Environmental Day: ಪರಿಸರ ರಕ್ಷಣೆಯಿಂದ ಸುಸ್ಥಿರ ಅಭಿವೃದ್ಧಿ
Team Udayavani, Jun 5, 2023, 7:35 AM IST
ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ. ಮಾನವ, ಪ್ರಾಣಿ, ಪಕ್ಷಿಗಳ ಸಹಿತ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಮತ್ತಿತರ ಅಗತ್ಯಗಳಿಗಾಗಿ ಪರಿಸರವನ್ನೇ ಅವಲಂಬಿಸಿದೆ. ಮಾನವನು ಆಧುನಿಕತೆಯ ಬದುಕಿಗೆ ಜೋತು ಬಿದ್ದು ಅತಿಯಾದ ಅನುಭೋಗ ಆಸೆಗಳಿಂದ ಪರಿಸರವನ್ನು ನಾಶ ಮಾಡುತ್ತಿದ್ಧಾನೆ. ಮಾನವನ ಈ ದುರಾಸೆಯಿಂದ ಗಾಳಿ, ನೀರು, ಮಣ್ಣು ಮುಂತಾದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ.
ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಪ್ರತೀವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಪರಿಸರದ ಮೌಲ್ಯ ಹಾಗೂ ಅದನ್ನು ರಕ್ಷಿಸಬೇಕಾದ ಹೊಣೆಗಾರಿಕೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಪ್ಲಾಸ್ಟಿಕ್ ಮಾಲಿನ್ಯದ ಕುರಿತಂತೆ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರಸ್ನೇಹಿ ವಸ್ತುಗಳ ಬಳಕೆಗೆ ಉತ್ತೇಜನ ನೀಡುವ ಮೂಲಕ ಪರಿಸರವನ್ನು ಪ್ಲಾಸ್ಟಿಕ್ ಮಾಲಿನ್ಯದಿಂದ ಮುಕ್ತಗೊಳಿಸುವುದೇ ಈ ಬಾರಿಯ ಪರಿಸರ ದಿನದ ಮೂಲ ಮಂತ್ರವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಮಾನವನ ಆರೋಗ್ಯ ಮಾತ್ರವಲ್ಲ ಪರಿಸರ ಮತ್ತು ಜೀವ ವೈವಿಧ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಅದು ಪರ್ವತದ ತುದಿಯಿಂದ ಸಾಗರ ತಳದವರೆಗಿನ ಪ್ರತಿಯೊಂದು ಪರಿಸರ ವ್ಯವಸ್ಥೆಯನ್ನು ಕಲುಷಿತಗೊಳಿಸುವ ಮೂಲಕ ಪ್ರಕೃತಿಯನ್ನು ನಾಶಗೊಳಿಸುತ್ತದೆ.
ಪರಿಸರದ ಕಾಳಜಿ ಅಭ್ಯಾಸವಾಗಲಿ
ದೇಶದ ಸಂಪತ್ತಾಗಿರುವ ಪರಿಸರವನ್ನು ಸರಿಯಾಗಿ ನಿಭಾಯಿಸದಿದ್ದರೆ ಅಪಾಯ ಖಂಡಿತ. ದೇಶದ ಅಭಿವೃದ್ಧಿಗೆ ಪರಿಸರದ ಬಳಕೆ ಅವಶ್ಯವಾಗಿದ್ದರೂ ಇದರಿಂದಾಗಿ ಪರಿಸರದ ಮೇಲಾಗುವ ಅಪಾರ ಹಾನಿಯನ್ನು ತಪ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಭೀಕರ ಪರಿಣಾಮ ವನ್ನು ಎದುರಿಸಬೇಕಾಗಬಹುದು. ಅಭಿವೃದ್ಧಿಯ ಪ್ರಯತ್ನಗಳು ಪರಿಸರವನ್ನು ನಾಶಮಾಡಬಾ ರದು ಹಾಗೂ ಅಭಿವೃದ್ಧಿಯು ಮುಂದಿನ ತಲೆಮಾರುಗಳವರೆಗೂ ನಿರಂತರ ವಾಗಿರಬೇಕು. ಈ ಉದ್ದೇಶ ದಿಂದ ಹುಟ್ಟಿ ಕೊಂಡ ಕಲ್ಪನೆಯೇ ಸುಸ್ಥಿರ ಅಭಿವೃದ್ಧಿ. ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಮಾನತೆ ಮತ್ತು ಪರಿಸರ ಸಂರಕ್ಷಣೆ ಯನ್ನು ಸುಭದ್ರಗೊಳಿಸುವುದು ಸುಸ್ಥಿರ ಅಭಿವೃದ್ಧಿಯ ಪ್ರಮುಖ ಗುರಿಯಾಗಿದೆ.
ಅಭಿವೃದ್ಧಿ ಹಾಗೂ ಉತ್ತಮ ಜೀವನಮಟ್ಟವನ್ನು ಹೊಂದಲು ಮಾಡುವ ವಿವಿಧ ಚಟುವಟಿಕೆಗಳು ಪರಿಸರವನ್ನು ಹಾನಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಧಿಕ ಆದಾಯ ಹಾಗೂ ಜೀವನ ಮಟ್ಟದ ಹೆಚ್ಚಳದ ಗುರಿಯನ್ನು ಸಾಧಿಸುವ ಉದ್ದೇಶದಿಂದ ಅಧಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ಪಾದನೆ ಹಾಗೂ ಇತರ ಆರ್ಥಿಕ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ಆದಾಯದ ಹೆಚ್ಚಳವು ಜನರ ಅನುಭೋಗವನ್ನು ಹೆಚ್ಚಿಸುವುದರ ಮೂಲಕ ಸೃಷ್ಟಿಯಾಗುವ ತ್ಯಾಜ್ಯ ಉತ್ಪನ್ನಗಳು ಭೂಮಿ ಮತ್ತು ಪರಿಸರವನ್ನು ಕಲುಷಿತಗೊಳಿಸುತ್ತಿವೆ. ಇದರಿಂದ ನಮ್ಮ ಪೀಳಿಗೆ ಮಾತ್ರವಲ್ಲದೆ ಮುಂದಿನ ಪೀಳಿಗೆಗೆ ಅಪಾರ ನಷ್ಟವಿದೆ. ಪರಿಸರ ಮಾಲಿನ್ಯ ಹಾಗೂ ಪರಿಸರ ಅವನತಿಯೊಂದಿಗೆ ಆರೋಗ್ಯಕರ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ ಎನ್ನುವುದು ವಾಸ್ತವ.
ಆರ್ಥಿಕ ಬೆಳವಣಿಗೆಯು ಮಾನವನ ಜೀವನಮಟ್ಟ ವನ್ನು ಉತ್ತಮಗೊಳಿಸಲು ಅವಶ್ಯವಾದರೂ ಆದು ಪರಿಸರದ ಗುಣಮಟ್ಟ ವನ್ನು ನಾಶಗೊಳಿಸಬಾರದು. ಸಂಪನ್ಮೂಲಗಳು ಮುಂದಿನ ತಲೆಮಾರಿನ ಜನರಿಗೂ ಲಭ್ಯವಾಗುವಂತಿರಬೇಕು. ಆದರೆ ಭಾರತದಂತಹ ಅಭಿವೃದ್ಧಿ ಶೀಲ ದೇಶಗಳಿಗೆ ಇದು ಅತೀ ದೊಡ್ಡ ಸವಾಲು. ದೇಶದ ಜನರಿಗೆ ವಸತಿ, ಉದ್ಯೋಗ, ಆಹಾರ, ಇಂಧನ, ನೀರು ಮತ್ತು ನೈರ್ಮಲ್ಯದಂತಹ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಅಲ್ಲಿನ ಆಡಳಿತ ವ್ಯವಸ್ಥೆಯ ಪ್ರಮುಖ ಕರ್ತವ್ಯವಾಗಿದೆ. ಇದನ್ನು ಸಮರ್ಥನೀಯ ರೀತಿಯಲ್ಲಿ ಮಾಡಬೇಕಾದರೆ, ಜನಸಂಖ್ಯೆಯ ಪ್ರಮಾಣವನ್ನು ನಿಯಂತ್ರಿಸಿ ಪರಿಸರ ಗುಣಮಟ್ಟವನ್ನು ಕಾಯ್ದುಕೊಳ್ಳುವ ಆವಶ್ಯಕತೆಯಿದೆ.
ಸುಸ್ಥಿರ ಅಭಿವೃದ್ಧಿಯ ಪ್ರಮುಖ ಅಂಶಗಳಾದ ಸಾಮಾಜಿಕ ಪ್ರಗತಿ ಮತ್ತು ಸಮಾನತೆ, ಪರಿಸರ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸ್ಥಿರ ಆರ್ಥಿಕ ಬೆಳವಣಿಗೆಗಳನ್ನು ಸಾಧಿಸಲು ಸರಕಾರ ಹಾಗೂ ಜನರ ಶ್ರಮದ ಅಗತ್ಯವಿದೆ. ಪ್ರತಿಯೊಬ್ಬರಿಗೂ ಆರೋಗ್ಯಕರ, ಸ್ವತ್ಛ ಮತ್ತು ಸುರಕ್ಷಿತ ಪರಿಸರವನ್ನು ಹೊಂದುವ ಹಕ್ಕಿದೆ. ಪರಿಸರ ಮಾಲಿನ್ಯ, ಬಡತನ, ಕಳಪೆ ವಸತಿ ಮತ್ತು ನಿರುದ್ಯೋಗವನ್ನು ಕಡಿಮೆ ಮಾಡುವ ಮೂಲಕ ಇದನ್ನು ಸಾಧಿಸಬಹುದು. ಇಂದಿನ ಪೀಳಿಗೆ ಮತ್ತು ಭವಿಷ್ಯದ ಪೀಳಿಗೆಗಳಲ್ಲಿ ಯಾರಿಗೂ ಅನ್ಯಾಯವಾಗದಂತಹ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ.
ಹವಾಮಾನ ಬದಲಾವಣೆ, ತಾಪಮಾನ ಏರಿಕೆ, ಕಲುಷಿತ ಗಾಳಿ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆಯಂತಹ ಜಾಗತಿಕ ಪಾರಿಸರಿಕ ಸಮಸ್ಯೆ ಗಳನ್ನು ಕಡಿಮೆ ಮಾಡದ ಹೊರತು ಅಭಿವೃದ್ಧಿ ನಿರಂತರವಾಗಲಾರದು. ಹಾಗೆಂದು ಸಂಪನ್ಮೂಲಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗದು. ಆದರೆ ಅವುಗಳನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಮತ್ತು ಮಿತವಾಗಿ ಬಳಸಬೇಕು. ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ಅವುಗಳ ಪರ್ಯಾಯಗಳ ಬಳಕೆ ಹಾಗೂ ಅಭಿವೃದ್ಧಿಯನ್ನು ಪ್ರೋತ್ಸಾಹಿಸಬೇಕು. ಈ ಕುರಿತು ಜನರಲ್ಲೂ ಜಾಗೃತಿ ಮೂಡಿಸಬೇಕಾದ ಆವಶ್ಯಕತೆ ಇದೆ.
ಸುಸ್ಥಿರ ಅಭಿವೃದ್ಧಿಗಾಗಿ ಕೆರೆ, ನದಿ, ಸಮುದ್ರ, ಸರೋವರಗಳಂತಹ ಜಲ ಸಂಪನ್ಮೂಲಗಳನ್ನು ಸಮರ್ಥನೀಯವಾಗಿ ಬಳಸಿಕೊಳ್ಳಬೇಕು. ಜಲ ಸಂಪತ್ತು ಅತ್ಯಮೂಲ್ಯ ವಾದುದು. ಸಕಲ ಜೀವಿಗಳಿಗೂ ಗಿಡ ಮರಗಳಿಗೂ ನೀರು ಬೇಕು. ಸುಸ್ಥಿರ ಅರಣ್ಯಕ್ಕಾಗಿ, ಪರಿಸರಕ್ಕಾಗಿ ಕಾಡು ಮರ, ಗುಡ್ಡ ಬೆಟ್ಟಗಳ ನಾಶವನ್ನು ತಡೆಯಬೇಕು. ಸುಸ್ಥಿರ ಕೃಷಿ ಹಾಗೂ ಆಹಾರಕ್ಕಾಗಿ ಮಣ್ಣಿನ ಮಾಲಿನ್ಯ ಮತ್ತು ಗುಣಮಟ್ಟದ ಅವನತಿಯನ್ನು ತಡೆಯಬೇಕು. ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ಅಮೂಲ್ಯವಾದ ಜೀವವೈವಿಧ್ಯವನ್ನು ಉಳಿಸಿಕೊಳ್ಳಬೇಕು.
ಪರಿಸರವನ್ನು ಶುದ್ಧವಾಗಿ ಉಳಿಸಿದರೆ ಮಾತ್ರ ನಾವು ಮತ್ತು ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಲು ಸಾಧ್ಯ. ಶಾಂತಿಯುತ ಮತ್ತು ಎಲ್ಲರನ್ನೂ ಒಳಗೊಂಡಂತಹ ಬೆಳವಣಿಗೆ, ಎಲ್ಲರಿಗೂ ನ್ಯಾಯವನ್ನು ಒದಗಿಸುವ ಮೂಲಕ ಬೆಳವಣಿಗೆಯನ್ನು ಮುಂದಿನ ತಲೆಮಾರುಗಳಿಗೆ ದಾಟಿಸಬಹುದು. ಪರಿಸರದ ಗುಣಮಟ್ಟವನ್ನು ಕಾಯ್ದುಕೊಂಡರೆ ಮಾತ್ರ ಇದು ಸಾಧ್ಯ. ಪರಿಸರದಲ್ಲಿ ಸಿಗುವ ಎಲ್ಲ ಸಂಪತ್ತನ್ನು ಅನುಭವಿಸುವ ನಾವು ಪರಿಸರಕ್ಕೆ ನೀಡುವ ಕೊಡುಗೆ ಮಾತ್ರ ಋಣಾತ್ಮಕವಾದುದು. ಪರಿಸರವನ್ನು ನಾವು ರಕ್ಷಿಸದಿದ್ದರೆ ಭವಿಷ್ಯ ಇನ್ನೂ ಭೀಕರವಾಗಬಹುದು. ನಮಗಿರುವುದೊಂದೇ ಭೂಮಿ. ಅದನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಪರಿಸರಕ್ಕೆ ನಮ್ಮಿಂದ ಏನನ್ನೂ ನೀಡಲಾಗದಿದ್ದರೂ ಹಾಳುಗೆಡವದಿದ್ದರೆ ಅದೇ ಒಂದು ಕೊಡುಗೆ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂದಡಿ ಇಡಲೇಬೇಕಿದೆ. ಗಿಡ ನೆಟ್ಟು ಬೆಳೆಸುವುದು ಮಾತ್ರವಲ್ಲ, ಕಂಡಲ್ಲೆಲ್ಲ ತ್ಯಾಜ್ಯಗಳನ್ನು ಎಸೆಯದೆ ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವತ್ಛವಾಗಿಡುವುದು ಕೂಡ ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ.
ವಿದ್ಯಾ ಅಮ್ಮಣ್ಣಾಯ, ಕಾಪು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.