗಳ ಕಾಲ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತೆಂಬುದೇ ಅವರ ಜನಪ್ರಿಯತೆಗೆ ಒಂದು ಸಾಕ್ಷಿಯಾದೀತು. ಯಾವುದೇ ಹಾಲಿವುಡ್ ನಟನಿಗೆ ಅಥವಾ ಅಂತಾರಾಷ್ಟ್ರೀಯ ರಾಜಕೀಯ ನಾಯಕನಿಗೆ ಕಡಿಮೆಯಿಲ್ಲದಂತೆ ಜನಪ್ರಿಯತೆ ಸಂಪಾದಿಸಿದ್ದ ಹಾಕಿಂಗ್, ಬದುಕಿದ್ದಾಗಲೇ ದಂತಕತೆಯಾಗಿದ್ದರು. ಇನ್ನು ತೀರಿಕೊಂಡ ಮೇಲೆ ಕೇಳಬೇಕೆ? ಅವರ ನಿಧನವಾಯಿತು ಎನ್ನುವಷ್ಟರಲ್ಲೇ ಮಾಧ್ಯಮದ ತುಂಬ ಅವರು ಹರಡಿಕೊಂಡಿದ್ದಾರೆ. ಎಲ್ಲೆಲ್ಲೂ ಹಾಕಿಂಗ್ ಸ್ತುತಿ, ನುಡಿ ನಮನಗಳು ನಡೆಯುತ್ತಿವೆ.
ಹಾಕಿಂಗ್ ಸಂಕ್ಷಿಪ್ತ ಚರಿತ್ರೆ
ಸಂಕ್ಷಿಪ್ತವಾಗಿ ಅವರ ಜೀವನಕತೆ ಹೇಳಬೇಕೆಂದರೆ – ಹಾಕಿಂಗ್ ಹುಟ್ಟಿದ್ದು 1942ರ ಜನವರಿ 8ರಂದು, ಇಂಗ್ಲೆಂಡಿನಲ್ಲಿ. ಬಾಲ್ಯದಲ್ಲಿ ಸಾಮಾನ್ಯ ಹುಡುಗ, ಅಸಾಮಾನ್ಯ ತುಂಟ. ಓದಿನಲ್ಲಿ ಸಾಮಾನ್ಯನಾದರೆ ಆಟದ ಬಯಲಿನಲ್ಲಿ, ದೋಣಿ ಸ್ಪರ್ಧೆಯ ಕಣದಲ್ಲಿ ಅಸಾಮಾನ್ಯ! ವೈದ್ಯ ತಂದೆಗೆ ತನ್ನ ಮಗನೂ ಬಿಳಿಕೋಟು ತೊಡಬೇಕೆಂಬ ಹಠ. ಅಪ್ಪ ಹೇಳಿದ್ದನ್ನೆಲ್ಲ ವಿರೋಧಿಸಲೇಬೇಕೆಂದು ಮಗನ ಚಟ! ಗಣಿತ ಓದುತ್ತೇನೆ ಎಂದ ಹಾಕಿಂಗ್. ಆದರೆ ಆಕ್ಸ್ ಫರ್ಡಿನಲ್ಲಿ ಗಣಿತ ಶಾಖೆ ತೆರೆದಿರಲಿಲ್ಲ. ಪರವಾಯಿಲ್ಲ, ಭೌತಶಾಸ್ತ್ರ ಓದುತ್ತೇನೆ, ಕಾಸ್ಮಾಲಜಿ ಕಲಿಯುತ್ತೇನೆ ಎಂದು ಮೊಂಡುಬಿದ್ದ. ಮೂರು ವರ್ಷದ ಡಿಗ್ರಿ ಹೇಗೋ ಮುಗಿಯಿತು. ಹೇಳಿಕೊಳ್ಳುವಂಥ ಸಾಧನೆಯನ್ನೇನೂ ಹಾಕಿಂಗ್ ಮೆರೆಯಲಿಲ್ಲ. ಫೇಲಾಗದೆ ಕಾಲೇಜು ಮುಗಿಸಿದ ಎಂಬುದೇ ಸಾಧನೆ! ಡಿಗ್ರಿ ಮುಗಿಸಿದ ಮೇಲೆ ಪಿಎಚ್‌ಡಿ ಸಂಶೋಧನೆಗೆ ಹೆಸರು ನೋಂದಾಯಿಸಿಕೊಂಡ. ವಿಶ್ವ ಹುಟ್ಟಿದ ಬಗೆಯನ್ನು ಗಣಿತ ಭಾಷೆಯಲ್ಲಿ ನಿರೂಪಿಸುವುದು ಆತ ಆಯ್ದುಕೊಂಡ ವಿಷಯ. ಮೊದಲ ವರ್ಷ- ಅವನ ನಿಜವಾದ ಅಧ್ಯಯನ ಪ್ರಾರಂಭವಾಯಿತು. ಭೌತಶಾಸ್ತ್ರವನ್ನು ಹುಚ್ಚು ಹಿಡಿದವನಂತೆ ಓದಿದ. ಭೌತಶಾಸ್ತ್ರಕ್ಕೆ ಗಣಿತದ ತಳಹದಿ ಬೇಕೆಂಬುದು ಗೊತ್ತಾಗಿ ಅದರಲ್ಲೂ ತಲೆ ಹುದುಗಿಸಿದ. ಕಾಸ್ಮಾಲಜಿಯನ್ನು ಅರ್ಥೈಸಿಕೊಳ್ಳಲು ಟೊಪೋಲಜಿ ಕಲಿತ. ಒಂದೊಂದರೊಳಗೂ ಮುಳುಗಿಹೋಗುತ್ತ ಇಳಿದು ಸಾಗುತ್ತ ಮುಂದುವರಿದ ಹುಡುಗನಿಗೆ ಅಂತಿಮವಾಗಿ ವಿಜಾnನದ ರುಚಿ ಹತ್ತಿತು. ಆದರೆ ವಿಧಿಯಾಟ ಬೇರೆಯೇ ಇತ್ತು. ಇಪ್ಪತ್ತೂಂದರ ಎಳೆತರುಣ – ಜಿಗಿದು ಕುಣಿದು ಕುಪ್ಪಳಿಸಿ ಕೆನೆಯುತ್ತಿದ್ದ ಹಸಿ ಕುದುರೆಯಂತಿದ್ದ ಹುಡುಗ – ಮೋಟಾರ್ ನ್ಯೂರಾನ್ ಡಿಸೀಸ್ (ಅಕಾ ಎಎಲ್‌ಎಸ್) ಎಂಬ ಕಾಯಿಲೆಗೆ ಪಕ್ಕಾದ. ದೇಹ ಒಂದೊಂದೇ ಅವಯವಗಳ ನಿಯಂತ್ರಣ ಕಳೆದುಕೊಳ್ಳುತ್ತಾ ಹೋಗುವ ವಿಚಿತ್ರ ಕಾಯಿಲೆ ಅದು. ಎಲ್ಲ ನರವ್ಯೂಹ ವ್ಯವಸ್ಥೆಗಳೂ ನಿಶ್ಚೇಷ್ಟಿತವಾಗಿ ಕೊನೆಗೆ ಮಿದುಳೊಂದೇ ತನ್ನ ಪಟುತ್ವ ಉಳಿಸಿಕೊಳ್ಳುವ ಅತಿವಿರಳ ಕಾಯಿಲೆ. ಅದಕ್ಕೆ ತುತ್ತಾದವರು 2 ವರ್ಷಕ್ಕಿಂತ ಹೆಚ್ಚು ಕಾಲ ಬದುಕಿದ ಉದಾಹರಣೆ ಇರಲಿಲ್ಲ. ಆದರೆ ಅದೆಂಥ ವಿಚಿತ್ರವೋ ಏನೋ – ಹಾಕಿಂಗ್‌ರನ್ನು ಮಾತ್ರ ಗೆಲ್ಲಲು ಆ ಕಾಯಿಲೆಗೆ ಆಗಲಿಲ್ಲ. ಎರಡು ವರ್ಷಗಳಲ್ಲಿ ನೀಗಿಕೊಳ್ಳಬೇಕಿದ್ದ ಜೀವ ಮುಂದಿನ 55 ವರ್ಷಕ್ಕೂ ಮಿಕ್ಕಿ ಬದುಕಿ ದಾಖಲೆ ಸ್ಥಾಪಿಸಿತು! ತನ್ನ ದೇಹದ ಎಲ್ಲ ಅವಯವಗಳ ನಿಯಂತ್ರಣ ತಪ್ಪಿ$ಗಾಲಿಕುರ್ಚಿಗೆ ಸೀಮಿತವಾದ ಹಾಕಿಂಗ್ ಕಡೇ ಪಕ್ಷ ಮಾತಾದರೂ ಆಡುತ್ತಿದ್ದರು ಕೆಲವರ್ಷ. 1985ರಲ್ಲಿ ನ್ಯೂಮೋನಿಯಾ ಆಯಿತು. ಜೀವನ್ಮರಣದ ಪರಿಸ್ಥಿತಿ ಬಂತು. ತೀವ್ರತರದ ಚಿಕಿತ್ಸೆಗೆ ಒಡ್ಡಿಕೊಳ್ಳಬೇಕಾಯಿತು. ಇದ್ದೊಂದು ಮಾತೂ ಹೋಯಿತು! ಅಲ್ಲಿಂದಾಚೆಗೆ ಹಾಕಿಂಗ್‌ರ ಕೈ ಹಿಡಿದದ್ದು ಅವರ ಭಾವನೆಗಳಿಗೆ ಧ್ವನಿ ಕೊಡುವ ಕೃತಕ ವಾಣಿ.
ಆದರೆ ಹಾಕಿಂಗ್ ಗಟ್ಟಿಪಿಂಡ! “ನನ್ನ ಅಸ್ವಸ್ಥತೆಯ ಬಗ್ಗೆ ನನಗೇನೂ ಬೇಸರವಿಲ್ಲ. ಜಗತ್ತಿನ ಬೇರೆ ಜನರಿಗಿಂತ ಹೆಚ್ಚು ಸಮಯವನ್ನು ನಾನು ಸಂಶೋಧನೆಗೆ ಮೀಸಲಿಡಲು ಈ ಅಸ್ವಾಸ್ಥ್ಯದಿಂದ ಸಾಧ್ಯವಾಗಿದೆಯಲ್ಲ!’ ಎಂದು ಹೇಳುತ್ತಿದ್ದರವರು. ಇದು ಅವರು ಬದುಕಿದ ರೀತಿಗೆ ಕನ್ನಡಿ ಹಿಡಿಯುವಂತಹ ಮಾತು. ಯಾವುದರ ಬಗ್ಗೆಯೂ ಕೊರಗುತ್ತ ಕೂರಬಾರದು; ತಲೆ ಮೇಲೆ ಬಿದ್ದ ಕಲ್ಲನ್ನೂ ಸಾಧನೆಯ ಶಿಖರ ಏರಲು ಕಟ್ಟುವ ಮೆಟ್ಟಿಲಾಗಿಸಿಕೊಳ್ಳಬೇಕು ಎನ್ನುವುದು ಅವರ ತತ$Ì. ಶಾಲೆಯಲ್ಲಿ ಮೂರನೇ ದರ್ಜೆಗೇ ತೃಪ್ತಿ ಪಡೆಯುತ್ತಿದ್ದ ಈ ಹುಡುಗನನ್ನು ತಾರುಣ್ಯದಲ್ಲೇ ಅಲುಗಾಡಿಸಿ ಬದುಕಿನ ಧ್ಯೇಯ, ಗುರಿಗಳ ಕಡೆ ಸ್ಪಷ್ಟವಾಗಿ ನೋಡುವಂತೆ ಮಾಡಿದ್ದೇ ನರವ್ಯೂಹದ ಕಾಯಿಲೆ ಎನ್ನಬಹುದು. ಆಗಲೂ, ಕೇವಲ ಎರಡು ವರ್ಷವಷ್ಟೇ ಬದುಕಲು ಸಾಧ್ಯ ಎಂದು ವೈದ್ಯರು ಹೇಳಿದಾಗ, ಆ ಅಮೂಲ್ಯ ವರ್ಷಗಳನ್ನು ಸಂಶೋಧನೆಗೆ ಎತ್ತಿಟ್ಟು ಜೀವನವನ್ನು ಸಫಲವಾಗಿಸಿಕೊಳ್ಳಬೇಕೆಂದು ಹಾಕಿಂಗ್ ನಿರ್ಧರಿಸಿದ್ದು ಅವರ ವ್ಯಕ್ತಿತ್ವದ ಗಟ್ಟಿತನಕ್ಕೆ ಸಾಕ್ಷಿ. ಸಾಧಿಸುವ ಛಲದ ಮುಂದೆ ಅವರೆಂದೂ ತನ್ನ ಅಸಾಮರ್ಥ್ಯಗಳನ್ನು ನೆನೆಯುತ್ತ ಚಿಂತೆಯಿಂದ ಕೂತವರೇ ಅಲ್ಲ. ಅವರ ದೇಹ ಎಷ್ಟು ಕೃಶವಾಗಿತ್ತೆಂದರೆ, ಕಾಲೇಜಿನ ದೋಣಿ ನಡೆಸುವ ತಂಡದಲ್ಲಿ ಯಾವ ಕಾರಣಕ್ಕೂ ಅವರನ್ನು ಸೇರಿಸಿಕೊಳ್ಳುವಂತಿರಲಿಲ್ಲ. ಆದರೆ, ತನ್ನ ದೈಹಿಕ ದುರ್ಬಲತೆಯನ್ನು ಮೆಟ್ಟಿ ನಿಂತು, ಹಾಕಿಂಗ್ ಇಡೀ ವಿಶ್ವವಿದ್ಯಾಲಯದಲ್ಲಿ ಅತ್ಯಂತ ಪ್ರಸಿದ್ಧ ದೋಣಿ ಸ್ಪರ್ಧಿಯಾದರು!
ಟಿವಿ ಕಾರ್ಯಕ್ರಮಕ್ಕೆ ಜೈ, ಶೂನ್ಯ ಗುರುತ್ವಕ್ಕೂ ಸೈ
ಹೆಚ್ಚಾಗಿ ಖಗೋಳದ ಅಧ್ಯಯನ ಮಾಡುವ ವಿಜಾnನಿಗಳು ಅಜಾnತರಾಗಿ ಉಳಿಯುತ್ತಾರೆ. ಅದಕ್ಕೆ ಒಂದು ಕಾರಣ, ಆ ವಿಜಾnನಿಗಳು ತಮ್ಮ ಕ್ಷೇತ್ರ ಮತ್ತು ಪ್ರಯೋಗಶಾಲೆಗಳಿಂದ ಈಚೆ ಬಂದು ಮಾತಿಗೆ ಸಿಗುವುದು ಅಪರೂಪ; ಮತ್ತು ಎರಡನೆ ಕಾರಣ – ಅವರ ಸೂತ್ರ-ಸಮೀಕರಣಗಳ ಗೊಂಡಾರಣ್ಯದಂತಹ ಸಂಶೋಧನ ಬರಹಗಳನ್ನು ಅರ್ಥೈಸಿಕೊಳ್ಳುವವರು ಕೆಲವೇ ಕೆಲವು ಮಂದಿ. ಹಾಗಾಗಿ, ಖಗೋಳವಿಜಾnನಿಗಳು “ದಂತ ಗೋಪುರದಲ್ಲಿ ಇದ್ದಂತೆ ಭಾಸವಾಗುವುದೇ ಹೆಚ್ಚು. ಇದಕ್ಕೆ ಹಾಕಿಂಗ್ ಅಪವಾದ. ಇಪ್ಪತ್ತನೆ ಶತಮಾನದ ಕೊನೆ ಮತ್ತು ಇಪ್ಪತ್ತೂಂದನೆ ಶತಮಾನದ ಪೂರ್ವಾರ್ಧದಲ್ಲಿ ಬದುಕಿದ ಅತ್ಯಂತ ಜನಪ್ರಿಯ ವಿಜಾnನಿ ಯಾರು ಎಂದರೆ ನಿಸ್ಸಂಶಯವಾಗಿ ಹೆಚ್ಚಿನ ಓಟು ಪಡೆಯುವವರು ಹಾಕಿಂಗ್ ಅವರೇ! ಅವರ “ಮಹಾನ್ ವಿನ್ಯಾಸ’, “ಕಾಲದ ಸಂಕ್ಷಿಪ್ತ ಚರಿತ್ರೆ’, “ಇನ್ನಷ್ಟು ಸಂಕ್ಷಿಪ್ತಗೊಳಿಸಿದ ಕಾಲದ ಚರಿತ್ರೆ’ ಎಂಬ ಪುಸ್ತಕಗಳು ಮಿಲಿಯನ್‌ಗಟ್ಟಲೆ ಪ್ರತಿಗಳ ಲೆಕ್ಕದಲ್ಲಿ ಮಾರಾಟವಾಗಿ ದಾಖಲೆ ನಿರ್ಮಿಸಿದವು. ಇಲ್ಲೆಲ್ಲ ಹಾಕಿಂಗ್, ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ನಮ್ಮ ವಿಶ್ವದ ಕತೆಯನ್ನು ಹೇಳುತ್ತಾ ಹೋಗಿದ್ದಾರೆ. “ನಾವೆಲ್ಲಿಂದ ಬಂದೆವು?’ ಎಂಬ ಪ್ರಶ್ನೆಯೇ ಕೇಂದ್ರಸಮಸ್ಯೆಯಾಗಿ ಅವರ ಎಲ್ಲ ಪುಸ್ತಕಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ಶ್ರೀಸಾಮಾನ್ಯನಿಗೆ ಅರ್ಥ ಮಾಡಿಕೊಳ್ಳಲು ಕಷ್ಟಸಾಧ್ಯ ಎನ್ನಿಸುವ ಕಪ್ಪು$ಕುಳಿಗಳ ವಿಚಾರವನ್ನೂ ಹಾಕಿಂಗ್ ಎಳೆಎಳೆಯಾಗಿ ಬಿಡಿಸಿಟ್ಟು, ಅದೇನೂ ಅಂತಹ ಕ್ಲಿಷ್ಟ ವಿಷಯ ಅಲ್ಲ ಎನ್ನುವ ನಂಬಿಕೆ ಬರುವಂತೆ ಬರೆದಿದ್ದಾರೆ.
ಒಂದು ಕಾಲದ, ಒಂದು ತಲೆಮಾರಿನ ಬುದ್ಧಿಯನ್ನು ಪ್ರಚೋದಿಸಿದ, ಚಿಂತನೆಗಳನ್ನು ಬೆಳೆಸಿದ, ಉದಾತ್ತ ಕಲ್ಪನೆಗಳನ್ನು ಬಿತ್ತಿದ ಕೆಲಸ ಮಾಡಿದ ವಿಜ್ಞಾನಿ ಮತ್ತು ವಿಜಾnನ ಸಂವಹನಕಾರರಾಗಿ ಹಾಕಿಂಗ್ ನಿಲ್ಲುತ್ತಾರೆ. ತನ್ನ ಜೊತೆಗೆ ಬದುಕಿದ ಜಗತ್ತಿನ ಉಳಿದ ಮನುಷ್ಯರೊಂದಿಗೆ ನಿರಂತರವಾಗಿ ಮಾತುಕತೆ ನಡೆಸಿದರು, ತನ್ನ ಯೋಚನೆಗಳನ್ನು ಹಂಚಿಕೊಂಡರು ಎನ್ನುವ ಕಾರಣಕ್ಕೆ ಹಾಕಿಂಗ್ ಬಹುಶಃ ಉಳಿದೆಲ್ಲ ವಿಜ್ಞಾನಿಗಳಿಗಿಂತ ಹೆಚ್ಚು ಪ್ರಸಿದ್ಧರಾದರು. ವಿಶ್ವದ ಆದಿ-ವಿಕಾಸಗಳ ಬಗ್ಗೆ ಘನಗಂಭೀರ ಪ್ರಶ್ನೆಗಳನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದ ವಿಜ್ಞಾನಿಯಾದರೂ ಹಾಕಿಂಗ್, ಪುರುಸೊತ್ತು ಮಾಡಿಕೊಂಡು ಮಕ್ಕಳಿಗಾಗಿಯೂ ಹಲವು ಪುಸ್ತಕಗಳನ್ನು, ತನ್ನ ಮಗಳು ಲೂಸಿಯ ಜೊತೆ ಸೇರಿ ಬರೆದರು. ಆದರೆ, ಅಲ್ಲೂ ಕೂಡ ಕಥಾನಾಯಕ ಭೂಮಿ ಬಿಟ್ಟು ಮೇಲೇರುವ, ಗ್ಯಾಲಕ್ಸಿಗಳ ಒಳಹೋಗುವ, ವಿಶ್ವಪರ್ಯಟನೆ ಮಾಡುವ ಕಲ್ಪನೆಗಳನ್ನು ಬೆಳೆಸಿದ್ದಾರೆ. ಒಂದು ರೀತಿಯಲ್ಲಿ ಇದು ಹಾಕಿಂಗ್ ಸದಾ ಕಾಣುತ್ತಿದ್ದ ಕನಸು ಎಂದೂ ಹೇಳಬಹುದು!
ಕನಸಿನ ಗುರುತ್ವ ಬಲವಾಗಿದ್ದಾಗ ಅದು ಕುರ್ಚಿಗಂಟಿದ ಮನುಷ್ಯನನ್ನೂ ಎತ್ತಿ ಆಕಾಶಕ್ಕೆ ಎಳೆದೊಯ್ಯಬಲ್ಲುದು! 2007ರಲ್ಲಿ ಒಂದು ಉಪನ್ಯಾಸದ ಸಮಯದಲ್ಲಿ, “ವಿಶ್ವದ ಪ್ರಜೆಯಾದ ನಾನು, ಈ ಅನಂತ ಆಕಾಶದಲ್ಲಿ ಭೂಮಿಯ ಗುರುತ್ವವನ್ನು ಕಳಚಿಕೊಂಡು ಲಘು ಹಕ್ಕಿಯಂತೆ ಹಾರಬೇಕೆಂದು ಬಯಸುತ್ತೇನೆ. ನೋಡೋಣ, ರಿಚರ್ಡ್ ಬ್ರಾನ್‌ಸನ್‌ನಂಥವರು ಸಹಾಯ ಮಾಡಿದರೆ ಅದೇನೂ ಅಸಾಧ್ಯ ಕನಸಲ್ಲ’ ಎಂದು ಜೋಕು ಹೊಡೆದರು. ಬ್ರಾನ್‌ಸನ್ ಎಂಬ ಆಗರ್ಭ ಶ್ರೀಮಂತ ಹಾಗೂ ವರ್ಜಿನ್ ಎಂಬ ಕಂಪೆನಿಯ ಮಾಲೀಕ, ಅದಾಗಷ್ಟೇ ತನ್ನ “ವಿಶ್ವಪರ್ಯಟನೆ’ ಎಂಬ ಯೋಜನೆಯನ್ನು ಜಗತ್ತಿನ ಮುಂದೆ ಇಟ್ಟಿದ್ದ. ಅದರಂತೆ, ಅವನ ಕಂಪೆನಿ ಇನ್ನು ಹತ್ತಿಪ್ಪತ್ತು ವರ್ಷಗಳಲ್ಲಿ ಈ ಭೂಮಿಯಾಚೆಗೆ ಹೋಗುವ ಒಂದು ಮಹಾಯಾನವನ್ನು ಆಯೋಜಿಸುತ್ತದೆ. ಅದರಲ್ಲಿ ಪ್ರಯಾಣಿಸುವ ಬಯಕೆ ಇದ್ದವರು ಮುಂಗಡವಾಗಿ ಸೀಟು ಕಾಯ್ದಿರಿಸಬೇಕಿತ್ತು! ಹಾಕಿಂಗ್, ಈ ಸಂದರ್ಭವನ್ನು ನೆನೆಸಿಕೊಂಡು ಬ್ರಾನ್‌ಸನ್ ಸಹಾಯ ಮಾಡಿದರೆ ನಾನೂ ವಿಶ್ವಪರ್ಯಟನೆಯ ಪ್ರವಾಸದಲ್ಲಿ ಭಾಗಿಯಾದೇನು ಎಂದು ಹೇಳಿದ್ದರು. ಈ ಸುದ್ದಿ ತಿಳಿದ ಬ್ರಾನ್‌ಸನ್, ಹಾಕಿಂಗ್‌ರಿಗೆ ಅಮೆರಿಕದ ಫ್ಲೋರಿಡಾದಿಂದ ವಿಮಾನವೊಂದರಲ್ಲಿ ಹಾರಿ ಶೂನ್ಯ ಗುರುತ್ವದ ಅನುಭವ ಪಡೆಯುವಂತೆ ವ್ಯವಸ್ಥೆ ಮಾಡಿದ. ಅಲ್ಲಿನ ಕೆನೆಡಿ ಸ್ಪೇಸ್ ಸೆಂಟರ್‌ನಲ್ಲಿ ಬೋಯಿಂಗ್ 727 ವಿಮಾನವನ್ನು ಆಕಾಶಕ್ಕೆ ಹಾರಿಸುತ್ತಾರೆ. ಈ ವಿಮಾನ ನೇರ ಮೇಲಕ್ಕೇರುತ್ತ, ಒಂದು ಎತ್ತರ ಮುಟ್ಟಿದ ಮೇಲೆ ತಕ್ಷಣ ತನ್ನ ದಿಕ್ಕು ಬದಲಾಯಿಸಿ ಕೆಳಕ್ಕೆ ಹಾರುತ್ತದೆ. ಭೂಮಿಯ ಗುರುತ್ವ ವೇಗೋತ್ಕರ್ಷಕ್ಕಿಂತಲೂ ವೇಗವಾಗಿ ಅದು ಕೆಳಗೆ ಧುಮುಕುವುದರಿಂದ, ಒಳಗಿದ್ದ ಪ್ರಯಾಣಿಕರಿಗೆ ಶೂನ್ಯ ಗುರುತ್ವದಲ್ಲಿ ತೇಲಾಡಿದ ಅನುಭವಾಗುತ್ತದೆ! “ಇಂಥದೊಂದು ವಿಮಾನದಲ್ಲಿ ಪ್ರಯಾಣಿಕರಾಗಿ ಹೋಗುತ್ತೀರಾ?’ ಎಂದು ಹಾಕಿಂಗ್‌ರನ್ನು ಕೇಳಿಕೊಂಡಿದ್ದೇ ತಡ, ಅವರು ಯಾವ ಭಯ-ಉದ್ವೇಗಗಳಿಲ್ಲದೆ “ಹೂ! ‘ಎಂದುಬಿಟ್ಟರು. 2007ರಲ್ಲಿ, ಈ ಅರುವತ್ತೆ„ದು ವರ್ಷದ ಅಜ್ಜ, ತನ್ನ ಗಾಲಿಕುರ್ಚಿಯಿಂದ ಮೇಲೆ ಹಾರುತ್ತ, ವಿಮಾನದೊಳಗಿನ ಅವಕಾಶದಲ್ಲಿ ಹಕ್ಕಿಯಂತೆ ತೇಲುತ್ತಿರುವ ಚಿತ್ರಗಳು ಜಗತ್ತಿನ ಎಲ್ಲ ಪತ್ರಿಕೆ-ಟಿವಿಗಳಲ್ಲಿ ಕಾಣಿಸಿಕೊಂಡವು.
ಟಿವಿ ಕಾರ್ಯಕ್ರಮಗಳೆಂದರೂ ಹಾಕಿಂಗ್ ಅವರಿಗೆ ಅಚ್ಚುಮೆಚ್ಚು. “ಸ್ಟಾರ್‌ಟ್ರೆಕ್’ ಎಂಬ ಹೆಸರಾಂತ ಟಿವಿ ಧಾರಾವಾಹಿಯಲ್ಲಿ 1994ರಷ್ಟು ಹಿಂದೆಯೇ ಹಾಕಿಂಗ್ ಅತಿಥಿ ನಟನಾಗಿ ಪಾಲ್ಗೊಂಡವರು. 1999ರಲ್ಲಿ “ಸಿಂಪ್ಸನ್ಸ್’ ಎಂಬ ಜನಪ್ರಿಯ ಕಾಟೂìನ್ ಕಾರ್ಯಕ್ರಮದಲ್ಲೂ ತನ್ನ ಪಾತ್ರ ಕಾಣಿಸಿಕೊಳ್ಳುವುದಕ್ಕೆ ಅವರು ಅನುಮತಿ ಕೊಟ್ಟರು. ಅಮೆರಿಕದ ಇನ್ನೆರಡು ಜನಪ್ರಿಯ ಟಿವಿ ಶೋಗಳಾದ “ಫ್ಯೂಚುರಾಮ’ ಮತ್ತು “ಬಿಗ್ ಬ್ಯಾಂಗ್ ಥಿಯರಿ’ಗಳಲ್ಲೂ ಹಾಕಿಂಗ್ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದಾರೆ. ಹಾಕಿಂಗ್ ಜೀವನವನ್ನು ಆಧರಿಸಿ ಥಿಯರಿ ಆಫ್ ಎವರಿಥಿಂಗ್ ಎಂಬ ಚಲನಚಿತ್ರವೂ ನಿರ್ಮಾಣಗೊಂಡಿತು. ಎಲ್ಲ ವಿಷಯಗಳನ್ನೂ ಕ್ರೋಢೀಕರಿಸಬಲ್ಲ, ಎಲ್ಲ ಸಂಗತಿಗಳನ್ನೂ ಬೀಜರೂಪದಲ್ಲಿಟ್ಟು ಹೇಳಬಲ್ಲ ಒಂದು ಅಂತಿಮ, ಮಹಾ ಸಿದ್ಧಾಂತ ಇರಬೇಕು. ನಮಗಿನ್ನೂ ಕಾಣಿಸಿಕೊಳ್ಳದೆ ಅಡಗಿಕೂತಿರುವ ಅದನ್ನು ಹೊರಗೆಳೆದು ತರುವುದೇ ಮನುಷ್ಯನ ಅಂತಿಮ ಗುರಿ ಎನ್ನುವುದು ಹಾಕಿಂಗ್ ತರ್ಕ. ಇಂತಹ “ಮಹಾ ಸಿದ್ಧಾಂತ’ವನ್ನು “ಥಿಯರಿ ಆಫ್ ಎವರಿಥಿಂಗ್’ ಎಂದು ಕರೆಯುತ್ತಾರೆ. ನಾವು ಸದ್ಯಕ್ಕೆ ಬಳಸುತ್ತಿರುವ ಸಾಪೇಕ್ಷ, ಕಣ, ಸ್ಟ್ರಿಂಗ್, ಎಮ್-ಸಿದ್ಧಾಂತಗಳೆಲ್ಲ ಕೆಲವು ವಿಷಯಗಳನ್ನು ಚೆನ್ನಾಗಿ ವಿವರಿಸಿದರೂ, ಇನ್ನು ಕೆಲ ಸಂದರ್ಭಗಳಲ್ಲಿ ಮುಗ್ಗರಿಸಿ ಬೀಳುತ್ತವೆ. ಇವೆಲ್ಲದರ ಮೂಲದಂತಿರುವ, ಎಲ್ಲೂ ಯಾವ ಸಂದರ್ಭದಲ್ಲೂ ವಿಪರ್ಯಾಸಗಳನ್ನು ತೋರಿಸದ, ವಿರೋಧಾಭಾಸಗಳನ್ನು ಸೃಷ್ಟಿಸದ ಸಿದ್ಧಾಂತವೇ ಥಿಯರಿ ಆಫ್ ಎವರಿಥಿಂಗ್. ಇಪ್ಪತ್ತೂಂದನೇ ಶತಮಾನದಲ್ಲಿ ಮನುಷ್ಯ ಅಂತಹದೊಂದು ಸಿದ್ಧಾಂತವನ್ನು ಪ್ರತಿಪಾದಿಸುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಹಾಕಿಂಗ್ ನಂಬಿಕೆಯಾಗುತ್ತು.
ಮೀನಿನಂತೆ ನಾವು?
ದಿನಗಳೆದಂತೆ ಹಾಕಿಂಗ್ ದೇಹ ಕೃಶವಾಗುತ್ತಿತ್ತು. 20ನೇ ವರ್ಷಕ್ಕೇ ಈ ಲೋಕದ ಋಣ ಮುಗಿಯುತ್ತದೆಂದು ವೈದ್ಯರು ಬರೆದಿಟ್ಟ ಮರಣಶಾಸನವನ್ನು ಅಣಕಿಸುವಂತೆ, ಹಾಕಿಂಗ್ 76 ವರ್ಷಗಳನ್ನು ಈ ನೆಲದ ಮೇಲೆ ಕಳೆದರು. ಅವರ ಮನೋಧೈರ್ಯದ ಮುಂದೆ ಕಾಯಿಲೆಯ ಕರಾಮತ್ತು ನಡೆಯಲಿಲ್ಲ! ಆದರೆ ಕಾಯಿಲೆಯಿಂದಾಗಿ ತನ್ನ ಕಿರುಬೆರಳನ್ನು ಕೂಡ ಚಲಿಸಲಾಗದೆ ಮರದ ಕೊರಡಿನಂತೆ ಕೂತಿರಬೇಕಾದ ಅನಿವಾರ್ಯತೆ ಅವರದಾಗಿತ್ತು. ಇದು ನಿಸ್ಸಂಶಯವಾಗಿ ಅವರ ಕಾರ್ಯಕ್ಷಮತೆಯನ್ನು ಕುಗ್ಗಿಸಿತ್ತು. ಆದರೆ ಓಡೋಡಿ ಸುಸ್ತಾಗಿ ಬೀಳುವ ಮೊಲಕ್ಕಿಂತ, ಏಕವೇಗದಲ್ಲಿ ನಡೆಯುತ್ತ ಗುರಿಮುಟ್ಟಿದ ಆಮೆಯ ಹಾಗೆ, ಹಾಕಿಂಗ್ ನಿಧಾನವಾದರೂ ಬಿಡುವಿಲ್ಲದೆ ಕೆಲಸ ಮಾಡಿ ಬಹಳಷ್ಟು ದೂರ ನಡೆದರು ಎನ್ನುವುದೇ ಸೋಜಿಗ! ವಿಶ್ವದ ರಹಸ್ಯವನ್ನು ಇನ್ನು ಕೆಲವರ್ಷಗಳಲ್ಲೇ ಜಗತ್ತಿನ ಮುಂದಿಡುತ್ತೇನೆ ಎಂದು ಅದಮ್ಯ ಆತ್ಮವಿಶ್ವಾಸದಿಂದ ಹಾಕಿಂಗ್ “ಮಹಾನ್ ವಿನ್ಯಾಸ’ ಕೃತಿ ಬರೆದಾಗ ಹೇಳಿದ್ದರು. ಆದರೆ, ಅದು ಲೆಕ್ಕಾಚಾರ ತಪ್ಪಿದ ಅತಿವಿಶ್ವಾಸ ಎಂದು ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ವಿಶ್ವ ನಾವು ತಿಳಿದುದಕ್ಕಿಂತಲೂ ಹೆಚ್ಚು ಸಂಕೀರ್ಣವಾಗಿದೆ ಎನ್ನುವ ತಿಳುವಳಿಕೆಯ ವಿವೇಕ ಹಾಕಿಂಗ್‌ರಿಗೆ ಮೂಡಿತು. “ಕ್ಷಮಿಸಿ, ಈ ರಹಸ್ಯವನ್ನು ಬಿಡಿಸಲು ಇನ್ನೂ ಕೆಲವರ್ಷ ಬೇಕಾಗಬಹುದು. ಸದ್ಯಕ್ಕಂತೂ ವಿಶ್ವ ಯಾವ ಗುಟ್ಟನ್ನೂ ಬಿಟ್ಟುಕೊಡುತ್ತಿಲ್ಲ. ಅಲ್ಲೋ ಇಲ್ಲೋ ಗೊತ್ತಾದ ಕೆಲವನ್ನಷ್ಟೇ ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ’ ಎಂದು ವಿನೀತರಾಗಿ ತಪ್ಪೊಪ್ಪಿಕೊಂಡು ಕಾಲಾವಕಾಶ ಬೇಡಿದರು.
ಗಾಲಿಕುರ್ಚಿಯಲ್ಲಿ ಕೂತು ತನ್ನ ಕೋಣೆಯ ಸೀಮಿತ ವಲಯದೊಳಗಿದ್ದ ಹಾಕಿಂಗ್, ಕೇವಲ ಬುದ್ಧಿಶಕ್ತಿಯ ಚಮತ್ಕಾರದಿಂದ 13.7 ಬಿಲಿಯ ವರ್ಷಗಳ ಹಿಂದೆ ನಡೆದ ಕಾಲದ ಕತೆಯನ್ನೂ ಹೇಳಬಲ್ಲರಾಗಿದ್ದರು ಎನ್ನುವುದು ಈ ಕಾಲದ ಅಚ್ಚರಿ. ಇಟೆಲಿಯ ಮಿಂಜಾ ಎಂಬ ಪುಟ್ಟ ಪಟ್ಟಣದ ನಗರಸಭೆ ಒಮ್ಮೆ ಒಂದು ನಿರ್ಣಯ ಪಾಸು ಮಾಡಿತು. ಅದೇನೆಂದರೆ, ಮನೆಗಳಲ್ಲಿ ಗೋಲ್ಡ್‌ಫಿಶ್ ಸಾಕುವವರು, ಅವುಗಳನ್ನು ವೃತ್ತಾಕಾರದ ತೊಟ್ಟಿಗಳಲ್ಲಿ ಕೂಡಿಹಾಕಬಾರದು – ಎಂದು! ಯಾಕೆ? ಮೀನಿಗೆ ವೃತ್ತಾಕಾರ ಎಂದರೆ ಅಲರ್ಜಿಯೆ ಎಂದು ಕೇಳಬೇಡಿ. ವೃತ್ತಾಕಾರದ ಗಾಜಿನಲ್ಲಿ ಪ್ರತಿಫಲಿತವಾಗಿ ಮೀನಿನ ಕಣ್ಣಿಗೆ ಬೀಳುವ ಬೆಳಕು ಅದರ ದೃಷ್ಟಿಗೆ ಮಂಕು ಕವಿಸುತ್ತದೆ. ಅಂದರೆ, ವೃತ್ತಾಕಾರದ ತೊಟ್ಟಿಯಲ್ಲಿ ಕೂಡಿಹಾಕಿದ ಮೀನಿನ ಕಣ್ಣಿಗೆ, ಜಗತ್ತು ಹೇಗೆ ಕಾಣಬೇಕಿತ್ತೋ ಹಾಗೆ ಕಾಣದು. ಹಾಗಾಗಿ, ಅವನ್ನು ನೇರವಾದ ನೀರಿನ ತೊಟ್ಟಿಗಳಲ್ಲೇ ಹಾಕಬೇಕು – ಎಂದು ನಗರಪಿತೃಗಳು ಆದೇಶ ಹೊರಡಿಸಿದರು. ನಮ್ಮ ಕತೆಯೂ ಬಹುಶಃ ಈ ತೊಟ್ಟಿಯ ಮೀನಿಗಿಂತ ಬೇರೆಯೇನೂ ಅಲ್ಲ. ಈ ಜಗತ್ತಿನ ವಿನ್ಯಾಸ ಹೇಗಿದೆಯೆಂದೇ ತಿಳಿಯದೆ ನಾವು, ನಮ್ಮ ಕಣ್ಣಿಗೆ ಕಂಡಿದ್ದಷ್ಟೇ ಸತ್ಯ ಎಂದು ಕಾಲ ಕಳೆಯುತ್ತಿದ್ದೇವೆ. ಆದರೆ, ನಾವು ನಿಜವಾಗಿಯೂ ಕಂಡದ್ದು ತೊಟ್ಟಿಯೊಳಗಿನ ಮೀನಿನ ಕಣ್ಣಿಗೆ ಕಂಡ ವಿಶ್ವದಂತೆ ಕೇವಲ ಮಾಯೆ ಆಗಿರಬಹುದಲ್ಲವೆ? ನಿಜವನ್ನು ಅರಿಯುವ ಬಗೆ ಯಾವುದು? – ಎನ್ನುವುದು ಹಾಕಿಂಗ್‌ರ, ನಮ್ಮನಿಮ್ಮೆಲ್ಲರ, ಮನುಕುಲದ ಮಹಾಪ್ರಶ್ನೆ.
ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.