ದಶಕ ಪೂರ್ತಿ; ಸಂಭ್ರಮ ತರದ ಸುವರ್ಣ ಸೌಧ
Team Udayavani, Oct 11, 2022, 6:35 AM IST
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಗಡಿ ಭಾಗದ ಬೆಳಗಾವಿಯಲ್ಲಿ ನಿರ್ಮಾಣಗೊಂಡ ಸುವರ್ಣ ವಿಧಾನಸೌಧಕ್ಕೆ ಈಗ ದಶ ವರ್ಷದ ಸಂಭ್ರಮ. ಈ ಹೊತ್ತಿನಲ್ಲಿ ಒಮ್ಮೆ ಹಿಂತಿರುಗಿ ನೋಡುವುದಾದರೆ ಕೇವಲ ನಿರಾಸೆ, ಆಕ್ರೋಶ ಮತ್ತು ಅಸಮಾಧಾನದ ಚಿತ್ರಣ ಕಂಡುಬರುತ್ತದೆ.
ಸದ್ದಿಲ್ಲದೆ ಸವೆದ ಈ ದಶಕದ ಅವಧಿ ಬಹುಶಃ ಸರಕಾರಕ್ಕೆ, ವಿಪಕ್ಷಗಳಿಗೆ ಹಾಗೂ ಆಡಳಿತ ಪಕ್ಷದ ಸದಸ್ಯರಿಗೆ ಎಲ್ಲಕ್ಕಿಂತ ಮುಖ್ಯವಾಗಿ ಉತ್ತರ ಕರ್ನಾಟಕದ ಜನಪ್ರತಿನಿಧಿಗಳಿಗೆ ನೆನಪಿಗೆ ಇರದು. ಆದರೆ ಸುವರ್ಣ ವಿಧಾನಸೌಧ ಸುದ್ದಿ ಮಾಡಿದ್ದು ಬರೀ ಆಕ್ರೋಶ, ಪ್ರತಿಭಟನೆ, ಆರೋಪ ಹಾಗೂ ಅಸಮಾಧಾನಗಳಿಂದ ಮಾತ್ರ. ಸುವರ್ಣ ವಿಧಾನಸೌಧವನ್ನು ಉತ್ತರ ಕರ್ನಾಟಕದ ಶಕ್ತಿ ಕೇಂದ್ರವನ್ನಾಗಿ ಮಾಡುವ ಯಾವುದೇ ಗಂಭೀರ ಪ್ರಯತ್ನ ನಡೆಯಲೇ ಇಲ್ಲ ಎಂಬ ಆರೋಪ ಒಂದೆಡೆಯಾದರೆ, ಸರಕಾರದ ನಿರ್ಲಕ್ಷ್ಯ ಮತ್ತು ಉದಾಸೀನ ಮನೋಭಾವ ಖಂಡಿಸಿ ಪ್ರತಿಭಟನೆಗಳು ನಡೆದರೂ ಅವುಗಳು ಸಹ ಗಂಭೀರ ಸ್ವರೂಪದ್ದಾಗಿರಲಿಲ್ಲ.ಹಾಗಾಗಿ ಪ್ರತಿಭಟನೆ ನಡೆದಾಗ ಹೋರಾಟಗಾರರ ಮೂಗಿಗೆ ತುಪ್ಪ ಸವರುವ ಕೆಲಸ ಮಾತ್ರ ಸರಕಾರದಿಂದ ನಡೆದಿದೆ, ನಡೆಯುತ್ತಿದೆ.
ಎಚ್‌ಡಿಕೆ ನಡೆಸಿದ
ಮೊದಲ ಅಧಿವೇಶನ:
ಹದಿನಾರು ವರ್ಷಗಳ ಹಿಂದೆ ಕುಮಾರಸ್ವಾಮಿ ನೇತೃತ್ವದ ಸರಕಾರ ಗಡಿ ನಾಡಲ್ಲಿ ಮೊದಲ ಅಧಿವೇಶನ ನಡೆಸಿದಾಗ ಹೊಸ ಇತಿಹಾಸ ನಿರ್ಮಾಣವಾಗಿತ್ತು. ಬೆಳಗಾವಿಯಲ್ಲಿ ಪ್ರತಿ ವರ್ಷ ಅಧಿವೇಶನ ನಡೆಸಲು ವಿಧಾನಸೌಧ ನಿರ್ಮಿಸಬೇಕೆಂಬ ಆಗ್ರಹ ಕೇಳಿಬಂದವು. ಬಳಿಕ ಬಿಜೆಪಿ ಸರಕಾರ ಬಂದಾಗ ಈ ಬೇಡಿಕೆ ಮತ್ತಷುr ಗಟ್ಟಿಯಾಗಿ ಸುವರ್ಣ ವಿಧಾನಸೌಧದ ನಿರ್ಮಾಣಕ್ಕೂ ಚಾಲನೆ ಸಿಕ್ಕಿತು. ಆಗ ನಾಲ್ಕೈದು ಪ್ರಮುಖ ಉದ್ದೇಶಗಳಿದ್ದವು. ಅವುಗಳೆಂದರೆ, ಒಂದು ಸುವರ್ಣ ವಿಧಾನಸೌಧಕ್ಕೆ ಸರಕಾರದ ಪ್ರಮುಖ ಕಚೇರಿಗಳನ್ನು ತರುವುದು, ಕನಿಷ್ಠ ಒಂದು ತಿಂಗಳ ಕಾಲ ಅಧಿವೇಶನ ನಡೆಸುವುದು, ಪ್ರತಿ ತಿಂಗಳು ಇಲ್ಲವೇ ಮೂರು ತಿಂಗಳಿಗೊಮ್ಮೆ ಸಚಿವ ಸಂಪುಟ ಸಭೆ ನಡೆಸುವುದು ಹಾಗೂ ಉತ್ತರ ಕರ್ನಾಟಕದ ಯೋಜನೆಗಳಿಗೆ ಇಲ್ಲಿಯೇ ಅನುಮೋದನೆ ನೀಡಿ ಹಣಕಾಸು ಮಂಜೂರಾತಿ ನೀಡುವುದು. ದುರ್ದೈವದ ಸಂಗತಿ ಎಂದರೆ ಈ ಯಾವ ಉದ್ದೇಶಗಳೂ ಇದುವರೆಗೂ ಈಡೇರಿಲ್ಲ.
ಸುವರ್ಣ ವಿಧಾನಸೌಧ ನಿರ್ಮಾಣವಾದ ನಂತರ ಇದುವರೆಗೆ ಬಂದ ಯಾವ ಸರಕಾರಗಳೂ ಕಚೇರಿಗಳ ಸ್ಥಳಾಂತರ ವಿಷಯದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಉತ್ತರ ಕರ್ನಾಟಕದವರಾದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ಈ ಭಾಗದ ಜನರ ನಿರೀಕ್ಷೆಗಳು ಗರಿಗೆದರಿದ್ದವು. ಸುವರ್ಣ ವಿಧಾನಸೌಧ ಸಕ್ರಿಯವಾಗುವ ಕಾಲ ಬಂದಿತೆಂದೇ ಭಾವಿಸಿದ್ದರು. ಆದರೆ ಇವತ್ತಿನವರೆಗೂ ಇದು ಕಾರ್ಯರೂಪಕ್ಕೆ ಬಂದಿಲ್ಲ ಎಂಬ ಅಸಮಾಧಾನ ಇಲ್ಲಿಯ ಜನರದ್ದು.
ನಿರ್ವಹಣೆಗೆ ವಾರ್ಷಿಕ 5 ಕೋಟಿ ವೆಚ್ಚ:
2012ರಲ್ಲಿ ನಿರ್ಮಾಣವಾದ ಸುವರ್ಣ ವಿಧಾನಸೌಧದಲ್ಲಿ ಇದುವರೆಗೆ ಎಂಟು ಅಧಿವೇಶನಗಳು ನಡೆದಿವೆ. ಬಸವರಾಜ ಬೊಮ್ಮಾಯಿ ಸೇರಿದಂತೆ ಐವರು ಮುಖ್ಯಮಂತ್ರಿಗಳು ಆಗಿದ್ದಾರೆ. ಸೌಧದ ನಿರ್ವಹಣೆಗೆ ಪ್ರತಿ ವರ್ಷ ಐದು ಕೋಟಿ ವೆಚ್ಚವಾಗುತ್ತಿದೆ. ಅಧಿವೇಶನದ ಹೆಸರಿನಲ್ಲಿ ಪ್ರತಿ ವರ್ಷ ಕೋಟಿಗಟ್ಟಲೇ ಹಣ ಖರ್ಚಾಗಿದೆ. ಆದರೆ ಈ ಅವಧಿಯಲ್ಲಿ ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಚಿತ್ರಣ ಮಾತ್ರ ಬದಲಾಗಿಲ್ಲ.
ಸುವರ್ಣ ಗಳಿಗೆ’ಯ ಪಕ್ಷಿನೋಟ
– 2006, ಸೆ.25ರಿಂದ 29ರವರೆಗೆ ಬೆಳಗಾವಿಯಲ್ಲಿ ನಡೆದ ಮೊದಲ ವಿಧಾನಮಂಡಲ ಅಧಿವೇಶನದಲ್ಲಿ ಸೌಧ ನಿರ್ಮಾಣಕ್ಕೆ ತೀರ್ಮಾನ. ಸುವರ್ಣ ವಿಧಾನಸೌಧವೆಂದು ಹೆಸರಿಡಲು ನಿರ್ಧಾರ.
– 2007, ಆ.26ರಂದು ಅಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಂದ ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ಸೌಧಕ್ಕೆ ಅಡಿಗಲ್ಲು. ಆರಂಭಿಕವಾಗಿ ಬಜೆಟ್‌ನಲ್ಲಿ 230 ಕೋಟಿ ನಿಗದಿ. ವ್ಯಾಕ್ಸಿನ್ ಡಿಪೋದಲ್ಲಿ ಸೌಧ ನಿರ್ಮಾಣಕ್ಕೆ ಕೆಲವರ ಆಕ್ಷೇಪ, ಕಟ್ಟಡ ನಿರ್ಮಾಣಕ್ಕೆ ವಿವಾದ ರೂಪ.
– 2008, ಜು.17ರಂದು ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಳಗಾವಿಗೆ ಭೇಟಿ, ಸುವರ್ಣ ಸೌಧ ಜಾಗ ವಿವಾದ ಇತ್ಯರ್ಥ ಹಾಗೂ ಪರ್ಯಾಯ ಜಾಗ ಗುರುತಿಸಲು ಅಂದಿನ ಸ್ಪೀಕರ್ ಜಗದೀಶ ಶೆಟ್ಟರ ನೇತೃತ್ವದಲ್ಲಿ ಸಮಿತಿ ರಚನೆ.
– 2008ರಲ್ಲಿ ಸ್ಪೀಕರ್ ನೇತೃತ್ವದ ಸಮಿತಿಯಿಂದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲಗಾ ಗ್ರಾಮದ ಬಳಿ ಸ್ಥಳ ಅಂತಿಮ. ಸುಮಾರು 17.16 ಕೋಟಿ ರೂ. ಪರಿಹಾರ ನೀಡಿಕೆಯೊಂದಿಗೆ 127 ಎಕರೆಯಷ್ಟು ಭೂಮಿ ಸ್ವಾಧೀನ.
– 2009, ಜ.17ರಂದು ಅಂದಿನ ಸಿಎಣ ಬಿ.ಎಸ್.ಯಡಿಯೂರಪ್ಪ ಅವರಿಂದ ಸುವರ್ಣಸೌಧ ನಿರ್ಮಾಣಕ್ಕೆ ಭೂಮಿ ಪೂಜೆ. ಪುಣೆ ಮೂಲದ ಶಿರ್ಕೆ ಕನ್‌ಸ್ಟ್ರಕ್ಷನ್ ಟೆಕ್ನಾಲಾಜಿ ಕಂಪನಿಗೆ ಸುಮಾರು 232 ಕೋಟಿ ರೂ.ಗೆ ಗುತ್ತಿಗೆ ನೀಡಿಕೆ. 18 ತಿಂಗಳಲ್ಲಿ ಕಾಮಗಾರಿ ಪೂರ್ಣಕ್ಕೆ ಸೂಚನೆ.
– 2009ರ ಜುಲೈನಿಂದ ಆರಂಭಗೊಂಡ ಕಟ್ಟಡ ಕಾಮಗಾರಿ 2012ರ ಸೆಪ್ಟಂಬರ್ ಅಂತ್ಯಕ್ಕೆ ಪೂರ್ಣ. ಸುಮಾರು 391 ಕೋಟಿ ರೂ. ವೆಚ್ಚದಲ್ಲಿ ಸೌಧ ನಿರ್ಮಾಣ.
– 2012, ಅ.11ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಸುವರ್ಣಸೌಧ ಉದ್ಘಾಟನೆ.
ಸಿಎಂ ಘಟಕ ಸ್ಥಾಪನೆಯಾಗಲಿ
ಪ್ರಮುಖವಾಗಿ ಸುವರ್ಣ ವಿಧಾನಸೌಧಕ್ಕೆ ಮುಖ್ಯಮಂತ್ರಿಗಳ ಕಾರ್ಯಾಲಯ (ಘಟಕ) ಬರಬೇಕು. ಇದರಿಂದ ಹತ್ತು ಕಚೇರಿಗಳು ಬಂದಂತಾಗುತ್ತವೆ. ಆಗ ಸಾರ್ವಜನಿಕರು ಮುಖ್ಯಮಂತ್ರಿಗಳ ಭೇಟಿಗೆ ಬೆಂಗಳೂರಿಗೆ ಹೋಗುವ ಪ್ರಮೇಯ ಬಾರದು. ಇದಲ್ಲದೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೆರವಾಗಬಲ್ಲ ಸರಕಾರದ ಮುಖ್ಯ ಕಚೇರಿಗಳು ಬರಬೇಕು ಎಂಬುದು ಎಲ್ಲರ ಬೇಡಿಕೆ. ಸರಕಾರ ಸಹ ಕಚೇರಿಗಳ ಸ್ಥಾಪನೆ ಕುರಿತು ಸದನದಲ್ಲೇ ಘೋಷಿಸಿದೆ. ಆದರೆ ಇಂದಿನವರೆಗೂ ಯಾವ ಪ್ರಮುಖ ಕಚೇರಿಯೂ ಅಲ್ಲಿಗೆ ಬಂದಿಲ್ಲ. ಇದರ ಬದಲಾಗಿ ಜಿಲ್ಲಾಮಟ್ಟದ ಕಚೇರಿಗಳನ್ನು ಸ್ಥಾಪಿಸಿ ಸರಕಾರ ಕೈತೊಳೆದುಕೊಂಡಿದೆ. ಇದಕ್ಕೆ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರೂ ಪ್ರಯೋಜನವಾಗಿಲ್ಲ. ಆಗೊಮ್ಮೆ ಈಗೊಮ್ಮೆ ಸರಕಾರದ ಕಾರ್ಯಕ್ರಮಗಳು ನಡೆಯುವುದು ಬಿಟ್ಟರೆ ಬೇರೆ ಯಾವ ಚಟುವಟಿಕೆಗಳು ಕಾಣುತ್ತಿಲ್ಲ.
ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳ ಬದಲು ಜಿಲ್ಲಾಮಟ್ಟದ 23 ಕಚೇರಿಗಳನ್ನು ಸ್ಥಳಾಂತರ ಮಾಡಿರುವುದು ಬಹಳ ಕೆಟ್ಟ ನಿರ್ಧಾರ. ಸುವರ್ಣ ವಿಧಾನಸೌಧವನ್ನು ಜಿಲ್ಲಾಮಟ್ಟಕ್ಕೆ ಇಳಿಸಿರುವುದು ದುರ್ದೈವ. ಈ ವಿಷಯವಾಗಿ ಮುಖ್ಯಮಂತ್ರಿಯವರಿಗೆ ಆರು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಆದರೂ ಏನೂ ಕ್ರಮ ಇಲ್ಲ.
– ಅಶೋಕ ಚಂದರಗಿ,
ಕನ್ನಡ ಹೋರಾಟಗಾರ
-ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.